Tag: monsoon

  • ರಾಜ್ಯದ ನಗರಗಳ ಹವಾಮಾನ ವರದಿ: 20-06-2020

    ರಾಜ್ಯದ ನಗರಗಳ ಹವಾಮಾನ ವರದಿ: 20-06-2020

    ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ಮಂಡ್ಯದಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

    ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
    ಬೆಂಗಳೂರು: 30-21
    ಮಂಗಳೂರು: 29-24
    ಶಿವಮೊಗ್ಗ: 28-22
    ಬೆಳಗಾವಿ: 27-21

    ಮಂಡ್ಯ: 32-22
    ರಾಮನಗರ: 32-22
    ಮಡಿಕೇರಿ: 23-17
    ಹಾಸನ: 26-19
    ಚಾಮರಾಜನಗರ: 31-22

    ಚಿಕ್ಕಬಳ್ಳಾಪುರ: 29-19
    ಕೋಲಾರ: 32-22
    ತುಮಕೂರು: 30-21
    ಉಡುಪಿ: 29-24
    ಕಾರವಾರ: 29-26

    ಚಿಕ್ಕಮಗಳೂರು: 26-19
    ದಾವಣಗೆರೆ: 31-22
    ಚಿತ್ರದುರ್ಗ: 30-22
    ಹಾವೇರಿ: 29-23
    ಬಳ್ಳಾರಿ: 34-24

    ಧಾರವಾಡ: 29-23
    ಗದಗ: 30-22
    ಕೊಪ್ಪಳ: 32-23
    ರಾಯಚೂರು: 34-25
    ಯಾದಗಿರಿ: 33-24

    ವಿಜಯಪುರ: 31-21
    ಬೀದರ್: 21-23
    ಕಲಬುರಗಿ: 32-24
    ಬಾಗಲಕೋಟೆ: 32-23

  • ಉಡುಪಿಯಲ್ಲಿ 114 ಮಿಲಿ ಮೀಟರ್ ಮಳೆ – ಮಾನ್ಸೂನ್ ಅಬ್ಬರಕ್ಕೆ 4 ಮನೆಗಳಿಗೆ ಹಾನಿ

    ಉಡುಪಿಯಲ್ಲಿ 114 ಮಿಲಿ ಮೀಟರ್ ಮಳೆ – ಮಾನ್ಸೂನ್ ಅಬ್ಬರಕ್ಕೆ 4 ಮನೆಗಳಿಗೆ ಹಾನಿ

    ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 114 ಮಿಲಿ ಮೀಟರ್ ಮಳೆ ದಾಖಲಾಗಿದೆ.

    ಜಿಲ್ಲೆಯಲ್ಲಿ 114 ಮಿಲಿ ಮೀಟರ್ ಸರಾಸರಿ ಮಳೆ ದಾಖಲಾಗಿದ್ದು, ಉಡುಪಿ ನಗರ ಮತ್ತು ತಾಲೂಕಿನಲ್ಲಿ 121 ಮಿ.ಮೀ, ಕುಂದಾಪುರದಲ್ಲಿ 120 ಮಿ.ಮೀ ಮಳೆ ಬಿದ್ದಿದೆ. ಕಾರ್ಕಳ ತಾಲೂಕಿನಲ್ಲಿ 100 ಮಿಲಿ ಮೀಟರ್ ಮಳೆ ಸುರಿದಿದೆ. ಉಡುಪಿ ಜಿಲ್ಲಾಡಳಿತದಿಂದ ಮಳೆ ಮಾಹಿತಿ ಲಭ್ಯವಾಗಿದ್ದು, ಮುಂದಿನ 24 ಗಂಟೆಗಳ ಕಾಲ ಗುಡುಗು ಮಳೆ ಮುಂದುವರೆಯುವ ಸಾಧ್ಯತೆ ಇದೆ.

    ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದ್ದು, ರಾತ್ರಿಪೂರ್ತಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾರಾಂತ್ಯದವರೆಗೆ ಭಾರೀ ಮಳೆ ಸಾಧ್ಯತೆಯಿದ್ದು, ಜಿಲ್ಲೆಯಾದ್ಯಂತ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ನದಿ ಸಮುದ್ರ ತೀರದ ಜನಕ್ಕೆ ಎಚ್ಚರಿಕೆ ರವಾನೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಕಾಪು ತಾಲೂಕಲ್ಲಿ ಮೂರು ಮನೆಗಳ ಹಂಚು ಹಾರಿಹೋಗಿದ್ದು, ತಲಾ ಏಳು ಸಾವಿರ ರುಪಾಯಿಯಷ್ಟು ನಷ್ಟವಾಗಿದೆ ಎಂದು ಮನೆ ಮಾಲೀಕರಾದ ಭಾಸ್ಕರ್, ಲಿಲಾತಾ, ಬೇಬಿ ಅವರು ಪಂಚಾಯತ್‍ಗೆ ದೂರಿದ್ದಾರೆ. ಎರ್ಲಪಾಡಿ ವ್ಯಾಪ್ತಿಯ ವಿಶ್ವನಾಥ ಎಂಬವರ ಮನೆ ಮೇಲೆ ಮರ ಬಿದ್ದಿದ್ದು ಸುಮಾರು 10 ಸಾವಿರ ರುಪಾಯಿ ನಷ್ಟವಾಗಿದೆ.

