Tag: mother

  • 3 ಗಂಡು 1 ಹೆಣ್ಣು ಸೇರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    3 ಗಂಡು 1 ಹೆಣ್ಣು ಸೇರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಹುಬ್ಬಳ್ಳಿ: ತಾಯಿಯೊಬ್ಬಳು ನಾಲ್ಕು ಮಕ್ಕಳಿಗೆ ಏಕಕಾಲಕ್ಕೆ ಜನ್ಮ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಮಹಾಬುಬಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೆರಿಗೆಗೆ ಆಗಮಿಸಿದ ಮಹಾಬುಬಿಗೆ ಇಂದು ಬೆಳಗ್ಗೆ 11 ಗಂಟೆಗೆ 4 ಮಕ್ಕಳನ್ನು ಹೆತ್ತಿದ್ದಾರೆ.

    ಮಹಾಬುಬಿ ತಮ್ಮ ಎರಡನೇ ಹೆರಿಗೆಯಲ್ಲಿ 3 ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ನಾಲ್ಕು ಮಕ್ಕಳು ಆರೋಗ್ಯವಾಗಿದ್ದು ಮೂರು ಮಗುಗಳ ತೂಕ ಸರಿಸುಮಾರು 2 ಕೆಜಿಯಿದೆ. ಒಂದು ಮಗುವಿನ ತೂಕ ಸ್ವಲ್ಪ ಕಡಿಮೆ ಇರೋದ್ರಿಂದ ನಾಲ್ಕು ಮಕ್ಕಳನ್ನು ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸವಣೂರ ಪಟ್ಟಣದಲ್ಲಿ ಪ್ಲಂಬರ್ ಕೆಲಸ ಮಾಡೋ ನಿಸಾರ ಅಕ್ಕಿ ಹಾಗೂ ಮಹಾಬುಬಿ ದಂಪತಿಗಳಿಗೆ ಈಗಾಗಲೇ ಒಂದು ಗಂಡು ಮಗುವಿದೆ. ಮಹಾಬುಬಿ ಕಳೆದ 5 ವರ್ಷಗಳ ಹಿಂದೆ ಮೊದಲ ಹೆರಿಗೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಎರಡನೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದು ಕುಟುಂಬದಲ್ಲಿ ಸಂತೋಷವನ್ನು ಇಮ್ಮಡಿಗೊಳಿಸಿದೆ.

  • 2 ತಿಂಗ್ಳಿನಿಂದ ತಾಯಿ, ಸಹೋದರಿ ಶವದ ಜೊತೆ ಯುವತಿ ವಾಸ

    2 ತಿಂಗ್ಳಿನಿಂದ ತಾಯಿ, ಸಹೋದರಿ ಶವದ ಜೊತೆ ಯುವತಿ ವಾಸ

    ಲಕ್ನೋ: ಯುವತಿಯೊಬ್ಬಳು 2 ತಿಂಗಳಿನಿಂದ ತನ್ನ ತಾಯಿ ಹಾಗೂ ಸಹೋದರಿಯ ಮೃತದೇಹಗಳ ಜೊತೆ ವಾಸಿಸುತ್ತಿದ್ದ ಪ್ರಕರಣವೊಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿಗೆ ಬಂದಿದೆ.

    ದೀಪಾ ಮೃತದೇಹಗಳ ಜೊತೆ ವಾಸಿಸುತ್ತಿದ್ದ ಯುವತಿ. ದೀಪಾ ಆದರ್ಶ್ ನಗರದ ಕಾಲೋನಿಯೊಂದರಲ್ಲಿ ತನ್ನ ತಾಯಿ ಹಾಗೂ ಸಹೋದರಿಯ ಮೃತದೇಹದ ಜೊತೆ ವಾಸಿಸುತ್ತಿದ್ದಳು. ದೀಪಾ ಮನೆಯಿಂದ ದುರ್ವಾಸನೆ ಬರುತ್ತಿತ್ತು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮನೆಯ ಬಾಗಿಲು ತೆರೆಯುತ್ತಿದ್ದಂತೆ ಅಲ್ಲಿ ದೀಪಾಳ ತಾಯಿ ಪುಷ್ಪ ಶ್ರೀವಾತ್ಸವ್ ಹಾಗೂ ಆಕೆಯ ಸಹೋದರಿ ವಿಭಾ ಮೃತದೇಹ ಪತ್ತೆಯಾಗಿದೆ.

