Tag: mother

  • 12 ದಿನದ ಹೆಣ್ಣು ಮಗುವಿಗೆ ಬೆಂಕಿ ಹಚ್ಚಿ ಕೊಂದ ತಾಯಿ

    12 ದಿನದ ಹೆಣ್ಣು ಮಗುವಿಗೆ ಬೆಂಕಿ ಹಚ್ಚಿ ಕೊಂದ ತಾಯಿ

    ಕಾರವಾರ: ಹೆಣ್ಣು ಮಗು ಎಂದು ಪತಿ ತಾತ್ಸರಾ ಮಾಡಿದ್ದಕ್ಕೆ ತಾಯಿ ತನ್ನ ಕಂದಮ್ಮನನ್ನು ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರದಲ್ಲಿ ನಡೆದಿದೆ.

    ಯಶೋಧಾ ಗೋಪಾಲ ಮೊಗೇರ್ ಮಗುವನ್ನು ಸುಟ್ಟು ಕೊಲೆಗೈದ ಪಾಪಿ ತಾಯಿ. ಮೂರುವರೆ ವರ್ಷಗಳ ಹಿಂದೆ ಬೆಳ್ನಿಯ ಗೋಪಾಲ್ ಮೊಗೇರ್ ಎಂಬವರನ್ನು ವಿವಾಹವಾಗಿದ್ದ ಯಶೋಧ, ಹೆರಿಗೆಗಾಗಿ ತನ್ನ ತಾಯಿ ಮನೆಯಾದ ವೆಂಕಟಾಪುರಕ್ಕೆ ಹೋಗಿದ್ದರು. ಹೆರಿಗೆಯಾಗಿ 12 ದಿನಗಳು ಕಳೆದರೂ ತನ್ನ ಪತಿ ಮಗು ಹೆಣ್ಣೆಂಬ ಕಾರಣಕ್ಕೆ ನೋಡಲು ಬಂದಿಲ್ಲ ಎಂದು ಮಾನಸಿಕವಾಗಿ ನೊಂದು ಈ ಕೃತ್ಯ ಎಸೆಗಿದ್ದಾಳೆ.

    ಇದೇ ತಿಂಗಳ 9ರಂದು ಯಶೋದಾ ತನ್ನ ಮಗುವಿಗೆ ಬೆಂಕಿ ಹಚ್ಚಿದ್ದಳು. ಆದರೇ ತಕ್ಷಣದಲ್ಲಿ ಮನೆಯ ಸದಸ್ಯರು ಗಮನಿಸಿ ಸಾವು ಬದುಕಿನ ನಡುವೆ ಸುಟ್ಟು ಗಾಯಗೊಂಡ ಹಸುಳೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಗು ಮೃತಪಟ್ಟಿದೆ. ಮಗು ಮೃತಪಟ್ಟ ನಂತರ ಆಕೆಯ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಸಹೋದರನ ದೂರಿನನ್ವಯ ಭಟ್ಕಳ ಗ್ರಾಮಾಂತರ ಠಾಣೆ ಪೊಲೀಸರು ಮಾನಸಿಕವಾಗಿ ಕುಸಿದಿದ್ದ ತಾಯಿಯನ್ನು ಕಾರವಾರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ. ಇಂದು ಬೆಳಗ್ಗೆ ಯಶೋಧಾಳನ್ನು ಕಾರವಾರದ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.

  • 35ರ ಶಿಕ್ಷಕಿಯೊಂದಿಗೆ ಲವ್- ವಿರೋಧಿಸಿದ್ದಕ್ಕೆ ಹೆತ್ತ ತಾಯಿಯನ್ನೇ ರಾಡಿನಿಂದ ಹೊಡೆದು ಕೊಂದ ಮಗಳು!

    35ರ ಶಿಕ್ಷಕಿಯೊಂದಿಗೆ ಲವ್- ವಿರೋಧಿಸಿದ್ದಕ್ಕೆ ಹೆತ್ತ ತಾಯಿಯನ್ನೇ ರಾಡಿನಿಂದ ಹೊಡೆದು ಕೊಂದ ಮಗಳು!

    ಲಕ್ನೋ: 18 ವರ್ಷದ ಯುವತಿಯೊಬ್ಬಳು ಹೆತ್ತ ತಾಯಿಯನ್ನೇ ರಾಡ್‍ನಿಂದ ಹೊಡೆದು ಪರಾರಿಯಾದ ಘಟನೆ ಘಜಿಯಾಬಾದ್‍ನ ಕವಿನಗರದಲ್ಲಿ ಶುಕ್ರವಾರ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ತಾಯಿ ಭಾನುವಾರದಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ನಡೆದಿದ್ದೇನು?: ಯುವತಿ 35 ವರ್ಷದ ಶಿಕ್ಷಕಿ ಜೊತೆ ಪ್ರೇಮ ಸಂಬಂಧ ಹೊಂದಿದ್ದು, ಇದಕ್ಕೆ ತನ್ನ ಪ್ರೀತಿಗೆ ಅಡ್ಡಿಪಡಿಸಿದ ಕಾರಣಕ್ಕೆ ಮನೆಯಲ್ಲಿದ್ದ ಕಬ್ಬಿಣದ ರಾಡಿನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದು, ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಆಗ ತಾನೆ ಶಾಲೆಯಿಂದ ಬಂದ ಕಿರಿಯ ಮಗಳು ರಕ್ತದ ಮಡುವಿನಲ್ಲಿ ಬಿದಿದ್ದ ತಾಯಿಯನ್ನ ಕಂಡು ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಧಾವಿಸಿದ ಪತಿ ತನ್ನ ಹೆಂಡತಿಯನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಅಲ್ಲಿಂದ ದೆಹಲಿಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ತೀವ್ರವಾದ ಗಾಯಗಳಿಂದ ತಾಯಿ ಮೃತಪಟ್ಟಿದ್ದಾರೆ.

