Tag: mosque

  • ಜಿಲ್ಲೆಯ ಎಲ್ಲ ಮಸೀದಿ, ಮದರಸಾಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ- ಪೊಲೀಸರ ಸೂಚನೆ

    ಜಿಲ್ಲೆಯ ಎಲ್ಲ ಮಸೀದಿ, ಮದರಸಾಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ- ಪೊಲೀಸರ ಸೂಚನೆ

    – ಒಂದು ವಾರ ಗಡುವು ನೀಡಿದ ಪೊಲೀಸರು
    – ಮತ್ತೆ ವಿಚಾರಣೆಗೆ ಮೌಲ್ವಿ ಬೆಂಗಳೂರಿಗೆ

    ಚಾಮರಾಜನಗರ: ಶಂಕಿತ ಉಗ್ರ ಮೆಹಬೂಬ್ ಪಾಷಾಗೆ ಮೌಲ್ವಿ ಆಶ್ರಯ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಎಲ್ಲ ಮಸೀದಿ ಹಾಗೂ ಮದರಸಾಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದ್ದಾರೆ.

    ಗುಂಡ್ಲುಪೇಟೆ ಪಟ್ಟಣದ ಹೊಸೂರು ಬಡಾವಣೆಯಲ್ಲಿ ಉಗ್ರರಿಗೆ ಆಶ್ರಯ ನೀಡಿದ ಮೌಲ್ವಿ ಸದಾಖತ್ ಉಲ್ಲಾ ಖಾನ್ ಬಂಧನದಿಂದ ಜಿಲ್ಲಾ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಇದೀಗ ಜಿಲ್ಲೆಯ ಎಲ್ಲ ಮಸೀದಿ, ಮದರಸಾಗಳಲ್ಲಿ ಒಂದು ವಾರದೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡಿ ನೋಟಿಸ್ ನೀಡಿದೆ.

    ಅಲ್ಲದೆ ಮುಂದಿನ ದಿನಗಳಲ್ಲಿ ಅಪರಿಚಿತರು ಕಾಣಿಸಿಕೊಂಡರೆ ಕೂಡಲೇ ಪೋಲಿಸರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಮಸೀದಿ, ಮದರಸಾಗಳ ಹೊಣೆ ಹೊತ್ತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶಂಕಿತ ಉಗ್ರ ಮೆಹಬೂಬ್ ಪಾಷನಿಗೆ ಆಶ್ರಯ ನೀಡಿದ ಆರೋಪದಡಿ ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ಮೌಲ್ವಿ ಸದಾಖತ್ ಉಲ್ಲಾ ಖಾನ್ ಹಾಗೂ ಆತನ ಸ್ನೇಹಿತ ಅಯೂಬ್ ಖಾನ್‍ನನ್ನ ಪೋಲಿಸರು, ಆಂತರಿಕ ಭದ್ರತಾ ವಿಭಾಗ, ಭಯೋತ್ಪಾದಕ ನಿಗ್ರಹ ಪಡೆ ವಶಕ್ಕೆ ಪಡೆದು ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದ್ದರು. ನಂತರ ಕರೆದಾಗ ಮತ್ತೆ ಹಾಜರಾಗುವಂತೆ ತಿಳಿಸಿ ಮೌಲ್ವಿ ಹಾಗೂ ಆತನ ಸ್ನೇಹಿತನನ್ನು ಬಿಡುಗಡೆ ಮಾಡಿದ್ದರು.

    ಮತ್ತೆ ವಿಚಾರಣೆಗೆ ಮೌಲ್ವಿ
    ಉಗ್ರರಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿತನಾಗಿದ್ದ ಮೌಲ್ವಿ ಸದಾಖತ್ ಉಲ್ಲಾ ಖಾನ್ ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮೌಲ್ವಿ ಬೆಂಗಳೂರಿಗೆ ತೆರಳುತ್ತಿದ್ದು ಇಂದು ಕೂಡ ವಿಚಾರಣೆಯಲ್ಲಿ ಭಾಗವಹಿಸಿ ಉಗ್ರರ ಬಗ್ಗೆ ಮತ್ತಷ್ಟು ವಿಚಾರ ಬಾಯ್ಬಿಡುವ ಸಾಧ್ಯತೆಯಿದೆ.

    ಈಗಾಗ್ಲೇ ಸಿಸಿಬಿ ಅಧಿಕಾರಿಗಳು ಕೂಡ ಎರಡು ದಿನ ವಿಚಾರಣೆ ನಡೆಸಿ ಭಾನುವಾರ ರಾತ್ರಿ ಮೌಲ್ವಿಯನ್ನು ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಮೊಬೈಲ್ ಸೇರಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಇಂದು ಕೂಡ ತೀವ್ರ ವಿಚಾರಣೆ ನಡೆಸುವ ಸಾಧ್ಯತೆಯಿದೆ.

  • ಮಸೀದಿಯಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ- ಕೋಮು ಸೌಹಾರ್ದತೆ ಸಾರಿದ ಮುಸ್ಲಿಂ ಬಾಂಧವರು

    ಮಸೀದಿಯಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ- ಕೋಮು ಸೌಹಾರ್ದತೆ ಸಾರಿದ ಮುಸ್ಲಿಂ ಬಾಂಧವರು

    ಗದಗ: ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮ, ಮಂದಿರ ಮಸೀದಿಗಳ ವಿಚಾರವಾಗಿ ಗಲಾಟೆ, ಗಲಭೆ ನಡೆಯುತ್ತಿದ್ದು, ಸಮಾಜ ಸ್ವಾಸ್ತತೆ ಹಾಳಾಗುತ್ತಿದೆ. ಅದನ್ನು ತಪ್ಪಿಸಿ ಕೋಮು ಸೌಹಾರ್ದತೆ ಸಾರಲು ಗದಗ ಮುಸ್ಲಿಂ ಬಾಂಧವರು ಅಯ್ಯಪ್ಪಸ್ವಾಮಿ ಮೊರೆಹೊಗಿದ್ದಾರೆ.

