Tag: Moodigere

  • 100 ವರ್ಷಗಳಿಂದ ‘ಹೃದಯ’ದಲ್ಲೇ ಅನ್ನ ಬೆಳೆಯುತ್ತಿರೋ ಅನ್ನದಾತ

    100 ವರ್ಷಗಳಿಂದ ‘ಹೃದಯ’ದಲ್ಲೇ ಅನ್ನ ಬೆಳೆಯುತ್ತಿರೋ ಅನ್ನದಾತ

    – ಪ್ರವಾಸಿ ತಾಣವಾದ ಸ್ಥಳ

    ಚಿಕ್ಕಮಗಳೂರು: ಕೈ-ಕಾಲು ಕೆಸರಾದರು ಬೆಳೆಯುವ ಬೆಳೆಗೆ ಹೃದಯದ ಸ್ಪರ್ಶ ನೀಡಿ ಭೂಮಾತೆಯ ಹೃದಯದಲ್ಲೇ ಅನ್ನ ಬೆಳೆಯುತ್ತಿದ್ದಾರೆ ಮಲೆನಾಡಿನ ಮುಗ್ಧ ಅನ್ನದಾತ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಸೆ ಸಮೀಪದ ಬಾಮಿಕೊಂಡ ಗ್ರಾಮದ ರೈತ ಕೃಷ್ಣನ ಈ ಭತ್ತದ ಗದ್ದೆ ಈಗ ಪ್ರವಾಸಿ ತಾಣವಾಗಿದೆ. ತಂದೆಯ ಕಾಲದಿಂದಲೂ ಅಂದರೆ ಸರಿ ಸುಮಾರು 100ಕ್ಕೂ ಅಧಿಕ ವರ್ಷಗಳಿಂದಲೂ ಕೂಡ ಕೃಷ್ಣ ಹೃದಯದಲ್ಲೇ ಭತ್ತ ಬೆಳೆಯುತ್ತಿದ್ದಾರೆ.

    ತಮ್ಮ ಭತ್ತದ ಗದ್ದೆಗೆ ಹೃದಯದ ಆಕಾರ ನೀಡಿರೋ ಇವರು ಶತಮಾನದಿಂದ ಭೂದೇವಿಯನ್ನ ಹೃದಯದಲ್ಲೇ ಭತ್ತದ ಗದ್ದೆಯಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಇದನ್ನ ಇವರು ಶೋಕಿಗಾಗೋ ಅಥವಾ ಪ್ರಚಾರಕ್ಕಾಗೋ ಮಾಡಿದ್ದಲ್ಲ. ಶತಮಾನಗಳ ಹಿಂದೆ ಯಾವ ಟ್ರ್ಯಾಕ್ಟರ್, ಜೆಸಿಬಿ ಏನೂ ಇರಲಿಲ್ಲ. ಎತ್ತಿನ ಹೆಗಲಿಗೆ ನೊಗ ಕಟ್ಟಿ ಗುಡ್ಡವನ್ನ ಸಮಮಾಡಿ ಮಾಡಿದ ಭತ್ತದ ಗದ್ದೆ ಇದು. ಅಂದಿನಿಂದಲೂ ಇದನ್ನ ಹಾಗೇ ಬಿಟ್ಟಿದ್ದಾರೆ. ಅಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಆದರೆ ಸದ್ಯಕ್ಕೆ ಈ ಜಾಗ ಪ್ರವಾಸಿ ತಾಣವಾಗಿದೆ. ಸುತ್ತಲೂ ಹಚ್ಚ ಹಸಿರು. ಮಧ್ಯದಲ್ಲೊಂದು ಗದ್ದೆ. ಗದ್ದೆಯ ಮಧ್ಯದಲ್ಲಿ ಖಾಲಿ ಬಿಟ್ಟಿರೋ ಹೃದಯ ಆಕಾರದ ಜಾಗ. ಇದೀಗ ಆ ಜಾಗವೇ ನೋಡುಗರ ಆಕರ್ಷಣಿಯ ಕೇಂದ್ರ ಬಿಂದುವಾಗಿದೆ.