    ಘಟನೆಯ ಸಂಬಂಧ ಪೊಲೀಸರಿಗೆ ದೂರು ನೀಡಿದ ತಂದೆ, ತನ್ನ ಮಗಳು ಶಾಲೆಯ ಶಿಕ್ಷಕಿಯ ಜೊತೆ ಪ್ರೇಮ ಸಂಬಂಧವನ್ನ ಹೊಂದಿದ್ದಳು. ಮನೆಯಲ್ಲಿ ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಎರಡು ತಿಂಗಳ ಹಿಂದೆಯಷ್ಟೆ ಆಕೆ ಶಿಕ್ಷಕಿಯ ಜೊತೆ ಓಡಿ ಹೋಗಿದ್ದಳು. ಆಗ ಪೊಲೀಸರ ನೆರವಿನಿಂದ ಅವಳನ್ನ ಹುಡುಕಿ ಮನೆಗೆ ಕರೆತರಲಾಯಿತು. ಗಂಡನನ್ನು ಬಿಟ್ಟ 35 ವರ್ಷದ ಶಾಲಾ ಶಿಕ್ಷಕಿಯ ಜೊತೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಮಗಳು, ಈಗ ತಾಯಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾಳೆ ಎಂದು ಹೇಳಿದ್ದಾರೆ.

    ಮಗಳು ಶಿಕ್ಷಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿರುವುದು ತಿಳಿದ ಬಳಿಕ ಆಕೆಯನ್ನ 11ನೇ ತರಗತಿಯಿಂದ ಬಿಡಿಸಲಾಗಿತ್ತು. ಅದೇ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದಳು ಎಂದು ತಂದೆ ಹೇಳಿದ್ದಾರೆ. ಈಗ ಮಗಳು ಪರಾರಿಯಾಗಿದ್ದು ಶಿಕ್ಷಕಿಯ ಬಳಿಗೇ ಹೋಗಿರಬಹುದು ಎಂದು ತಂದೆ ಶಂಕಿಸಿದ್ದಾರೆ.

    ಶಿಕ್ಷಕಿ, ಯುವತಿಯ ವಿರುದ್ಧ ಎಫ್‍ಐಆರ್: ತಾಯಿಯ ಮೇಲೆ ಹಲ್ಲೆ ನಡೆಸಿರುವ ಯುವತಿ ಮತ್ತು ಶಿಕ್ಷಕಿಯ ವಿರುದ್ಧ ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

    ಘಜಿಯಾಬಾದ್‍ನಲ್ಲಿ ನೆಲೆಸಿರುವ ಕುಟುಂಬ ಇಬ್ಬರು ಹೆಣ್ಣು ಮಕ್ಕಳನ್ನ ಹೊಂದಿದ್ದಾರೆ. ತಂದೆ ಟ್ರಾವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಮನೆಯಲ್ಲಿರುತ್ತಿದ್ದರು. ಮಗಳ ಮತ್ತು ಶಾಲಾ ಶಿಕ್ಷಕಿಯ ವಿವರವನ್ನ ಭಾನುವಾರದಂದು ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಮಗ ಲವರ್ ಜೊತೆ ಪರಾರಿ-ಪುತ್ರನ ಪ್ರೇಮ ಪ್ರಣಯಕ್ಕೆ ಆಸ್ಪತ್ರೆ ಸೇರಿದ್ರು ಪೇರೆಂಟ್ಸ್

    ಮಗ ಲವರ್ ಜೊತೆ ಪರಾರಿ-ಪುತ್ರನ ಪ್ರೇಮ ಪ್ರಣಯಕ್ಕೆ ಆಸ್ಪತ್ರೆ ಸೇರಿದ್ರು ಪೇರೆಂಟ್ಸ್

    ಶಿವಮೊಗ್ಗ: ಪ್ರೀತಿ ಮಾಡಿ ಯುವತಿಯೊಂದಿಗೆ ನಾಪತ್ತೆಯಾದ ಯುವಕನ ತಂದೆ-ತಾಯಿ ಪೊಲೀಸರ ಟಾರ್ಚರ್ ತಾಳಲಾಗದೆ ವಿಷ ಸೇವಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಅರಬಿಳಚಿ-ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಈ ಗ್ರಾಮದ ದಶರಥ ಎಂಬ ಯುವಕ ಅಡಕೆ ಬೇಯಿಸುವ ಕೆಲಸಕ್ಕೆ ಹೋಗುತ್ತಿದ್ದ. ಇದೇ ಜಾಗಕ್ಕೆ ಅಡಕೆ ಸುಲಿಯಲು ಬರುತ್ತಿದ್ದ ಸಿಂಧೂ ಎಂಬಾಕೆಯೊಂದಿಗೆ ಸ್ನೇಹ ಬೆಳೆಸಿ ನಂತರ ಅದು ಪ್ರೀತಿಗೆ ತಿರುಗಿದೆ. ಈ ಜೋಡಿ ಹದಿನೈದು ದಿನದ ಹಿಂದೆ ಊರು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಹುಡುಗಿ ಮನೆಯವರು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು.

    ಹೊಳೆಹೊನ್ನೂರು ಠಾಣೆ ಪೊಲೀಸರು ಹುಡುಗ ದಶರಥನ ಅಪ್ಪ ಕುಮಾರಪ್ಪ ಹಾಗೂ ಅಮ್ಮ ನೀಲಾವತಿ ಅವರನ್ನು ಠಾಣೆಗೆ ಕರೆಸಿ ಹೊಡೆದಿದ್ದಾರೆ ಅಂತಾ ಹೇಳಲಾಗಿದೆ. ಅಲ್ಲದೇ ಮೂರು ದಿನದ ಒಳಗಾಗಿ ನಿಮ್ಮ ಮಗನನ್ನು ಕರೆದು ತನ್ನಿ ಎಂದು ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದಾರೆ. ಇತ್ತ ಮನೆಯ ಬಳಿಯೂ ಹುಡುಗಿ ಕಡೆಯವರು ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಇದರಿಂದ ಬೇಸರಗೊಂಡ ಯುವಕನ ತಂದೆ-ತಾಯಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ತೀವ್ರವಾಗಿ ಅಸ್ವಸ್ಥಗೊಂಡಿರುವ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

