Tag: Mookambika

  • ಕೊಲ್ಲೂರಲ್ಲಿ ಚಂಡಿಕಾಹೋಮದಲ್ಲಿ ತಟ್ಟೆಗೆ ಜಾರಿ ಬಿದ್ದ ಸೇಬು – ಭಕ್ತರಿಗೆ ರೋಮಾಂಚನ

    ಕೊಲ್ಲೂರಲ್ಲಿ ಚಂಡಿಕಾಹೋಮದಲ್ಲಿ ತಟ್ಟೆಗೆ ಜಾರಿ ಬಿದ್ದ ಸೇಬು – ಭಕ್ತರಿಗೆ ರೋಮಾಂಚನ

    ಉಡುಪಿ: ಶಂಕರಾಚಾರ್ಯರು ಸ್ಥಾಪಿಸಿದ ಶಕ್ತಿಪೀಠಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ಪವಾಡ ನಡೆದಿದೆ. ಚಂಡಕಾಹೋಮಕ್ಕೆ ಅರ್ಪಿಸಿದ್ದ ಹಣ್ಣಿನ ರಾಶಿಯಿಂದ ಸೇಬೊಂದು ಜಾರಿ ತಟ್ಟೆಗೆ ಬಿದ್ದಿದೆ.

    ಕೆಲವು ನಿರ್ಬಂಧಗಳ ನಡುವೆ ನಾಡಿನಾದ್ಯಂತ ನವರಾತ್ರಿ ಉತ್ಸವ ನಡೆಯುತ್ತಿದೆ. ದುರ್ಗೆಯರ ಆರಾಧನೆ ಭಕ್ತಿಭಾವದಿಂದ ನಡೆಯುತ್ತಿದೆ. ಈ ನಡುವೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವರಾತ್ರಿ ವಿಶೇಷ ಚಂಡಿಕಾಹೋಮದ ಸಂದರ್ಭ ಫಲವೊಂದು ಪ್ರಸಾದ ರೂಪದಲ್ಲಿ ತಟ್ಟೆಗೆ ಬಿದ್ದು ಎಲ್ಲರಲ್ಲೂ ರೋಮಾಂಚಕ ಸೃಷ್ಟಿಸಿದೆ.

    ಉಡುಪಿ ಜಿಲ್ಲೆ ಬೈಂದೂರು ತಾಲೂಕು ಕೊಲ್ಲೂರು ಶ್ರೀ ಮೂಕಾಂಬಿಕ ದೇವಿಯ ಸನ್ನಿಧಾನದ ದೃಶ್ಯ ಇದು. ನವರಾತ್ರಿ ಧಾರ್ಮಿಕ ಕೈಂಕರ್ಯಗಳು ಕೊಲ್ಲೂರಲ್ಲಿ ಹತ್ತು ದಿನಗಳ ಹಿಂದೆಯೇ ಆರಂಭವಾಗಿದೆ. ನವಮಿಯ ಈ ಶುಭ ದಿನದಂದು ವಿಶೇಷ ಚಂಡಿಕಾ ಯಾಗದ ಸಂದರ್ಭ ಫಲಗಳನ್ನು ದೇವರಿಗೆ ಅರ್ಪಿಸಲಾಗಿತ್ತು. ಈ ಸಂದರ್ಭ ಹಣ್ಣುಗಳ ರಾಶಿಯಿಂದ ಸೇಬು ಹಣ್ಣು ಎದುರಿದ್ದ ತಟ್ಟೆಗೆ ಜಾರಿ ಬಿದ್ದಿದೆ.

