Tag: Mookambika temple

  • ಎಚ್ಚರ: ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್

    ಎಚ್ಚರ: ಕೊಲ್ಲೂರು ಮೂಕಾಂಬಿಕೆ ದೇಗುಲದ ಹೆಸರಿನಲ್ಲಿ ನಕಲಿ ಟ್ರಸ್ಟ್

    ಮಂಗಳೂರು: ಮೋಸ ಮಾಡೋಕೆ ದುಡ್ಡು ಮಾಡೋಕೆ ಅದೆಂಥ ಅಡ್ಡದಾರಿಗಳನ್ನು ಹಿಡಿಯುತ್ತಾರೆ ಅಂದ್ರೆ ದೇವರನ್ನು ಕೂಡ ಬಿಡಲ್ಲ. ಕೊಲ್ಲೂರು ಮೂಕಾಂಬಿಕೆಯ (Kolluru Mookambika Temple) ಹೆಸರಿನಲ್ಲಿ ನಕಲಿ ಟ್ರಸ್ಟ್ (Fake Trust) ಶುರುವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕೊಲ್ಲೂರು ಡಿವೋಟಿಸ್ ಟ್ರಸ್ಟ್ ಅನ್ನುವ ನಕಲಿ ಲಿಂಕ್ ಹರಿದಾಡುತ್ತಿದೆ.

    ದೇಗುಲಕ್ಕೆ ದೇಣಿಗೆ ಹರಕೆ ಸಲ್ಲಿಸುವ ಭಕ್ತರು ಇದರಲ್ಲಿ ದುಡ್ಡನ್ನು ಕಳಿಸಿದ್ದಾರಂತೆ. ಭಕ್ತರೊಬ್ಬರು ಹಣ ಕಳಿಸಿರುವ ಬಗ್ಗೆ ದೇಗುಲಕ್ಕೆ ಇ-ಮೇಲ್ ಮಾಡಿದಾಗ ಈ ಅಕೌಂಟ್‍ಗೂ ದೇವಸ್ಥಾನಕ್ಕೂ ಸಂಬಂಧ ಇಲ್ಲ ಅಂತಾ ಸ್ಪಷ್ಟನೆ ಬಂದಿದೆ. ಹೀಗಾಗಿ ಭಕ್ತರಾಗಿರುವ ರಾಘವೇಂದ್ರ ಹಾಗೂ ಧನಂಜಯ್ ಈ ಟ್ರಸ್ಟ್ ವಿರುದ್ಧ ಈಗ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಕೇರಳ (Kerala) ಮೂಲದಲ್ಲಿ ಈ ಟ್ರಸ್ಟ್ ನೋಂದಣಿಯಾಗಿರೋದು ಗೊತ್ತಾಗಿದೆ. ದೇಗುಲದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ದೇಗುಲದ ಆಡಳಿತ ಮಂಡಳಿಯ ಗಮನಕ್ಕೆ ಬಾರದೇ ಇದ್ದಿದ್ದು ಅಚ್ಚರಿ ಅನ್ನೋದು ಭಕ್ತರ ಅಸಮಾಧಾನ. ಹೀಗಾಗಿ ಇದರ ಬಗ್ಗೆ ತನಿಖೆ ಮಾಡುವಂತೆ ಆಗ್ರಹಿಸಲಾಗಿದೆ. ಇದನ್ನೂ ಓದಿ: ವಿಮಾನ ದುರಂತದಿಂದ ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ & ಮಾರ್ಟಿನ್ ಟೀಂ ಪಾರು!

    2022ರಿಂದ ಈ ಟ್ರಸ್ಟ್ ಹೆಸರಿನಲ್ಲಿ ಭಕ್ತರಿಗೆ ಮಕ್ಮಲ್ ಟೋಪಿ ಹಾಕುತ್ತಿರೋದು ಗಮನಕ್ಕೆ ಬಂದಿದೆ. ಕೋಟಿ ಕೋಟಿ ದುಡ್ಡನ್ನು ಈ ಟ್ರಸ್ಟ್ ಲಪಟಾಯಿಸಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಈ ಬಗ್ಗೆ ಮುಜರಾಯಿ ಇಲಾಖೆ ಸೂಕ್ತ ತನಿಖೆ ಮಾಡಬೇಕಾಗಿದೆ.

