Tag: monsoon

  • ಉತ್ತರ ಕರ್ನಾಟಕದಲ್ಲಿ ತಗ್ಗಿದ ಪ್ರವಾಹ – ಡ್ಯಾಂಗಳು ಭರ್ತಿ, ಕಟ್ಟೆಚ್ಚರ

    ಉತ್ತರ ಕರ್ನಾಟಕದಲ್ಲಿ ತಗ್ಗಿದ ಪ್ರವಾಹ – ಡ್ಯಾಂಗಳು ಭರ್ತಿ, ಕಟ್ಟೆಚ್ಚರ

    ಬೆಂಗಳೂರು: ಮಳೆಯಬ್ಬರ ತಗ್ಗಿದ್ದು, ಉತ್ತರ ಕರ್ನಾಟಕದಲ್ಲೂ ಪ್ರವಾಹ ಇಳಿಮುಖವಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಕೇವಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಬರಬಹುದು. ಮಹಾರಾಷ್ಟ್ರದ ಪುಣೆ, ರತ್ನಗಿರಿ, ಸತಾರದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ.

    ಕಳೆದ ಆರೇಳು ದಿನಗಳಿಂದ ಆಗುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಡ್ಯಾಂಗಳು ಬಹುತೇಕ ಭರ್ತಿ ಆಗಿವೆ. ಈ ಹಿನ್ನೆಲೆಯಲ್ಲಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಬಹುದಾಗಿದ್ದು ಕೃಷ್ಣ, ಭೀಮಾ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಜಲ ಆಯೋಗ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣಕ್ಕೆ ಸಲಹೆ ನೀಡಿದೆ.

    ತುಂಗಭದ್ರಾ ನದಿಗೆ 1 ಲಕ್ಷದ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಜಪದ ಕಟ್ಟೆ ಮುಳುಗಡೆ ಆಗಿದೆ. ಜಮೀನುಗಳಿಗೆ ನೀರು ನುಗ್ಗುವ ಭೀತಿ ಹಿನ್ನೆಲೆಯಲ್ಲಿ ರೈತರು ಪಂಪ್‍ಸೆಟ್‍ಗಳನ್ನ ತೆರವುಗೊಳಿಸಿದ್ದಾರೆ. ಕಲಬುರಗಿ ನಗರದ ಹೊರವಲಯದ ಭೋಸಗಾ ಕೆರೆ ತುಂಬಿದ್ದು ಜಲಪಾತ ಸೃಷ್ಟಿ ಆಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದ ಕುಂಬಾರಗಲ್ಲಿ ಜಲಾವೃತವಾಗಿದ್ದು ಸ್ಥಳೀಯರನ್ನು ಆಸರೆ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗಿದೆ. ಆದ್ರೆ ಆಸರೆ ಕೇಂದ್ರದಲ್ಲಿ ಸೂಕ್ತ ಸೌಲಭ್ಯ ಇಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

    ಹುನಗುಂದ ತಾಲೂಕಿನ ಗಂಜಿಹಾಳದಲ್ಲಿ ಪ್ರವಾಹಕ್ಕೆ ಮನೆಗಳು ಜಲಾವೃತವಾಗಿವೆ. ಮನೆ ಸಾಮಾನು, ಕೃಷಿ ಉಪಕರಣ ಎತ್ತಿಕೊಂಡು ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ. ತುಂಗಭದ್ರಾ ಜಲಾಶಯದಿಂದ ನೀರು ಬಿಡಲಾಗಿದ್ದು, ಹಂಪಿಯಲ್ಲಿ ಪುರಂದರದಾಸರ ಮಂಟಪ, ಸಾಲುಮಂಟಪ, ಧಾರ್ಮಿಕ ವಿಧಿಗಳನ್ನು ಮಾಡೋ ಮಂಟಪಗಳು ಜಲಾವೃತಗೊಂಡಿವೆ. ಹಂಪಿಯಿಂದ ವಿರೂಪಾಪುರಗಡ್ಡೆಗೆ ತೆರಳುವ ಬೋಟ್‍ಗಳನ್ನ ಸ್ಥಗಿತಗೊಳಿಸಲಾಗಿದೆ. ಕಂಪ್ಲಿ ಮತ್ತು ಗಂಗಾವತಿ ನಡುವಿನ ಸೇತುವೆಯೂ ಜಲಾವೃತಗೊಂಡಿದೆ.

