Tag: Morbi Bridge

  • ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

    ಮೋರ್ಬಿ ಸೇತುವೆ ದುರಂತ – ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿದ್ದೇ ಕಾರಣ: ತನಿಖಾ ವರದಿ

    ಗಾಂಧಿನಗರ: ಕಳೆದ ವರ್ಷ ಬರೋಬ್ಬರಿ 135 ಜನರ ಸಾವಿಗೆ ಕಾರಣವಾದ ಗುಜರಾತ್‌ನ (Gujarat) ಮೋರ್ಬಿಯಲ್ಲಿನ ಸೇತುವೆ ದುರಂತದ (Morbi Bridge Tragedy) ಕೆಲವು ನಿಜ ಅಂಶಗಳು ತನಿಖಾ ವರದಿಯಲ್ಲಿ ಬಯಲಾಗಿದೆ. ತೂಗು ಸೇತುವೆಯ ಕೆಲವು ತಂತಿಗಳು ಮೊದಲೇ ಮುರಿದಿದ್ದು, ಹಲವು ತುಕ್ಕು ಹಿಡಿದಿದ್ದವು ಎಂದು ತನಿಖೆಯ ವರದಿ ತಿಳಿಸಿದೆ.

    ಮೋರ್ಬಿ ಸೇತುವೆ ದುರಂತದ ತನಿಖೆಯನ್ನು ಗುಜರಾತ್ ಸರ್ಕಾರ ವಿಶೇಷ ತನಿಖಾ ತಂಡಕ್ಕೆ (SIT) ವಹಿಸಿತ್ತು. ಇದೀಗ ಎಸ್‌ಐಟಿ ಸೇತುವೆ ದುರಸ್ತಿ, ನಿರ್ವಹಣೆ ಹಾಗೂ ಕಾರ್ಯಾಚರಣೆಯಲ್ಲಿ ಹಲವು ಲೋಪಗಳನ್ನು ಪತ್ತೆ ಮಾಡಿದೆ.

    ಮಚ್ಚು ನದಿಯ ಮೇಲೆ 1887ರಲ್ಲಿ ಆಗಿನ ಆಡಳಿತಗಾರರು ನಿರ್ಮಿಸಿದ್ದ ಸೇತುವೆಯ 2 ಮುಖ್ಯ ಕೇಬಲ್‌ಗಳಲ್ಲಿ ಒಂದು ಕೇಬಲ್‌ನಲ್ಲಿ ತುಕ್ಕಿನ ಸಮಸ್ಯೆಯಿತ್ತು. ಅದರ ಅರ್ಧದಷ್ಟು ತಂತಿಗಳಿಗೆ ತುಕ್ಕು ಹಿಡಿದಿತ್ತು. ಇದು ಕಳೆದ ವರ್ಷ ಅಕ್ಟೋಬರ್ 30 ರಂದು ದುರಂತ ಸಂಭವಿಸಲು ಕಾರಣವಾಗಿರುವ ಸಾಧ್ಯತೆಯಿದೆ. ನದಿಯ ಮೇಲ್ಭಾಗದ ಮುಖ್ಯ ಕೇಬಲ್ ತುಂಡಾಗಿರುವುದೂ ದುರಂತಕ್ಕೆ ಕಾರಣ ಎಂದು ಎಸ್‌ಐಟಿ ತಿಳಿಸಿದೆ. ಇದನ್ನೂ ಓದಿ: ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    ಸೇತುವೆಯ ಪ್ರತಿಯೊಂದು ಕೇಬಲ್ ಅನ್ನು 7 ಎಳೆಗಳಿಂದ ರಚಿಸಲಾಗಿದ್ದು, ಅವು ಉಕ್ಕಿನ ತಂತಿಗಳಾಗಿವೆ. ಈ ಕೇಬಲ್ ಅನ್ನು ರೂಪಿಸಲು ಒಟ್ಟು 49 ತಂತಿಗಳನ್ನು 7 ಎಳೆಗಳಲ್ಲಿ ಒಟ್ಟಿಗೆ ಜೋಡಿಸಲಾಗಿದೆ. 49 ತಂತಿಗಳಲ್ಲಿ 22 ತುಕ್ಕು ಹಿಡಿದಿರುವುದು ಗಮನಿಸಲಾಗಿದೆ. ಇದು ಘಟನೆಗೂ ಮೊದಲೇ ಮುರಿದು ಹೋಗಿರುವುದನ್ನು ಸೂಚಿಸುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