    ಈಶ್ವರ ಅಲ್ಲಾ ತೆರೆನಾಮ್ ಸಬ್ಕೊ ಸನ್ಮತಿ ದೇ ಭಗವಾನ್ ಎಂಬಮಾತು ಅಲ್ಲಿ ನಿಜಕ್ಕೂ ಸಾಬೀತು ಮಾಡಿದ್ದಾರೆ. ಮಸೀದಿಯಲ್ಲಿ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಪೂಜೆ ನೆರವೇರಿಸುವ ಮೂಲಕ ಗದಗ ಜಿಲ್ಲೆಯ ಹೆಸರು ಮತ್ತಷ್ಟು ಉತ್ತುಂಗಕ್ಕೆರುವಂತೆ ಮಾಡಿದ್ದಾರೆ.

    ನಗರದ ಖಾನ್‍ತೋಟದ ಇಮಾಮ್ ಖಾಸಿಮ್ ಪಂಜದ್ ಮಸೀದಿಯಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜೆ ನೆರವೇರಿತು. ಇಮಾಮ್ ಸೆಂಟ್ರಿಂಗ್ ಪ್ಲೇಟ್ಸ್ ಸಂಘ ಹಾಗೂ ಮಸೀದಿ ಅಧ್ಯಕ್ಷ ಅಬ್ದುಲ್ ಮುನಾಫ್ ಮುಲ್ಲಾ ನೇತೃತ್ವದಲ್ಲಿ ಕೋಮು ಸೌಹಾರ್ದತೆ ಮಹಾಪೂಜೆ ನಡೆಯಿತು. ಮಸೀದಿಯಲ್ಲಿ ಶಾಸ್ತ್ರೋಕ್ತವಾಗಿ ಅಯ್ಯಪ್ಪ ಸ್ವಾಮಿ ಮಹಾಪೂಜೆ ನೆರವೇರಿತು. ಮುಸ್ಲಿಂ ಬಾಂಧವರು ಅಯ್ಯಪ್ಪನಿಗೆ ಭಕ್ತಿಯಿಂದ ಆರತಿ ಬೆಳಗಿ ಪಾರ್ಥಿಸಿದರು.

    ಧರ್ಮ-ಧರ್ಮಗಳ, ಜಾಯಿ-ಜಾತಿಗಳ ನಡುವೆ ಯುದ್ಧ ಸೃಷ್ಟಿಸಲು ಹೊರಟವರಿಗೆ, ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವವವರಿಗೆ ಸಾಮರಸ್ಯದ ನೀತಿಪಾಠ ಹೇಳುತ್ತಿದ್ದೇವೆ. ಹಿಂದೂ-ಮುಸ್ಲಿಂ-ಕ್ರೈಸ್ತರು ಒಂದೆ. ಎಲ್ಲರೂ ಒಂದಾಗಿ ಬಾಳೋಣ ಎಂಬ ಭಾವನೆಯಿಂದ ಕೋಮು ಸೌಹಾರ್ದತೆಯಿಂದ ಬಾಳಲು ಕಳೆದ ಎರಡು ವರ್ಷದಿಂದ ಅಯ್ಯಪ್ಪಸ್ವಾಮಿ ಪೂಜೆ ನಡೆಸುತ್ತ ಬಂದಿದ್ದೇವೆ ಎಂದು ದರ್ಗಾದ ಅಧ್ಯಕ್ಷ ಅಬ್ದುಲ್ ಮುನಾಫ್ ಮುಲ್ಲಾ ತಿಳಿಸಿದ್ದಾರೆ.

    ನಗರದ ಗಂಗಾಪೂರಪೇಟೆ ದುರ್ಗಾದೇವಿ ಸನ್ನಿದಾನದಿಂದ ಪಂಜದ್ ದರ್ಗಾವರೆಗೆ ಅಯ್ಯಪ್ಪನ ಮೂರ್ತಿಯೊಂದಿಗೆ ಮೆರವಣಿಗೆ ಮಾಡಲಾಯಿತು. ಮೋಹರಂ ಹಬ್ಬದ ವೇಳೆ ಮೊಲಾಲಿ ದೇವರು ಕೂಡವ ಜಾಗೆಯಲ್ಲಿ ಅಯ್ಯಪ್ಪ, ಗಣೇಶ ಹಾಗೂ ಷಣ್ಮುಖ ದೇವರ ಮಂಟಪಮಾಡಿ ಪೂಜೆ ನಡೆಸಿದರು. ಪೂಜೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಮುಸ್ಲಿಂ ಬಾಂಧವರೇ ತಂದು, ಹತ್ತಾರು ಗುರುಸ್ವಾಮಿಗಳು, ನೂರಾರು ಮಾಲಾಧಾರಿಗಳನ್ನು ಕರೆಯಿಸಿ ಪೂಜೆ ಸಲ್ಲಿಸಿದರು.

    ಮಸೀದಿಯಲ್ಲಿ ಪೂಜೆ ಮಾಡಿದ ಅಯ್ಯಪ್ಪನಿಗೆ ಕರ್ಪೂರ ಹಚ್ಚಿ, ಆರತಿ ಬೆಳಗಿ, ಶರಣ ಕೂಗುತ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ಜಲಾಭಿಷೇಕ, ಪಂಚಾಮೃತ, ಕುಂಕುಮಾರ್ಚನೆ, ಎಳೆನೀರು, ತುಪ್ಪದಭಿಷೇಕ, ಬಿಲ್ವಾರ್ಚಣೆ, ಹೂ ಮೂಲಕ ಮಹಾಪೂಜೆ ಸಲ್ಲಿಸಿ ಎಲ್ಲರೂ ಭಕ್ತಿಗೆ ಪಾತ್ರರಾದರು. ಹಾಗೆ ಇಮಾಮ್ ಖಾಸಿಂ ಪಂಜದ ದರ್ಗಾಗೂ ಪೂಜೆ ನೈವೇದ್ಯ ನಡೆಯಿತು. ನಂತರ ಅನ್ನ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜನರಲ್ಲಿ ಧಾರ್ಮಿಕ ಭಾವನೆಗಳು ಬದಲಾಗಬೇಕೆಂಬ ದೃಷ್ಟಿಯಿಂದ ಈ ಪೂಜೆ ಹಮ್ಮಿಕೊಂಡಿರುವುದು ಸ್ಥಳೀಯರಿಗೂ ಖುಷಿ ತಂದಿದೆ.

