Tag: mother

  • ಡಿಕೆಶಿ ತಾಯಿ, ಪತ್ನಿಗೆ ಕೊಂಚ ರಿಲೀಫ್

    ಡಿಕೆಶಿ ತಾಯಿ, ಪತ್ನಿಗೆ ಕೊಂಚ ರಿಲೀಫ್

    ದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ತಾಯಿ ಹಾಗೂ ಪತ್ನಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಅಕ್ಟೋಬರ್ 24ಕ್ಕೆ ಮುಂದೂಡಿದೆ.

    ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ವಿಚಾರಣೆ ನಡೆಸಿದ ಹೈ ಕೋರ್ಟ್, ಪ್ರಕರಣದ ಕುರಿತು ಸುಧೀರ್ಘ ವಿಚಾರಣೆ ನಡೆಸಬೇಕಿದೆ ಎಂದು ಪ್ರಕರಣ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ.

    ಡಿಕೆಶಿ ತಾಯಿ ಹಾಗೂ ಪತ್ನಿ ಸಮನ್ಸ್ ರದ್ದು ಕೋರಿ ಹಾಗೂ ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ನ್ಯಾ.ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು.

    ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಡಿ.ಕೆ.ಶಿವಕುಮಾರ್ ತಾಯಿ ಹಾಗೂ ಪತ್ನಿಗೆ ಸಮನ್ಸ್ ನೀಡಿತ್ತು. ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ ಮಾಡಿದ್ದರು. ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಇಡಿ ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದ್ದು, ಅನಾರೋಗ್ಯದ ಹಿನ್ನೆಲೆ ವಿಚಾರಣೆಯನ್ನು ಬೆಂಗಳೂರಿನಲ್ಲಿಯೇ ನಡೆಸಬೇಕು ಎಂದು ಮನವಿ ಮಾಡಿದ್ದರು.

    ಅಕ್ಟೋಬರ್ 16ರಂದು ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್, ಡಿಕೆಶಿ ತಾಯಿ ಹಾಗೂ ಪತ್ನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಉಷಾ ಅವರು ನಾಳೆ ವಿಚಾರಣೆಗೆ ಹಾಜರಾಗಬೇಕಿಲ್ಲ. ಅಲ್ಲದೆ ಗೌರಮ್ಮ ಅವರಿಗೆ ನೀಡಿದ್ದ ಸಮನ್ಸ್ ಕೂಡ ಹಿಂಪಡೆಯಲಾಗಿದೆ. ಹೊಸದಾಗಿ ಸಮನ್ಸ್ ನೀಡುತ್ತೇವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದರು.

  • ತಾಯಿಯನ್ನ ಕೊಂದು ಆತ್ಮಹತ್ಯೆಗೆ ಶರಣಾದ ಪುತ್ರ

    ತಾಯಿಯನ್ನ ಕೊಂದು ಆತ್ಮಹತ್ಯೆಗೆ ಶರಣಾದ ಪುತ್ರ

    ನವದೆಹಲಿ: ತಾಯಿಯನ್ನು ಕೊಲೆಗೈದು ಪುತ್ರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಪಿತಂಪುರ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿಯ ಶವ ಆಶಿನಾ ಅಪಾರ್ಟ್‍ಮೆಂಟಿನ ಫ್ಲ್ಯಾಟ್ ನಲ್ಲಿ ದೊರೆತಿದ್ದು, ಪುತ್ರನ ಶವ ಸರೈ ರೇಲ್ವೇ ನಿಲ್ದಾಣದ ಬಳಿಯ ಟ್ರ್ಯಾಕ್ ನಲ್ಲಿ ಸಿಕ್ಕಿದೆ.

    ದೆಹಲಿಯ ಸೇಂಟ್ ಸ್ಟೆಫನ್ ಕಾಲೇಜಿನ ಉಪನ್ಯಾಸಕ ಅಲನ್ ಸ್ಟೇನ್ಲಿ ತಾಯಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪುತ್ರ. ಮನೆಯಲ್ಲಿ ಮೊದಲು ತಾಯಿಯನ್ನು ಕೊಂದು ಶವವನ್ನು ಫ್ಯಾನಿಗೆ ನೇತು ಹಾಕಿದ್ದಾನೆ. ತದನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ವರದಿಯಾಗಿದೆ.

    ಅಲನ್ ಸ್ಟೇನ್ಲಿ ಕೇರಳ ಮೂಲದವನಾಗಿದ್ದು, ಕಳೆದ ಒಂದೂವರೆ ವರ್ಷದಿಂದ ದೆಹಲಿಯ ಪಿತಂಪುರದಲ್ಲಿ ವಾಸವಾಗಿದ್ದನು. ಅಲನ್ ದೆಹಲಿಯ ಐಐಟಿಯಲ್ಲಿ ಪಿಎಚ್ ಡಿ ಪದವಿಯನ್ನು ಪಡೆದುಕೊಂಡಿದ್ದನು. ಏಳು ತಿಂಗಳಿನಿಂದ ತಾಯಿ ಸಹ ಆತನೊಂದಿಗೆ ವಾಸವಾಗಿದ್ದರು. ಎರಡು ಮೃತ ದೇಹಗಳನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಕೇರಳದಲ್ಲಿರುವ ಆಲನ್ ಸಂಬಂಧಿಕರಿಗೆ ಪೊಲೀಸರು ವಿಷಯವನ್ನು ತಿಳಿಸಿದ್ದರು. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ನೆರೆಹೊರೆಯವರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