    ಬೆಳಗಾವಿ ಜಿಲ್ಲೆಯ ಗೋಕಾಕ್‍ನ ಉಪ್ಪಾರಗಲ್ಲಿ, ಹಳೆದನದಪೇಟೆ, ಕುಂಬಾರಗಲ್ಲಿ, ಮಟನ್ ಮಾರ್ಕೆಟ್ ಮತ್ತು ಮಹಾಲಿಂಗೇಶ್ವರ ನಗರ ಜಲಾವೃತಗೊಂಡಿರುವ ಕಾರಣ ಅಲ್ಲಿನ ಕುಟುಂಬಗಳಿಗೆ ಆಸರೆ ಕೇಂದ್ರ ಸ್ಥಾಪಿಸಲಾಗಿದೆ. ಘಟಪ್ರಭೆಯ ಅಬ್ಬರಕ್ಕೆ ಗೋಕಾಕ್‍ನ ಮೆಳವಂಕಿಗೆ ನೆರೆ ಬಂದಿದೆ. ಮೆಳವಂಕಿ ಸರ್ಕಾರಿ ಶಾಲೆಯಲ್ಲಿ 285 ಮಂದಿಗೆ ಆಸರೆ ನೀಡಲಾಗಿದ್ದು, ಇಲ್ಲೇ ಗರ್ಭಿಣಿಯೊಬ್ಬರು ತಮ್ಮ ಮಗುವಿನೊಂದಿಗೆ ಇದ್ದಾರೆ. ವಿಚಿತ್ರ ಅಂದ್ರೆ ಕೊರೋನ ಭಯಕ್ಕೆ ಸಂಬಂಧಿಕರು ಇವರನ್ನ ಮನೆಗೆ ಸೇರಿಸಿಕೊಳ್ಳಲು ತಯಾರಿಲ್ಲ.

  • ಬರಗಾಲದಿಂದ ತತ್ತರಿಸಿದ್ದ ರಾಯಚೂರು ರೈತರಿಗೆ ಅತಿವೃಷ್ಟಿ ಪೆಟ್ಟು

    ಬರಗಾಲದಿಂದ ತತ್ತರಿಸಿದ್ದ ರಾಯಚೂರು ರೈತರಿಗೆ ಅತಿವೃಷ್ಟಿ ಪೆಟ್ಟು

    – ಸತತ ಮಳೆಗೆ ಬೆಳೆಯನ್ನ ಕಿತ್ತು ಹಾಕ್ತಿರುವ ರೈತರು

    ರಾಯಚೂರು: ಜಿಲ್ಲೆಯಲ್ಲಿ ಒಂದೆಡೆ ಪ್ರವಾಹ ಭೀತಿ ಇನ್ನೊಂದೆಡೆ ಐದಾರು ದಿನದಿಂದ ಸತತವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆ ರೈತರನ್ನ ಕಂಗೆಡಿಸಿದೆ. ಸತತ ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆಯಲಾದ ಲಕ್ಷಾಂತರ ರೂಪಾಯಿ ಮೌಲ್ಯದ ಶೇಂಗಾ ಹಾಗೂ ಹತ್ತಿ ಬೆಳೆ ಹಾನಿಯಾಗಿದೆ. ನಷ್ಟ ಕಡಿಮೆ ಮಾಡಿಕೊಳ್ಳಲು ಸ್ವತಃ ರೈತರೇ ತಾವು ಬೆಳೆದ ಬೆಳೆಯನ್ನ ತಾವೇ ಕಿತ್ತು ಹಾಕುತ್ತಿದ್ದಾರೆ.