    ಏನಿದು ಘಟನೆ?
    ದೀಪಾ ತಂದೆ ವಿಜೇಂದ್ರ ಶ್ರೀವಾತ್ಸವ್ ಅವರು 1990ರಲ್ಲಿ ಮೃತಪಟ್ಟಿದ್ದರು. ಆಗಿನಿಂದಲೂ ತಾಯಿ ಹಾಗೂ ಮೂವರು ಸಹೋದರಿಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮೂವರು ಸಹೋದರಿಯರಲ್ಲಿ ರೂಪಾಲಿ ಎಂಬವರು ಮೃತಪಟ್ಟಿದ್ದರು. ಇದಾದ ಬಳಿಕ ಪುಷ್ಪ ಹಾಗೂ ಆಕೆಯ ಇಬ್ಬರು ಪುತ್ರಿಯರಾದ ದೀಪಾ ಹಾಗೂ ವಿಭಾ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಪುಷ್ಪ ಹಾಗೂ ಆಕೆಯ ಮಕ್ಕಳು ಅಕ್ಕಪಕ್ಕದ ಮನೆಯವರ ಜೊತೆ ಮಾತನಾಡುವುದನ್ನು ನಿಲ್ಲಿಸಿ ಬಿಟ್ಟಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಮೂಳೆಗಳು ಕಾಣಿಸುವ ಮಟ್ಟಿಗೆ ಮೃತದೇಹಗಳು ಕೊಳೆತು ಹೋಗಿತ್ತು. ಅಂದರೆ ಅವರಿಬ್ಬರು ಸುಮಾರು 2 ತಿಂಗಳ ಹಿಂದೆ ಮೃತಪಟ್ಟಿದ್ದರು. ತಾಯಿ-ಮಗಳ ಸಾವಿನ ಕಾರಣ ತಿಳಿಯಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ಅಲ್ಲದೆ ದೀಪಾಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕೆಯ ಸ್ಥಿತಿಯನ್ನು ನೋಡಿ ಹುಚ್ಚಾಸ್ಪತ್ರೆ ಅಥವಾ ಆಶ್ರಯ ಕೇಂದ್ರದಲ್ಲಿ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ.

  • ಮಗ್ಳ ಸಾವಿನಿಂದ ಮನನೊಂದು ತಾಯಿ ಆತ್ಮಹತ್ಯೆ

    ಮಗ್ಳ ಸಾವಿನಿಂದ ಮನನೊಂದು ತಾಯಿ ಆತ್ಮಹತ್ಯೆ

    ಹೈದರಾಬಾದ್: ಮಗಳ ಸಾವಿನಿಂದ ಮನನೊಂದಿದ್ದ ತಾಯಿಯೊಬ್ಬರು ಅಪಾರ್ಟ್‌ಮೆಂಟ್‌ನ 4ನೇ ಮಹಡಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ಮಂಜುಳಾ ಆತ್ಮಹತ್ಯೆ ಮಾಡಿಕೊಂಡ ತಾಯಿ. ಮಂಜುಳಾ ಪುತ್ರಿ ಮಾನಸಾ(12) 7ನೇ ತರಗತಿ ಓದುತ್ತಿದ್ದಳು. ಮಾನಸಾ ಚಿಕ್ಕ ವಯಸ್ಸಿನಲ್ಲಿಯೇ ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಳು. ಪೋಷಕರು ಮಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡುತ್ತಿದ್ದರು. ಆದರೆ ಗುರುವಾರ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಮಾನಸಾ ತಾಯಿಯ ಮನೆಯಲ್ಲಿಯೇ ಮೃತಪಟ್ಟಿದ್ದಳು.

    ಮೃತ ಮಂಜುಳಾಗೆ ಗಂಡು ಹಾಗೂ ಹೆಣ್ಣು ಮಗು ಇತ್ತು. ಆದರೆ ಮಗಳು ಮಾನಸಾಳ ಸಾವಿನಿಂದ ಮಂಜುಳಾ ಸಾಕಷ್ಟು ಮನನೊಂದಿದ್ದರು. ಅಲ್ಲದೆ ಇದರಿಂದ ಖಿನ್ನತೆಕ್ಕೊಳಗಾಗಿ ಅಪಾರ್ಟ್‌ಮೆಂಟ್‌ ಮೇಲಿಂದ ಜಿಗಿದಿದ್ದಾರೆ. ಪರಿಣಾಮ ಅವರಿಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮರಣೋತ್ತರ ಪರೀಕ್ಷೆಗಾಗಿ ಮಂಜುಳಾರ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

  • ವೈದ್ಯ, ರಿಸೆಪ್ಷನಿಸ್ಟ್ ಕಳ್ಳಾಟ – ತಾಯಿ, ಮಗನಿಗೆ ಬೆಂಕಿಯಿಟ್ಟ ಅತ್ತೆ, ಸೊಸೆ

    ವೈದ್ಯ, ರಿಸೆಪ್ಷನಿಸ್ಟ್ ಕಳ್ಳಾಟ – ತಾಯಿ, ಮಗನಿಗೆ ಬೆಂಕಿಯಿಟ್ಟ ಅತ್ತೆ, ಸೊಸೆ

    – ಇಬ್ಬರಿಗೂ ಕೆಮಿಕಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ರು

    ಜೈಪುರ: ಪತಿ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಕ್ಕೆ ಮಹಿಳೆ ಮತ್ತು ಆಕೆಯ ಪುತ್ರನನ್ನು ತಾಯಿ ಮತ್ತು ಪತ್ನಿ ಸಜೀವವಾಗಿ ಸುಟ್ಟ ಅಮಾನುಷ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ಥಾನದ ಭರತ್‍ಪುರದಲ್ಲಿ ಈ ಘಟನೆ ನಡೆದಿದೆ. ದೀಪಾ ದೇವಿ(25) ಮತ್ತು ಸೂರ್ಯ(6) ಮೃತ ದುರ್ದೈವಿಗಳು. ವೈದ್ಯ ಸಂದೀಪ್ ಗುಪ್ತ ತಾಯಿ ಹಾಗೂ ಪತ್ನಿ ಸೀಮಾ ಗುಪ್ತ ಕೊಲೆ ಮಾಡಿದ ಆರೋಪಿಗಳು.