  • ಗಂಡು ಮಗುವಿಗೆ ತಾಯಿಯಾದ ತೃತೀಯ ಲಿಂಗಿ

    ಗಂಡು ಮಗುವಿಗೆ ತಾಯಿಯಾದ ತೃತೀಯ ಲಿಂಗಿ

    ಬೆಂಗಳೂರು: ಮಂಗಳ ಮುಖಿಯರು ಎಂದರೆ ಸಾಕು ಟ್ರಾಫಿಕ್ ಸಿಗ್ನಲ್, ಬಸ್ ನಿಲ್ದಾಣ, ಟ್ರೈನಿನಲ್ಲಿ ಹಣಕ್ಕಾಗಿ ಕಾಡಿಸೋರು ಎಂದು ಹೆಚ್ಚು ಜನರು ಮೂಗು ಮುರಿಯುತ್ತಾರೆ. ಅದೆಷ್ಟೋ ಜನ ತೃತೀಯ ಲಿಂಗಿಗಳಾಗಿ ಹುಟ್ಟಿದ್ದೇ ಶಾಪ ಎಂದುಕೊಳ್ಳುತ್ತಾರೆ. ಇಂಥವರ ನಡುವೆ ಮಂಗಳಮುಖಿಯೊಬ್ಬರು ತಾಯಿಯಾಗಿದ್ದಾರೆ.

    ಮುದ್ದು ಪುಟಾಣಿ ಮಂಗಳಮುಖಿಯಾದ ಡಾ. ಅಕ್ಕೈ ಪದ್ಮಶಾಲಿ ಹಾಗೂ ವಾಸು ದಂಪತಿ ಬಾಳಲ್ಲಿ ಹೊಸ ಬೆಳಕು ತಂದಿದೆ. ಈ ಅಕ್ಕೈ ತೃತೀಯ ಲಿಂಗಿಯಾಗಿದ್ದು, ಕಾನೂನಿನ ಪ್ರಕಾರ ಮಗುವೊಂದನ್ನು ದತ್ತು ಪಡೆದಿದ್ದಾರೆ. ಈ ಮೂಲಕ ತಾಯ್ತನದ ಸಿಹಿ ಅಪ್ಪುಗೆಯನ್ನು ಅನುಭವಿಸುತ್ತಿದ್ದಾರೆ.

    ಮೊದಲು ಗಂಡಾಗಿ ಹುಟ್ಟಿ, ನಂತರ ಅಕ್ಕೈ ಅವಳಾಗಿ ಬದಲಾದರು. ತದನಂತ್ರ ವಾಸು ಎಂಬವರನ್ನು ಮದುವೆಯಾದರು. ಆದರೆ ಈ ದಂಪತಿ ಮಗುವನ್ನು ಹೊಂದಬೇಕು, ತಮ್ಮ ವಂಶೋದ್ಧಾರಕನನ್ನು ಹೊಂದಬೇಕೆಂಬ ಮಹಾದಾಸೆಯಿತ್ತು. ಹೀಗಾಗಿ ಅಕ್ಕೈ ಅನಾಥಾಶ್ರಮಗಳಲ್ಲಿ ಮಗು ದತ್ತು ತೆಗೆದುಕೊಳ್ಳಲು ಹೋದಾಗ, ಕೊಂಕು ಮಾತುಗಳನ್ನು ಎದುರಿಸಿದ್ದರು.

    ಕೊಂಕು ಮಾತುಗಳಿಗೆ ಹಾಗೂ ಯಾವುದಕ್ಕೂ ಎದೆಗುಂದದೆ ಕುಟುಂಬದ ಪರಿಚಿತರೊಬ್ಬರಿಂದ ಮಗು ದತ್ತು ಪಡೆದು, ಸಮಾಜಮುಖಿ ದಾರಿಯತ್ತ ಹೆಜ್ಜೆ ಹಾಕಿದ್ದಾರೆ. ಸಮಾಜಕ್ಕೆ ಈ ಮಗುವನ್ನು ಸತ್ಪ್ರಜೆಯಾಗಿ ರೂಪಿಸುತ್ತೇವೆ ಎಂದು ಹೇಳಿದ್ದಾರೆ.

  • ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ವಿಜಯಪುರ: ತಾಯಿಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ನಗರದ ರಾಜ್ ರತನ್ ಕಾಲೋನಿ ನಿವಾಸಿಯಾಗಿರುವ ದಾಲಿಬಾಯಿ ಎಂಬ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮತ್ತೊಂದು ವಿಷಯವೇನೆಂದರೆ ದಾಲಿಬಾಯಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ನಗರದ ಮುದನೂರು ಆಸ್ಪತ್ರೆಯಲ್ಲಿ ದಾಲಿಬಾಯಿ ಅವರ ಹೆರಿಗೆ ನಡೆದಿದ್ದು, ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಅಲ್ಲದೆ ತಾಯಿ ಹಾಗೂ ನಾಲ್ಕು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

    ಇತ್ತ ನಾಲ್ಕು ಮಕ್ಕಳು ಒಟ್ಟಿಗೆ ಹುಟ್ಟಿದ್ದ ಕಾರಣ ಕುಟುಂಬ ವರ್ಗದಲ್ಲಿ ಸಂತಸ ಮನೆ ಮಾಡಿದೆ.

  • ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ

    ತಾಯಿಯ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸ್ದ

    ಜೈಪುರ: ಮಗನೊಬ್ಬ 12 ವರ್ಷದಿಂದ ನಾಣ್ಯಗಳನ್ನು ಸಂಗ್ರಹ ಮಾಡಿ 13,500 ರೂ. ಜೋಡಿಸಿ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ ಅಪರೂಪದ ಘಟನೆಯೊಂದು ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ.

    17 ವರ್ಷದ ರಾಮ್ ಸಿಂಗ್ ತನ್ನ ತಾಯಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲು 12 ವರ್ಷದಿಂದ ನಾಣ್ಯ ಸಂಗ್ರಹಿಸಿದ್ದಾನೆ. ರಾಮ್ 13,500 ರೂ. ಸಂಗ್ರಹಿಸಿದ್ದು, ಅದು ಒಟ್ಟು 35 ಕೆ.ಜಿ ಇತ್ತು. ಈ ನಾಣ್ಯಗಳಿಂದ ರಾಮ್ ತನ್ನ ತಾಯಿಗಾಗಿ ಫ್ರಿಡ್ಜ್ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ.

    ರಾಮ್ ಮನೆಯಲ್ಲಿದ್ದ ಫ್ರಿಡ್ಜ್ ತುಂಬಾ ಹಳೆಯದಾಗಿತ್ತು. ಅಲ್ಲದೆ ಆತನ ತಾಯಿ ಹೊಸ ಫ್ರಿಡ್ಜ್ ಖರೀದಿಸಬೇಕು ಎಂದು ಪದೇಪದೇ ಹೇಳುತ್ತಿದ್ದರು. ಇದನ್ನು ತಿಳಿದ ರಾಮ್, ತನ್ನ ತಾಯಿಗೆ ಫ್ರಿಡ್ಜ್ ನೀಡಲು ನಿರ್ಧರಿಸಿದ್ದನು. ಇದೇ ವೇಳೆ ಪತ್ರಿಕೆಯಲ್ಲಿ ಜಾಹೀರಾತು ನೋಡಿದ ರಾಮ್, ಶೋರೂಮಿಗೆ ಕರೆ ಮಾಡಿ ನನ್ನ ತಾಯಿಯ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ನೀಡಬೇಕೆಂದು ನಿರ್ಧರಿಸಿದ್ದೇನೆ. ಆದರೆ ನಾನು ಹಣವನ್ನು ನಾಣ್ಯದ ರೂಪದಲ್ಲಿ ನೀಡುತ್ತೇನೆ ಎಂದು ಹೇಳಿದ್ದಾನೆ. ಶೋರೂಂ ಮಾಲೀಕ ಹರಿಕಿಶಿನ್ ಈ ಬಗ್ಗೆ ಚರ್ಚಿಸಿ ನಂತರ ಒಪ್ಪಿಕೊಂಡಿದ್ದಾರೆ.

    ಮಾಲೀಕ ಒಪ್ಪಿಗೆ ನೀಡುತ್ತಿದ್ದಂತೆ ರಾಮ್ 35 ಕೆಜಿಯಿದ್ದ ನಾಣ್ಯದ ಬ್ಯಾಗನ್ನು ಶೋರೂಮಿಗೆ ತೆಗೆದುಕೊಂಡು ಹೋಗಿದ್ದಾನೆ. ಬ್ಯಾಗಿನಲ್ಲಿ ಒಂದು, ಎರಡು, ಐದು ಹಾಗೂ ಹತ್ತು ರೂ. ನಾಣ್ಯಗಳಿದ್ದು, ಇದನ್ನು ಎಣಿಸಲು 4 ಗಂಟೆ ಬೇಕಾಯಿತು. ಶಿವಶಕ್ತಿನಗರದ ಎಲೆಕ್ಟ್ರಾನಿಕ್ಸ್ ಶೋರೂಮಿನ ಮಾಲೀಕ ಹಣವನ್ನು ಎಣಿಸಿದಾಗ ಅದರಲ್ಲಿ 2 ಸಾವಿರ ರೂ. ಕಡಿಮೆ ಇತ್ತು. ಬಳಿಕ ರಾಮ್ ಭಾವನೆಯನ್ನು ತಿಳಿದ ಮಾಲೀಕ 2 ಸಾವಿರ ರೂ.ಯ ಡಿಸ್ಕೌಂಟ್ ಹಾಗೂ ಒಂದು ಉಡುಗೊರೆಯನ್ನು ನೀಡಿದ್ದಾರೆ.