    ಇನ್ನು ಸೇತುವೆ ನವೀಕರಣದ ಸಮಯದಲ್ಲಿ ಹಳೆಯ ಸಸ್ಪೆಂಡರ್‌ಗಳನ್ನು (ಕೇಬಲ್‌ಗಳನ್ನು ಸಂಪರ್ಕಿಸುವ ಸ್ಟೀಲ್ ರಾಡ್‌ಗಳು) ಹೊಸ ಸಸ್ಪೆಂಡರ್‌ಗಳೊಂದಿಗೆ ಬೆಸುಗೆ ಹಾಕಲಾಗಿದೆ ಎಂಬುದನ್ನು ಎಸ್‌ಐಟಿ ಕಂಡುಹಿಡಿದಿದೆ. ಆದ್ದರಿಂದ ಸಸ್ಪೆಂಡರ್‌ಗಳ ನಡವಳಿಕೆ ಬದಲಾಗಿದ್ದು, ದುರಂತ ಸಂಭವಿಸಲು ಕಾರಣವಾಗಿದೆ ಎಂದು ಉಲ್ಲೇಖಿಸಿದೆ.

    ದುರಂತ ಸಂಭವಿಸುವ ಸಂದರ್ಭ ಸೇತುವೆ ಮೇಲೆ 300 ಜನರಿದ್ದರು. ಇದು ಸೇತುವೆ ಭಾರವನ್ನು ಹೊರುವ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿದೆ. ಆದರೂ ಸೇತುವೆಯ ನೈಜ ನಾಮರ್ಥ್ಯವನ್ನು ಪ್ರಯೋಗಾಲಯದ ವರದಿಗಳಿಂದ ದೃಢೀಕರಿಸಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: 9 ಪ್ರಶ್ನೆಗಳಿಗೆ ಉತ್ತರ ಕೊಡಿ: ರೂಪಾಗೆ ರೋಹಿಣಿ ಅಭಿಮಾನಿಗಳ ಪ್ರಶ್ನೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋರ್ಬಿ ದುರಂತ: 1 ಲಕ್ಷ ರೂ. ದಂಡ ಪಾವತಿಸಿ – ಪುರಸಭೆ ವಿರುದ್ಧ ಹೈಕೋರ್ಟ್ ಗರಂ

    ಮೋರ್ಬಿ ದುರಂತ: 1 ಲಕ್ಷ ರೂ. ದಂಡ ಪಾವತಿಸಿ – ಪುರಸಭೆ ವಿರುದ್ಧ ಹೈಕೋರ್ಟ್ ಗರಂ

    ಗಾಂಧೀನಗರ: 135 ಜನರ ಸಾವಿಗೆ ಕಾರಣವಾದ ಗುಜರಾತ್‍ನ ಮೋರ್ಬಿ ತೂಗು ಸೇತುವೆ (Morbi Bridge) ದುರಂತಕ್ಕೆ ಸಂಬಂಧಿಸಿದಂತೆ ಮೋರ್ಬಿ ಪುರಸಭೆಯನ್ನು (MMC) ಗುಜರಾತ್ ಹೈಕೋರ್ಟ್ (Gujarat High Court) ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ.

    ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಪುರಸಭೆ ಪ್ರತಿಕ್ರಿಯೆ ನೀಡಲು ವಿಫಲವಾದ ಬೆನ್ನಲ್ಲೇ ಅಫಿಡವಿಟ್ ಸಲ್ಲಿಸಿ ಇಲ್ಲವೇ 1 ಲಕ್ಷ ರೂ. ದಂಡ (Fine) ಪಾವತಿಸಿ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಭಾರತದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಹಿಂದೂಗಳೇ: ಮೋಹನ್ ಭಾಗವತ್

    ಈ ದುರ್ಘಟನೆಯನ್ನು ಲಘುವಾಗಿ ಪರಿಗಣಿಸಬೇಡಿ ಈ ಹಿಂದೆ ಕೇಳಿದ್ದ ಪ್ರಶ್ನೆಗೆ ಉತ್ತರ ಇನ್ನೂ ಕೊಟ್ಟಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಒಂದೋ ಅಫಿಡವಿಟ್ ಸಲ್ಲಿಸಿ ಇಲ್ಲವೇ 1 ಲಕ್ಷ ರೂ. ದಂಡ ಪಾವತಿಸಿ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಎಂಎಂಸಿ ಪರ ವಕೀಲರಿಗೆ ತಾಕೀತು ಮಾಡಿದರು. ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಧೀಶರು ಗರಂ ಆದರು.

