Tag: mosque

  • ಮಸೀದಿ ತೆರವುಗೊಳಿಸಿ ಶ್ರೀಕೃಷ್ಣ ಜನ್ಮಭೂಮಿ ವಶ ಕೋರಿದ್ದ ಅರ್ಜಿ ವಜಾ

    ಮಸೀದಿ ತೆರವುಗೊಳಿಸಿ ಶ್ರೀಕೃಷ್ಣ ಜನ್ಮಭೂಮಿ ವಶ ಕೋರಿದ್ದ ಅರ್ಜಿ ವಜಾ

    ಮಥುರಾ: ಶ್ರೀ ಕೃಷ್ಣ ಜನ್ಮಭೂಮಿಯಾದ ಮಥುರಾದಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈದ್ಗಾ ಮಸೀದಿ ತೆರವುಗೊಳಿಸಬೇಕೆಂದು ಸಲ್ಲಿಕೆಯಾದ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.

    1991ರ ಪ್ರಾರ್ಥನಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯ್ದೆಯ ಪ್ರಕಾರ ಪ್ರಾರ್ಥನಾ ಮಂದಿರಗಳ ಬದಲಾವಣೆ ಮಾಡಲು ಅಸಾಧ್ಯ. ಹೀಗಾಗಿ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮಥುರಾ ಜಿಲ್ಲಾ ಸಹಾಯಕ ನ್ಯಾಯಾಧೀಶ ಛಯ್ಯಾ ಶರ್ಮಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

    ಕೋರ್ಟ್‌ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀ ಕೃಷ್ಣ ಜನ್ಮಸ್ಥಾನ ಪರ ಹೋರಾಟದ ಭಾಗವಾದ ಅಖಾಡ ಪರಿಷತ್‌ ಅಧ್ಯಕ್ಷ ಮಹಾಂತ್‌ ನರೇಂದ್ರ ಗಿರಿ,  ಅ.15ರಂದು ಕೋರ್ಟ್‌ ಆದೇಶದ ಸಂಬಂಧ ಸಭೆ ನಡೆಯಲಿದೆ. ಅಲ್ಲಿ ಮಥುರಾದ ಶ್ರೀಕೃಷ್ಣ ಜನ್ಮಸ್ಥಾನ ವಶಕ್ಕೆ ಅಗತ್ಯವಿರುವ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಅಯೋಧ್ಯೆಯ ರಾಮ ದೇವಾಲಯವಿದ್ದ ಜಾಗದಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಗಿದೆ ಎಂದು ಸುಪ್ರೀಂಕೋರ್ಟ್‌ ಐತಿಹಾಸಿಕಾ ತೀರ್ಪು ನೀಡಿದ ಬಳಿಕ ಈ ಅರ್ಜಿ ಸಲ್ಲಿಕೆಯಾಗಿತ್ತು.

    ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ಶಾಹಿ ಈದ್ಗಾ ಟ್ರಸ್ಟ್​ನ ನಿರ್ವಹಣಾ ಸಮಿತಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

    ಅರ್ಜಿಯಲ್ಲಿ ಏನಿತ್ತು?
    ಮಥುರಾದ ಕೃಷ್ಣ ಜನ್ಮಭೂಮಿ ಪ್ರದೇಶ ಹಿಂದೂಗಳಿಗೆ ಸೇರಿದೆ. ಕೃಷ್ಣನ ಭಕ್ತರು ಮತ್ತು ಹಿಂದೂ ಸಮುದಾಯದವರಿಗೆ ಇದು ಪವಿತ್ರ ಸ್ಥಳವಾಗಿದೆ. 1968ರ ರಾಜಿ ಪತ್ರವನ್ನು ಒಪ್ಪಲಾಗದು.

    ಕೆಲವು ಮುಸ್ಲಿಮರ ಸಹಾಯದಿಂದ ಈದ್ಗಾ ಟ್ರಸ್ಟ್ ಶ್ರೀ ಕೃಷ್ಣ ಜನಂಸ್ಥಾನ್ ಟ್ರಸ್ಟ್ ಮತ್ತು ದೇವತೆಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿ ಈದ್ಗಾ ಮಸೀದಿ ನಿರ್ಮಾಣ ಮಾಡಲಾಗಿದೆ. ಕೃಷ್ಣ ಜನಿಸಿದ ಸ್ಥಳವನ್ನು ʼಕತ್ರಾ ಕೇಶವ್ ದೇವ್’ ಎಂದು ಗುರುತಿಸಲಾಗಿದೆ. ಅಯೋಧ್ಯೆಯಂತೆ ಇಲ್ಲೂ ಸಹ ಶ್ರೀಕೃಷ್ಣನ ಜನ್ಮಸ್ಥಳವು ಈದ್ಗಾ ಮಸೀದಿ ಟ್ರಸ್ಟ್‌ನ ನಿರ್ವಹಣಾ ಸಮಿತಿ ರಚಿಸಿರುವ ಸಂರಚನೆಯ ಕೆಳಗೆ ಇದೆ.

    ಮಥುರಾದಲ್ಲಿನ ಕೃಷ್ಣ ದೇಗುಲವನ್ನು ಮುಘಲ್ ದೊರೆ ಔರಂಗಜೇಬ್ ಧ್ವಂಸಗೊಳಿಸಿದ್ದ ಎಂಬುದ್ದಕ್ಕೆ ಇತಿಹಾಸದಲ್ಲಿ ಸಾಕ್ಷ್ಯಗಳು ಸಿಗುತ್ತದೆ. ಕೃಷ್ಣ ಜನ್ಮಭೂಮಿಯಲ್ಲಿದ್ದ ದೇಗುಲವೂ ಸೇರಿದಂತೆ ಅನೇಕ ಹಿಂದೂ ದೇಗುಲಗಳನ್ನು ಔರಂಗಜೇಬ್ ಧ್ವಂಸಗೊಳಿಸಿದ್ದ, ಹೀಗಾಗಿ ಕೃಷ್ಣ ಜನ್ಮಭೂಮಿಯ 13.37 ಎಕರೆ ಪ್ರದೇಶ ಹಿಂದೂಗಳಿಗೆ ಸೇರಿದೆ. ಹೀಗಾಗಿ ಕೃಷ್ಣ ಜನ್ಮಭೂಮಿಯಿಂದ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಿ ಈ ಜಾಗವನ್ನು ಹಿಂದೂಗಳಿಗೆ ನೀಡಬೇಕೆಂದು ಮನವಿ ಮಾಡಲಾಗಿತ್ತು.