  • ಮಗಳ ಹೆಸ್ರಲ್ಲಿ 50 ಕೋಟಿ ರೂ. ಆಸ್ತಿ ಇದೆ: ಮದ್ವೆಯಾಗಿದ್ದನ್ನು ನೋಡಿ ಕಣ್ಣೀರಿಟ್ಟ ಲಕ್ಷ್ಮೀ ತಾಯಿ

    ಮಗಳ ಹೆಸ್ರಲ್ಲಿ 50 ಕೋಟಿ ರೂ. ಆಸ್ತಿ ಇದೆ: ಮದ್ವೆಯಾಗಿದ್ದನ್ನು ನೋಡಿ ಕಣ್ಣೀರಿಟ್ಟ ಲಕ್ಷ್ಮೀ ತಾಯಿ

    ಬೆಂಗಳೂರು: ವಯಸ್ಸಿನ ಅಂತರವಿದೆ ಎನ್ನುವ ಕಾರಣಕ್ಕೆ ಲಕ್ಷ್ಮೀ ನಾಯ್ಕ್ ಪೋಷಕರು ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಜೊತೆ ಮದುವೆ ಆಗಲು ನಿರಾಕರಿಸಿದ್ದರು ಎನ್ನುವ ವಿಚಾರ ಈಗ ತಿಳಿದು ಬಂದಿದೆ.

    ಇಬ್ಬರ ನಡುವೆಯೂ 13 ವರ್ಷ ಅಂತರವಿದೆ ಎನ್ನುವ ಕಾರಣಕ್ಕೆ ಈ ಮದುವೆ ಬೇಡ, ನಿನಗೆ ಬೇರೆ ಹುಡುಗನ ಜೊತೆ ಮದುವೆ ಮಾಡಿಸುತ್ತೇವೆ ಎಂದು ಹೇಳಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಸುಂದರ್ ಪರಿಚಯ ಆಗಿದ್ದು ಹೇಗೆ?
    ಲಕ್ಷ್ಮೀ ನಾಯ್ಕ್ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್ ಓದುತ್ತಿದ್ದು, 7-8 ತಿಂಗಳ ಹಿಂದೆ ತನ್ನ ಓದುತ್ತಿದ್ದ ಕಾಲೇಜಿನಲ್ಲೇ ಸುಂದರ್ ಗೌಡ ಪರಿಚಯವಾಗಿತ್ತು. ಇವೆಂಟ್ ಮ್ಯಾನೇಜರ್ ಆಗಿರೋ ಸುಂದರ್ ಗೌಡ ಸಹೋದರಿಯ ಪತಿಯ ಮೂಲಕ ಪರಿಚಯಗೊಂಡು ನಂತರ ಮದುವೆಯ ಹಂತಕ್ಕೆ ತಲುಪಿತ್ತು.

    ತಂದೆ ಶಾಸಕ, ತಾಯಿ ಡಾ.ಗೀತಾ ಚೀಫ್ ಮೆಡಿಕಲ್ ಆಫೀಸರ್ ಆಗಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಕ್ಕೆ ತಕ್ಕ ಹಾಗೆ ಐಪಿಎಸ್, ಐಎಎಸ್ ಗ್ರೇಡ್ ಅಧಿಕಾರಿಯನ್ನು ಹುಡುಕುತ್ತಿದ್ದರು. ಶಿವಮೂರ್ತಿ ನಾಯ್ಕ್ ತನ್ನ ಮಗಳು ಲಕ್ಷ್ಮೀಗೆ ಐಪಿಎಸ್ ಅಧಿಕಾರಿಯನ್ನು ಹುಡುಕಿ ಮದುವೆಯಾಗಲು ಹೇಳಿದ್ದರು. ಆದರೆ ಲಕ್ಷ್ಮೀ ನಾಯ್ಕ್ ಐಪಿಎಸ್ ಅಧಿಕಾರಿಯನ್ನು ಮದುವೆಯಾಗಲು ತಿರಸ್ಕರಿಸಿದ್ದರು.

    ಲಕ್ಷ್ಮಿ ನಾಯ್ಕ್ ಹೆಸರಲ್ಲಿರುವ ಸುಮಾರು 50 ಕೋಟಿ ಆಸ್ತಿ ಹಾಗೂ 5-6 ಶಾಲೆಗಳಿವೆ. ಸುಂದರ್ ಗೌಡ ಜತೆಗಿನ ಪ್ರೀತಿ ವಿಷಯ ಇತ್ತೀಚೆಗಷ್ಟೆ ಲಕ್ಷ್ಮಿ ಕುಟುಂಬಕ್ಕೆ ಗೊತ್ತಾಗಿತ್ತು.

    ನನ್ನ ಮಗಳನ್ನು ಸುಂದರ್ ಗೌಡ ಹೇಗೆ ನೋಡಿಕೊಳ್ತಾನೆ? ಅವನಿಗೆ 36 ವರ್ಷ, ನನ್ನ ಮಗಳಿಗೆ ಇನ್ನೂ 23 ವರ್ಷ. ನನ್ನ ಮಗಳ ಹೆಸರಲ್ಲಿ 50 ಕೋಟಿ ರೂಪಾಯಿ ಆಸ್ತಿ ಪಾಸ್ತಿ ಇದೆ. ಸುಂದರ್ ಗೌಡ ಮಾಸ್ತಿಗುಡಿ ಕೇಸ್‍ನಲ್ಲಿ ಜೈಲಿಗೆ ಹೋಗಿ ಬಂದವನು. ಇವನು ಹೇಗೆ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಲಕ್ಷ್ಮಿ ತಾಯಿ ಡಾ. ಗೀತಾ ತಮ್ಮ ಆಪ್ತರ ಬಳಿ ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟಿದ್ದಾರೆ.