    ವೈದ್ಯ ಸಂದೀಪ್ ಗುಪ್ತ ನಡೆಸುತ್ತಿದ್ದ ಆಸ್ಪತ್ರೆಯಲ್ಲಿ ದೀಪಾ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಹಲವು ವರ್ಷಗಳಿಂದ ಸಂದೀಪ್ ಹಾಗೂ ದೀಪಾ ಅನೈತಿಕ ಸಂಬಂಧ ಹೊಂದಿದ್ದರು. ಅಲ್ಲದೆ ದೀಪಾ ರಿಸೆಪ್ಷನಿಸ್ಟ್ ಕೆಲಸ ಬಿಟ್ಟ ಬಳಿಕ ಆಕೆಗೆ ಸಂದೀಪ್ ಒಂದು ಬ್ಯೂಟಿಪಾರ್ಲರ್ ಹಾಗೂ ಮನೆಯನ್ನು ಕೂಡ ಮಾಡಿಕೊಟ್ಟಿದ್ದನು. ಅವರಿಬ್ಬರಿಗೂ ಒಬ್ಬ ಮಗ ಕೂಡ ಇದ್ದನು.

    ಈ ಬಗ್ಗೆ ಪತ್ನಿ ಸೀಮಾಗೆ ವಿಷಯ ತಿಳಿದ ತಕ್ಷಣ ಅತ್ತೆಯ ಬಳಿ ಪತಿಯ ಅಕ್ರಮ ಸಂಬಂಧದ ಗುಟ್ಟು ಬಿಚ್ಚಿಟ್ಟಿದ್ದಾಳೆ. ಮಗನ ಕರ್ಮಕಾಂಡ ಕೇಳಿ ಸಿಟ್ಟಿಗೆದ್ದ ತಾಯಿ ಸೊಸೆ ಜೊತೆ ಸೇರಿ ದೀಪಾಳನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ. ಬುಧವಾರ ದೀಪಾಳ ಮನೆಗೆ ಹೋಗಿ ಆಕೆ ಹಾಗೂ ಸೂರ್ಯ ಮೇಲೆ ಕೆಮಿಕಲ್ ಸ್ಪ್ರೇ ಮಾಡಿ, ಇಬ್ಬರಿಗೂ ಬೆಂಕಿ ಹಚ್ಚಿ ರೂಮ್‍ನಲ್ಲಿ ಕೂಡಿ ಹಾಕಿ ತಮ್ಮ ಮನೆಗೆ ವಾಪಸ್ ಹೋಗಿದ್ದಾರೆ.

    ಇತ್ತ ತಾಯಿ, ಮಗ ಬೆಂಕಿಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ. ಮೊದಲು ತಾಯಿ, ಮಗ ಸಿಲಿಂಡರ್ ಸ್ಫೋಟ ಅಥವಾ ಬೆಂಕಿ ಅವಘಡದಿಂದ ಸಾವನ್ನಪ್ಪಿದ್ದಾರೆ ಎಂದು ನೆರೆಹೊರೆಯವರು ತಿಳಿದಿದ್ದರು. ಆದರೆ ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡ ಬಳಿಕ ಸತ್ಯಾಂಶ ಹೊರಬಿದ್ದಿದೆ. ದೀಪಾ ಬಗ್ಗೆ ಅಕ್ಕಪಕ್ಕದ ಮನೆಯವರನ್ನ ವಿಚಾರಿಸಿದಾಗ ವೈದ್ಯನೊಂದಿಗೆ ಆಕೆಯ ಅಕ್ರಮ ಸಂಬಂಧದ ಬಗ್ಗೆ ಬಯಲಾಗಿದೆ.

    ಈ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಸದ್ಯ ಸೀಮಾ ಹಾಗೂ ಸಂದೀಪ್ ತಾಯಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

  • ಡಿಕೆಶಿ ಪತ್ನಿ, ತಾಯಿಗೆ ಸಮನ್ಸ್ ನೀಡಬೇಡಿ: ದೆಹಲಿ ಹೈಕೋರ್ಟ್

    ಡಿಕೆಶಿ ಪತ್ನಿ, ತಾಯಿಗೆ ಸಮನ್ಸ್ ನೀಡಬೇಡಿ: ದೆಹಲಿ ಹೈಕೋರ್ಟ್

    ನವದೆಹಲಿ: ಮುಂದಿನ ಆದೇಶದವರೆಗೂ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರಿಗೆ ಸಮನ್ಸ್ ನೀಡದಂತೆ ಇಡಿ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ನಾಳೆ ನಡೆಯಬೇಕಿದ್ದ ವಿಚಾರಣೆಯಿಂದಲೂ ರಿಲೀಫ್ ಕೊಟ್ಟಿದೆ.

    ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್ ರದ್ದು ಮತ್ತು ಬೆಂಗಳೂರಿನಲ್ಲಿ ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಇಂದು ವಿಚಾರಣೆ ನಡೆಸಿದ ಪೀಠ ಉಷಾ ಮತ್ತು ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್ ಅವರ ವಾದ ಕೇಳಿತು.

    ಮಹಿಳೆಯರನ್ನು ಠಾಣೆಯಲ್ಲೇ ವಿಚಾರಣೆ ನಡೆಸಬೇಕು ಎಂಬ ಯಾವ ನಿಯಮಗಳಿಲ್ಲ. ಹಿಂದೆ ದೆಹಲಿ ಮದ್ರಾಸ್ ಹೈಕೋರ್ಟ್ ಸೇರಿ ಸುಪ್ರೀಂಕೋರ್ಟ್ ಹಲವು ಆದೇಶಗಳನ್ನು ನೀಡಿದೆ ಇದ್ಯಾವುದನ್ನು ಅರಿಯದೇ ಇಡಿ ಅಧಿಕಾರಿಗಳು ದೆಹಲಿಗೆ ಬರುವಂತೆ ಸಮನ್ಸ್ ನೀಡಿದ್ದಾರೆ. ಆದರೆ ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ಆರೋಗ್ಯ ಸಹಕರಿಸಲ್ಲ ಅಲ್ಲದೇ ಉಷಾ ಅವರು ಗೃಹಿಣಿ ಆಗಿರುವುದರಿಂದ ಅವರ ಮನೆಯಲ್ಲಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

    ನಾವು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಆದರೆ ದೆಹಲಿಯಲ್ಲಿ ವಿಚಾರಣೆ ಬೇಡ ಎನ್ನುತ್ತಿದ್ದೇವೆ ಬೆಂಗಳೂರಿನಲ್ಲಿ ವಿಚಾರಣೆ ಎದುರಿಸಲು ಸಿದ್ದವಾಗಿದ್ದೇವೆ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಯಲಿ ಅಂತಾ ದಯಾನ್ ಕೃಷ್ಣನ್ ವಾದ ಮಂಡಿಸಿದ್ರು. ಇಡಿ ಪರ ಹಿರಿಯ ವಕೀಲರು ಗೈರಾದ ಹಿನ್ನಲೆ ವಾದ ಮಂಡನೆಗೆ ಅವಕಾಶ ಕೊಡಬೇಕು ಅಂತಾ ಜ್ಯೂನಿಯರ್ ವಕೀಲರು ಮನವಿ ಮಾಡಿದರು. ಇದನ್ನು ಕೇಳ್ತಿದ್ದಂತೆ ಮುಂದಿನ ದಿನಾಂಕದಂದು ವಾದ ಮಂಡಿಸದಿದ್ದಲ್ಲಿ ನಿಮ್ಮನ್ನ ಪರಿಗಣಿಸದೇ ತೀರ್ಪು ನೀಡುವುದಾಗಿ ಎಚ್ಚರಿಸಿ ನವೆಂಬರ್ 15 ಕ್ಕೆ ವಿಚಾರಣೆ ಮುಂದೂಡಿದರು.

  • ಸಾಸ್ ಚೆಲ್ಲಿ ಮಗನ ಟಿಕ್‌ಟಾಕ್- ಅಮ್ಮನಿಗೆ ಕಣ್ಣೀರು ತರಿಸಿದ ಪುತ್ರ

    ಸಾಸ್ ಚೆಲ್ಲಿ ಮಗನ ಟಿಕ್‌ಟಾಕ್- ಅಮ್ಮನಿಗೆ ಕಣ್ಣೀರು ತರಿಸಿದ ಪುತ್ರ

    ಬೆಂಗಳೂರು: ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತ ವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿ ನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ.

    ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದು ಕುಳಿತಿದ್ದಾನೆ. ಮಗನ ಆಟಕ್ಕೆ ತಾಯಿ ಎದೆ ಬಡಿತವೇ ನಿಂತಾಂತಗಿ ಭಯಗೊಂಡಿದ್ದರು.

    ಮಗ ಟಿಕ್ ಟಾಕ್ ಮಾಡುತ್ತಿರುವ ವಿಷಯ ತಿಳಿದ ತಾಯಿ ಮಗನಿಗೆ ಸರಿಯಾಗಿ ಹೊಡೆದಿದ್ದಾರೆ. ಅಲ್ಲದೆ ಭಯದಿಂದ ಜೋರಾಗಿ ಅಳುತ್ತಾ ಮಗನಿಗೆ ಬೈದಿದ್ದಾರೆ. ತಾಯಿ ಬೈಯುವಾಗ ಯುವಕ ನಗುತ್ತಾ ಚೆಲ್ಲಿರುವ ಸಾಸ್ ಕ್ಲೀನ್ ಮಾಡಿದ್ದಾನೆ.

