Tag: mother

  • ತಾಯಿಗೆ ಡಿಕ್ಕಿ ಹೊಡೆದ ಕಾರಿಗೆ ಒದ್ದ ಬಾಲಕ- ವಿಡಿಯೋ ವೈರಲ್

    ತಾಯಿಗೆ ಡಿಕ್ಕಿ ಹೊಡೆದ ಕಾರಿಗೆ ಒದ್ದ ಬಾಲಕ- ವಿಡಿಯೋ ವೈರಲ್

    – ಬಾಲಕನ ತಾಯಿ ಪ್ರೀತಿಗೆ ನೆಟ್ಟಿಗರು ಫಿದಾ

    ಚಾಂಗ್ಕಿಂಗ್: ತಾಯಿಗೆ ಕಾರು ಡಿಕ್ಕಿ ಹೊಡೆದ ನಂತರ ಪುಟ್ಟ ಬಾಲಕ ಸಿಟ್ಟಿನಿಂದ ಕಾರಿಗೆ ಒದೆಯುವ ಮೂಲಕ ತಾಯಿಯ ಮೇಲಿನ ಪ್ರೀತಿಯನ್ನು ಹೊರಹಾಕಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಚೀನಾದ ಚಾಂಗ್ಕಿಂಗ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ತಾಯಿ ಝೀಬ್ರಾ ಕ್ರಾಸ್ ಮೂಲಕ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಆಗ ತಾಯಿ ನೆಲಕ್ಕೆ ಬಿದ್ದಿದ್ದು, ತಕ್ಷಣ ಎಚ್ಚೆತ್ತ ಬಾಲಕ ಮೊದಲು ತಾಯಿಯನ್ನು ಮಾತನಾಡಿಸುತ್ತಾನೆ. ನಂತರ ಸಿಟ್ಟಿಗೆದ್ದು ಕಾರಿಗೆ ಒದೆಯಲು ಪ್ರಾರಂಭಿಸಿದ್ದಾನೆ.

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾರು ಚಾಲಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾಯಿ ಜೊತೆಗೆ ಬಾಲಕ ರಸ್ತೆ ದಾಟುತ್ತಿರುತ್ತಾನೆ. ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ತಾಯಿ ಕೆಳಗೆ ಬೀಳುತ್ತಾರೆ. ಮೊದಲು ತಾಯಿಯನ್ನು ಮಾತನಾಡಿಸಿ, ನಂತರ ಬಾಲಕ ಕಾರಿಗೆ ಒದೆಯುತ್ತಾನೆ. ಆಗ ಚಾಲಕ ಕಾರಿನಿಂದ ಇಳಿದು ಬಂದಿದ್ದು, ಬಾಲಕ ತನ್ನ ತಾಯಿ ಬಳಿ ಓಡಿ ಹೋಗುತ್ತಾನೆ. ನಂತರ ಸುತ್ತಲಿನ ಜನ ಘಟನಾ ಸ್ಥಳದತ್ತ ಧಾವಿಸುತ್ತಾರೆ. ಕೆಳಗೆ ಬಿದ್ದಿದ್ದ ಮಹಿಳೆಯನ್ನು ಎತ್ತಿ ಅದೇ ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸುತ್ತಾರೆ.

    ಅದೃಷ್ಟವಶಾತ್ ಬಾಲಕ ಹಾಗೂ ತಾಯಿಗೆ ಗಂಭೀರ ಗಾಯಗಳಾಗಿಲ್ಲ. ಅಪಘಾತಕ್ಕೆ ಕಾರು ಚಾಲಕನೇ ಸಂಪೂರ್ಣ ಹೊಣೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಈ ವಿಡಿಯೋ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ವಿಟ್ಟರಿನಲ್ಲಿ 83,500 ಜನ ವೀಕ್ಷಿಸಿದ್ದಾರೆ. ಬಾಲಕ ಸಾವಿರಾರು ನೆಟ್ಟಿಗರ ಹೃದಯವನ್ನು ಗೆದ್ದಿದ್ದಾನೆ. ದಯವಿಟ್ಟು ನಿನ್ನ ಮುಗ್ಧ, ಪರಿಶುದ್ಧ ಹೃದಯವನ್ನು ಸದಾ ಕಾಪಾಡಿಕೋ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

  • ಮಗಳ ಮೇಲೆ ಅತ್ಯಾಚಾರವೆಸಗಲು ಕಾಮುಕರಿಗೆ ಸಾಥ್ ಕೊಟ್ಟ ತಾಯಿ

    ಮಗಳ ಮೇಲೆ ಅತ್ಯಾಚಾರವೆಸಗಲು ಕಾಮುಕರಿಗೆ ಸಾಥ್ ಕೊಟ್ಟ ತಾಯಿ

    – ಪತ್ನಿ ಕೃತ್ಯದ ಬಗ್ಗೆ ದೂರು ಕೊಟ್ಟ ಪತಿ
    – ಅಪ್ರಾಪ್ತೆ ಮೇಲೆ 1 ವರ್ಷದಿಂದ ನಿರಂತರ ಅತ್ಯಾಚಾರ
    – ತಾಯಿ ಪರಾರಿ, ಮೂವರು ಅರೆಸ್ಟ್

    ಗಾಂಧಿನಗರ: 12 ವರ್ಷದ ಮಗಳ ಮೇಲೆ ಅತ್ಯಾಚಾರವೆಸೆಗಲು ಕಾಮುಕರಿಗೆ ಸ್ವತಃ ತಾಯಿಯೇ ಸಹಕರಿಸಿದ ನೀಚ ಘಟನೆ ಗುಜರಾತ್‍ನ ಭಾವ್‍ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ತನ್ನ ಮಗಳ ಮೇಲೆ ವಿಕೃತಿ ಮೆರೆದ ಪತ್ನಿ ವಿರುದ್ಧ ಪತಿಯೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ಭಾವ್‍ನಗರ ಜಿಲ್ಲೆಯ ಭುಟಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಳೆದ 1 ವರ್ಷದಿಂದ ಕಾಮುಕರು ನನ್ನ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಇದಕ್ಕೆ ಸ್ವತಃ ನನ್ನ ಪತ್ನಿಯೇ ಸಾಥ್ ಕೊಡುತ್ತಿದ್ದಳು ಎಂದು ಬಾಲಕಿ ತಂದೆ ಪೊಲೀಸರಿಗೆ ಶನಿವಾರ ದೂರು ನೀಡಿದ್ದರು. ಇತ್ತ ಪತಿ ತನ್ನ ವಿರುದ್ಧ ದೂರು ನೀಡಿರುವ ವಿಚಾರ ತಿಳಿದ ಪತ್ನಿ ಮನೆಯಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದಾಳೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕಲ್ಯಾಣ ಮಂಟಪದ ಬಾತ್‍ರೂಮಿನಲ್ಲಿ ಅಪ್ರಾಪ್ತೆ ಮೇಲೆ ರೇಪ್‍ಗೈದ ಯುವಕ

