Tag: mother

  • 55 ವರ್ಷದ ಬಳಿಕ ಕುಟುಂಬದಲ್ಲಿ ಹೆಣ್ಮಗು ಜನನ- ಗ್ರಾಮದಲ್ಲಿ ಪಟಾಕಿ ಸಿಡಿಸಿ, ಡಿಜೆ ಹಾಕಿ ಸಂಭ್ರಮಿಸಿದ ಕುಟುಂಬಸ್ಥರು

    55 ವರ್ಷದ ಬಳಿಕ ಕುಟುಂಬದಲ್ಲಿ ಹೆಣ್ಮಗು ಜನನ- ಗ್ರಾಮದಲ್ಲಿ ಪಟಾಕಿ ಸಿಡಿಸಿ, ಡಿಜೆ ಹಾಕಿ ಸಂಭ್ರಮಿಸಿದ ಕುಟುಂಬಸ್ಥರು

    ಗಾಂಧಿನಗರ: ಕುಟುಂಬದಲ್ಲಿ 55 ವರ್ಷದ ಬಳಿಕ ಹೆಣ್ಣು ಮಗು ಜನಿಸಿದ ಸಂತೋಷದಲ್ಲಿ ಇಡೀ ಕುಟುಂಬಸ್ಥರು ಪಟಾಕಿ ಸಿಡಿಸಿ, ಡಿಜೆ ಹಾಕಿ ಸಂಭ್ರಮಿಸಿದ್ದಾರೆ. ಶನಿವಾರ ಗ್ರಾಮದಲ್ಲಿ ಮೆರವಣಿಗೆ ಮೂಲಕ ಹೆಣ್ಣು ಮಗುವನ್ನು ಮನೆಗೆ ಕರೆತಂದಿದ್ದಾರೆ.

    ಗುಜರಾತ್ ರಾಜ್ಯದ ದಾಹೋದ ಜಿಲ್ಲೆಯ ಲಿಮಖೇಡಾ ಗ್ರಾಮದ ದಿನೇಶ್‍ಭಾಯಿ ಶಾ ಎಂಬವರ ಕುಟುಂಬದಲ್ಲಿ 55 ವರ್ಷಗಳ ನಂತರ ಹೆಣ್ಣು ಮಗವೊಂದು ಜನಿಸಿದೆ. 55 ವರ್ಷಗಳ ಹಿಂದೆ ದಿನೇಶ್ ಅವರ ಅಕ್ಕ ಈ ಕುಟುಂಬದಲ್ಲಿ ಜನಿಸಿದ್ರು. ದಿನೇಶ್ ನಂತರ ಇಬ್ಬರು ಸಹೋದರರು ಜನಿಸಿದ್ರು.

    ದಿನೇಶ್ ಮತ್ತು ಅವರ ಸಹೋದರರಿಗೂ ಮದುವೆ ಆದ್ರೂ ಮೂವರಿಗೂ ಗಂಡು ಮಕ್ಕಳೇ ಹುಟ್ಟಿದ್ದವು. ಹೀಗಾಗಿ ಬಹು ವರ್ಷಗಳಿಂದ ಕುಟುಂಬಸ್ಥರು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ರು.

    ಮೇ 24ರಂದು ದಿನೇಶ್ ಅವರ ಹಿರಿಯ ಪುತ್ರ ಚಿರಾಗ್ ಶಾ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗು ಜನಿಸಿದ ಸುದ್ದಿ ಕೇಳುತ್ತಿದ್ದಂತೆಯೇ ದಿನೇಶ್ ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಸಂಭ್ರಮ ಆಚರಿಸಿದ್ದಾರೆ.

    ಶನಿವಾರ ತಾಯಿಯೊಂದಿಗೆ ಮಗುವನ್ನು ಮೆರವಣಿಗೆ ಮೂಲಕ ಮನೆಗೆ ಕರೆತಂದಿದ್ದಾರೆ.