  • ಕೊಡಗಿನಲ್ಲಿ ಮತ್ತೆ ಭೂ ಕುಸಿತದ ಆತಂಕ

    ಕೊಡಗಿನಲ್ಲಿ ಮತ್ತೆ ಭೂ ಕುಸಿತದ ಆತಂಕ

    ಮಡಿಕೇರಿ: ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂ ಕುಸಿತದ ಆತಂಕ ಜನರ ಮನಸ್ಸಿನಿಂದ ಇನ್ನೂ ದೂರವಾಗಿಲ್ಲ. ಈ ನಡುವೆಯೇ ಬಂದ ಗಂಡಾಂತರ ಮುಗಿದು ಹೋಯಿತೆಂದು ಜನರು ಕೃಷಿ ಮಾಡುತ್ತಾ ತಮ್ಮ ಬದುಕು ಮತ್ತೆ ಕಟ್ಟಿಕೊಳ್ಳಲು ಮುಂದಾಗಿದ್ದರು. ಆದರೆ ಎರಡು ವರ್ಷಗಳ ಹಿಂದೆ ಭೂಕುಸಿತ ಸಂಭವಿಸಿದ್ದ ಸ್ಥಳಗಳಲ್ಲಿ ಮತ್ತೆ ಆತಂಕ ಶುರುವಾಗಿದೆ.

    ಹೌದು ಕರ್ನಾಟಕದ ಕಾಶ್ಮೀರ, ಮಂಜಿನ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಮಡಿಕೇರಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ 2018ರಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತ ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿ ಬೀಳಿಸಿತ್ತು. ಎಮ್ಮೆತಾಳು, ಮೇಘತಾಳು, ಜೋಡುಪಾಲ, ಮದೆನಾಡು ಕಾಟಿಕೇರಿ ಸೇರಿದಂತೆ ಒಟ್ಟು 37 ಗ್ರಾಮಗಳು ಭೂಕುಸಿತಕ್ಕೆ ನಲುಗಿ ಹೋಗಿದ್ದವು. ಅದರಲ್ಲಿ ಎರಡನೇ ಮೊಣ್ಣಂಗೇರಿಯೂ ತೀವ್ರ ಸಮಸ್ಯೆ ಎದುರಿಸಿದ ಗ್ರಾಮಗಳಲ್ಲಿ ಒಂದು. ಸುತ್ತಲೂ ಬೆಟ್ಟಗುಡ್ಡಗಳ ಹೊದ್ದು, ಹಸಿರು ಕಾನನಗಳಿಂದ ಕಂಗೊಳಿಸುವ ಮೊಣ್ಣಂಗೇರಿ ಭೂಕುಸಿತದಿಂದ ಸ್ಮಶಾನ ಮೌನದಂತೆ ಆಗಿತ್ತು.

    ಮುಗಿಲೆತ್ತರದ ಬೆಟ್ಟಗಳೇ ಉರುಳಿದ್ದರಿಂದ 20 ಕ್ಕೂ ಹೆಚ್ಚು ಮನೆಗಳು ಭೂಮಿಯಾಳಕ್ಕೆ ಸೇರಿ ಹೋದವು. ಆದರೂ ಉಳಿದ 50 ಕ್ಕೂ ಹೆಚ್ಚು ಕುಟುಂಬಗಳು ಮಾತ್ರ ಯಾವುದಕ್ಕೂ ಎದೆಗುಂದದೆ ಅಲ್ಲಿಯೇ ಕೃಷಿ ಮಾಡುತ್ತಾ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹೇಗೋ ಬಂದ ಗಂಡಾಂತರ ಮುಗಿದು ಹೋಯಿತು ಅನ್ನೋ ಹೊತ್ತಿಗೆ ಮೊಣ್ಣಂಗೇರಿ ಸುತ್ತಮುತ್ತ ಪ್ರದೇಶದಲ್ಲಿ ಮತ್ತೆ ಆತಂಕ ಎದುರಾಗಿದೆ. 2018ರಲ್ಲಿ ಭೂಮಿ ಕುಸಿದಾಗ ಮೊಣ್ಣಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯೇ ಕಣ್ಮರೆಯಾಗಿತ್ತು.

