Tag: mother

  • ಸಾವಿನಲ್ಲೂ ಒಂದಾದ ತಾಯಿ-ಮಗ- ಮೈಸೂರಿನಲ್ಲಿ ಹೃದಯವಿದ್ರಾವಕ ಘಟನೆ!

    ಸಾವಿನಲ್ಲೂ ಒಂದಾದ ತಾಯಿ-ಮಗ- ಮೈಸೂರಿನಲ್ಲಿ ಹೃದಯವಿದ್ರಾವಕ ಘಟನೆ!

    ಮೈಸೂರು: ಸಾವಿನಲ್ಲೂ ತಾಯಿ ಮಗ ಒಂದಾದ ಅಪರೂಪದ ಘಟನೆಯೊಂದು ಮೈಸೂರಿನ ಅಗ್ರಹಾರದಲ್ಲಿ ನಡೆದಿದೆ.

    ಶಾಂತಮ್ಮಣ್ಣಿ(72) ಹಾಗೂ ದಿಲೀಪ್(49) ಮೃತ ದುರ್ದೈವಿಗಳು. ಅನಾರೋಗ್ಯದಿಂದ ಶಾಂತಮ್ಮಣ್ಣಿ ಹಾಗೂ ದಿಲೀಪ್ ಬಳಲುತ್ತಿದ್ದರು. ತಾಯಿ ಶಾಂತಮ್ಮಣ್ಣಿ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರೆ ಮಗ ದಿಲೀಪ್ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.

    ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಗ ದಿಲೀಪ್ ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವನ್ನಪ್ಪಿದ್ದಾರೆ. ಸದ್ಯ ಇಬ್ಬರ ಅಂತ್ಯಕ್ರಿಯೆ ಒಟ್ಟಿಗೆ ನಡೆಸಲು ನಿರ್ಧರಿಸಿದ್ದು, ವಿದ್ಯಾರಣ್ಯಪುರಂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • ಹೆತ್ತ ತಾಯಿಯನ್ನ ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಪಾಪಿ ಮಗ!

    ಹೆತ್ತ ತಾಯಿಯನ್ನ ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಪಾಪಿ ಮಗ!

    ರಾಮನಗರ: ಮಗನೊಬ್ಬ ಜಮೀನಿಗಾಗಿ ಹೆತ್ತ ತಾಯಿಯನ್ನೇ ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ನಡೆದಿದೆ.

    ನಾಗಮ್ಮ ಮಗನಿಂದಲೇ ಕೊಲೆಯಾದ ನತದೃಷ್ಟೆ ತಾಯಿ. ಮೃತ ನಾಗಮ್ಮಳ ಮಗ ಸುರೇಶ್ ಕೊಲೆ ಮಾಡಿದ ಪಾಪಿ ಮಗ. ನಾಗಮ್ಮರ ಹೆಸರಿನಲ್ಲಿ 1 ಎಕರೆ 15 ಗುಂಟೆ ಜಮೀನಿತ್ತು. ಈ ಜಮೀನನ್ನು ತನ್ನ ಹೆಸರಿಗೆ ಬರೆದುಕೊಂಡುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ. ಮಗನ ಬಲವಂತಕ್ಕೆ ತಾಯಿ ನಾಗಮ್ಮ ಒಪ್ಪದಿದ್ದರಿಂದ, ಮಗಳ ಮನೆಗೆ ಕರೆದೊಯ್ದು ಬಿಟ್ಟುಬರುವುದಾಗಿ ತಿಳಿಸಿ, ಕರೆದೊಯ್ದು ಕೊಲೆ ಮಾಡಿ ತನ್ನದೇ ಮನೆಯ ಶೌಚಾಲಯದ ಗುಂಡಿಯಲ್ಲಿ ಶವವನ್ನು ಹೂತಿಟ್ಟಿದ್ದಾನೆ.

    ತಹಶೀಲ್ದಾರ್ ರಮೇಶ್‍ರ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ಆರೋಪಿ ಸುರೇಶ್‍ನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

    ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದು, ಇದೀಗ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ.

  • ಅಪ್ರಾಪ್ತ ಮಗಳನ್ನ ರೇಪ್‍ಗೈದಿದ್ದ ಕಾಮುಕನನ್ನು ಹಿಡಿದು ಕೊಟ್ಟ ತಾಯಿ

    ಅಪ್ರಾಪ್ತ ಮಗಳನ್ನ ರೇಪ್‍ಗೈದಿದ್ದ ಕಾಮುಕನನ್ನು ಹಿಡಿದು ಕೊಟ್ಟ ತಾಯಿ

    ಭೋಪಾಲ್: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಗೆ ಬೈಕಿನಲ್ಲಿ ಲಿಫ್ಟ್ ಕೊಡುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಸಂತ್ರಸ್ತೆಯ ತಾಯಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

    ಸಮೀರ್ ಖಾನ್ ಬಂಧಿತ ಆರೋಪಿ. ಸಮೀರ್ ವೃತ್ತಿಯಲ್ಲಿ ಟೈಲರಿಂಗ್ ಮಾಡಿಕೊಂಡಿದ್ದು, ಬಾಲಕಿಯ ನೆರೆಯ ಮನೆಯಲ್ಲಿಯೇ ವಾಸಿಯಾಗಿದ್ದನು. ಸಮೀರ್ ಬಾಲಕಿ ಶಾಲೆಗೆ ಹೋಗುವ ವೇಳೆ ಡ್ರಾಪ್ ಮಾಡುವ ನೆಪದಲ್ಲಿ ಬೈಕ್ ಹತ್ತಿಸಿಕೊಂಡಿದ್ದ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಅಲ್ಲದೇ ಈ ಕುರಿತು ಯಾರಿಗಾದರು ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

    ಆರೋಪಿಯ ಮಾತಿಗೆ ಹೆದರಿದ ಬಾಲಕಿ ತನ್ನ ಮೇಲೆ ನಡೆದ ಕೃತ್ಯವನ್ನು ಯಾರಿಗೂ ತಿಳಿಸದೆ ತೆರಳಿದ್ದಳು. ಆದರೆ ಮತ್ತೊಮ್ಮೆ ಆರೋಪಿ ದಾರಿಯಲ್ಲಿ ಅಡ್ಡಗಡ್ಡಿ ಜೊತೆ ಬರುವಂತೆ ಒತ್ತಾಯ ಮಾಡಿದ್ದನು. ಇದಾದ ಬಳಿಕ ಬಾಲಕಿ ಧೈರ್ಯ ಮಾಡಿ ನಡೆದ ಘಟನೆಯನ್ನು ತಾಯಿಗೆ ತಿಳಿಸಿದ್ದಳು. ಮಗಳ ಮೇಲೆ ನಡೆದ ಕೃತ್ಯದ ಕುರಿತು ಕೇಳಿ ಅತಂಕಗೊಂಡ ತಾಯಿ ಆರೋಪಿಯನ್ನು ಪೊಲೀಸರ ಬಲೆಗೆ ಬೀಳುವಂತೆ ಮಾಡುಲು ಪ್ಲಾನ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಲ್ಲದೇ ಎಂದಿನಂತೆ ಮಗಳಿಗೆ ಶಾಲೆಗೆ ತೆರಳುವಂತೆ ಹೇಳಿದ್ದಾರೆ.