  • ಚಿರತೆಯೊಂದಿಗೆ ಹೋರಾಡಿ ಮಗಳನ್ನು ಕಾಪಾಡಿಕೊಂಡ ತಾಯಿ

    ಚಿರತೆಯೊಂದಿಗೆ ಹೋರಾಡಿ ಮಗಳನ್ನು ಕಾಪಾಡಿಕೊಂಡ ತಾಯಿ

    ಕೊಯಂಬತ್ತೂರು: ಚಿರತೆಯೊಂದಿಗೆ ಮಹಿಳೆಯೊಬ್ಬರು ಸೆಣಸಾಡಿ ತನ್ನ 11 ವರ್ಷದ ಮಗಳನ್ನು ಕಾಪಾಡಿಕೊಂಡ ಘಟನೆ ವಾಲ್ಪಾರೈ ನಲ್ಲಿ ನಡೆದಿದೆ.

    30 ವರ್ಷ ವಯಸ್ಸಿನ ಮುತ್ತುಲಕ್ಷ್ಮೀ ಎಂಬವರು ಮಗಳನ್ನು ಕಾಪಾಡಿಕೊಂಡ ಧೈರ್ಯವಂತ ತಾಯಿ. ಮುತ್ತುಲಕ್ಷ್ಮೀ ಮಗಳು ಸತ್ಯಾ ಜೊತೆ ಕಳೆದ ರಾತ್ರಿ ಹಿತ್ತಲಿನಲ್ಲಿ ಮರದ ಕಡ್ಡಿಗಳನ್ನು ಆಯುತ್ತಿದ್ದರು. ತಕ್ಷಣ ಪ್ರತ್ಯಕ್ಷವಾದ ಚಿರತೆಯೊಂದು ಸತ್ಯಳ ಮೇಲೆ ಹಾರಿ ಕುತ್ತಿಗೆಗೆ ಬಾಯಿ ಹಾಕಿ ಹಿಡಿದು ಎಳೆದಾಡಿದೆ.

    ಇದನ್ನು ಕಂಡ ಮುತ್ತುಲಕ್ಷ್ಮಿ ಧೈರ್ಯದಿಂದ ಕೈಯ್ಯಲಿದ್ದ ಕಟ್ಟಿಗೆಯಿಂದಲೇ ಚಿರತೆಗೆ ಬಾರಿಸಿದ್ದಾರೆ. ಏಟು ತಿಂದ ಚಿರತೆ ಸ್ಥಳದಿಂದ ಓಡಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಾಯಗೊಂಡಿರುವ ಸತ್ಯಳನ್ನು ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಮುಂದಾಗಿದ್ದಾರೆ. ಕಳೆದ 10 ದಿನಗಳಿಂದ ಅದೇ ಪ್ರದೇಶದಲ್ಲಿ ಚಿರತೆ ಸುತ್ತಾಡುತ್ತಿದೆ ಎಂದು ವರದಿಯಾಗಿದೆ.

  • ತಾಯಿಯ ಎದೆ ಹಾಲು ಕುಡಿದ ಕೂಡಲೇ ಮಗು ಸಾವು!

    ತಾಯಿಯ ಎದೆ ಹಾಲು ಕುಡಿದ ಕೂಡಲೇ ಮಗು ಸಾವು!

    ಲಕ್ನೋ: ತಾಯಿಯೊಬ್ಬಳು ಮಲಗಿದ್ದ ಸಂದರ್ಭದಲ್ಲಿ ವಿಷಪೂರಿತ ಹಾವು ಕಚ್ಚಿದೆ. ಇದನ್ನ ಗಮನಿಸದ ತಾಯಿ ಮಗುವಿಗೆ ಎದೆ ಹಾಲು ಕುಡಿಸಿದ್ದಾರೆ. ಪರಿಣಾಮ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರೇಶದಲ್ಲಿ ನಡೆದಿದೆ.