  • ಸಚಿವಾಲಯದ ಆವರಣದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಾಣ: ತೆಲಂಗಾಣ ಸಿಎಂ

    ಸಚಿವಾಲಯದ ಆವರಣದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಾಣ: ತೆಲಂಗಾಣ ಸಿಎಂ

    – ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದು ನಿರ್ಧಾರ

    ಹೈದರಾಬಾದ್: ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದು ರಾಜ್ಯ ಸಚಿವಾಲಯದ ಆವರಣದಲ್ಲಿ 2 ಮಸೀದಿ, 1 ದೇವಸ್ಥಾನ, 1 ಚರ್ಚ್ ನಿರ್ಮಿಸುವ ನಿರ್ಧಾರವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೈಗೊಂಡಿದ್ದಾರೆ.

    ಪ್ರಗತಿ ಭವನದಲ್ಲಿ ಮುಸ್ಲಿಂ ಸಮುದಾಯದ ಹಿರಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಸಿಎಂ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ. ಗಂಗಾ, ಯಮುನಾ, ತೆಹ್ಜೀಬ್ ಸಂಕೇತವಾಗಿ ಇವುಗಳನ್ನು ನಿರ್ಮಿಸುತ್ತಿರುವುದಾಗಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಎಲ್ಲ ಪೂಜಾ ಸ್ಥಳಗಳಿಗೆ ಒಂದೇ ದಿನ ಅಡಿಪಾಯ ಹಾಕಿ, ಒಂದೇ ದಿನ ನಿರ್ಮಾಣ ಕಾರ್ಯ ಪ್ರಾರಂಭಿಸಿ, ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿದ್ದಾರೆ.

    ಸಚಿವಾಲಯದ ಹಳೆಯ ಕಟ್ಟಡವನ್ನು ಕೆಡುವುವಾಗ ಒಂದು ದೇವಸ್ಥಾನ, ಎರಡು ಮಸೀದಿಗಳಿಗೆ ಹಾನಿಯಾಗಿತ್ತು, ಈ ಹಿನ್ನೆಲೆ ಮುಸ್ಲಿಂ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ.

    ಒಂದು ಇಮಾಮ್ ಕ್ವಾರ್ಟರ್ಸ್ ಸೇರಿ ತಲಾ 750 ಚ.ಅಡಿ ಒಟ್ಟು 1,500 ಚ.ಅಡಿಯಲ್ಲಿ 2 ಮಸೀದಿಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಮಸೀದಿಗಳಿದ್ದ ಜಾಗದಲ್ಲೇ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಮಸೀದಿಗಳನ್ನು ನಿರ್ಮಿಸಿದ ಬಳಿಕ ರಾಜ್ಯ ವಕ್ಫ್ ಬೋರ್ಡ್ ಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.

    ದೇವಸ್ಥಾನವನ್ನು 1,500 ಚ.ಅಡಿ ಜಾಗದಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಇದನ್ನೂ ಸಹ ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲ ಬೆಳವಣಿಗೆ ನಡೆಯುತ್ತಿರುವಾಗಲೇ ಕ್ರಿಶ್ಚಿಯನ್ ಸಮುದಾಯದವರು ಸಹ ಚರ್ಚ್‍ಗಾಗಿ ಬೇಡಿಕೆ ಇಟ್ಟಿದ್ದಾರೆ. ಹೊಸ ಸಚಿವಾಲಯದ ಕಟ್ಟಡದ ಆವರಣದಲ್ಲಿ ಚರ್ಚ್ ಸಹ ಇರಬೇಕು ಎಂದು ಬೇಡಿಕೆ ಇಟ್ಟಿದೆ. ಹೀಗಾಗಿ ಚರ್ಚ್ ಸಹ ನಿರ್ಮಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

    ರಾಜ್ಯವು ಎಲ್ಲ ಧರ್ಮಗಳನ್ನು ಸಮಾನವಾಗಿ ಪರಿಗಣಿಸುತ್ತದೆ. ತೆಲಂಗಾಣ ಧಾರ್ಮಿಕ ಸಹಿಷ್ಣುತೆಯನ್ನು ಪಾಲಿಸುತ್ತದೆ ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ. ಈ ಕುರಿತು ತೆಲಂಗಾಣದಲ್ಲಿ ಇದೀಗ ಭಾರೀ ಚರ್ಚೆ ನಡೆಯುತ್ತಿದೆ.

    ಅನಾಥ ಮುಸ್ಲಿಂ ಮಕ್ಕಳಿಗಾಗಿ ಆಶ್ರಯ ಕೇಂದ್ರ ನಿರ್ಮಾಣ ಕಾಮಗಾರಿ ಸಹ ಅಂತಿಮ ಹಂತದಲ್ಲಿದ್ದು, ಇನ್ನೂ 18 ಕೋಟಿ ರೂ.ಗಳನ್ನು ಇದೀಗ ಕೆಸಿಆರ್ ಸರ್ಕಾರ ಬಿಡುಗಡೆ ಮಾಡುತ್ತಿದೆ. ಅಲ್ಲದೆ ಹೈದರಾಬಾದ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ಮುಸ್ಲಿಂ ಕೇಂದ್ರವನ್ನು ಸ್ಥಾಪಿಸಲು ಸಹ ಕೆಸಿಆರ್ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಜಾಗವನ್ನು ಸಹ ಸರ್ಕಾರ ಗುರುತಿಸಿದೆ.