    ಶಾಲೆಗೆ ತೆರಳುತ್ತಿದ್ದ ಬಾಲಕಿ ಬಳಿ ಬಂದ ಆರೋಪಿ ಮತ್ತೆ ಆಕೆಯನ್ನು ಬಲವಂತವಾಗಿ ಬೈಕ್ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆರೋಪಿಯನ್ನು ಹಿಂಬಾಲಿಸಿದ ಬಾಲಕಿ ತಾಯಿ ಪೊಲೀಸರಿಗೆ ಮಾಹಿತಿ ನೀಡಿ ರೆಡ್ ಹ್ಯಾಂಡ್ ಆಗಿ ಹಿಡಿದು ಒಪ್ಪಿಸಿದ್ದಾರೆ.

    ಈ ಘಟನೆ ಕುರಿತು ಆರೋಪಿ ಸಮೀರ್ ಖಾನ್ ವಿರುದ್ಧ ಅಪಹರಣ, ಕಿರುಕುಳ, ಅತ್ಯಾಚಾರ ಆರೋಪದ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

  • ತಾಯಿಯನ್ನೇ ಕೊಲೆಗೈದು ಶೌಚಾಲಯ ಗುಂಡಿಯಲ್ಲಿ ಹೂತಿಟ್ಟ ಪಾಪಿ ಮಗ!

    ತಾಯಿಯನ್ನೇ ಕೊಲೆಗೈದು ಶೌಚಾಲಯ ಗುಂಡಿಯಲ್ಲಿ ಹೂತಿಟ್ಟ ಪಾಪಿ ಮಗ!

    ರಾಮನಗರ: ಕುಟುಂಬದಲ್ಲಿ ಜಮೀನು ವಿಚಾರವಾಗಿ ಉಂಟಾದ ಕಲಹದಲ್ಲಿ ಪುತ್ರನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿ ಶವವನ್ನು ಶೌಚಾಲಯದ ಗುಂಡಿಯಲ್ಲಿ ಹೂತಿಟ್ಟ ಘಟನೆ ಚನ್ನಪಟ್ಟಣ ತಾಲೂಕಿನ ನಾಗವಾರ ಗ್ರಾಮದಲ್ಲಿ ನಡೆದಿದೆ.

    ನಾಗವಾರ ಗ್ರಾಮದ ನಾಗಮ್ಮ (70) ಕೊಲೆಯಾದ ದುರ್ದೈವಿ. ಸುರೇಶ್ ಹೆತ್ತತಾಯಿಯನ್ನು ಕೊಂದ ಪಾಪಿ ಮಗ. ಕಳೆದ ಮೂರು ದಿನಗಳ ಹಿಂದೆಯೇ ಸುರೇಶ್ ತನ್ನ ತಾಯಿಯನ್ನು ಕೊಲೆ ಮಾಡಿ ಮನೆಯ ಹಿಂದಿನ ಶೌಚಾಲಯದ ಗುಂಡಿಯೊಳಗೆ ಹಾಕಿ ಮುಚ್ಚಿದ್ದಾನೆ.

    ಮೃತ ಮಹಿಳೆ ನಾಗಮ್ಮಳ ಹೆಸರಿನಲ್ಲಿ 10 ಗುಂಟೆ ಜಮೀನು ಇದ್ದು, ಅದನ್ನ ತನ್ನ ಹೆಸರಿಗೆ ಬರೆದುಕೊಡುವಂತೆ ಮಗ ಸುರೇಶ್ ಪದೇ ಪದೇ ತಾಯಿಯ ಜೊತೆ ಜಗಳ ಮಾಡುತ್ತಿದ್ದನು. ಆದರೆ ಮೂರು ದಿನಗಳ ಹಿಂದೆ ಕುಡಿದು ಬಂದ ಆರೋಪಿ ಸುರೇಶ್ ಮತ್ತೆ ಜಮೀನು ವಿಚಾರವಾಗಿ ಗಲಾಟೆ ನಡೆಸಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಾಯಿ ನಾಗಮ್ಮರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಶೌಚಾಲಯದ ಗುಂಡಿಯಲ್ಲಿ ಶವವನ್ನ ಮುಚ್ಚಿ ಏನು ತಿಳಿಯದಂತೆ ನಾಟಕವಾಡಿದ್ದಾನೆ.

    ಘಟನೆ ಸಂಬಂಧ ಸ್ಥಳಕ್ಕೆ ಎಂಕೆ ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಲೂಕು ಅಧಿಕಾರಿಗಳ ಅನುಮತಿ ಪಡೆದು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ತಯಾರಿ ನಡೆಸಿದ್ದಾರೆ.

     

  • 8 ದಿನಗಳಿಂದ ಆಹಾರವಿಲ್ಲದೇ ಮೂವರು ಮುಗ್ಧ ಹೆಣ್ಣು ಮಕ್ಕಳ ದುರ್ಮರಣ!

    8 ದಿನಗಳಿಂದ ಆಹಾರವಿಲ್ಲದೇ ಮೂವರು ಮುಗ್ಧ ಹೆಣ್ಣು ಮಕ್ಕಳ ದುರ್ಮರಣ!

    ನವದೆಹಲಿ: ಮೂವರು ಮುಗ್ಧ ಹೆಣ್ಣು ಮಕ್ಕಳು 8 ದಿನಗಳಿಂದ ಆಹಾರವಿಲ್ಲದೇ ಮೃತಪಟ್ಟ ದಾರುಣ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಮಕ್ಕಳು 8, 4 ಹಾಗೂ ಎರಡು ವರ್ಷದವರಾಗಿದ್ದಾರೆ. ಮಕ್ಕಳು ಹೇಗೆ ಸಾವನ್ನಪ್ಪಿವೆ ಅಂತ ಪೊಲೀಸರು ಕೇಳಿದಾಗ `ನನಗೆ ಆಹಾರ ನೀಡಿ’ ಅಂತ ಮಕ್ಕಳ ತಾಯಿ ಹೇಳಿ ಕುಸಿದು ಬಿದ್ದಿದ್ದಾರೆ.

    ಮಂಗಳವಾರ ಬೆಳಗ್ಗೆ ತಾಯಿ ಮೂವರು ಮಕ್ಕಳೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಕ್ಕಳ ತಾಯಿಯನ್ನು ಪ್ರಶ್ನಿಸಿದ್ದಾರೆ. ಮಕ್ಕಳು ಹೇಗೆ ಮೃತಪಟ್ಟಿದ್ದಾರೆ ಅಂದಾಗ `ನನಗೆ ಆಹಾರ ನೀಡಿ’ ಅಂತ ಹೇಳಿ ತಾಯಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ.