    ಬಾಲ್ಯದಿಂದಲೂ ರಾಮ್ ಸಿಂಗ್‍ಗೆ ಹುಂಡಿಯಲ್ಲಿ ಹಣ ಸಂಗ್ರಹಿಸುವ ಆಸಕ್ತಿ ಇತ್ತು. ಹುಂಡಿ ತುಂಬುತ್ತಿದ್ದಂತೆ ರಾಮ್ ಅದರಲ್ಲಿದ್ದ ನೋಟು ತೆಗೆದು ತನ್ನ ತಾಯಿ ಪಪ್ಪುದೇವಿಗೆ ನೀಡುತ್ತಿದ್ದನು ಹಾಗೂ ನಾಣ್ಯಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತಿದ್ದನು. ರಾಮ್ 12 ವರ್ಷದಿಂದ ಈ ರೀತಿ ಮಾಡುತ್ತಿರುವುದರಿಂದ 13,500 ಹಣ ಸಂಗ್ರಹಿಸಿದ್ದಾನೆ. ರಾಮ್ ತನಗೆ ಫ್ರಿಡ್ಜ್ ಉಡುಗೊರೆಯನ್ನಾಗಿ ನೀಡಿದ್ದನ್ನು ನೋಡಿದ ತಾಯಿ ಖುಷಿ ಆಗಿದ್ದಾರೆ. ಅಲ್ಲದೆ ದೇವರು ಎಲ್ಲರಿಗೂ ಇಂತಹ ಮಗ ನೀಡಲಿ ಎಂದು ಹೇಳಿದ್ದಾರೆ.

  • ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

    ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಸಾವು

    – ಇತ್ತ ಮೈಸೂರಿನಲ್ಲಿ ಕಾಲು ಜಾರಿ ನದಿಗೆ ಬಿದ್ದ ಯುವಕ

    ಬೆಳಗಾವಿ/ಮೈಸೂರು: ಮಕ್ಕಳಿಗೆ ಈಜು ಕಲಿಸಲು ತೆರಳಿದ್ದ ತಾಯಿ ಬಾವಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ.

    ಶಿಲ್ಪಾ ಚನ್ನಗೌಡರ (34) ಮೃತಪಟ್ಟ ತಾಯಿ. ಶಿಲ್ಪಾ ತನ್ನ ಮಕ್ಕಳಾದ ಸುಜಲ ಮತ್ತು ಸುದರ್ಶನನಿಗೆ ನೇಜ ಗ್ರಾಮದ ಹೊರವಲಯದಲ್ಲಿ ತೆರೆದ ಬಾವಿಯಲ್ಲಿ ಈಜು ಕಲಿಸುತ್ತಿದ್ದಳು. ಈ ವೇಳೆ ಶಿಲ್ಪಾ ಮೂರ್ಛೆ ತಪ್ಪಿದ್ದಾಳೆ. ಈಜುವಾಗ ಶಿಲ್ಪಾ ತಂಬಾಕು ಸೇವನೆ ಮಾಡಿದ್ದರಿಂದ ಮೂರ್ಛೆ ಹೋಗಿದ್ದಾಳೆ ಎಂದು ಹೇಳಲಾಗುತ್ತಿದೆ.

    ತಾಯಿ ಮುಳುಗುತ್ತಿರುವುದನ್ನು ನೋಡಿದ ಮಕ್ಕಳು ಸಹಾಯಕ್ಕಾಗಿ ಕೂಗಾಡಿದ್ದಾರೆ. ಅಲ್ಲದೆ ತಾಯಿಯ ರಕ್ಷಣೆ ಮಾಡುವಂತೆ ಮಕ್ಕಳು ನೆರೆ ಹೊರೆಯವರನ್ನು ಬಾವಿಯ ಬಳಿ ಕರೆದುಕೊಂಡು ಬಂದಿದ್ದಾರೆ. ಜನರು ರಕ್ಷಣೆಗೆ ಬರುವಷ್ಟರಲ್ಲಿ ಶಿಲ್ಪಾ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇತ್ತ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರು ಗ್ರಾಮದ ಲಕ್ಷ್ಮಣತೀರ್ಥ ನದಿಯಲ್ಲಿ ನೀರು ತರಲು ಹೋಗಿದ್ದ ಯುವಕ ಮೃತಪಟ್ಟಿದ್ದಾನೆ. ಧನುಷ್ (19) ಮೃತ ಯುವಕನಾಗಿದ್ದು, ಬೆಂಗಳೂರಿನಲ್ಲಿ ಡಿಪ್ಲೋಮಾ ಓದುತ್ತಿದ್ದನು.

    ಧನುಷ್ ತನ್ನ ಸೋದರಮಾವನ ತಿಥಿ ಕಾರ್ಯಕ್ಕೆ ಬಂದಿದ್ದನು. ನದಿ ತೀರದ ಸಮಾಧಿ ಸ್ವಚ್ಚಗೊಳಿಸಲು ನೀರು ತರಲು ಹೋಗಿದ್ದ ವೇಳೆ ಧನುಷ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಊಟ ತಿನ್ನಲ್ಲ ಎಂದು 2 ವರ್ಷದ ಮಗುವನ್ನು ಹೊಡೆದು ಸಾಯಿಸಿದ ತಾಯಿ

    ಊಟ ತಿನ್ನಲ್ಲ ಎಂದು 2 ವರ್ಷದ ಮಗುವನ್ನು ಹೊಡೆದು ಸಾಯಿಸಿದ ತಾಯಿ

    ವಾಷಿಂಗ್ಟನ್: ಊಟ ತಿನ್ನಲ್ಲ ಎಂದ 2 ವರ್ಷದ ಕಂದಮ್ಮನನ್ನು ತಾಯಿ ಆಕೆಯ ಗೆಳೆಯನ ಜೊತೆ ಸೇರಿಕೊಂಡು ಹೊಡೆದು ಸಾಯಿಸಿರುವ ಘಟನೆ ಅಮೆರಿಕಾದ ಕಾನ್ಸಾನ್‍ನಲ್ಲಿ ನಡೆದಿದೆ.