    https://www.facebook.com/339166656101093/posts/4342660619084990/

    ಒಂದು ವರ್ಷದ ಬಳಿಕ ಮತ್ತೆ ರಸ್ತೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ಸೇರಿದಂತೆ ಸುತ್ತಮುತ್ತಲ ಸುಮಾರು ಎಕರೆಯಷ್ಟು ಪ್ರದೇಶ ಬರೋಬ್ಬರಿ 10 ಅಡಿಯಷ್ಟು ಆಳಕ್ಕೆ ಹೋಗಿದೆ. ಒಂದು ವೇಳೆ ಈ ಭೂಮಿ ಕುಸಿದಲ್ಲಿ ಇಡೀ ಗ್ರಾಮ ಸಂಪೂರ್ಣ ಸಂಪರ್ಕ ಕಡಿತಕೊಳ್ಳುತ್ತದೆ ಅನ್ನೋದು ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮೊಣ್ಣಂಗೇರಿ ಗ್ರಾಮಕ್ಕೆ ಮದೆನಾಡಿನ ಮುಖ್ಯ ರಸ್ತೆಯಿಂದ ಐದು ಕಿಲೋ ಮೀಟರ್ ಸಾಗಬೇಕು. ಮಾರ್ಗ ಮಧ್ಯೆ ನಾಲ್ಕೈದು ತಿರುವುಗಳಲ್ಲಿ ಭಾರೀ ಭೂಕುಸಿತವಾಗಿದ್ದು, ಇಲ್ಲೆಲ್ಲವೂ ರಸ್ತೆ ಪುನರ್ ನಿರ್ಮಾಣ ಮಾಡಲಾಗಿತ್ತು.

    https://www.facebook.com/339166656101093/posts/4344065368944515/

    ಇದೀಗ ಮಳೆ ಆರಂಭವಾಗಿದ್ದು, ಹಲವೆಡೆ ಭೂಮಿ ಬಿರುಕುಬಿಟ್ಟಿದೆ. ಅಲ್ಲದೆ, ಮೊಣ್ಣಂಗೇರಿ ಶಾಲೆ ಬಳಿ ರಸ್ತೆ ಸೇರಿ ಎಕರೆಯಷ್ಟು ಪ್ರದೇಶ 10 ಅಡಿ ಆಳಕ್ಕೆ ಭೂಮಿ ಕುಸಿದಿದೆ. ಇದು ಜನರ ತೀವ್ರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ 2018 ರಲ್ಲಿ ಭೂಮಿ ಕುಸಿದಿದ್ದ ಪ್ರದೇಶದಲ್ಲಿ ಚಿಕ್ಕ ಚಿಕ್ಕ ನೀರಿನ ಝರಿಗಳೇ ಹರಿಯುತ್ತಿದ್ದು, ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಹರಿಯುತ್ತವೆ. ಹೀಗಾಗಿ ಈ ಪ್ರದೇಶದಲ್ಲೆಲ್ಲಾ ಮತ್ತೆ ಭೂಮಿ ಕುಸಿಯುವ ಆತಂಕ ಎದುರಾಗಿದೆ. ಮಳೆಗಾಲ ಮುಗಿಯುವವರೆಗೆ ಬೇರೆಡೆಗೆ ತೆರಳೋಣ ಎಂದುಕೊಂಡರೆ, ಸದ್ಯ ಕೊರೊನಾ ಆತಂಕವೂ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳು ಮರಿಗಳನ್ನು ಎಲ್ಲಿಗೆ ಕರೆದೊಯ್ಯುವುದು ಎನ್ನೋದು ಜನರ ಆತಂಕ.

  • ಮಳೆಗಾಲ ಆರಂಭ- ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಮಳೆಗಾಲ ಆರಂಭ- ಕೊಡಗಿನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಎದುರಾಗಿದ್ದ ಭೂಕುಸಿತದಿಂದ ಜನ ಸಾಕಷ್ಟು ಸಂಕಷ್ಟ ಎದುರಿಸಿದ್ದಾರೆ. ಹೀಗಾಗಿ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ಭಾರೀ ವಾಹನಗಳ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ನಿಷೇಧ ಹೇರಿ ಆದೇಶಿಸಿದೆ.

    ಕೊಡಗಿನಲ್ಲಿ ಈಗಾಗಲೇ ಮಳೆ ಆರಂಭವಾಗಿದ್ದು, ಭೂಮಿಯಲ್ಲಿ ತೇವಾಂಶ ಹೆಚ್ಚಾದಂತೆ ಭೂ ಕುಸಿತ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ ಬುಲೆಟ್ ಟ್ಯಾಂಕರ್ಸ್, ಶಿಫ್ ಕಾರ್ಗೋ, ಕಂಟೈನರ್, ಲಾಂಗ್ ಚಾಸಿಸ್ ವಾಹನಗಳು ಸೇರಿದಂತೆ ಎಲ್ಲ ಬಗೆಯ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಹೇರಿ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.

    ಅಡುಗೆ ಅನಿಲ, ಇಂಧನ ಪೂರೈಕೆ, ಹಾಲು ಹಾಗೂ ಸರ್ಕಾರಿ ಕೆಲಸದ ನಿಮಿತ್ತ ಸಂಚರಿಸುವ ವಾಹನಗಳು, ಶಾಲಾ-ಕಾಲೇಜು ಹಾಗೂ ಸಾರ್ವಜನಿಕರು ಪ್ರಯಾಣಿಸುವ ವಾಹನಗಳನ್ನು ಹೊರತುಪಡಿಸಿ, ಮರದ ದಿಮ್ಮಿಗಳ ಸಾಗಾಟ ಮತ್ತು ಮರಳು ಸಾಗಾಟಕ್ಕೂ ನಿಷೇಧ ಹೇರಲಾಗಿದೆ. ಜೂನ್ 11 ರಿಂದ ಆಗಸ್ಟ್ 10ರ ವರೆಗೆ ಎರಡು ತಿಂಗಳುಗಳ ಕಾಲ ಎಲ್ಲ ಬಗೆಯ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಆದೇಶಿಸಿದ್ದಾರೆ.