    ಮಳೆಯಿಂದಾಗಿ ಜಮೀನಿನಲ್ಲಿ ನೀರು ನಿಲ್ಲುತ್ತಿರುವುದರಿಂದ ರಾಯಚೂರು ತಾಲೂಕಿನ ಸಾಥ್‍ಮೈಲ್ ಬಳಿ 10 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಹತ್ತಿ ಬೆಳೆಯನ್ನ ರೈತರೆ ಕಿತ್ತು ಹಾಕುತ್ತಿದ್ದಾರೆ. ಸತತವಾಗಿ ಮಳೆ ಸುರಿಯುತ್ತಿದ್ದು, ಹೊಲದಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ಹೊಲದಲ್ಲಿ ಕಸ ಹೆಚ್ಚಾಗಿ ಬೆಳೆಯುತ್ತದೆ. ಇದನ್ನ ತೆಗೆಯಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸಿಕ್ಕರೂ ಕೂಲಿ ಕಾರ್ಮಿಕರು ದುಬಾರಿ ಕೂಲಿಯನ್ನ ಕೇಳುತ್ತಿದ್ದಾರೆ. ಈಗಾಲೇ ಎಕರೆಗೆ ಮೂವತ್ತು ಸಾವಿರ ಖರ್ಚು ಮಾಡಿ ಬೆಳೆಯಲಾಗಿದೆ. ಪುನಃ ಬೆಳೆ ಉಳಿಸಿಕೊಂಡು ಬೆಳೆಯಲು ಕಳೆ ತೆಗೆದು ಹೆಚ್ಚು ರಸಗೊಬ್ಬರ ಹಾಕಬೇಕು. ಆದ್ರೆ ರಸಗೊಬ್ಬರ ಕೊರತೆಯಿದ್ದು ದುಬಾರಿಯಾಗಿರುವುದರಿಂದ ರೈತ ಬೆಳೆಯನ್ನೇ ಕಿತ್ತು ಹಾಕುತ್ತಿದ್ದಾನೆ.

     

    ರಾಯಚೂರು ತಾಲೂಕಿನ ಗೋನವಾರ ಗ್ರಾಮದ ರಾಮಪ್ಪ ಎನ್ನುವ ರೈತ ತನ್ನ ಮೂರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಬೆಳೆ ಕೈಗೆ ಬಂದರೂ ಮಳೆಯಿಂದಾಗಿ ಬಾಯಿಗೆ ಬರದ ತುತ್ತಾಗಿದೆ. ಬಿತ್ತಿದ್ದ ಬೆಳೆ ಫಲ ನೀಡಿದ್ದು, ಕಳೆದ ನಾಲ್ಕು ದಿನಗಳಿಂದ ಶೇಂಗಾ ಕಿತ್ತಲಾಗಿತ್ತು. ಆದ್ರೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕಿತ್ತಲಾಗಿರುವ ಶೇಂಗಾ ಬೆಳೆಗೆ ಮೊಳಕೆ ಬಂದು ಬೆಳೆ ಹಾನಿಯಾಗುತ್ತಿದೆ. ಇದರಿಂದ ರೈತನಿಗೆ ನಷ್ಟ ಸಂಭವಿಸಿದೆ. ಹೀಗಾಗಿ ಸರ್ಕಾರಕ್ಕೆ ಪರಿಹಾರ ನೀಡುವಂತೆ ರೈತ ಒತ್ತಾಯಿಸಿದ್ದಾನೆ.