    ಎಲಿಜೆಬೆತ್ ವೊಲ್ಹೀಟರ್ ತನ್ನ ಎರಡು ವರ್ಷದ ಗಂಡು ಮಗನನ್ನು ಊಟ ತಿನ್ನಲ್ಲ ಎಂದು ತನ್ನ ಗೆಳಯ ಕ್ಯೂಕಾಸ್ ಡೀಲ್ ಜೊತೆ ಸೇರಿಕೊಂಡು ಕ್ರೂರವಾಗಿ ಥಳಿಸಿದ್ದಾಳೆ. ಎರಡು ದಿನದ ನಂತರ ಆ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.

    ಮಗು ಊಟ ತಿನ್ನಲ್ಲ ಎಂದು ಎಲಿಜೆಬೆತ್ ಮತ್ತು ಲ್ಯೂಕಾಸ್ ಸೇರಿಕೊಂಡು ಮಗುವಿಗೆ ಮನಬಂದಂತೆ ಥಳಿಸಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಐಸಿಯುನಲ್ಲಿದ್ದ ಮಗು ಮೃತಪಟ್ಟಿದೆ. ಮಗುವಿನ ತಲೆಗೆ ಮತ್ತು ಮುಖಕ್ಕೆ ಗಂಭೀರವಾಗಿ ಗಾಯವಾಗಿದ್ದು, ಕೆಲ ಮೂಳೆಗಳು ಮುರಿದು ಹೋಗಿವೆ ಎಂದು ಮರಣೋತ್ತರ ಪರೀಕ್ಷೆ ತಿಳಿಸಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮಗುವಿನ ಅಜ್ಜ ವೊಲ್ಹೀಟರ್, ಮಗು ಹುಟ್ಟಿದ ವರ್ಷವೇ ಅಂದರೆ 2017 ರಲ್ಲೇ ಎಲಿಜೆಬೆತ್ ಮಗುವಿನ ಮೇಲೆ ಹಲ್ಲೆ ಮಾಡಿದ್ದಳು. ಆದರೆ ಆಕೆಯ ಮೇಲೆ ಆರೋಪ ಹೊರಿಸಲು ಯಾವುದೇ ಸಾಕ್ಷಿ ಇಲ್ಲದ ಕಾರಣ ನಾನು ಸುಮ್ಮನಾಗಿದ್ದೆ ಎಂದು ಹೇಳಿದ್ದಾರೆ.

    ಈಗ ಎಲಿಜೆಬೆತ್ ಮತ್ತು ಲ್ಯೂಕಾಸ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಸ್ಥಳೀಯ ನ್ಯಾಯಾಲಯವು ಎಲಿಜೆಬೆತ್ 19 ವರ್ಷ ಐದು ತಿಂಗಳು ಜೈಲು ಶಿಕ್ಷೆ ವಿಧಿಸಿದೆ ಮತ್ತು ಈ ಪ್ರಕರಣದಲ್ಲಿ ಎರಡನೇ ಆರೋಪಿಯದ ಲ್ಯೂಕಾಸ್ ಗೆ 49 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.

  • ತಂದೆ, ತಾಯಿ ಗುದ್ದಾಟಕ್ಕೆ ಬಲಿಯಾಯ್ತು 5 ತಿಂಗಳ ಕಂದಮ್ಮ

    ತಂದೆ, ತಾಯಿ ಗುದ್ದಾಟಕ್ಕೆ ಬಲಿಯಾಯ್ತು 5 ತಿಂಗಳ ಕಂದಮ್ಮ

    ನವದೆಹಲಿ: ತಂದೆ, ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತಿದೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ತಂದೆ-ತಾಯಿ ಜಗಳ, ಗುದ್ದಾಟಕ್ಕೆ 5 ತಿಂಗಳ ಪುಟ್ಟ ಕಂದಮ್ಮ ಬಲಿಯಾಗಿದೆ.

    ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನಿವಾಸಿ ದೀಪ್ತಿ(29) ಹಾಗೂ ಸತ್ಯಜೀತ್(32) ಅವರ 5 ತಿಂಗಳ ಮಗು ಸಾವನ್ನಪ್ಪಿದೆ. ಭಾನುವಾರ ದೀಪ್ತಿ ಹಾಗೂ ಸತ್ಯಜೀತ್ ನಡುವೆ ಜಗಳ ನಡೆದಿತ್ತು. ಈ ವೇಳೆ ಅವರಿಬ್ಬರ ನಡುವೆ ಹೊಡೆದಾಟ ಕೂಡ ನಡೆದಿತ್ತು. ಈ ವೇಳೆ ಪತಿ ತನ್ನ ಪತ್ನಿಗೆ ಕೋಲಿನಿಂದ ಹೊಡೆಯುತ್ತಿದ್ದಾಗ ಕೋಲಿನಲ್ಲಿದ್ದ ಕಬ್ಬಿಣದ ಮೊಳೆ ತುಂಡಾಗಿ, ಆಕಸ್ಮಿಕವಾಗಿ ಹಾಸಿಗೆ ಮೇಲೆ ಮಲಗಿದ್ದ ಮಗುವಿನ ತಲೆ ಬಡಿದಿತ್ತು. ಆಗ ದಂಪತಿ ಮಗುವಿಗೆ ಪ್ರಥಮ ಚಿಕಿತ್ಸೆ ಕೊಟ್ಟು ಸುಮ್ಮನಾಗಿದ್ದರು. ಈ ಬಗ್ಗೆ ಹೆಚ್ಚೇನು ತಲೆಕೆಡಿಸಿಕೊಂಡಿರಲಿಲ್ಲ.