  • ಈ ಬಾರಿಯೂ ಮರುಕಳಿಸುತ್ತಾ ಕೊಡಗಿನಲ್ಲಿ ಪ್ರವಾಹ?

    ಈ ಬಾರಿಯೂ ಮರುಕಳಿಸುತ್ತಾ ಕೊಡಗಿನಲ್ಲಿ ಪ್ರವಾಹ?

    ಮಡಿಕೇರಿ: ಕೊಡಗು ಜಿಲ್ಲೆ ಕಳೆದ ಎರಡು ವರ್ಷಗಳಿಂದಲೂ ಭೀಕರ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ತತ್ತರಿಸಿ ಹೋಗಿದೆ. ಒಂದು ವರ್ಷ ಭೀಕರ ಭೂಕುಸಿತವಾಗಿದ್ದರೆ, 2019ರಲ್ಲಿ ದೊಡ್ಡ ಪ್ರವಾಹ ಸೃಷ್ಠಿಯಾಗಿ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದರು. ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ದುರಂತ ಈ ಬಾರಿಯೂ ಕೊಡಗಿಗೆ ಎದುರಾಗುತ್ತಾ ಅನ್ನೋ ಅನುಮಾನ ದಟ್ಟವಾಗಿದೆ.

    ಈಗಾಗಲೇ ಮುಂಗಾರು ಮಾರುತಗಳು ಕೇರಳಕ್ಕೆ ಎಂಟ್ರಿಯಾಗಿದ್ದು, ಇನ್ನೆರಡು ದಿನಗಳಲ್ಲೇ ರಾಜ್ಯಕ್ಕೂ ಮಳೆ ಕಾಲಿಡಲಿದೆ. 2018ರಲ್ಲಿ ಮಡಿಕೇರಿ ತಾಲೂಕಿನಲ್ಲಿ ಭೀಕರ ಭೂಕುಸಿತಗಳು ಸಂಭವಿಸಿದ್ದರೆ, 2019ರಲ್ಲಿ ಮೂರು ತಾಲೂಕುಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಅಲ್ಲದೆ ವಿರಾಜಪೇಟೆ ತಾಲೂಕಿನಲ್ಲಿ ಭೂಕುಸಿತವೂ ಸಂಭವಿಸಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ರು. ಹೀಗಾಗಿಯೇ ಈ ಬಾರಿ ಜಿಲ್ಲಾಡಳಿತ ಮೂರು ತಾಲೂಕುಗಳಲ್ಲಿ ಕಟ್ಟೆಚ್ಚರ ವಹಿಸಿದೆ.

    ಮತ್ತೊಂದೆಡೆ ಹವಾಮಾನ ಇಲಾಖೆ ಈ ಬಾರಿಯೂ ಪ್ರವಾಹ ಸೃಷ್ಟಿಯಾಗುತ್ತೇ ಅನ್ನೋ ಮುನ್ಸೂಚನೆ ನೀಡಿದೆ. ಇಷ್ಟೇ ಅಲ್ಲ ರಾಜ್ಯದ ಪ್ರಸಿದ್ದ ಸ್ವಾಮೀಜಿಯೊಬ್ಬರು ಕೊಡಗಿನಲ್ಲಿ ಭೂಕಂಪ ಆಗಿ ಇಡೀ ಜಿಲ್ಲೆಯೇ ನೆಲಸಮವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಹೀಗೆ ಹೇಳುತ್ತಲೇ ಕೊಡಗಿನ ಬೆಳೆಗಾರರ ಸಂಘವು ಆ ಸ್ವಾಮೀಜಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮತ್ತೊಂದೆಡೆ ಮಡಿಕೇರಿ ವಿಜಯ ವಿನಾಯಕ ದೇವಾಲಯದ ಅರ್ಚಕರು ಜೋತಿಷ್ಯಿಯೂ ಆಗಿರುವ ಕೃಷ್ಣ ಭಟ್ ಅವರು ಕೊಡಗಿನಲ್ಲಿ ಕಳೆದ ಎರಡು ವರ್ಷಗಳಂತೆ ಈ ಬಾರಿಯೂ ಮಳೆಯಿಂದ ಅವಾಂತರ, ಅವಘಡಗಳು ಸಂಭವಿಸುತ್ತವೆ. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಆಗುವುದಿಲ್ಲ ಎಂದು ಭವಿಷ್ಯ ಹೇಳಿದ್ದಾರೆ.