  • ಮಳೆಯ ತವರು ಕೊಟ್ಟಿಗೆಹಾರದಲ್ಲಿ ಕಾಮನಬಿಲ್ಲು- ಸ್ಥಳೀಯರಲ್ಲಿ ಆಶ್ಚರ್ಯ

    ಮಳೆಯ ತವರು ಕೊಟ್ಟಿಗೆಹಾರದಲ್ಲಿ ಕಾಮನಬಿಲ್ಲು- ಸ್ಥಳೀಯರಲ್ಲಿ ಆಶ್ಚರ್ಯ

    ಚಿಕ್ಕಮಗಳೂರು: ಜಿಲ್ಲೆಯ ಮಳೆಯ ತವರೂರಾದ ಕೊಟ್ಟಿಗೆಹಾರ ಗ್ರಾಮದಲ್ಲಿ ಕಾಮನಬಿಲ್ಲು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸೇರಿದಂತೆ ಸುತ್ತಮುತ್ತ ಹಳ್ಳಿಗಳ ಜನ ಜೂನ್ 10-15ರಿಂದ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಸೂರ್ಯನನ್ನ ನೋಡೋದೇ ತೀರಾ ವಿರಳ. ಕಾರಣ ಇಲ್ಲಿ ಜೂನ್ ಮೊದಲು ಅಥವಾ ಎರಡನೇ ವಾರದಲ್ಲಿ ಮಳೆ ಆರಂಭವಾದರೆ ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಒಂದೇ ಸಮನೆ ಸುರಿಯುತ್ತಿರುತ್ತದೆ. ಜನ ಮನೆಯಿಂದ ಹೊರಬರೋದಕ್ಕೂ ಹಿಂದೇಟು ಹಾಕುತ್ತಾರೆ. ಸೂರ್ಯನನ್ನ ನೋಡೋದು ತೀರಾ ವಿರಳ.

    ಜುಲೈ ಎರಡನೇ ವಾರ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವಂತೆ ಭಾಸವಾಗ್ತಿರೋ ಮನಮೋಹಕ ಕಾಮನಬಿಲ್ಲು ಸ್ಥಲೀಯರಲ್ಲಿ ಆಶ್ಚರ್ಯದ ಜೊತೆ ಕುತೂಹಲ ಮೂಡಿಸಿದೆ. ಸಂಜೆ 6.30ರ ವೇಳೆಗೆ ಗೋಚರವಾದ ಈ ಕಾಮನಬಿಲ್ಲಿಗೆ ಸ್ಥಳೀಯರು ಫಿದಾ ಆಗೋದ್ರ ಜೊತೆ ಕಾಮನಬಿಲ್ಲನ್ನ ಕಂಡು ಮೂಕವಿಸ್ಮಿತರಾಗಿದ್ದಾರೆ. ಅಷ್ಟೆ ಅಲ್ಲದೆ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರೋ ಕಾಮನಬಿಲ್ಲು ಹೇಮಾವತಿ ನದಿಯ ಒಡಲಿನ ಮೇಲೆ ಬೆಳಕು ಚೆಲ್ಲಿದಂತೆ ಕಾಣುತ್ತಿದ್ದನ್ನು ಕಂಡು ಸ್ಥಳೀಯರು ಮತ್ತಷ್ಟು ಪುಳಕಿತರಾಗಿದ್ದಾರೆ.

    ಕಳೆದೊಂದು ವಾರದ ಹಿಂದೆ ಇದೇ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿ ಘಾಟ್ ಸುತ್ತಮುತ್ತ ಸುರಿದ ಭಾರೀ ಮಳೆಗೆ ಜನ ಆತಂಕಕ್ಕೀಡಾಗಿದ್ದರು. ಮಳೆ ಆರಂಭವಾಯಿತು. ಕಳೆದ ವರ್ಷ ಬದುಕನ್ನೇ ನುಂಗಿ ಹಾಕಿದ್ದ ವರುಣದೇವ ಈ ವರ್ಷ ಇನ್ನೇನು ಅನಾಹುತ ಸೃಷ್ಠಿಸಿ ಅವಾಂತರ ಮಾಡುತ್ತಾನೋ ಎಂದು ಸ್ಥಳೀಯರು ಕಂಗಾಲಾಗಿದ್ದರು. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸಂಪೂರ್ಣ ಕ್ಷೀಣಿಸಿದೆ.