    ಭಕ್ತರು ಇದನ್ನು ದೇವಿಯ ಪ್ರಸಾದ ಎಂದು ಬಣ್ಣಿಸಿದ್ದಾರೆ. ದೇವಿ ಮೂಕಾಂಬಿಕೆ ಸೇವೆಯನ್ನು ಸ್ವೀಕರಿಸಿ ಸಂತುಷ್ಟಳಾಗಿದ್ದಾಳೆ ಎಂದು ಭಕ್ತರು ಜೈಕಾರ ಹಾಕಿದ್ದಾರೆ. ನಾಡಿನ ಸಂಕಷ್ಟ ದೂರವಾಗಲಿ, ಕೊರೊನಾ ಮಹಾಮಾರಿಗೆ ತಡೆ ಸಿಗಲಿ. ದೇವಿ ಸಂತುಷ್ಟಳಾದರೆ ಎಲ್ಲವೂ ಸಾಧ್ಯ ಆಗುತ್ತದೆ. ಜನತೆ ಕೊರೊನಾ ಕಾಲದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ದೇವಿ ಕೃಪೆ ತೋರಲಿದ್ದಾಳೆ ಎಂದು ಸ್ಥಳೀಯ ಭಕ್ತ ಜಗದೀಶ್ ಕೊಲ್ಲೂರು ಹೇಳಿದ್ದಾರೆ.

  • ಮೂಕಾಂಬಿಕೆಯ ಉತ್ಸವಕ್ಕೆ ಕೊರೊನಾ ಕರಿಛಾಯೆ

    ಮೂಕಾಂಬಿಕೆಯ ಉತ್ಸವಕ್ಕೆ ಕೊರೊನಾ ಕರಿಛಾಯೆ

    -ಕೊಲ್ಲೂರಲ್ಲಿ ಸಾಂಪ್ರದಾಯಿಕ ರಥಾರೋಹಣ ಸಂಪನ್ನ

    ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್ ಇರುವುದರಿಂದ ಈ ಬಾರಿ ಅದ್ಧೂರಿ ರಥೋತ್ಸವ ನಡೆಯಲಿಲ್ಲ. ಸಾಂಪ್ರದಾಯಿಕ ಉತ್ಸವ ಮತ್ತು ರಥಾರೋಹಣ ನಡೆಸಿ ಈ ಬಾರಿ ವಾರ್ಷಿಕ ಜಾತ್ರೆಯನ್ನು ಮುಗಿಸಲಾಯಿತು.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕೆಯ ಕ್ಷೇತ್ರ ದಕ್ಷಿಣ ಭಾರತದ ದೇವಿ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿ ಕ್ಷೇತ್ರ. ಮೂಕಾಂಬಿಕೆಯ ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಮಂದಿ ಸ್ಥಳೀಯ, ರಾಜ್ಯದ ಬೇರೆ ಬೇರೆ ಭಾಗದ ಮತ್ತು ಹೊರ ರಾಜ್ಯದ ಭಕ್ತರು ಸೇರುತ್ತಾರೆ. ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಇರೋದ್ರಿಂದ ಸರಳವಾಗಿ ದೇವಿಯ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಇಂದು ಆರಂಭದಲ್ಲಿ ದೇಗುಲದ ಒಳ ಸುತ್ತುಪೌಳಿಯಲ್ಲಿ ಬಲಿ ಉತ್ಸವ, ನೆರವೇರಿಸಲಾಯಿತು.

    ದೇವಸ್ಥಾನದ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸುತ್ತಮುತ್ತಲಿನ ಮನೆಯವರು ಸಾಂಪ್ರದಾಯಿಕ ಉತ್ಸವದಲ್ಲಿ ಪಾಲ್ಗೊಂಡರು. ದೇವಸ್ಥಾನಕ್ಕೆ ಇಂದು ಎಂದಿನಂತೆ ಎಲ್ಲರಿಗೂ ಪ್ರವೇಶ ಇರಲಿಲ್ಲ. ಸರ್ಕಾರದ ಸೂಚನೆಯಂತೆ ಕಡಿಮೆ ಜನ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು. ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ ಆರತಿಯೆತ್ತಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಸಿಬ್ಬಂದಿ, ಭಕ್ತರು ನಿಲ್ಲಿಸಿದ್ದ ರಥವನ್ನು 20 ಮೀ.ನಷ್ಟು ದೂರ ಎಳೆದು ಸಾಂಪ್ರದಾಯಕ್ಕೆ ಚ್ಯುತಿ ಬಾರದಂತೆ ಉತ್ಸವ ನೆರವೇರಿಸಿದರು.

