Tag: mother-daughter

  • ಮಣ್ಣಿನ ಮನೆ ಧ್ವಂಸಗೊಳಿಸಿ ತಾಯಿ-ಮಗಳನ್ನು ಬಲಿ ಪಡೆದ ಕಾಡಾನೆ ಹಿಂಡು

    ಮಣ್ಣಿನ ಮನೆ ಧ್ವಂಸಗೊಳಿಸಿ ತಾಯಿ-ಮಗಳನ್ನು ಬಲಿ ಪಡೆದ ಕಾಡಾನೆ ಹಿಂಡು

    ರಾಂಚಿ: ಇಂದು ಬೆಳಗ್ಗೆ ಕಾಡಾನೆ ಹಿಂಡೊಂದು ಮಣ್ಣಿನ ಮನೆಯನ್ನು ಧ್ವಂಸಗೊಳಿಸಿದ ಪರಿಣಾಮ ಮನೆಯೊಳಗಿದ್ದ ಓರ್ವ ಮಹಿಳೆ ಮತ್ತು ಆಕೆಯ ಒಂದು ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್‍ನ ಹಜಾರಿಬಾಗ್ ಜಿಲ್ಲೆಯ ಉಪ್ಪದ ಗ್ರಾಮದಲ್ಲಿ ನಡೆದಿದೆ.

    ಉಪ್ಪದ ಗ್ರಾಮದ ನಿವಾಸಿ ರಾಜು ಅವರ ಮನೆ ಮೇಲೆ ಆನೆಗಳು ದಾಳೆ ಮಾಡಿದ್ದು, ಪತ್ನಿ ಪಾನೋ(30) ಮತ್ತು ಒಂದು ವರ್ಷದ ಮಗಳನ್ನು ಬಲಿಪಡೆದಿದೆ. ಮಂಗಳವಾರ ರಾತ್ರಿ ವೇಳೆ ಉಪ್ಪದ ಗ್ರಾಮಕ್ಕೆ ಪ್ರವೇಶಿಸಿದ ಆನೆಗಳ ಹಿಂಡು ಭಾರಿ ದಾಳಿ ಮಾಡಿ ಆಸ್ತಿಪಾಸ್ತಿಯನ್ನು ಹಾನಿ ಮಾಡಿತ್ತು.

    ಮುಂಜಾನೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ರಾಜು ಅವರ ಮಣ್ಣಿನ ಮನೆಯ ಮೇಲೆ ಆನೆಗಳು ದಾಳಿ ನಡೆಸಿದೆ. “ಆನೆಗಳು ನಮ್ಮ ಮನೆ ಮೇಲೆ ದಾಳಿ ನಡೆಸಿದಾಗ ಮಕ್ಕಳನ್ನು ಕರೆದುಕೊಂಡು ಹೊರಗೆ ಓಡಿ ತಪ್ಪಿಸಿಕೊಳ್ಳಿ ಎಂದು ಪತ್ನಿ ಹೇಳಿದಳು. ನಾನು ಒಂದು ಮಗುವಿನೊಂದಿಗೆ ತಪ್ಪಿಸಿಕೊಂಡೆ. ಆದರೆ ಪತ್ನಿ ಮತ್ತು ಒಂದು ವರ್ಷದ ಮಗಳು ಹೊರಬರಲಾಗದೆ ಸಾವನ್ನಪ್ಪಿದರು ಎಂದು ಪತಿ ಕಣ್ಣೀರಿಟ್ಟಿದ್ದಾರೆ.

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಆನೆಗಳು ಗ್ರಾಮಕ್ಕೆ ನುಗ್ಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಬಂದು ಜನರಿಗೆ ಯಾವುದೇ ಸಹಾಯ ಮಾಡಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಜಾರ್ಖಂಡ್ ನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿಯವರೆಗೆ ಆನೆಗಳ ದಾಳಿಗೆ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

  • ಇನ್ನೂ 4 ದಿನ ಧಾರಾಕಾರ ಮಳೆ: ಕೊಪ್ಪಳದಲ್ಲಿ ಕೊಚ್ಚಿಹೋದ ತಾಯಿ, ಮಗಳು

    ಇನ್ನೂ 4 ದಿನ ಧಾರಾಕಾರ ಮಳೆ: ಕೊಪ್ಪಳದಲ್ಲಿ ಕೊಚ್ಚಿಹೋದ ತಾಯಿ, ಮಗಳು

    ಬೆಂಗಳೂರು: ಮಲ್ಲೇಶ್ವರಂ, ಮತ್ತಿಕೆರೆ, ಯಶವಂತಪುರ, ರಾಜಾಜಿನಗರ, ಮೆಜೆಸ್ಟಿಕ್, ಯಲಹಂಕ, ಹೆಬ್ಬಾಳ, ಜಾಲಹಳ್ಳಿ ಕ್ರಾಸ್ ಸೇರಿದಂತೆ ನಗರದ ನಾನಾ ಕಡೆಗಳಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಮಳೆ ಸುರಿಯುತ್ತಿದೆ.