    35 ವರ್ಷದ ತಾಯಿ ತನ್ನ ಮನೆಯಲ್ಲಿ ಮಲಗಿರುವಾಗಲೇ ಹಾವು ಕಚ್ಚಿದೆ. ಆದ್ರೆ ನಿದ್ದೆಯ ಮಂಪರಿನಲ್ಲಿದ್ದ ಆಕೆಗೆ ಹಾವು ಕಚ್ಚಿರುವುದು ತಿಳಿದಿರಲಿಲ್ಲ. ಪರಿಣಾಮ ಪಕ್ಕದಲ್ಲೇ ಜೋರಾಗಿ ಅಳುತ್ತಿದ್ದ ತನ್ನ ಮೂರು ವರ್ಷದ ಹೆಣ್ಣು ಮಗುವಿಗೆ ಎದೆ ಹಾಲು ಕುಡಿಸಿದ್ದಾರೆ.

    ಮಗು ಹಾಲು ಕುಡಿದ ಸ್ವಲ್ಪ ಸಮಯದಲ್ಲಿಯೇ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಬಳಿಕ ಕುಟುಂಬಸ್ಥರು ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಾಯಿ, ಮಗು ಇಬ್ಬರು ಅಷ್ಟರಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಸಿಂಗ್ ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಾಯಿಗೆ ಹಾವು ಕಚ್ಚಿದೆ. ಹೀಗಾಗಿ ತಾಯಿಯ ಎದೆಹಾಲು ಕುಡಿದ ಮಗು ಸೇರಿ ಇಬ್ಬರೂ ಸಾವನ್ನಪ್ಪಿರುವುದು ತಿಳಿದು ಬಂದಿದೆ. ಆದ್ದರಿಂದ ಇದನ್ನು ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಕುಟುಂಬಸ್ಥರು ತಾಯಿ ಮಲಗಿದ್ದ ಪಕ್ಕದ ಕೊಠಡಿಯಲ್ಲಿದ್ದ ವಿಷಪೂರಿತ ಹಾವನ್ನು ಪತ್ತೆಮಾಡಿದ್ದಾರೆ. ಆದರೆ ಅದು ತಪ್ಪಿಸಿಕೊಂಡಿದೆ ಎಂಬುದಾಗಿ ವರದಿಯಾಗಿದೆ.

  • ಐದು ತಿಂಗ್ಳ ಮಗು, ತಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ!

    ಐದು ತಿಂಗ್ಳ ಮಗು, ತಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ!

    ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ತಾಯಿ ಮತ್ತು ಮಗುವಿನ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನಡೆದಿದೆ.

    ಬಿಹಾರ ಮೂಲದ 26 ವರ್ಷದ ತಾಯಿ ನಿಶಾದೇವಿ ಹಾಗೂ ಐದು ತಿಂಗಳ ಗಂಡು ಮಗು ರಿಷಿ ಕೊಲೆಯಾದ ದುರ್ದೈವಿಗಳು. ಚಿತ್ತಾಪುರದ ಓರಿಯಂಟಲ್ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪಾರಿತೋಷ್ ಜೇಸ್ವಾಲ್ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಆದರೆ ಸಂಜೆ ಮನೆಗೆ ಬೀಗ ಹಾಕಿದ್ದನ್ನು ಕಂಡ ಅಕ್ಕಪಕ್ಕದವರು, ಪಾರಿತೋಷ್ ಜೇಸ್ವಾಲ್‍ ಗೆ ಫೋನ್ ಮಾಡಿ ನಿಮ್ಮ ಮನೆಗೆ ಬೀಗ ಹಾಕಲಾಗಿದೆ ಅಂತಾ ಹೇಳಿದ್ದಾರೆ.