  • ಮಧ್ಯರಾತ್ರಿ ಅಮ್ಮನಿಗಾಗಿ ಕೂಗಿ ಬಾಲಕ ನಿಗೂಢ ಸಾವು

    ಮಧ್ಯರಾತ್ರಿ ಅಮ್ಮನಿಗಾಗಿ ಕೂಗಿ ಬಾಲಕ ನಿಗೂಢ ಸಾವು

    ಮುಂಬೈ: ಬಾಲಕನೊಬ್ಬ ಮಧ್ಯರಾತ್ರಿ ವೇಳೆ ತನ್ನ ತಾಯಿಗಾಗಿ ಕೂಗಿ ನುಗೂಢವಾಗಿ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಇಲ್ಲಿನ ವೊರ್ಲಿಯ ಆದರ್ಶ್ ನಗರ್ ನಿವಾಸಿಯಾದ ಋತ್ವಿಕ್ ಘಾದ್ಶಿ ಮೃತ ಬಾಲಕ. ಈತ ದಾದರ್‍ನ ಶಿಶುವಿಹಾರ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಗುರುವಾರದಂದು ಆರಂಭವಾಗಬೇಕಿದ್ದ 10ನೇ ತರಗತಿ ಪರೀಕ್ಷೆಗಾಗಿ ಋತ್ವಿಕ್ ಸಿದ್ಧತೆ ನಡೆಸಿದ್ದ. ಬುಧವಾರ ರಾತ್ರಿ 11.30 ವೇಳೆಗೆ ಮಲಗುವಾಗ ಬೆಳಗ್ಗೆ 5 ಗಂಟೆಗೆ ಎದ್ದೇಳಿಸುವಂತೆ ತಾಯಿಗೆ ಹೇಳಿದ್ದ. ಆದ್ರೆ ಮಧ್ಯರಾತ್ರಿ ಸುಮಾರು 1.15ರ ಹೊತ್ತಿಗೆ ಅಮ್ಮನಿಗಾಗಿ ಕೂಗಿ ಬಳಿಕ ಸಾವನ್ನಪ್ಪಿದ್ದಾನೆ.

    ಋತ್ವಿಕ್ ಒಳ್ಳೇ ವಿದ್ಯಾರ್ಥಿಯಾಗಿದ್ದ. ಆತನಿಗೆ ಪರೀಕ್ಷೆಯ ಭಯ ಇರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಬುಧವಾರದಂದು ತನ್ನ ಸ್ನೇಹಿತರ ಜೊತೆ ಖುಷಿಯಿಂದ ಹೋಳಿ ಆಡಿದ್ದ. ಋತ್ವಿಕ್ ಹಾಗೂ ಇಬ್ಬರು ಸಹೋದರಿಯರನ್ನ ತಾಯಿ ಒಬ್ಬರೇ ಮನೆಗೆಲಸ ಮಾಡಿ ಸಾಕುತ್ತಿದ್ದರು ಎಂದು ವರದಿಯಾಗಿದೆ.

    ಮಧ್ಯರಾತ್ರಿ 1.15ರ ವೇಳೆಗೆ ತಾಯಿಗಾಗಿ ಕಿರುಚಿ, ಆತನಿಗೆ ಸ್ಥಳದಲ್ಲೇ ಮಲ ಮೂತ್ರ ವಿಸರ್ಜನೆಯಾಯಿತು. ಕೆಲವೇ ನಿಮಿಷಗಳಲ್ಲಿ ಪ್ರಜ್ಞೆ ತಪ್ಪಿದ ಎಂದು ಕಾಲೇಜು ವಿದ್ಯಾರ್ಥಿನಿಯಾದ ಋತ್ವಿಕ್ ಸಹೋದರಿ ಮನಾಲಿ ಹೇಳಿದ್ದಾರೆ. ಋತ್ವಿಕ್‍ನ ಮತ್ತೊಬ್ಬ ಸಹೋದರಿ ನರ್ಸ್ ತರಬೇತಿ ಪಡೆಯುತ್ತಿದ್ದು, ಕೆಲಸಕ್ಕಾಗಿ ಹೋಗಿದ್ದರು. ಘಟನೆ ನಡೆದಾಗ ಮನಾಲಿ ಕೂಡಲೇ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದು, ಅವರು ಋತ್ವಿಕ್‍ನಲ್ಲಿ ಕೆಇಎಮ್ ಆಸ್ಪತ್ರೆಗೆ ರವಾನಿಸಿದ್ದರು ಎಂದು ವರದಿಯಾಗಿದೆ.

    ಆಸ್ಪತ್ರೆಯ ಡೀನ್ ಡಾ. ಅವಿನಾಶ್ ಸುಪೇ ಈ ಬಗ್ಗೆ ಪ್ರತಿಕ್ರಿಯಿಸಿ, ಬಾಲಕನನ್ನು ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಸಾವನ್ನಪ್ಪಿದ್ದ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ಅನಿಶ್ಚಿತವಾಗಿದ್ದು, ಹೆಚ್ಚಿನ ತನಿಖೆಗಾಗಿ ಶ್ವಾಸಕೋಶ ಹಾಗೂ ಅಂಗಾಂಶಗಳನ್ನು ಕಲೀನಾದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.

    ಋತ್ವಿಕ್ ಒಂದು ತಿಂಗಳ ಹಿಂದೆ ಜಾಂಡೀಸ್‍ನಿಂದ ಬಳಲುತ್ತಿದ್ದ. ಎರಡು ವಾರಗಳ ಹಿಂದಷ್ಟೇ ಆತನ ಚಿಕಿತ್ಸೆ ಮುಗಿದಿತ್ತು ಎಂದು ಮನಾಲಿ ತಿಳಿಸಿದ್ದಾರೆ.

  • ನಾಲ್ಕು ವರ್ಷಗಳಿಂದ 3 ಮಕ್ಕಳನ್ನ ಪ್ಲೈವುಡ್ ಬಾಕ್ಸ್ ನಲ್ಲಿ ವಾಸಿಸುವಂತೆ ಮಾಡಿದ ತಂದೆ ತಾಯಿ!

    ನಾಲ್ಕು ವರ್ಷಗಳಿಂದ 3 ಮಕ್ಕಳನ್ನ ಪ್ಲೈವುಡ್ ಬಾಕ್ಸ್ ನಲ್ಲಿ ವಾಸಿಸುವಂತೆ ಮಾಡಿದ ತಂದೆ ತಾಯಿ!