    ಕಳೆದ 8 ದಿನಗಳಿಂದ ಮಕ್ಕಳು ಆಹಾರವನ್ನೇ ಸೇವಿಸಿಲ್ಲ. ಈ ವಿಚಾರ ತಿಳಿದ ವೈದ್ಯರೇ ಒಂದು ಬಾರಿ ಶಾಕ್ ಆಗಿದ್ದಾರೆ. ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿದ ವೇಳೆ, ಅವುಗಳ ಹೊಟ್ಟೆ ಸಂಪೂರ್ಣವಾಗಿ ಖಾಲಿಯಾಗಿದ್ದು, ಅಪೌಷ್ಟಿಕತೆಯಿಂದ ಕೂಡಿತ್ತು ಅಂತ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಅಮಿತ್ ಸೆಕ್ಸೇನಾ ತಿಳಿಸಿದ್ದಾರೆ.

    15 ವರ್ಷದ ನನ್ನ ವೈದ್ಯಕೀಯ ಜೀವನದಲ್ಲಿ ಇಂತಹ ಪ್ರಕರಣವನ್ನು ನಾನು ಕಂಡಿಲ್ಲ ಅಂತ ಆಸ್ಪತ್ರೆಯ ಮತ್ತೊಬ್ಬ ವೈದ್ಯರು ತಿಳಿಸಿದ್ದಾರೆ. ಒಟ್ಟಿನಲ್ಲಿ ದೇಶದ ಆದಾಯದಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಧಾನಿಯಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ ಅಂದ್ರೆ ಅಚ್ಚರಿಯ ಸಂಗತಿಯಾಗಿದೆ.

    ಬಂಗಾಳದ 5 ಮಂದಿಯ ಕುಟುಂಬ ಶನಿವಾರ ಪೂರ್ವ ದೆಹಲಿಯ ಮಂಡವಳಿಗೆ ತೆರಳಿತ್ತು. ಮಕ್ಕಳ ತಂದೆಯ ಗೆಳೆಯನ ಮನೆಗೆ ಬಂದಿದ್ದರು ಅಂತ ನೆರೆಮನೆಯವರು ತಿಳಿಸಿದ್ದಾರೆ. ಮಕ್ಕಳ ತಂದೆ ಕೈಗಾಡಿ ಎಳೆಯುತ್ತಿದ್ದು, ಘಟನೆಯ ಬಳಿಕ ನಾಪತ್ತೆಯಾಗಿದ್ದಾರೆ. ಆತ ಕೆಲಸ ಹುಡುಕಿಕೊಂಡು ಹೋಗಿದ್ದು, ಒಂದೆರೆಡು ದಿನಗಳಲ್ಲಿ ಹಿಂದಿರುಗಿ ಬರಬಹುದು. ಯಾಕಂದ್ರೆ ಅವರ ಕೈ ಗಾಡಿ ಇತ್ತೀಚೆಗೆ ಕಳೆದುಹೋಗಿದ್ದು, ಹೀಗಾಗಿ ಅವರು ಬೇರೆ ಕೆಲಸ ಹುಡುಕುತ್ತಿದ್ದಾರೆ ಅಂತ ನೆರೆಮನೆಯವರು ಹೇಳುತ್ತಿದ್ದಾರೆ. ಸದ್ಯ ಮೂವರು ಮಕ್ಕಳನ್ನು ಕಳೆದುಕೊಂಡಿರುವ ತಾಯಿ ಮಾತ್ರ ಮಾನಸಿಕ ಅಸ್ವಸ್ಥೆಯಂತೆ ವರ್ತಿಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಟುಂಬ ಕಳೆದ ಮೂರು ದಿನಗಳಿಂದ ವಾಸಿಸುತ್ತಿದ್ದ ಕೊಠಡಿಯನ್ನು ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದಾಗ ಕೆಲ ಔಷಧಿಗಳ ಬಾಟಲ್ ಗಳು ಮತ್ತು ಬೇರೆ ಸ್ವಲ್ಪ ಮಾತ್ರೆಗಳು ಇರುವುದು ಬೆಳಕಿಗೆ ಬಂದಿದೆ. ಮೂವರಲ್ಲಿ ಇಬ್ಬರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ ಇದರಲ್ಲಿ ಯಾರು ಅನಾರೋಗ್ಯದಲ್ಲಿದ್ದರು ಎಂಬುದಾಗಿ ತಿಳಿದುಬಂದಿಲ್ಲ. ಒಟ್ಟಿನಲ್ಲಿ ಶಾಲೆಗೆ ಹೋಗುತ್ತಿದ್ದವರಲ್ಲಿ ಇಬ್ಬರು ಶಾಲೆಯಲ್ಲಿನ ಬಿಸಿಯೂಟ ತಿಂದು ಅನಾರೋಗ್ಯಕ್ಕೀಡಾಗಿದ್ದಾರೆ ಅಂತ ತಿಳಿಸಿದ್ದಾರೆ.

    ಘಟನೆಯ ಬಳಿಕ ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರು ಕುಟುಂಬಕ್ಕೆ ಭೇಟಿ ನೀಡಿ ಆಡಳಿತ ಪಕ್ಷ ಆಮ್ ಆದ್ಮಿ ವಿರುದ್ಧ ಕಿಡಿಕಾರಿದ್ದಾರೆ. ಇದೊಂದು ದೊಡ್ಡ ನಾಚಿಕೆಗೇಡಿನ ಸಂಗತಿಯಾಗಿದೆ. ಈ ವಿಚಾರದಲ್ಲಿ ರಾಜಕೀಯವನ್ನು ತರಲು ನಾನು ಇಷ್ಟಪಡುವುದಿಲ್ಲ. ಯಾಕಂದ್ರೆ ಉತ್ತಮ ಗುಣಮಟ್ಟದ ಆಹಾರವನ್ನು ಕಡಿಮೆ ಬೆಲೆಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿದೆ. ಇಂತಹ ಆಹಾರವನ್ನು ನಾಗರಿಕರಿಗೆ ನೀಡುವುದು ದೆಹಲಿ ಸರ್ಕಾರ ಜವಾಬ್ದಾರಿಯಾಗಿದೆ ಅಂತ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ.

    ಕೆಲ ವರ್ಷದ ಹಿಂದೆ ಮನೆ ಬಾಗಿಲಿಗೆ ಹೋಗಿ ಪಡಿತರ ನೀಡಲಾಗುತ್ತಿತ್ತು, ಆದ್ರೆ ಇದೀಗ ಅದು ನಿಂತಿದೆ. ಇದನ್ನು ನಿಲ್ಲಿಸಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಅಂತ ಆಪ್ ಮುಖಂಡ ಸಂಜಯ್ ಶರ್ಮ ಆಗ್ರಹಿಸಿದ್ದಾರೆ.

  • ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಸುನಿತಾ ಎ.ಎನ್.

    ರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವ ಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ. ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ.

    ಏನು ತಿನ್ನಬೇಕು? ಏನು ತಿನ್ನಬಾರದು? ಎಂಬುದಾಗಿ ಪಟ್ಟಿ ಮಾಡಿ ಆ ರೀತಿಯೇ ಸೇವಿಸಬೇಕು. ನಿಮಗಿಷ್ಟವಿದ್ದರೂ ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಕೆಲವು ಆಹಾರಗಳನ್ನು ಕೆಲವೊಂದು ಚಟುವಟಿಕೆಗಳನ್ನು ನೀವು ಮಾಡಲೇಬಾರದು. ವೈದ್ಯರ ಸಲಹೆಯನ್ನು ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಪಡೆದುಕೊಳ್ಳುತ್ತಿರಬೇಕಾಗುತ್ತದೆ.

    ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮಗೆ ತಿಳಿಯದಂತೆ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಈ ಸಮಯದಲ್ಲಿ ಮನೆಯ ಇತರ ಸದಸ್ಯರುಗಳಿಗಿಂತ ಹೆಚ್ಚಾಗಿ ನೀವು ನಿಮ್ಮ ಗರ್ಭದೊಳಗಿರುವ ಕಂದನಿಗೆ ಹೆಚ್ಚಿನ ಅಸ್ಥೆ ಕಾಳಜಿಯನ್ನು ನೀಡಬೇಕಾಗುತ್ತದೆ. ನಿಮ್ಮ ಆಹಾರದ ಕಡೆಗೆ ಗಮನ ಹರಿಸುವುದರ ಜೊತೆಗೆ ಮದ್ಯಪಾನ, ಧೂಮಪಾನ, ಹೆಚ್ಚಿನ ಕೆಫೀನ್ ಅಂಶಗಳ ಸೇವನೆಯನ್ನು ನೀವು ತ್ಯಜಿಸಬೇಕಾಗುತ್ತದೆ. ಇದರೊಂದಿಗೆ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನೀವು ಮಾಡುತ್ತಿದ್ದಲ್ಲಿ ಅದಕ್ಕೆಲ್ಲಾ ಪೂರ್ಣ ವಿರಾಮ ಇಡುವ ಸಮಯ ಇದಾಗಿದೆ. ಹೀಗಾಗಿ ಇಲ್ಲಿ ನಿಮ್ಮ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ನೀವು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ಮಗುವಿನ ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬೇಕು?

    1. ಸಾಹಸ ಕ್ರಿಯೆಗಳಲ್ಲಿ ಭಾಗವಹಿಸುವುದು ಅಮ್ಯೂಸ್‍ಮೆಂಟ್ ಪಾರ್ಕ್ ಗಳಲ್ಲಿ ಸಾಹಸ ಕ್ರೀಡೆಗಳು, ಏರುವುದು, ಹತ್ತುವುದು, ನೀರಾಟ ಮೊದಲಾದ ಚಟುವಟಿಕೆಗಳಿರುತ್ತವೆ. ನಿಮ್ಮ ಗರ್ಭಾವಸ್ಥೆಯಲ್ಲಿ ಇಂತಹ ಕ್ರಿಯೆಗಳನ್ನು ನೀವು ಮಾಡಲೇಬಾರದು. ರೋಲರ್ ಕೋಸ್ಟರ್ ಸವಾರಿ, ನೀರಿನಾಟ ಮತ್ತು ಒಮ್ಮೆಲೆ ನಿಲ್ಲುವಿಕೆಗಳನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಮಾಡಬೇಡಿ. ಇದರಿಂದ ಗರ್ಭಪಾತ ಅಥವಾ ನಿಮ್ಮ ಮಗುವಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

    2. ಕ್ರೀಡೆಗಳಲ್ಲಿ ಭಾಗವಹಿಸದಿರಿ ಎಲ್ಲಾ ರೀತಿಯ ಕ್ರೀಡೆಗಳು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚು ಹಾನಿಕಾರಕವಾಗಿರುತ್ತವೆ. ಕ್ರೀಡೆಗಳಲ್ಲಿ ಭಾಗವಹಿಸದಿರಿ. ಫುಟ್‍ಬಾಲ್, ಕ್ರಿಕೆಟ್ ಮತ್ತು ವಾಲಿಬಾಲ್‍ನಂತಹ ಕ್ರೀಡೆಗಳನ್ನು ಗರ್ಭಾವಸ್ಥೆಯಲ್ಲಿ ಆಡಲೇಬಾರದು.

    3. ಸೈಕಲ್ ಸವಾರಿ ಮಾಡಬೇಡಿ. ಮೂರನೇ ತ್ರೈಮಾಸಿಕದಲ್ಲಿ ನಿಮಗೆ ಸೈಕಲ್ ಸವಾರಿಯ ಹುಚ್ಚಿದ್ದರೂ ಈ ಕ್ರಿಯೆಗೆ ಇಳಿಯಬೇಡಿ. ಸೈಕಲ್ ಸವಾರಿ ಮಾಡುವಾಗ ಸೈಕಲ್ ನಿರ್ವಹಣೆಯನ್ನು ಮಾಡುವುದು ಗರ್ಭಕ್ಕೆ ದುಷ್ಪರಿಣಾಮವನ್ನುಂಟು ಮಾಡಬಹುದು. ಅದಲ್ಲದೆ ನೀವು ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುವ ಸಾಧ್ಯತೆ ಕೂಡ ಇರುತ್ತದೆ.

    5. ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಗರ್ಭಾವಸ್ಥೆಯಲ್ಲಿ ಸಕ್ರಿಯರಾಗಿರುವುದು ಒಳ್ಳೆಯ ವಿಷಯವೇ. ಆದರೆ ಈ ಸಮಯದಲ್ಲಿ ಯಾವುದೇ ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಹೊಟ್ಟೆಯ ಮೇಲೆ ಮಲಗಿ ಮಾಡುವ ವ್ಯಾಯಾಮಗಳನ್ನು ಅನುಸರಿಸದಿರಿ. ಹೆಚ್ಚು ನೋವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

    6. ಬಿಸಿ ಬಿಸಿ ನೀರಿನ ಸ್ನಾನ ಮಾಡದಿರಿ. ಹಾಟ್ ಟಬ್‍ನಲ್ಲಿ ಸ್ನಾನ ಮಾಡುವುದು ಅನಾರೋಗ್ಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಮಗುವಿನ ಆರೋಗ್ಯದ ಮೇಲೆ ಇದು ಹಾನಿಯನ್ನುಂಟು ಮಾಡಬಹುದು. ಸೌನಾ ಅಥವಾ ಹಾಟ್ ಬಾತ್ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನು ಉಂಟು ಮಾಡಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಉಗುರು ಬೆಚ್ಚಗಿನ ನೀರಿನ ಸ್ನಾನ ಉತ್ತಮ.