    ಯುವಕನ ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

  • ಅಳುತ್ತಿದ್ದ ಮಗುವನ್ನ ನಾಲೆಗೆ ಎಸೆದ ತಾಯಿ

    ಅಳುತ್ತಿದ್ದ ಮಗುವನ್ನ ನಾಲೆಗೆ ಎಸೆದ ತಾಯಿ

    ಚಿಕ್ಕಮಗಳೂರು: ಮೂರು ತಿಂಗಳ ಗಂಡು ಮಗುವನ್ನ ಹೆತ್ತ ತಾಯಿಯೇ ನಾಲೆಗೆ ಎಸೆದು ಕೊಂದ ಅಮಾನವೀಯ ಘಟನೆ ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.

    ಕಡೂರು ತಾಲೂಕಿನ ನಿಡಘಟ್ಟ ನಿವಾಸಿ ಕಮಲ ಮಗುವನ್ನು ನಾಲೆಗೆ ಎಸೆದ ತಾಯಿ. ಮೂರು ತಿಂಗಳ ತೇಜಸ್ ಮೃತ ಕಂದಮ್ಮ ಎಂದು ಗುರುತಿಸಲಾಗಿದೆ. ತರೀಕೆರೆ ತಾಲೂಕಿನ ಹಳಿಯಾರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಮಲ ಹಾಗೂ ಆಕೆಯ ಅತ್ತೆ ಮಗುವಿಗೆ ಹುಷಾರಿರಲಿಲ್ಲ ಎಂದು ತರೀಕೆರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ತಡರಾತ್ರಿ ಮಗು ಅಳುತ್ತಿತ್ತು ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸಿರಲಿಲ್ಲ. ಈ ವೇಳೆ ಕಮಲ ಸಮಾಧಾನ ಮಾಡಿಸಿಕೊಂಡ ವಾಪಾಸ್ ಬರುತ್ತೇನೆ ಎಂದು ಅತ್ತೆ ಬಳಿ ಹೇಳಿ ಮಗುವನ್ನು ಎತ್ತುಕೊಂಡು ಹೋಗಿದ್ದಳು.

    ಆದರೆ ಮಗುವನ್ನು ಎತ್ತಿಕೊಂಡು ಬಂದ ತಾಯಿ ತರೀಕೆರೆಯಿಂದ ೪ ಕಿ.ಮೀ ದೂರವಿರುವ ಹಳಿಯಾರು ಗ್ರಾಮಕ್ಕೆ ನಡೆದುಕೊಂಡು ಬಂದು, ಅಲ್ಲಿರುವ ಭದ್ರಾ ನಾಲೆಯಲ್ಲಿ ಮಗುವನ್ನು ಎಸೆದು ಮತ್ತೆ ಆಸ್ಪತ್ರೆಗೆ ಹೋಗಿ ಏನು ಗೊತ್ತಿಲ್ಲದಂತೆ ಮಲಗಿಕೊಂಡಿದ್ದಳು. ಇತ್ತ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು, ನೀರು ಹರಿಯುತ್ತಿದ್ದ ರಭಸಕ್ಕೆ ಮಗು ಮೃತದೇಹ ಹರಿದುಬಂದು ಹಳಿಯಾರು ಗ್ರಾಮದಿಂದ ೫ ಕಿ.ಮೀ ದೂರವಿರುವ ಬೆಟ್ಟತಾವರೆಕೆರೆ ಗ್ರಾಮದಲ್ಲಿ ಪತ್ತೆಯಾಗಿದೆ.

    ನಾಲೆಯಲ್ಲಿ ಮಗುವಿನ ಮೃತದೇಹ ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ಮೃತದೇಹವನ್ನು ನಾಲೆಯಿಂದ ಹೊರತಗೆದು, ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಾಗ ಆರೋಪಿ ತಾಯಿ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ಗಂಡು ಮಗು ಆಗದ್ದಕ್ಕೆ ತಾಯಿ ಮುಂದೆಯೇ ಮಗಳನ್ನ ಅತ್ಯಾಚಾರಗೈದ ತಂದೆ

    ಗಂಡು ಮಗು ಆಗದ್ದಕ್ಕೆ ತಾಯಿ ಮುಂದೆಯೇ ಮಗಳನ್ನ ಅತ್ಯಾಚಾರಗೈದ ತಂದೆ

    ಭೋಪಾಲ್: 16 ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಸಿರ್ಸೋಡಾ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಶನಿವಾರ ಸಂಜೆ ನಡೆದಿದ್ದು, ಪೋಷಕರೊಂದಿಗೆ ಬಾಲಕಿ ವಾಸಿಸುತ್ತಿರುವ ಮನೆಯಲ್ಲೇ ಅತ್ಯಾಚಾರ ನಡೆದಿದೆ. ಘಟನೆ ಕುರಿತು ಬಾಲಕಿ ತಾಯಿಯ ಫೋನ್‌ನಿಂದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅತ್ಯಾಚಾರ ನಡೆಯುತ್ತಿದ್ದ ಸಂದರ್ಭದಲ್ಲಿ ತಾಯಿ ಕೂಡ ಮನೆಯಲ್ಲಿದ್ದಳು ಎಂದು ಹೇಳಿಕೊಂಡಿದ್ದಾಳೆ.

