Tag: mother in law

  • ಭೂಮಿಗಾಗಿ ಅತ್ತೆಗೆ ಕಾಲಿನಿಂದ ಒದ್ದ ಅಳಿಯ

    ಭೂಮಿಗಾಗಿ ಅತ್ತೆಗೆ ಕಾಲಿನಿಂದ ಒದ್ದ ಅಳಿಯ

    ಮಂಗಳೂರು: ಅಳಿಯನೊಬ್ಬ ತನ್ನ ಅತ್ತೆ ಮೇಲೆ ಹೀನಾಯವಾಗಿ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

    ತಾಲೂಕಿನ ವೇಣೂರು ಬಳಿಯ ಜಂತಿಗೋಳಿ ಎಂಬಲ್ಲಿ ಘಟನೆ ನಡೆದಿದ್ದು, ಥಳಿಸುವ ವಿಡಿಯೋ ವೈರಲ್ ಆಗಿದೆ. ಹೇಮಂತ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ವೃದ್ಧ ಅತ್ತೆ ರೇಖಾ ಮೇಲೆ ಥಳಿಸಿದ್ದಾನೆ. ಈ ಕೃತ್ಯವನ್ನು ನೆರೆಮನೆಯವರು ವಿಡಿಯೋ ಮಾಡಿದ್ದು, ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೇಮಂತ್ ಮನೆ ಬಳಿಯ ತನ್ನ ಜಾಗದಲ್ಲಿ ಇಟ್ಟಿಗೆ ನಿರ್ಮಿಸುತ್ತಿದ್ದು, ಅದರಿಂದ ಸ್ಥಳೀಯರಿಗೆ ತೊಂದರೆಯಾಗಿತ್ತು. ಈ ಬಗ್ಗೆ ಸ್ಥಳೀಯರು ಪಂಚಾಯತಿಗೆ ದೂರು ಕೊಟ್ಟಿದ್ದು ದೂರು ಅರ್ಜಿಗೆ ಅತ್ತೆ ರೇಖಾ ಕೂಡ ಸಹಿ ಮಾಡಿದ್ದರು. ಈ ವಿಚಾರದಲ್ಲಿ ವೈಮನಸ್ಸು ಹೊಂದಿದ್ದ ಅಳಿಯ ಹೇಮಂತ್, ತನ್ನ ಪತ್ನಿಯ ಎದುರಲ್ಲಿಯೇ ಅತ್ತೆ ಮೇಲೆ ಹಲ್ಲೆ ಮಾಡಿದ್ದಾನೆ.

    ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.

    https://www.youtube.com/watch?v=b7arENT2E-A

  • ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕದ್ದ ಅಳಿಯ

    ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕದ್ದ ಅಳಿಯ

    ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆಗಳನ್ನ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

    ಹೈದರಾಬಾದ್‍ನ ಸಂಜೀವರೆಡ್ಡಿ ನಗರದ ತುಳಸಿ ನಗರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಸದ್ಯ ಆರೋಪಿಯನ್ನ ಬಂಧಿಸಿದ್ದಾರೆ.

    ಪೊಲೀಸರ ಪ್ರಕಾರ ಈ ಘಟನೆ ಡಿಸೆಂಬರ್ 31ರಂದು ನಡೆದಿದೆ. ಆರೋಪಿ ಹ್ಯಾರಿ ತುಳಸಿ ನಗರದಲ್ಲಿನ ತನ್ನ ಅತ್ತೆಯ ಮನೆಗೆ ಕಳ್ಳನ ವೇಷದಲ್ಲಿ ನುಗ್ಗಿದ್ದಾನೆ. ನಂತರ ನಿದ್ದೆ ಮಾಡುತ್ತಿದ್ದ ತನ್ನ ಅತ್ತೆ ಅಂಟೋನಮ್ಮ ಅವರನ್ನ ಥಳಿಸಿದ್ದಾನೆ. ಇದನ್ನ ಅವರು ತಡೆಯಲು ಯತ್ನಿಸಿದಾಗ ಕಣ್ಣಿಗೆ ಖಾರದ ಪುಡಿ ಎರಚಿದ್ದಾನೆ. ನಂತರ ಮನೆಯಲ್ಲಿದ್ದ ಚಿನ್ನದ ಆಭರಣಗಳನ್ನ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

    ಈ ಹಿನ್ನೆಲೆಯಲ್ಲಿ ಅಂಟೋನಮ್ಮ ಮರುದಿನ ಬೆಳಗ್ಗೆ ಎಸ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ಪೊಲೀಸರು ಹ್ಯಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹ್ಯಾರಿ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

  • ಅತ್ತೆಯನ್ನ ಕೊಲ್ಲಲು ಸುಪಾರಿ ಕೊಟ್ಳು- ದಿಂಬಿನಿಂದ ಉಸಿರುಗಟ್ಟಿಸಿ ಕೊಂದೇಬಿಟ್ಳು!

    ಅತ್ತೆಯನ್ನ ಕೊಲ್ಲಲು ಸುಪಾರಿ ಕೊಟ್ಳು- ದಿಂಬಿನಿಂದ ಉಸಿರುಗಟ್ಟಿಸಿ ಕೊಂದೇಬಿಟ್ಳು!