    ಮಳೆ ಇಲ್ಲದಿದ್ದರೂ ಸದಾ ತಣ್ಣನೆಯ ಗಾಳಿ ಜೊತೆ ಯಾವಾಗಲು ಮೋಡ ಕವಿದ ವಾತಾವರಣವಿರೋ ಕೊಟ್ಟಿಗೆಹಾರದಲ್ಲಿ ಜುಲೈ ಎರಡನೇ ವಾರದಲ್ಲಿ ಬಿಸಿಲಿನ ಮಧ್ಯೆ ಕಾಮನಬಿಲ್ಲನ್ನು ಕಂಡು ಜನ ಪುಳಕಿತರಾಗಿದ್ದಾರೆ. ಜೊತೆಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಹೋದಂತೆ ಭಾಸವಾಗ್ತಿರೋ ಕಾಮನಬಿಲ್ಲನ್ನ ಕಂಡ ಸ್ಥಳೀಯರು ಸಂತಸ ಪಟ್ಟಿದ್ದಾರೆ.

  • ಮಳೆಗಾಲದ ಶೀತ ಜ್ವರ ಅಂತ ನಿರ್ಲಕ್ಷ್ಯ ಬೇಡ: ಡಿಸಿ ಕಿವಿಮಾತು

    ಮಳೆಗಾಲದ ಶೀತ ಜ್ವರ ಅಂತ ನಿರ್ಲಕ್ಷ್ಯ ಬೇಡ: ಡಿಸಿ ಕಿವಿಮಾತು

    – ಕೊರೊನಾ ವಾರಿಯರ್ಸ್‌ಗೆ ಸದ್ಯಕ್ಕೆ ಸನ್ಮಾನ ಬೇಡ

    ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ವಿಪರೀತವಾಗಿ ಸುರಿಯುತ್ತಿದೆ. ಮಳೆಗಾಲದಲ್ಲಿ ಶೀತ, ನೆಗಡಿ, ಜ್ವರ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಜನತೆ ಯಾರೂ ಮಾಮೂಲಿ ಶೀತ ಜ್ವರ ಎಂದು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಕಿವಿಮಾತು ಹೇಳಿದ್ದಾರೆ.

    ಶೀತ ಜ್ವರದ ಲಕ್ಷಣ ಕಂಡು ಬಂದಾಗ ಹತ್ತಿರದ ಫೀವರ್ ಕ್ಲಿನಿಕ್‌ಗೆ ಭೇಟಿ ಕೊಡಬೇಕು. ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಆರೋಗ್ಯದಲ್ಲಿ ಬದಲಾವಣೆಯಾದರೆ ಎಲ್ಲ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದರು.

    ಕೊರೊನಾ ವಿಚಾರದಲ್ಲಿ ಯಾರಿಗೂ ಆತಂಕ, ಭಯ ಬೇಡ. ಜಿಲ್ಲಾಡಳಿತ ಸೂಕ್ತ ಚಿಕಿತ್ಸೆಯನ್ನು ರೋಗಿಗಳಿಗೆ ಕೊಡಿಸುತ್ತಿದೆ ಎಂದು ಜಿ.ಜಗದೀಶ್ ಜನರಿಗೆ ಭರವಸೆ ನೀಡಿದರು.

    ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮಗಳು ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿದೆ. ಸನ್ಮಾನದ ಹೆಸರಿನಲ್ಲಿ ಆಯೋಜಕರು ಸಾಮಾಜಿಕ ಅಂತರ, ಮತ್ತಿತರ ಸರ್ಕಾರದ ನಿರ್ದೇಶನಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಯಾವುದೇ ಕಾರ್ಯಕ್ರಮಗಳು ಬೇಡ. ಕೊರೊನಾ ಹತೋಟಿಗೆ ಬಂದ ನಂತರ ಸಂಭ್ರಮಿಸಲು ಸಾಕಷ್ಟು ಕಾಲಾವಕಾಶ ಇದೆ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

  • ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

    ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

    ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಆಗ್ತಿದೆ. ಉಡುಪಿ ಜಿಲ್ಲೆಯಲ್ಲಿ ಧಾರಕಾರ ಮಳೆಯಾಗುತ್ತಿದೆ. ಕಾಲುವೆಗಳೆಲ್ಲಾ ತುಂಬಿ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿದೆ. ಕಳೆದ ರಾತ್ರಿ ಕಾರ್ಕಳ, ಕುಂದಾಪುರ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು ನದಿಗಳು ತುಂಬಲು ಶುರುವಾಗಿವೆ.

    ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಳೆ ಮುಂದುವರಿದಿದ್ದು, ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಈ ಮಧ್ಯೆ ಚಾರ್ಮಾಡಿ ಘಾಟ್‍ನಲ್ಲಿ ವಾಹನ ನಿಲುಗಡೆ ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅಪಾಯಕಾರಿ ಸ್ಥಳಗಳಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ನಾಳೆಯವರೆಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ಮಂಗಳೂರು ನಗರದಲ್ಲೂ ಭಾರೀ ಮಳೆಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಮಳೆಗೆ ಹೈರಾಣಾಗಿದ್ದಾರೆ. ಭಾರೀ ಮಳೆಯಿಂದ ರಸ್ತೆ ತುಂಬೆಲ್ಲಾ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು. ಪಶ್ಚಿಮ ಘಟ್ಟ ಪ್ರದೇಶದಲ್ಲೂ ಭಾರೀ ಮಳೆ ಸುರಿಯುತ್ತಿರುವ ಕಾರಣ, ನೇತ್ರಾವತಿ, ಕುಮಾರಾಧಾರಾ, ಮಂಗಳೂರಿನ ಫಲ್ಗುಣಿ ನದಿಯಲ್ಲೂ ನೀರಿನ ಹರಿವು ಜಾಸ್ತಿಯಾಗಿದೆ. ಇನ್ನೂ ಎರಡು ದಿನಗಳ ಭಾರೀ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಜನರಿಗೆ ಸೂಚಿಸಿದೆ.

    ಗದಗ ಜಿಲ್ಲೆಯ ಹಲವೆಡೆ ವರುಣದೇವ ಅಬ್ಬರಿಸಿದ್ದು, ಒಂದು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇತ್ತ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಶುಕ್ರವಾರ ಸಂಜೆ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿತ್ತು. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರೆದಿದೆ. ಮುಂಬೈನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಮುಂಬೈ, ಥಾಣೆ ರತ್ನಗಿರಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ.

    https://www.facebook.com/publictv/videos/297544111602164/

  • ಉಡುಪಿಯಲ್ಲಿ ಭಾರೀ ಮಳೆ- ಮನೆಗಳಿಗೆ ನುಗ್ಗಿದ ಇಂದ್ರಾಣಿ ನದಿ ನೀರು

    ಉಡುಪಿಯಲ್ಲಿ ಭಾರೀ ಮಳೆ- ಮನೆಗಳಿಗೆ ನುಗ್ಗಿದ ಇಂದ್ರಾಣಿ ನದಿ ನೀರು

    ಉಡುಪಿ: ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ವಿಸ್ತರಣೆ ಮಾಡಿದೆ. ಇಂದು ವಿಪರೀತ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗಿದೆ.

    ಉಡುಪಿ ನಗರದಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಬೈಲಕೆರೆ, ಕಲ್ಸಂಕ, ಬನ್ನಂಜೆ, ನಿಟ್ಟೂರು ವ್ಯಾಪ್ತಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ನಗರದ ಒಳಗೆ ಹಾದು ಹೋಗುವ ಇಂದ್ರಾಣಿ ನದಿ ಮೈತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಮನೆಗಳಿಗೆ ನೀರು ನುಗ್ಗಿದೆ.