    ಕಳೆದ ಎರಡು ವರ್ಷಗಳು ಜಿಲ್ಲೆಯಲ್ಲಿ ಮಳೆಯಿಂದ ಆದ ದುರಂತಗಳ ಅನುಭವ ಜಿಲ್ಲಾಡಳಿತಕ್ಕೆ ಇರುವುದರಿಂದ ಈಗಾಗಲೇ ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಸದ್ಯದಲ್ಲೇ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದೆ. ಮತ್ತೊಂದೆಡೆ ಜಿಲ್ಲಾಡಳಿತ ಕೂಡ ಅಗ್ನಿ ಶಾಮಕ ತಂಡ, ಡಿಆರ್ ಪೊಲೀಸ್, ಹೋಂ ಗಾರ್ಡ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತರಬೇತಿ ನೀಡಿದೆ.

    ಕೊಡಗಿನ ಹಾರಂಗಿ ಜಲಾಶಯ, ಕೂಟ್ಟು ಹೊಳೆಗಳಲ್ಲಿ ಬೋಟ್‍ಗಳ ಮೂಲಕ ತಾಲೀಮು ನಡೆಸಿದೆ. ಅಷ್ಟೇ ಅಲ್ಲದೆ ಪ್ರಾಕೃತಿಕ ವಿಕೋಪ ಎದುಸಿರುವುದಕ್ಕಾಗಿ ಮೂರು ತಾಲೂಕುಗಳ ತಹಶೀಲ್ದಾರ್ ಗಳ ಖಾತೆಗೆ ತಲಾ 1 ಕೋಟಿ ರೂಪಾಯಿ ಹಣವನ್ನು ಹಾಕಲಾಗಿದೆ. ಅಲ್ಲದೆ ಪ್ರತೀ ಗ್ರಾಮ ಪಂಚಾಯಿತಿಗೆ 50 ಸಾವಿರ ರೂಪಾಯಿ, ಪ್ರತಿ ಪಟ್ಟಣ ಪಂಚಾಯಿತಿಗೆ 1 ಲಕ್ಷ ರೂಪಾಯಿ ಮತ್ತು ನಗರ ಸಭೆಗೆ 2 ಲಕ್ಷ ರೂಪಾಯಿ ಹಣವನ್ನು ಹಾಕಲಾಗಿದೆ.

    ಈ ಎಲ್ಲಾ ಸಿದ್ಧತೆಗಳನ್ನು ನೋಡಿದ್ರೆ ಕೊಡಗಿಗೆ ನಿಜವಾಗಿಯೂ ಮತ್ತೆ ಪ್ರವಾಹ ಎದುರಾಗುತ್ತಾ, ಪ್ರಾಕೃತಿಕ ವಿಕೋಪ ಉಂಟಾಗುತ್ತಾ. ಅದಕ್ಕಾಗಿಯೇ ಜಿಲ್ಲಾಡಳಿತ ಇಷ್ಟೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಅನ್ನೋ ಅನುಮಾನ ಮೂಡಿದೆ.

  • ರಾಜ್ಯದಲ್ಲಿ ಒಂದ್ಕಡೆ ಸೈಕ್ಲೋನ್, ಮತ್ತೊಂದು ಕಡೆ ಮುಂಗಾರು- ವರುಣನ ಆರ್ಭಟ

    ರಾಜ್ಯದಲ್ಲಿ ಒಂದ್ಕಡೆ ಸೈಕ್ಲೋನ್, ಮತ್ತೊಂದು ಕಡೆ ಮುಂಗಾರು- ವರುಣನ ಆರ್ಭಟ

    ಬೆಂಗಳೂರು: ರಾಜ್ಯದ ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ 3 ದಿನ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ನಿನ್ನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ವರ್ಷಧಾರೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಎದ್ದಿರುವ ನಿಸರ್ಗ ಚಂಡಮಾರುತ ಮತ್ತಷ್ಟು ಆತಂಕ ಸೃಷ್ಟಿಸುತ್ತಾ ಅನ್ನೋ ಆತಂಕ ಮನೆ ಮಾಡಿದೆ.

    ದಾವಣಗೆರೆಯ ಹರಿಹರ ಸೇರಿ ಹಲವೆಡೆ ವರುಣನ ಆರ್ಭಟ ಜೋರಾಗಿತ್ತು. ದಾವಣಗೆರೆಯ ಹೆಮ್ಮನಬೇತೂರು ಗ್ರಾಮದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯಿತು. ಕಾರು ಅರ್ಧದಷ್ಟು ಮುಳುಗಿತ್ತು. ಮನೆಗಳಿಗೆ ನೀರು ನುಗ್ಗಿ ವಸ್ತುಗಳೆಲ್ಲಾ ನೀರುಪಾಲಾಯ್ತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದ ವಾಹನ ಸವಾರರು ಪರದಾಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಹುಕ್ಕೇರಿ ತಾಲೂಕಿನ ಸುತಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸುರಿದ ಧಾರಾಕಾರ ಮಳೆಯಿಂದ ರಸ್ತೆಗೆ ನೀರು ನುಗ್ಗಿದ್ದು, ರಸ್ತೆಗಳು ಕೆರೆಯಂತಾಗಿವೆ.