    ಆರೋಪಿಗಳನ್ನು ಶಾಂತಿ ಧಂಧುಕಿಯಾ(46), ಬಾಬುಬಾಯಿ ಸಾರ್ತನ್‍ಪರ(43), ಚಂದ್ರೇಶ್ ಸಾರ್ತನ್‍ಪರ(32) ಎಂದು ಗುರುತಿಸಲಾಗಿದ್ದು, ಪೊಲೀಸರು ಭಾನುವಾರ ಈ ಮೂವರನ್ನು ಬಂಧಿಸಿದ್ದಾರೆ. ಮಗಳ ಮೇಲೆ ನಡೆಯುತ್ತಿದ್ದ ಅತ್ಯಾಚಾರದ ಬಗ್ಗೆ ತಂದೆಗೆ ಅರಿವಿರಲಿಲ್ಲ. ಆದರೆ ಬಾಲಕಿಯೇ ಈ ಬಗ್ಗೆ ಹೇಳಿದಾಗ ಪತ್ನಿಯ ನೀಚ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೂರು ಹಿಂಪಡೆಯಲು ನಿರಾಕರಿಸಿದ ರೇಪ್ ಸಂತ್ರಸ್ತೆ ಮೇಲೆ ಆ್ಯಸಿಡ್ ದಾಳಿ

    ಕಳೆದ 1 ವರ್ಷದಿಂದ ನನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಮೂವರು ವ್ಯಕ್ತಿಗಳು ನನ್ನನ್ನು ಅತ್ಯಾಚಾರಗೈಯ್ಯುತ್ತಿದ್ದರು. ಇದಕ್ಕೆ ನನ್ನ ತಾಯಿಯೂ ಸಹಕರಿಸುತ್ತಿದ್ದರು. ತಂದೆಗೆ ಏನಾದರು ಕೆಲಸ ಹೇಳಿ ಅವರನ್ನು ಮನೆಯಿಂದ ಹೊರ ಕಳಿಸುತ್ತಿದ್ದರು. ಆ ಬಳಿಕ ಮೂವರು ಮನೆಗೆ ಬಂದು ಅತ್ಯಾಚಾರ ಮಾಡುತ್ತಿದ್ದರು. ಇದನ್ನು ನೋಡಿಕೊಂಡು ತಾಯಿ ಸುಮ್ಮನಿರುತ್ತಿದ್ದರು ಎಂದು ಸಂತ್ರಸ್ತೆ ಪೊಲೀಸರ ಬಳಿ ತಿಳಿಸಿದ್ದಾಳೆ.

  • ಮಗಳನ್ನು ನೋಡಲು ಹಾಸ್ಟೆಲ್‍ಗೆ ತೆರಳುತ್ತಿದ್ದ ತಾಯಿಯ ಮೇಲೆ ಹರಿದ ಬಸ್

    ಮಗಳನ್ನು ನೋಡಲು ಹಾಸ್ಟೆಲ್‍ಗೆ ತೆರಳುತ್ತಿದ್ದ ತಾಯಿಯ ಮೇಲೆ ಹರಿದ ಬಸ್

    ಮೈಸೂರು: ಸರ್ಕಾರಿ ಬಸ್ ಚಾಲಕನ ಬೇಜವಾಬ್ದಾರಿತನದಿಂದ ಮಗಳನ್ನು ನೋಡಲು ಹಾಸ್ಟೆಲ್‍ಗೆ ಹೋಗುತ್ತಿದ್ದ ವಿವಾಹಿತ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಮುದ್ದಹಳ್ಳಿ ಸಮೀಪದ ಕಡುಬಿನ ಕಟ್ಟೆ ಗೇಟ್ ಬಳಿ ಈ ಘಟನೆ ನಡೆದಿದ್ದು, ಚನ್ನಪಟ್ಟಣ ಗ್ರಾಮದ ಮಹಿಳೆ ಭಾಗ್ಯಮ್ಮ (30) ಮೃತ ದುರ್ದೈವಿ. ಕಡುಬಿನ ಕಟ್ಟೆ ಗೇಟ್ ಬಳಿಯಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಮಗಳನ್ನು ಭೇಟಿ ಮಾಡಲು ಮೊರಾರ್ಜಿ ವಸತಿ ಶಾಲೆಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಭಾಗ್ಯಮ್ಮ ಸಂಪೂರ್ಣವಾಗಿ ಇಳಿಯುವ ಮುನ್ನವೇ ಚಾಲಕ ಬಸ್ ಚಲಾಯಿಸಿದ್ದಾನೆ. ಇದರಿಂದ ಭಾಗ್ಯಮ್ಮ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಬಸ್ಸಿನ ಹಿಂಬದಿ ಚಕ್ರ ಹರಿದ ಪರಿಣಾಮ ಭಾಗ್ಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡಿನ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.

  • ಮದುವೆ ಮಾಡದ್ದಕ್ಕೆ ಬಡಿಗೆಯಿಂದ ತಂದೆ-ತಾಯಿಯನ್ನು ಥಳಿಸಿದ ಮಗ

    ಮದುವೆ ಮಾಡದ್ದಕ್ಕೆ ಬಡಿಗೆಯಿಂದ ತಂದೆ-ತಾಯಿಯನ್ನು ಥಳಿಸಿದ ಮಗ

    ವಿಜಯಪುರ: ತನಗೆ ಮದುವೆ ಮಾಡಿಲ್ಲವೆಂದು ಮಗನೊಬ್ಬ ತಂದೆ- ತಾಯಿಯನ್ನ ಹಿಗ್ಗಾಮುಗ್ಗ ಥಳಿಸಿದ ಘಟನೆ ವಿಜಯಪುರ ದಲ್ಲಿ ನಡೆದಿದೆ.

    ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಿಸನಾಳ ಗ್ರಾಮದ ಶರಣಮ್ಮ, ಹೇಮಯ್ಯ ಹಿರೇಮಠ ದಂಪತಿಯ ದ್ವಿತೀಯ ಪುತ್ರ ಶಂಕ್ರಯ್ಯ ತನಗೆ ಬೇಗನೆ ಮದುವೆ ಮಾಡದ ಕಾರಣ ಥಳಿಸಿದ್ದಾನೆ. ಶಂಕ್ರಯ್ಯ ತನಗೆ ಮದುವೆ ಮಾಡುವಂತೆ ಪ್ರತಿದಿನ ಗಲಾಟೆ ಮಾಡುತ್ತಿದ್ದನು ಎಂದು ವೃದ್ಧ ತಂದೆ-ತಾಯಿ ದೂರಿದ್ದಾರೆ.

    ಈ ಬಗ್ಗೆ ಗ್ರಾಮಸ್ಥರು ಮಾತನಾಡಿ, ಅನೇಕ ಕನ್ಯೆಗಳನ್ನು ನೋಡಿದ್ರೂ ಈತನನ್ನು ಯಾರೂ ಒಪ್ಪಲಿಲ್ಲ. ಆದರೂ ಹೆತ್ತವರನ್ನು ಪ್ರತಿನಿತ್ಯ ಪೀಡುಸುತ್ತಿದ್ದನು. ಇದರಿಂದ ಬೇಸತ್ತ ಹೆತ್ತವರು, ಮೊದಲು ದುಡಿದು ಜೀವನ ನಡೆಸು. ಆ ಮೇಲೆ ಮದುವೆ ಎಂದು ತಂದೆ-ತಾಯಿ ಹೇಳಿದ್ದಾರೆ. ಅಲ್ಲದೆ ಯಾವುದೇ ದುಡಿಮೆ ಇಲ್ಲದೆ ಊರಲ್ಲಿ ಖಾಲಿ ಸುತ್ತಾಡುತ್ತಿದ್ದನು. ಅದಕ್ಕೆ ದುಡಿಮೆ ಇಲ್ಲದ ಕಾರಣ ಮದುವೆ ಮಾಡಲು ಹೇಮಯ್ಯ ದಂಪತಿ ಮದುವೆಗೆ ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಹೆತ್ತವರು ಈ ರೀತಿ ಹೇಳಿದ್ದಕ್ಕೆ ಕೋಪಗೊಂಡ ಶಂಕ್ರಯ್ಯ ರಾತ್ರಿ ತಂದೆ-ತಾಯಿ ಜೊತೆ ಗಲಾಟೆ ಮಾಡಿ ಮಾತಿಗೆ ಮಾತು ಬೆಳೆದು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪರಿಣಾಮ ಹೇಮಯ್ಯ ದಂಪತಿಯ ಕಣ್ಣು, ತಲೆ, ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದ್ದು, ವಿಜಯಪುರ ಜಿಲ್ಲಾಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆ-ತಾಯಿ ಮೇಲೆ ಹಲ್ಲೆ ಮಾಡಿ ನಂತರ ಬ್ಲೇಡ್ ನಿಂದ ತಾನೇ ತಲೆ ಹಾಗೂ ಕೈಗೆ ಗಾಯ ಮಾಡಿಕೊಂಡು ತಂದೆ-ತಾಯಿಯೊಂದಿಗೆ ಶಂಕ್ರಯ್ಯ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಹಲ್ಲೆ ಮಾಡಿದ ಶಂಕ್ರಯ್ಯ ಬುದ್ಧಿಮಾಂದ್ಯ ಎಂದು ಹೇಳಲಾಗುತ್ತಿದ್ದು, ಈ ಘಟನೆ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

  • 27 ದಿನದ ಮಗುವನ್ನು ಕೊಂದು ಸಂಪಿನಲ್ಲಿ ಹಾಕಿದ ತಾಯಿ

    27 ದಿನದ ಮಗುವನ್ನು ಕೊಂದು ಸಂಪಿನಲ್ಲಿ ಹಾಕಿದ ತಾಯಿ

    – ಮನೆಗೆ ಬಂದ ಪತಿಗೆ ಆಘಾತ

    ದಿಸ್ಪುರ್: ತಾಯಿ ತನ್ನ 27 ದಿನದ ಕಂದಮ್ಮನನ್ನು ಕೊಲೆ ಮಾಡಿ, ಸಂಪ್‍ನಲ್ಲಿ ಎಸೆದಿರುವ ಅಮಾನವೀಯ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ದಿಬ್ರುಗಡ ಜಿಲ್ಲೆಯ ಗಭರುಪಾಥರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಕುರಿತು ಮಗುವಿನ ತಂದೆ ಸಜಿದುಲ್ ಅಲಿ ಮಾತನಾಡಿ, ನಾನು ಮಧ್ಯಾಹ್ನ 1 ಗಂಟೆಗೆ ಕೆಲಸಕ್ಕೆ ಹೋಗುವ ವೇಳೆ ಮಗು ಹಾಗೂ ಪತ್ನಿ ಇಬ್ಬರು ಮಲಗಿದ್ದರು. ಆದರೆ ಬೆಳಗ್ಗೆ 5ಕ್ಕೆ ಬರುವ ಹೊತ್ತಿಗೆ ಮಗು ಕಾಣೆಯಾಗಿತ್ತು. ತಕ್ಷಣ ಎಚ್ಚೆತ್ತುಕೊಂಡು ಕುಟುಂಬಸ್ಥರಿಗೆ ತಿಳಿಸಿದೆ. ನಂತರ ಮಗುವನ್ನು ಹುಡುಕಲು ಪ್ರಾರಂಭಿಸಿದೆವು. ಆಗ ಮಗು ಮನೆಯ ಹಿಂಬದಿಯ ಸಂಪ್ ನಲ್ಲಿ ಬಿದ್ದಿರುವುದನ್ನು ಕಂಡೆವು ಎಂದು ತಿಳಿಸಿದರು.