    ಆರೋಪಿಯನ್ನು ಅರವಿಂದ್ ಶರ್ಮಾ ಎಂದು ಗುರುತಿಸಲಾಗಿದ್ದು, ಘಟನೆ ಕುರಿತು ಮಗಳು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಆರೋಪಿ ತಂದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲದೆ ಮಗಳನ್ನು ಕೊಲ್ಲುವುದಾಗಿ ಸಹ ಬೆದರಿಕೆ ಹಾಕಿದ್ದಾನೆ.

    ಶನಿವಾರ ಸಂಜೆ ದೂರವಾಣಿ ಮೂಲಕ ದೂರು ಸ್ವೀಕರಿಸಿದ್ದೇವೆ. ಆದರೆ ನಾವು ಸ್ಥಳ ತುಲುಪುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದ. ಸಂತ್ರಸ್ತೆ ದೇಹದ ಮೇಲೆ ಹೆಚ್ಚು ಗಾಯದ ಗುರುತುಗಳಿದ್ದವು. ಆಕೆಯನ್ನು ಸ್ಥಳದಿಂದ ರಕ್ಷಿಸಲಾಗಿದೆ ಹಾಗೂ ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಗೋಹಾದ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಮಲ್ ಕಾಂತ್ ದುಬೇ ಮಾಹಿತಿ ನೀಡಿದ್ದಾರೆ.

    ತಂದೆ ಗಂಡು ಮಗು ಬಯಸಿದ್ದರಿಂದ ಬಾಲ್ಯದಿಂದಲೂ ವಿನಾಕಾರಣ ನನ್ನನ್ನು ಮನಬಂದAತೆ ಥಳಿಸುತ್ತಿದ್ದ ಎಂದು ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ.

    ತಾಯಿ ನನ್ನನ್ನು ರಕ್ಷಿಸಲು ಮತ್ತು ನನಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಳು. ಅವಳನ್ನೂ ಮನಬಂದAತೆ ಥಳಿಸುತ್ತಿದ್ದ. ಗಂಡು ಮಗುವಿಗೆ ಜನ್ಮ ನೀಡದ ಕಾರಣ ಅವಳನ್ನೂ ದೂಷಿಸುತ್ತಿದ್ದ. ಶನಿವಾರ ಮೊದಲು ನನ್ನನ್ನು ಕೋಣೆಯೊಳಗೆ ಬೀಗ ಹಾಕಿ ಥಳಿಸಿದ ನಂತರ ಅತ್ಯಾಚಾರ ಎಸಗಿದ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.

    ಈ ಕುರಿತು ಸಂತ್ರಸ್ತೆಯ ತಾಯಿ ಪ್ರತಿಕ್ರಿಯಿಸಿ, ಮಗಳ ಹೇಳಿಕೆಯನ್ನು ಧೃಡೀಕರಿಸಿದ್ದು, ಘಟನೆ ನಡೆದಾಗ ನಾನು ಬೇರೆ ಕೋಣೆಯಲ್ಲಿದ್ದೆ. ಮಗಳ ಮೇಲೆ ಅತ್ಯಾಚಾರ ನಡೆದಿದ್ದನ್ನು ತಿಳಿದ ನಂತರ ಪೊಲೀಸರಿಗೆ ಕರೆ ಮಾಡುವಂತೆ ಸೂಚಿಸಿದೆ ಎಂದು ವಿವರಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪೊಲೀಸರು ಹಲವಾರು ಸಂಭಾವ್ಯ ಅಡಗುದಾಣಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಈವರೆಗೆ ಆತನನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ.

  • ದಿನಕ್ಕೆ 40 ಕಪ್ ಚಹಾ ಕುಡಿಯುತ್ತಿದ್ದ ಮಹಿಳೆ ‘ಟೀ ಬಾಕ್ಸ್’ನಲ್ಲೇ ಶವವಾದ್ಳು

    ದಿನಕ್ಕೆ 40 ಕಪ್ ಚಹಾ ಕುಡಿಯುತ್ತಿದ್ದ ಮಹಿಳೆ ‘ಟೀ ಬಾಕ್ಸ್’ನಲ್ಲೇ ಶವವಾದ್ಳು

    – ತಾಯಿಯ ಕೊನೆ ಆಸೆ ತೀರಿಸಿದ ಮಗಳು

    ಲಂಡನ್: ಇಂಗ್ಲೆಂಡ್‌ನ ಮಹಿಳೆಯೊಬ್ಬರಿಗೆ ಚಹಾ ಎಂದರೆ ಅಚ್ಚುಮೆಚ್ಚು, ಪ್ರತಿದಿನ ಏನಿಲ್ಲವೆಂದರು 30ರಿಂದ 40 ಕಪ್ ಚಹಾವನ್ನು ಮಹಿಳೆ ಸವಿಯುತ್ತಿದ್ದರು. ಅವರ ಚಹಾ ಪ್ರೀತಿ ಕೇವಲ ಅವರು ಬದುಕಿದ್ದಾಗ ಮಾತ್ರವಲ್ಲದೆ ಸಾವಿನಲ್ಲೂ ಜೊತೆಯಾಗಿದೆ.