    ಭಾರಿ ಮಳೆಗೆ ಹಳ್ಳದಲ್ಲಿ ತಾಯಿ-ಮಗಳು ಕೊಚ್ಚಿ ಹೋದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ. ಕಳೆದ ರಾತ್ರಿ ಸುರಿದ ಮಳೆಗೆ ಹನಮವ್ವ ಹಾಗೂ ಪಾರವ್ವ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಶನಿವಾರ ಸಂಜೆ 8 ಗಂಟೆ ಸುಮಾರಿಗೆ ತಾಯಿ-ಮಗಳು ಹೊಲದಿಂದ ಬರುವಾಗ ಎತ್ತಿನ ಬಂಡಿ ಪಲ್ಟಿಯಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

     

    ಇಂದು ಮುಂಜಾನೆ ಗ್ರಾಮದ ಹೊರವಲಯದಲ್ಲಿ ಹನಮವ್ವ (50) ಮೃತದೇಹ ಪತ್ತೆಯಾಗಿದ್ದು, ಮಗಳು ಪಾರವ್ವನನಿಗಾಗಿ ಗ್ರಾಮಸ್ಥರು ಶೋಧ ನಡೆಸುತ್ತಿದ್ದಾರೆ. ಈ ಸಂಬಂಧವನ್ನು ಹನುಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ವರುಣ ತನ್ನ ಆರ್ಭಟವನ್ನು ತೊರಿಸಿದ್ದಾನೆ. ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿರುವ ಕೆರೆ ವರುಣನ ಆರ್ಭಟಕ್ಕೆ ತುಂಬಿ ಹೋಗಿದೆ. ಕೋಡಿ ಹೋಗಲು ಕೇವಲ ಅರ್ಧ ಅಡಿಯಷ್ಟೇ ಬಾಕಿ ಇದೆ. ಆದರೆ ಕೆರೆ ಕಟ್ಟೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಬಿರುಕಿನ ಮೂಲಕವೇ ನೀರು ಹರಿದು ಹೋಗುತ್ತಿದೆ.

    ಹೊಸಹುಡ್ಯ, ಕೇಶವಾರ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಅಪ್ಪಿ ತಪ್ಪಿ ಕೆರೆಯ ಕಟ್ಟೆ ಹೊಡೆದರೆ ಭಾರೀ ಅನಾಹುತ ಆಗುವ ಸಂಭವವಿದೆ. ಸ್ಥಳಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಆಗಮಿಸಿ ತುರ್ತು ಕ್ರಮ ತೆಗೆದಯಕೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ರೈತರು ಮನವಿ ಮಾಡಿಕೊಂಡಿದ್ದಾರೆ.

    ಇನ್ನು ಗದಗ, ದಾವಣಗೆರೆಯಲ್ಲಿಯೂ ಮಳೆಯಾಗಿರೋ ಬಗ್ಗೆ ವರದಿಯಾಗಿದೆ.

  • ಬೆಂಗಳೂರಿನಲ್ಲಿ ಭಾರೀ ಮಳೆ: ಬೃಹತ್ ಮರ ಬಿದ್ದು ಪಾರ್ಕ್ ಮಾಡಿದ್ದ ಕಾರ್ ಜಖಂ

    ಬೆಂಗಳೂರಿನಲ್ಲಿ ಭಾರೀ ಮಳೆ: ಬೃಹತ್ ಮರ ಬಿದ್ದು ಪಾರ್ಕ್ ಮಾಡಿದ್ದ ಕಾರ್ ಜಖಂ

    – ಗದಗ್ ನಲ್ಲಿ ಗೋಡೆ ಕುಸಿದು ತಾಯಿ-ಮಗಳ ದುರ್ಮರಣ

    ಬೆಂಗಳೂರು: ಮಹಾನಗರಿ ಬೆಂಗಳೂರಲ್ಲಿ ಎರಡನೇ ದಿನವೂ ವರುಣ ಅಬ್ಬರಿಸಿದ್ದು, ರಾತ್ರಿ ಧಾರಾಕಾರ ಮಳೆಯಾಗಿದೆ. ಜಾಲಹಳ್ಳಿ, ಗೊರಗುಂಟೆ ಪಾಳ್ಯ, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ಬಸವೇಶ್ವರನಗರ, ಯಲಹಂಕ, ಹೆಬ್ಬಾಳ, ಆರ್ ಟಿ ನಗರ, ಶೇಷಾದ್ರಿಪುರಂ, ಎಲೆಕ್ಟ್ರಾನಿಕ್ ಸಿಟಿ ರಾಜರಾಜೇಶ್ವರಿನಗರ, ಕೆಂಗೇರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.