    ಸ್ಥಳೀಯ ನಿವಾಸಿ, ಬೇಬಿ ಪುತ್ರನ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ನದಿ ನೀರು ಮನೆಗೆ ನುಗ್ಗುತ್ತದೆ. ಸುಮಾರು ಒಂದು ವಾರಗಳ ಕಾಲ ನೆರೆ ಇರುತ್ತದೆ. ಈ ಬಗ್ಗೆ ನಗರಸಭೆಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಲುವೆಯ ಹೂಳನ್ನು ಎತ್ತಬೇಕು, ಅಡ್ಡಲಾಗಿ ಕಟ್ಟಿದ ತಡೆಗೋಡೆಯನ್ನು ಇನ್ನೂ ಮೇಲಕ್ಕೆ ಏರಿಸಬೇಕು ಎಂದು ಒತ್ತಾಯಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ 66ರ ಆಸುಪಾಸಿನಲ್ಲಿ ಕೂಡ ಕೃತಕ ನೆರೆ ಸೃಷ್ಟಿಯಾಗಿದೆ. ರಸ್ತೆ ಕಾಮಗಾರಿ ಒಳಚರಂಡಿ ಸೇತುವೆ ಕಾಮಗಾರಿ ಬಾಕಿ ಇರುವಲ್ಲಿ ಸುತ್ತಮುತ್ತಲ ಗದ್ದೆಗಳಿಗೆ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಸಮುದ್ರ ಮತ್ತು ನದಿ ಪಾತ್ರದ ಜನ ಜಾಗರೂಕರಾಗಿರಬೇಕು ಎಂದು ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.

  • ಉಡುಪಿಯಲ್ಲಿ ಮುಂಗಾರು ತುಸು ಚುರುಕು- ಜಿಲ್ಲೆಯಲ್ಲಿ 27 ಮಿಲಿ ಮೀಟರ್ ಸರಾಸರಿ ಮಳೆ

    ಉಡುಪಿಯಲ್ಲಿ ಮುಂಗಾರು ತುಸು ಚುರುಕು- ಜಿಲ್ಲೆಯಲ್ಲಿ 27 ಮಿಲಿ ಮೀಟರ್ ಸರಾಸರಿ ಮಳೆ

    ಉಡುಪಿ: ಜಿಲ್ಲೆಯಾದ್ಯಂತ ಇಂದು ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 27 ಮಿಲಿ ಮೀಟರ್ ಮಳೆ ಬಿದ್ದಿದೆ. ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಕೊಂಚ ಚುರುಕು ಪಡೆದಿದೆ.

    ಸಮುದ್ರ ತೀರದ ತಾಲೂಕುಗಳಲ್ಲಿ ಕೊಂಚ ಹೆಚ್ಚು ಮಳೆ ಸುರಿದಿದೆ. ಉಡುಪಿ ತಾಲೂಕಿನಲ್ಲಿ 32 ಮಿಲಿಮೀಟರ್ ಮಳೆಯಾಗಿದೆ. ಕುಂದಾಪುರ ತಾಲ್ಲೂಕಿನಲ್ಲಿ 34 ಮಿಲಿ ಮೀಟರ್ ಮಳೆ ಬಿದ್ದಿದೆ. ಕಾರ್ಕಳ ತಾಲ್ಲೂಕಿನಲ್ಲಿ 14 ಮಿಲಿ ಮೀಟರ್ ಮಳೆ ಸುರಿಯುವ ಮೂಲಕ ಅತಿ ಕಡಿಮೆ ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಇಂದು 27 ಮಿಲಿ ಮೀಟರ್ ಮಳೆ ಸರಾಸರಿ ದಾಖಲಾಗಿದೆ.

    ಮೂರು ಮಳೆ ತಾಲೂಕಿನಲ್ಲಿ ಯಾವುದೇ ಅನಾಹುತಗಳಿಲ್ಲ ಎಂದು ಉಡುಪಿ ಜಿಲ್ಲಾ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜಿಲ್ಲೆಯಾದ್ಯಂತ ಮೂರು ದಿನ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಕೂಡ ಎಲ್ಲೋ ಅಲರ್ಟ್ ಇದ್ದರೂ ಧಾರಾಕಾರ ಮಳೆ ಬಿದ್ದಿಲ್ಲ. ಎಲ್ಲೋ ಅಲರ್ಟ್ ಪ್ರಕಾರ ಸುಮಾರು 60 ರಿಂದ 70 ಮಿಲಿಮೀಟರ್ ನಷ್ಟು ಮಳೆಯಾಗಬೇಕು. ಜಿಲ್ಲೆಯಲ್ಲಿ ಕೋಡಿ ಗ್ರಾಮದಲ್ಲಿ 81 ಮಿಲಿ ಮೀಟರ್ ಮಳೆ ದಾಖಲಾಗಿದೆ.