    ಈ ಜಾಗವಿರೋದು ಸ್ಥಳಿಯರಿಗೆ ಎಷ್ಟೋ ಜನಕ್ಕೆ ಗೊತ್ತಿರಲಿಲ್ಲ. ಈ ಸುಂದರ ತಾಣದ ಒಂದೆರಡು ಫೋಟೋಗಳು ಹೊರಬೀಳುತ್ತಿದ್ದಂತೆ ಈಗಾಗಲೇ ಸುತ್ತಮುತ್ತಲಿನ ಜಾಗಕ್ಕೆ ಭೇಟಿ ನೀಡೋದಕ್ಕೆ ಶುರುವಿಟ್ಟಿದ್ದಾರೆ. ನಾಲ್ಕು ಎಕರೆಯ ಈ ಭತ್ತದ ಗದ್ದೆಗೆ ಎರಡು ಎಕರೆಗೆ ದಾಖಲೆ ಇದೆ. ಅಜ್ಜನ ಕಾಲದಿಂದಲೂ ಭೂಮಾತೆಯ ಹೃದಯದಲ್ಲೇ ಭತ್ತ ಬೆಳೆಯುತ್ತಿರೋ ರೈತ ಕೃಷ್ಣನ ಕುಟುಂಬ 100 ವರ್ಷಗಳ ಹಿಂದೆ ಹೇಗಿತ್ತೋ ಇಂದಿಗೂ ಹಾಗೇ ಬಿಟ್ಟಿದ್ದಾರೆ. ಅದೇ ಆಕಾರದಲ್ಲಿ ಭತ್ತ ಬೆಳೆಯುತ್ತಿದ್ದಾರೆ.

    ಬೆಟ್ಟದ ತುದಿಯಲ್ಲಿರೋ ಭತ್ತದ ಗದ್ದೆಯ ಸುತ್ತಲೂ ಇರುವ ಬೆಟ್ಟಗುಡ್ಡದ ಮೇಲೆ ಹಾಸಿರೋ ಹಸಿರ ವನರಾಶಿ ಭತ್ತದ ಗದ್ದೆಯ ಅಂದ ಹೆಚ್ಚಿಸಿದ್ದು, ಮಲೆನಾಡು ಕೇಳಿದ್ದೆಲ್ಲವನ್ನೂ ಕೊಡುವ ಪ್ರವಾಸಿಗರ ಪಾಲಿನ ಅಕ್ಷಯ ಪಾತ್ರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಯಾಕೆಂದರೆ ದೂರದ ದೇಶಗಳಲ್ಲಿ ಇಂತಹ ಚಿತ್ರಣ ನೋಡಿ ಜನ ಬೆರಗಾಗುತ್ತಿದ್ದರು. ಆದರೆ 100 ವರ್ಷಗಳ ಹಿಂದೆಯೇ ಇಂತಹ ಅದ್ಭುತ ಲೋಕವನ್ನ ಸೃಷ್ಟಿಸಿರೋ ನಮ್ಮ ರೈತರೇ ನಮ್ಮ ಹೆಮ್ಮೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