    7. ಜಾಗಿಂಗ್ ಬೇಡ ಎರಡನೆಯ ಮತ್ತು ಮೂರನೆಯ ಮಾಸಿಕದಲ್ಲಿ ಓಡುವುದು, ನೆಗೆಯುವುದು ಮೊದಲಾದ ಕ್ರಿಯೆಗಳನ್ನು ಮಾಡಬೇಡಿ. ಓಟದಲ್ಲಿ ಹೆಚ್ಚಿನ ನಿಯಂತ್ರಣ ಬೇಕಾಗಿರುತ್ತದೆ ಈ ಸಮಯದಲ್ಲಿ ನಮ್ಮ ದೇಹ ಒಗ್ಗುವುದಿಲ್ಲ. ಆದ್ದರಿಂದ ಓಡುವುದನ್ನು ಮಾಡದಿರಿ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

    8. ಯೋಗ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹಾಗೆಂದ ಮಾತ್ರಕ್ಕೆ ಯೋಗದಲ್ಲಿ ಕಷ್ಟದ ಭಂಗಿಗಳನ್ನು ಅಭ್ಯಸಿಸಬೇಡಿ. ಗರ್ಭಾವಸ್ಥೆಯಲ್ಲಿ ನೀವು ಯೋಗವನ್ನು ಮಾಡದಿರಿ. ಆದರೆ ಕಷ್ಟವಾಗಿರುವ ಭಂಗಿಗಳನ್ನು ಮಾಡದಿರಿ.

    9. ಮನೆಯ ಸ್ವಚ್ಛತೆ ಮಾಡದಿರಿ. ಗರ್ಭಾವಸ್ಥೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುವುದು ಸರಳ ಹೆರಿಗೆಗೆ ಅನುಕೂಲವಾಗಿರುತ್ತದೆ. ಆದರೆ ಮನೆಗೆಲಸ ಮಾಡುವಾಗ ಎತ್ತುವುದು, ಎಳೆಯುವುದು ಮೊದಲಾದ ಕೆಲಸಗಳನ್ನು ಮಾಡದಿರಿ. ಮನೆಯ ಇತರ ಸದಸ್ಯರು ಈ ಕೆಲಸಗಳನ್ನು ಮಾಡುತ್ತಾರೆ. ನೀವು ಆದಷ್ಟು ನಿಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ನೀಡಬೇಕು. ಅದರಲ್ಲೂ ಮನೆಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅತಿ ಹೆಚ್ಚಾಗಿ ಬಗ್ಗುವಂತಹ ಕೆಲಸಗಳನ್ನು ಮಾಡಕೂಡದು. ಏಕೆಂದರೆ ಈ ಪರಿ ಬಗ್ಗುವುದರಿಂದ (sciatic nerve) ಅಥವಾ ಬೆನ್ನುಮೂಳೆಯ ಕೆಳಭಾಗದಿಂದ ಕಾಲಿಗೆ ಧಾವಿಸುವ ನರದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಈ ನರವನ್ನು ಘಾಸಿಗೊಳಿಸಬಹುದು.

    10. ಕೆಲವರಿಗೆ ಕುದುರೆ ಸವಾರಿ ಮಾಡುವ ಅಭ್ಯಾಸವಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಕುದುರೆ ಸವಾರಿ ಮಾಡುವುದು ನಿಮ್ಮ ಗರ್ಭಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು.

    11. ಹೈಕಿಂಗ್ ನಮ್ಮ ದೇಹಕ್ಕೆ ಉತ್ತಮ ಚಟುವಕೆಯನ್ನು ನೀಡುವ ಕ್ರಿಯೆಯಾಗಿದೆ ಹೈಕಿಂಗ್. ಆದರೆ ಹೈಕಿಂಗ್ ಸಮಯದಲ್ಲಿ ನೀವು ಬೀಳುವ, ಏಟು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ಹಾನಿಯುಂಟಾಗುವುದು ಹೆಚ್ಚು.

    12. ಗುಡಿಸುವುದು, ಬಟ್ಟೆ ಒಣಗಿಸುವುದು ಇವುಗಳನ್ನೆಲ್ಲಾ ಮಾಡಬೇಡಿ. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಗರ್ಭಾವಸ್ಥೆಯಲ್ಲಿ ದೇಹದ ಪ್ರಮುಖ ಗಂಟುಗಳು ಮತ್ತು ಮಡಚುವ ಮೂಳೆಗಳ ಭಾಗಗಳು ಕೊಂಚ ಮೆತ್ತಗಾಗುತ್ತವೆ. ಆದ್ದರಿಂದ ಇತರ ಸಮಯದಲ್ಲಿ ಸುಲಭವಾಗುತ್ತಿದ್ದ ಕೆಲಸಗಳು ಈಗ ಕಷ್ಟವಾಗುತ್ತವೆ. ಆದ್ದರಿಂದ ಈ ಕೆಲಸಗಳಿಗೆಲ್ಲಾ ಮನೆಯವರ ಅಥವಾ ಕೆಲಸದವರ ಸಹಾಯ ಪಡೆಯುವುದು ಒಳ್ಳೆಯದು. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಮೊದಲಾದ ಕೆಲಸಗಳಿಗೆ ಸಹಾಯ ಪಡೆದುಕೊಳ್ಳುವುದೇ ಜಾಣತನವಾಗಿದೆ.

     

    13. ಬೆಕ್ಕಿನ ಸಂಗ ಬಿಟ್ಟು ಬಿಡಿ! ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಕಿರುವ ಬೆಕ್ಕು ಇದ್ದರೆ ಬೆಕ್ಕಿನ ಸಂಗ ಈ ಸಮಯದಲ್ಲಿ ಸಲ್ಲದು. ವಿಶೇಷವಾಗಿ ಬೆಕ್ಕಿನ ಮಲವನ್ನು ಸ್ವಚ್ಛಗೊಳಿಸುವುದಿರಲಿ, ಬಳಿಗೂ ಸುಳಿಯಕೂಡದು. ಏಕೆಂದರೆ ಇದರಲ್ಲಿ ಕೆಲವು ಪರಾವಲಂಬಿ ಕ್ರಿಮಿಗಳಿದ್ದು ಗರ್ಭಿಣಿಗೆ ಮಾರಕವಾಗುತ್ತವೆ. ಅಷ್ಟೇ ಅಲ್ಲ, ಬೆಕ್ಕಿನ ಕೂದಲು ಯಾವುದೇ ಕಾರಣಕ್ಕೂ ಆಹಾರ ಅಥವಾ ನೀರಿನ ಮೂಲಕ ದೇಹ ಪ್ರವೇಶಿಸಬಾರದು. ಇದು ಭಾರೀ ಅಲರ್ಜಿಕಾರಕವಾಗಿದ್ದು ಗರ್ಭಿಣಿಯ ಆರೋಗ್ಯವನ್ನು ಕೆಡಿಸಬಹುದು.