    ಇಂಗ್ಲೆಂಡ್‌ನ ಲೀಸೆಸ್ಟರ್ ಶೈರ್‌ನ ನಿವಾಸಿ ಟೀನಾ ವ್ಯಾಟ್ಸನ್(73) ಅವರಿಗೆ ಚಹಾ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಅವರು ತಮ್ಮ ಸಾವಿನಲ್ಲೂ ಚಹಾ ತಮ್ಮೊಂದಿಗೆ ಒಂದಾಗಬೇಕು ಎಂಬ ಆಸೆ ಇಟ್ಟುಕೊಂಡಿದ್ದರು. ಟೀನಾ ಅವರು ಸಾಯುವ 4 ವರ್ಷಗಳ ಹಿಂದೆಯೇ ಅವರು ತಾವು ನಿಧನವಾದರೆ ತಮ್ಮ ಅಂತ್ಯಸಂಸ್ಕಾರ ಹೇಗೆ ನಡೆಯಬೇಕು ಎನ್ನುವ ಬಗ್ಗೆ ಮಗಳು ಡೇಬ್ಸ್ ಬಳಿ ಹೇಳಿಕೊಂಡಿದ್ದರು. ತಮ್ಮ ಮೃತದೇಹವನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಿ ಎಂದು ತಮ್ಮ ಆಸೆ ತಿಳಿಸಿದ್ದರು.

    ಹೀಗಾಗಿ ಟೀನಾ ಸಾವನ್ನಪ್ಪಿದಾಗ ಅವರ ಮೃತದೇಹವನ್ನು ಚಹಾದ ಬ್ಯಾಗ್ ರೀತಿಯೇ ಕಾಣುವ ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಸಂಸ್ಕಾರ ಮಾಡಲಾಯಿತು. ಈ ವಿಚಾರ ತಿಳಿದು ಅನೇಕರು ಎಂಥ ವಿಚಿತ್ರ ಆಸೆಯೋ ಎಂದಿದ್ದರೆ, ಕೆಲವರು ತಾಯಿಯ ಕೊನೆ ಆಸೆ ಪೂರೈಸಿದ ಮಗಳ ಪ್ರೀತಿಗೆ ಭೇಷ್ ಎಂದಿದ್ದಾರೆ.

    ಈ ಬಗ್ಗೆ ಮಾತನಾಡಿದ ಡೇಬ್ಸ್, ನನ್ನ ತಾಯಿಯ ಆಸೆಯನ್ನು ಪೂರೈಸಿದ್ದೇನೆ ಎಂಬ ತೃಪ್ತಿ ನನಗಿದೆ. ಅಮ್ಮನನ್ನು ಚಹಾದ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆಯಲ್ಲಿ ಅಂತ್ಯಸಂಸ್ಕಾರ ಮಾಡಿರೋದನ್ನು ಅವರೂ ಕೂಡ ಸ್ವರ್ಗದಿಂದ ನೋಡಿದ್ದಾರೆ ಎಂದು ನಾನು ಅಂದುಕೊಂಡಿದ್ದೇನೆ. ಮೇಲಿನಿಂದ ತನ್ನ ಚಹಾ ಬ್ಯಾಗ್ ರೀತಿ ಕಾಣುವ ಶವದ ಪೆಟ್ಟಿಗೆ ನೋಡಿ ಅವರು ಸಿಕ್ಕಾಪಟ್ಟೆ ನಕ್ಕಿರುತ್ತಾರೆ. ಅವರಿಗೆ ಇದರಿಂದ ಖುಷಿಯಾಗಿದೆ ಎಂದು ನನಗೆ ಗೊತ್ತು. ಈಗಲೂ ನಾನು ಚಹಾ ಮಾಡಿದಾಗಲೆಲ್ಲಾ ಅಮ್ಮನಿಗಾಗಿ ಚಹಾವನ್ನು ಎತ್ತಿಡುತ್ತೇನೆ ಎಂದು ಹೇಳಿದ್ದಾರೆ.

    ನನ್ನ ಅಮ್ಮ 73ನೇ ವಯಸ್ಸಿಗೆ ಹೃದಯಾಘಾತದಿಂದ ನಮ್ಮನ್ನು ಅಗಲಿದರು. ಅವರು ಎರಡು ಬಾರಿ ಕ್ಯಾನ್ಸರ್ ಜೊತೆ ಹೋರಾಡಿ ಗುಣಮುಖರಾಗಿದ್ದರು. ಅವರು 14 ವರ್ಷದವರಾಗಿದ್ದಾಗ ಸ್ಪೇನ್‌ನಲ್ಲಿ ಒಂದು ಕೀಟ ಅವರನ್ನು ಕಚ್ಚಿತ್ತು. ಅದರ ಕಡಿತದಿಂದ ಅವರ 1 ಕಾಲಿಗೆ ಇನ್ಫೆಕ್ಷನ್ ಆಗಿ ಕಾಲನ್ನೇ ಕತ್ತರಿಸಬೇಕಾಯ್ತು. ಬಳಿಕ ಸೋಂಕು ಹರಡಿ ಇನ್ನೊಂದು ಕಾಲನ್ನು ಕೂಡ ಕತ್ತರಿಸಬೇಕಾಯ್ತು. ಎರಡೂ ಕಾಲನ್ನು ಕಳೆದುಕೊಂಡಿದ್ದರೂ ನನ್ನ ಅಮ್ಮ ಛಲ ಬಿಟ್ಟಿರಲಿಲ್ಲ. ಧೈರ್ಯದಿಂದ ತಮ್ಮ ಜೀವನ ನಡೆಸಿದ್ದರು. ಎಲ್ಲರನ್ನೂ ಸದಾ ಖುಷಿಯಾಗಿಡುತ್ತಿದ್ದರು ಎಂದು ತಾಯಿ ಬಗ್ಗೆ ತಿಳಿಸಿದ್ದಾರೆ. ಮಗಳು ತಾಯಿ ಮೇಲಿಟ್ಟಿರುವ ಪ್ರೀತಿ ಎಲ್ಲರ ಮನಗೆದ್ದಿದೆ.