    ಆತ ಬಂದು ಮನೆ ಬಾಗಿಲು ತೆರೆದಾಗ ತಾಯಿ ಮಗು ಕೊಲೆಯಾಗಿದ್ದು ಗೊತ್ತಾಗಿದೆ. ಮೇಲ್ನೊಟಕ್ಕೆ ಗಂಡನೇ ಕೊಲೆ ಮಾಡಿ ಮನೆಗೆ ಲಾಕ್ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾನೆ ಅನ್ನೊ ಅನುಮಾನ ವ್ಯಕ್ತವಾಗಿದೆ. ಚಿತ್ತಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಪುರ ಠಾಣೆಯಲ್ಲಿ ಈ ಕುರಿತು ಪ್ರಕರಣವನ್ನ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಸದ್ಯ ಪತಿ ಪಾರಿತೋಷ್ ಜೇಸ್ವಾಲ್ ನನ್ನ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ಏನೆಂಬುದು ತನಿಖೆಯ ನಂತರವಷ್ಟೆ ಗೋತ್ತಾಗಬೇಕಿದೆ.

  • ಶೌಚಾಲಯಕ್ಕೆ ಹೋಗಿ ಬರೋದಾಗಿ ಹೇಳಿ ಮಗು ಕೊಟ್ಟು ಪಾರಾರಿ!

    ಶೌಚಾಲಯಕ್ಕೆ ಹೋಗಿ ಬರೋದಾಗಿ ಹೇಳಿ ಮಗು ಕೊಟ್ಟು ಪಾರಾರಿ!

    ಧಾರವಾಡ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ಹಾವಳಿ ಜೋರಾಗಿದೆ. ಪೋಷಕರು ತಮ್ಮ ಮಕ್ಕಳು ಎಲ್ಲಿ ಕಳ್ಳತನವಾಗಿ ಬಿಡುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಆದರೆ ಧಾರವಾಡದಲ್ಲಿ ತಾಯಿಯೊಬ್ಬಳು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಅಪರಿಚಿತ ಮಹಿಳೆಯೊಬ್ಬರ ಕೈಗೆ ತನ್ನ ಮಗುವನ್ನ ಕೊಟ್ಟು ಪರಾರಿಯಾಗಿದ್ದಾಳೆ.

    ಧಾರವಾಡ ನಗರದ ಚರಂತಿಮಠ ಗಾರ್ಡನ್ ನ ಬನಶಂಕರಿ ಕಲ್ಯಾಣ ಮಂಟಪದ ಬಳಿ ಸೋಮವಾರ ರಾತ್ರಿ ಮಹಿಳೆಯೊಬ್ಬಳು ತನ್ನ ನವಜಾತ ಗಂಡು ಮಗುವನ್ನು ಅಲ್ಲೇ ಇದ್ದ ಇಬ್ಬರು ಮಹಿಳೆಯರ ಕೈಗೆ ಕೊಟ್ಟು ಹೋಗಿದ್ದಾಳೆ.

    ಮಗು ಪಡೆದಿದ್ದ ಮಹಿಳೆಯರು ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ್ದ ಈ ಮಹಿಳೆಯ ವಾಪಸ್ ಬರುವಿಕೆಯನ್ನ ಕಾದು ಕುಳಿತ್ತಿದ್ದರು. ಆದರೆ ತುಂಬಾ ಸಮಯವಾದರೂ ಆಕೆ ಬರಲಿಲ್ಲ. ಕೊನೆಗೆ ಆ ಮಗುವನ್ನ ಶಹರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

    ಪೊಲೀಸರು ಮಗುವನ್ನ ಜಿಲ್ಲಾ ಆಸ್ಪತ್ರೆಯಲ್ಲಿ ಆರೈಕೆ ಮಾಡಿದ್ದು, ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಕೂಡಾ ಮಗು ಕೊಟ್ಟು ಪರಾರಿಯಾಗಿದ್ದ ತಾಯಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ನೀಚ ಮಗ!

    ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ನೀಚ ಮಗ!

    ಲಕ್ನೋ: ನೀಚ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಉತ್ತರ ಪ್ರದೇಶ ರಾಜ್ಯದ ರಾಯ್‍ಬರೇಲಿ ಜಿಲ್ಲೆಯ ಶಹಜಹಾನ್‍ಪುರ ಗ್ರಾಮದಲ್ಲಿ ನಡೆದಿದೆ.