    ಭಗವದ್ಬಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಮಾಡಿ ಭೂಮಿಗೆರಗಿದ ಕಂಟಕಗಳು ನಿವಾರಣೆಯಾದ ಮೇಲೆ ದೇವಸ್ಥಾನ ಪೂಜೆ, ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವಿನಂತಿಸಿದೆ. ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಶೆಟ್ಟಿ ಮಾತನಾಡಿ, ದೇವಸ್ಥಾನದ ಇತಿಹಾಸದಲ್ಲಿ ಹೀಗಾಗಿದ್ದಿಲ್ಲ ಎಂದು ತಿಳಿದಿದ್ದೇವೆ. ಸಂಪ್ರದಾಯ ಕಟ್ಟು ಕಟ್ಟಳೆಗೆ ಅಪಚಾರ ಆಗದಂತೆ ನಾವು ಉತ್ಸವಾದಿ ಪ್ರಕ್ರಿಯೆ ಮಾಡಿದ್ದೇವೆ. ಭಕ್ತರ ಸಹಕಾರಕ್ಕೆ ಪಬ್ಲಿಕ್ ಟಿವಿ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದರು.

  • ಹರಕೆ ತೀರಿಸಲು ಕೊಲ್ಲೂರಿಗೆ ಆಗಮಿಸಿದ ಲಂಕಾ ಪ್ರಧಾನಿ

    ಹರಕೆ ತೀರಿಸಲು ಕೊಲ್ಲೂರಿಗೆ ಆಗಮಿಸಿದ ಲಂಕಾ ಪ್ರಧಾನಿ

    ಉಡುಪಿ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಇಂದು ಕೊಲ್ಲೂರಿಗೆ ಭೇಟಿ ನೀಡಿದ್ದಾರೆ.

    ಬೆಳಗ್ಗೆಯೇ ನೂರಾರು ಭಕ್ತರು ದೇವರ ದರ್ಶನ ಪೂಜೆ ಕೈಗೊಂಡರು. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಆಗಮನ ಹಿನ್ನೆಲೆಯಲ್ಲಿ ಕೊಲ್ಲೂರು ದೇವಳದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭಾರತೀಯ ಸೇನೆ ಲಂಕಾ ಪ್ರಧಾನಿಗೆ ಭದ್ರತೆ ಕೊಟ್ಟಿದೆ. ದೇವಸ್ಥಾನ ಭದ್ರತೆಯ ಮೇಲೂ ನಿಗಾ ವಹಿಸಿದೆ. ಲಂಕಾ ಪ್ರಧಾನಿ ದೇವಳ ಭೇಟಿ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ.

    ಕೊಲಂಬೋ ಟು ಕೊಲ್ಲೂರು:
    ಕೊಲಂಬೋದಿಂದ ಬೆಂಗಳೂರಿಗೆ ಬಂದಿರುವ ಸಿಂಘೆ, ಅಲ್ಲಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿದ್ದಾರೆ. ಹೆಲಿಕಾಪ್ಟರ್ ಮೂಲಕ ಲಂಕಾ ಪ್ರಧಾನಿ ಬೈಂದೂರು ತಾಲೂಕಿನ ಅರೆ ಶೀರೂರಿಗೆ ಬಂದಿಳಿಯಬೇಕಿತ್ತು. ಉಡುಪಿಯಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆ. ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ.

    ಹೀಗಾಗಿ ರಸ್ತೆ ಮೂಲಕ ಕೊಲ್ಲೂರಿಗೆ ತೆರಳುವಂತೆ ಸೂಚಿಸಿದ್ದಾರೆ. ಮಂಗಳೂರಿಂದ ಕೊಲ್ಲೂರು ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 130 ಕೀ.ಮಿ. ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಿದ್ದಾರೆ.