    ಕ್ಯಾಲಿಫೋರ್ನಿಯಾ: ಹೆತ್ತ ತಂದೆ-ತಾಯಿಯೇ ತಮ್ಮ ಮೂರು ಮಕ್ಕಳನ್ನು ಪ್ಲೈವುಡ್ ಬಾಕ್ಸ್ ನಲ್ಲಿ ನಾಲ್ಕು ವರ್ಷಗಳ ಕಾಲ ಇರಿಸಿದ್ದ ಅಮಾನವೀಯ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

    ಮೋನಾ ಕಿರ್ಕ್(51) ಮತ್ತು ಡೇನಿಯಲ್ ಪಾನಿಕೋ(73) ದಂಪತಿ ತಮ್ಮ ಮೂರು ಮಕ್ಕಳನ್ನು ಬಯಲಿನಲ್ಲಿ 20 ಅಡಿ, 4 ಇಂಚು ಎತ್ತರ ಮತ್ತು 10 ಅಡಿ ಅಗಲವಿರುವ ಪ್ಲೈವುಡ್ ಬಾಕ್ಸ್ ನಲ್ಲಿ ಇರಿಸಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಅದೇ ಬಾಕ್ಸ್ ನಲ್ಲಿ ಜೀವನ ಸಾಗಿಸಿರುವ ಈ ಮಕ್ಕಳು, ಬೆಕ್ಕುಗಳು, ಇಲಿಗಳು ರಂಧ್ರ ತೋಡಿರುವ ಬಿಲಗಳು ಮತ್ತು ಕಸದ ರಾಶಿಯ ನಡುವೆ ಬದುಕಿದ್ದರು.

    11, 13 ಮತ್ತು 14 ವರ್ಷ ವಯಸ್ಸಿನ ಮಕ್ಕಳನ್ನು ಇಂತಹ ಸ್ಥಿತಿಯಲ್ಲಿ ಕಂಡ ಸ್ಥಳೀಯ ಪೊಲೀಸರು ಅವರನ್ನು ರಕ್ಷಿಸಿದ್ದಾರೆ. ಮಕ್ಕಳನ್ನ ಈ ರೀತಿ ಅಮಾನವೀಯವಾಗಿ ಬಾಕ್ಸ್ ನಲ್ಲಿ ಇರಿಸಿದ್ದ ತಂದೆ-ತಾಯಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

    ಮಕ್ಕಳ ಜೊತೆ ಸುಮಾರು 30-40 ಬೆಕ್ಕುಗಳು ಕಾಣಿಸಿದ್ದು, ಬೆಕ್ಕುಗಳ ಮತ್ತು ಮನುಷ್ಯರ ಮಲ-ಮೂತ್ರದಿಂದ ತುಂಬಿಹೋಗಿತ್ತು. ಇದರಿಂದ ಮಕ್ಕಳು ಅನಾರೋಗ್ಯದಿಂದ ಬಳಲಿ ಹೋಗಿದ್ದು, ಮಕ್ಕಳ ಮತ್ತು ಕುಟುಂಬ ಸೇವೆಯ ಅಧಿಕಾರಿಗಳು ಮಕ್ಕಳನ್ನ ವಶಕ್ಕೆ ಪಡೆದಿದ್ದಾರೆ.

    ಪೊಲೀಸರು ಸಂಗ್ರಹಿಸಿರುವ ವಿಡಿಯೋ ಮತ್ತು ಫೋಟೋಗಳ ಪಕ್ರಾರ, ಮಕ್ಕಳು ವಾಸಿಸುತ್ತಿದ್ದ ಮನೆಯ ಸುತ್ತ-ಮುತ್ತ ಕಸದ ರಾಶಿ, ಪ್ಲಾಸ್ಟಿಕ್ ಬ್ಯಾಗ್‍ಗಳು, ಮಕ್ಕಳ ಆಟಿಕೆ ಸಾಮಾಗ್ರಿಗಳು, ಹಾಸಿಗೆ ಮತ್ತು ಟೈಯರ್ ಗಳಿಂದ ತುಂಬ ಹೋಗಿದ್ದವು. ಇಂತಹ ಕೊಳಕು ಪ್ರದೇಶದಲ್ಲಿ ವಾಸಿಸುತಿದ್ದ ಮಕ್ಕಳು, ತಿನ್ನಲು ಆಹಾರವಿಲ್ಲದೆ ಬಳಲುತ್ತಿದರು. ಇಲ್ಲಿ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಕೂಡ ಇಲ್ಲದೆ ನಾಲ್ಕು ವರ್ಷಗಳ ಕಾಲ ಅಲ್ಲಿ ಬದುಕಿದ್ದರು ಎಂದು ವರದಿಯಾಗಿದೆ.

  • 30 ವರ್ಷಗಳಿಂದ ತಾಯಿಯ ಮೃತದೇಹದ ಜೊತೆ ವಾಸಿಸುತ್ತಿದ್ದ ಮಹಿಳೆ

    30 ವರ್ಷಗಳಿಂದ ತಾಯಿಯ ಮೃತದೇಹದ ಜೊತೆ ವಾಸಿಸುತ್ತಿದ್ದ ಮಹಿಳೆ

    ಕೀವ್: ಮೃತದೇಹವನ್ನ ಮನೆಯ ಮುಂದೆ ಅಥವಾ ಮನೆಯ ಒಳಗೆಯೇ ಸಮಾಧಿ ಮಾಡಿರೋ ಸಾಕಷ್ಟು ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬರು ಮಹಿಳೆ ತನ್ನ ತಾಯಿಯ ಮೃತದೇಹವನ್ನ ಮಣ್ಣು ಮಾಡದೆ ಮನೆಯಲ್ಲೇ ಇಟ್ಟುಕೊಂಡು ಅದರೊಂದಿಗೆ ಸುಮಾರು 30 ವರ್ಷಗಳಿಂದ ವಾಸಿಸುತ್ತಿದ್ದರು ಅಂದರೆ ನೀವು ನಂಬಲೇಬೇಕು.