    25 ವರ್ಷದ ಮಗ ಕುಡಿದ ಮತ್ತಿನಲ್ಲಿ ತನ್ನ 45 ವರ್ಷದ ತಾಯಿಯ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಶನಿವಾರ ಈ ಘಟನೆ ನಡೆದಿದ್ದು, ದಂಪತಿ ಆರ್.ಸಿ.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಶನಿವಾರ ಸಂಜೆ ಮಹಿಳೆಯ ಹಿರಿಯ ಮಗ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮನೆ ಹೊರಗಡೆ ಕೆಲಸ ಮಾಡುತ್ತಿದ್ದ ಮಹಿಳೆಯ ಕಿರಿಯ ಮಗ ಅಣ್ಣನಿಂದ ತಾಯಿಯನ್ನು ರಕ್ಷಿಸಿದ್ದಾನೆ. ಇತ್ತ ಮಹಿಳೆಯ ಕಿರುಚಾಟ ಕೇಳಿದ ಕೂಡಲೇ ನೆರೆಹೊರೆಯವರು ಸಹಾಯಕ್ಕೆ ಮುಂದಾಗಿದ್ದಾರೆ.

    ಸದ್ಯ ಆರೋಪಿ ಮಗನನ್ನು ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 511ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೊದಲಿಗೆ ದಂಪತಿ ಮಗನ ವಿರುದ್ಧವೇ ದೂರು ದಾಖಲಿಸಲು ಠಾಣೆಗೆ ಆಗಮಿಸಿದಾಗ ನಿಜಕ್ಕೂ ನನಗೆ ಶಾಕ್ ಆಯಿತು. ಈಗಾಗಲೇ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ.

  • ಯಾರನ್ನು ಕೇಳಿ ಮದ್ವೆಯಾಗಿದ್ದಾನೆ: ಹುಚ್ಚ ವೆಂಕಟ್ ವಿರುದ್ಧ ಐಶ್ವರ್ಯ ತಾಯಿ ಗರಂ

    ಯಾರನ್ನು ಕೇಳಿ ಮದ್ವೆಯಾಗಿದ್ದಾನೆ: ಹುಚ್ಚ ವೆಂಕಟ್ ವಿರುದ್ಧ ಐಶ್ವರ್ಯ ತಾಯಿ ಗರಂ

    ಬೆಂಗಳೂರು: ಹುಚ್ಚ ವೆಂಕಟ್ ತನ್ನ ಮಗಳನ್ನು ಮದುವೆಯಾದ ಹಿನ್ನೆಲೆಯಲ್ಲಿ ಐಶ್ವರ್ಯ ತಾಯಿ ಫುಲ್ ಗರಂ ಆಗಿದ್ದಾರೆ.

    ಯಾರನ್ನು ಕೇಳಿ ಹುಚ್ಚ ವೆಂಕಟ್ ಮದುವೆ ಮಾಡಿಕೊಂಡಿದ್ದಾನೆ? ನಾನು ಈ ಮದುವೆಗೆ ಒಪ್ಪಿಗೆ ಕೊಡಲ್ಲ. ಅವಳು ಮೊನ್ನೆಯಿಂದ ನನ್ನ ಕೈಗೆ ಸಿಕ್ಕಿಲ್ಲ. ಚೆನ್ನೈ ನಲ್ಲಿ ಇದ್ದಾಳೆ ಎಂದು ಹೇಳುತ್ತಿದ್ದಾಳೆ. ಹುಚ್ಚ ವೆಂಕಟ್ ತಲೆಕೆಡಿಸಿ ಮದುವೆ ಆಗಿದ್ದಾನೆ ಎಂದು ಐಶ್ವರ್ಯ ತಾಯಿ ರೂಪ ಗರಂ ಆಗಿದ್ದಾರೆ.