    ಸೋಮವಾರದ ಭಾರೀ ಮಳೆಯಿಂದಾಗಿ ಚಿಕ್ಕೋಡಿಯ ಸುತಗಟ್ಟಿ ಘಾಟ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯಲ್ಲಿ ವಾಹನಗಳು ತಗ್ಲಾಕೊಂಡವು. ಒಂದು ಗಂಟೆಗೂ ಕಾಲ ಹೆಚ್ಚು ಸುರಿದ ಮಳೆಯಿಂದ ಪ್ರಯಾಣಿಕರ ಪರದಾಟ ನಡೆಸಿದರು.

    ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಗುಡುಗು, ಸಿಡಿಲು ಗಾಳಿ ಸಹಿತ ಭಾರೀ ಮಳೆಯಾಗಿದೆ. ಸತತ ಅರ್ಧಗಂಟೆಯಿಂದ ಸುರಿದ ಮಳೆಯಿಂದಾಗಿ ಅಗಸ್ತ್ಯ ತೀರ್ಥ ಹೊಂಡ ಮೈತುಂಬಿ ನಿಂತಿದೆ. ಅಕ್ಕ ತಂಗಿ ಜಲಪಾತದಲ್ಲಿ ನೀರು ಬೋರ್ಗರೆಯುತ್ತಿದೆ. ಮತ್ತೊಂದೆಡೆ ನವನಗರ ಮೂರ್ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ಬೀಳಗಿಯ ಗಾಂಧಿನಗರದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದಿದೆ. ಬೆಳಗಾವಿ, ಹಾವೇರಿ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

  • ರಾಜ್ಯದ ಹಲವೆಡೆ ವರುಣನ ಅಬ್ಬರ- ನದಿಯಂತಾದ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ

    ರಾಜ್ಯದ ಹಲವೆಡೆ ವರುಣನ ಅಬ್ಬರ- ನದಿಯಂತಾದ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ

    – ಮಂಗಳೂರು, ಕೊಡಗು, ಚಿಕ್ಕಮಗಳೂರಿನಲ್ಲೂ ಮಳೆ

    ಬೆಂಗಳೂರು: ರಾಜ್ಯಾದ್ಯಂತ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಬೆಳಗಾವಿ, ಮಂಗಳೂರು, ಧಾರವಾಡ, ಹಾವೇರಿ, ಶಿವಮೊಗ್ಗ, ಬಾಗಲಕೋಟೆ, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.

    ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಮಳೆ ನೀರು ನುಗ್ಗಿದ್ದು, ಹುಕ್ಕೇರಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದ ಪರಿಣಾಮ ತಾಲೂಕಿನ ಸುತಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಗೆ ಮಳೆ ನೀರು ನುಗ್ಗಿದೆ. ಮಳೆ ನೀರಿನಿಂದ ರಸ್ತೆ ನದಿಯಂತಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಸುರಿದಮಳೆಯಿಂದ ವಾಹನ ಸವಾರರು ಪರದಾಡುವಂತಾಯಿತು. ಆದರೆ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಮುಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ.

    ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಮಳೆಯಾಗಿದೆ. ಬೆಳಗ್ಗೆಯಿಂದಲೇ ಪಶ್ಚಿಮ ಘಟ್ಟದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಭಾರೀ ಮಳೆಯಾಗಿ, ಬೆಳ್ತಂಗಡಿಯ ಕುಕ್ಕಾವು, ಚಾರ್ಮಾಡಿ ಪ್ರದೇಶದಲ್ಲಿ ಪ್ರವಾಹ ಮಾದರಿ ನೀರಿನ ಹರಿವು ಉಂಟಾಗಿದೆ, ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಬಾರಿ ಈ ಪ್ರದೇಶದಲ್ಲಿ ಬಾರೀ ಮಳೆಯಾಗಿ ಹಲವು ಪ್ರದೇಶಗಳು ಮಳೆ ನೀರಿನಿಂದ ಕೊಚ್ಚಿ ಹೋಗಿದ್ದವು. ಹೀಗಾಗಿ ಜನರಲ್ಲಿ ಭಯ ಮನೆ ಮಾಡಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

    ಕೊಡಗು ಜಿಲ್ಲೆಯಲ್ಲಿ ಸಹ ಮಳೆಯ ಆಬ್ಬರ ಮುಂದುವರಿದಿದ್ದು, ಬೆಳಿಗ್ಗೆಯಿಂದಲೂ ಮಳೆ ಸುರಿಯುತ್ತಿದೆ. ಜಿಲ್ಲೆಯಾದ್ಯಂತ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು, ಭಾರೀ ಪ್ರಮಾಣದಲ್ಲಿ ಗಾಳಿ ಬೀಸುತ್ತಿದೆ. ಹವಾಮಾನ ಇಲಾಖೆ ಕೊಡಗು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಿದ್ದು, ನಾಳೆಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

    ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮುಳ್ಳಯ್ಯನಗಿರಿ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಚಾರ್ಮಾಡಿ ಘಾಟ್‍ನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಡೂರು, ತರೀಕೆರೆ ತಾಲೂಕಿನ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.

    ಹಾವೇರಿ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣವಿದೆ. ಹಾವೇರಿ ತಾಲೂಕಿನ ಯಲಗಚ್ಚ, ಹೊಸರಿತ್ತಿ, ಹಾಲಗಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಮಳೆರಾಯನ ಆಗಮನದಿಂದ ರೈತರು ಹರ್ಷಗೊಂಡಿದ್ದಾರೆ.