    ಭದ್ರಾದ್ರಿ: 40 ವರ್ಷದ ಮಹಿಳೆಯೊಬ್ಬಳು ತನ್ನ ಅತ್ತೆಯನ್ನ ಕೊಲ್ಲಲು ಸುಪಾರಿ ನೀಡಿ, ನಂತರ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರೋ ಘಟನೆ ತೆಲಂಗಾಣದ ಭದ್ರಾದ್ರಿ ಜಿಲ್ಲೆಯ ಪಾಲ್ವಂಚಾದಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನ ಮಂಗಳವಾರದಂದು ಪೊಲೀಸರು ಬಂಧಿಸಿದ್ದಾರೆ.

    ಭಾಗ್ಯಲಕ್ಷ್ಮೀ ಬಂಧಿತ ಆರೋಪಿ. ಇಬ್ಬರು ಮಕ್ಕಳ ತಾಯಿಯಾದ ಭಾಗ್ಯಲಕ್ಷ್ಮೀ ತನ್ನ ಅತ್ತೆಯನ್ನ ಕೊಲೆ ಮಾಡಲು ಮೂವರಿಗೆ ಸುಪಾರಿ ಕೊಟ್ಟಿದ್ದಳು. ಮುಂಗಡ ಹಣಕ್ಕಾಗಿ 1 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನ ಸುಪಾರಿ ಹಂತಕರಿಗೆ ನೀಡಿದ್ದಳು. ಅತ್ತೆಯನ್ನ ಕೊಲೆ ಮಾಡಿದ ನಂತರ ಇನ್ನೂ 1 ಲಕ್ಷ ನೀಡುವುದಾಗಿ ಹೇಳಿದ್ದಳು.

    ಸೋಮವಾರದಂದು ಗಂಡ ಕೆಲಸಕ್ಕೆ ಹೋದ ನಂತರ ಭಾಗ್ಯಲಕ್ಷ್ಮೀ ಹಂತಕರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಳು. ಅವರು ಅತ್ತೆ ದುರ್ಗಮ್ಮ ನನ್ನು ಹಿಡಿದುಕೊಂಡಿದ್ದು, ಭಾಗ್ಯಲಕ್ಷ್ಮೀ ದಿಂಬಿನಿಂದ ಉಸಿರುಗಟ್ಟಿಸಿ ಅತ್ತೆಯನ್ನ ಕೊಂಡಿದ್ದಾಳೆ. ನಂತರ ತನ್ನ ಗಂಡನಿಗೆ ಕರೆ ಮಾಡಿ ತಾಯಿ ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದಾಳೆ.

    ತನ್ನ ಅತ್ತೆಯದ್ದು ಸಹಜ ಸಾವು ಎಂದು ಬಿಂಬಿಸಲು ಮಹಿಳೆ ಯತ್ನಿಸಿದ್ದಾಳೆ. ಆದ್ರೆ ಪತಿ ಪೊಲೀಸರಿಗೆ ವಿಷಯ ತಿಳಿಸಿದ್ದು, ತನಿಖೆಯಿಂದ ಸತ್ಯ ಬಯಲಾಗಿದೆ.

    ನಂತರ ಆರೋಪಿ ಮಹಿಳೆ ಅತ್ತೆಯನ್ನ ಕೊಂದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಮದುವೆಯಾಗಾಗಿನಿಂದ್ಲೂ ಸಣ್ಣ ಸಣ್ಣ ವಿಚಾರಕ್ಕೂ ಕಿರುಕುಳ ನೀಡ್ತಿದ್ರು. ಹೀಗಾಗಿ ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಗ್ಯಲಕ್ಷ್ಮೀ ಹಾಗೂ ಸುಪಾರಿ ಹಂತಕರಾದ ವೀರಭದ್ರಂ, ಲಕ್ಷ್ಮಣ್ ಹಾಗೂ ಸತೀಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹೊರಬರಬೇಕಿದೆ.

  • ಮೈಸೂರು ದಸರಾ: ಅಕ್ಕಿ ರೊಟ್ಟಿ ಬದನೆಕಾಯಿ ಗೊಜ್ಜು ಮಾಡಿದ್ರು ಅತ್ತೆ, ಸೊಸೆ

    ಮೈಸೂರು ದಸರಾ: ಅಕ್ಕಿ ರೊಟ್ಟಿ ಬದನೆಕಾಯಿ ಗೊಜ್ಜು ಮಾಡಿದ್ರು ಅತ್ತೆ, ಸೊಸೆ

    ಮೈಸೂರು: ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋ ಗಾದೆ ಮಾತು ಇದೆ. ಆದರೆ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮವೊಂದರಲ್ಲಿ ಅತ್ತೆ ಹಾಗೂ ಸೊಸೆ ಇಬ್ಬರಿಗೂ ಒಂದೇ ವೇದಿಕೆಯಲ್ಲಿ ಸ್ಪರ್ಧಿಸಿ ಮನೋರಂಜನೆ ನೀಡಿದ್ದಾರೆ.

    ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಸ್ಕೌಟ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಗುರುವಾರ ಅತ್ತೆ ಸೊಸೆಯರಿಗೆ ಅಕ್ಕಿ ರೊಟ್ಟಿ ಹಾಗೂ ಬದನೆಕಾಯಿ ಗೊಜ್ಜು ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

    ಅತ್ತೆ ಸೊಸೆ ಇಬ್ಬರೂ ಒಂದುಗೂಡಿ ಅಕ್ಕಿ ರೊಟ್ಟಿ ಹಾಗೂ ಬದನೆಕಾಯಿ ಗೊಜ್ಜು ಮಾಡುವುದರಲ್ಲಿ ಫುಲ್ ಬ್ಯೂಸಿಯಾಗಿದ್ರು. 20 ಮಂದಿ ಅತ್ತೆ, ಸೊಸೆ ಜೋಡಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಅಕ್ಕಿ ರೊಟ್ಟಿ ಬದನೆಕಾಯಿ ಗೊಜ್ಜು ಮಾಡಿದ್ರು. ಸುಮಾರು 2 ಗಂಟೆಗಳ ಕಾಲ ಅಕ್ಕಿ ರೊಟ್ಟಿ ಬದನೆಕಾಯಿ ಗೊಜ್ಜು ಮಾಡುವ ಮೂಲಕ ಅತ್ತೆ ಸೊಸೆಯರು ಫುಲ್ ಎಂಜಾಯ್ ಮಾಡಿದ್ದರು.

  • ಮಗನ ವಿರುದ್ಧವೇ ಹೇಳಿಕೆ ನೀಡಿ ಸೊಸೆಗೆ ಜೀವನಾಂಶ ಸಿಗಲು ನೆರವಾದ ಅತ್ತೆ

    ಮಗನ ವಿರುದ್ಧವೇ ಹೇಳಿಕೆ ನೀಡಿ ಸೊಸೆಗೆ ಜೀವನಾಂಶ ಸಿಗಲು ನೆರವಾದ ಅತ್ತೆ

    ಬೆಂಗಳೂರು: ವಿಚ್ಛೇದನ ಪ್ರಕರಣದಲ್ಲಿ ತಾಯಿಯೇ ಮಗನ ವಿರುದ್ಧ ಹೇಳಿಕೆ ನೀಡಿ ಸೊಸೆಗೆ ಸೂಕ್ತ ಜೀವನಾಂಶ ಸಿಗುವಂತಾದ ಘಟನೆ ನಡೆದಿದೆ. ಇದರಲ್ಲಿ ಗಮನಾರ್ಹ ಸಂಗತಿಯೆಂದರೆ ದಿವಂಗತ, ಮಾಜಿ ಸಚಿವ ಎಸ್‍ಆರ್ ಕಾಶಪ್ಪನವರ್ ಅವರ ಪುತ್ರ ದೇವಾನಂದ ಶಿವಶಂಕರಪ್ಪ ಕಾಶಪ್ಪನವರ್ ಅವರ ವಿಚ್ಛೇದನ ಪ್ರಕರಣದಲ್ಲಿ ಇಂತಹದ್ದೊಂದು ಬೆಳವಣಿಗೆ ಆಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 24ರಂದು ತೀರ್ಪು ಪ್ರಕಟಿಸಿದ ಕೌಟುಂಬಿಕ ನ್ಯಾಯಾಲಯ, ದೇವಾನಂದ ಶಿವಶಂಕರಪ್ಪ ಕಾಶಪ್ಪನವರ್ ತನ್ನ ಹೆಂಡತಿಗೆ ಶಾಶ್ವತ ಜೀವನಾಂಶವಾಗಿ 4 ಕೋಟಿ ರೂ. ಹಣವನ್ನು 60 ದಿನಗಳೊಳಗೆ ಕೊಡಬೇಕು ಎಂದು ಹೇಳಿದೆ.

    2015ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆ 4.85 ಕೋಟಿ ರೂ. ಜೀವನಾಂಶ ನೀಡಬೇಕೆಂದು ಕೇಳಿದ್ದರು. ದೇವಾನಂದ್ ದಂಪತಿ 4 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗಳಿಸಲು ನಿರ್ಧರಿಸಿ 2012ರ ಫೆಬ್ರವರಿ 12ರಿಂದ ಪ್ರತ್ಯೇಕವಾಗಿ ವಾಸವಿದ್ದರು ಎಂಬುದನ್ನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಭಾಗ್ಯ ಮನಗಂಡಿದ್ದರು.

    ಅರ್ಜಿದಾರ ಮಹಿಳೆ ಗಂಡನೊಂದಿಗೆ ಹೊಂದಿಕೊಂಡು ಹೋಗಲು ಪ್ರಯತ್ನಿಸಿದರಾದ್ರೂ ಅದಕ್ಕೆ ಪತಿಯಿಂದ ಸರಿಯಾದ ಪ್ರತಿಕ್ರಿಯೆ ಇರಲಿಲ್ಲ. 1955ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)ರ ಪ್ರಕಾರ ದಂಪತಿ ಅರ್ಜಿ ಸಲ್ಲಿಸುವ ವೇಳೆಗೆ ಎರಡು ವರ್ಷಕ್ಕಿಂತ ಹೆಚ್ಚಿನ ಸಮಯ ದೂರ ಉಳಿದಿದ್ದರೆ ಅವರಿಗೆ ವಿಚ್ಛೇದನ ನೀಡಬೇಕು. ಅಲ್ಲದೆ ಸ್ವತಃ ದೇವಾನಂದ್ ಅವರ ತಾಯಿಯೇ ಮಗನ ವಿರುದ್ಧ ಹೇಳಿಕೆ ನೀಡಿದ್ದರು. ಅರ್ಜಿದಾರ ಮಹಿಳೆಯೊಂದಿಗೆ ಮದುವೆಯಾಗಿದ್ದಾಗಲೇ ನನ್ನ ಮಗ ಮತ್ತೋರ್ವ ಮಹಿಳೆಯೊಂದಿಗೆ ಮದುವೆಯಾಗಿದ್ದು, ಅವರಿಗೆ ಮಗುವೂ ಇದೆ ಎಂದು ಹೇಳಿದ್ದರು.