    ಉಕ್ರೇನ್ ನ 77 ವರ್ಷದ ಮಹಿಳೆ ತನ್ನ ತಾಯಿಯ ಮೃತದೇಹವನ್ನ ಕನಿಷ್ಟವಾದ್ರೂ 30 ವರ್ಷಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿನ ಮೈಕೋಲೇವ್ ನಗರದಲ್ಲಿ ಈ ಮಹಿಳೆ ವಾಸವಿದ್ದು, ನೆರೆಮನೆಯವರೊಬ್ಬರು ಫೋನ್ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಆ ವಿಳಾಸಕ್ಕೆ ಹೋಗಿ ನೋಡಿದಾಗ ಮಹಿಳೆಯ ಮನೆಯ ತುಂಬಾ ಕಸ ಹಾಗೂ ದಿನಪತ್ರಿಕೆಗಳ ರಾಶಿ ಬಿದ್ದಿತ್ತು. ಮೃತದೇಹವನ್ನ ಸೋಫಾ ಮೇಲೆ ಮಲಗಿಸಲಾಗಿತ್ತು. ಮೃತದೇಹ ಸಂರಕ್ಷಿತ ಸ್ಥತಿಯಲ್ಲಿತ್ತು. ದೇಹದ ಮೇಲೆ ಬಿಳಿ ಬಣ್ಣದ ವಸ್ತ್ರವಿದ್ದು, ಕಾಲುಗಳಿಗೆ ಹಸಿರು ಬಣ್ಣದ ಸಾಕ್ಸ್ ಮತ್ತು ನೀಲಿ ಬಣ್ಣದ ಶೂ ಹಾಕಲಾಗಿತ್ತು.

    ಮೃತರ ಮಗಳು ಈಗ ವೃದ್ಧೆಯಾಗಿದ್ದು, ಜೀವಂತವಾಗಿದ್ದರು. ಆದ್ರೆ ಅವರ ಎರಡೂ ಕಾಲುಗಳು ಪಾಶ್ರ್ವವಾಯುವಿಗೆ ಈಡಾಗಿದ್ದವು. ಮಹಿಳೆ ನೆಲದ ಮೇಲೆ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮನೆಯಲ್ಲಿ ನೀರು, ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯೂ ಇರಲಿಲ್ಲ.

    77 ವರ್ಷದ ಮಹಿಳೆಯನ್ನು ರಕ್ಷಣೆ ಮಾಡುವ ಸಲುವಾಗಿ ಫ್ಲ್ಯಾಟ್ ಒಳಗೆ ಪ್ರವೇಶಿಸಲು ಅಧಿಕಾರಿಗಳು ರಕ್ಷಣಾ ಸಿಬ್ಬಂದಿಯನ್ನ ಕರೆಸಿದರು. ಒಂದು ರೂಮಿನಲ್ಲಿ ಮಹಿಳೆ ಕಸದ ರಾಶಿಯ ನಡುವೆ ನೆಲದ ಮೇಲೆ ಕುಳಿತ ಸ್ಥಿತಿಯಲಿದ್ದರು. ಅವರು ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರಿಂದ ತುರ್ತು ಸಹಾಯ ಬೇಕಾಗಿತ್ತು. ಹೀಗಾಗಿ ಅವರಿಗಾಗಿ ಆಂಬುಲೆನ್ಸ್ ಕರೆಸಲಾಯಿತು. ಬೇರೆ ರೂಮ್‍ಗಳನ್ನ ಪರಿಶೀಲಿಸಿಸಾಗ ಮತ್ತೊಬ್ಬ ಮಹಿಳೆಯ ಮೃದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮಹಿಳೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನೆರೆಹೊರೆಯವರೊಂದಿಗೆ ಮಾತನಾಡುತ್ತಿರಲಿಲ್ಲ. ಅವರ ಮನೆಯ ಮುಂಬಾಗಿಲನ್ನ ತೆರೆದೇ ಇರಲಿಲ್ಲ. ಆದರೂ ನೆರೆಹೊರೆಯವರು ಅವರ ಆರೈಕೆ ಮಾಡುತ್ತಿದ್ದರು. ಮಹಿಳೆಗಾಗಿ ಮನೆ ಮುಂದೆ ಊಟ ಇಟ್ಟು ಹೋಗುತ್ತಿದ್ದರು. ಮಹಿಳೆ ತನ್ನ ತಾಯಿಯ ಮೃತದೇಹದೊಂದಿಗೆ ವಾಸಿಸುತ್ತಿದ್ದಾರೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಮೃತದೇಹವನ್ನ ಅಲ್ಲಿಂದ ತೆರವುಗಳಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳಸಲಾಗಿದೆ. ಮಹಿಳೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  • ತಮ್ಮಿಬ್ಬರನ್ನ ಕೊಲ್ಲಲು ಬಯಸಿದ್ದ ಮಗನನ್ನ ಅರೆಸ್ಟ್ ಮಾಡಿಸಲು ಸತ್ತವರಂತೆ ನಾಟಕವಾಡಿದ ಶ್ರೀಮಂತ ತಂದೆ ತಾಯಿ

    ತಮ್ಮಿಬ್ಬರನ್ನ ಕೊಲ್ಲಲು ಬಯಸಿದ್ದ ಮಗನನ್ನ ಅರೆಸ್ಟ್ ಮಾಡಿಸಲು ಸತ್ತವರಂತೆ ನಾಟಕವಾಡಿದ ಶ್ರೀಮಂತ ತಂದೆ ತಾಯಿ

    ಮಾಸ್ಕೋ: ತನ್ನ ತಂದೆ ತಾಯಿ ಹಾಗೂ 10 ವರ್ಷದ ತಂಗಿಯನ್ನೇ ಕೊಲ್ಲಲು ಸಂಚು ರೂಪಿಸಿದ್ದ 22 ವರ್ಷದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಆಸ್ತಿಯೆಲ್ಲಾ ತಾನೊಬ್ಬನೇ ಅನುಭವಿಸಬೇಕು ಎಂಬ ಆಸೆಯಿಂದ ರಷ್ಯಾದ ಯುವಕ ತನ್ನ ಇಡೀ ಕುಟುಂಬವನ್ನ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ. ಇಲ್ಲಿನ ಪೊಲೀಸರ ವರದಿಯ ಪ್ರಕಾರ ಆರೋಪಿಯ ತಂದೆ-ತಾಯಿ ಅತ್ಯಂತ ಶ್ರೀಮಂತರಾಗಿದ್ದು, ಅವರು ಸತ್ತ ನಂತರ ಆಸ್ತಿಯೆಲ್ಲಾ ತನ್ನದಾಗುತ್ತದೆ ಎಂದು ಉದ್ದೇಶಿಸಿದ್ದ.