    ಅಲ್ಲದೆ ಮುಸ್ಲಿಂ ಸಮುದಾಯದವರಿಗಾಗಿ ಸಮಾಧಿ ಸ್ಥಳ(ಖಬ್ರಾಸ್ತಾನ್)ಗಳನ್ನು ಸಹ ಗುರುತಿಸಲು ಸರ್ಕಾರ ಮುಂದಾಗಿದ್ದು, ನಗರದ ಹಲವು ಸ್ಥಳಗಳಲ್ಲಿ 150-200 ಖಬ್ರಾಸ್ತಾನ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇಷ್ಟು ಮಾತ್ರವಲ್ಲದೆ ಉರ್ದುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಗುರುತಿಸಲು ಕೆಸಿಆರ್ ಮುಂದಾಗಿದ್ದಾರೆ. ಉರ್ದು ಭಾಷೆಯ ರಕ್ಷಣೆ, ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಕೆಸಿಆರ್ ಯೋಜನೆ ರೂಪಿಸಿದ್ದಾರೆ. ಸರ್ಕಾರ ನಡೆಸಿದ ಸಭೆಯಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಇವರ ಸಹೋದರ ಅಕ್ಬರುದ್ದೀನ್ ಓವೈಸಿ ಸಹ ಸಭೆಯಲ್ಲಿ ಭಾಗವಹಿಸಿದ್ದರು.

  • ಸಿಎಂ ಆಗಿ ತಾರತಮ್ಯ ಮಾಡಲ್ಲ, ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗಲ್ಲ – ಯೋಗಿ ಆದಿತ್ಯನಾಥ್‌

    ಸಿಎಂ ಆಗಿ ತಾರತಮ್ಯ ಮಾಡಲ್ಲ, ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗಲ್ಲ – ಯೋಗಿ ಆದಿತ್ಯನಾಥ್‌

    ಲಕ್ನೋ: ಮುಖ್ಯಮಂತ್ರಿಯಾಗಿ ನಾನು ತಾರತಮ್ಯ ಮಾಡುವುದಿಲ್ಲ. ಆದರೆ ಹಿಂದೂವಾಗಿ ಅಯೋಧ್ಯೆಯ ಮಸೀದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

    ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮ ಯಶಸ್ವಿಯಾಗಲು ಯೋಗಿ ಆದಿತ್ಯನಾಥ್‌ ಪಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದು ಯೋಗಿ ಆದಿತ್ಯನಾಥ್‌ ಅವರನ್ನು ಸಂದರ್ಶನ ಮಾಡಿದೆ.

    ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ನೀವು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ. ಅದೇ ರೀತಿಯಾಗಿ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸಿದರೆ ನೀವು ಭಾಗವಹಿಸುತ್ತೀರಾ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದನ್ನೂ ಓದಿ: ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ – ಮೂರು ಬಾರಿ ಮೊಳಗಿತು ಕರ್ನಾಟಕದ ಕಂಪು

    ಈ ಪ್ರಶ್ನೆಗೆ ಮಸೀದಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡುತ್ತಾರೆ ಎಂದು ನಿಮಗೆ ಅನಿಸುತ್ತೆಯೇ ಎಂದು ಮರು ಪ್ರಶ್ನೆ ಹಾಕಿದ ಯೋಗಿ, ನನ್ನನ್ನು ಆಹ್ವಾನಿಸುವ ಬಗ್ಗೆ ನನಗೆ ಆಗುವ ಸಮಸ್ಯೆಗಿಂತ ಅವರಿಗೆ ಜಾಸ್ತಿ ಸಮಸ್ಯೆಯಾಗಬಹುದು. ಈ ವಿಚಾರದಲ್ಲಿ ನನಗೆ ಯಾವುದೇ ಗೊಂದಲವಿಲ್ಲ ಎಂದು ಉತ್ತರಿಸಿದರು.

    ಮುಂದುವರಿಸಿದ ಅವರು ಮುಖ್ಯಮಂತ್ರಿಯಾಗಿ ನಾನು ಯಾವುದೇ ಜಾತಿ, ಧರ್ಮದ ಬಗ್ಗೆ ತಾರತಮ್ಯ ಮಾಡುವಂತಿಲ್ಲ. ಆದರೆ ಒಬ್ಬ ಯೋಗಿ ಮತ್ತು ಹಿಂದೂವಾಗಿ ನಾನು ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಯಾಕೆಂದರೆ ನನ್ನ ಧರ್ಮವನ್ನು ಪಾಲಿಸುವ ಹಕ್ಕು ನನಗಿದೆ ಎಂದು ಹೇಳಿದರು.

    ನಮ್ಮ ದೇಶದಲ್ಲಿ ಗಲಭೆಗಳು, ನಕ್ಸಲಿಸಂ, ಭಯೋತ್ಪಾದನೆಗೆ ಮೂಲ ಕಾರಣ ಹುಸಿ ಜಾತ್ಯಾತೀತತೆ. ಹುಸಿ ಜಾತ್ಯಾತೀತರೆಲ್ಲ ಹಿಂದೂಗಳನ್ನು ವಿರೋಧಿಸುತ್ತಿದ್ದಾರೆ. ಆದರೆ ರಾಮ ಮಂದಿರ ದೇವಾಲಯದ ಆಂದೋಲನ ಹುಸಿ ಜಾತ್ಯಾತೀತ ವ್ಯಕ್ತಿಗಳ ಮುಖವಾಡವನ್ನು ಕಳಚಿದೆ ಎಂದರು.