    ಪ್ರಕರಣದ ಪ್ರಾಥಮಿಕ ಹಂತದ ತನಿಖೆ ವೇಳೆ ಪೊಲೀಸರು ಮಗುವಿನ ತಂದೆ, ಚಿಕ್ಕಪ್ಪ ಹಾಗೂ ಅಜ್ಜನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ನಂತರ ಮಗುವಿನ 19 ವರ್ಷದ ತಾಯಿ ಮಜಿದುನ್ ಮಜೀದುನ್ ನೇಸಾ ಅವರ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ತಾನೇ ಕೊಂದಿರುವುದಾಗಿ ಹೇಳಿದ್ದಾಳೆ. ಆದರೆ ಯಾಕೆ ಕೊಲೆ ಮಾಡಿದಳು ಎಂಬುದರ ಕುರಿತು ನಿಖರ ಕಾರಣವನ್ನು ತಾಯಿ ತಿಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯು ಮಾನಸಿಕ ಅಸ್ವಸ್ಥೆಯಾಗಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಕುರಿತು ಪೊಲೀಸರು ಐಪಿಸಿ ಸೆಕ್ಷನ್ 302(ಕೊಲೆ), 209(ಸುಳ್ಳು ಮಾಹಿತಿ) ಅಡಿ ದಿಬ್ರುಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ಅವಳು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದಳು. ಕೆಲವೊಮ್ಮೆ ತನ್ನ ಮಗುವನ್ನು ಯಾರೋ ಕೊಲ್ಲುತ್ತಿದ್ದಾರೆ ಎಂದು ಕಿರುಚುತ್ತಿದ್ದಳು ಎಂದು ಮಹಿಳೆ ಸಂಬಂಧಿ ತಿಳಿಸಿದ್ದಾರೆ.

    ಮಗುವನ್ನು ಸಾಯಿಸಿದ ನಂತರ ಮನೆಗೆ ಬಂದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ನಂತರ ಅವರ ಪತಿ ಬಂದು ಸಮಾಧಾನ ಪಡಿಸಿದನು. ಮಗು ಕಾಣದ್ದನ್ನು ಮನಗಂಡು ಹುಡುಕಲು ಪ್ರಾರಂಭಿಸಿದರು. ಇದೀಗ ಮಹಿಳೆಯನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

  • ಅತ್ತೆಯ ಜೊತೆಗೆ ಸೊಸೆಯ ಅನೈತಿಕ ಸಂಬಂಧ – ಇಬ್ಬರನ್ನು ಇರಿದು ಕೊಂದ ನಿವೃತ್ತ ಶಿಕ್ಷಕ

    ಅತ್ತೆಯ ಜೊತೆಗೆ ಸೊಸೆಯ ಅನೈತಿಕ ಸಂಬಂಧ – ಇಬ್ಬರನ್ನು ಇರಿದು ಕೊಂದ ನಿವೃತ್ತ ಶಿಕ್ಷಕ

    ನವದೆಹಲಿ: ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ನಿವೃತ್ತ ಶಿಕ್ಷಕನೋರ್ವ ಪತಿ ಮತ್ತು ಸೊಸೆಯನ್ನು ಕೊಲೆ ಮಾಡಿರುವ ಘಟನೆ ವಾಯುವ್ಯ ದೆಹಲಿಯಲ್ಲಿ ನಡೆದಿದೆ.

    62 ವರ್ಷದ ನಿವೃತ್ತ ಶಿಕ್ಷಕ ಸತೀಶ್ ಚೌಧರಿ, ಸಿಂಗಪುರದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ತಮ್ಮ ಮಗ ಗೌರವ್ ಚೌಧರಿ ಅವರ ಪತ್ನಿ ಪ್ರಜ್ಞಾ ಚೌಧರಿ (35) ಮತ್ತು ಅವರ ಪತ್ನಿ 62 ವರ್ಷದ ಸ್ನೇಹಲತಾ ಚೌಧರಿ ಅವರನ್ನು ದೆಹಲಿಯ ರೋಹಿಣಿ ನಗರದಲ್ಲಿರುವ ತಮ್ಮ ಮನೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಎಸ್.ಡಿ ಮಿಶ್ರಾ, ನಮಗೆ ಈ ಘಟನೆಯ ಬಗ್ಗೆ ಸತೀಶ್ ಚೌಧರಿ ಅವರ ಎರಡನೇ ಪುತ್ರ ಸೌರಭ್ ಚೌಧರಿ ಮಾಹಿತಿ ನೀಡಿದಾಗ ನಾವು ತಕ್ಷಣ ಸ್ಥಳಕ್ಕೆ ಹೋದೆವು. ಆಗ ದೆಹಲಿ ಸಾರಿಗೆ ನಿಗಮದಲ್ಲಿ ನಿವೃತ್ತ ಉದ್ಯೋಗಿಯಾಗಿರುವ ಪ್ರಜ್ಞಾ ಚೌಧರಿ ಮತ್ತು ಅವರ ಅತ್ತೆ ಸ್ನೇಹಲತಾ ಚೌಧರಿ ಅವರು ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಸುಮಾರು 6 ಗಂಟೆಗೆ ನಮಗೆ ಸೌರಭ್ ಅವರು ಕರೆ ಮಾಡಿದ್ದರು. ಈ ಘಟನೆಯಲ್ಲಿ ಅತ್ತಿಗೆ ಮತ್ತು ತಾಯಿಯ ಪ್ರಾಣ ಉಳಿಸಲು ಹೋದ ಸತೀಶ್ ಅವರ ಎರಡನೇ ಮಗ ಸೌರಭ್ ಚೌಧರಿ ಅವರಿಗೂ ಸಣ್ಣ ಪುಟ್ಟ ಗಾಯಗಳು ಆಗಿವೆ. ಈ ಸಂಬಂಧ ವಿಜಯ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸತೀಶ್ ಚೌಧರಿ ಅವರನ್ನು ಅರೆಸ್ಟ್ ಮಾಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ – ಪೊಲೀಸ್ರಿಗೆ ದಿಶಾ ಹೆತ್ತವರಿಂದ ಧನ್ಯವಾದ

    ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ – ಪೊಲೀಸ್ರಿಗೆ ದಿಶಾ ಹೆತ್ತವರಿಂದ ಧನ್ಯವಾದ

    ಹೈದರಾಬಾದ್: ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿ ಹತ್ಯೆಗೈದು ಪೊಲೀಸರು ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಿದ್ದಾರೆ. ಅವರಿಗೆ ನಮ್ಮ ಧನ್ಯವಾದ ಎಂದು ಹೇಳುವ ಮೂಲಕ ಪಶುವೈದ್ಯೆ ಪೋಷಕರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ನನ್ನ ಮಗಳು ತೀರಿಹೋಗಿ ಇವತ್ತಿಗೆ 10 ದಿನಗಳು ಕಳೆದಿದೆ. ಇಂದು ಸೈಬರಾಬಾದ್ ಪೊಲೀಸರು ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ನಾನು ಪೊಲೀಸರಿಗೆ ಹಾಗೂ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈಗ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ. ಪೊಲೀಸರು ನನ್ನ ಮಗಳಿಗೆ ಭಾಗಶಃ ನ್ಯಾಯ ಕೊಡಿಸಿದ್ದಾರೆ ಎಂದು ಪಶುವೈದ್ಯೆ ತಂದೆ ಖಾಕಿ ಪಡೆಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ- ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ ಪೊಲೀಸರು