    ಆದ್ರೆ ಡಿಟೆಕ್ಟೀವ್ ಗಳ ಮೂಲಕ ತಂದೆ ತಾಯಿಗೆ ಈ ವಿಷಯ ಗೊತ್ತಾಗಿತ್ತು. ಹೀಗಾಗಿ ಅವರು ಸಾಯುವ ನಾಟಕವಾಡಲು ನಿರ್ಧಾರ ಮಾಡಿದ್ದರು. ಪೊಲೀಸ್ ಅಧಿಕಾರಿಯೊಬ್ಬರು ಸುಪಾರಿ ಹಂತಕನಂತೆ ವೇಷ ತೊಟ್ಟರು. ಆರೋಪಿ ಮಗ ತನ್ನ ಕುಟುಂಬಸ್ಥರನ್ನ ಎಲ್ಲಿ, ಹೇಗೆ ಕೊಲೆ ಮಾಡಬೇಕೆಂದು ಸುಪಾರಿ ಹಂತಕನಿಗೆ ಸೂಚನೆಗಳನ್ನ ನೀಡಿದ್ದ. ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳಿವೆ? ನಾಯಿಗಳಿಂದ ತಪ್ಪಿಸಿಕೊಳ್ಳೋದು ಹೇಗೆ ಎಂಬುದನ್ನೆಲ್ಲಾ ಹೇಳಿಕೊಟ್ಟಿದ್ದ. ತನ್ನ ಮೂವರು ಕುಟುಂಬಸ್ಥರನ್ನ ಕೊಲ್ಲುವುದಕ್ಕೆ ಹಣ ಕೊಡಲು ಒಪ್ಪಿಕೊಂಡಿದ್ದ ಆರೋಪಿ, ಕೊಲೆಯಾದ ತಂದೆ ತಾಯಿಯ ಫೋಟೋ ನೋಡಬೇಕೆಂದು ಕೇಳಿದ್ದ.

    ರಷ್ಯಾದ ಸೋಚಿಯಲ್ಲಿರುವ ಮನೆಯಲ್ಲಿ ಡಿಟೆಕ್ಟೀವ್‍ಗಳು ಕೊಲೆಯ ನಾಟಕ ಮಾಡಿಸಿದ್ರು. ತಂದೆ ತಾಯಿ ಸತ್ತವರಂತೆ ನಾಟಕವಾಡಿದ್ರು. ಮೈಮೇಲೆ ಕೃತಕವಾದ ರಕ್ತ ಚೆಲ್ಲಿಕೊಂಡು ನೆಲದ ಮೇಲೆ ಬಿದ್ದು ಸತ್ತು ಹೋಗಿರುವವರಂತೆ ನಟಿಸಿದ್ದರು. ಇದರ ಫೋಟೋಗಳನ್ನ ಕ್ಲಿಕ್ಕಿಸಲಾಗಿತ್ತು. ಫೋಟೋಗಳಲ್ಲಿ ನೋಡಿದಾಗ ಅವರ ನಾಟಕ ಎಷ್ಟು ನೈಜವಾಗಿತ್ತೆಂದರೆ ಆರೋಪಿ ಮಗ ಅದನ್ನ ನೋಡಿ ತನ್ನ ಪೋಷಕರು ಸತ್ತಿದ್ದಾರೆ ಎಂದೇ ತಿಳಿದಿದ್ದ. ಆದ್ರೆ ಆರೋಪಿಯ ತಂಗಿಯ ಫೋಟೋವನ್ನ ಪೊಲೀಸರು ಬಿಡುಗಡೆ ಮಾಡದ ಕಾರಣ ಆಕೆ ಈ ನಾಟಕದಲ್ಲಿ ಭಾಗಿಯಾಗಿದ್ದಳಾ ಇಲ್ಲವಾ ಎಂಬುದು ಸ್ಪಷ್ಟವಾಗಿಲ್ಲ.

    ಸುಪಾರಿ ಹಂತಕನಂತೆ ವೇಷ ಧರಿಸಿದ್ದ ಪೊಲೀಸ್ ಅಧಿಕಾರಿ ಆರೋಪಿಗೆ ಸಾವಿನ ನಟನೆಯ ಫೋಟೋ ತೋರಿಸಿದಾಗ ಆತ ಸಂತೋಷಗೊಂಡಿದ್ದ. ಆಸ್ತಿ ತನ್ನದಾದ ಕೂಡಲೇ 38 ಸಾವಿರ ಪೌಂಡ್ಸ್ (ಅಂದಾಜು 34 ಲಕ್ಷ ರೂ.) ಕೊಡುವುದಾಗಿ ಹೇಳಿದ್ದ.

    ಆದ್ರೆ ಸುಪಾರಿ ಹಂತಕ ಎಂದುಕೊಂಡಿದ್ದ ವ್ಯಕ್ತಿಯೇ ತನ್ನನ್ನು ಬಂಧಿಸಲು ಬಂದಾಗ ಆರೋಪಿಗೆ ಆಶ್ಚರ್ಯವಾಗಿತ್ತು. ಅನಂತರ ಆತ ತಾನು ಪೋಷಕರನ್ನು ಕೊಲ್ಲಲು ಸಂಚು ರೂಪಿಸಿದ್ದು ಇದೇ ಮೊದಲೇನಲ್ಲ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

    ಕೊಲೆ ಹೇಗೆ ಮಾಡಬೇಕೆಂದು ಆತ ಇಂಟರ್ನೆಟ್‍ನಲ್ಲಿ ಸಾಕಷ್ಟು ಸರ್ಚ್ ಮಾಡಿದ್ದ. ಒಂದು ಬಾರಿ ವಿಷ ಹಾಕಲು ಯತ್ನಿಸಿದ್ದು, ಮತ್ತೊಂದು ಬಾರಿ ಕಾರಿನ ಥರ್ಮಾಮೀಟರ್ ಮುರಿಯಲು ಯತ್ನಿಸಿದ್ದ. ಹೀಗೆ ಮಾಡಿದ್ರೆ ಪಾದರಸ(ಮಕ್ರ್ಯೂರಿ) ಆವಿಯಿಂದ ಸಾಯುತ್ತಾರೆ ಎಂದುಕೊಂಡಿದ್ದ. ಆದ್ರೆ ಎರಡೂ ಬಾರಿ ಆತನ ಪ್ರಯತ್ನ ವಿಫಲವಾಗಿತ್ತು.