    ಧಾರವಾಡದಲ್ಲಿಯೂ ಮಳೆ ಅಬ್ಬರ ಜೋರಾಗಿದ್ದು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಜೋರಾಗಿ ಶುರುವಾದ ಮಳೆ ಸಂಜೆಯವರೆಗೂ ಎಡೆವಿಡದೆ ಸುರಿದಿದೆ. ಇದರ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈತರ ಬಿತ್ತನೆ ಕಾರ್ಯ ಚುರುಕುಗೊಂಡಂತಾಗಿದೆ. ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ವರುಣ ತಂಪೆರೆದಿದ್ದು, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

    ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಸಹ ಭಾರೀ ಗಾಳಿ ಮಳೆಯಾಗಿದ್ದು, ಬಾದಾಮಿ ಪಟ್ಟಣದ ಐತಿಜಾಸಿಕ ಸ್ಥಳ ಅಕ್ಕ ತಂಗಿ ಜಲಪಾತ ಉಕ್ಕಿ ಹರಿಯುತ್ತಿದೆ. ಅಗಸ್ತ್ಯತೀರ್ಥ ಹೊಂಡ ಸಹ ಮೈದುಂಬಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ವರುಣ ತಂಪೆರೆದಿದ್ದು, ಜಿಲ್ಲೆಯ ಹಲವೆಡೆ ಮಳೆಯ ಸಿಂಚನವಾಗಿದೆ. ಗುಡುಗು ಸಹಿತ ಮಳೆಯಾಗಿದೆ.

  • ನಾಳೆ ಇಲ್ಲವೇ ನಾಡಿದ್ದು ರಾಜ್ಯಕ್ಕೆ ಮುಂಗಾರು ಪ್ರವೇಶ- ಮೂರ್ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

    ನಾಳೆ ಇಲ್ಲವೇ ನಾಡಿದ್ದು ರಾಜ್ಯಕ್ಕೆ ಮುಂಗಾರು ಪ್ರವೇಶ- ಮೂರ್ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

    ಧಾರವಾಡ, ಬೆಳಗಾವಿಯಲ್ಲಿ ಭಾರೀ ಮಳೆ

    ಬೆಂಗಳೂರು: ಇಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಿದ್ದು, ಮಂಗಳವಾರ ಇಲ್ಲವೆ ಬುಧವಾರ ರಾಜ್ಯಕ್ಕೆ ಪ್ರವೇಶಿಸಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಂಗಳವಾರ ಇಲ್ಲವೇ ಬುಧವಾರ ಮುಂಗಾರು ಪ್ರವೇಶಿಸುವ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ಕೇರಳಕ್ಕೆ ಇಂದು ಮುಂಗಾರು ಎಂಟ್ರಿಯಾಗಿದ್ದು, ನಾಳೆ ರಾಜ್ಯದ ಕರಾವಳಿ ಭಾಗಕ್ಕೆ ಪ್ರವೇಶಿಸಲಿದೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ಇಂದಿನಿಂದ ಮೂರ್ನಾಲ್ಕು ದಿನ ಭಾರೀ ಮಳೆಯಾಗಲಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುವ ಸಂಭವವಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ರಾಜ್ಯದಲ್ಲಿ ಇದೀಗ ಮುಂಗಾರಿಗೆ ಪೂರಕವಾದ ವಾತಾವರಣವಿದ್ದು, ಭಾರತೀಯ ಹವಾಮಾನ ಇಲಾಖೆ ಮುಂಗಾರಿನ ಮಾಹಿತಿ ನೀಡಿದೆ ಎಂದು ವಿವರಿಸಿದ್ದಾರೆ.

    ಬೆಳಗಾವಿ ಹಾಗೂ ಧಾರವಾಡದಲ್ಲಿ ಹೆಚ್ಚು ಮಳೆ ಸಾಧ್ಯತೆ ಇದೆ. ಜೂನ್ 5ಕ್ಕೆ ರಾಜ್ಯದ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶದ ನಿರೀಕ್ಷೆ ಇತ್ತು. ಮುಂಗಾರಿಗೆ ಪೂರಕ ವಾತಾವರಣವಿರುವುದರಿಂದ ಒಂದೆರಡು ದಿನ ಮೊದಲೇ ಮುಂಗಾರು ಮಳೆಯಾಗಲಿದೆ. ಈ ಬಾರಿ ವಾಡಿಕೆಯಷ್ಟು ಮುಂಗಾರು ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿಯೂ ಮೂರು ದಿನಗಳ ಕಾಲ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಸಿದ್ಧತೆ ಮಾಡಿಕೊಳ್ಳುವಂತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಮಳೆಯಿಂದ ಆಗುವ ಅನಾಹುತಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ತಿಳಿಸಲಾಗಿದೆ. ಪ್ರವಾಹ, ಚಂಡಮಾರುತ ಬಂದರೂ ಎದುರಿಸಲು ಸಿದ್ಧ. ಕೆಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಕುರಿತು ಸಹ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