    ಇತ್ತ ಸಂತ್ರಸ್ತೆಯ ತಾಯಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಎನ್‍ಕೌಂಟರ್ ನಿಂದ ಸಮಾಧಾನ ಆಗಿದೆ. ನನ್ನ ಮಗಳಿಗೆ ಪೊಲೀಸರು ಹಾಗೂ ತೆಲಂಗಾಣ ಸರ್ಕಾರ ಭಾಗಶಃ ನ್ಯಾಯ ಕೊಡಿಸಿದ್ದಾರೆ. ನನ್ನ ಮಗಳು ಮತ್ತೆ ಮರಳಿ ಬರಲ್ಲ. ಆದರೆ ಪೊಲೀಸರ ಕಾರ್ಯದಿಂದ ಇಂದು ನನ್ನ ಮಗಳ ಸಾವಿಗೆ ನ್ಯಾಯ ಸಿಕ್ಕಿದೆ. ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿ ಪೊಲೀಸರು ನಮ್ಮ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಆಗುವಂತೆ ಮಾಡಿದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಮುಕರ ಹುಟ್ಟಡಗಿಸಿದ ವೀರ ಕನ್ನಡಿಗ – ಎನ್‌ಕೌಂಟರ್‌ಗೆ ವಿಶ್ವನಾಥ್ ಸಜ್ಜನರ್ ನೇತೃತ್ವ

    ಇಂದು ಹೈದರಾಬಾದ್-ಬೆಂಗಳೂರು ಹೈವೇ 44ರಲ್ಲಿ ಸೈಬರಾಬಾದ್ ಪೊಲೀಸರು ದಿಶಾ ಅತ್ಯಾಚಾರ, ಕೊಲೆ ಪ್ರಕರಣದ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಅವರ ನೇತೃತ್ವದಲ್ಲಿ ಪೊಲೀಸರು ಕಾಮುಕರು ಪಶುವೈದ್ಯೆಯನ್ನು ಬೆಂಕಿ ಹಚ್ಚಿ ಸುಟ್ಟ ಸ್ಥಳದಲ್ಲೇ ಅತ್ಯಾಚಾರಿಗಳ ಮೇಲೆ ಫೈರಿಂಗ್ ಮಾಡಿ ಹತ್ಯೆ ಮಾಡಿದ್ದಾರೆ. ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ನಾಲ್ವರು ಅತ್ಯಾಚಾರಿಗಳ ಮೇಲೆ ಎನ್‍ಕೌಂಟರ್ ಮಾಡಿದ್ದಾರೆ. ಇದನ್ನೂ ಓದಿ: ದೇಶಕ್ಕಾಗಿ ಒಳ್ಳೆಯ ನಿರ್ಧಾರ- ವಿಶ್ವನಾಥ್ ಕೆಲಸಕ್ಕೆ ಸಹೋದರ ಶ್ಲಾಘನೆ

    ಸೈಬರಾಬಾದ್ ಪೊಲೀಸರ ಈ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಸಿನಿಮಾ ಕಲಾವಿದರು, ರಾಜಕಾರಣಿಗಳು, ಸಾರ್ವಜನಿಕರು ಪೊಲೀಸರಿಗೆ ಸಲಾಂ ಎಂದಿದ್ದಾರೆ. ಬೆಳ್ಳಂಬೆಳಗ್ಗೆ ಒಳ್ಳೆ ಸುದ್ದಿ ಕೊಟ್ಟಿದ್ದೀರಿ, ಅತ್ಯಾಚಾರಿಗಳನ್ನು ಹತ್ಯೆಗೈದಿದ್ದು ಸರಿಯಾಗಿದೆ. ಇದು ಬೇರೆಯವರಿಗೆ ಪಾಠವಾಗಲಿದೆ ಎಂದು ಪೊಲೀಸರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

  • ತೊಟ್ಟಿಲಲ್ಲಿದ್ದ ಕಂದಮ್ಮನ ಮೇಲೆ ಮಲಗಿದ ಬೆಕ್ಕು- ಉಸಿರುಗಟ್ಟಿ ಮಗು ಸಾವು

    ತೊಟ್ಟಿಲಲ್ಲಿದ್ದ ಕಂದಮ್ಮನ ಮೇಲೆ ಮಲಗಿದ ಬೆಕ್ಕು- ಉಸಿರುಗಟ್ಟಿ ಮಗು ಸಾವು

    ಕೀವ್: ತೊಟ್ಟಿಲಲ್ಲಿ ಮಲಗಿದ್ದ 9 ತಿಂಗಳ ಕಂದಮ್ಮನ ಮುಖದ ಮೇಲೆ ಮನೆಯಲ್ಲಿ ಸಾಕಿದ್ದ ಬೆಕ್ಕು ಮಲಗಿದ ಪರಿಣಾಮ ಉಸಿರುಗಟ್ಟಿ ಮಗು ಸಾವನ್ನಪ್ಪಿದ ಘಟನೆ ಉಕ್ರೇನ್‍ನಲ್ಲಿ ನಡೆದಿದೆ.

    ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳದಿದ್ದರೆ ಯಾವ ರೀತಿಯಲ್ಲಾದರೂ ಅಪಾಯ ಬರಬಹುದು. ಉಕ್ರೇನ್‍ನಲ್ಲಿ ತೊಟ್ಟಿಲಲ್ಲಿ ಮಲಗಿದ್ದ ಮಗುವಿನ ಮೇಲೆ ಬೆಕ್ಕು ಕುಳಿತ ಪರಿಣಾಮ ಪುಟ್ಟ ಕಂದಮ್ಮ ಸಾವನ್ನಪ್ಪಿದೆ. 9 ತಿಂಗಳ ಅಲೆಗ್ಸಾಂಡ್ರಾ ಮನೆಯೊಳಗೆ ತೊಟ್ಟಿಲಲ್ಲಿ ಮಲಗಿತ್ತು. ಮಗುವಿನ ತಾಯಿ ಸ್ನೇಝಾನಾ(22) ಮನೆಯ ಕೆಲಸಗಳನ್ನು ಮುಗಿಸಿ, ಮಗುವನ್ನು ತೊಟ್ಟಿಲ್ಲಲ್ಲಿ ಮಲಗಿಸಿ ಮನೆ ಹಿತ್ತಲಿನಲ್ಲಿ ಕೆಲಸ ಮಾಡುತ್ತಿದ್ದರು. ಮಗು ಮಲಗಿದೆ ಎಂದು ತಾಯಿ ತನ್ನ ಕೆಲಸಗಳನ್ನು ಮಾಡುತ್ತಿದ್ದರು. ಈ ವೇಳೆ ತೊಟ್ಟಿಲಿನಲ್ಲಿ ಎರಡು ಬೆಕ್ಕುಗಳು ಹತ್ತಿ, ಮಗುವಿನ ಮುಖದ ಮೇಲೆ ಕುಳಿತಿತ್ತು. ಕೆಲ ಸಮಯದ ನಂತರ ಕೆಲಸ ಮುಗಿಸಿಕೊಂಡು ತಾಯಿ ಮನೆ ಒಳಗೆ ಬಂದಾಗ ಮಗುವಿನ ತೊಟ್ಟಿಲಿನಲ್ಲಿ ಬೆಕ್ಕು ಕುಳಿತಿರುವುದು ನೋಡಿದ್ದಾರೆ. ತಕ್ಷಣ ಬೆಕ್ಕನ್ನು ಓಡಿಸಿ, ಮಗುವನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ.

    ಆದರೆ ಮಗು ಉಸಿರಾಡುತ್ತಿರಲಿಲ್ಲ ಎಂದು ಅರಿತು ಆತಂಕಗೊಂಡು ತಾಯಿ ಅರೆ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಕ್ಷಣ ಸಿಬ್ಬಂದಿ ಮನೆಗೆ ಬಂದು ಚಿಕಿತ್ಸೆ ನೋಡಿ ಸುಮಾರು 40 ನಿಮಿಷಗಳ ಕಾಲ ಮಗು ಮರು ಉಸಿರಾಟ ಮಾಡುವಂತೆ ಪ್ರಯತ್ನಿಸಿದರು. ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ಅಷ್ಟೊತ್ತಿಗೆ ಪುಟ್ಟ ಜೀವ ಪ್ರಾಣ ಬಿಟ್ಟಿತ್ತು. ಮಗುವಿನ ಮುಖದ ಮೇಲೆ ಬೆಕ್ಕು ಕುಳಿತಿದ್ದಕ್ಕೆ ಉಸಿರುಗಟ್ಟಿ ಕಂದಮ್ಮ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಮನೆಯಲ್ಲಿ ಸಾಕಿದ್ದ ಬೆಕ್ಕುಗಳಿಂದ ಮಗು ಸಾವನ್ನಪ್ಪಿರುವ ಪ್ರಕರಣಗಳು ಈ ಹಿಂದೆ ಕೂಡ ನಡೆದಿತ್ತು. 2000 ಡಿಸೆಂಬರ್ ನಲ್ಲಿ ಕಿಂಗ್‍ಸ್ಟೈಟ್‍ಗಾನ್ ಪ್ರದೇಶದಲ್ಲಿ ಆರು ವಾರಗಳ ಮಗು ಮಲಗಿದ್ದಾಗ ಅದರ ಮೇಲೆ ಬೆಕ್ಕು ಕುಳಿತ ಪರಿಣಾಮ ಮಗು ಮೃತಪಟ್ಟಿತ್ತು. ಇದೇ ರೀತಿ ರಷ್ಯಾದ ಜ್ಲಟೋಸ್ಟ್ ನಲ್ಲಿ ಕೂಡ ಒಂದು ತಿಂಗಳ ಕಂದಮ್ಮ ಬೆಕ್ಕಿನಿಂದ ಜೀವ ಕಳೆದುಕೊಂಡಿತ್ತು.

  • ತಾಯಿ ಸಮಾಧಿಯಾದ ಮೇಲೆ ಮಗು ಹೇಳಿತು ಸತ್ಯ – ಪೊಲೀಸರಿಂದ ಕೊಲೆ ಆರೋಪಿ ಅರೆಸ್ಟ್

    ತಾಯಿ ಸಮಾಧಿಯಾದ ಮೇಲೆ ಮಗು ಹೇಳಿತು ಸತ್ಯ – ಪೊಲೀಸರಿಂದ ಕೊಲೆ ಆರೋಪಿ ಅರೆಸ್ಟ್

    ಬೆಂಗಳೂರು: ಸಹಜ ಸಾವು ಎಂದು ತಿಳಿದು ಮಹಿಳೆಯ ಅಂತ್ಯಸಂಸ್ಕಾರ ಮಾಡಲಾಗಿದ್ದ ಪ್ರಕರಣಕ್ಕೆ ಆಕೆಯ ಮಗು ಹೇಳಿದ ಭಯಾನಕ ಸತ್ಯದಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವೆಂಕಟೇಶ್ (28) ಎಂಬಾತ 30 ವರ್ಷದ ಗೃಹಿಣಿ ಸುಮಲತಾಳನ್ನು ಆಕೆಯ ಮಗುವಿನ ಮುಂದೆಯೇ ಕೊಲೆ ಮಾಡಿದ್ದಾನೆ. ನಂತರ ಯಾರಿಗೂ ಹೇಳಬೇಡ ಎಂದು ಮಗುವಿಗೆ ಹೇಳಿ ಪರಾರಿಯಾಗಿದ್ದ. ಆದರೆ ಅಪ್ಪನ ಜೊತೆ ಮಗು ಹೇಳಿದ ಒಂದು ಸತ್ಯದಿಂದ ಆರೋಪಿ ವೆಂಕಟೇಶ್ ಪೊಲೀಸರ ಅತಿಥಿಯಾಗಿದ್ದಾನೆ.