    ಅಕ್ಟೋಬರ್ 30 ರಂದು ದುರಂತದ ಕುರಿತಾಗಿ ಸ್ವಯಂಪ್ರೇರಿತವಾಗಿ ಹೈಕೋರ್ಟ್ ಪ್ರಕರಣ ದಾಖಲಿಸಿಕೊಂಡಿತ್ತು. ಈ ದುರಂತಕ್ಕೆ ಸರ್ಕಾರ ಅದರ ಮುಖ್ಯ ಕಾರ್ಯದರ್ಶಿ, ಮೋರ್ಬಿ ನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ, ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಹೊಣೆಗಾರರನ್ನಾಗಿ ಮಾಡುವಂತೆ ನಿರ್ದೇಶಿಸಿತ್ತು. ಇದನ್ನೂ ಓದಿ: ಗುಜರಾತ್‍ನ ಮೋರ್ಬಿ ದುರಂತ- ಉತ್ತರವಿಲ್ಲದ ಐದು ಪ್ರಶ್ನೆಗಳು

    ನೋಟಿಸ್ ಜಾರಿ ಮಾಡಿದ್ದರೂ ಪುರಸಭೆ ನ್ಯಾಯಾಲಯದ ಮುಂದೆ ಹಾಜರಾಗದೆ ಅತಿ ಬುದ್ಧಿವಂತಿಕೆ ತೋರುತ್ತಿದೆ ಎಂದು ಪೀಠ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿತ್ತು. ಪುರಸಭೆ ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರಲಿದ್ದು ಅವರು ಚುನಾವಣಾ ಕರ್ತವ್ಯದಲ್ಲಿದ್ದಾರೆ. ಅವರಿಗೆ ನೋಟಿಸ್ ನೀಡುವ ಬದಲು ಪುರಸಭೆಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ವಿಳಂಬವಾಯಿತು ಎಂದು ವಕೀಲರು ವಿವರಿಸಿದ್ದರು. ಖಾಸಗಿ ಗುತ್ತಿಗೆದಾರರೊಡನೆ ಈ ಮೊದಲ ಒಪ್ಪಂದದ ಅವಧಿ ಮುಕ್ತಾಯಗೊಂಡ ನಂತರವೂ ಮೂರು ವರ್ಷಗಳವರೆಗೂ ಮೋರ್ಬಿ ತೂಗು ಸೇತುವೆಯ ನಿರ್ವಹಣೆಗೆ ಏಕೆ ಅನುಮತಿ ನೀಡಲಾಗಿತ್ತು ಎಂದು ಕೋರ್ಟ್ ಪ್ರಶ್ನಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಮೋರ್ಬಿ ಸೇತುವೆ ದುರಂತ – ನದಿಗೆ ಹಾರಿ ಜನರ ಪ್ರಾಣ ಉಳಿಸಿದ ಮಾಜಿ ಶಾಸಕನಿಗೆ ಬಿಜೆಪಿಯಿಂದ ಟಿಕೆಟ್

    ಮೋರ್ಬಿ ಸೇತುವೆ ದುರಂತ – ನದಿಗೆ ಹಾರಿ ಜನರ ಪ್ರಾಣ ಉಳಿಸಿದ ಮಾಜಿ ಶಾಸಕನಿಗೆ ಬಿಜೆಪಿಯಿಂದ ಟಿಕೆಟ್

    ಗಾಂಧೀನಗರ: ಗುಜರಾತ್‍ನ (Gujrat) ಮೋರ್ಬಿ (Morbi) ಸೇತುವೆಯಲ್ಲಿ ಸಂಭವಿಸಿದ ದುರಂತದಲ್ಲಿ ನದಿಗೆ ಹಾರಿ ಜನರ ಜೀವ ಉಳಿಸಿದ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯಾ (Kantilal Amrutiya) ಅವರನ್ನು ಮೊರ್ಬಿಯಿಂದ ಬಿಜೆಪಿ ಕಣಕ್ಕಿಳಿಸಿದೆ. ಈ ಬಾರಿ ವಿಧಾನಸಭೆ ಚುನಾವಣೆಯಿಂದ ಮೊರ್ಬಿಯ ಹಾಲಿ ಶಾಸಕ ಬ್ರಿಜೇಶ್ ಮೆರ್ಜಾ (Brijesh Merja) ಅವರನ್ನು ಕೈಬಿಡಲಾಗಿದೆ.