  • ಐಎಂಎ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೌಲ್ವಿಗೆ ಅದ್ದೂರಿ ಸನ್ಮಾನ

    ಐಎಂಎ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೌಲ್ವಿಗೆ ಅದ್ದೂರಿ ಸನ್ಮಾನ

    ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಜೈಲು ಸೇರಿ, ಜಾಮೀನಿನ ಮೇಲೆ ಬಿಡುಗಡೆಯಾದ ಮೌಲ್ವಿಗೆ ಅದ್ದೂರಿಯಾಗಿ ಸನ್ಮಾನ ಮಾಡಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆರ್.ಟಿ.ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಮನ್ಸೂರ್ ಖಾನ್‍ನಿಂದ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಪಡೆದುಕೊಂಡಿದ್ದ. ಬಂಗಲೆ ಪಡೆದಿದ್ದರಿಂದ ತನ್ನ ಸಮುದಾಯದವರಿಗೆ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದ. ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ವೇಳೆ ಪ್ರೇರೇಪಣೆ ನೀಡಿ ಹೂಡಿಕೆ ಮಾಡುವಂತೆ ಸೂಚನೆ ನೀಡುತ್ತಿದ್ದ. ಈ ಹಿನ್ನೆಲೆ ಸೆಪ್ಟೆಂಬರ್ ನಲ್ಲಿ ಎಸ್‍ಐಟಿ ಅಧಿಕಾರಿಗಳು ಮೌಲ್ವಿಯನ್ನು ಬಂಧಿಸಿದ್ದರು.

    ಆರೋಪಿ ಅಫ್ಸರ್ ಹನೀಜ್ ಎರಡು ದಿನಗಳ ಹಿಂದೆ ಸಿಬಿಐ ವಿಶೇಷ ನ್ಯಾಯಾಲಯದಿಂದ ಜಾಮೀನು ದೊರೆತು ಜೈಲಿನಿಂದ ಹೊರ ಬಂದಿದ್ದ. ಶಿವಾಜಿನಗರದ ಓಪಿಎಚ್ ರಸ್ತೆಯ ಬೇಪಾರಿಯನ್ ಮಸೀದಿಯಲ್ಲಿ ಬುಧವಾರ ಅಫ್ಸರ್ ಹನೀಜ್‍ಗೆ ಅದ್ದೂರಿಯಾಗಿ ಸನ್ಮಾನ ಮಾಡಲಾಗಿದೆ. ಮೌಲ್ವಿಯ ಸನ್ಮಾನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

    ಈ ಹಿಂದೆ ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಐಎಂಎ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯ ಜೊತೆಗೆ ಪಾರ್ಟಿ ಮಾಡಿದ್ದರು. ಐಎಂಎ ಪ್ರಕರಣದಲ್ಲಿ ಜೈಲು ಸೇರಿದ್ದ ಮುಜಾಹಿದ್ದೀನ್ ಅಕ್ಟೋಬರ್ 13ರಂದು ಜಾಮೀನಿನ ಆಧಾರದ ಮೇಲೆ ಹೊರ ಬಂದಿದ್ದ. ಅಂದು ರಾತ್ರಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಮುಜಾಹಿದ್ದೀನ್ ಜೊತೆಗೆ ಪಾರ್ಟಿ ಮಾಡಿದ್ದರು.

    ಐಎಂಎ ಪ್ರಕರಣದಲ್ಲಿ ಮುಖ್ಯ ಆರೋಪಿ ಆಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಪರಾರಿಯಾಗಲು ಮುಜಾಹಿದ್ದೀನ್ ಸಹಾಯ ಮಾಡಿದ್ದ. ಈ ಹಿನ್ನೆಲೆಯಲ್ಲಿ ಮುಜಾಹಿದ್ದೀನ್ ಮೇಲೆ ಎಸ್‍ಐಟಿ ರೇಡ್ ಮಾಡಿ ಅರೆಸ್ಟ್ ಮಾಡಿತ್ತು. ಆದರೆ ಅಕ್ಟೋಬರ್ 11ರಂದು ಮುಜಾಹಿದ್ದೀನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠವು ಜಾಮೀನು ನೀಡಿತ್ತು. ಅಕ್ಟೋಬರ್ 13ರಂದು ಮುಜಾಹಿದ್ದೀನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನ ಹೊರಗೆ ನಿಂತಿದ್ದ ಬೆಂಬಲಿಗರು ಪಟಾಕಿ ಸಿಡಿಸಿ, ಹಾರ ಹಾಕಿ ಸ್ವಾಗತಿಸಿದ್ದರು.

    ಗ್ರಾಹಕರಿಗೆ ವಂಚಿಸಿದ್ದು ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಸ್ವಾಮೀಜಿ ಚಾಲನೆ

    ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಸ್ವಾಮೀಜಿ ಚಾಲನೆ

    – ಕೋಮು ಸೌಹಾರ್ದತೆ ಮೂಡಿಸಲು ಮುಂದಾದ ಮುಸ್ಲಿಂ ಬಾಂಧವರ

    ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಜಮಾತ್-ಎ-ಇಸ್ಲಾಂ ಹಿಂದ್ ಸಂಘಟನೆ ಮಸೀದಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೂರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿ ಇಸ್ಲಾಂ ಧರ್ಮ ಹಾಗೂ ಮಸೀದಿ ಬಗ್ಗೆ ತಿಳಿದುಕೊಂಡರು.