  • ರಾಯಚೂರಿನಲ್ಲಿ ಅತೀ ಹೆಚ್ಚು ಮಳೆ ದಾಖಲು

    ರಾಯಚೂರಿನಲ್ಲಿ ಅತೀ ಹೆಚ್ಚು ಮಳೆ ದಾಖಲು

    -ಇನ್ನೂ 4 ದಿನ ರಾಜ್ಯದಲ್ಲಿ ಜೋರು ಮಳೆ

    ರಾಯಚೂರು: ಶುಕ್ರವಾರ ರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನಗರ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಕಲ್ಮಲ ಹೋಬಳಿಯಲ್ಲಿ 148.5 ಮಿ.ಮೀಟರ್ ಮಳೆಯಾಗಿದ್ದು. ರಾಜ್ಯದಲ್ಲೇ ನಿನ್ನೆ ಅತೀ ಹೆಚ್ಚು ಮಳೆ ಸುರಿದ ಪ್ರದೇಶವಾಗಿದೆ. ರಾಜ್ಯದ ಕರಾವಳಿ ಭಾಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಕಾಲ ಗುಡುಗು, ಮಿಂಚು, ಜೋರುಗಾಳಿ ಸಹಿತ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.

    ಮೇ 31 ರಂದು ಕರಾವಳಿ ಕರ್ನಾಟಕ ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರಿನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಜೂನ್ 1 ರಂದು ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯಲಿದೆ. ಜೂನ್ 2 ರಂದು ಬಾಗಲಕೋಟೆ, ಬೆಳಗಾವಿ, ಹಾವೇರಿ, ವಿಜಯಪುರ, ಬಳ್ಳಾರಿ, ತುಮಕೂರಿನಲ್ಲೂ ಗುಡುಗು, ಮಿಂಚು ,ಗಾಳಿ ಸಹಿತ ಜೋರು ಮಳೆ ಸುರಿಯುವ ಸಂಭವವಿದೆ. ಜೂನ್ 3 ರಂದು ಸಹ ರಾಜ್ಯದ ಹಲವಡೆ ಭಾರೀ ಮಳೆ ಬೀಳಲಿದೆ ಅಂತ ಬೆಂಗಳೂರು ಹವಾಮಾನ ಕೇಂದ್ರ ಎಚ್ಚರಿಸಿದೆ.

    ನಿನ್ನೆ ಸುರಿದ ಮಳೆಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಳ್ಳಗಳು ತುಂಬಿ ಜಮೀನುಗಳಿಗೆ ನೀರು ನುಗ್ಗಿದೆ. ರಾಯಚೂರು ನಗರದ ಎಲ್ ಬಿಎಸ್ ನಗರದಲ್ಲಿ ಮನೆ ಕುಸಿದಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇನ್ನೊಂದೆಡೆ ಮುಂಗಾರು ಪೂರ್ವದಲ್ಲೇ ಜೋರು ಮಳೆ ಬಂದಿರುವುದು ರೈತರಿಗೆ ಸಂತಸ ತಂದಿದೆ.

  • ರಾಜ್ಯದ ರೈತರಿಗೆ ಸಿಹಿ ಸುದ್ದಿ- ಅವಧಿಗೆ ಮೊದಲೇ ಮುಂಗಾರು ಪ್ರವೇಶ

    ರಾಜ್ಯದ ರೈತರಿಗೆ ಸಿಹಿ ಸುದ್ದಿ- ಅವಧಿಗೆ ಮೊದಲೇ ಮುಂಗಾರು ಪ್ರವೇಶ

    ಬೆಂಗಳೂರು: ರಾಜ್ಯದ ರೈತರಿಗೆ ಖುಷಿ ಸುದ್ದಿ. ಅವಧಿಗೆ ಮೊದಲೇ ರಾಜ್ಯಕ್ಕೆ ಮುಂಗಾರು ಮಳೆ ಎಂಟ್ರಿ ಕೊಡಲಿದೆ.

    ಜೂನ್ 5ರ ಬದಲು ಜೂನ್ 1 ಅಥವಾ 2ಕ್ಕೆ ರಾಜ್ಯದ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ. ದಕ್ಷಿಣ ಒಳನಾಡಿನಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನ ಹಲವೆಡೆ ಸಂಜೆಯಿಂದ ಗಾಳಿ ಸಹಿತ ಮಳೆ ಆಗ್ತಿದೆ. ಹಲವೆಡೆ ಮರಗಳು ಉರುಳಿಬಿದ್ದಿದೆ. ಜೂನ್ 1ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಮಂಡ್ಯ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆ ಆಗಿದೆ. ಕೆ.ಆರ್.ಪೇಟೆಯ ಆಲಂಬಾಡಿಯಲ್ಲಿ ಮರಗಳು ಬಿದ್ದು ಮನೆಗಳು ಜಖಂಗೊಂಡಿವೆ. ಅದೃಷ್ಠವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಜೂನ್ 1ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಆಗಲಿದೆ. ಮೇ 31ರಿಂದ ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲೂ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.