  • ಮುಂದಿನ ಪೀಳಿಗೆಯೂ ಕೊಲ್ಲೂರಿಗೆ ಬರಬೇಕಂದ್ರೆ ‘ದಿ ಕೇರಳ ಸ್ಟೋರಿ’ ಮೂವಿ ನೋಡಿ

    ಮುಂದಿನ ಪೀಳಿಗೆಯೂ ಕೊಲ್ಲೂರಿಗೆ ಬರಬೇಕಂದ್ರೆ ‘ದಿ ಕೇರಳ ಸ್ಟೋರಿ’ ಮೂವಿ ನೋಡಿ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕೇರಳ ಸ್ಟೋರಿ ಚಿತ್ರದ ಪ್ರಚಾರ ಕಾರ್ಯ ನಡೆದಿದೆ. ರಾಷ್ಟ್ರಾದ್ಯಂತ ಭಾರೀ ಚರ್ಚೆ ಎಬ್ಬಿಸಿರುವ ಚಲನಚಿತ್ರದಲ್ಲಿ ಲವ್ ಜಿಹಾದ್ ಕುರಿತು ಬೆಳಕು ಚೆಲ್ಲಲಾಗಿದೆ.

    ಕೊಲ್ಲೂರು ಮೂಕಾಂಬಿಕಾ ದೇಗುಲ (Kolluru Mookambika Temple) ಕ್ಕೆ ಕೇರಳದ ಭಕ್ತರೇ ಹೆಚ್ಚು. ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ಚಿತ್ರ (The Kerala Story) ನೋಡಿ ಎಂಬ ಬೋರ್ಡ್ ಕೊಲ್ಲೂರಿಗೆ ಬರುವ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಆಂಗ್ಲ ಭಾಷೆಯಲ್ಲಿ ಬೋರ್ಡ್ ಇದೆ.

    ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ವಿನೋದ್ ಕೊಲ್ಲೂರು, ವಿಜಯ ಬಳೆಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ನೇತೃತ್ವದಲ್ಲಿ ದೇವಾಲಯದ ದ್ವಾರ ಹಾಗೂ ಆವರಣದ ಎರಡು ಕಡೆ ಬ್ಯಾನರ್ ಅಳವಡಿಸಿದ್ದಾರೆ. ಬ್ಯಾನರ್ ಅಳವಡಿಕೆಗೆ ಪಂಚಾಯತ್ ಪರವಾನಿಗೆ ಕೂಡಾ ಮಾಡಿಸಲಾಗಿದೆ. ಇದನ್ನೂ ಓದಿ: ಶಿಕಾರಿಪುರದಲ್ಲಿ ಬಿ.ವೈ ವಿಜಯೇಂದ್ರ ಗೆಲ್ಲದಂತೆ ದುಷ್ಟ ಶಕ್ತಿಗಳಿಂದ ನಡೆದಿತ್ತಾ ವಾಮಾಚಾರ?

     

  • ಕೊಲ್ಲೂರು ಮೂಕಾಂಬಿಕೆಯಲ್ಲಿ ವರ ಬೇಡಿಕೊಂಡ ರಚಿತಾ ರಾಮ್

    ಕೊಲ್ಲೂರು ಮೂಕಾಂಬಿಕೆಯಲ್ಲಿ ವರ ಬೇಡಿಕೊಂಡ ರಚಿತಾ ರಾಮ್

    ಉಡುಪಿ: ಸ್ಯಾಂಡಲ್‍ವುಡ್ ನಟಿ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಮುಂದೆ ನಿಂತು ವರವೊಂದನ್ನು ಬೇಡಿಕೊಂಡಿದ್ದಾರಂತೆ.

    ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಬಳಿಕ ರಚಿತಾ ರಾಮ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದರು. ಮೂಕಾಂಬಿಕೆಗೆ ವಿಶೇಷ ಸೇವೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ರಚಿತಾ ರಾಮ್ ಅವರಿಗೆ ಫಲ ಪ್ರಸಾದಗಳನ್ನು ನೀಡಿ ಗೌರವ ಸಲ್ಲಿಸಿತು.