    ಅಕ್ಟೋಬರ್ 30 ರಂದು ಶತಮಾನದಷ್ಟು ಹಳೆಯದಾದ ಸೇತುವೆಯ ಕೇಬಲ್‍ಗಳು ಮುರಿದು ಬಿದ್ದು, ಅನೇಕ ಮಂದಿ ನದಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ ಅಮೃತಿಯಾ ಅವರು ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿ ಜನರನ್ನು ರಕ್ಷಿಸಲು ಪ್ರಯತ್ನಿಸಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನೀರಿನಲ್ಲಿ ಸಿಲುಕಿದವರ ಜೀವ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟ ಕಾಂತಿಲಾಲ್ ಅಮೃತಿಯಾ ಅವರ ಸುದ್ದಿ ಭಾರೀ ಸದ್ದು ಮಾಡಿತ್ತು. ಇದೀಗ ಅವರ ಕಾರ್ಯವನ್ನು ಮೆಚ್ಚಿ ಗುಜರಾತ್ ಚುನಾವಣೆಯಲ್ಲಿ ಮೊರ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ “ಟಿಕೆಟ್” ನೀಡಿದೆ ಎಂಬ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಜಡೇಜಾ ಪತ್ನಿಗೆ ಗುಜರಾತ್‍ನ ಜಮ್ನಗರ ಉತ್ತರದಿಂದ ಬಿಜೆಪಿ ಟಿಕೆಟ್

    ಬಿಜೆಪಿಯ ಗುಜರಾತ್ ಅಭ್ಯರ್ಥಿಗಳ ಮೂಲ ಪಟ್ಟಿಯಲ್ಲಿ ಈ ಹಿಂದೆ ಕಾಂತಿಲಾಲ್ ಅಮೃತಿಯಾ ಅವರ ಹೆಸರು ಇರಲಿಲ್ಲ. ಆದರೀಗ ಅವರ ಧೈರ್ಯಕ್ಕೆ ಮೆಚ್ಚಿ, ಪ್ರತಿಫಲವಾಗಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿದೆ ಎನ್ನಲಾಗುತ್ತಿದೆ. ಗುಜರಾತ್‍ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಲಾಲುಗೆ ಕಿಡ್ನಿ ನೀಡಲು ಮುಂದಾದ ಪುತ್ರಿ – ನವೆಂಬರ್ ಅಂತ್ಯದಲ್ಲಿ ವಿದೇಶಕ್ಕೆ RJD ಮುಖ್ಯಸ್ಥ

    Live Tv
    [brid partner=56869869 player=32851 video=960834 autoplay=true]

  • ಮೋರ್ಬಿ ಸೇತುವೆ ದುರಂತ, 9 ಮಂದಿ ಅರೆಸ್ಟ್‌ – ಟೆಂಡರ್‌ ಪಡೆದು ಇನ್ನೊಂದು ಕಂಪನಿಯಿಂದ ರಿಪೇರಿ

    ಮೋರ್ಬಿ ಸೇತುವೆ ದುರಂತ, 9 ಮಂದಿ ಅರೆಸ್ಟ್‌ – ಟೆಂಡರ್‌ ಪಡೆದು ಇನ್ನೊಂದು ಕಂಪನಿಯಿಂದ ರಿಪೇರಿ

    ಗಾಂಧಿನಗರ: ಗುಜರಾತ್‍ನ(Gujarat)ಮೋರ್ಬಿ ಪಟ್ಟಣದಲ್ಲಿದ್ದ ಪುರಾತನ ತೂಗುಸೇತುವೆ(Morbi Bridge Collapse) ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

    ತೂಗು ಸೇತುವೆಯನ್ನು ನವೀಕರಿಸಿದ್ದ ಒರೆವಾ(Oreva) ಕಂಪನಿಯ ಅಧಿಕಾರಿಗಳು, ಟಿಕೆಟ್‌ ಮಾರಾಟ ಮಾಡಿದ್ದ ವ್ಯಕ್ತಿ ಮತ್ತು ಭದ್ರತಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.