    ಧ್ಯಾನ ಮಾಡಿ
    * ನಿಮಗೆ ಆರಾಮವೆನಿಸುವ ಭಂಗಿಯಲ್ಲಿ ಚಕ್ಕಲೆಮಕ್ಕಲೆ ಕುಳಿತುಕೊಳ್ಳಿ. ಆರಾಮ ಅನ್ನಿಸದಿದ್ದರೆ ಕುರ್ಚಿಯ ಮೇಲೂ ಕುಳಿತುಕೊಳ್ಳಹುದು. ಸಾಧ್ಯವಾದಷ್ಟು ಬೆನ್ನುಮೂಳೆ ನೆಟ್ಟಗೇ ಇರಲಿ.
    * ಮನಸ್ಸು ಸೆಳೆಯುವ ಯಾವುದೇ ವಸ್ತು ಎದುರಿಗಿರದಂತೆ ನೋಡಿಕೂಳ್ಳಿ. ಕಣ್ಣುಮುಚ್ಚಿಕೊಂಡು ನಿಮ್ಮ ಗಮನವನ್ನು ಒಂದು ವಿಷಯದತ್ತ ಕೇಂದ್ರೀಕರಿಸಿ.
    * ಈ ಸಮಯದಲ್ಲಿ ಕೇವಲ ಧನಾತ್ಮಕ ವಿಚಾರಗಳು ಆವರಿಸಲಿ. ಉದಾಹರಣೆಗೆ ನನಗೆ ಹುಟ್ಟಲಿರುವ ಮಗು ಉತ್ತಮ ವ್ಯಕ್ತಿಯಾಗಿದ್ದು ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪಡೆಯುತ್ತಾನೆ/ತ್ತಾಳೆ ಇತ್ಯಾದಿ.
    * ಪ್ರತಿದಿನ ಒಂದೇ ಸಮಯವನ್ನು ಆಯ್ದುಕೊಂಡು ಆ ಪ್ರಕಾರವೇ ಅನುಸರಿಸಿ. ಇದರಿಂದ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ ಮುಂದಿನ ಜೀವನದಲ್ಲಿಯೂ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.

    ಗರ್ಭಪಾತದ ಸಾಧ್ಯತೆ:
    ಗರ್ಭಾವಸ್ಥೆಯಲ್ಲಿ ಉಂಟಾಗುವ ಒತ್ತಡವು ಗರ್ಭಕೋಶದಲ್ಲಿ ರಾಸಾಯನಿಕ ಹಾನಿಯನ್ನುಂಟುಮಾಡುವುದು ಎಂದು ವೈದ್ಯರು ಹೇಳುತ್ತಾರೆ. ಒತ್ತಡ ಉಂಟಾದಾಗ ಕಾರ್ಟಿಕೋಟ್ರೋಪಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುವುದು. ಈ ಹಾರ್ಮೋನ್‍ಗಳ ಬದಲಾವಣೆಯಿಂದ ಗರ್ಭಕೋಶದಲ್ಲಿ ಅಧಿಕ ಸಂಕೋಚನವನ್ನು ಉಂಟುಮಾಡುವುದು. ಇದು ಬಹುತೇಕ ಸಂದರ್ಭದಲ್ಲಿ ಗರ್ಭವನ್ನು ಕುಗ್ಗಿಸುವುದು ಅಥವಾ ಗರ್ಭಪಾತಕ್ಕೆ ಕಾರಣವಾಗುವುದು. ಹಾಗಾಗಿ ಬಾಹ್ಯ ಪರಿಸ್ಥಿತಿ ಹೇಗೇ ಇರಲಿ, ನಿಮ್ಮ ಮಗುವಿನ ಬೆಳವಣಿಗೆ ಉತ್ತಮವಾಗಿರಬೇಕು ಎಂದು ನೀವು ಬಯಸುವುದಾದರೆ ಒತ್ತಡದಿಂದ ದೂರ ಇರಲು ಪ್ರಯತ್ನಿಸಿ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಹೇಗಿರಬೇಕು ಎನ್ನುವುದರ ಕುರಿತು ಚಿಂತಿಸಿ.

    ಭ್ರೂಣದ ಮೆದುಳು ಬೆಳವಣಿಗೆ:
    ತಾಯಿಯಲ್ಲಾಗುವ ಒತ್ತಡವು ಮಗುವಿನ ಮಿದುಳು ಬೆಳವಣಿಗೆಯ ಮೇಲೆ ನೇರವಾದ ಪ್ರಭಾವ ಉಂಟಾಗುವುದು ಎಂದು ವೈದ್ಯರು ಹೇಳುತ್ತಾರೆ. ಇದು ಮಗುವಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಮಗುವಿನ ಮೆದುಳಿನ ಮೇಲೆ ಉಂಟಾದ ಪ್ರಭಾವಗಳು ಮಗು ಹುಟ್ಟಿದ ತಕ್ಷಣ ತಿಳಿಯದು. ದಿನಕಳೆದಂತೆ ಮಗುವಿನ ಬೆಳವಣಿಗೆ ನಡೆಯುವುದು. ಆಗ ಸಮಸ್ಯೆಗಳನ್ನು ಗುರುತಿಸಬಹುದು. ಇಂತಹ ಮಕ್ಕಳಲ್ಲಿ ಅಧಿಕ ರಕ್ತದ ಒತ್ತಡದಂತಹ ಅಪಾಯ ಉಂಟಾಗಬಹುದು. ಮಕ್ಕಳಲ್ಲಿ ಮಾನಸಿಕ ಬದಲಾವಣೆಗಳು ಚಿಂತನೀಯ ರೀತಿಯಲ್ಲಿ ಉಂಟಾಗುವುದು. ಅಲ್ಲದೆ ಮಕ್ಕಳು ಬೆಳವಣಿಗೆ ಹೊಂದಿದ ನಂತರ ಜೀವನದಲ್ಲೂ ಬಹುಬೇಗ ಅಧಿಕ ಒತ್ತಡಕ್ಕೆ ಒಳಗಾಗುವ ಮಾನಸಿಕ ಶಕ್ತಿಯನ್ನು ಪಡೆದುಕೊಳ್ಳುವರು.

  • ಸಿಲಿಕಾನ್ ಸಿಟಿಯ `ಅಮ್ಮಂದಿರಿಗೆ’ ಇದು ಶಾಕಿಂಗ್ ಸುದ್ದಿ!