    ರಚಿತಾ ರಾಮ್ ಅವರು ಗರ್ಭಗುಡಿಯ ಮುಂದೆ ದೇವಿಯಲ್ಲಿ ಕೆಲಕಾಲ ನಿಂತು ಬೇಡಿಕೊಂಡಿದ್ದಾರಂತೆ. ಅದೇನು ಬೇಡಿಕೆ ಅಂತ ಅರ್ಚಕರಲ್ಲೂ ಹೇಳದ ರಚಿತಾ, ನನ್ನ ಮನಸ್ಸಿನ ಇಚ್ಛೆ ಪೂರೈಸಮ್ಮಾ ಕೊಲ್ಲೂರಮ್ಮಾ ಅಂತ ಕೋರಿಕೊಂಡಿದ್ದಾರೆ. ನಿಮ್ಮ ಆಕಾಂಕ್ಷೆ ಈಡೇರಲಿ ಎಂದು ಕೊಲ್ಲೂರಿನ ಅರ್ಚಕರು ಪ್ರಸಾದ ಕೊಟ್ಟಿದ್ದಾರೆ. ಇದನ್ನೂ ಓದಿ: ಟಿ ರಚಿತಾ ರಾಮ್ ಶೃಂಗೇರಿಗೆ ಭೇಟಿ

  • 81ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    81ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    ಉಡುಪಿ: ಗಾನ ಗಂಧರ್ವ, ಪದ್ಮಭೂಷಣ ಡಾ.ಜೇಸುದಾಸ್ ಅವರು ತಮ್ಮ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಆಚರಿಸಿಕೊಂಡರು. ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ದೇವಿಗೆ ವರ್ಷದ ಹರಕೆ ಸಲ್ಲಿಸಿ 81ನೇ ವರ್ಷಕ್ಕೆ ಪದಾರ್ಪಣೆ ಮಾಡಿದರು. ಈ ಬಾರಿ ಕುಟುಂಬದ ಎಲ್ಲಾ ಸದಸ್ಯರನ್ನು ಕರೆತಂದು ದೇವರ ಪೂಜೆ ಹೋಮದಲ್ಲಿ ಸಂಗೀತ ಮಾಂತ್ರಿಕ ಭಾಗಿಯಾದರು.

    ಜೇಸುದಾಸ್ ಉಡುಪಿಯ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೇವಸ್ಥಾನಕ್ಕೆ ಆಗಮಿಸಿದ ಅವರು, ಮೊದಲು ಮೂಕಾಂಬಿಕೆಗೆ ಪೂಜೆ ಸಲ್ಲಿಸಿದರು. ನಂತರ ಯಜ್ಞಶಾಲೆಯಲ್ಲಿ ಚಂಡಿಕಾಹೋಮ ನೆರವೇರಿಸಿದರು.

    ಜೇಸುದಾಸ್ ಕೊಲ್ಲೂರಿನಲ್ಲಿ ಕಳೆದ 30 ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ತಮಗೆ ಮಕ್ಕಳಾಗದ ಸಂಕಟವನ್ನು ಮೂಕಾಂಬಿಕೆಯ ಸನ್ನಿಧಿಯಲ್ಲಿ ಹೇಳಿಕೊಂಡಿದ್ದರು. ನಂತರ ಜೇಸುದಾಸ್ ಅವರಿಗೆ ಮಕ್ಕಳಾದವು. ಹೀಗಾಗಿ ಅವರು ಪ್ರತಿ ವರ್ಷ ಕೊಲ್ಲೂರಿಗೆ ಬಂದು ದೇವರ ಸೇವೆಯೊಂದಿಗೆ ಸಂಗೀತ ಸೇವೆ ನೀಡುತ್ತಾ ಬಂದಿದ್ದಾರೆ. ಸಂಗೀತ ಮಾಂತ್ರಿಕ ಬರುವ ಹಿನ್ನೆಲೆಯಲ್ಲಿ ಭಕ್ತರ, ಸಂಗೀತ ಪ್ರೇಮಿಗಳ ಸಂಖ್ಯೆಯೂ ಕೊಲ್ಲೂರಿನಲ್ಲಿ ಜಾಸ್ತಿಯಾಗಿತ್ತು.