    ತಾಯಿ ಹೇಳಿದ್ದು ಏನು? ಕುಟುಂಬ ಸದಸ್ಯರು ಹಾಗೂ ಹಿರಿಯರ ಇಷ್ಟಕ್ಕೆ ವಿರುದ್ಧವಾಗಿ ನನ್ನ ಮಗ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ನನ್ನ ಸೊಸೆಯನ್ನ ಒಂಟಿ ಮಾಡಿದ್ದಾನೆ. ವೈವಾಹಿಕ ಜವಾಬ್ದಾರಿಗಳನ್ನ ಪೂರೈಸಿಲ್ಲ. ನನ್ನ ಮಗನಿಗೆ ಸಾಕಷ್ಟು ಭೂಮಿ ಇದ್ದು, ಕ್ವಾರಿ ಬ್ಯುಸಿನೆಸ್ ಮಾಡುತ್ತಾನೆ. ಸಾಕಷ್ಟು ಹಣ ಗಳಿಸುತ್ತಾನೆ. ಆತನ ಬಳಿ 1 ಕೋಟಿಗೂ ಹೆಚ್ಚಿನ ಮೌಲ್ಯದ ಮರ್ಸಿಡಿಸ್ ಬೆನ್ಜ್ ಕಾರ್ ಇದೆ. ಆದ್ದರಿಂದ ಆತ ಇಷ್ಟೊಂದು ಮೊತ್ತದ ಜೀವನಾಂಶ ಕೊಡಲು ಶಕ್ತನಾಗಿದ್ದಾನೆ ಎಂದು ಅರ್ಜಿದಾರ ಮಹಿಳೆಗೆ ಅಜ್ಜಿಯೂ ಆಗಿರುವ ಎಸ್‍ಆರ್ ಕಾಶಪ್ಪನವರ್ ಪತ್ನಿ ತನ್ನ ಅಫಿಡವಿಟ್‍ನಲ್ಲಿ ಹೇಳಿದ್ದರು. ಅಲ್ಲದೆ ದೇವಾನಂದ್ ಅವರಿಗೆ ನೋಟಿಸ್ ನೀಡಿದ್ದರೂ ಕೂಡ ಕೋರ್ಟ್ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿರಲಿಲ್ಲ.

    ಅರ್ಜಿದಾರ ಮಹಿಳೆಗೆ ದೇವಾನಂದ್ ಸೋದರಮಾವನಾಗಿದ್ದು, 2011ರ ಮೇ 22ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳ್ಕಲ್‍ನ ಶ್ರೀ ಆರ್ ವೀರಮಣಿ ಸ್ಟೇಡಿಯಂನಲ್ಲಿ ಈ ಇಬ್ಬರ ಮದುವೆಯಾಗಿತ್ತು. ಮದುವೆಯಾದಾಗ ನಾನು ಬಿಬಿಎ ಓದುತ್ತಿದ್ದೆ. ಇಷ್ಟವಿಲ್ಲದೆ ಮದುವೆಯಾದೆ. ಮದುವೆಯಾದ ಕೆಲವೇ ವಾರಗಳಲ್ಲಿ ನನ್ನ ಪತಿಯ ವರ್ತನೆ ಸಂಪೂರ್ಣವಾಗಿ ಬದಲಾಗಿತ್ತು. ಅವರು ನನ್ನನ್ನು ಅಪರಿಚಿತಳಂತೆ ನೋಡುತ್ತಿದ್ರು. ಎರಡನೇ ಮದುವೆಯಾಗಿದ್ದಾರೆಂಬ ಸುದ್ದಿ ಕೇಳಿ ಈ ಬಗ್ಗೆ ಅವರ ಜೊತೆ ಮಾತನಾಡಿದೆ. ಆಗ ದೇವಾನಂದ್ ಅವರು ನನ್ನನ್ನು ನಿಂದಿಸಿದ್ರು. ನಾನು ನನ್ನ ತಂದೆಯ ಆಸೆ ಪೂರೈಸಲು ನಿನ್ನನ್ನು ಮದುವೆಯಾಗಿದ್ದಷ್ಟೇ ಎಂದು ಹೇಳಿದ್ರು ಅಂತ ಮಹಿಳೆ ಅರ್ಜಿಯಲ್ಲಿ ಉಲ್ಲೇಖಿಸಿದ್ರು.

  • ಮಗಳ ಜೊತೆ ಜಗಳವಾಡಿದ್ದಕ್ಕೆ ಮನೆಗೆ ಬಂದಿದ್ದ ಅಳಿಯನಿಗೇ ಬೆಂಕಿಯಿಟ್ಟ ಅತ್ತೆ!

    ಮಗಳ ಜೊತೆ ಜಗಳವಾಡಿದ್ದಕ್ಕೆ ಮನೆಗೆ ಬಂದಿದ್ದ ಅಳಿಯನಿಗೇ ಬೆಂಕಿಯಿಟ್ಟ ಅತ್ತೆ!