    ಈ ವೇಳೆ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದ ಬಗ್ಗೆ ಮಾತನಾಡಿ, ಪ್ರತಿ ವರ್ಷ ನಡೆಯುವ ದೀಪೋತ್ಸವನ್ನು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಬಗ್ಗೆ ನಾನು ಅವರಲ್ಲಿ ಪ್ರಶ್ನಿಸಿದಾಗ ಯಾವುದೇ ಧರ್ಮದ ಆಚರಣೆಯನ್ನು ಆಚರಿಸುವ ಹಕ್ಕು ನಮಗಿದೆ. ಯಾರೂ ಪೂರ್ವಜರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಉತ್ತರಿಸಿದರು ಎಂದು ಯೋಗಿ ಹೇಳಿದರು.

    ಮುಸ್ಲಿಂ ಸಮುದಾಯದಿಂದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಇಕ್ಬಾಲ್‌ ಅನ್ಸಾರಿ ಬಗ್ಗೆ ಕೇಳಲಾದ ಪ್ರಶ್ನೆಗೆ, ಸುಪ್ರೀಂ ತೀರ್ಪನ್ನು ಅವರು ಸ್ವಾಗತಿಸಿದ್ದು ಸಂತೋಷ ತಂದಿದೆ. ಇವರನ್ನು ನೋಡಿ ಇತರರು ಕಲಿಯುವ ವಿಚಾರ ಬಹಳಷ್ಟಿದೆ. ರಾಮ ಜನ್ಮಭೂಮಿ ಪ್ರಕರಣದ ಸಂಬಂಧ ಕೋರ್ಟ್‌ನಲ್ಲಿ ಅವರು ಹೋರಾಟ ಮಾಡಿದ್ದರೂ ಅವರಿಗೆ ಅಯೋಧ್ಯೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಉತ್ತರಿಸಿದರು.

    ಹಿಂದೂ ವ್ಯಕ್ತಿಯೊಬ್ಬ ಪಾಕಿಸ್ತಾನ ಅಥವಾ ಅಘ್ಫಾನಿಸ್ಥಾನದಲ್ಲಿ ದೇವಾಲಯ ಸಂಬಂಧ ಹೋರಾಟ ನಡೆಸಿದ್ದರೆ ಆತ ಸುರಕ್ಷಿತವಾಗಿರುತ್ತಿದ್ದನೇ ಎಂದು ಯೋಗಿ ಆದಿತ್ಯನಾಥ್‌ ಪ್ರಶ್ನಿಸಿದರು.

  • ಅಯೋಧ್ಯೆ ರೀತಿ ಕಾಶಿ, ಮಥುರಾದಲ್ಲಿ ಮಸೀದಿ ಧ್ವಂಸ ಆಗಲಿದೆ: ಸಚಿವ ಈಶ್ವರಪ್ಪ

    ಅಯೋಧ್ಯೆ ರೀತಿ ಕಾಶಿ, ಮಥುರಾದಲ್ಲಿ ಮಸೀದಿ ಧ್ವಂಸ ಆಗಲಿದೆ: ಸಚಿವ ಈಶ್ವರಪ್ಪ

    ಶಿವಮೊಗ್ಗ: ಅಯೋಧ್ಯೆಯಲ್ಲಿ ಮಸೀದಿ ತೆರವುಗೊಳಿಸಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುವುದು ಬಹುಸಂಖ್ಯಾತ ಹಿಂದೂಗಳ ಆಶಯವಾಗಿತ್ತು. ಇಂದು ನಮ್ಮೆಲ್ಲರ ಆಸೆ ಈಡೇರಿದೆ. ಆದರೆ ಅದೇ ರೀತಿ ಕಾಶಿ ಹಾಗೂ ಮಥುರಾದಲ್ಲಿ ಇರುವ ಮಸೀದಿ ಸಹ ಧ್ವಂಸ ಆಗಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಶಿವಮೊಗ್ಗ ನಗರದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಇಂದು ರಾಮ ಮಂದಿರ ನಿರ್ಮಾಣಕ್ಜೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ ಯಾವುದೇ ವಿಘ್ನ ಬರದಿರಲಿ ಎಂದು ವಿಎಚ್ ಪಿ ವತಿಯಿಂದ ರಾಮತಾರಕ ಹೋಮ ಅಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಸಚಿವರು ಅಯೋಧ್ಯೆಯ ರೀತಿಯಲ್ಲಿಯೇ ಕಾಶಿ ಹಾಗೂ ಮಥುರಾದಲ್ಲಿರುವ ಮಸೀದಿಗಳನ್ನು ಕೂಡ ಧ್ವಂಸ ಮಾಡಬೇಕಿದೆ ಎಂದರು.

    ಕಾಶಿ ಹಾಗೂ ಮಥುರಾದಲ್ಲಿ ದೇವರ ದರ್ಶನಕ್ಕೆ ತೆರಳಿದರೆ ನಾವು ಗುಲಾಮರು ಎಂಬಂತೆ ಭಾಸವಾಗುತ್ತದೆ. ಇದಕ್ಕೆ ಕಾರಣ ದೇವಾಲಯದ ಪಕ್ಕದಲ್ಲಿಯೇ ಮಸೀದಿ ಇರುವುದು. ಹೀಗಾಗಿ ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮಗೆ ಗುಲಾಮರು ಎಂಬಂತೆ ಬಿಂಬಿಸುತ್ತವೆ. ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಮಸೀದಿ ತೆರವುಗೊಳಿಸಲಾಗಿದೆ. ಅದೇ ರೀತಿ ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳನ್ನು ತೆರವುಗೊಳಿಸುತ್ತೇವೆ. ಕಾಶಿ ಹಾಗೂ ಮಥುರಾದಲ್ಲಿ ಇಂದಲ್ಲ, ನಾಳೆ ಮಸೀದಿ ಧ್ವಂಸ ಆಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗೆ ಇದೆ ಎಂದಿದ್ದಾರೆ.