    ದೇವಸ್ಥಾನದ ಪ್ರಾಂಗಣ ಸಂಗೀತ ರಸಿಕರಿಂದ ತುಂಬಿಕೊಂಡಿತ್ತು. ಪ್ರತಿ ವರ್ಷ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಜೇಸುದಾಸ್ ಅಭಿಮಾನಿಗಳು ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತಾರೆ. ದೇಶಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಜೇಸುದಾಸ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಪ್ರತಿ ವರ್ಷ ಸಂಗೀತ ಸೇವೆ ಸಲ್ಲಿಸುತ್ತಿದ್ದ ಜೇಸುದಾಸ್ ಅವರು ಅನಾರೋಗ್ಯದ ಕಾರಣ ದೇವಿಯ ಸನ್ನಿಧಾನದಲ್ಲಿ ಹಾಡಲಿಲ್ಲ. ಎಂದಿನಂತೆ ದೇವಿಗೆ ಪ್ರಾರ್ಥನೆ ಮತ್ತು ಚಂಡಿಕಾಹೋಮ ಸಲ್ಲಿಸಿದರು.

    ಗೋವಿಂದ ಅಡಿಗ ಮತ್ತು ಜಯರಾಮ ಮಾತನಾಡಿ, ಜೇಸುದಾಸ್ ಮೂಕಾಂಬಿಕಾ ದೇವಿಯ ಪರಮ ಭಕ್ತ. ಎಷ್ಟೇ ಒತ್ತಡ ಇದ್ದರೂ ಅವರ ಹುಟ್ಟುಹಬ್ಬದ ದಿನ ಕೊಲ್ಲೂರಿಗೆ ಬಂದೇ ಬರುತ್ತಾರೆ. ಅವರ ಲವಲವಿಕೆ, ಈ ವಯಸ್ಸಿಗೂ ಅವರ ಸ್ವರ ಮಾಧುರ್ಯ ದೇವರ ಸಿದ್ಧಿಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

  • ಕೊಲ್ಲೂರಿನಲ್ಲಿ ಸಚಿವ ಆರ್.ಅಶೋಕ್ ಚಂಡಿಕಾಹೋಮ

    ಕೊಲ್ಲೂರಿನಲ್ಲಿ ಸಚಿವ ಆರ್.ಅಶೋಕ್ ಚಂಡಿಕಾಹೋಮ

    ಉಡುಪಿ: ಕಂದಾಯ ಸಚಿವ ಆರ್.ಅಶೋಕ್ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಪತ್ನಿ, ಪುತ್ರನ ಜೊತೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಆರ.ಅಶೋಕ್ ದೇವಿ ಮೂಕಾಂಬಿಕೆಯ ದರ್ಶನ ಪಡೆದರು. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಚಂಡಿಕಾಹೋಮ ದಲ್ಲಿ ಭಾಗಿಯಾದರು.

    ಕಳೆದ ಎರಡು ದಿನಗಳಿಂದ ಆರ್.ಅಶೋಕ್ ಅವರು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಬುಧವಾರ ಕೃಷ್ಣಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸೇವೆ ನೆರವೇರಿಸಿದರು. ಪರ್ಯಾಯ ಪಲಿಮಾರು ಸ್ವಾಮೀಜಿಯನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

    ಚಂಡಿಕಾಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಸಚಿವರ ಕುಟುಂಬಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಗೌರವಿಸಿದೆ. ಆರ್.ಅಶೊಕ್ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಭೇಟಿ ನೀಡಿದರು.

  • ಕೊಲ್ಲೂರು ನಕಲಿ ವೆಬ್‍ಸೈಟ್‍ಗೂ ಅರ್ಚಕರಿಗೂ ಸಂಬಂಧವಿಲ್ಲ- ನರಸಿಂಹ ಅಡಿಗ

    ಕೊಲ್ಲೂರು ನಕಲಿ ವೆಬ್‍ಸೈಟ್‍ಗೂ ಅರ್ಚಕರಿಗೂ ಸಂಬಂಧವಿಲ್ಲ- ನರಸಿಂಹ ಅಡಿಗ

    ಉಡುಪಿ: ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವೆಬ್‍ಸೈಟ್ ನಕಲಿ ಮಾಡಿ ಭಕ್ತರಿಗೆ ಸೇವಾರೂಪದ ಹಣದಲ್ಲಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಲೂರಿನ ಹಿರಿಯ ಅರ್ಚಕ ನರಸಿಂಹ ಅಡಿಗ ಸ್ಪಷ್ಟನೆ ಕೊಟ್ಟಿದ್ದಾರೆ.