  • 50 ವರ್ಷದ ಅಮ್ಮನಿಗೆ ವರ ಬೇಕಾಗಿದೆ- ಮಗಳ ಟ್ವೀಟ್ ವೈರಲ್

    50 ವರ್ಷದ ಅಮ್ಮನಿಗೆ ವರ ಬೇಕಾಗಿದೆ- ಮಗಳ ಟ್ವೀಟ್ ವೈರಲ್

    ನವದೆಹಲಿ: 2015ರಲ್ಲಿ ತಾಯಿಯೊಬ್ಬಳು ತನ್ನ ಮಗನಿಗೆ ಸೂಕ್ತ ವಧು ಬೇಕು ಎಂದು ಮ್ಯಾಟ್ರಿಮೊನಿಯಲ್ಲಿ ಜಾಹೀರಾತು ನೀಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಇದೀಗ ಯುವತಿಯೊಬ್ಬಳು ತನ್ನ 50 ವರ್ಷದ ತಾಯಿಗೆ ವರ ಹುಡುಕಲು ಹೊರಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಕಾನೂನು ವಿದ್ಯಾರ್ಥಿನಿ ಆಸ್ತಾ ವರ್ಮಾ ಗುರುವಾರ ಒಂದು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ತನ್ನ ತಾಯಿಗೆ ಸೂಕ್ತ ವರ ಬೇಕಾಗಿದ್ದಾನೆ ಎಂದು ಬರೆದುಕೊಂಡು ತನ್ನ ತಾಯಿ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ವರ ಸಸ್ಯಾಹಾರಿಯಾಗಿರಬೇಕು, ಮದ್ಯ ಸೇವಿಸಬಾರದು ಹಾಗೆಯೇ ಉತ್ತಮ ವ್ಯಕ್ತಿಯಾಗಿರಬೇಕು ಎಂದು ಬರೆದುಕೊಂಡು ಹ್ಯಾಶ್ ಟ್ಯಾಗ್ ಗ್ರೂಮ್ ಹಂಟಿಂಗ್ ಅಂತ ಪೋಸ್ಟ್ ಮಾಡಿದ್ದಾರೆ.

    https://twitter.com/AasthaVarma/status/1189915673897529345

    ಆಸ್ತಾ ಅವರು ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡುತ್ತಿದ್ದಂತೆಯೇ ಟ್ವೀಟ್ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಕೆಲವು ಸಲಹೆಗಳು ಕೂಡ ಬಂದವು. ಕೆಲವರು ತಾಯಿ ತನ್ನ ಮಗಳಿಗೆ ವರ ಹುಡುಕಬೇಕಾಗಿತ್ತು. ಆದರೆ ಇಲ್ಲಿ ಮಗಳೇ ತಾಯಿಗೆ ವರ ಹುಡುಕುತ್ತಿದ್ದಾರೆ. ನಿಜಕ್ಕೂ ಈ ವಿಚಾರ ನಮ್ಮ ಮನ ಕರಗಿಸಿತ್ತು ಎಂದು ಬರೆದುಕೊಂಡಿದ್ದಾರೆ.

    ಅಕ್ಟೋಬರ್ 31ರಂದು ಮಾಡಿದ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಇದುವರೆಗೂ 5 ಸಾವಿರ ಮಂದಿ ಪ್ರತಿಕ್ರಿಯಿಸಿದರೆ, 5,500ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. ಸುಮಾರು 27 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ.

    ಹಲವರು ಈ ಪೋಸ್ಟನ್ನು ಇಷ್ಟಪಟ್ಟಿದ್ದಾರೆ. ಅಲ್ಲದೆ ಆಸ್ತಾ ಅವರ ಈ ಕೆಲಸಕ್ಕೆ ಶಹಬ್ಬಾಸ್ ಎಂದಿದ್ದಾರೆ. ಇನ್ನೂ ಕೆಲವರು ಈ ಒಳ್ಳೆಯ ಕೆಲಸಕ್ಕೆ ಶುಭಹಾರೈಸಿದ್ದಾರೆ. ಮತ್ತೆ ಕೆಲವರು ಇಷ್ಟೇ ವಯಸ್ಸಿನ ವಧು ಹುಡುಕುತ್ತಿರುವ ಬೇರೆ ಗಂಡಸರಿಗೆ ಟ್ಯಾಗ್ ಮಾಡಿದ್ದಾರೆ.