    ತಮ್ಮ ಮಗನೇ ಈ ರೀತಿ ಮಾಡಿದನಲ್ಲ ಎಂದು ತಂದೆ ತಾಯಿ ಇನ್ನೂ ಆಘಾತದಲ್ಲಿದ್ದಾರೆ. ಆರೋಪ ಸಾಬೀತಾದರೆ ಮಗ 15 ವರ್ಷಗಳ ಜೈಲು ಶಿಕ್ಷೆ ಅನುಭವಿಸಲಿದ್ದಾನೆ.

    https://www.youtube.com/watch?v=FwxU9Rw7wI0

  • ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಅಮ್ಮನಂತೆ ನಾಟಕವಾಡಿ ಬಾಲಕಿಯ ಅಪಹರಣ ತಪ್ಪಿಸಿದ ಮಹಿಳೆ

    ಕ್ಯಾಲಿಪೋರ್ನಿಯಾ: ಅಮ್ಮನಂತೆ ನಾಟಕವಾಡಿ ಮಹಿಳೆಯೊಬ್ಬರು ಬಾಲಕಿಯ ಅಪಹರಣವನ್ನು ತಪ್ಪಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಕ್ಯಾಲಿಫೋರ್ನಿಯಾದ ಬಾಲಕಿ ಮಾರ್ಟಿನೆಜ್ ಸಾಂತಾ ಅನಾ ಸ್ಕೂಲ್ ಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಯೊಬ್ಬ ಬಂದು ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಈ ವೇಳೆ ಅಲ್ಲೆ ಇದ್ದ ಕ್ಲೌಡಿಯಾ ಎಂಬ ಮಹಿಳೆ ಇದನ್ನು ಗಮನಿಸಿದ್ದಾರೆ. ನಂತರ ಮಹಿಳೆ ಬಾಲಕಿಯ ಬಳಿ ಬಂದು ಅಮ್ಮನಂತೆ ಪೋಸು ಕೊಟ್ಟಿದ್ದಾರೆ.

    ಮಹಿಳೆ ಬಾಲಕಿಯ ಹೆಗಲ ಮೇಲೆ ಕೈಹಾಕಿಕೊಂಡು ಸುಮ್ಮನೇ ನಡೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಅಪರಿಚಿತ ಮಹಿಳೆ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿ ಗಾಬರಿಯಿಂದ ಅಳಲಾರಂಭಿಸಿದ್ದಾಳೆ. ಬಾಲಕಿ ಅಳುತ್ತಿದ್ದರಿಂದ ಮಹಿಳೆ ಸ್ಪ್ಯಾನಿಶ್ ಭಾಷೆ ಮಾತನಾಡುತ್ತಿದ್ದರೂ ಬಾಲಕಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ. ನಂತರ ಅವಳನ್ನು ಶಾಲೆಯವರೆಗೂ ಬಿಟ್ಟಿದ್ದಾರೆ.

    ಮಹಿಳೆ ಶಾಲಾ ಅಧಿಕಾರಿಗಳಿಗೆ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಸಮಯ ಪ್ರಜ್ಞೆಯಿಂದಾಗಿ ಬಾಲಕಿ ಅಪಹರಣದಿಂದ ಪಾರಾಗಿದ್ದಾಳೆ. ಅಪಹರಣಕಾರರಿಂದ ತನ್ನನ್ನು ಕಾಪಾಡಿದ ಮಹಿಳೆ ನಿಜಕ್ಕೂ ಧೈರ್ಯವಂತೆ ಎಂದು ಬಾಲಕಿ ಹೇಳಿದ್ದಾಳೆ.

  • ಒಬ್ಬನೇ ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವು

    ಒಬ್ಬನೇ ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವು

    ಮಂಡ್ಯ: ಇದ್ದ ಒಬ್ಬನೇ ಮಗ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲಕುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.

    ಸರೋಜಮ್ಮ (47) ಮೃತಪಟ್ಟ ದುರ್ದೈವಿ ತಾಯಿ. ಭಾನುವಾರ ಚನ್ನಪಿಳ್ಳೆಕೊಪ್ಪಲು ಗ್ರಾಮದ ಗೇಟ್ ಬಳಿ ಕೆಎಸ್‍ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಡಿಕ್ಕಿಯಾಗಿ, ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದರು. ಅದರಲ್ಲಿ ಕಿರುಗಾವಲು ಗ್ರಾಮದ ಸರೋಜಮ್ಮ ಅವರ ಒಬ್ಬನೇ ಮಗ 22 ವರ್ಷದ ನಿತಿನ್ ಕೂಡ ಸಾವನ್ನಪ್ಪಿದ್ದನು.

    ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಸರೋಜಮ್ಮ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ತಕ್ಷಣ ಸರೋಜಮ್ಮ ಅವರನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರೋಜಮ್ಮ ಇಂದು ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ತಾಯಿ ಮಗನ ಸಾವಿನಿಂದ ಕಿರುಗಾವಲು ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಇದನ್ನು ಓದಿ: ಟ್ರ್ಯಾಕ್ ದಾಟುವಾಗ ರೈಲು ಡಿಕ್ಕಿ- 6 ಯುವಕರ ಸಾವು

    ಈ ಘಟನೆ ಸಂಬಂಧ ಕಿರುಗಾವಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.