    ಮುಜರಾಯಿ ಇಲಾಖೆಗೆ ದೇವಸ್ಥಾನ ಒಳಪಡುವ ಮೊದಲು ಮತ್ತು ನಂತರ ಅರ್ಚಕ ಮನೆತನ ಶ್ರದ್ಧೆಯಿಂದ ಭಕ್ತಿಯಿಂದ ಮೂಕಾಂಬಿಕೆಯ ಸೇವೆ ಮಾಡುತ್ತಿದ್ದೇವೆ. ನಾವು ಯಾವುದೇ ಕರ್ತವ್ಯ ಲೋಪ ಮಾಡಿಲ್ಲ. ಎಲ್ಲಾ ಅರ್ಚಕರು ಈ ಬೆಳವಣಿಗೆಯನ್ನು ಖಂಡಿಸುತ್ತೇವೆ ಎಂದಿದ್ದಾರೆ. ಇದು ಮಿಥ್ಯಾರೋಪ. ನಮ್ಮ ಚೌಕಟ್ಟಿನಲ್ಲಿ ನಾವು ಪೂಜೆ ಪುನಸ್ಕಾರ ಮಾಡುತ್ತಿದ್ದೇವೆ ಎಂದರು.

    ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಲೋಪವಾಗಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. ಕೊಲ್ಲೂರು ದೇವಾಲಯದ ಅಧಿಕೃತ ವೆಬ್ ಸೈಟ್‍ಅನ್ನು ನಕಲಿ ಮಾಡಿ ಭಕ್ತರಿಂದ ಸೇವೆಯ ಹಣವನ್ನು ಆನ್‍ಲೈನ್ ಮೂಲಕ ಹಾಕಿಸಿಕೊಂಡು ದೇವಸ್ಥಾನಕ್ಕೆ ಸಂಬಧಿಸಿದವರು ಅಕ್ರಮ ಎಸಗಿದ್ದರು. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

  • ಕೊಲ್ಲೂರಿನಲ್ಲಿ ಡಿಜಿಪಿ ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ

    ಕೊಲ್ಲೂರಿನಲ್ಲಿ ಡಿಜಿಪಿ ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ

    ಉಡುಪಿ: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಆಗಮಿಸಿ ಚಂಡಿಕಾಹೋಮ ನಡೆಸಿದ್ದಾರೆ. ಪತಿ ನಿವೃತ್ತ ಐಎಎಸ್ ಅಧಿಕಾರಿ ನರಸಿಂಹ ರಾಜು ಜೊತೆಗಿದ್ದರು.

    ಬೈಂದೂರು ತಾಲೂಕಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಪತಿ ಡಿ.ಎನ್ ನರಸಿಂಹರಾಜು ಅವರೊಂದಿಗೆ ಸೋಮವಾರ ಸಂಜೆಯೇ ಬಂದು ತಂಗಿದ್ದರು. ಇಂದು ಮುಂಜಾನೆ ಕೊಲ್ಲೂರು ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ, ಪೂಜೆ ಮಾಡಿಸಿದ್ದಾರೆ.

    ಬೆಳಗ್ಗೆ ಏಳು ಗಂಟೆಗೆ ಚಂಡಿಕಾ ಹೋಮದ ಸಂಕಲ್ಪದಲ್ಲಿ ಸ್ವತಃ ಡಿಜಿಪಿ ಪಾಲ್ಗೊಂಡರು. ಸಂಪೂರ್ಣ ಚಂಡಿಕಾ ಹೋಮ ನಡೆಯುವವರೆಗೆ ಪತಿ ಪತ್ನಿ ಯಜ್ಞಶಾಲೆಯಲ್ಲೇ ಎಲ್ಲಾ ವಿಧಿ ವಿಧಾನಗಳಲ್ಲಿ ಭಾಗಿಯಾದರು.