    ಕೊಪ್ಪಳದ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಸ್ಜಿದ್-ಎ-ಅಲ್ಲಾದಲ್ಲಿ ಇಂದು ವಿಭಿನ್ನ ಕಾರ್ಯಕ್ರಮವೊಂದು ನಡೆಯಿತು. ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಸೀದಿಗೆ ಭೇಟಿ ನೀಡಿದರು. ಈ ವೇಳೆ ಸ್ವಾಮೀಜಿಗಳಿಗೆ ಮುಸ್ಲಿಂ ಬಾಂಧವರ ಮಸೀದಿಯ ಬಗ್ಗೆ ವಿವರಿಸಿದರು.

    ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಮಸೀದಿಗೆ ಭೇಟಿ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ ಅಲ್ಲಿನ ವ್ಯವಸ್ಥೆ ಹಾಗೂ ಪ್ರಾರ್ಥನೆ ಮಾಡುವ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಜೊತೆಗೆ ಮುಸ್ಲಿಂ ಬಾಂಧವರು ಹಿಂದೂ ಸಮಾಜದ ಎಲ್ಲ ಸಮುದಾಯದವರಿಗೂ ಸಹ ಮಸೀದಿಗೆ ಆಹ್ವಾನ ನೀಡಿದ್ದರು. ಮುಸ್ಲಿಂ ಬಾಂಧವರ ಕರೆಗೆ ಓಗೊಟ್ಟು ಬಂದಿದ್ದ ನೂರಾರು ಹಿಂದೂಗಳಿಗೂ ಸಹ ಮಸೀದಿ ಹಾಗೂ ಇಸ್ಲಾಂ ಧರ್ಮದ ಕುರಿತು ಮಾಹಿತಿ ನೀಡಿಲಾಯಿತು. ಹಿಂದೂ ಪುರಷರಷ್ಟೇ ಅಲ್ಲದೆ ಮಹಿಳೆಯರೂ ಸಹ ಮಸೀದಿ ಸಂದರ್ಶನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ.

    ಈ ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆವರೆಗೂ ನಡೆಯಿತು. ಈ ವೇಳೆ ಸಾವಿರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿದರು. ಒಟ್ಟಿನಲ್ಲಿ ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಕೊಪ್ಪಳದಲ್ಲಿ ಮಸೀದಿ ಸಂದರ್ಶನ ಹಮ್ಮಿಕೊಂಡಿದ್ದು ನಿಜಕ್ಕೂ ಪ್ರಶಂಸನಿಯ ಕೆಲಸವಾಗಿದೆ.

  • ಮಸೀದಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ-ಕನ್ನಡದಲ್ಲೇ ನಡೆಯುತ್ತೆ ಪ್ರಾರ್ಥನೆ, ಪ್ರವಚನ

    ಮಸೀದಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ-ಕನ್ನಡದಲ್ಲೇ ನಡೆಯುತ್ತೆ ಪ್ರಾರ್ಥನೆ, ಪ್ರವಚನ

    -ಭಾವೈಕ್ಯತೆಯ ಬೀಡಾಗಿದೆ ಚಿಕ್ಕಕಬ್ಬಾರ ಗ್ರಾಮ

    ಹಾವೇರಿ: ಸಾಮಾನ್ಯವಾಗಿ ಮುಸ್ಲಿಮರು ಮಸೀದಿಗಳಲ್ಲಿ ಉರ್ದುವಿನಲ್ಲಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಹಾವೇರಿಯ ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದಲ್ಲಿ ನೂರಾರು ವರ್ಷಗಳಿಂದಲೂ ಕನ್ನಡದಲ್ಲೇ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಚಿಕ್ಕಕಬ್ಬಾರ ಗ್ರಾಮದಲ್ಲಿ ಕನ್ನಡದ ನಾದವನ್ನು ಕೇಳಬಹುದು. ಸಮಾರು 150 ವರ್ಷಗಳ ಹಿಂದಿನಿಂದಲೂ ಇಲ್ಲಿನ ಮುಸ್ಲಿಮರು ಕನ್ನಡದಲ್ಲೇ ಪ್ರಾರ್ಥನೆ ಮಾಡಿಕೊಂಡು ಬಂದಿದ್ದಾರೆ. ಪ್ರತಿನಿತ್ಯ ಐದು ಬಾರಿ ನಮಾಜ್‍ಗೆ ಕನ್ನಡದಲ್ಲೇ ಪ್ರಾರ್ಥಿಸುತ್ತಾರೆ. ಗ್ರಾಮದಲ್ಲಿ 1 ಸಾವಿರಕ್ಕೂ ಕುಟುಂಬಗಳಿದ್ದು, ಇದರಲ್ಲಿ 400ಕ್ಕೂ ಹೆಚ್ಚು ಅಧಿಕ ಮುಸ್ಲಿಂ ಕುಟುಂಬಗಳಿವೆ. ಮಸೀದಿ ನಿರ್ಮಾಣಕ್ಕಾಗಿ ಜಾಗವನ್ನು ವೀರನಗೌಡ ಪಾಟೀಲ ಎಂಬವರು ದಾನವಾಗಿ ನೀಡಿದ್ದಾರೆ.

    ಮಸೀದಿಯ ಒಳಗೆ-ಹೊರಗೆ ಕನ್ನಡದ ನಾಮಫಲಕಗಳಿವೆ. ಇಲ್ಲಿನ ಮುಸ್ಲಿಮರಿಗೆ ಅಷ್ಟಾಗಿ ಉರ್ದು ಬರಲ್ಲ. ಅಜ್ಜ-ಮುತ್ತಜ್ಜನ ಕಾಲದಿಂದಲೂ ಕನ್ನಡದಲ್ಲೇ ಪ್ರಾರ್ಥನೆ ಮಾಡಲಾಗುತ್ತಿದೆ. ಕನ್ನಡವೇ ನಮ್ಮಮ್ಮ, ಪ್ರವಾದಿಗಳ ಪ್ರವಚನ ಎಲ್ಲರಿಗೂ ಗೊತ್ತಾಗಬೇಕು. ಅಲ್ಲದೆ ನಮ್ಮಲ್ಲಿ ಹಿಂದೂ ಮುಸ್ಲಿಂ ಅನ್ನೋ ಭೇದ-ಭಾವ ಇಲ್ಲ ಎಂದು ಮೌಲ್ವಿ ಸಮೀವುಲ್ಲಾ ಹೇಳುತ್ತಾರೆ.