    ಮೊರ್ಬಿ ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 304(ಕೊಲೆಯೆಂದು ಪರಿಗಣಿಸಲಾದ ಅಪರಾಧಿಕ ಮಾನವ ಹತ್ಯೆ), 308(ಮಾನವ ಹತ್ಯೆ ಮಾಡಲು ಪ್ರಯತ್ನ), 114( ಅಪರಾಧಕ್ಕೆ ದುಷ್ಪ್ರೇರಕನ ಹಾಜರಿ) ಅಡಿ ಎಫ್‌ಐಆರ್‌ ದಾಖಲಾಗಿದೆ.

    ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಮೊರ್ಬಿ ನಗರಸಭೆ ವಾಚ್‌ ತಯಾರಕಾ ಸಂಸ್ಥೆ ಒರೆವಾ(ಅಜಂತಾ ಮಾನ್ಯುಫ್ಯಾಕ್ಷರಿಂಗ್‌ ಪ್ರೈವೆಟ್‌ ಲಿಮಿಟೆಡ್‌) ಜೊತೆ 15 ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿತ್ತು. ಸರ್ಕಾರದ ಟೆಂಡರ್‌ ಪಡೆದ ಒರೆವಾ ಕಂಪನಿ ಸೇತುವೆ ದುರಸ್ತಿ ಕೆಲಸವನ್ನು ಯಾವುದೇ ದಾಖಲೆಗಳಿಲ್ಲದ ದೇವಪ್ರಕಾಶ್‌ ಸೊಲ್ಯೂಷನ್‌ ಸಂಸ್ಥೆಗೆ ನೀಡಿತ್ತು.

    8 ರಿಂದ 12 ತಿಂಗಳ ಕಾಲ ಸೇತುವೆಯನ್ನು ಮುಚ್ಚಿ ದುರಸ್ತಿ ಮಾಡಬೇಕೆಂದು ಒಪ್ಪಂದದಲ್ಲಿ ಸೂಚಿಸಲಾಗಿತ್ತು. ಹೀಗಿದ್ದರೂ ಕೇವಲ 5 ತಿಂಗಳಿನಲ್ಲಿ ನವೀಕರಣಗೊಂಡು ಅ.26 ರಂದು ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಷರತ್ತು ಉಲ್ಲಂಘಿಸಿ ಸಂಸ್ಥೆ ಬೇಜವಾಬ್ದಾರಿ ಮತ್ತು ಅಸಡ್ಡೆ ವರ್ತನೆ ತೋರಿದೆ ಎಂದು ಎಫ್‌ಐಆರ್‌ ದಾಖಲಾಗಿದೆ. ಹೀಗಿದ್ದರೂ ಎಫ್‌ಐಆರ್‌ನಲ್ಲಿ ಪೊಲೀಸರು ಯಾರ ಹೆಸರನ್ನು ಉಲ್ಲೇಖಿಸಿಲ್ಲ. ಇದನ್ನೂ ಓದಿ: 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    ಭಾನುವಾರ ಸುಮಾರು 500 ಮಂದಿಗೆ 17 ರೂ. ದರದಲ್ಲಿ ಟಿಕೆಟ್‌ ಮಾರಾಟ ಮಾಡಲಾಗಿದೆ. ಈ ಸೇತುವೆ 125 ಮಂದಿಯ ತೂಕವನ್ನು ಮಾತ್ರ ತಡೆದುಕೊಳ್ಳವ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ಸೇತುವೆ ಮುರಿದು ಬಿದ್ದಿದೆ. 2037ರ ವರೆಗೆ ಪ್ರತಿ ವರ್ಷ ಟಿಕೆಟ್‌ ದರವನ್ನು ಏರಿಸಲು ಕಂಪನಿಗೆ ಅನುಮತಿ ನೀಡಲಾಗಿತ್ತು.