    ಡಿಜಿಪಿ ನೀಲಮಣಿ ರಾಜು ದಂಪತಿಗೆ ಕೊಲ್ಲೂರು ದೇವಾಲಯದ ಆಡಳಿತ ಮಂಡಳಿ ಕಡೆಯಿಂದ ಗೌರವ ಸಮರದಪಿಸಲಾಯ್ತು. ನೀಲಮಣಿ ರಾಜು ಈ ಹಿಂದೆಯೇ ಕೊಲ್ಲೂರಿನಲ್ಲಿ ಚಂಡಿಕಾಹೋಮ ನಡೆಸುವ ಹರಕೆ ಹೊತ್ತಿದ್ದರು ಎಂದು ಆಡಳಿತ ಮಂಡಳಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದೆ.

  • ಕೊಲ್ಲೂರು ಸನ್ನಿಧಾನದಲ್ಲಿ ಶಿವಮಣಿ ಕಲಾಸೇವೆ

    ಕೊಲ್ಲೂರು ಸನ್ನಿಧಾನದಲ್ಲಿ ಶಿವಮಣಿ ಕಲಾಸೇವೆ

    ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ವಿಜ್ರಂಭಣೆಯ ಉತ್ಸವದಲ್ಲಿ ದೇಶದ ನಾನಾ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದಾರೆ. ಬ್ರಹ್ಮ ರಥೋತ್ಸವ ನಡೆಯುವ ಮುನ್ನ ದೇವಸ್ಥಾನದ ಪ್ರಾಂಗಣದಲ್ಲಿ ಬಲಿ ಉತ್ಸವ ಸಂದರ್ಭ ಡ್ರಮ್ಮರ್ ಶಿವಮಣಿ ಕಲಾಸೇವೆ ನೀಡಿದರು.

    ಡ್ರಮ್ ಮಾಂತ್ರಿಕ ಶಿವಮಣಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದಲ್ಲಿ ಪಾಲ್ಗೊಂಡು ತಮ್ಮ ಸೇವೆಯನ್ನು ನೀಡಿದರು. ವಾಲಗದವರ ಜೊತೆ ಸೇರಿಕೊಂಡು ಡ್ರಮ್ಸ್ ನುಡಿಸಿದರು. ಪ್ರತಿ ವರ್ಷ ಶಿವಮಣಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದು ಕಲಾ ಸೇವೆ ನೀಡುತ್ತಾರೆ. ಈ ಬಾರಿ ಬಲಿ ಉತ್ಸವ ಸಂದರ್ಭ ನಾದಸ್ವರ, ಸಮ್ಮೇಳ, ಡೋಲಿನ ಜೊತೆ ಡ್ರಮ್ಸ್ ಬೀಟ್ ಹಾಕಿದ್ದು ವಿಶೇಷವಾಗಿತ್ತು.

    ಎಲ್ಲೂ ಸಾಂಪ್ರದಾಯಿಕ ಲಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಆಧುನಿಕ ಪರಿಕರಗಳೊಂದಿಗೆ ಶಿವಮಣಿ ಕಲಾಶಕ್ತಿಯನ್ನು ಮೆರೆದಿದ್ದಾರೆ. ಉತ್ಸವ ಸಂದರ್ಭ ಶಿವಮಣಿಯನ್ನು, ಅವರ ಕಲಾಸೇವೆಯನ್ನು ನೋಡಲು ಜನ ಜಮಾಯಿಸಿದ್ದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದೇವಳದ ಗಂಗಾಧರ ಬಿಡೆ ಶಿವಮಣಿಯವರು ಪ್ರತೀ ವರ್ಷ ಅಮ್ಮನಲ್ಲಿ ಬಂದು ಸೇವೆ ನೀಡುತ್ತಿದ್ದಾರೆ. ಈ ಬಾರಿಯೂ ಬಂದಿದ್ದಾರೆ. ಮಹಾನ್ ಕಲಾವಿದನಾದರೂ ಸಾಮಾನ್ಯನಂತೆ ಜನಗಳ ಜೊತೆ ಬೆರೆಯುತ್ತಾರೆ. ಸರಸ್ವತಿ ಮಂಟಪದಲ್ಲಿ ತಾಯಿಯ ಮುಂಭಾಗ ನಡೆದ ಸಂಗೀತ ಕಾರ್ಯಕ್ರಮವನ್ನೂ ಬಹಳ ಜನ ಆಸ್ವಾದಿಸಿದ್ದಾರೆ ಎಂದು ಹೇಳಿದರು.