    ಮೈಸೂರು: ಮಗಳ ಜೊತೆ ಜಗಳವಾಡಿದ್ದಕ್ಕೆ ರೊಚ್ಚಿಗೆದ್ದ ಅತ್ತೆ ತನ್ನ ಮನೆಗೆ ಬಂದಿದ್ದ ಅಳಿಯನನ್ನು ಸಜೀವವಾಗಿ ದಹಿಸಿದ ಅಮಾನವೀಯ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.

    ನಾಗರಾಜ ಶೆಟ್ಟಿ(43) ಹತ್ಯೆಯಾದ ಅಳಿಯ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನ ಮಾಕನಪುರದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಮೂಲತಃ ಗುಂಡ್ಲುಪೇಟೆಯ ಕೂತನೂರು ಗ್ರಾಮದ ನಿವಾಸಿಯಾಗಿರೋ ನಾಗರಾಜ್ ಶೆಟ್ಟಿ, 5 ವರ್ಷಗಳ ಹಿಂದೆ ಮಾಕಾಪುರ ಮಣಿ ಎಂಬುವರನ್ನು ಮದುವೆಯಾಗಿದ್ದರು. ಇತ್ತೀಚೆಗಷ್ಟೇ ನಾಗರಾಜ್ ಜೊತೆ ಪತ್ನಿ ಜಗಳವಾಡಿ ತಾಯಿ ಮನೆಗೆ ಬಂದಿದ್ದರು. ಹೀಗಾಗಿ ಪತ್ನಿಯನ್ನು ತನ್ನೊಂದಿಗೆ ವಾಪಾಸ್ ಕಳುಹಿಸಿಕೊಡುವಂತೆ ನಾಗರಾಜ್ ಮನೆಗೆ ಬಂದು ಅತ್ತೆ ಜೊತೆ ಜಗಳವಾಡಿದ್ದರು. ಅತ್ತೆ, ಅಳಿಯನ ಗಲಾಟೆ ತಾರಕಕ್ಕೇರಿದ್ದರಿಂದ ಅಳಿಯನನ್ನು ಪತ್ನಿ ಮಣಿ ಕುಟುಂಬ ಜೋಳದ ಹುಲ್ಲಿನ ಮೆದೆಗೆ ದೂಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

    ಅತ್ತೆ ಮನೆಗೆ ಹೋದ ನಾಗರಾಜ್ ಶೆಟ್ಟಿ ವಾಪಸ್ ಬರದೇ ಇದ್ದುದರಿಂದ ಅನುಮಾನಗೊಂಡು ಸೋದರರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಣಿ ಕುಟುಂಬಸ್ಥರ ಮೇಲೆ ಆರೋಪ ಮಾಡಿ ದೂರು ದಾಖಲಿಸಿದ್ದರಿಂದ ಪೊಲೀಸರು ತನಿಖೆ ನಡೆಸಿದಾಗ ಜೋಳದ ಮೆದೆಯಲ್ಲಿ ವ್ಯಕ್ತಿ ಸುಟ್ಟಿರುವ ಕುರುಹುಗಳು ಪತ್ತೆಯಾಗಿವೆ.

    ಪೊಲೀಸರು ಅತ್ತೆ ಕಾಳಮ್ಮ, ಮಾವ ಮಹಾದೇವ ಶೆಟ್ಟಿ, ಪತ್ನಿ ಮಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಅತ್ತೆಗೆ ಮನಸೋತ ಅಳಿಯ, ಒಪ್ಪದಿದ್ರೆ ಕೊಲ್ಲೋದಾಗಿ ಬೆದರಿಕೆ ಹಾಕ್ದ!

    ಅತ್ತೆಗೆ ಮನಸೋತ ಅಳಿಯ, ಒಪ್ಪದಿದ್ರೆ ಕೊಲ್ಲೋದಾಗಿ ಬೆದರಿಕೆ ಹಾಕ್ದ!

    ವಿಜಯಪುರ: ಇಲ್ಲೊಬ್ಬ ಅಳಿಯ ತನ್ನ ಅತ್ತೆಯ ಮೇಲೆ ಮನಸೋತಿದ್ದಾನೆ. ತನ್ನ ಮಾತು ಕೇಳದ ಅತ್ತೆಯ ಮೇಲೆ ಹಲ್ಲೆ ಮಾಡಿ ಈಗ ನಾಪತ್ತೆಯಾಗಿದ್ದಾನೆ.

    ನಗರದ ಅಲಿಯಾಬಾದ ಹತ್ತಿರದ ದಡ್ಡಿ ಗಲ್ಲಿಯ ನಿವಾಸಿಯಾದ ಸಂತ್ರಸ್ತ ಮಹಿಳೆ ತಮ್ಮ ಮಗಳನ್ನು ಅಮೋಘ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದರು. ಅಮೋಘ ಮಗಳ ಜೊತೆಗೆ ಅತ್ತೆಯ ಮೇಲೂ ಮೋಹಕ್ಕೊಳಗಾಗಿದ್ದು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ.