    ಈ ಸೇತುವೆ ನವೀಕರಣಗೊಂಡ ಬಳಿಕ ಮಾತನಾಡಿದ್ದ ಒರೆವಾ ಕಂಪನಿಯ ಆಡಳಿತ ನಿರ್ದೇಶಕ ಜಯಸುಖ್‌ಭಾಯ್‌ ಪಟೇಲ್‌, 2 ಕೋಟಿ ರೂ. ವೆಚ್ಚದಲ್ಲಿ ಶೇ.100 ರಷ್ಟು ನವೀಕರಣ ಮಾಡಲಾಗಿದೆ. ಅಷ್ಟೇ ಅಲ್ಲದೇ ಈ ಸೇತುವೆ 8 ರಿಂದ 10 ವರ್ಷ ಕಾಲ ಬಾಳಿಕೆ ಬರಲಿದೆ ಎಂದು ತಿಳಿಸಿದ್ದರು.

    ಸಾವಿನ ಸಂಖ್ಯೆ 141ಕ್ಕೆ ಏರಿಕೆ:
    ಸೇತುವೆ ದುರಂತಕ್ಕೆ ಬಲಿಯಾದವರ ಸಂಖ್ಯೆ 141ಕ್ಕೆ ಏರಿಕೆ ಆಗಿದೆ. ಬ್ರಿಟೀಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ತೂಗುಸೇತುವೆ ಗುಜರಾತ್‍ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿತ್ತು. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    19ನೇ ಶತಮಾನದಲ್ಲಿ ಯುರೋಪ್ ತಂತ್ರಜ್ಞಾನ ಬಳಸಿ ಮಚ್ಚು ನದಿ ಮೇಲೆ ನಿರ್ಮಿಸಿದ್ದ ಈ ತೂಗು ಸೇತುವೆಯನ್ನು ಕಲಾತ್ಮಕ ಮತ್ತು ಸಾಂಕೇತಿಕ ಅದ್ಭುತ ಎಂದೇ ಕರೆಯಲಾಗುತ್ತಿತ್ತು. 1.25 ಮೀಟರ್ ಅಗಲ, 233 ಮೀಟರ್ ಉದ್ದದ ಈ ಸೇತುವೆ ಶಿಥಿಲಗೊಂಡಿದ್ದ ಕಾರಣ ಮಾರ್ಚ್‍ನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು.  ಗುಜರಾತಿಗಳ ಹೊಸವರ್ಷವಾದ ಅಕ್ಟೋಬರ್ 26ಕ್ಕೆ ಇದು ಮರು ಲೋಕಾರ್ಪಣೆಗೊಂಡಿತ್ತು. ಹೀಗಾಗಿಯೇ ಪ್ರವಾಸಿಗರು ದೊಡ್ಡ ಮಟ್ಟದಲ್ಲಿ ಭಾನುವಾರ ಹರಿದು ಬಂದಿದ್ದರು.

    ರಾಜ್‍ಕೋಟ್‍ನ ಬಿಜೆಪಿ ಸಂಸದ ಮೋಹನ್‍ಬಾಯ್ ಕುಂದಾರಿಯಾ ಸಹೋದರಿ ಕುಟುಂಬದ 12 ಸದಸ್ಯರು ಸೇರಿ 141 ಮಂದಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. 56 ಮಕ್ಕಳು ಸಹ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. ಭಾರತೀಯ ಸೇನೆಯ ಮೂರು ಪಡೆಗಳು, ಎನ್‍ಡಿಆರ್‌ಎಫ್, ಅಗ್ನಿಶಾಮಕ ಪಡೆಗಳು ಸೇರಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವ ಇದೆ. ಎಲ್ಲಿ ನೋಡಿದರೂ ಸ್ಮಶಾನ ಸದೃಶ ವಾತಾವರಣವೇ ಕಂಡುಬರುತ್ತಿದೆ. ಇನ್ನೂ ನೂರಕ್ಕೂ ಹೆಚ್ಚು ಮಂದಿ ಪತ್ತೆಯಾಗಬೇಕಿದೆ. ತಮ್ಮವರನ್ನು ಕಾಣದೇ ಸಂಬಂಧಿಕರು ಆತಂಕದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    ಗಾಂಧಿನಗರ: ಸುಮಾರು 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ತೂಗುಸೇತುವೆ (Morbi Bridge) ಅಲುಗಾಡಿಸಿದ್ದರಿಂದ ಅವಘಡ ಸಂಭವಿಸಿದೆ ಎಂದು ಘಟನೆಯಲ್ಲಿ ಬದುಕುಳಿದವರು ಆರೋಪಿಸಿದ್ದಾರೆ.