    ಸುಮಲತಾ ಆರು ವರ್ಷದ ಹಿಂದೆ ಆನೇಕಲ್ ತಾಲೂಕಿನ ಚಿನ್ನಯ್ಯನ ಪಾಳ್ಯದ ದೇವರಾಜು ಎಂಬುವನೊಂದಿಗೆ ಮದುವೆಯಾಗಿ ಸಂಸಾರ ಮಾಡುತ್ತಿದ್ದಳು. ಈಕೆಗೆ 5 ವರ್ಷ, 3 ವರ್ಷದ ಎರಡು ಗಂಡು ಮಕ್ಕಳಿದ್ದು ಅಕ್ಟೋಬರ್ 16 ರಂದು ಬೆಳಿಗ್ಗೆ ಪತಿ ದೇವರಾಜುಗೆ ಕರೆ ಮಾಡಿ ಎದೆ ನೋವು ಅಂದಿದ್ದಾಳೆ. ಜೊತೆಗೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿದ್ದಾಳೆ. ಮತ್ತೆ ರಾತ್ರಿ ಗಂಡನೊಂದಿಗೆ ಫೋನ್‍ನಲ್ಲಿ ಮಾತನಾಡಿ ಮಲಗಿದ್ದು ಬೆಳಗ್ಗೆ ಅಕ್ಕಪಕ್ಕದ ಮನೆಯವರು ಮಕ್ಕಳು ಅಳುತ್ತಿರುವುದನ್ನು ಕಂಡು ಒಂದು ನೋಡಿದಾಗ ಸುಮಲತಾ ಮೃತಪಟ್ಟಿದ್ದಳು.

    ಇತ್ತ ಪತಿ ದೇವರಾಜುಗೆ ಗ್ರಾಮಸ್ಥರು ವಿಷಯ ತಿಳಿಸಿದ್ದು, ದೇವರಾಜು ನಿನ್ನೆ ಎದೆನೋವು ಅಂದಿದ್ದಳು ಎಂದಿದ್ದಾನೆ. ಗ್ರಾಮಸ್ಥರು ಹೃದಯಾಘಾತದಿಂದ ಸಾವನಪ್ಪಿದ್ದಾಳೆ ಎಂದು ತಿಳಿದು ಗ್ರಾಮಸ್ಥರೆಲ್ಲ ಸೇರಿ ಅಂತ್ಯಸಂಸ್ಕಾರ ನಡೆಸಿದ್ದಾರೆ. ಅಂತ್ಯಸಂಸ್ಕಾರ ನಡೆದ ರಾತ್ರಿ ಮಗುವನ್ನು ಸೀರೆ ಜೋಲಿಗೆ ಮಲಗಿಸಲು ಮುಂದಾದಾಗ ಜೋಲಿ ನೋಡಿ ಮಗು ಮಾಮ ಅಮ್ಮನಿಗೆ ಹೊಡೆದಿದ್ದಾರೆ ಎಂದು ಹೇಳಿದೆ. ತಕ್ಷಣ ಪತಿ ದೇವರಾಜು ಮತ್ತವರ ತಂದೆ ತಾಯಿ ಪಕ್ಕದ ಮನೆಯಲ್ಲಿ ವಾಸವಿದ್ದ ವೆಂಕಟೇಶ್ (28) ಎಂಬುವವನ ಮೇಲೆ ಆನೇಕಲ್ ಪೊಲೀಸರಿಗೆ ದೂರು ನೀಡಿದ್ದು ಕೊಲೆ ಪ್ರಕರಣ ದಾಖಲಿಸಿದ್ದಾರೆ.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವೆಂಕಟೇಶನನ್ನು ಬಂಧಿಸಿ ಹೂತಿದ್ದ ಶವ ಹೊರತೆಗೆದು ಮಹಜರ್ ನಡೆಸಿ ಶವ ಪರೀಕ್ಷೆ ನಡೆಸಿದ್ದಾರೆ. ಸುಮಲತಾ ದೇವರಾಜು ಮದುವೆ ಆದ ನಂತರ ಚಿಣ್ಣಯ್ಯನಪಾಳ್ಯದಲ್ಲಿ ವಾಸವಿದ್ದರು. ದೇವರಾಜು ವೃತ್ತಿಯಲ್ಲಿ ಚಾಲಕನಾಗಿದ್ದು, ಕೆಲಸದ ಮೇಲೆ ಹೊರ ಹೋದ್ರೆ ತಿರುಗಿ ಬರುತಿದ್ದದ್ದು ಮೂರ್ನಾಲ್ಕು ದಿನ ಅಥವಾ ವಾರಗಳೇ ಕಳೆಯುತಿತ್ತು. ಈ ವೇಳೆ ದೇವರಾಜನ ದೂರದ ಸಂಬಂಧಿ ಆನೇಕಲ್ ತಾಲೂಕಿನ ಚಿಕ್ಕಹಾಗಡೆ ಗ್ರಾಮದ ವೆಂಕಟೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ದೇವರಾಜು ಮನೆಯ ಪಕ್ಕದಲ್ಲೇ ವಾಸಕ್ಕೆ ಬಂದಿದ್ದ.

    ಇತ್ತ ವಾರಗಟ್ಟಲೆ ಮನೆಯಿಂದ ಹೊರಗಿರುತ್ತಿದ್ದ ದೇವರಾಜು ವೆಂಕಟೇಶನನ್ನು ನಂಬಿ ಮನೆ ಕಡೆ ಸ್ವಲ್ಪ ನೋಡುಕೊಳ್ಳುವಂತೆ ತಿಳಿಸಿದ್ದ. ಮೊದಲಿಗೆ ಸಭ್ಯನಂತೆ ಇದ್ದ ವೆಂಕಟೇಶ ಸುಮಲತಾಳನ್ನು ಬಲೆಗೆ ಹಾಕಿಕೊಂಡಿದ್ದ. ಇತ್ತ ಗಂಡ ಹೊರಗೆ ಹೆಚ್ಚು ಇರುತ್ತಿದ್ದರಿಂದ ವೆಂಕಟೇಶನ ಸಹವಾಸ ಸುಮಲತಾಳಿಗೆ ಹಿತವಾಗಿತ್ತು. ಇನ್ನು ಕಾಲ ಕಳೆದಂತೆ ಇವರ ಸಂಬಂಧ ಜಗಜ್ಜಾಹೀರಾಗಿ ರಾಜಿ ಪಂಚಾಯಿತಿ ನಡೆದು ವೆಂಕಟೇಶನನ್ನು ಊರು ಬಿಡಿಸಲಾಗಿತ್ತು. ನಂತರ ಸುಮಲತಾ ಕೂಡ ಹಿರಿಯರ ಮಾತಿಗೆ ಬೆಲೆಕೊಟ್ಟು ಗಂಡನೊಂದಿಗೆ ಅನ್ಯೋನ್ಯವಾಗಿದ್ದಳು.