    ಈ ಗ್ರಾಮದ ಮುಸ್ಲಿಮರು ಕೂಡ ಕೃಷಿ ಮಾಡಿಯೇ ಬದುಕು ಸಾಗಿಸ್ತಿದ್ದಾರೆ. ಯುಗಾದಿ, ದೀಪಾವಳಿ, ಗ್ರಾಮದೇವಿಯ ಹಬ್ಬ ಸೇರಿದಂತೆ ಗ್ರಾಮದಲ್ಲಿ ಯಾವ ಹಬ್ಬ ಕಾರ್ಯಕ್ರಮ ನಡೆದರೂ ಹಿಂದೂ ಮುಸ್ಲಿಂಮರು ಸೇರಿ ಭಾವೈಕ್ಯತೆ ಮೆರೆದಿದ್ದಾರೆ.

  • ಮುಸ್ಲಿಂರೇ ಇಲ್ಲದ ಊರಲ್ಲಿ ಮಸೀದಿ- ಪ್ರತಿದಿನ ಹಿಂದೂಗಳಿಂದ ನಮಾಜ್

    ಮುಸ್ಲಿಂರೇ ಇಲ್ಲದ ಊರಲ್ಲಿ ಮಸೀದಿ- ಪ್ರತಿದಿನ ಹಿಂದೂಗಳಿಂದ ನಮಾಜ್

    ಪಾಟ್ನಾ: ದೇಶದಲ್ಲಿ ಹೆಚ್ಚುತ್ತಿರುವ ಕೋಮು ಗಲಭೆಗಳ ನಡುವೆಯೂ ಬಿಹಾರದ ಒಂದು ಗ್ರಾಮದಲ್ಲಿ ಮುಸ್ಲಿಂರು ಇಲ್ಲದಿರುವ ಮಸೀದಿಯಲ್ಲಿ ಹಿಂದೂಗಳು ನಮಾಜ್ ಮಾಡುತ್ತಿದ್ದಾರೆ.

    ಬಿಹಾರದ ಮಾಧಿ ಎಂಬ ಗ್ರಾಮದಲ್ಲಿ ಸುಮಾರು 200 ವರ್ಷಕ್ಕೂ ಹಳೆಯ ಮಸೀದಿಯನ್ನು ಹಿಂದೂಗಳೇ ನಿರ್ವಹಣೆ ಮಾಡುತ್ತಿದ್ದಾರೆ. ಈ ಹಳ್ಳಿಯಲ್ಲಿ ಬಹಳ ವರ್ಷಗಳ ಹಿಂದೆ ಮುಸ್ಲಿಂ ಸಮುದಾಯದವರು ವಾಸವಿದ್ದರು. ಆದರೆ ಕಾಲ ಕಳೆದಂತೆ ಮುಸ್ಲಿಂರು ಆ ಗ್ರಾಮದಿಂದ ವಲಸೆ ಹೋದರು.

    ಮುಸ್ಲಿಂ ಸಮುದಾಯದ ಜನರ ವಲಸೆ ಬಳಿಕ ಗ್ರಾಮದ ಮಸೀದಿಯಲ್ಲಿ ನಮಾಜ್ ಮಾಡುವವರೇ ಇರಲಿಲ್ಲ. ಕೆಲ ಕಾಲ ಹಾಗೇ ಇದ್ದ ಮಸೀದಿಯನ್ನು ಹಿಂದೂಗಳೇ ನಿರ್ವಹಣೆ ಮಾಡಲು ತೀರ್ಮಾನ ಮಾಡಿದ್ದಾರೆ. ಅದರಂತೆ ದಿನ ಮಸೀದಿಯನ್ನು ಸ್ವಚ್ಛಗೊಳಿಸಿ, ಬೆಳಗ್ಗೆ ಮತ್ತು ಸಂಜೆ ನಮಾಜ್ ಮಾಡುವ ವೇಳೆ ಮೊಬೈಲ್ ನಲ್ಲಿಯ ಅಜಾನ್‍ನನ್ನು ಹಾಕುತ್ತಾರೆ. ಹಿಂದೂಗಳು ತಮಗೆ ಕಷ್ಟ ಬಂದರೆ ಕಾಪಾಡು ಎಂದು ಮಸೀದಿಯಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, ನಮಗೆ ನಮಾಜ್ ವೇಳೆ ಅಜಾನ್ ಹೇಳಲು ಗೊತ್ತಿಲ್ಲ. ಅದ್ದರಿಂದ ದಿನ ಬೆಳಗ್ಗೆ ಮತ್ತು ಸಂಜೆ ನಾವು ಅಜಾನ್‍ನನ್ನು ಪೆನ್ ಡ್ರೈವ್ ಮೂಲಕ ಹಾಕುತ್ತೇವೆ. ಈ ಹಿಂದೆ ಈ ಗ್ರಾಮದಲ್ಲೂ ಮಸ್ಲಿಂ ಸಮುದಾಯದವರು ಇದ್ದರು. ಆದರೆ ಕಾಲ ಕ್ರಮೇಣ ಅವರು ಈ ಹಳ್ಳಿ ಬಿಟ್ಟು ವಲಸೆ ಹೋದರು ಎಂದು ಹೇಳಿದ್ದಾರೆ.