    ಭಾನುವಾರ ಸಂಜೆ 6:30ರ ಸುಮಾರಿಗೆ ಸೇತುವೆ ಕುಸಿದು 132 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೋರ್ಬಿ ಸೇತುವೆ ಕುಸಿತದಿಂದ ಗಾಯಗೊಂಡು ಬದುಕುಳಿದವರೆಲ್ಲರನ್ನು ಜಿಎಂಇಆರ್‌ಎಸ್ (GMERS) ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಹೇಗಾಯ್ತು ಎಂಬುದರ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಅಜ್ಜಿಯ ಅಖಂಡ ಭಾರತದ ಕನಸನ್ನು ಈಡೇರಿಸುತ್ತೇನೆ: ರಾಹುಲ್ ಗಾಂಧಿ ಭಾವನಾತ್ಮಕ ಪೋಸ್ಟ್

    ಸುಮಾರು 15-20 ಕಿಡಿಗೇಡಿಗಳು ಸೇತುವೆಯ ಹಗ್ಗಗಳನ್ನು ಉದ್ದೇಶಪೂರ್ವಕವಾಗಿ ಅಲುಗಾಡಿಸುತ್ತಿದ್ದರು. ಹೀಗಾಗಿ ಸೇತುವೆ ಕುಸಿಯುವ ಮುನ್ನ ಮೂರು ಬಾರಿ ಜೋರಾಗಿ ಶಬ್ದ ಕೇಳಿ ಬಂತು. ನಾನೂ ಕೆಳಗೆ ಬಿದ್ದೆ. ಆದರೆ ನಾನು ಬೀಳುವಾಗ ಸೇತುವೆಯ ಸುತ್ತಲೂ ಇದ್ದ ರೋಪ್ ಹಿಡಿದಿದ್ದೆ. ನನ್ನ ಜೊತೆಯಲ್ಲಿ ನನ್ನ ಸ್ನೇಹಿತನೂ ಇದ್ದ. ಸುಮಾರು ಏಳು ಜನ ರೋಪ್ ಅನ್ನು ಹಿಡಿದು ಮೇಲಕ್ಕೆ ಏರಲು ಆರಂಭಿಸಿದರು. ಘಟನೆ ವೇಳೆ ನನ್ನ ಕಾಲು ಮತ್ತು ಬೆನ್ನಿಗೆ ಗಾಯಗಳಾಗಿದ್ದು, ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಅಶ್ವಿನ್ ಮೆಹ್ರಾ ಎಂಬವರು ಹೇಳಿದ್ದಾರೆ.

    ಅಹಮದಾಬಾದ್ (Ahlahabad) ನಿವಾಸಿ ವಿಜಯ್ ಗೋಸ್ವಾಮಿ ಮತ್ತು ಅವರ ಕುಟುಂಬಸ್ಥರು ಸಹ ತೂಗು ಸೇತುವೆಗೆ ಭೇಟಿ ನೀಡಿದ್ದರು. ಆದರೆ ಕೆಲವು ಯುವಕರು ಉದ್ದೇಶಪೂರ್ವಕವಾಗಿ ಸೇತುವೆಯನ್ನು ಅಲುಗಾಡಿಸಿದ್ದರಿಂದ ಅರ್ಧದಾರಿಯಲ್ಲೇ ಹಿಂತಿರುಗಿದರು. ಬ್ರಿಟಿಷರ ಕಾಲದ ಈ ಸೇತುವೆಯನ್ನು ನವೀಕರಣಗೊಳಿಸಿ ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಸಾರ್ವಜನಿಕರಿಗಾಗಿ ಪುನಃ ತೆರೆಯಲಾಗಿತ್ತು. ಇದನ್ನೂ ಓದಿ: ಪೊಲೀಸರೇ ಪ್ಲೀಸ್ ನಮ್ಮನ್ನು ಕಳ್ಳರಿಂದ ಕಾಪಾಡಿ – ಕುರಿಗಳಿಂದ ವಿನೂತನ ಪ್ರತಿಭಟನೆ