  • ಉಡುಪಿಯಲ್ಲಿ ಬಕ್ರೀದ್ ಆಚರಣೆ- ಕಟ್ಟುನಿಟ್ಟಿನ ನಿಯಮದಡಿ ನಮಾಜ್‍ಗೆ ಅವಕಾಶ

    ಉಡುಪಿಯಲ್ಲಿ ಬಕ್ರೀದ್ ಆಚರಣೆ- ಕಟ್ಟುನಿಟ್ಟಿನ ನಿಯಮದಡಿ ನಮಾಜ್‍ಗೆ ಅವಕಾಶ

    – ಆಲಿಂಗನ ಇಲ್ಲ, ವೃದ್ಧರು-ಮಕ್ಕಳಿಗೆ ಅವಕಾಶ ಇಲ್ಲ

    ಉಡುಪಿ: ಕರಾವಳಿಯ ಮುಸಲ್ಮಾನರಿಗೆ ಇಂದು ಬಕ್ರೀದ್ ಹಬ್ಬದ ಸಂಭ್ರಮ. ಸಾಂಕ್ರಾಮಿಕ ಕೊರೊನ ಹರಡಿರುವುದರಿಂದ ಬಕ್ರೀದ್ ಹಬ್ಬವನ್ನು ಬಹಳ ಸರಳವಾಗಿ ಮುಸಲ್ಮಾನರು ಆಚರಿಸಿದ್ದಾರೆ. ಮಸೀದಿಗಳಲ್ಲಿ ಬೆಳಗ್ಗೆ ನಮಾಜ್ ನಡೆದಿದ್ದು, ಕೇವಲ ಐವತ್ತು ಜನಕ್ಕೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ.

    ಪ್ರತಿ ಮಸೀದಿಯಲ್ಲೂ ಕೂಡ ಇದೇ ಷರತ್ತು ಅನ್ವಯ ಆಗಿದೆ. ನಮಾಜ್ ಗೆ ಮಾತ್ರ ಅವಕಾಶ ಕಲ್ಪಿಸಿರುವ ಕಮಿಟಿ, ನಮಾಜ್ ನಂತರ ಆಲಿಂಗನಕ್ಕೆ ಅವಕಾಶ ಕೊಟ್ಟಿಲ್ಲ. ಐವತ್ತಕ್ಕಿಂತ ಹೆಚ್ಚು ಜನ ಮಸೀದಿಗೆ ಆಗಮಿಸಿದರೆ ಎರಡು ಬ್ಯಾಚ್ ಗಳಲ್ಲಿ ನಮಾಜ್ ಗೆ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಗೆ ಮತ್ತು ವೃದ್ಧರಿಗೆ ಯಾವುದೇ ಕಾರಣಕ್ಕೂ ಬಕ್ರೀದ್ ನಮಾಜ್ ಗೆ ಮಸೀದಿಗೆ ಪ್ರವೇಶ ಇರಲಿಲ್ಲ. ಇದನ್ನೂ ಓದಿ:  ತ್ಯಾಗ ಬಲಿದಾನದ ಸಂಕೇತ ಬಕ್ರೀದ್: ಈ ಹಬ್ಬದ ವಿಶೇಷತೆ ಏನು? ಇಲ್ಲಿದೆ ವಿವರ

    ಮಕ್ಕಳು ಮತ್ತು ವೃದ್ಧರಿಗೆ ತಮ್ಮ ತಮ್ಮ ಮನೆಗಳಲ್ಲೇ ನಮಾಜ್ ಮಾಡಿ, ಹಬ್ಬವನ್ನು ಆಚರಿಸುವಂತೆ ಧರ್ಮಗುರುಗಳು ಆಯಾಯ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆಯೇ ಕರೆ ಕೊಟ್ಟಿದ್ದರು. ಈ ಹಿಂದೆ ಮುಸಲ್ಮಾನರ ರಂಜಾನ್ ಹಬ್ಬದ ಸಂಭ್ರಮಕ್ಕೂ ಕೊರೊನಾ ಅಡ್ಡ ಬಂದಿತ್ತು.

  • ಕೊರೊನಾ ರೋಗವಲ್ಲ, ನಮ್ಮ ತಪ್ಪುಗಳಿಗೆ ಅಲ್ಲಾಹ ನೀಡಿದ ಶಿಕ್ಷೆ: ಸಂಸದ

    ಕೊರೊನಾ ರೋಗವಲ್ಲ, ನಮ್ಮ ತಪ್ಪುಗಳಿಗೆ ಅಲ್ಲಾಹ ನೀಡಿದ ಶಿಕ್ಷೆ: ಸಂಸದ

    -ಸಂಸದರ ಹೇಳಿಕೆಯ ವಿಡಿಯೋ ವೈರಲ್

    ಲಕ್ನೊ: ಕೊರೊನಾ ಒಂದು ರೋಗವಲ್ಲ. ನಮ್ಮ ತಪ್ಪುಗಳಿಗೆ ಅಲ್ಲಾಹು ನಮ್ಮ ತಪ್ಪುಗಳಿಗೆ ನೀಡಿದ ಶಿಕ್ಷೆ ಎಂದು ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಕ ಹೇಳಿರುವ ವಿಡಿಯೋ ವೈರಲ್ ಆಗಿದೆ.