    ಬುಧವಾರ ಇದ್ದಕ್ಕಿದ್ದ ಹಾಗೆ ಮಗು ವಾಂತಿ ಮಾಡಲು ಆರಂಭಿಸಿ, ಅಸ್ವಸ್ಥಗೊಂಡಿತು. ಈ ವೇಳೆ ದೀಪ್ತಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಕರೆತರುವ ಮೊದಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗೆ ಮಗುವಿನ ಮೃತದೇಹ ಕಳುಹಿಸಿದಾಗ ಮಗು ಹೇಗೆ ಸಾವನ್ನಪ್ಪಿತು ಎಂಬುದು ಬೆಳಕಿಗೆ ಬಂತು.

    ಮಗುವಿನ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆತಬಿದ್ದಿದೆ, ಆದ್ದರಿಂದ ಅದರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮಗು ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿದಿದ್ದು, ಈ ಸಂಬಂಧ ಗಾಜಿಪುರ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಈ ಬಗ್ಗೆ ತಿಳಿಯುತ್ತಿದ್ದಂತೆ ಆರೋಪಿ ಸತ್ಯಜೀತ್ ತಲೆಮರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • 30 ವರ್ಷಗಳ ಹಿಂದೆ ಮಕ್ಕಳ ಜೊತೆ ಪ್ರಿಯಕರನೊಂದಿಗೆ ಓಡಿಹೋದ ತಾಯಿ

    30 ವರ್ಷಗಳ ಹಿಂದೆ ಮಕ್ಕಳ ಜೊತೆ ಪ್ರಿಯಕರನೊಂದಿಗೆ ಓಡಿಹೋದ ತಾಯಿ

    -15 ವರ್ಷದ ನಂತ್ರ ನಾನೇ ನಿನ್ನ ಮಗನೆಂದು ತಂದೆ ಬಳಿ ಬಂದ ಯುವಕ

    ಕಾರವಾರ: ಮೂವತ್ತು ವರ್ಷಗಳ ಹಿಂದೆ ತಾಯಿ ಜೊತೆ ಮಕ್ಕಳು ಕಾಣೆಯಾದರೂ, ನಾಲ್ಕು ದಿನದಲ್ಲೇ ಒಬ್ಬ ಮಗ ತಂದೆ ಬಳಿ ಬಂದರೆ, ಇನ್ನೊಬ್ಬ 15 ವರ್ಷದ ನಂತರ ನಾನೇ ನಿನ್ನ ಮಗನೆಂದು ಬಂದನು. ಆದರೆ ಈ ಘಟನೆ ನಡೆದು 15 ವರ್ಷದ ನಂತರ ತಾನೇ ನಿನ್ನ ಮಗ ಎಂದು ತಂದೆ ಬಳಿ ಮತ್ತೊಬ್ಬ ಬಂದಿರುವ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೇಣಿ ಗ್ರಾಮದಲ್ಲಿ ನಡೆದಿದೆ. ಇಬ್ಬರಲ್ಲಿ ತನ್ನ ಮಗ ಯಾರು ಎಂದು ತಂದೆ ತಲೆಕೆಡಿಸಿಕೊಂಡಿದ್ದು ಈಗ ಇಬ್ಬರು ಮಕ್ಕಳು ಎನ್ನುವರು ಡಿಎನ್‍ಎ ಪರೀಕ್ಷೆಗೆ ಮುಂದಾಗಿದ್ದಾರೆ.

    75 ವರ್ಷದ ವೆಂಕಟರಮಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ಕಳೆದ 30 ವರ್ಷದ ಹಿಂದೆ ವೆಂಕಟರಮಣ ಪತ್ನಿ ತನ್ನ ನಾಲ್ಕು ಜನ ಮಕ್ಕಳೊಂದಿಗೆ ಅನ್ಯಧರ್ಮದ ಯುವಕನೊಂದಿಗೆ ಓಡಿ ಹೋಗಿದ್ದಳು. ಈ ಸಂದರ್ಭದಲ್ಲಿ ಮೊದಲ ಮಗ ಸುರೇಶ್ ತಾಯಿಯನ್ನು ಬಿಟ್ಟು ತಂದೆ ಬಳಿ ಓಡಿ ಬಂದರೆ, ಇಬ್ಬರು ಹೆಣ್ಣು ಮಕ್ಕಳಾದ ನೀಲಮ್ಮ, ನಾಗಮ್ಮ ಹಾಗೂ ಮಂಜುನಾಥ್ ತಾಯಿ ಬಳಿ ಉಳಿಯುತ್ತಾರೆ. ಆದರೆ 15 ವರ್ಷದ ನಂತರ ತಾನೇ ನಿನ್ನ ಮಗ ಮಂಜುನಾಥ್ ಎಂದು ವೆಂಕಟರಮಣ ಮನೆಗೆ ಬಂದು ಇಲ್ಲಿಯೇ ಮದುವೆಯಾಗಿ ಮನೆಯಲ್ಲಿಯೇ ಪಾಲು ಮಾಡಿಕೊಂಡು ಅಣ್ಣ-ತಮ್ಮಂದಿರು ಉಳಿಯುತ್ತಾರೆ.