    ಈ ಮಸೀದಿ ಯಾವಾಗ ನಿರ್ಮಾಣವಾಯಿತು ಮತ್ತು ಯಾರಿಂದ ನಿರ್ಮಾಣವಾಯಿತು ನಮಗೆ ಗೊತ್ತಿಲ್ಲ. ಆದರೆ ಇದು ಸುಮಾರು 200 ವರ್ಷದ ಹಳೆಯ ಮಸೀದಿ ಎಂದು ಮಾತ್ರ ಗೊತ್ತು. ನಮ್ಮ ಗ್ರಾಮದ ಹಿಂದೂ ಸಮುದಾಯದವರು ಕೂಡ ಯಾವುದಾದರು ಶುಭಸಮಾರಂಭಗಳಲ್ಲಿ ಈ ಮಸೀದಿಗೆ ಬಂದು ಪೊಜೆ ಸಲ್ಲಿಸುತ್ತಾರೆ ಎಂದು ಮಾಧಿ ಗ್ರಾಮದ ಪಾದ್ರಿ ಜಾನಕಿ ಪಂಡಿತ್ ಹೇಳಿದ್ದಾರೆ.

  • ಲಕ್ಷ್ಮಿ ಪೂಜೆ ನೆರವೇರಿಸಿ ಮಸೀದಿ ಉದ್ಘಾಟನೆ- ಭಾವೈಕ್ಯತೆ ಮೆರೆದ ಗ್ರಾಮಸ್ಥರು

    ಲಕ್ಷ್ಮಿ ಪೂಜೆ ನೆರವೇರಿಸಿ ಮಸೀದಿ ಉದ್ಘಾಟನೆ- ಭಾವೈಕ್ಯತೆ ಮೆರೆದ ಗ್ರಾಮಸ್ಥರು

    ವಿಜಯಪುರ: ಲಕ್ಷ್ಮಿ ಪೂಜೆ ನೆರವೇರಿಸಿ ನೂತನ ಮಸೀದಿ ಉದ್ಘಾಟನೆ ಮಾಡಿದ ಪ್ರಸಂಗವೊಂದು ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ನಡೆದಿದೆ.

    ಯಕ್ಕುಂಡಿ ಗ್ರಾಮದಲ್ಲಿ ಈ ಹಿಂದೆ ಅತ್ಯಂತ ಚಿಕ್ಕ ಮಸೀದಿ ಇತ್ತು. ಹೀಗಾಗಿ ಮುಸ್ಲಿಂ ಭಾಂದವರಿಗೆ ಪಾರ್ಥನೆ ಸಲ್ಲಿಸಲು ಸಮಸ್ಯೆ ಎದುರಾಗಿತ್ತು. ಹೀಗಾಗಿ 10 ಲಕ್ಷ ರೂ. ವೆಚ್ಚದಲ್ಲಿ ನೂತನ ಮಸೀದಿ ನಿರ್ಮಿಸಲಾಗಿದ್ದು, ಇಂದು ಅದ್ಧೂರಿಯಾಗಿ ಉದ್ಘಾಟನೆ ಮಾಡಲಾಯಿತು. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರಿದ ಗ್ರಾಮಸ್ಥರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಅನ್ಯೂನ್ಯತೆಯಿಂದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಹೂ, ಬಾಳೆ ದಿಂಡು, ತೆಂಗಿನ ಗರಿ, ಮಾವಿನ ತೋರಣ ಕಟ್ಟಿ ನೂತನ ಮಸೀದಿಯನ್ನು ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೆ ಮಸೀದಿಯಲ್ಲಿ ನೂರಾರು ದೀಪ ಬೆಳಗಿಸಿ, ಲಕ್ಷ್ಮಿ ದೇವಿಯ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮದ ಮುಸ್ಲಿಂ ಬಾಂಧವರು, ಹಿಂದೂ-ಮುಸ್ಲಿಮರು ಒಟ್ಟಾಗಿ ಗ್ರಾಮದ ಜಾತ್ರೆ, ಮೊಹರಂ ಮಾಡುತ್ತೇವೆ. ಗ್ರಾಮದ ಅನೇಕ ರೈತರು ಮಸೀದಿ ನಿರ್ಮಾಣಕ್ಕೆ ಸಿಮೆಂಟ್ ಕೊಡಿಸಿದ್ದಾರೆ, ಕೆಲವರು ಹಣ ನೀಡಿದ್ದಾರೆ. ಗ್ರಾಮದಲ್ಲಿ ಮುಸ್ಲಿಂ-ಹಿಂದೂ ಬಾಂಧವರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಹಬ್ಬಗಳಿಗೆ ಅವರು, ಅವರ ಹಬ್ಬಗಳಿಗೆ ನಾವು ಎಲ್ಲ ರೀತಿಯ ಸಹಾಯ ಮಾಡುತ್ತೇವೆ. ಈ ನಿಟ್ಟಿನಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಮಸೀದಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

  • ದೇವಸ್ಥಾನ, ಮಸೀದಿ ಸುತ್ತಿದ್ರೆ ಬುದ್ಧಿವಂತರಾಗಲ್ಲ: ಕೆ.ಎಸ್.ಭಗವಾನ್

    ದೇವಸ್ಥಾನ, ಮಸೀದಿ ಸುತ್ತಿದ್ರೆ ಬುದ್ಧಿವಂತರಾಗಲ್ಲ: ಕೆ.ಎಸ್.ಭಗವಾನ್

    – ಓದಿದರೆ ಮಾತ್ರ ಬುದ್ಧಿ ಬರೋದು

    ದಾವಣಗೆರೆ: ಅಂತರ್ಜಾತಿ ವಿವಾಹವಾಗುವವರಿಗೆ ಮಾತ್ರ ಸರ್ಕಾರಿ ಕೆಲಸ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತಹ ಕಾನೂನು ರಚನೆಯಾಗಬೇಕು. ಆಗ ಮಾತ್ರ ಸಮಾನತೆ ತರಲು ಸಾಧ್ಯ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.