    ಹುಚ್ಚ ವೆಂಕಟ್ ತಲೆಕೆಡಿಸಿ ನನ್ನ ಮಗಳ ಜೊತೆ ಮದುವೆ ಆಗಿದ್ದಾನೆ. ನನಗೆ ಅವನ ವಿರುದ್ಧ ದೂರು ಕೊಡುವುದಕ್ಕೂ ಭಯ ಆಗುತ್ತಿದೆ. ಅವನು ಕೊಲೆ ಮಾಡುವುದಕ್ಕೂ ಹೇಸಲ್ಲ. ಮಹಿಳಾ ಅಯೋಗಕ್ಕೆ ಮದುವೆ ಬಗ್ಗೆ ದೂರು ಕೊಡುತ್ತೇವೆ. ಅವನು ಹೆದರಿಸಿ ಮದುವೆಯಾಗಿದ್ದಾನೆ ಎಂದು ಐಶ್ವರ್ಯ ತಾಯಿ ವೆಂಕಟ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

    ನಾನು ಮತ್ತೊಂದು ಮದುವೆ ಆಗಿರುವುದಾಗಿ ಸ್ವತಃ ಹುಚ್ಚ ವೆಂಕಟ್ ಫೇಸ್‍ಬುಕ್ ಲೈವ್ ಬಂದು ತಮ್ಮ ಮದುವೆ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ. ಹುಚ್ಚ ವೆಂಕಟ್ ಅವರು ಐಶ್ವರ್ಯ ಜೊತೆ ಮದುವೆಯಾಗಿದ್ದಾರೆ. ವೆಂಕಟ್ ನಟಿಸಿ ನಿರ್ದೇಶನ ಮಾಡುತ್ತಿರುವ `ಡಿಕ್ಟೇಟರ್ ಹುಚ್ಚ ವೆಂಕಟ್’ ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯ ಕಾಣಿಸಿಕೊಂಡಿದ್ದಾರೆ.

    ಕಳೆದ ವಾರ ತಲಕಾವೇರಿಯಲ್ಲಿ ನಾನು ಐಶ್ವರ್ಯರನ್ನು ಮದುವೆ ಆದೆ. ಮದುವೆ ಆದ ನಂತರ ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹಾಗಾಗಿ ಮದುವೆ ಆದ ವಿಷಯವನ್ನು ನಾವು ಮನೆಯವರಿಂದ ಹಾಗೂ ಎಲ್ಲರಿಂದ ಮುಚ್ಚಿಟ್ಟಿದ್ದೀವಿ ಎಂದು ಹುಚ್ಚ ವೆಂಕಟ್ ತಮ್ಮ ಫೇಸ್‍ಬುಕ್ ಲೈವ್ ನಲ್ಲಿ ತಿಳಿಸಿದ್ದರು.

  • ಅಮ್ಮನಿಗಾಗಿ 23ರ ಕರ್ನಾಟಕದ ಯುವತಿಯನ್ನು ಮದ್ವೆಯಾದ 13ರ ಬಾಲಕ

    ಅಮ್ಮನಿಗಾಗಿ 23ರ ಕರ್ನಾಟಕದ ಯುವತಿಯನ್ನು ಮದ್ವೆಯಾದ 13ರ ಬಾಲಕ

    ಹೈದರಾಬಾದ್: ಅಮ್ಮನ ಆಸೆಗಾಗಿ 13 ವರ್ಷದ ಬಾಲಕನೊಬ್ಬ 23 ವಯಸ್ಸಿನ ಯುವತಿಯನ್ನು ಮದುವೆಯಾದ ವಿಚಿತ್ರ ಘಟನೆಯೊಂದು ಆಂಧ್ರ ಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಉಪ್ಪರಹಾಳ ಗ್ರಾಮದಲ್ಲಿ ನಡೆದಿದೆ. ಮದುವೆ ಒಂದು ತಿಂಗಳ ಹಿಂದೆ ನಡೆದಿದ್ದು, ಶನಿವಾರ ಪ್ರಕರಣ ಬೆಳಕಿಗೆ ಬಂದಿದೆ.

