Tag: mooru savira Matt

  • ಉತ್ತರಾಧಿಕಾರಿ ವಿವಾದ – ಮೂರು ಸಾವಿರ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

    ಉತ್ತರಾಧಿಕಾರಿ ವಿವಾದ – ಮೂರು ಸಾವಿರ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

    ಹುಬ್ಬಳ್ಳಿ: ಜಿಲ್ಲೆಯ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ತಾರಕಕ್ಕೇರಿದ್ದು, ಉತ್ತರಾಧಿಕಾರಿ ದಿಂಗಾಲೇಶ್ವರ ಸ್ವಾಮೀಜಿ ತಮ್ಮನ್ನ ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದು ಸತ್ಯವೋ ಸುಳ್ಳೋ ಅನ್ನೋ ಬಗ್ಗೆ ಇಂದು ಸತ್ಯ ದರ್ಶನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

    ದಿಂಗಾಲೇಶ್ವರ ಸ್ವಾಮೀಜಿ ಇಂದು ಸತ್ಯ ದರ್ಶನಕ್ಕೆ ಮುಂದಾಗಿದ್ದು. ಬೆಳಗ್ಗೆ 11 ಗಂಟೆಗೆ ನೆಹರು ಮೈದಾನದಿಂದ ಮೆರವಣಿಗೆ ಮೂಲಕ ಆಗಮಿಸಿ ಮಠದ ಆವರಣದಲ್ಲಿ ಸತ್ಯ ದರ್ಶನ ಸಭೆ ನಡೆಸಲಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಕರೆ ನೀಡಿದ ಹಿನ್ನೆಲೆಯಲ್ಲಿ ಮಠಕ್ಕೆ ಇಂದು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಮಠದ ಆವರಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ದಿಂಗಾಲೇಶ್ವರ ಸ್ವಾಮೀಜಿ ನಡೆಸಲು ಮುಂದಾಗಿರುವ ಸತ್ಯ ದರ್ಶನ ಸಭೆಗೆ ಮಠದ ಆಡಳಿತ ಅನುಮತಿ ನಿರಾಕರಿಸಿದ್ದು, ಮಧ್ಯ ರಾತ್ರಿವರೆಗೂ ನಡೆದ ಸಂಧಾನ ಸಭೆ ವಿಫಲವಾಗಿದೆ. ಈ ಹಿನ್ನೆಲೆ ಮಠದ ಕತೃ ಗದ್ದುಗೆಗೆ ಬರೋ ಭಕ್ತರ ದರ್ಶನಕ್ಕಾಗಿ ವಿಶೇಷ ಬ್ಯಾರಿಕೇಡ್ ಹಾಕಲಾಗಿದೆ. ಅಲ್ಲದೇ ಮಠದ ಆವರಣದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸತ್ಯ ದರ್ಶನಕ್ಕೆ ಮುಂದಾಗಿರುವುದರಿಂದ ಇಂದು ಎನಾಗುತ್ತೋ ಎನೋ ಎನ್ನುವ ಆತಂಕ ಮಠದ ಭಕ್ತರದ್ದಾಗಿದೆ.

    ಮೂರು ಸಾವಿರ ಮಠದ ಜಗದ್ಗುರುಗಳಾದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಗಳು ಸಹ ಸದ್ಯಕ್ಕೆ ಉತ್ತರಾಧಿಕಾರಿ ಅವಶ್ಯಕತೆಯಿಲ್ಲ. ಮಠವನ್ನು ನೋಡಿಕೊಂಡು ಹೋಗುವ ಸಾಮರ್ಥ್ಯ ತಮಗಿದ್ದು, ಉತ್ತರಾಧಿಕಾರಿ ವಿವಾದ ತಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಎಂದಿದ್ದಾರೆ.

    ಈ ಮಧ್ಯೆ ಇಂದು ದಿಂಗಾಲೇಶ್ವರ ಸ್ವಾಮೀಜಿಗಳು ಮಠದಲ್ಲಿ ತಮ್ಮನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದು ಸುಳ್ಳೋ? ಸತ್ಯವೋ? ಅನ್ನೋದು ಬಹಿರಂಗವಾಗಲಿ ಎಂದು ದಾಖಲೆಗಳ ಪ್ರದರ್ಶನಕ್ಕೆ ಮುಂದಾದರೆ, ಇತ್ತ ಬೆಳಗಾವಿ ಜಿಲ್ಲೆಯ ಘಟಪ್ರಭಾದ ಮಲ್ಲಿಕಾರ್ಜುನ ದೇವರು ಸ್ವಾಮೀಜಿ ಸಹ ಇಂದು ಮಠಕ್ಕೆ ಭೇಟಿ ನೀಡುವುದಾಗಿ ತಿಳಿಸಿದ ಪರಿಣಾಮ ಮಠದ ಆವರಣದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.

  • ನನ್ನ ಮೇಲಿನ ಆರೋಪ ಸಾಬೀತು ಮಾಡ್ಲಿ, ಮಠದ ಗದ್ದುಗೆ ಎದುರೇ ಪ್ರಾಣ ಬಿಡ್ತೇನೆ: ದಿಂಗಾಲೇಶ್ವರ ಶ್ರೀ

    ನನ್ನ ಮೇಲಿನ ಆರೋಪ ಸಾಬೀತು ಮಾಡ್ಲಿ, ಮಠದ ಗದ್ದುಗೆ ಎದುರೇ ಪ್ರಾಣ ಬಿಡ್ತೇನೆ: ದಿಂಗಾಲೇಶ್ವರ ಶ್ರೀ

    ಧಾರವಾಡ: ದುಷ್ಕರ್ಮಿಗಳು ನಾನು ಗುಂಡಾ, ಅಯೋಗ್ಯ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಾನು ಗುಂಡಾ, ಅಯೋಗ್ಯ ಆಗಿದ್ದರೆ ಅದನ್ನ ತುಂಬಿದ ಸಭೆಯಲ್ಲಿ ಸಾಬೀತು ಪಡಿಸಲಿ. ಆರೋಪವನ್ನ ಸಾಬೀತು ಮಾಡಿದರೇ ಮೂರುಸಾವಿರ ಮಠದ ಕರ್ತೃ ಗದ್ದುಗೆ ಎದುರೇ ಪ್ರಾಣ ಬಿಡುತ್ತೇನೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸವಾಲ್ ಹಾಕಿದ್ದಾರೆ.

    ಧಾರವಾಡ ಲಿಂಗಾಯತ ಭವನದಲ್ಲಿ ನಡೆದ ಭಕ್ತರ ಮತ್ತು ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮೂರುಸಾವಿರ ಮಠದ ಗದ್ದುಗೆಗಾಗಿ ಸಭೆಗಳನ್ನು ಮಾಡುತ್ತಿಲ್ಲ. ಮಠಕ್ಕೆ ಸುತ್ತಿದ ವಿವಾದ ಬಗೆಹರಿಸಲು ಭಕ್ತರು ಸಭೆ ಮಾಡುತ್ತಿದ್ದೇನೆ ಎಂದರು. ನಾನು ಮೂರುಸಾವಿರ ಮಠದ ಜಗದ್ಗುರುಗಳನ್ನು ಭೇಟಿ ಮಾಡುತ್ತೇನೆ. ನಾವು ಮಠಕ್ಕೆ ಸ್ವಾಮೀಜಿಯಾಗಲು ಖಾವಿಧಾರಿಯಾಗಿಲ್ಲ, ಸಮಾಜಕ್ಕಾಗಿ ನಾವು ಖಾವಿಧಾರಿಯಾಗಿದ್ದೇವೆ. ಸ್ವಾಮೀತ್ವಕ್ಕೆ ಮಠವೇ ಬೇಕಾಗಿಲ್ಲ. ಆದರೆ ಈಗ ನನ್ನ ಗೌರವದ ಪ್ರಶ್ನೆ ಬಂದಿದೆ ಹೀಗಾಗಿ ನಾನು ಮುಂದೆ ಬಂದಿದ್ದೇನೆ ಎಂದು ಸಭೆಯಲ್ಲಿ ತಿಳಿಸಿದರು.

    ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೂ ಮತ್ತು ಮೂರುಸಾವಿರ ಮಠ ಜಗದ್ಗುಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರು ಗುರು ನಾನು ಶಿಷ್ಯ. ಆದರೆ ಕೆಲವರು ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಂದಿಟ್ಟಿದ್ದಾರೆ. ಕೆಲವರ ರಾಜಕೀಯದಿಂದ ಹೀಗಾಗಿದೆ. ಅವರನ್ನು ಮಠದಿಂದ ದೂರ ಮಾಡಲು ಈಗ ಹೋರಾಟ ನಡೆದಿದೆ ಎಂದು ಕಿಡಿಕಾರಿದರು.

    ನನ್ನ ಉತ್ತರಾಧಿಕಾರಿ ಪತ್ರ ಆದ ನಂತರದಲ್ಲಿ ಉಳಿದ ಚಟುವಟಿಕೆಗಳು ನಡೆದಿವೆ. ದಿಂಗಾಲೇಶ್ವರ ಸ್ವಾಮೀಜಿ ಬರಬೇಕು ಎಂದು ಭಕ್ತರು ಬಯಸಿದ್ದಾರೆ. ಆದರೆ ಕೆಲವರು ದಿಂಗಾಲೇಶ್ವರ ಸ್ವಾಮೀಜಿ ಬರಬಾರದು ಎಂದು ಕೆಟ್ಟ ಪ್ರಯತ್ನ ಮಾಡಿದ್ದಾರೆ. ನಾನು ಮಠಕ್ಕೆ ಅನ್ಯಾಯ ಮಾಡಿದ್ದರೆ, ದ್ರೋಹ ಮಾಡಿದ್ದರೆ ಸಾಬೀತು ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರ. ಹಾಗೆಯೇ ಮಠದಲ್ಲಿ ರಾಜಕೀಯ ಮಾಡುವವರನ್ನ ದೂರ ಮಾಡುತ್ತೇನೆ ಎಂದು ಸ್ವಾಮೀಜಿ ಹರಿಹಾಯ್ದರು.