    ಜಿಲ್ಲೆಯ ಹರಿಹರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಮೇಲು ಕೀಳು ಹೋಗಿಲ್ಲ. ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳಲಾಗುತ್ತದೆ. ಆದರೆ ಯಾರೂ ಪಾಲನೆ ಮಾಡುತ್ತಿಲ್ಲ. ಹೀಗಾಗಿ ಯಾರು ಅಂತರ್ಜಾತಿ ವಿವಾಹ ಆಗುತ್ತಾರೋ ಅವರಿಗೆ ಮಾತ್ರ ಸರ್ಕಾರಿ ನೌಕರಿ ಸಿಗುವಂತಾಗಬೇಕು. ಅಲ್ಲದೆ, ಅಂತಹವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಆ ರೀತಿಯ ಕಾನೂನನ್ನು ಜಾರಿಗೆ ತರಬೇಕು ಎಂದು ತಿಳಿಸಿದರು. ಇದನ್ನು ಓದಿ: ಎಂಎಂ ಕಲ್ಬುರ್ಗಿ ಹತ್ಯೆ ಕೇಸ್- 1,600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‍ಐಟಿ

    ಪ್ರಸ್ತುತ ಭಾರತದಲ್ಲಿ ಜಾತಿಯೇ ಮುಖ್ಯ ಹೊರತು ಜ್ಞಾನಕ್ಕೆ ಬೆಲೆ ಇಲ್ಲ. ಎಲ್ಲರೂ ಮೊದಲು ಒಂದೇ ಜಾತಿಯವರು, ಕಾಲದ ನಂತರ ಜಾತಿಗಳಾಗಿವೆ. ಪುಸ್ತಕಗಳನ್ನು ಓದುವುದರಿಂದ ತಿಳುವಳಿಕೆ ಬರುತ್ತದೆ. ಅದನ್ನು ಬಿಟ್ಟು ದೇವಸ್ಥಾನ, ಮಸೀದಿಗಳಿಗೆ ಹೋಗುವುದರಿಂದ ಬುದ್ಧಿವಂತರಾಗುವುದಿಲ್ಲ. ಓದಿ ಬುದ್ಧಿಶಕ್ತಿ ಬೆಳಸಿಕೊಂಡಾಗ ಮಾತ್ರ ಬುದ್ಧಿವಂತರಾಗುತ್ತಾರೆ ಎಂದು ತಿಳಿಸಿದರು.

    ಕಲಬುರ್ಗಿ ಹತ್ಯೆ ಕುರಿತು ಪ್ರತಿಕ್ರಿಯಿಸಲ್ಲ
    ಈಗಾಗಲೇ ಎರಡು, ಮೂರು ಕೇಸ್ ಆಗಿದೆ. ನಾನೇನಾದರೂ ಮಾತನಾಡಿದರೆ ಮತ್ತೊಂದು ಕೇಸ್ ಬಿದ್ದು ಓಡಾಡುವ ಕೆಲಸವಾಗುತ್ತದೆ. ಈ ಕುರಿತು ಮೈಸೂರಿನಲ್ಲಿ ಮಾತನಾಡುತ್ತೇನೆ ಎಂದು ಪ್ರೊ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಗ್ಗೆ ಪ್ರತಿಕ್ರಿಯಿಸಲು ಭಗವಾನ್ ನಿರಾಕರಿಸಿದರು.

    370ನೇ ವಿಧಿ ರದ್ದು ಮಾಡಿರುವುದನ್ನು ನಾನು ಸ್ವಾಗತಿಸುತ್ತೇನೆ, ಅದು ಮೋದಿಯವರ ಒಳ್ಳೆಯ ಕೆಲಸ. ಇಡೀ ಭಾರತದಲ್ಲಿ ಎಲ್ಲಾ ರಾಜ್ಯಗಳು ಸಮಾನ ಎಂದು ಸಾರಿದೆ. ತತ್ವ ಸಿದ್ಧಾಂತಗಳು ಏನೇ ಇದ್ದರು ಒಳ್ಳೆಯದನ್ನು ಮಾಡಿದಾಗ ಮೆಚ್ಚಬೇಕು, ಸ್ವಾಗತಿಸಬೇಕು. ಈ ಹಿಂದೆಯು ಮೋದಿಯವರು ಸಂವಿಧಾನ ರಾಷ್ಟ್ರ ಧರ್ಮ ಗ್ರಂಥ ಎಂದು ಹೇಳಿದ್ದರು ಅದನ್ನು ಮೆಚ್ಚಿ ಲೇಖನ ಬರೆದಿದ್ದೇನೆ. ವಿರೋಧ ಮಾಡುತ್ತೇವೆಂದು ಎಲ್ಲದನ್ನೂ ವಿರೋಧಿಸಬಾರದು ಎಂದು ಭಗವಾನ್ ಸ್ಪಷ್ಟಪಡಿಸಿದರು.

  • ಮಧ್ಯಸ್ಥಿಕೆ ತಂಡಕ್ಕೆ ಜು.31ರವೆಗೆ ಗಡುವು ವಿಸ್ತರಣೆ – ಆ.2 ರಂದು ವಿಚಾರಣೆ

    ಮಧ್ಯಸ್ಥಿಕೆ ತಂಡಕ್ಕೆ ಜು.31ರವೆಗೆ ಗಡುವು ವಿಸ್ತರಣೆ – ಆ.2 ರಂದು ವಿಚಾರಣೆ

    ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ – ಬಾಬ್ರಿ ಮಸೀದಿ ಭೂ ವಿವಾದ ಪರಿಹರಿಸಲು ನೇಮಕಗೊಂಡಿರುವ ಮಧ್ಯಸ್ಥಿಕೆ ತಂಡಕ್ಕೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಜುಲೈ 31ರವರೆಗೆ ಸುಪ್ರೀಂ ಕೋರ್ಟ್ ಗಡುವನ್ನು ವಿಸ್ತರಿಸಿದೆ.

    ಸಂಧಾನ ಪ್ರಕ್ರಿಯೆಯಿಂದ ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರತಿದಿನ ಅರ್ಜಿಗಳ ವಿಚಾರಣೆ ಪ್ರಾರಂಭಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರಿದ್ದ ಸಂವಿಧಾನ ಪೀಠದಲ್ಲಿ ನಡೆಯಿತು.