    ಖಾಸಗಿ ಕಂಪನಿಯೊಂದು ಸೇತುವೆ ದುರಸ್ತಿ ಕಾರ್ಯ ನಡೆಸಿತ್ತು. ನವೀಕರಣ ಕಾಮಗಾರಿ ಮುಗಿದ ಬಳಿಕ ಸಾರ್ವಜನಿಕರು ಓಡಾಟಕ್ಕೆ ತೆರಯಲಾಗಿತ್ತು. ಆದರೆ ಸ್ಥಳೀಯ ಪುರಸಭೆ ನವೀಕರಣ ಕಾರ್ಯದ ನಂತರ ಯಾವುದೇ ಫಿಟ್‍ನೆಸ್ ಪ್ರಮಾಣಪತ್ರವನ್ನು ನೀಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್‍ನ ತೂಗು ಸೇತುವೆ ಕುಸಿತ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ

    ಗುಜರಾತ್‍ನ ತೂಗು ಸೇತುವೆ ಕುಸಿತ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಗುಜರಾತ್ (Gujarat) ಮೋರ್ಬಿ ಸೇತುವೆ (Morbi Bridge) ಕುಸಿತದಿಂದ ಅನೇಕ ಮಂದಿ ಪ್ರಾಣಕಳೆದುಕೊಂಡಿರುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಬೇಸರ ವ್ಯಕ್ತಪಡಿಸಿದ್ದು, ಸೇತುವೆ ಕುಸಿತಕ್ಕೆ ಕಾರಣವೇನೆಂಬುವುದರ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

    ಘಟನೆಯಲ್ಲಿ ಮೃತಪಟ್ಟಿದವರಿಗೆ ಸಂತಾಪ ಸೂಚಿಸುತ್ತೇನೆ. ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಸೇತುವೆ ಯಾಕೆ ಕುಸಿದಿದೆ. ಅಲ್ಲಿ ಇಷ್ಟು ಜನರು ಓಡಾಡಲು ಅವಕಾಶ ನೀಡಿದವರು ಯಾರು? ಈ ಎಲ್ಲದರ ಬಗ್ಗೆ ಸುಪ್ರೀಂಕೋರ್ಟ್ (Supreme Court) ಅಥವಾ ಹೈಕೋರ್ಟ್ (High Court) ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಮೃತರ ಕುಟುಂಬಕ್ಕೆ ಪರಿಹಾರ ಸೇರಿದಂತೆ ಎಲ್ಲ ಅಗತ್ಯ ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಹೇಶ್ ಕಮಾಲ್, ಬಿಜೆಪಿಗೆ ಭರ್ಜರಿ ಗೆಲುವು – 7 ಅನರ್ಹರಲ್ಲಿ 6 ಮಂದಿ ಜಯಭೇರಿ

    ತಮ್ಮ ಪಕ್ಷದ ಕಾಂಗ್ರೆಸ್ ನಾಯಕರು ಕೂಡ ಮೋರ್ಬಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಸ್ಥರಿಗೆ ಸಹಾಯ ಮಾಡಲಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಹ ಘಟನಾ ಸ್ಥಳಕ್ಕೆ ಹೋಗಲಿದ್ದಾರೆ. ನಾವು ಕೂಡ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಈ ವಿಚಾರದಲ್ಲಿ ನಾವು ಯಾವುದೇ ರಾಜಕೀಯ ಮಾಡಲು ಬಯಸುವುದಿಲ್ಲ ಮತ್ತು ಈಗಲೇ ಯಾರನ್ನೂ ದೂಷಿಸಲು ಬಯಸುವುದಿಲ್ಲ. ತನಿಖಾ ವರದಿ ಬಂದ ನಂತರ ಏನು ಮಾಡುತ್ತಾರೆ ಅಂತ ನೋಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೊಮ್ಮಗಳು ಮದುವೆ ಆಗದೇ ಮಗು ಮಾಡಿಕೊಂಡರೂ ಓಕೆ: ಜಯಾ ಬಚ್ಚನ್ ಅಚ್ಚರಿ ಹೇಳಿಕೆ

    Live Tv
    [brid partner=56869869 player=32851 video=960834 autoplay=true]