Tag: Morning walking

  • ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

    ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

    – ಒಂದೇ ಕುಟುಂಬದ ಆರು ಜನರು
    – ನದಿ ದಡದಲ್ಲಿ ಕುಟುಂಬಸ್ಥರ ಆಕ್ರಂದನ
    – ಗ್ರಾಮದಲ್ಲಿ ಸ್ಮಶಾನ ಮೌನ

    ಚಂಡೀಗಢ: ಒಂದೇ ಕುಟುಂಬದ ಆರು ಜನ ನದಿಯಲ್ಲಿ ಮುಳುಗಿರುವ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯ ಜಲ್ಮಾನಾ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಕುಟುಂಸ್ಥರು ಯಮುನಾ ನದಿ ದಡದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರು ಜನರಲ್ಲಿ ಮೂವರ ಶವ ಪತ್ತೆಯಾಗಿದ್ದು, ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದೆ.

    ನದಿ ದಡದಲ್ಲಿ ವಾಯು ವಿಹಾರಕ್ಕಾಗಿ ಸುಶೀಲ್ ಕುಟುಂಬದವರ ಜೊತೆ ತೆರಳಿದ್ದರು. ಸುಶೀಲ್ ಜೊತೆಯಲ್ಲಿ ಪತ್ನಿ ಸೋನಿಯಾ (32), ಮಕ್ಕಳಾದ ಸಾಗರ್ (15), ಪಾಯಲ್ (12), ಸಂಬಂಧಿ ಸರೀತಾ (18), ಸಂಬಂಧಿಯ ಮಕ್ಕಳಾದ ಬಾದಲ್ (18) ಮತ್ತು ಗರ್ವ್ (16) ಜೊತೆಯಾಗಿ ವಾಕಿಂಗ್ ಗೆ ಬಂದಿದ್ದರು. ಈ ವೇಳೆ ಮಕ್ಕಳು ನದಿಯಲ್ಲಿ ಸ್ನಾನ ಮಾಡೋದಾಗಿ ಹಠ ಹಿಡಿದಿದ್ದರಿಂದ ಸುಶೀಲ್ ನದಿ ದಡದಲ್ಲಿಯೇ ಕುಳಿತುಕೊಂಡಿದ್ದರು.

    ಪತ್ನಿ ಸೋನಿಯಾ ಮಕ್ಕಳನ್ನು ಕರೆದುಕೊಂಡು ನದಿಯಲ್ಲಿ ಇಳಿದಿದ್ದರು. ಮಕ್ಕಳು ನದಿ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಸೋನಿಯಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಸರೀತಾ ಸಹ ನದಿಯಲ್ಲಿ ಮುಳಗಲಾರಂಭಿಸಿದ್ದಾರೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಆರು ಜನ ಯುಮುನೆಯ ಪಾಲಾಗಿದ್ದಾರೆ. ಇನ್ನು ದಡದಲ್ಲಿ ಕುಳಿತಿದ್ದ ಸುಶೀಲ್ ಸಹಾಯಕ್ಕಾಗಿ ಕೂಗಿ ಕೂಗಿ ಜ್ಞಾನ ತಪ್ಪಿದ್ದಾರೆ.

    ಮಕ್ಕಳ ಧ್ವನಿ ಕೇಳಿದ್ದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಮತ್ತು ಕುರಿಗಾಹಿ ನದಿಗೆ ಧುಮುಕಿದ್ರೂ ಯಾರನ್ನ ಉಳಿಸಲು ಸಾಧ್ಯವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಹಲವು ಯುವಕರು ನದಿಗೆ ಧುಮುಕಿ ಆರು ಜನರಿಗಾಗಿ ಶೋಧ ನಡೆಸಿದ್ದಾರೆ. ಪೊಲೀಸರು ಸಹ ಘಟನಾ ಸ್ಥಳಕ್ಕೆ ಆಗಮಿಸಿ ಈಜು ತಜ್ಞರ ಮೂಲಕ ಹುಡುಕಾಟ ನಡೆಸಿದ್ದರು. ಬೆಳಗ್ಗೆ 11 ಗಂಟೆಗೆ ಘಟನಾ ಸ್ಥಳದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಸೋನಿಯಾ, ಸರೀತಾ ಮತ್ತು ಬಾದಲ್ ಶವ ಪತ್ತೆಯಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡಲಾಗಿದೆ.

    ಡಿಸಿ ಧಮೇಂದ್ರ ಸಿಂಗ್, ಡಿಎಸ್‍ಪಿ ಪ್ರದೀಪ್ ಕುಮಾರ್, ಡಿಆರ್‍ಓ ಚಂದ್ರಮೋಹನ್, ತಹಶೀಲ್ದಾರ್ ನರೇಶ್ ಕೌಶಲ್ ಘಟನಾ ಸ್ಥಳದಲ್ಲಿದ್ದಾರೆ. ಬೋಟ್, ಮುಳುಗು ತಜ್ಞರ ಸಹಾಯದ ಮೂಲಕ ಉಳಿದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆ ಸುತ್ತಲಿನ ಗ್ರಾಮಗಳ ಈಜುಗಾರರು ಮತ್ತು ನಾವಿಕರನ್ನ ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ನದಿ ದಡದಲ್ಲಿಯೇ ಗ್ರಾಮಸ್ಥರು ಬೀಡು ಬಿಟ್ಟಿದ್ದಾರೆ.

  • ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಜನರ ಮನ ಗೆದ್ದ ಎಸ್‍ಪಿ

    ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಜನರ ಮನ ಗೆದ್ದ ಎಸ್‍ಪಿ

    ಹಾಸನ: ಕೇಸ್ ಇಲ್ಲ, ಲಾಠಿ ರುಚಿಯಿಲ್ಲ, ಪ್ರೀತಿಯಿಂದಲೇ ಹಾಸನದ ಎಸ್‍ಪಿ ಶ್ರೀನಿವಾಸ್ ಗೌಡ ಜನರ ಮನ ಗೆದ್ದಿದ್ದಾರೆ.

    ಲಾಕ್‍ಡೌನ್ ಉಲ್ಲಂಘಿಸಿ ನಗರದ ಮೈದಾನದಲ್ಲಿ ಗುಂಪು ಗುಂಪಾಗಿ ಜನರು ವಾಕ್ ಮಾಡುತ್ತಿದ್ದಾರೆ. ಎಷ್ಟು ತಿಳಿ ಹೇಳಿದರೂ ಹಾಸನದ ಜನ ಬೆಳಗ್ಗೆ ಮೈದಾನಕ್ಕೆ ತೆರಳಿ ವಾಕ್ ಮಾಡುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಈ ಬಗ್ಗೆ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹಾಸನ ಎಸ್‍ಪಿ ಶ್ರೀನಿವಾಸ್ ಗೌಡ ಸ್ವತಃ ಕಾರ್ಯಾಚರಣೆಗಿಳಿದ್ದಾರೆ.

    ಶ್ರೀನಿವಾಸ್ ಗೌಡ ಅವರು ಇಂದು ತಮ್ಮ ತಂಡದೊಂದಿಗೆ ಮೈದಾನಕ್ಕೆ ತೆರಳಿ ವಾಕ್ ಮಾಡುತ್ತಿದ್ದವರನ್ನು ಪೊಲೀಸ್ ವಾಹನದಲ್ಲಿ ಡಿಆರ್ ಮೈದಾನಕ್ಕೆ ಕರೆ ತಂದಿದ್ದರು. ಅಲ್ಲಿಗೆ ಒಬ್ಬರು ಯೋಗ ಗುರುಗಳನ್ನು ಕರೆಸಿ ಮನೆಯಲ್ಲೇ ಮಾಡಬಹುದಾದ ಸರಳ ವ್ಯಾಯಾಮ ಮತ್ತು ಯೋಗಾಸನಗಳ ಬಗ್ಗೆ ತಿಳಿಸಿಕೊಟಿದ್ದಾರೆ.

    ಎಸ್‍ಪಿಯವರೇ ಸ್ವತಃ ಜನರೊಂದಿಗೆ ಕುಳಿತು ಯೋಗ ಮಾಡಿದ್ದಲ್ಲದೆ, ಇನ್ನು ಮುಂದೆ ಮನೆಯಲ್ಲೇ ಇದ್ದು ವ್ಯಾಯಾಮ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪೊಲೀಸರು ಅಂದ್ರೆ ಭಯದಿಂದ ನೋಡುತ್ತಿದ್ದ ಜನ, ಹಾಸನ ಎಸ್‍ಪಿಯವರ ಸರಳ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.