    ಅಲ್ಲಾಹು ನೀಡಿರುವ ಈ ಕೊರೊನಾ ಶಿಕ್ಷೆಯಿಂದ ಪಾರಾಗಲು ನಾವು ನಮಾಜ್ ಮಾಡುವ ಮೂಲಕ ಕ್ಷಮೆ ಕೇಳಬೇಕು. ನಮ್ಮನ್ನು ಅಲ್ಲಾಲಹ ಕ್ಷಮಿಸಿದ್ರೆ ನಾವು ಕೊರೊನಾದಿಂದ ಬದುಕುಳಿಯಬಹುದು ಎಂದು ಬರ್ಕ ಹೇಳಿದ್ದರು. ಸಂಸದರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

    ಜುಲೈ 19ರಂದು ಮಾತನಾಡಿರುವ ಸಂಸದರು, ಬಕ್ರಿದ್ ಹಬ್ಬದ ವೇಳೆ ಮಾರುಕಟ್ಟೆಯನ್ನು ತೆರೆಯಬೇಕು. ಮಾರುಕಟ್ಟೆ ಓಪನ್ ಆದ್ರೆ ಜನರು ಕುರ್ಬಾನಿಗಾಗಿ ಜಾನುವಾರುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಕೊರೊನಾ ವೈರಸ್‍ನ್ನು ಅಂತ್ಯ ಮಾಡುವದಕ್ಕಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ವಿಡಿಯೋ ವೈರಲ್ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಂಸದರು ತಮ್ಮ ಹೇಳಿಕೆಯನ್ನು ಪುನರುಚ್ಛಿರಿಸಿದ್ದಾರೆ. ಸದ್ಯ ಸರ್ಕಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಹಬ್ಬದ ಪ್ರಯುಕ್ತವಾಗಿ ಸಾಮೂಹಿಕ ನಮಾಜ್ ಗೆ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೇನೆ. ಸರ್ಕಾರ ಸಮ್ಮತಿ ಸೂಚಿಸಿದ್ರೆ ಮಸೀದಿಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಸರ್ಕಾರ ಒಪ್ಪದಿದ್ರೆ ಮನೆಗಳಲ್ಲಿ ನಮಾಜ್ ಮಾಡುತೇವೆ ಎಂದು ಶಫಿಕುರ್ ರಹಮಾನ್ ಬರ್ಕ ಹೇಳಿದ್ದಾರೆ.

  • ನವಜಾತ ಶಿಶುಗೆ ರಕ್ತ ಸಿಗದಿದ್ದಕ್ಕೆ ಮಸೀದಿಯಲ್ಲೇ ಶುರುವಾಯ್ತು ರಕ್ತದಾನ ಶಿಬಿರ

    ನವಜಾತ ಶಿಶುಗೆ ರಕ್ತ ಸಿಗದಿದ್ದಕ್ಕೆ ಮಸೀದಿಯಲ್ಲೇ ಶುರುವಾಯ್ತು ರಕ್ತದಾನ ಶಿಬಿರ

    ಧಾರವಾಡ: ನವಜಾತ ಶಿಶುವಿಗೆ ರಕ್ತ ಸಿಗದಿದ್ದಕ್ಕೆ ನಗರದ ಯುವಕರ ಸಂಘವೊಂದು ಮಸೀದಿಯಲ್ಲೇ ರಕ್ತದಾನ ಶಿಬಿರ ಆರಂಭಿಸಿ ಮಾನವೀಯತೆ ಮೆರೆದಿದೆ.

    ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ವೈರಸ್ ಭಯದಿಂದ ರಕ್ತದಾನ ಮಾಡುವುದಕ್ಕೆ ಜನರೇ ಬರುತ್ತಿಲ್ಲ. ಇತ್ತ ರಕ್ತದಾನ ಶಿಬಿರಗಳೇ ನಡೆಯದ ಕಾರಣ ರಕ್ತ ಭಂಡಾರಕ್ಕೆ ತುರ್ತು ರಕ್ತದ ಅವಶ್ಯಕತೆ ಎದುರಾಗಿತ್ತು. ಇದನ್ನು ಮನಗಂಡ ನಗರದ ಜಕಣೀಬಾವಿ ಬಳಿಯ ಮಹಮ್ಮದ್ ಮಸೀದಿಯ ಜಮಾತ್ ಅಹಲೆ ಹದೀಸ್ ಟ್ರಸ್ಟ್ ಕೈ ಜೋಡಿಸಿ ರಕ್ತದಾನ ಶಿಬಿರ ನಡೆಸಿದೆ.

    ಮಸೀದಿಯ ಆವರಣದಲ್ಲಿಯೇ ರಕ್ತದಾನ ಶಿಬಿರ ನಡೆಸಲಾಗಿದ್ದು, 90 ಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿರುವ ಮಗುವೊಂದು ಕೇವಲ 900 ಗ್ರಾಂ ಮಾತ್ರ ತೂಕ ಹೊಂದಿತ್ತು. ಆ ಮಗುವಿಗೆ ತುರ್ತು ರಕ್ತದ ಅಗತ್ಯವೂ ಎದುರಾಗಿತ್ತು. ಮಸೀದಿಯಲ್ಲಿ ನಡೆದ ರಕ್ತದಾನ ಶಿಬಿರದಿಂದ ಮಗುವಿನ ಜೀವ ಉಳಿಸುವುದಕ್ಕೂ ಸಹಾಯವಾಗಿದೆ ಎಂದು ಜಿಲ್ಲಾ ರಕ್ತ ಭಂಡಾರದ ಮುಖ್ಯಸ್ಥರು ಹೇಳಿದ್ದಾರೆ. ಅಲ್ಲದೇ ಹಲವು ರೋಗಿಗಳಿಗೆ ಈ ರಕ್ತದಾನದಿಂದ ಸಹಾಯವಾಗಲಿದೆ ಎಂದು ವೈದ್ಯ ಡಾ.ಅಚ್ಯುತ್ ಹೇಳಿದರು.