    ಇನ್ನೊಬ್ಬ ಮಗನೂ ಸಿಕ್ಕಿದ ಸಂತೋಷದಿಂದ ಇದ್ದ ವೆಂಕಟರಮಣನಿಗೆ ಅಹ್ಮದ್ ಎಂಬ ಯುವಕ ತನ್ನ ಅಕ್ಕಂದಿರು ಹಾಗೂ ತಾಯಿಯ ಫೋಟೋ ಸಮೇತ ಸಾಕ್ಷಿ ಹಿಡಿದು ತಾನೇ ಮಂಜುನಾಥ್ ಎಂದು ಹೇಳಿಕೊಂಡು ಬಂದಿದ್ದಾನೆ. ಆದರೆ ಮೊದಲೇ ಮಂಜುನಾಥ್ ಎಂದು ಹೇಳಿಕೊಂಡು ಬಂದಿದ್ದ ಇನ್ನೊಬ್ಬ ಯುವಕ ಈಗ ನಾನೇ ಮಂಜುನಾಥ್ ಎನ್ನುತ್ತಿದ್ದು ಡಿಎನ್‍ಎ ಪರೀಕ್ಷೆಗೂ ಸಿದ್ಧ ಎನ್ನುತ್ತಿದ್ದಾನೆ. ಆದರೆ ಮೊದಲ ಮಗ ಸುರೇಶ್ ಈಗ ಬಂದವನೇ ನನ್ನ ತಮ್ಮ ಹಾಗೂ ಸಹೋದರಿಯರು ಎಂದರೆ ವೆಂಕಟರಮಣ ಮಾತ್ರ ತಲೆಕೆಡಿಸಿಕೊಂಡಿದ್ದು, ಒಂದು ಬಾರಿ ಈತ ಇನ್ನೊಂದು ಬಾರಿ ಆತನನ್ನು ಮಗ ಎನ್ನುತ್ತಿದ್ದು ಗೊಂದಲ ಸೃಷ್ಟಿಯಾಗಿದೆ.


    ತಂದೆಯನ್ನು ತ್ಯಜಿಸಿ ತಾಯಿ ಅನ್ಯಧರ್ಮಿಯನೊಂದಿಗೆ ಕಲಘಟಗಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಮೂರು ಜನ ಮಕ್ಕಳು ಧರ್ಮಾಂತರಗೊಳ್ಳುತ್ತಾರೆ. ತಾಯಿಯನ್ನು ಕರೆದುಕೊಂಡು ಬಂದ ಆ ವ್ಯಕ್ತಿ ಇವರಿಗೆ ಕೈಕೊಟ್ಟು ಹೋಗುತ್ತಾನೆ. ನಂತರ ಅಕ್ಷರಶ: ಅನಾಥರಾದ ಇವರು ತಾಯಿ ಜೊತೆ ಕೂಲಿ ಕೆಲಸ ಮಾಡಿ ಬದುಕು ನೂಕುತ್ತಾರೆ. ತಾಯಿ ಕೂಡ ತೀರಿಕೊಂಡಿದ್ದರಿಂದ ತಂದೆ ನೋಡಬೇಕು ಎನಿಸಿದೆ. ತಂದೆಯ ವಿಳಾಸ ಮೊದಲೇ ತಿಳಿದಿದ್ದ ಈತ ತಂದೆ ಬಳಿ ಬಂದು ತಾನೇ ನಿನ್ನ ಮಗ ಎನ್ನುತ್ತಾನೆ. ಆದರೆ 15 ವರ್ಷದ ಹಿಂದೆ ತನ್ನ ಮಗ ಬಂದಿದ್ದು ನೀನು ನನ್ನ ಮಗನಲ್ಲಾ ಎಂದು ದೂರ ಸರಿಸುತ್ತಾರೆ. ಆದರೆ ತಾನೂ ಸಾಕ್ಷಿ ಸಮೇತ ಬರುವುದಾಗಿ ಹೇಳಿ ಇಂದು ತನ್ನ ಅಕ್ಕಂದಿರೊಂದಿಗೆ ತಾಯಿಯ ಫೋಟೋ ಸಮೇತವಾಗಿ ಅಂಕೋಲಕ್ಕೆ ಬಂದ ಈತ ತಂದೆಗೆ ತೋರಿಸಿದ್ದಾನೆ. ಇದಲ್ಲದೇ ತಾನೇ ಮಗ ಎಂದು ಸಾಬೀತು ಮಾಡಲು ಯಾವುದಕ್ಕೂ ಸಿದ್ಧವಾಗಿದ್ದೇನೆ. ಆಸ್ತಿಗಾಗಿ ಇಲ್ಲಿ ಬಂದಿಲ್ಲ ತಂದೆ ನೋಡಬೇಕು ಎನ್ನುವ ಹಂಬಲದಿಂದ ಇಲ್ಲಿಗೆ ಬಂದಿದ್ದೇವೆ. ಆಸ್ತಿ ಮನೆ ಬೇಕಿಲ್ಲ ಎಂದು ಕಲಗಟಗಿಯಿಂದ ಇಲ್ಲಿಗೆ ಬಂದ ಮಂಜುನಾಥ್ ಹೇಳುತ್ತಿದ್ದಾರೆ.