    ಸಿಲಿಕಾನ್ ಸಿಟಿಯ `ಅಮ್ಮಂದಿರಿಗೆ’ ಇದು ಶಾಕಿಂಗ್ ಸುದ್ದಿ!

    ಬೆಂಗಳೂರು: ನಗರದ ಅಮ್ಮಂದಿರಿಗೆ ಶಾಕಿಂಗ್ ಸುದ್ದಿ. ತಾಯ್ತನದ ಸಂಭ್ರಮದಲ್ಲಿರುವವರಿಗೆ ಅರಗಿಸಿಕೊಳ್ಳಲಾರದ ಕಹಿಯನ್ನು ವೈದ್ಯಲೋಕ ಹೊರಹಾಕಿದೆ.

    ನವಮಾಸ ಕಂದಮ್ಮಗಳು ಗರ್ಭದಲ್ಲಿ ನಿಲ್ಲುತ್ತಿಲ್ಲ, ಗ್ರಾಮೀಣ ಭಾಗಕ್ಕಿಂತ ಸಿಟಿಭಾಗದಲ್ಲಿಯೇ ಅವಧಿಪೂರ್ವ ಹೆರಿಗೆ ಪ್ರಕರಣ ಹೆಚ್ಚಾಗುತ್ತಿದೆ. ಅವಧಿ ಪೂರ್ವ ಹುಟ್ಟಿದ ಮಕ್ಕಳು ಕೇವಲ 600 ರಿಂದ 800 ಗ್ರಾಂ ಇರೋದ್ರಿಂದ ಬದುಕುವ ಸಾಧ್ಯತೆಯೂ ಕಡಿಮೆ. ಹೀಗಾಗಿ ಆತ್ಯಾಧುನಿಕ ತಂತ್ರಜ್ಞಾನಗಳು ಇದ್ರೂ ಖರ್ಚುವೆಚ್ಚವನ್ನು ಭರಿಸೋದು ಕಷ್ಟ ಅನ್ನುವಂತಾಗಿದೆ. ಇದನ್ನೂ ಓದಿ: 375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    ಮಹಿಳೆಯರಲ್ಲಿ ಹೆಚ್ಚುತ್ತಿರುವ ಧೂಮಪಾನ, ಮದ್ಯಪಾನ, ಒತ್ತಡ ಸೇರಿದಂತೆ ಬದಲಾದ ಜೀವನ ಶೈಲಿ ಈ ಅವಧಿಪೂರ್ವ ಹೆರಿಗೆಗೆ ಕಾರಣವಾಗಿದೆ. ಹತ್ತರಲ್ಲಿ ಎರಡರಿಂದ ಮೂರು ಹೆರಿಗೆ ಅವಧಿಪೂರ್ವವೇ ಆಗುತ್ತಿದ್ದು, ವೈದ್ಯಲೋಕಕ್ಕೆ ಕೊಂಚ ಸವಾಲಾಗಿದೆ ಅಂತ ಫೋರ್ಟಿಸ್ ಫೆಮಿನಾ ಆಸ್ಪತ್ರೆ ಮುಖ್ಯಸ್ಥೆ ಡಾ ಪ್ರತಿಮಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಅಕ್ರಮ ಸಂಬಂಧ ಕಣ್ಣಾರೆ ಕಂಡ ಮಗನನ್ನೇ ಕೊಂದಳು ಪಾಪಿ ತಾಯಿ!

    ಅಕ್ರಮ ಸಂಬಂಧ ಕಣ್ಣಾರೆ ಕಂಡ ಮಗನನ್ನೇ ಕೊಂದಳು ಪಾಪಿ ತಾಯಿ!

    ಚಿಕ್ಕಬಳ್ಳಾಪುರ: ಪ್ರಿಯಕರನ ಜೊತೆ ಚಕ್ಕಂದವಾಡುತ್ತಿದ್ದ ದೃಶ್ಯವನ್ನ ಕಣ್ಣಾರೆ ಕಂಡ ಮಗನನ್ನ ಪ್ರಿಯಕರನ ಜೊತೆ ಸೇರಿ ಹೆತ್ತ ತಾಯಿಯೇ ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಬೆಳಕಿಗೆ ಬಂದಿದೆ.

    ಸುದೀಪ್(7) ಹೆತ್ತ ತಾಯಿಯ ಕೈಯಲ್ಲೇ ಹತ್ಯನಾಗಿರುವ ಬಾಲಕ. ಭವಾನಿ ಪ್ರಿಯಕರನ ಜೊತೆ ಸೇರಿ ಹೆತ್ತ ಮಗನನ್ನೇ ಕೊಲೆ ಮಾಡಿದ ಪಾಪಿ ತಾಯಿ. ಜೂನ್ 30 ರಂದು ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಖಾಸಗಿ ಬಸ್ ಕಂಡಕ್ಟರ್ ಪ್ರಕಾಶ್ ಹಾಗೂ ಭವಾನಿಯ ದಂಪತಿಯ 7 ವರ್ಷದ ಮಗ ಸುದೀಪ್ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ.

    ಬಾಲಕನ ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಕಲೆಗಳಿದ್ದ ಕಾರಣ ವೈದ್ಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ರು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಕೊನೆಗೆ ಹೆತ್ತ ತಾಯಿಯೇ ಕೊಲೆಗಾರ್ತಿ ಅನ್ನೋದನ್ನ ಬಯಲು ಮಾಡಿದ್ದಾರೆ.

    ಜೂನ್ 30 ರಂದು ತಾಯಿ ಭವಾನಿ ತನ್ನ ಪ್ರಿಯಕರ ಗಾರೆ ಮೇಸ್ತ್ರಿ ಮುರುಗಮಲ್ಲದ ಮೂರ್ತಿ ಎಂಬಾತನ ಜೊತೆ ಚಕ್ಕಂದ ಆಡುತ್ತಿದ್ದಾಗ ಮಗ ಸುದೀಪ್ ಕಣ್ಣಾರೆ ಕಂಡಿದ್ದಾನೆ. ಈ ವೇಳೆ ಚುರುಕಾಗಿದ್ದ ಬಾಲಕ ಈ ವಿಷಯವನ್ನ ತಂದೆಗೆ ತಿಳಿಸುವುದಾಗಿ ಹೇಳಿದ್ದಾನೆ.

    ಈ ಹಿಂದೆಯೂ ಎರಡು ಮೂರು ಬಾರಿ ಬಾಲಕ ಇದನ್ನ ಕಂಡಿದ್ದನಂತೆ. ಹೀಗಾಗಿ ವಿಷಯ ಗಂಡನಿಗೆ ಗೊತ್ತಾದ್ರೆ ಕಷ್ಟ ಆಗುತ್ತೆ ಅಂತ ಅರಿತ ಭವಾನಿ ಪ್ರಿಯಕರನ ಜೊತೆ ಸೇರಿ ಮಗನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಳು. ನಂತರ ಏನೂ ಆರಿಯದ ಹಾಗೆ ಮಗನಿಗೆ ಹುಷಾರಿಲ್ಲ ಅಂತ ಚಿಂತಾಮಣಿ ತಾಲೂಕು ಆಸ್ಪತ್ರೆಗೆ ಕರೆ ತಂದಿದ್ದಳು.