  • 24 ಗಂಟೆಯಲ್ಲಿ 8 ಮಂದಿ ಭಯೋತ್ಪಾದಕರನ್ನ ಹೊಡೆದುರುಳಿಸಿದ ಭದ್ರತಾ ಪಡೆ

    24 ಗಂಟೆಯಲ್ಲಿ 8 ಮಂದಿ ಭಯೋತ್ಪಾದಕರನ್ನ ಹೊಡೆದುರುಳಿಸಿದ ಭದ್ರತಾ ಪಡೆ

    – ಮಸೀದಿಯಲ್ಲಿ ಅಡಗಿದ್ದ ಉಗ್ರರು

    ಶ್ರೀನಗರ: ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಎಂಟು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

    ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪ್ರದೇಶದಲ್ಲಿ ಮೂವರು ಮತ್ತು ಶೋಪಿಯಾನ್ ಜಿಲ್ಲೆಯಲ್ಲಿ ಐವರು ಭಯೋತ್ಪದಕರು ಸಾವನ್ನಪ್ಪಿದ್ದಾರೆ. ಅವಂತಿಪೋರಾ ಪ್ರದೇಶದ ಮೀನ್ ಗ್ರಾಮದಲ್ಲಿ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಭಯೋತ್ಪಾದಕ ಸಾವನ್ನಪ್ಪಿದ್ದನು.

    ಇನ್ನಿಬ್ಬರು ಭಯೋತ್ಪದಕರು ಹತ್ತಿರದ ಮಸೀದಿಗೆ ಪ್ರವೇಶಿಸಿ ಅದರೊಳಗೆ ಆಶ್ರಯ ಪಡೆದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

    ಈ ಪೈಕಿ ಶುಕ್ರವಾರ ಬೆಳಗ್ಗೆ ಭದ್ರತಾ ಪಡೆಗಳು ಮಸೀದಿಯಲ್ಲಿ ಅಡಗಿದ್ದ ಇಬ್ಬರನ್ನು ಉಗ್ರರನ್ನು ಹತ್ಯೆ ಮಾಡಿದೆ. ಧಾರ್ಮಿಕ ಸ್ಥಳವಾಗಿದ್ದರಿಂದ ಯಾವುದೇ ಗುಂಡಿನ ದಾಳಿ ಅಥವಾ ಐಇಡಿ (ಸ್ಫೋಟಕ ಸಾಧನ) ಬಳಸಲಾಗಿಲ್ಲ ಎಂದು ಕಾಶ್ಮೀರದ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಭದ್ರತಾ ಪಡೆ ತಾಳ್ಮೆ ಮತ್ತು ವೃತ್ತಿಪರತೆಯಿಂದ ಕೆಲಸ ಮಾಡಿದೆ. ಗುಂಡಿನ ದಾಳಿ ಮತ್ತು ಐಇಡಿ ಬಳಕೆ ಮಾಡಿಲ್ಲ. ಭಯೋತ್ಪಾದಕರು ಅನಿವಾರ್ಯವಾಗಿ ಮಸೀದಿಯಿಂದ ಹೊರಗೆ ಬರುವಂತೆ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿತ್ತು. ಉಗ್ರರು ಹೊರಗೆ ಬರುತ್ತಿದ್ದಂತೆ ಭದ್ರತಾ ಪಡೆ ಹೊಡೆದುರುಳಿಸಿವೆ. ಈ ಮೂಲಕ ಮಸೀದಿಯ ಪಾವಿತ್ರ್ಯತೆಯನ್ನು ಕಾಪಾಡಲಾಗಿದೆ ಎಂದು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಬ್ಬಾಗ್ ಸಿಂಗ್ ತಿಳಿಸಿದರು.

    ದಾಳಿ ನಡೆದ ಸಂದರ್ಭದಲ್ಲಿ ಧಾರ್ಮಿಕ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ. ಹೀಗಾಗಿ ಮಸೀದಿಗೆ ಹಾನಿಯಾಗದಂತೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದರಿಂದ ಸ್ಥಳೀಯರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಶೋಪಿಯಾನ್ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಹತ್ಯೆಗೀಡಾದ ಭಯೋತ್ಪಾದಕರು ಜೈಶ್-ಎ-ಮುಹಮ್ಮದ್ ಸಂಘಟನೆಗೆ ಸೇರಿದವರು ಎಂದು ಗುರುತಿಸಲಾಗಿದೆ.

  • ಗಂಗಾವತಿಯಲ್ಲಿ ಮೌಲ್ವಿಗೆ ಸೋಂಕು- ಹೆಚ್ಚಿದ ಆತಂಕ

    ಗಂಗಾವತಿಯಲ್ಲಿ ಮೌಲ್ವಿಗೆ ಸೋಂಕು- ಹೆಚ್ಚಿದ ಆತಂಕ

    ಕೊಪ್ಪಳ: ಆಂಧ್ರದಿಂದ ಮರಳಿದ ಮೌಲ್ವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ.

    ಈ ಕುರಿತು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಮಾಹಿತಿ ನೀಡಿದ್ದು, ಜಿಲ್ಲೆಯ ಗಂಗಾವತಿಯಲ್ಲಿ ಆಂಧ್ರದ ಆಧೋನಿ ಮೂಲದ 32 ವರ್ಷದ ಮೌಲ್ವಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತ ನಗರದ ಹೃದಯ ಭಾಗದಲ್ಲಿರುವ ಜಾಮೀಯಾ ಮಸೀದಿಯಲ್ಲಿ ಮೌಲ್ವಿಯಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಗಂಗಾವತಿಗೆ ಆಗಮಿಸಿ ಜಾಮೀಯಾ ಮಸೀದಿಯಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡಿಸಿದ್ದಾರೆ. ರೋಗ ಲಕ್ಷಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆ ಮಾಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ವಿವರಿಸಿದ್ದಾರೆ.