    ಬಸವೇಶ್ವರನಗರದಲ್ಲಿ ಮಳೆಯ ರಭಸಕ್ಕೆ ಮರವೊಂದು ಧರೆಗುರುಳಿ ಬಿದ್ದಿದೆ. ರಾತ್ರಿ 9:45ರ ಸುಮಾರಿಗೆ ಬೃಹತ್ ಮರವೊಂದು ಪಾರ್ಕ್ ಮಾಡಿದ್ದ ಇಕೋಸ್ಟೋಟ್ಸ್ ಕಾರ್ ಮೇಲೆ ಬಿದ್ದು ಸಂಪೂರ್ಣ ಜಖಂ ಆಗಿದೆ. ಮರದ ಕೊಂಬೆಗಳು ವಿದ್ಯುತ್ ಕಂಬದ ಮೇಲೆ ಬಿದ್ದಿರುವುದರಿಂದ ಪವರ್ ಕಟ್ ಆಗಿದ್ದು, ಈ ಸಂಬಂಧ ಬೇಸ್ಕಾಂಗೆ ಮತ್ತು ಬಿಬಿಎಂಪಿಗೆ ದೂರು ನೀಡಿದ್ರೂ, ತಡರಾತ್ರಿಯಾದ್ರು ಸ್ಥಳಕ್ಕೆ ಯಾರು ಬಂದು ಮರ ತೆರವು ಕಾರ್ಯ ಮಾಡಿಲ್ಲ.

    ಇತ್ತ ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ ಊರುಗಳಿಗೆ ತೆರಳುತ್ತಿದ್ದ ಜನ ಮೆಜೆಸ್ಟಿಕ್‍ನಲ್ಲಿ ಬಸ್ ಗಳು ಸಿಗದೆ ಪರದಾಡುತ್ತಿದ್ರೆ, ಮಳೆಯಿಂದ ಭಾರಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.

    ಇತ್ತ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಮಳೆಗೆ ಗೋಡೆ ಕುಸಿದು ತಾಯಿ-ಮಗಳು ಸಾವನ್ನಪ್ಪಿದ್ದಾರೆ. ಅಂಬೇಡ್ಕರ್ ಕಾಲೋನಿಯ 26 ವರ್ಷದ ಗಂಗಮ್ಮ ಕೆಂಗಾರ, 8 ವರ್ಷದ ಕಸ್ತೂರಿ ಮೃತರು. ಮಳೆ ಬರ್ತಿದ್ದಾಗ ಮನೆಯಲ್ಲಿ ಐವರು ಮಲ್ಕೊಂಡಿದ್ರು. ತಾಯಿ-ಮಗಳು ಮಲಗಿಕೊಂಡಿದ್ದ ಕೋಣೆಯ ಹಿಂಬದಿಯ ಗೊಡೆ ಕುಸಿದುಬಿದ್ದು, ಈ ಅವಘಡ ಸಂಭವಿಸಿದೆ.

  • ನೇಣು ಬಿಗಿದುಕೊಂಡು ತಾಯಿ-ಮಗಳು ಆತ್ಮಹತ್ಯೆ

    ನೇಣು ಬಿಗಿದುಕೊಂಡು ತಾಯಿ-ಮಗಳು ಆತ್ಮಹತ್ಯೆ

    ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ ಮಗಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಸಿಂಧೂ (34), ದೀಪ್ತಿ (17) ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು. ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದ ಕುಮಾರ್ ಲೇಔಟ್ ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.

    ಸಿಂಧೂ ಗಂಡ ರಾಜಶೇಖರ ರೆಡ್ಡಿ ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಎರಡು ಮೂರು ತಿಂಗಳಿಗೊಮ್ಮೆ ರಾಜಶೇಖರ್ ರೆಡ್ಡಿ ಊರಿಗೆ ಬಂದು ಹೆಂಡತಿ ಹಾಗೂ ಮಗಳನ್ನು ನೋಡಿಕೊಂಡು ಹೋಗುತ್ತಿದ್ದರು. ಇದರಿಂದ ಸಿಂಧೂ ಖಿನ್ನತೆಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

    ಆರು ತಿಂಗಳ ಹಿಂದೆಯಷ್ಟೇ ಅತ್ತಿಬೆಲೆಯ ಕುಮಾರ್ ಲೇಔಟ್ ಗೆ ಶಿಫ್ಟ್ ಆಗಿದ್ದ ತಾಯಿ ಮಗಳು ಗುರುವಾರ ರಾತ್ರಿ ಮನೆಯ ಸೀಲಿಂಗ್ ನಲ್ಲಿದ್ದ ಕಬ್ಬಿಣದ ಹುಕ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂಧೂ ತಾಯಿ ಶಾಂತಮ್ಮ ಸಿಂಧೂ ಮೊಬೈಲ್ ಗೆ ಕರೆ ಮಾಡಿದರೂ ಸ್ವಿಕರಿಸದಿದ್ದರಿಂದ ಅನುಮಾನಗೊಂಡು ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸದ್ಯ ತಾಯಿ-ಮಗಳ ಶವಗಳನ್ನು ನಗರದ ವಿಕ್ಟೋರಿಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.