    ವೆಂಕಟೇಶ್ ಮಾತ್ರ ದೇವರಾಜು ಕೆಲಸಕ್ಕೆ ಹೋಗುವುದನ್ನು ನೋಡಿಕೊಂಡು ಮನೆಗೆ ಬಂದು ಸುಮಲತಾಳಿಗೆ ಗಂಡನನ್ನು ಬಿಟ್ಟು ಬರುವಂತೆ ಹಿಂಸಿಸತೊಡಗಿದ. ಹೀಗೆ ಆಕ್ಟೋಬರ್ 16 ರಂದು ರಾತ್ರಿ ಸುಮಲತಾಳ ಮನೆಗೆ ಕಬಾಬ್ ತೆಗೆದುಕೊಂಡು ಬಂದು ತನ್ನೊಂದಿಗೆ ಬರುವಂತೆ ಪೀಡಿಸಿದ್ದ. ಸುಮಲತಾ ಒಪ್ಪದಕ್ಕೆ ಮಗು ಮಲಗಿಸುವ ಸೀರೆಯ ಜೋಳಿಯಿಂದ ಕುತ್ತಿಗೆ ಬಿಗಿದು ಸಾಯಿಸಿ ಮಗುವಿಗೆ ಯಾರಿಗೂ ಹೇಳದಂತೆ ತಿಳಿಸಿ ಹೋಗಿ ತಲೆ ಮರೆಸಿಕೊಂಡಿದ್ದ.

    ಕೊಲೆಗಾರ ಎಷ್ಟೇ ಬುದ್ಧಿವಂತನಾಗಿದರೂ ಸಣ್ಣದೊಂದು ಸುಳಿವು ಬಿಟ್ಟಿರುತ್ತಾನೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದ್ದು, ಐದು ವರ್ಷದ ಮಗು ತನ್ನ ತಾಯಿಯ ರಹಸ್ಯ ಬಯಲು ಮಾಡಿ ಕೊಲೆ ಆರೋಪಿಯ ಬಂಧನಕ್ಕೆ ಕಾರಣವಾಗಿದೆ. ಸಹಜ ಸಾವೆಂದು ಸುಮನಿದ್ದವರಿಗೆ ಮಗುವಿನ ಮೂಲಕ ಸತ್ಯ ತಿಳಿದು ಗ್ರಾಮಸ್ಥರಿಗೆ ಶಾಕ್ ಆಗಿದೆ.

  • ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    ಚಿಕಿತ್ಸೆ ಬಗ್ಗೆ ದೂರಿದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದ ವೈದ್ಯ

    – ಅಡ್ಡ ಬಂದ ನಾಯಿಮರಿ ಕತ್ತು ಹಿಸುಕಿದ
    – ಪೊಲೀಸರಿಂದ ದಂತ ವೈದ್ಯ ಅರೆಸ್ಟ್

    ಲಕ್ನೋ: ಮಗಳಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲವೆಂದು ತಾಯಿಯೊಬ್ಬರು ದೂರಿದ್ದಕ್ಕೆ ಸಿಟ್ಟಿಗೆದ್ದ ದಂತ ವೈದ್ಯನೋರ್ವ ಇಬ್ಬರನ್ನೂ ಕೊಲೆ ಮಾಡಲು ಯತ್ನಿಸಿ, ಅಡ್ಡ ಬಂದ ನಾಯಿ ಮರಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಘಾಜಿಯಾಬಾದ್‍ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಆರೋಪಿಯನ್ನು ದಂತ ವೈದ್ಯ ಯಾಮಿನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಈತ ವಿಜಯನಗರದಲ್ಲಿ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದಾನೆ. ಕಳೆದ 6 ತಿಂಗಳಿನಿಂದ ವೈದ್ಯನ ಮನೆ ಬಳಿ ಇದ್ದ ಮಹಿಳೆಯೊಬ್ಬರು ತನ್ನ ಮಗಳ ಹಲ್ಲು ನೋವಿಗೆ ಈತನ ಬಳಿಯೇ ಚಿಕಿತ್ಸೆ ಕೊಡಿಸುತ್ತಿದ್ದರು. 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಬಾಲಕಿಯ ಹಲ್ಲು ನೋವು ಮಾತ್ರ ಕಡಿಮೆಯಾಗಿರಲಿಲ್ಲ.

    ಆದ್ದರಿಂದ ತಾಯಿ ಸಿದ್ದಿಕಿ ಬಳಿ ಹೋಗಿ ಜಗಳವಾಡಿದ್ದರು. ನೀವು ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ ಎಂದು ದೂರಿದ್ದರು. ಇದರಿಂದ ಸಿಟ್ಟಿಗೆದ್ದ ವೈದ್ಯ ಶನಿವಾರ ಮಹಿಳೆ ಮನೆಗೆ ನುಗ್ಗಿ ಚಾಕುವಿನಿಂದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದನು. ಈ ವೇಳೆ ಅವರನ್ನು ರಕ್ಷಿಸಲು ಮನೆಯಲ್ಲಿ ಸಾಕಿದ್ದ ನಾಯಿ ಮರಿ ಮುಂದೆ ಬಂದು, ವೈದ್ಯನ ಕಾಲಿಗೆ ಕಚ್ಚಿತು. ಇದರಿಂದ ಮತ್ತಷ್ಟು ಕೋಪಗೊಂಡ ವೈದ್ಯ ನಾಯಿ ಮರಿಯ ಕತ್ತು ಹಿಸುಕಿ ಕೊಂದು ಹಾಕಿದನು.

    ಅಷ್ಟೇ ಅಲ್ಲದೆ ಮಹಿಳೆ ಹಾಗೂ ಆಕೆಯ ಮಗಳ ಜೊತೆ ವೈದ್ಯ ಅಸಭ್ಯವಾಗಿ ವರ್ತಿಸಿದ್ದನು, ಈ ವೇಳೆ ಮಹಿಳೆ ಕಿರುಚಾಡಿ ಅಲಾರಾಂ ಹೊಡೆದಾಗ ಅಕ್ಕಪಕ್ಕದ ಮನೆಯವರು ಬಂದು ಆರೋಪಿಯನ್ನು ಹಿಡಿದರು ಎಂದು ಪೊಲೀಸರು ತಿಳಿಸಿದರು.

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 354, 307 ಕಾಯ್ದೆ ಅಡಿ ಹಾಗೂ ಪ್ರಾಣಿ ಮೇಲೆ ವಿಕೃತಿ ಮೆರೆದಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶಿಸಿದ್ದಾರೆ.