    ಬೇಸಿಗೆಯಲ್ಲಿ ಸಿನಿಮಾ ಶೂಟಿಂಗ್:
    ಭೂಮಾತೆಯ ಮಡಿಲಲ್ಲೇ ಅನ್ನ ಬೆಳೆಯುತ್ತಿರೋ ರೈತ ಕೃಷ್ಣನ ಈ ಸುಂದರ ತಾಣ ಸಿನಿಮಾ ಶೂಟಿಂಗ್‍ಗೂ ಸಾಕ್ಷಿಯಾಗಿದೆ. ಎರಡು ವರ್ಷದ ಹಿಂದೆ ಬೇಸಿಗೆಯಲ್ಲಿ ಇಲ್ಲಿ ಸಿನಿಮಾ ಶೂಟಿಂಗ್ ಕೂಡ ನಡೆದಿತ್ತು ಎಂದು ಕೃಷ್ಣ ಮಾಹಿತಿ ನೀಡಿದ್ದಾರೆ. ಈ ಹೃದಯ ಭತ್ತದ ಗದ್ದೆಯಲ್ಲಿ ಒಂದು ದಿನ ಶೂಟಿಂಗ್ ನಡೆದಿದೆ. ಆದರೆ, ಯಾವ ಸಿನಿಮಾ ಅನ್ನೋದು ನನಗೆ ನೆನಪಿಲ್ಲ ಅಂತಾರೆ ಕೃಷ್ಣ. ಬಂದಿದ್ದ ಸಿನಿಮಾದವರು ಮುಂದೆ ಬರುತ್ತೀವಿ ಎಂದು ಹೇಳಿದ್ದಾರಂತೆ. ಆದರೆ, ಸುತ್ತಲೂ ಹಸಿರುಟ್ಟ ತುಂಬು ಮುತ್ತೈದೆಯಂತ ಪ್ರಕೃತಿ. ಆ ಪ್ರಕೃತಿಯ ಮಾತೆಯ ಹೃದಯದಲ್ಲಿ ಅನ್ನ ಬೆಳೆಯುತ್ತಿರೋ ಮುಗ್ಧ ಅನ್ನದಾತ. ತಲೆ ತಗ್ಗಿಸಿದರೂ ಸೌಂದರ್ಯ, ತಲೆ ಎತ್ತಿದರೂ ಸೌಂದರ್ಯ. ಅಂತಹ ಅದ್ಭುತವಾದ ಈ ತಾಣವನ್ನ ನೋಡಲೆರಡು ಕಣ್ಣು ಸಾಲದಂತಿರೋದಂತು ಸತ್ಯ.

  • ಎಲ್ಲದಕ್ಕೂ ತೆಪ್ಪವೇ ಆಧಾರ-ಇದು ಮಲೆನಾಡ ನತದೃಷ್ಟ ಗ್ರಾಮ

    ಎಲ್ಲದಕ್ಕೂ ತೆಪ್ಪವೇ ಆಧಾರ-ಇದು ಮಲೆನಾಡ ನತದೃಷ್ಟ ಗ್ರಾಮ

    ಚಿಕ್ಕಮಗಳೂರು: ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ ಎಂಬ ಪ್ರಶ್ನೆ ಮಲೆನಾಡಿನ ಗ್ರಾಮಸ್ಥರನ್ನು ಸದಾ ಕಾಡುತ್ತಿರುತ್ತೆ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಈ ಗ್ರಾಮಕ್ಕೆ ಇಂದಿಗೂ ಓಡಾಡೋಕೆ ರಸ್ತೆ ಇಲ್ಲ. ಎಲ್ಲದಕ್ಕೂ ತೆಪ್ಪವೇ ಆಧಾರ. ಗ್ರಾಮಕ್ಕೆ ಸಂಪರ್ಕ ಕಲ್ಪಿಸಬೇಕಾದ ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬುವುದು ಈ ಗ್ರಾಮಸ್ಥರ ಮಾತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಗ್ಗನಳ್ಳ ಜನಕ್ಕೆ ಇಂದಿಗೂ ಉಕ್ಕಡವೇ ಜೀವಾಳ.

    ಮಗುವಿನ ನಾಮಕರಣಕ್ಕೆ, ಸತ್ತೋರ ಅಂತ್ಯ ಸಂಸ್ಕಾರಕ್ಕೆ, ಮಕ್ಕಳು ಶಾಲೆಗೆ ಹೋಗಲು ಎಲ್ಲದಕ್ಕೂ ತೆಪ್ಪವೇ ಆಧಾರ. ತೆಪ್ಪ ಇಲ್ಲದಿದ್ದರೆ ಇವರ ಕೆಲಸಗಳೇ ನಿಂತು ಬಿಡುತ್ತವೆ. ಸುಮಾರು 50-60 ಅಡಿ ಆಳದ ಭದ್ರಾ ನದಿ ಮೇಲೆ ಇವರು 7 ದಶಕಗಳಿಂದ ತೇಲಿಕೊಂಡೇ ಬದುಕುತ್ತಿದ್ದಾರೆ. ದಶಕಗಳಿಂದ ಒಂದೇ ಒಂದು ಸೇತುವೆಗೆ ಜನನಾಯಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