    ಒಂದು ತಿಂಗಳ ಹಿಂದೆ ಕರ್ನೂಲ್ ಜಿಲ್ಲೆಯ ಬಾಲಕನೊಂದಿಗೆ ಕರ್ನಾಟಕದ ಬಳ್ಳಾರಿಯ ಚನಿಕನ್ನೂರ ಗ್ರಾಮದ ಯುವತಿಯೊಂದಿಗೆ ಏಪ್ರಿಲ್ 27ರಂದು ಮದುವೆ ನಡೆದಿದೆ. ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ ಪ್ರಕರಣ ಬೆಳಕಿಗೆ ಬಂದಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

    ಮದುವೆಯಾದ ಬಾಲಕನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ರು. ತಂದೆ ಮದ್ಯವ್ಯಸನಿ ಆಗಿದ್ದರಿಂದ ನನ್ನ ಸಾವಿನ ಬಳಿಕ ಮಕ್ಕಳನ್ನು ಯಾರು ನೋಡಿಕೊಳ್ತಾರೆ ಅಂತಾ ತಾಯಿ ಚಿಂತಿತಳಾಗದಿದ್ದಳು. ಮನೆ ಕೆಲಸ, ಮಕ್ಕಳಿಗೆ ಅಡುಗೆ ಅವರನ್ನು ನೋಡಿಕೊಳ್ಳಲು ವಯಸ್ಕ ಯುವತಿಯೊಂದಿಗೆ ತನ್ನ ಮಗನ ಮದುವೆ ಮಾಡಲು ನಿರ್ಧರಿಸಿದ್ದರು. ಕೊನೆಗೆ ಬಳ್ಳಾರಿ ಜಿಲ್ಲೆಯ ಮೂಲದ ಯುವತಿಯೊಂದಿಗೆ ಮದುವೆ ಮಾಡಿದ್ರು. ಈ ದಂಪತಿಗೆ ಎರಡು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿವೆ ಅಂತಾ ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಮದುವೆ ಫೋಟೋಗಳು ವೈರಲ್ ಆಗುತ್ತಿದ್ದಂತೆ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ರೆ ಮನೆಯ ಬಾಗಿಲು ಹಾಕಲಾಗಿತ್ತು. ಕಾನೂನಿನ ಪ್ರಕಾರ ಮದುವೆ ರದ್ದಾಗುತ್ತದೆ. ಈ ಸಂಬಂಧ ಬಾಲಕ ಪೋಷಕರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಎಲ್ಲರ ಮೊಬೈಲ್ ಗಳು ಸ್ವಿಚ್ ಆಫ್ ಆಗಿದ್ದು, ಎರಡು ಕುಟುಂಬಸ್ಥರ ಸಮ್ಮುಖದಲ್ಲಿಯೇ ಮದುವೆ ನಡೆದಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ ಅಂತಾ ತಹಶೀಲ್ದಾರ್ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.

  • ತಾಯಿಯ ಸಾವಿನ ದುಃಖದಲ್ಲಿಯೂ ಮತ ಚಲಾಯಿಸಿದ ಮಗ!

    ತಾಯಿಯ ಸಾವಿನ ದುಃಖದಲ್ಲಿಯೂ ಮತ ಚಲಾಯಿಸಿದ ಮಗ!

    ಯಾದಗಿರಿ: ಮನೆಯಲ್ಲಿ ತಾಯಿ ಮೃತಪಟ್ಟರು ಮಗ ಹಾಗೂ ಮೊಮ್ಮಗ ಮತದಾನ ಚಲಾಯಿಸಿರುವ ಘಟನೆ ಶಹಾಪುರ ವಿಧಾನಸಭೆ ಕ್ಷೇತ್ರದ ನಗನೂರ ಗ್ರಾಮದಲ್ಲಿ ನಡೆದಿದೆ.

    ಸೋಮಣ್ಣ ಎಂಬವರ ತಾಯಿ ಗುರುಸಿದ್ದವ್ವ ಇಂದು ಬೆಳಗಿನ ಜಾವ ಸಾವನಪ್ಪಿದ್ರು. ಮನೆಯಲ್ಲಿ ತಾಯಿಯ ಮೃತದೇಹ ಇಟ್ಟು ಮತದಾನ ಹಕ್ಕು ಚಲಾಯಸಬೇಕು ಎಂದು ಸೋಮಣ್ಣ ಹಾಗೂ ಮಗ ಶರಣು ತಮ್ಮ ವೋಟ್ ಮಾಡಿದ್ದಾರೆ.

    ನಗನೂರನ 123 ಸಂಖ್ಯೆಯ ಮತಗಟ್ಟೆಗೆ ಬಂದು ಮಗ ಮತ್ತು ಮೊಮ್ಮಗ ಮತವನ್ನು ಚಲಾಯಿಸಿದ್ದಾರೆ. ಮತ ಚಲಾಯಿಸಿದ ನಂತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

  • ತಾಯಿಯ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿ 6 ತಿಂಗ್ಳ ಮಗು ಮೊದಲನೇ ಮಹಡಿಯಿಂದ ಬಿದ್ದು ಸಾವು!

    ತಾಯಿಯ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿ 6 ತಿಂಗ್ಳ ಮಗು ಮೊದಲನೇ ಮಹಡಿಯಿಂದ ಬಿದ್ದು ಸಾವು!

    ಮುಂಬೈ: ತಾಯಿಯ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿ 6 ತಿಂಗಳ ಮಗು ಮೊದಲನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಭಾನುವಾರ ಮಹಾರಾಷ್ಟ್ರದ ಕಲ್ಯಾಣ್ ನಗರದ ಮದುವೆ ಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮೊಹಮ್ಮದ್ ಶೇಕ್ ಮೃತಪಟ್ಟ ದುರ್ದೈವಿ ಮಗು. ಶೇಕ್ ಮೊದಲನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ಆಗ ಆತನ ಕುಟುಂಬದವರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರುವಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು.

    ಮಗುವಿನ ಕುಟುಂಬದವರು ರಾಮ್ಬೋಗ್‍ದಲ್ಲಿರುವ ಸಂಬಂಧಿಕರ ಮದುವೆಗೆ ಹೋಗಲು ಕಲ್ಯಾಣ್‍ಗೆ ಹೋಗಿದ್ದರು. ಮದುವೆ ಮುಗಿದ ನಂತರ ಮಗುವಿನ ಕುಟುಂಬದವರು ಮನೆಗೆ ಹಿಂದಿರುತ್ತಿರುವಾಗ ಶೇಕ್ ನ ತಾಯಿ ಫೇಮಿದಾ ಶೇಕ್(23)ನ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿದೆ. ಈ ವೇಳೆ ಎತ್ತಿಕೊಂಡಿದ್ದ ತನ್ನ ಆರು ತಿಂಗಳ ಮಗುವನ್ನು ಬಿಟ್ಟಿದ್ದಾಳೆ. ಪರಿಣಾಮ ಮಗು 1ನೇ ಮಹಡಿಯಿಂದ ಬಿದ್ದಿದೆ ಎಂದು ವರದಿಯಾಗಿದೆ.

    ಮೊದಲನೇ ಮಹಡಿಯಿಂದ ಬಿದ್ದ ಗಾಯಾಳು ಮಗುವನ್ನು ಕುಟುಂಬದವರು ಕೂಡಲೇ ರುಕ್ಮಿಣಿ ಬಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಾಗುವಾಗಲೇ ಮಗು ಮೃತಪಟ್ಟಿದೆ. ಇದು ಆ್ಯಕ್ಸಿಡೆಂಟಲ್ ಡೆತ್ ಎಂದು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದೇವೆ ಎಂದು ಮಹಾತ್ಮ ಪುಲೇ ಪೊಲೀಸರು ತಿಳಿಸಿದ್ದಾರೆ.