    ಕೊರೊನಾ ಪಾಸಿಟಿವ್ ಬರುತ್ತಿದಂತೆ ಗಂಗಾವತಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ನಗರಸಭೆ ಅಧಿಕಾರಿಗಳು, ಸೋಂಕಿತ ಮೌಲ್ವಿಯನ್ನು ಕೊಪ್ಪಳದ ಕೋವಿಡ್-19 ಆಸ್ಪತ್ರೆಗೆ ರವಾನಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೌಲ್ವಿ ವಾಸವಿದ್ದ ಮನೆ ಮತ್ತು ಮಸೀದಿ ಸುತ್ತಲಿನ ಪ್ರದೇಶವನ್ನು ಸೀಲ್‍ಡೌನ್ ಮಾಡಿದ್ದಾರೆ. ಅಲ್ಲದೆ ಮಸೀದಿ ಬಳಿ ಇರುವ ಡೇಲಿ ಮಾರ್ಕೆಟ್ ಕೂಡ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆತ ವಾಸವಿದ್ದ ಮನೆ, ಮಸೀದಿ ಹಾಗೂ ಸುತ್ತಲಿನ ಪ್ರದೇಶವನ್ನು ನಗರಸಭೆ ಸಿಬ್ಬಂದಿ ಸ್ಯಾನಿಟೈಸ್ ಮಾಡಿದ್ದಾರೆ. ಅಲ್ಲದೆ ಆ ಪ್ರದೇಶದಿಂದ ಯಾರೂ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಭಯಾನಕ ವಿಚಾರವೆಂದರೆ ಮೌಲ್ವಿ ನಗರಕ್ಕೆ ಆಗಮಿಸುತ್ತಿದ್ದಂತೆ ಮಾರ್ಕೆಟ್‍ಗೆ ತೆರಳಿ ಹಣ್ಣು ಹಂಪಲು, ತರಕಾರಿ ಖರೀದಿಸಿದ್ದಾರೆ. ಅದಲ್ಲದೆ ಹೋಟೆಲ್ ಗಳಿಗೆ ಹೋಗಿ ತಿನಿಸುಗಳನ್ನು ಪಾರ್ಸಲ್ ತಂದಿದ್ದಾರೆ. ಹೀಗಾಗಿ ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಮಾಡಿದವರನ್ನೆಲ್ಲ ಕ್ವಾರಂಟೈನ್ ಮಾಡಲಾಗುತ್ತಿದೆ. ಸೀಲ್ ಡೌನ್ ಮಾಡಿದ ಪ್ರದೇಶದ ನಜ ಭಯಭೀತರಾಗಿದ್ದು, ನಗರಸಭೆ ಸಿಬ್ಬಂದಿ ಹಾಗೂ ವಾರ್ಡ್ ಸದಸ್ಯರು ಜನರಿಗೆ ತಿಳಿ ಹೇಳುತ್ತಿದ್ದಾರೆ.

  • ಮಡಿಕೇರಿ ನಗರದ 14 ಮಸೀದಿಗಳು ಇನ್ನೂ ಒಂದು ತಿಂಗಳು ಓಪನ್ ಇಲ್ಲ

    ಮಡಿಕೇರಿ ನಗರದ 14 ಮಸೀದಿಗಳು ಇನ್ನೂ ಒಂದು ತಿಂಗಳು ಓಪನ್ ಇಲ್ಲ

    ಮಡಿಕೇರಿ: ಕೊರೊನಾ ಮಹಾಮಾರಿಯಿಂದಾಗಿ ದೇಶದಲ್ಲಿ ಲಾಕ್‍ಡೌನ್ ಮಾಡಲಾಗಿತ್ತು. ನಾಳೆಯಿಂದ ಎರಡೂವರೆ ತಿಂಗಳ ಬಳಿಕ ಧಾರ್ಮಿಕ ಕೇಂದ್ರಗಳು ತೆರೆಯುತ್ತಿವೆ. ಆದರೆ ಮಡಿಕೇರಿಯಲ್ಲಿ ಎಲ್ಲಾ ಮಸೀದಿಗಳು ಇನ್ನೂ ಒಂದು ತಿಂಗಳು ತೆರೆಯುವುದಿಲ್ಲ.

    ಕೊಡಗು ಮುಸ್ಲಿಂ ಜಮಾತ್ ಒಕ್ಕೂಟ ಈ ನಿರ್ಧಾರ ಕೈಗೊಂಡಿದ್ದು, ಜುಲೈ 5 ರವೆಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧ ಮಾಡಲಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಇಂತಹ ನಿರ್ಧಾರ ತೆಗೆದುಕೊಂಡಿರುವುದಾಗಿ ಜಮಾತ್ ಒಕ್ಕೂಟ ನಿರ್ಧರಿಸಿದೆ. ಕೊಡಗಿನಲ್ಲಿ 150ಕ್ಕೂ ಹೆಚ್ಚು ಮಸೀದಿಗಳಿದ್ದು, ಮಡಿಕೇರಿ ನಗರದಲ್ಲಿ 14 ಮಸೀದಿಗಳಿವೆ. ಮಡಿಕೇರಿ ನಗರದ 14 ಮಸೀದಿಗಳು ಕೂಡ ಈ ನಿರ್ಧಾರವನ್ನು ಒಪ್ಪಿಕೊಂಡಿವೆ.

    ಇದೇ ನಿಯಮವನ್ನು ಕೊಡಗಿನ ಎಲ್ಲಾ ಮಸೀದಿಗಳು ಅನುಸರಿಸುವ ಸಾಧ್ಯತೆ ಇದೆ. ಮಡಿಕೇರಿ ನಗರ ಜಿಲ್ಲಾ ಕೇಂದ್ರವಾಗಿದ್ದು, ಜೊತೆಗೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಜನರು ಬಂದು ಹೋಗುವುದು ಇರುತ್ತದೆ. ಹೀಗಾಗಿ ಇದು ಜನರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಿರುವುದಾಗಿ ಜಮಾತ್ ಒಕ್ಕೂಟಗಳ ಅಧ್ಯಕ್ಷ ಹನೀಫ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