    ವೆಂಕಟರಮಣನಿಗೆ ಯವ್ವನದಲ್ಲಿ ಅನೈತಿಕ ಸಂಬಂದವಿತ್ತು ಎಂದು ಹೇಳಲಾಗುತ್ತಿದ್ದು, ಇನ್ನೊಬ್ಬನೂ ಈತನ ಮಗನಿರಬಹುದು ಎಂದು ಊರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ತಾನೇ ಮಗನೆಂದು ಬಂದ ಅಹ್ಮದ್, ಮಂಜುನಾಥ್ ಸಾಕ್ಷಿ ಮುಂದಿಟ್ಟಿದ್ದಾನೆ. ಆದರೆ ಮಂಜುನಾಥ್ ಎಂದು ಹೇಳಿಕೊಂಡ ಯುವಕ ಮಾತ್ರ ಯಾರ ಕೈಗೂ ಸಿಗದೇ ತಲೆ ತಪ್ಪಿಸಿಕೊಳ್ಳುತ್ತಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಈಗ ಡಿಎನ್‍ಎ ಪರೀಕ್ಷೆ ನಂತರವೇ ಇಬ್ಬರು ಇವನ ಮಕ್ಕಳಾ ಅಥವಾ ಒಬ್ಬ ಮಾತ್ರ ಮಗನೇ ಎಂಬುದು ತಿಳಿದು ಬರಲಿದೆ.

  • ಕೌಟುಂಬಿಕ ಕಲಹ- ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಮಗ

    ಕೌಟುಂಬಿಕ ಕಲಹ- ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈದ ಮಗ

    ಕೋಲಾರ: ಕೌಟುಂಬಿಕ ಕಲಹದಿಂದಾಗಿ ಮಗನೊಬ್ಬ ತನ್ನ ತಾಯಿಯನ್ನೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

    ಬಂಗಾರಪೇಟೆಯ ಮುದಲಿಯಾರ್ ಲೇಔಟ್‍ನ ನಿವಾಸಿ ಸತ್ಯಲಕ್ಷ್ಮಿ (70) ಕೊಲೆಯಾದ ತಾಯಿ. ಮಂಜುನಾಥ್ (45) ಕೊಲೆಗೈದ ಆರೋಪಿ. ಕೃತ್ಯ ಎಸಗಿದ ಬಳಿಕ ಮಂಜುನಾಥ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

    ಮಂಜುನಾಥ್ ಬಂಗಾರಪೇಟೆಯ ಮುದಲಿಯಾರ್ ಲೇಔಟ್ ವಿಬಿಅರ್ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಮನೆಯಲ್ಲಿ ವಾಸವಿದ್ದ. ದಸರಾ ಹಬ್ಬಕ್ಕೆಂದು ಆತನ ಪತ್ನಿ ಹಾಗೂ ಮಕ್ಕಳು ಬೆಂಗಳೂರಿನ ಸಂಬಂಧಿಕರ ಮನೆಗೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ತಾಯಿ ಸತ್ಯಲಕ್ಷ್ಮಿ ಹಾಗೂ ಮಗ ಮಾತ್ರ ಇದ್ದರು. ಮಂಜುನಾಥ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ವೃದ್ಧ ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿ ರಾತ್ರಿ 8 ಗಂಟೆ ಸುಮಾರಿಗೆ ದೂರು ಸಮೇತ ಬಂಗಾರಪೇಟೆ ಪೊಲೀಸ್ ಠಾಣೆಗೆ ತೆರಳಿದ್ದಾನೆ.

    ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾಗಿ ಹೇಳುತ್ತಿದ್ದ ಮಂಜುನಾಥ್ ಮಾನಸಿಕ ಅಸ್ವಸ್ಥನಿರಬಹುದು ಎಂದು ಪೊಲೀಸರು ತಿಳಿದು ಸುಮ್ಮನಾಗಿದ್ದರು. ಬಳಿಕ ಆತನನ್ನು ವಿಚಾರಣೆ ಮಾಡಿದಾಗ ಕೃತ್ಯ ಖಚಿತವಾಯಿತು. ಅಷ್ಟೇ ಅಲ್ಲದೆ ಆರೋಪಿಯು, ತಾನು ಇನ್ನು ಕೆಲವರನ್ನು ಕೊಲೆ ಮಾಡುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ಜೊತೆಗೆ ಪತ್ನಿ ಹಾಗೂ ಮಕ್ಕಳು ಬೆಂಗಳೂರಿನಿಂದ ಬರಲಿದ್ದು, ಸ್ವಯಂ ವಿಳಾಸ ಸಮೇತ ಪೊಲೀಸರಿಗೆ ಮಂಜುನಾಥ್ ದೂರು ಸಲ್ಲಿಸಿದ್ದಾನೆ.

    ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್‍ಪಿ ಮಹಮ್ಮದ್ ಸುಜೀತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.