    ಮೂಡಿಗೆರೆಯಲ್ಲಿ ವಾರ್ಷಿಕ ದಾಖಲೆ ಮಳೆ ಸುರಿಯುತ್ತೆ. ಮಳೆಗಾಲದಲ್ಲಂತು ಇವರ ಸ್ಥಿತಿ ಕೇಳೋದೇ ಬೇಡ. ಮಳೆಗಾಲದಲ್ಲಿ ಮಕ್ಕಳು ತಿಂಗಳಗಟ್ಟಲೇ ಶಾಲೆಗೆ ಹೋಗಲು ಆಗಲ್ಲ. ಮಳೆ ನಿಲ್ಲೋವರೆಗೂ ಕಗ್ಗನಹಳ್ಳಿ, ಹೊಳಲು, ಇಡ್ಕಣಿ, ಬಿಳಗೂರು ಸೇರಿದಂತೆ ನಾಲ್ಕೈದು ಗ್ರಾಮಗಳ ಗ್ರಾಮಸ್ಥರು ಬಾಹ್ಯ ಜಗತ್ತಿನ ಸಂಪರ್ಕವೇ ಕಳೆದುಕೊಳ್ಳುತ್ತಾರೆ.

    ಕಳಸ, ಬಾಳೆಹೊಳೆ, ಹೊರನಾಡು, ಮಾಗುಂಡಿ ಕಡೆಗೆ ಬರಲು ತೆಪ್ಪವನ್ನೇರಿಯೇ ನದಿ ದಾಟಬೇಕು. ಸ್ವಲ್ಪ ಆಯಾ ತಪ್ಪಿದ್ರೂ ಬದುಕಿ ಬರೋ ಯಾವುದೇ ಗ್ಯಾರಂಟಿ ಇಲ್ಲ. ಎರಡು ವರ್ಷದ ಹಿಂದೆ ತೆಪ್ಪ ಹುಟ್ಟು ಹಾಕ್ತಿದ್ದ ಅಂಬಿಗ ಸುಧಾಕರ್ ಭದ್ರೆ ಪಾಲಾಗಿದ್ರು. ಆದರೂ ಯಾರು ಇತ್ತ ತಿರುಗಿಯೂ ನೋಡದಿರೋದು ದುರಂತದಲ್ಲಿ ಮಹಾದುರಂತ. ಚಿಕ್ಕಮಗಳೂರಿನವರೇ ಆದ ಸಿ.ಟಿ. ರವಿ ಅವರು ಸಚಿವರಾಗಿದ್ದಾರೆ. ಇವರಾದ್ರೂ ಕಗ್ಗನಳ್ಳಿ ಜನರ ದಶಕಗಳ ಕಷ್ಟಕ್ಕೆ ಪರಿಹಾರ ಒದಗಿಸುತ್ತಾರಾ ಎಂದು ಕಾದು ನೋಡಬೇಕಿದೆ.

  • ಹುಣಸೆಹಳ್ಳಿ ಕಾಫಿ ತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ- ಗ್ರಾಮಸ್ಥರಲ್ಲಿ ಆತಂಕ

    ಹುಣಸೆಹಳ್ಳಿ ಕಾಫಿ ತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ- ಗ್ರಾಮಸ್ಥರಲ್ಲಿ ಆತಂಕ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಣಸೆಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕಾಡು ಕೋಣ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟು ಮಾಡಿದೆ.

    ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಕಾಡುಕೋಣ ಓಡಾಡುತ್ತಿದ್ದು, ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಅಲ್ಲದೇ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.

    ಆಹಾರ ಅರಸಿಕೊಂಡು ಕಾಡುಕೋಣಗಳು ಗ್ರಾಮಕ್ಕೆ ಬರುತ್ತಿವೆ. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆದರೆ ಅವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.