    ಈ ನಡುವೆ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನವಚಂಡಿಕಾ ಯಾಗ ಆರಂಭವಾಗಿದ್ದು, ದೇವಸ್ಥಾನದ ಋತ್ವಿಜರಿಂದ ಹೋಮದ ವಿಧಿ ವಿಧಾನ ನಡೆದಿದೆ. ವಿಶೇಷ ಪೂಜೆಯ ಜೊತೆ ಯಜ್ಞಶಾಲೆಯಲ್ಲಿ ಹೋಮ ಆರಂಭವಾಗಿದೆ. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಮಧ್ಯಾಹ್ನ 12.30 ರ ಸುಮಾರಿಗೆ ನಡೆಯಲಿರುವ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲಂಕಾ ಪ್ರಧಾನಿ ನವಚಂಡಿಕಾಯಾಗದ ಹರಕೆಯನ್ನು ಈ ಹಿಂದೆಯೇ ಹೇಳಿದ್ದರು.

  • ಕೊಲ್ಲೂರು ಮೂಕಾಂಬಿಕೆಗೆ ಒಂದು ಕೆ.ಜಿ ಚಿನ್ನದ ಖಡ್ಗ ನೀಡಿದ ತಮಿಳುನಾಡು ಭಕ್ತ!

    ಕೊಲ್ಲೂರು ಮೂಕಾಂಬಿಕೆಗೆ ಒಂದು ಕೆ.ಜಿ ಚಿನ್ನದ ಖಡ್ಗ ನೀಡಿದ ತಮಿಳುನಾಡು ಭಕ್ತ!

    ಉಡುಪಿ: ತಮಿಳುನಾಡು ಮೂಲದ ಭಕ್ತರೊಬ್ಬರು ಕೊಲ್ಲೂರು ಮೂಕಾಂಬಿಕೆ ಒಂದು ಕೆ.ಜಿ ಚಿನ್ನದ ಖಡ್ಗ ಸಮರ್ಪಿಸಿ ಹರಕೆ ತೀರಿಸಿದ್ದಾರೆ. ಜಿಲ್ಲೆ ಬೈಂದೂರಿನ ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರೊಬ್ಬರು ಖಡ್ಗವನ್ನು ನೀಡಿದ್ದಾರೆ.

    ತಮ್ಮ ಮನದ ಇಚ್ಛೆ ಪ್ರಾಪ್ತಿಯಾದರೆ ಕೊಲ್ಲೂರು ತಾಯಿಗೆ ಖಡ್ಗ ನೀಡುತ್ತೇನೆ ಅಂತಾ ಕೊಯಮತ್ತೂರು ಮೂಲದ ಡಾ. ನಳಿನ್ ವಿಮಲ್ ಕುಮಾರ್ ಹರಕೆ ಹೊತ್ತುಕೊಂಡಿದ್ದರು. ಹರಕೆ ಫಲಿಸಿದ ಕೂಡಲೇ ಡಾ.ನಳೀನ್ ವಿಮಲ್ ಕುಮಾರ್ ಅವರು, ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನದ ಖಡ್ಗವನ್ನು ತಂದು ದೇವಸ್ಥಾನಕ್ಕೆ ಒಪ್ಪಿಸಿದ್ದಾರೆ.

    ಈ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಎಂಜಿ ರಾಮಚಂದ್ರನ್ ಅವರು ನೀಡಿದ್ದ ಚಿನ್ನದ ಕತ್ತಿಯನ್ನು ದೇವಿಯ ಅಲಂಕಾರ ಸಂದರ್ಭ ಪ್ರತಿನಿತ್ಯ ಬಳಸಲಾಗುತ್ತಿದೆ. ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಚಿನ್ನದ ಖಡ್ಗವನ್ನು ತಮಿಳುನಾಡಿನ ಭಕ್ತರು ಹಸ್ತಾಂತರಿಸಿದ್ದು, ಸದ್ಯ ಖಡ್ಗ ದೇವಾಲಯದ ಲಾಕರ್ ಸೇರಿದೆ.