  • 79ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    79ನೇ ವಸಂತಕ್ಕೆ ಕಾಲಿಟ್ಟ ಗಾನಗಂಧರ್ವ- ಮೂಕಾಂಬಿಕಾ ಸನ್ನಿಧಿಯಲ್ಲಿ ಜೇಸುದಾಸ್ ಹುಟ್ಟುಹಬ್ಬ

    ಉಡುಪಿ: ಗಾನ ಗಂಧರ್ವ ಜೇಸುದಾಸ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ 79ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಬೆಳಗ್ಗೆ ಪತ್ನಿ ಪ್ರಭಾ ಜೇಸುದಾಸ್ ಅವರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಅವರು, ದೇವರ ದರ್ಶನ ಪಡೆದರು.

    ಪ್ರತಿ ವರ್ಷ ಕೊಲ್ಲೂರಲ್ಲಿ ಹುಟ್ಟುಹಬ್ಬ ಆಚರಿಸುತ್ತಾ ಬಂದಿರುವ ಜೇಸುದಾಸ್, ಸಂಕಲ್ಪದಂತೆ ಚಂಡಿಕಾ ಹೋಮ ನೆರವೇರಿಸಿ ಪೂರ್ಣಾಹುತಿ ಸಲ್ಲಿಸಿದರು. ಅರ್ಚಕ ಗೋವಿಂದ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು. ಬಳಿಕ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ಅಕ್ಷರಾಭ್ಯಾಸ ಸೇವೆ ನಡೆಸಿದರು.

    ದೇವಸ್ಥಾನದ ಪ್ರಾಂಗಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು, ಭಕ್ತರು ಜೇಸುದಾಸ್ ಮೂಲಕ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿಕೊಂಡರು. ಭಕ್ತಿಯಲ್ಲಿ ಮಿಂದೆದ್ದ ಜೇಸುದಾಸ್ ಇದೇ ಸಂದರ್ಭ ಸ್ವರ್ಣಮುಖಿ ಸಭಾಭವನದಲ್ಲಿ ಭಕ್ತರ ಸಮ್ಮುಖದಲ್ಲಿ ಭಕ್ತಿಗೀತೆಯನ್ನು ಹಾಡಿದರು.

    ಸಾವಿರಾರು ಭಕ್ತರು ಜೇಸುದಾಸ್ ಗಾಯನದಿಂದ ಭಾವಪರವಶರಾದರು. ಜೇಸುದಾಸ್ ಹುಟ್ಟುಹಬ್ಬದ ನಿಮಿತ್ತ ಗಾಯಕ ಕಾಂಞಗಾಡ್ ರಾಮಚಂದ್ರನ್ ಆಯೋಜಿಸಿದ್ದ ಸಂಗೀತೋತ್ಸವಕ್ಕೆ ಸ್ವತಃ ಜೇಸುದಾಸ್ ಗಾಯನದ ಮೂಲಕ ಚಾಲನೆ ನೀಡಿದರು. ಧಾರ್ಮಿಕ ವಿಧಿ, ಹುಟ್ಟುಹಬ್ಬ ಪೂರೈಸಿ ಮಧ್ಯಾಹ್ನ ಅನ್ನಪ್ರಸಾದ ಸ್ವೀಕರಿಸಿ ನಿರ್ಗಮಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಲ್ಲರು ಮೂಕಾಂಬಿಕಾ ದೇಗುಲದ ಲಕ್ಷ್ಮಿ ಮಂಟಪ ಪ್ರವೇಶಿಸಿದ ಮಾಜಿ ಮಹಿಳಾ ಅಧಿಕಾರಿ- ಭಕ್ತರಿಂದ ಭಾರೀ ಆಕ್ರೋಶ

    ಕೊಲ್ಲರು ಮೂಕಾಂಬಿಕಾ ದೇಗುಲದ ಲಕ್ಷ್ಮಿ ಮಂಟಪ ಪ್ರವೇಶಿಸಿದ ಮಾಜಿ ಮಹಿಳಾ ಅಧಿಕಾರಿ- ಭಕ್ತರಿಂದ ಭಾರೀ ಆಕ್ರೋಶ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಲಕ್ಷ್ಮಿ ಮಂಟಪವನ್ನು ವಿವಾದಿತ ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ. ಈ ವಿಡಿಯೋ ವಾಟ್ಸಾಪ್‍ನಲ್ಲಿ ಹರಿದಾಡುತ್ತಿದ್ದು, ಅರ್ಚಕರ ವಿರುದ್ಧ ಭಕ್ತರು ಕಿಡಿಕಾರಿದ್ದಾರೆ.

    ಬೈಂದೂರಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಉಮಾ ಅವರು ಲಕ್ಷ್ಮಿ ಮಂಟಪ ಪ್ರವೇಶಿಸಿದ್ದಾರೆ. ದೇವಸ್ಥಾನದ ಒಳಗಿನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮುಖಂಡರೊಬ್ಬರು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ನೋಡಿದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾಕೆ ಪ್ರವೇಶಿಸಬಾರದು?
    ನವರಾತ್ರಿಯಲ್ಲಿ ಕೊಲ್ಲೂರಿನಲ್ಲಿ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯ ಇದೆ. ನವರಾತ್ರಿಯ ಮೊದಲ ದಿನ ಒಬ್ಬರಿಗೆ, ಎರಡನೇ ದಿನ ಇಬ್ಬರಿಗೆ ಹೀಗೆ ಕ್ರಮವಾಗಿ ನೀಡುತ್ತಾ ಬಂದು ಕೊನೆಯ (9ನೇ) ದಿನ ಗ್ರಾಮದ 9 ಜನ ಬ್ರಾಹ್ಮಣ ಮಹಿಳೆಯರಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಆ ಸಂದರ್ಭದಲ್ಲಿ ಮಾತ್ರ ಮಹಿಳೆಯರು ಲಕ್ಷ್ಮಿ ಮಂಟಪ ಪ್ರವೇಶಿಸಬಹುದು. ಆದರೆ ಅಧಿಕಾರಿ ಉಮಾ ಅವರು ನವರಾತ್ರಿ ದೇವಸ್ಥಾನ ಭೇಟಿ ಸಂದರ್ಭದಲ್ಲಿ ಲಕ್ಷ್ಮಿ ಮಂಟಪ ಪ್ರವೇಶಿಸಿದ್ದರಿಂದ ಅಪಚಾರ ಆಗಿದೆ ಎಂಬುದು ಸದ್ಯದ ಆರೋಪ.

    ಉಮಾ ಅವರು ಅಧಿಕಾರದಲ್ಲಿ ಅನೇಕ ಅಕ್ರಮಗಳು ನಡೆದಿದ್ದು, ಭಕ್ತರೊಬ್ಬರು ಹರಕೆ ನೀಡಿದ್ದ ಚಿನ್ನವನ್ನು ಅಡ ಇಟ್ಟು ದೇವಳದ ಸಿಬ್ಬಂದಿ ಗೋಲ್‍ಮಾಲ್ ಮಾಡಿದ್ದರು. ಅವರು ಅಧಿಕಾರದಲ್ಲಿ ಇರುವುದಾಗ ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಕೊಟ್ಟಿತ್ತು. ಆದರೆ ಈಗ ವಿವಾದ ಎದುರಿಸುತ್ತಿರುವಾಗ ದೇವಸ್ಥಾನ ಹಾಗೂ ಲಕ್ಷ್ಮಿ ಮಂಟಪ ಪ್ರವೇಶ ನೀಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.

    ಉಮಾ ಈ ಹಿಂದೆ ಅಧಿಕಾರಿಯಾಗಿದ್ದರು ಎಂಬ ಕಾರಣಕ್ಕೆ ಕೆಲ ಅರ್ಚಕರು ಲಕ್ಷ್ಮಿ ಮಂಟಪ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಇದನ್ನು ನೋಡಿದ ಮತ್ತೊಂದು ಗುಂಪು ಇದಕ್ಕೆ ತಗಾದೆ ಎತ್ತಿದೆ. ಇತ್ತ ಭಕ್ತರು ಕೂಡ ಅರ್ಚಕರ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv