Tag: month

  • ಚಾರ್ಮಾಡಿ ಘಾಟ್ ಒಂದು ತಿಂಗಳು ಬಂದ್ – ಜಿಲ್ಲಾಧಿಕಾರಿ ಆದೇಶ

    ಚಾರ್ಮಾಡಿ ಘಾಟ್ ಒಂದು ತಿಂಗಳು ಬಂದ್ – ಜಿಲ್ಲಾಧಿಕಾರಿ ಆದೇಶ

    ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿಘಾಟ್ ರಸ್ತೆಗೆ ಭಾರೀ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.

    ಭಾರೀ ಮಳೆಗೆ ಚಾರ್ಮಾಡಿ ಘಾಟ್ ಹಲವು ಭಾಗಗಳಲ್ಲಿ ರಸ್ತೆ ಮೇಲೆ ಗುಡ್ಡ ಕುಸಿತವಾಗಿತ್ತು. ಸದ್ಯ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ಕಾರ್ಯ ಪೂರ್ಣಗೊಂಡರೂ, ಕೆಲವೆಡೆ ರಸ್ತೆ ಕುಸಿತವಾಗಿರುವುದರಿಂದ ಆಗಸ್ಟ್ 15 ರಿಂದ ಸೆಪ್ಟೆಂಬರ್ 14 ವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

    ಚಿಕ್ಕಮಗಳೂರಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರದೇಶದಲ್ಲಿ ಭೂ ಕುಸಿತ ಸಂಭವಿಸಿದೆ. ಇವುಗಳ ದುರಸ್ಥಿಗೆ 1 ತಿಂಗಳ ಸಮಯಾವಕಾಶದ ಅಗತ್ಯವಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿರುವುದರಿಂದ ಮಾರ್ಗವನ್ನು ಬಂದ್ ಮಾಡಲಾಗಿದೆ.

    ಕಳೆದ ವರ್ಷದ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿದು ಹಲವು ಬಾರಿ ಸಂಚಾರವನ್ನು ಬಂದ್ ಮಾಡಲಾಗಿತ್ತು. ಈ ಬಾರಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಭಾರೀ ಪ್ರಮಾಣದ ಮರಗಳು ಕೂಡ ರಸ್ತೆ ಮೇಲೆ ಉರುಳಿ ಬಿದ್ದಿದೆ. ರಸ್ತೆಗಳ ಕೆಲ ತಿರುವುಗಳಲ್ಲಿ ರಸ್ತೆ ಭಾಗಶಃ ಕೊಚ್ಚಿ ಹೋಗಿದೆ. ಶತಮಾನಗಳಿಂದಲೂ ತನ್ನ ಸೌಂದರ್ಯ ಉಳಿಸಿಕೊಂಡಿದ್ದ ಚಾರ್ಮಾಡಿ ಘಾಟ್‍ನಲ್ಲಿ ಈಗ ಗುಡ್ಡ ಕುಸಿತವೇ ಕಣ್ಣಿಗೆ ರಾಚುತ್ತಿದ್ದು, ತಿರುವುಗಳಲ್ಲಿ ಭೂಭಾಗ ಬಾಯ್ತೆರೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.

  • ಡಿಸೆಂಬರ್‌ನಲ್ಲಿ ಹುಟ್ಟಿದ ಮಕ್ಕಳು ಲಕ್ಕಿ, ಕಾಯಿಲೆ ಬರಲ್ವಂತೆ!

    ಡಿಸೆಂಬರ್‌ನಲ್ಲಿ ಹುಟ್ಟಿದ ಮಕ್ಕಳು ಲಕ್ಕಿ, ಕಾಯಿಲೆ ಬರಲ್ವಂತೆ!

    ಸಾಮಾನ್ಯವಾಗಿ ಕೆಲವರು ತಮ್ಮ ಮಗು ಇಂತಹ ದಿನವೇ ಜನಿಸಬೇಕು ಎಂದು ಇಷ್ಟ ಪಟ್ಟಿರುತ್ತಾರೆ. ಅಂದರೆ ತಮ್ಮ ಹುಟ್ಟುಹಬ್ಬದಂದು ಅಥವಾ ತಮ್ಮ ಮದುವೆ ವಾರ್ಷಿಕೋತ್ಸವದಂದು ಹುಟ್ಟಬೇಕು ಎಂದು ಆಸೆ ಪಟ್ಟಿರುತ್ತಾರೆ. ಆದರೆ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಹೆಚ್ಚು ಆರೋಗ್ಯವಾಗಿರುತ್ತಾರೆ ಎಂದು ಅಧ್ಯಯನ ಒಂದು ತಿಳಿಸಿದೆ.

    ಯೂರೋಪಿಯನ್ ಕಾಲೇಜ್ ಆಫ್ ನ್ಯೂರೊಸೈಕೋಫಾರ್ಮಾಕಾಲಜಿ ಸುಮಾರು 366 ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ವೈಜ್ಞಾನಿಕವಾಗಿ ಪ್ರಶ್ನೆ ಕೇಳಿ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದ ಮಕ್ಕಳು ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಮತ್ತು ಹೆಚ್ಚು ಲವಲವಿಕೆಯಿಂದ ಇರುತ್ತಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಡಿಸೆಂಬರ್ ತಿಂಗಳ ಮಕ್ಕಳು ಹೇಗೆ ಭಿನ್ನ ಎನ್ನುವುದಕ್ಕೂ ಅಧ್ಯಯನ ಕಾರಣಗಳನ್ನು ನೀಡಿದೆ. ಇದನ್ನೂ ಓದಿ: ಕೊನೆಗೂ ಯಶ್ ಕನಸು ನೆರವೇರಿತು-ತಂದೆಯಾದ ರಾಕಿಂಗ್ ಸ್ಟಾರ್

    1. ತುಂಬಾ ಅಪರೂಪ: ಡಿಸೆಂಬರ್ ತಿಂಗಳಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳ ಹೆರಿಗೆಯಾಗುತ್ತದೆ. ಅದರಲ್ಲೂ ಡಿಸೆಂಬರ್ 24 ಮತ್ತು 25 ರಂದು ಮಕ್ಕಳ ಬರ್ತ್ ಡೇ ದಿನಾಂಕ ಬರುವುದು ಬಹಳ ಕಡಿಮೆ.

    2. ಕಡಿಮೆ ಕೋಪ: ಬೇಸಿಗೆಯಲ್ಲಿ ಹುಟ್ಟಿದವರು ಯಾವಾಗಲೂ ಮೂಡಿಯಾಗಿ ಇರುತ್ತಾರೆ. ಆದರೆ ಚಳಿಗಾಲದಲ್ಲಿ ಹುಟ್ಟಿದವರು ಸ್ಥಿರವಾಗಿರುತ್ತಾರೆ. ನಿರ್ದಿಷ್ಟವಾಗಿ ಡಿಸೆಂಬರ್ ನಲ್ಲಿ ಹುಟ್ಟಿದವರ ಸ್ವಾಭಾವದಲ್ಲಿ ಕೋಪ ಸ್ವಲ್ಪ ಕಡಿಮೆ ಇರುತ್ತದೆ.

    3. ಜಾಸ್ತಿ ಕಾಯಿಲೆ ಬರಲ್ಲ: ಕೊಲಂಬಿಯಾ ಯುನಿವರ್ಸಿಟಿ ಡಿಪಾರ್ಟ್ ಮೆಂಟ್ ಆಫ್ ಮೆಡಿಸಿನ್ ಸಂಶೋಧಕರು, ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ 1900 ಮತ್ತು 2000 ರ ನಡುವೆ ಜನಿಸಿದ ಸುಮಾರು 1.75 ದಶಲಕ್ಷ ರೋಗಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಅವರಲ್ಲಿ 1,668 ರೋಗಿಗಳಿಗೆ ಜನಿಸಿದ ತಿಂಗಳು, ಆಹಾರದ ಮೂಲಕ ಕಾಯಿಲೆ ಬರುವ ಸಾಧ್ಯತೆ ಇದೆ. ಡಿಸೆಂಬರ್ ತಿಂಗಳಿನಲ್ಲಿ ಜನಿಸಿದ ಮಕ್ಕಳಲ್ಲಿ ಹೆಚ್ಚಾಗಿ ಕಾಯಿಲೆ ಕಂಡು ಬಂದಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ಒಂದು ವಾಷಿಂಗ್ಟನ್ ಪೋಸ್ಟ್ ಚಾರ್ಟ್ ಸಿದ್ಧಪಡಿಸಿ ಮಾಹಿತಿಯನ್ನು ಉಲ್ಲೇಖಿಸಿದೆ.

    4. ಆಯಸ್ಸು ಹೆಚ್ಚು: ಪ್ರತಿಯೊಬ್ಬ ತಂದೆ-ತಾಯಿ ಕೂಡ ನಮ್ಮ ಮಕ್ಕಳು ಸದಾ ಖುಷಿಯಾಗಿ ಜೀವನ ನಡೆಸಬೇಕು ಎಂದು ಬಯಸುತ್ತಿರುತ್ತಾರೆ. ಆದರಲ್ಲೂ ಡಿಸೆಂಬರ್ ನಲ್ಲಿ ಜನಿಸಿದ ಮಕ್ಕಳು 100 ವರ್ಷಕ್ಕಿಂತಲೂ ಹೆಚ್ಚು ವರ್ಷ ಬದುಕುತ್ತಾರೆ ಎಂದು ಅಧ್ಯಯನ ತಿಳಿಸಿದೆ. ಜರ್ಮನ್ ಜನಗಣತಿಯ ಪ್ರಕಾರ, ಡಿಸೆಂಬರ್ ಮತ್ತು ಜೂನ್ ತಿಂಗಳ ಜನನಕ್ಕೆ ಹೋಲಿಸಿದರೆ 105 ವರ್ಷ ಬದುಕು ಸಾಧ್ಯತೆ ಇದೆ ಎಂದು ಜರ್ನಲ್ ಆಫ್ ಏಜಿಂಗ್ ರಿಸರ್ಚ್ ಮೂಲಕ ತಿಳಿದು ಬಂದಿದೆ.