    ತಮ್ಮ ಜನ್ಮದಿನದಂದು ಖಡ್ಗವನ್ನು ದೇವಿಯ ಬಳಿ ಇರಿಸುವಂತೆ ಡಾ.ನಳೀನ್ ವಿಮಲ್ ಕುಮಾರ್ ಅವರು, ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಕುರಿತು ದೇವಸ್ಥಾನದಲ್ಲಿ ಸಭೆ ನಡೆಸಿ, ಮನವಿಗೆ ಒಪ್ಪಿಗೆ ನೀಡಲಾಗಿದೆ. ಕೊಲ್ಲೂರಮ್ಮನಿಗೆ ಈವರೆಗೆ ಐದಕ್ಕೂ ಹೆಚ್ಚು ಚಿನ್ನದ ದೊಡ್ಡ ಖಡ್ಗ, ಹತ್ತಾರು ಚಿನ್ನದ ಸಣ್ಣ ಖಡಗ, 200ಕ್ಕೂ ಹೆಚ್ಚು ಬೆಳ್ಳಿ ಖಡ್ಗಗಳು ಹರಕೆ ರೂಪದಲ್ಲಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಕೊಲ್ಲೂರಮ್ಮನ ಸನ್ನಿಧಿಯಲ್ಲಿ ಯೇಸುದಾಸ್ 78 ನೇ ಹುಟ್ಟಹಬ್ಬ ಆಚರಣೆ

    ಕೊಲ್ಲೂರಮ್ಮನ ಸನ್ನಿಧಿಯಲ್ಲಿ ಯೇಸುದಾಸ್ 78 ನೇ ಹುಟ್ಟಹಬ್ಬ ಆಚರಣೆ

    ಉಡುಪಿ: ಕೊಲ್ಲೂರಮ್ಮನ ಮುಂದೆ ಸಂಗೀತ ಸೇವೆ ನೀಡಿ ಗಾನ ಗಂಧರ್ವ -ಸಂಗೀತ ಮಾಂತ್ರಿಕ ಕೆ.ಜೆ.ಯೇಸುದಾಸ್ ತನ್ನ 78 ನೇ ಹುಟ್ಟುಹಬ್ಬವನ್ನು ಧಾರ್ಮಿಕವಾಗಿ ಆಚರಿಸಿಕೊಂಡರು.

    ಎಪ್ಪತ್ತೆಂಟನೇ ವಸಂತಕ್ಕೆ ಕಾಲಿಟ್ಟ ಯೇಸುದಾಸ್, ಪ್ರತಿ ವರ್ಷ ತನ್ನ ಹುಟ್ಟುಹಬ್ಬವನ್ನು ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಆಚರಿಸುತ್ತಾರೆ. ತಾಯಿ ಮೂಕಾಂಬಿಕೆಯ ದರ್ಶನ ಮಾಡಿದ ಅವರು, ಕುಟುಂಬ ಸಮೇತರಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

    ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆಯನ್ನು ನೆರವೇರಿಸಿದರು. ಬಳಿಕ ಯಜ್ಞ ಶಾಲೆಯಲ್ಲಿ ಚಂಡಿಕಾ ಹೋಮದಲ್ಲಿ ಭಾಗಿಯಾದರು. ದೇವಿ ಮೂಕಾಂಬಿಕೆಯ ಸನ್ನಿಧಿಯ ಒಳ ಭಾಗದಲ್ಲಿ ಯೇಸುದಾಸ್ ಸಂಗೀತ ಸೇವೆಯನ್ನು ದೇವಿಗೆ ಅರ್ಪಿಸಿದರು. ಪ್ರತಿ ವರ್ಷದಂತೆ ದೇವಸ್ಥಾನದ ಪ್ರಾಂಗಣದಲ್ಲಿ ಸಂಗೀತ ಸೇವೆ ನೀಡುವ ಮೂಲಕ ದೇವರ ನಾಮ ಹಾಡಿದರು.

    ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಬಂದಿದ್ದ ಸಾವಿರಾರು ಮಂದಿ ದೇವರ ದರ್ಶನದ ಜೊತೆ ಸಂಗೀತ ಕ್ಷೇತ್ರದ ಮಹಾನ್ ಕಲಾವಿದರ ಹುಟ್ಟುಹಬ್ಬದಲ್ಲಿ ಭಾಗಿಯಾದರು. ನೆಚ್ಚಿನ ಕಲಾವಿದನಿಗೆ ಶುಭಾಶಯಗಳನ್ನು ಕೋರಿದರು.