    ಆದರೆ ಅತ್ತೆ ಇದಕ್ಕೆ ನಿರಾಕರಿಸಿದ್ದಾರೆ. ಅಂದಿನಿಂದ ಅತ್ತೆಯನ್ನು ಹಿಂಬಾಲಿಸುವುದು, ಯಾರಾದ್ರೂ ಹತ್ತಿರ ಮಾತನಾಡಿಸಿದ್ರೆ ಅವರ ಮೇಲೆ ಹರಿಹಾಯ್ದು ಮಾಡುತ್ತಿದ್ದನಂತೆ. ಮೇ 21 ರಂದು ಮನೆಗೆ ನುಗ್ಗಿ ಅತ್ತೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದೇನೆ. ಅಳಿಯನಿಂದ ಹಲ್ಲೆಗೊಳಗಾದ ಅತ್ತೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಅನ್ವಯದಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಅಮೋಘನ ಪತ್ತೆಗಾಗಿ ಬಲೆ ಬೀಸಿದ್ದಾರೆ.

     

  • ಅತ್ತೆಯ 2ನೇ ಪತಿಯೊಂದಿಗೆ ಸೆಕ್ಸ್ ಗೆ ಒತ್ತಾಯಿಸಿದ್ರು – ವಾಟ್ಸಪ್‍ನಲ್ಲಿ ತ್ರಿವಳಿ ತಲಾಕ್ ಪಡೆದ ಮಹಿಳೆ ಹೇಳಿಕೆ

    ಅತ್ತೆಯ 2ನೇ ಪತಿಯೊಂದಿಗೆ ಸೆಕ್ಸ್ ಗೆ ಒತ್ತಾಯಿಸಿದ್ರು – ವಾಟ್ಸಪ್‍ನಲ್ಲಿ ತ್ರಿವಳಿ ತಲಾಕ್ ಪಡೆದ ಮಹಿಳೆ ಹೇಳಿಕೆ

    ಹೈದರಾಬಾದ್: ತ್ರಿವಳಿ ತಲಾಕ್ ನಿಷೇಧದ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ವಾಟ್ಸಪ್‍ನಲ್ಲಿ ಪತಿಯಿಂದ ವಿಚ್ಚೇಧನ ಪಡೆದ ಮಹಿಳೆಯೊಬ್ಬರು ಗಂಡನ ಮನೆಯವರ ಕಿರುಕುಳದ ಬಗ್ಗೆ ಹೇಳಿಕೆ ನೀಡಿದ್ದಾರೆ.

    ಕಳೆದ ವರ್ಷ ನವೆಂಬರ್‍ನಲ್ಲಿ ಸುಮೈನಾ ಎಂಬ ಮಹಿಳೆಗೆ ಆಕೆಯ ಹುಟ್ಟುಹಬ್ಬದ ದಿನದಂದೇ ದುಬೈನಲ್ಲಿ ವಾಸವಿರುವ ಪತಿ ವಾಟ್ಸಪ್‍ನಲ್ಲೇ ಮೂರು ಬಾರಿ ತಲಾಕ್ ಎಂದು ಹೇಳಿ, ಇಲ್ಲಿಗೆ ನಮ್ಮ ಸಂಬಂಧ ಮುಗಿಯಿತು ಎಂದಿದ್ದ. ಈ ಬಗ್ಗೆ ಮಾರ್ಚ್ 16ರಂದು ಸನತ್‍ನಗರ್ ಪೊಲೀಸ್ ಠಾಣೆಯಲ್ಲಿ ಸುಮೈನಾ ದೂರು ನೀಡಿದ್ದರು. ಮಹಿಳೆಯ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 420 ಹಾಗೂ 406 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರೋ ಸುಮೈನಾ, ಅತ್ತೆಯ ಎರಡನೇ ಗಂಡನೊಂದಿಗೆ ಲೈಂಗಿಕ ಸಂಪರ್ಕ ಹೊಂದುವ ಮೂಲಕ ಆಕೆಗೆ ಬಾಡಿಗೆ ತಾಯಿಯಾಗುವಂತೆ ನನಗೆ ಒತ್ತಾಯಿಸಿದ್ದರು. ಇದಕ್ಕೆ ನನ್ನ ಪತಿ ಕೂಡ ವಿರೋಧ ವ್ಯಕ್ತಪಡಿಸಲಿಲ್ಲ. ನಾನು ನಿರಾಕರಿಸಿದಾಗ ನನಗೆ ಕಿರುಕುಳ ನೀಡಿ 6 ದಿನಗಳವರೆಗೆ ರೂಮಿನಲ್ಲಿ ಕೂಡಿಹಾಕಿದ್ದರು. ನಂತರ ನನ್ನ ತಂದೆ ಬಂದು ಮನೆಗೆ ಕರೆದುಕೊಂಡು ಹೋದ್ರು ಎಂದು ಹೇಳಿದ್ದಾರೆ.

    ಇದಾದ ಬಳಿಕ ನನ್ನ ಪತಿಯೊಂದಿಗೆ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದೆ. ಆದ್ರೆ ಅವರು ನನ್ನ ಕರೆ ಸ್ವೀಕರಿಸುತ್ತಿರಲಿಲ್ಲ. ಅನಂತರ ವಾಟ್ಸಪ್‍ನಲ್ಲಿ ಮೂರು ಬಾರಿ ತಲಾಕ್ ಎಂದು ಬರೆದು ಸಂದೇಶ ಕಳಿಸಿದ್ರು ಎಂದು ಸುಮೈನಾ ಹೇಳಿದ್ದಾರೆ.

    ನಾನು ನನ್ನ ಪತಿ 1 ತಿಂಗಳವರೆಗೆ ದುಬೈನಲ್ಲಿದ್ದೆವು. ಅಲ್ಲಿಂದ ಬಂದ ನಂತರ ಮನೆಕಲಸದವಳಂತೆ ನನ್ನಿಂದ ಕೆಲಸ ಮಾಡಿಸುತ್ತಿದ್ದರು. ಸರಿಯಾಗಿ ಊಟ ಕೊಡ್ತಿರ್ಲಿಲ್ಲ. ಅತ್ತೆ ಮಾಟ ಮಂತ್ರ ಮಾಡುತ್ತಿದ್ದರು. ನನಗೆ ಕಿರುಕುಳ ನೀಡುತ್ತಿದ್ದರು ಎಂದು ಸುಮೈನಾ ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ.

  • ಗಂಡ-ಹೆಂಡತಿ ಜಗಳದಲ್ಲಿ ಮೂಗು ತೂರಿಸಿದ್ದಕ್ಕೆ ಅತ್ತೆಯನ್ನೇ ಕೊಂದ ಮಾಜಿ ಸೈನಿಕ

    ಗಂಡ-ಹೆಂಡತಿ ಜಗಳದಲ್ಲಿ ಮೂಗು ತೂರಿಸಿದ್ದಕ್ಕೆ ಅತ್ತೆಯನ್ನೇ ಕೊಂದ ಮಾಜಿ ಸೈನಿಕ

    ರಾಮನಗರ: ಗಂಡ-ಹೆಂಡತಿ ಜಗಳದಲ್ಲಿ ಪದೇ ಪದೇ ಮೂಗು ತೂರಿಸಿ ಮಗಳ ಪರ ನಿಂತು ತನ್ನನ್ನು ನಿಂದಿಸ್ತಾ ಇದ್ದ ಅತ್ತೆಯನ್ನ ಮಾಜಿ ಸೈನಿಕನೊಬ್ಬ ಹತ್ಯೆ ಮಾಡಿದ್ದಾನೆ.

    ರಾಮನಗರ ತಾಲೂಕಿನ ಕೆಂಚನಕುಪ್ಪೆ ಗ್ರಾಮದಲ್ಲಿ ಬಿಎಸ್‍ಎಫ್ ಮಾಜಿ ಸೈನಿಕ ನಾಗರಾಜ್ ಅತ್ತೆ ಚಿಕ್ಕತಿಮ್ಮಮ್ಮ (65) ಅವರನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ.

    ರಾಮನಗರ ತಾಲೂಕಿನ ದಾಸೇಗೌಡನದೊಡ್ಡಿ ಗ್ರಾಮದವನಾದ ನಾಗರಾಜ್, ಬಿಎಸ್‍ಎಫ್ ನಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಗಡಿಯಲ್ಲಿ ದೇಶ ಸೇವೆ ಮಾಡಿದ್ದ. ಮೂವತ್ತು ವರ್ಷಗಳ ಹಿಂದೆ ಮೃತಳ ಪುತ್ರಿ ಮಂಗಳಾ ಎಂಬುವವರನ್ನ ಮದುವೆಯಾಗಿದ್ದ. ದಂಪತಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ. ನಾಗರಾಜ್ ಕಳೆದ ಆರು ವರ್ಷಗಳಿಂದ ಕೆಂಚನಕುಪ್ಪೆ ಗ್ರಾಮದಲ್ಲಿಯೇ ನೆಲೆಸಿದ್ದನು.

    ಇತ್ತೀಚಿಗೆ ನಾಗರಾಜ್ ಸಂಸಾರದಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಹೀಗೆ ವಾರದ ಹಿಂದೆ ಕೂಡ ಜಗಳ ನಡೆದಿತ್ತು. ಈ ಸಂಬಂಧ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಅಲ್ಲದೆ ನಿನ್ನೆ ರಾತ್ರಿ ಕೂಡ ಗಲಾಟೆ ನಡೆದು ಮಂಗಲಾ ತನ್ನ ತಾಯಿ ಮನೆ ಸೇರಿದ್ದರು. ಇದೇ ವಿಚಾರವಾಗಿ ಮಚ್ಚು ಹಿಡಿದು ಅತ್ತೆ ಮನೆ ಬಳಿ ಬಂದ ನಾಗರಾಜ್, ಪತ್ನಿ ಮಂಗಳರನ್ನ ಹುಡುಕಿದ್ದಾನೆ. ಈ ವೇಳೆ ನಾಗರಾಜ್ ಕೈಯಲ್ಲಿ ಮಚ್ಚು ಕಂಡ, ಅತ್ತೆ ಚಿಕ್ಕತಿಮ್ಮಮ್ಮ ನಾಗರಾಜ್ ನನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ನಾಗರಾಜ್ ಮಚ್ಚಿನಿಂದ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

    ಸ್ಥಳಕ್ಕೆ ಬಿಡದಿ ಠಾಣಾ ಪೊಲೀಸರು ಆಗಮಿಸಿಸದ್ದು, ನಾಗರಾಜ್ ನನ್ನು ಬಂಧಿಸಿದ್ದಾರೆ. ಈ ಕುರಿತು ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಡಿದ ಮತ್ತಲ್ಲಿ ಅತ್ತೆ-ಮಾವನನ್ನು ಇರಿದು ಕೊಂದ ಅಳಿಯ

    ಕುಡಿದ ಮತ್ತಲ್ಲಿ ಅತ್ತೆ-ಮಾವನನ್ನು ಇರಿದು ಕೊಂದ ಅಳಿಯ

    – ಹಲ್ಲೆ ತಡೆಯಲು ಬಂದ ಪತ್ನಿ ಕೋಮಾದಲ್ಲಿ

    ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಕುಡಿತದ ಚಟದಿಂದ ಅತ್ತೆ ಮಾವಂದಿರನ್ನು ಕೊಂದು, ತನ್ನ ಪತ್ನಿ ಮತ್ತು ಪಕ್ಕದ ಮನೆಯವನನ್ನು ಕೋಮಾ ಸ್ಥಿತಿಗೆ ತಂದಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ.

    ಮೂಲತಃ ತಮಿಳುನಾಡಿನ ಕೃಷ್ಣಗಿರಿಯವನಾದ ಸೆಂಥಿಲ್ ಕುಮಾರ್ ಬೆಂಗಳೂರಿನ ಕೋಣನಕುಂಟೆಯ ಅನ್ನಪೂರ್ಣೆಶ್ವರಿ ಲೇಔಟ್‍ನಲ್ಲಿ ತನ್ನ ಅತ್ತೆ ಮುರುಗಮ್ಮ ಮತ್ತು ಮಾವ ಕುಮಾರ್, ಹೆಂಡತಿ ಸತ್ಯವತಿ ಜೊತೆ ವಾಸವಿದ್ದ. ಏನೂ ಕೆಲಸ ಮಾಡದೇ ಕುಡಿತವನ್ನೇ ಚಟ ಮಾಡಿಕೊಂಡಿದ್ದ ಈತ ದಿನನಿತ್ಯ ತನ್ನ ಮಾವ, ಅತ್ತೆ, ಹೆಂಡತಿಯ ಜೊತೆ ಜಗಳ ಮಾಡ್ತಿದ್ದ. ಶುಕ್ರವಾರ ಸಂಜೆ 7.30ರ ವೇಳೆಯಲ್ಲಿ ಕುಡಿದ ಮತ್ತಿನಲ್ಲಿ ಇದ್ದ ಈತ ತನ್ನ ಮಾವ, ಅತ್ತೆ ಮೇಲೆ ಜಗಳಕ್ಕಿಳಿದಿದ್ದು, ಮಾತಿಗೆ ಮಾತು ಬೆಳೆದು ಅವರಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

    ಸತ್ಯವತಿ ಮತ್ತು ಸೆಂಥಿಲ್ ಕುಮಾರ್ ಪ್ರೀತಿಸಿ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ರು. ಆದ್ರೆ ಸೆಂಥಿಲ್ ಕಾಲ ಕಳೆದಂತೆ ಹೆಂಡತಿಗೆ ಕಿರುಕುಳ ನೀಡ್ತಾ ಇದ್ದ. ಇದರಿಂದ ಬೇಸತ್ತು ಸತ್ಯವತಿ ಬೆಂಗಳೂರಿನಲ್ಲಿ ತನ್ನ ತಂದೆಯ ಮನೆಯಲ್ಲಿದ್ದಳು. ಹೆಂಡತಿಯನ್ನು ಕಳುಹಿಸಿಕೊಡುವಂತೆ ಅತ್ತೆ – ಮಾವನನ್ನು ಸೆಂಥಿಲ್ ಪೀಡಿಸುತ್ತಿದ್ದ. ಈ ವೇಳೆ ಕುಡಿದು ಬಂದು ಈ ಕೃತ್ಯವೆಸಗಿದ್ದಾನೆ. ತನ್ನ ತಂದೆ- ತಾಯಿ ಮೇಲೆ ಹಲ್ಲೆ ಮಾಡೋದನ್ನು ತಡೆಯಲು ಹೋದ ಹೆಂಡತಿ ಸತ್ಯವತಿಗೂ ಚಾಕುವಿನಿಂದ ಚುಚ್ಚಿದ್ದಾನೆ. ಗಲಾಟೆಯನ್ನು ತಡೆಯಲು ಬಂದ ಪಕ್ಕದ ಮನೆಯ ಮಂಜುನಾಥ್ ಎಂಬ ಯುವಕನಿಗೆ ಚಾಕುವಿನಿಂದ ತಿವಿದಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಗೆ ಸತ್ಯವತಿ ಮತ್ತು ಮಂಜುನಾಥ್‍ನನ್ನು ದಾಖಲು ಮಾಡಲಾಗಿದ್ದು ಕೋಮಾ ಸ್ಥಿತಿಯಲ್ಲಿದ್ದಾರೆ.

    ಘಟನೆಗೆ ಸಂಬಂಧಿಸಿಂತೆ ನೆಲಮಂಗಲ ಮಾದನಾಯಕನಹಳ್ಳಿ ಪೊಲೀಸರು ಕಾಯ9ಚರಣೆ ನಡೆಸಿ ಆರೋಪಿ ಅಳಿಯ ಸೆಂಥಿಲ್ ಕುಮಾರ್ ನನ್ನು ಮಾದವಾರ ಬಳಿ ಬಂಧಿಸಿದ್ದಾರೆ.