    5. ಹುಡುಗರು ಎಡಗೈ ಬರಹಗಾರರು: ಅಕ್ಟೋಬರ್ ನಿಂದ ಫೆಬ್ರವರಿಯೊಳಗೆ ಜನಿಸಿದ ಗಂಡು ಮಕ್ಕಳು ಹೆಚ್ಚಾಗಿ ಎಡಗೈ ಬಳಸುತ್ತಾರೆ. ಬೇರೆ ತಿಂಗಳಿಗೆ ಹೋಲಿಕೆ ಮಾಡಿದರೆ ಡಿಸೆಂಬರ್ ನಲ್ಲಿ ಈ ಸಂಖ್ಯೆ ಜಾಸ್ತಿ.

    6. ತರಗತಿಯಲ್ಲಿ ಕಿರಿಯರಾಗಿರುತ್ತಾರೆ: ಡಿಸೆಂಬರ್ ನಲ್ಲಿ ಹುಟ್ಟಿದ ಮಗು ಶಾಲೆಯ ಪ್ರಾರಂಭವಾದಾಗ ತರಗತಿಯಲ್ಲಿ ಎಲ್ಲರಿಗಿಂತ ಕಿರಿಯವರಾಗಿರುತ್ತಾರೆ  ಒಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರ ಇದ್ರೂ ಡಬಲ್ ಆಯ್ತು ತಮಿಳುನಾಡು ಶಾಸಕರ ಸಂಬಳ

    ಬರ ಇದ್ರೂ ಡಬಲ್ ಆಯ್ತು ತಮಿಳುನಾಡು ಶಾಸಕರ ಸಂಬಳ

    ಚೆನ್ನೈ: ತಮಿಳುನಾಡಿನಲ್ಲಿ ಬರವಿದ್ದರೂ ಅಲ್ಲಿನ ಸರ್ಕಾರ ಶಾಸಕರಿಗೆ ಮಾತ್ರ ಭರಪೂರ ವೇತನವನ್ನು ಪ್ರಕಟಿಸಿದೆ. ಶಾಸಕರ ವೇತನವನ್ನು 1,05,000 ರೂಪಾಯಿಗೆ ಏರಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಪ್ರಕಟಿಸಿದ್ದಾರೆ.

    ಶಾಸಕರ ಮಾಸಿಕ ಸಂಬಳವನ್ನು 55 ಸಾವಿರ ರೂ. ನಿಂದ 1.05 ಲಕ್ಷ ರೂ. ಏರಿಸಲಾಗುವುದು ಎಂದು ಅವರು ಸದನಲ್ಲಿ ಪ್ರಕಟಿಸಿದರು.

    ಅಷ್ಟೇ ಅಲ್ಲದೇ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಗೆ ನೀಡಲಾಗುತ್ತಿದ್ದ ಅನುದಾನವನ್ನು 2 ಕೋಟಿ ರೂ. ನಿಂದ 2.5 ಕೋಟಿ ರೂ. ಏರಿಸಲಾಗಿದೆ. ಪರಿಷ್ಕೃತ ವೇತನವು ಜುಲೈ 1ರಿಂದಲೇ ಜಾರಿಯಾಗಲಿದೆ

    ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳು ಶಾಸಕರ ಸಂಬಳವನ್ನು ಏರಿಸುವ ಸಾಧ್ಯತೆಯಿದೆ.

    ಕರ್ನಾಟಕದಲ್ಲಿ ಶಾಸಕರಿಗೆ ಸಂಬಳ ಎಷ್ಟಿದೆ?
    ರಾಜ್ಯಸರ್ಕಾರ 2015ರ ಮಾರ್ಚ್ ನಲ್ಲಿ ಶಾಸಕರ ಸಂಬಳವನ್ನು ಏರಿಕೆ ಮಾಡಿತ್ತು. ವೇತನ 25 ಸಾವಿರ ರೂ., ಆಪ್ತ ಸಹಾಯಕರ ವೇತನ 10 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ., ದೂರವಾಣಿ ವೆಚ್ಚ 20 ಸಾವಿರ ರೂ., ಕ್ಷೇತ್ರ ಭತ್ಯೆ 40 ಸಾವಿರ ರೂ., ಕ್ಷೇತ್ರ ಪ್ರಯಾಣ ಭತ್ಯೆ 45 ಸಾವಿರ ರೂ., ಒಟ್ಟು ಮೊತ್ತ1.40 ಲಕ್ಷ ರೂ. ಸಿಗುತ್ತದೆ.

    ಇದನ್ನೂ ಓದಿ: ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?

    ಇದನ್ನೂ ಓದಿ: ಭಾರತೀಯ ಮೂಲದ ಸಿಇಒ ಸುಂದರ್ ಪಿಚೈಗೆ ಗೂಗಲ್ 2016ರಲ್ಲಿ ನೀಡಿದ ಸಂಬಳ ಎಷ್ಟು ಗೊತ್ತೆ?