    ಈ ವೇಳೆ ಪೀಠ, ಮಧ್ಯಸ್ಥಿಕೆ ತಂಡಕ್ಕೆ ಜುಲೈ 31ರವರೆಗೆ ಗಡುವು ವಿಸ್ತರಿಸಿ ಆಗಸ್ಟ್ 2 ರಂದು ವಿಚಾರಣೆ ನಡೆಸಲಾಗುವುದು ಎಂದು ಆದೇಶ ಪ್ರಕಟಿಸಿತು.

    ಜುನ್ 11ರಂದು ಸುಪ್ರೀಂ ಕೋರ್ಟ್ ತ್ರಿಸದಸ್ಯರನ್ನೊಳಗೊಂಡ ಮಧ್ಯಸ್ಥಿಕೆ ಸಮಿತಿಗೆ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಸಮಿತಿಯೂ ಇಂದು ಇಲ್ಲಿಯವರೆಗೆ ನಡೆಸಿದ ಸಂಧಾನ ಪ್ರಯತ್ನದ ವರದಿಯನ್ನು ಸಲ್ಲಿಸಿತು.

    ಸಂಧಾನ ನಡೆಸಲು ಸುಪ್ರೀಂ ಕೋರ್ಟ್ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಫ್‍ಎಂಐ ಕಲಿಫುಲ್ಲಾ, ಧರ್ಮಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಮಂಚು ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ಸಮಿತಿ ರಚಿಸಿತ್ತು. ಈ ಮೂಲಕ ದಶಕಗಳಿಂದ ಬಗೆಹರಿಯದೇ ಉಳಿದಿರುವ ಅಯೋಧ್ಯೆ ಪ್ರಕರಣವನ್ನು ಸಂಧಾನದ ಮೂಲಕ ಅಥವಾ ಇನ್ನಿತರೆ ಮಾರ್ಗಗಳ ಮೂಲಕ ಪರಿಹರಿಸಲು ಮುಂದಾಗಿತ್ತು.

  • ಮೋಸ್ಟ್ ವಾಂಟೆಡ್ ಉಗ್ರ ದೊಡ್ಡಬಳ್ಳಾಪುರದಲ್ಲಿ ಅರೆಸ್ಟ್

    ಮೋಸ್ಟ್ ವಾಂಟೆಡ್ ಉಗ್ರ ದೊಡ್ಡಬಳ್ಳಾಪುರದಲ್ಲಿ ಅರೆಸ್ಟ್

    ಬೆಂಗಳೂರು: ದೊಡ್ಡಬಳ್ಳಾಪುರ ಮಸೀದಿಯೊಂದರಲ್ಲಿ ತಂಗಿದ್ದ ಮೋಸ್ಟ್ ವಾಂಟೆಡ್ ಶಂಕಿತ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

    ಬಾಂಗ್ಲಾದೇಶದ ಜಮತ್-ಉಲ್ಲಾ-ಮುಜ್ಜಾಹೀದಿನ್ ಎಂಬ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಬೀಬರ್ ರೆಹಮಾನ್ ಎಂಬ ಉಗ್ರನನ್ನು ಇಂದು ಮಧ್ಯಾಹ್ನ ಬೆಂಗಳೂರು ಹಾಗೂ ಕೊಲ್ಕತ್ತಾ ಎನ್‍ಐಎ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಮಸೀದಿಯೊಂದರ ಬಳಿ ಬಂಧಿಸಿದ್ದಾರೆ.

    ಬಂಧಿತ ಉಗ್ರ ಹಬೀಬರ್ 2013ರ ಭೋದಗಯಾ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಪಶ್ಚಿಮ ಬಂಗಾಳದ ಬುದ್ರ್ವಾನ್ ಸ್ಫೋಟದಲ್ಲಿ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ 8 ಜನ ಭಾಗಿಯಾಗಿದ್ದು ಮೂವರ ಬಂಧನವಾಗಿತ್ತು. ಉಳಿದ 5 ಜನಕ್ಕೆ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದ್ದರು. ಕಳೆದ ಐದು ದಿನಗಳಿಂದ ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಉಗ್ರ ತಂಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಸಲಿಗೆ ಬೆಂಗಳೂರಿನಲ್ಲಿ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಅನ್ವರ್ ಎಂಬಾತನೊಂದಿಗೆ ಈತ ನಂಟು ಹೊಂದಿದ್ದು ಮಸೀದಿಗೆ ಬಂದು ಹೋಗುತ್ತಿದ್ದ. ಕೆಲ ಸಮಯದ ಬಳಿಕ ಮೌಲ್ವಿ ಅನ್ವರ್ ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಮಸೀದಿಯಲ್ಲಿ ಮೌಲ್ವಿಯಾಗಿ ನೇಮಕಗೊಂಡಿದ್ದ. ಹೀಗಾಗಿ ಆಗಾಗ ಮೌಲ್ವಿ ಅನ್ವರ್ ಭೇಟಿ ಮಾಡಲು ಎಂದು ದೊಡ್ಡಬಳ್ಳಾಪುರದ ಮಸೀದಿಗೆ ಬರುತ್ತಿದ್ದ. ಇದೇ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಬಾಡಿಗೆ ಮನೆ ಮಾಡಲು ಉಗ್ರ ಪ್ಲಾನ್ ಮಾಡಿದ್ದನು ಮತ್ತು ಮನೆಯನ್ನು ಸಹ ನೋಡಿಕೊಂಡು ಬಂದಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ಸದ್ಯ ಬಂಧಿತ ಉಗ್ರ ಹಬೀಬುಲ್ ರೆಹಮಾನ್ ನನ್ನ ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗುತ್ತಿದ್ದು, ಮತ್ತೊಂದೆಡೆ ಮಸೀದಿಯ ಮೌಲ್ವಿ ಅನ್ವರ್ ನನ್ನ ದೊಡ್ಡಬಳ್ಳಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ. ಉಗ್ರನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಈ ಹಿಂದೆ ತಿಳಿಸಿತ್ತು.