    ಕೆಲಸಕ್ಕೆ ಹೋಗಿದ್ದ ಗಂಡನಿಗೆ ಕರೆ ಮಾಡಿ ಮಗನಿಗೆ ಹುಷಾರಿಲ್ಲ ಆಸ್ಪತ್ರೆಗೆ ಬನ್ನಿ ಅಂತ ಹೇಳಿ ಕೂಡ ನಾಟಕ ಮಾಡಿದ್ದಳು. ಆದ್ರೆ ಪೊಲೀಸರು ಮೊಬೈಲ್ ಫೋನ್ ಕರೆಗಳ ಆಧಾರದ ಮೇಲೆ ಅನುಮಾನ ವ್ಯಕ್ತಪಡಿಸಿ, ಭವಾನಿ ಹಾಗೂ ಪ್ರಿಯಕರ ಮೂರ್ತಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.

  • 375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    ಹೈದರಾಬಾದ್: ನಗರದಲ್ಲಿ ಆಗ್ನೇಯ ಏಷ್ಯಾದ 375 ಗ್ರಾಂ ತೂಕವುಳ್ಳ ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ.

    ಹೈದರಾಬಾದ್‍ನಲ್ಲಿರುವ ರೈನ್‍ಬೋ ಆಸ್ಪತ್ರೆಯಲ್ಲಿ 375 ಗ್ರಾಂ ಮಗು ಜನನವಾಗಿದೆ. ವೈದ್ಯರು ಈ ಮಗುವಿನ ತೂಕ ನೋಡಿ ದಂಗಾಗಿದ್ದಾರೆ. ಅಲ್ಲದೇ ಕಡಿಮೆ ತೂಕವಿರುವ ಮಗು ಆರೋಗ್ಯವಾಗಿ ಇರೋದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ.

    ನಿಖಿತಾ ಹಾಗೂ ಸೌರವ್ ದಂಪತಿಗೆ ಈ ಮಗು ಜನಿಸಿದೆ. ನಿಖಿತಾ ಮೂಲತಃ ಛತ್ತಿಸ್‍ಗಢದವರಾಗಿದ್ದು, ಮಗುವಿನ ತಾಯಿ ನಿಖಿತಾ ಹಾಗೂ ಮಗಳು ಚೆರಿ ಆರೋಗ್ಯಕರವಾಗಿದ್ದಾರೆ ಎಂದು ವರದಿಯಾಗಿದೆ. ಡೆಲಿವರಿ ಸಮಯದಲ್ಲಿ ವೈದ್ಯರು ಈ ಮಗುವನ್ನು ನೋಡಿ ಒಂದು ಕ್ಷಣ ದಂಗಾದರು. ನಂತರ ಮಗು ಆರೋಗ್ಯಕರವಾಗಿದೆ ಎಂದು ತಿಳಿದು ವೈದ್ಯರು ನಿಟ್ಟಸಿರು ಬಿಟ್ಟಿದ್ದಾರೆ.ಸದ್ಯ ಈ ಹೆಣ್ಣು ಮಗು ಯಾವುದೇ ತೊಂದರೆ ಇಲ್ಲದೇ ಸುಖಕರವಾಗಿದೆ ಎಂದು ಹೇಳಲಾಗಿದೆ.

    ಸೌರವ್ ತನ್ನ ಅತ್ಯಂತ ಚಿಕ್ಕ ಮಗುವನ್ನು ಕಂಡು ಸಾಕಷ್ಟು ಖುಷಿಯಾಗಿದ್ದಾರೆ. ಈ ಮಗುವನ್ನು ನಿಖಿತಾ 25 ವಾರದೊಳಗೆ ಜನ್ಮ ನೀಡಿದ್ದಾರೆ. ನಾಲ್ಕು ತಿಂಗಳು ಮೊದಲೇ ಮಗು ಜನಿಸಿದ್ದು, 20 ಸೆ.ಮೀ ಉದ್ದವಿದೆ ಎಂದು ರೈನ್‍ಬೋ ಆಸ್ಪತ್ರೆಯ ಚೇರ್‍ಮೆನ್ ಹಾಗೂ ಎಂಡಿ ರಮೇಶ್ ಕಂಚ್ರಾಲಾ ತಿಳಿಸಿದ್ದಾರೆ.

    ಈ ಹಿಂದೆ ಮುಂಬೈನಲ್ಲಿ ಭಾರತದ ಅತ್ಯಂತ ಚಿಕ್ಕ ಮಗು ಜನಿಸಿತ್ತು. ಆ ಮಗುವಿನ ಹೆಸರು ನಿರ್ವಾನ್ ಆಗಿದ್ದು, ಮುಂಬೈನ ಸೂರ್ಯ ಆಸ್ಪತ್ರೆಯಲ್ಲಿ 5 ತಿಂಗಳಿಗೆ ಜನ್ಮ ಪಡೆದಿತ್ತು. ಮಗುವಿನ ತಾಯಿ ಗರ್ಭವತಿ ಆಗಿ 22ನೇ ವಾರದಲ್ಲಿ ಅಂದರೆ ಮೇ 12, 2017ರಂದು ಜನ್ಮ ನೀಡಿದ್ದರು. ಈ ಮಗು 610 ಗ್ರಾಂ ತೂಕವಿತ್ತು.

  • ವಿದ್ಯುತ್ ತಂತಿ ತಗುಲಿ ತಾಯಿ-ಮಗಳು ದುರ್ಮರಣ

    ವಿದ್ಯುತ್ ತಂತಿ ತಗುಲಿ ತಾಯಿ-ಮಗಳು ದುರ್ಮರಣ

    ಉಡುಪಿ: ವಿದ್ಯುತ್ ತಂತಿ ತಗುಲಿ ತಾಯಿ-ಮಗಳು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಪೆರ್ಣಂಕಿಲ ಪಂಚಾಯತ್ ವ್ಯಾಪ್ತಿಯ ಗುಂಡುಪಾದೆಯಲ್ಲಿ ನಡೆದಿದೆ.

    ಗೋಪಿಬಾಯಿ (85) ಹಾಗೂ ಸುಮತಿ (64) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮನೆಯ ಆವರಣದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಸುಮತಿ ಎಂಬವರು ತುಳಿದಿದ್ದಾರೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದು ಪರಿಣಾಮ ಅವರು ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಗೋಪಿಬಾಯಿಯವರು ಮಗಳು ಸುಮತಿಯನ್ನು ರಕ್ಷಿಸಲು ಹೋದಾಗ ಇಬ್ಬರು ವಿದ್ಯುತ್ ಅವಘಡಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.