    ಬ್ರಹ್ಮಾವರ ತಾಲೂಕು ಸಾಸ್ತಾನದ ಕೃಷಿಕ ಮೈಕಲ್ ರೋಡ್ರಿಗಸ್ ಮಾತನಾಡಿ, ಈ ವರ್ಷ ಮಳೆ ಸಮ ಪ್ರಮಾಣದಲ್ಲಿ ಬರುತ್ತಿದೆ. ಬೇಸಾಯ ಮತ್ತು ಕೃಷಿಗೆ ಮುಂಗಾರು ಪೂರಕವಾಗಿದೆ. ಬಿತ್ತನೆ, ನಾಟಿ ಕಾರ್ಯ ನಡೆಯುತ್ತಿದ್ದು ಇದೇ ವಾತಾವರಣ ಮುಂದುವರಿದರೆ ಕೃಷಿ ಕೈ ಹಿಡಿಯಲಿದೆ ಎಂದರು.

  • ಮುಂಗಾರು ಆರ್ಭಟ- ನಾಳೆಯಿಂದ 9 ದಿನ ಭಾರೀ ಮಳೆ, ಎಚ್ಚರ

    ಮುಂಗಾರು ಆರ್ಭಟ- ನಾಳೆಯಿಂದ 9 ದಿನ ಭಾರೀ ಮಳೆ, ಎಚ್ಚರ

    ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮುಂಗಾರು ಚುರುಕು ಪಡೆದಿದೆ. ನಾಳೆಯಿಂದ 9 ದಿನಗಳ ಕಾಲ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಸಿಡಿಲು ಸಹಿತ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಯಾದಗಿರಿಯ ಶಹಾಪುರದಲ್ಲಿ ಭಾರೀ ಮಳೆ ಆಗಿದ್ದು, 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಎರಡು ಕಾರುಗಳು ಜಲಾವೃತಗೊಂಡಿವೆ. ಬೀದರ್ – ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಮೇಲೂ ಸಹ ಮಳೆ ನೀರು ನುಗ್ಗಿದ್ದು, ರಸ್ತೆ ಸಹ ಜಲಾವೃತಗೊಂಡಿದೆ. ಜಿಲ್ಲೆಯ ಪ್ರಮುಖ, ಕೆರೆ,ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

    ರಾಯಚೂರಲ್ಲಿ ತಡರಾತ್ರಿ ಮಳೆ ಅವಾಂತರ ಸೃಷ್ಟಿಸಿದೆ. ಇಡಪನೂರಿನ ಹಳ್ಳದ ರಸ್ತೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ. ಬೈಕ್ ಹೊರತುಪಡಿಸಿ ಉಳಿದ ವಾಹನಗಳ ಸಂಚಾರ ಬಂದ್ ಆಗಿದೆ. ಕಲಬುರಗಿಯ ಜಂಬಗಾ ಬಿ ಗ್ರಾಮದ ಮಳೆ ಹೊಡೆತಕ್ಕೆ ಸೇತುವೆಯೊಂದು ಕೊಚ್ಚಿ ಹೋಗಿದೆ. ರಸ್ತೆ ಒಡೆದು ಜಮೀನು ಗಳಿಗೆ ನುಗ್ಗಿದ ಮಳೆ ನೀರು ನುಗ್ಗಿದೆ. ಜೆ ಆರ್ ನಗರದಲ್ಲಿ ಬಡಾವಣೆ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ ಜನಪರದಾಡಿದ್ದಾರೆ.

    ಕಾರವಾರ, ಉಡುಪಿ, ಮಂಗಳೂರು, ಮೈಸೂರು, ಚಾಮರಾಜನಗರ, ಕೊಡಗು, ದಾವಣಗೆರೆ, ಬೀದರ್ ಜಿಲ್ಲೆಯ ಹಲವಡೆ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

  • ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಬಿಟ್ಟು ಬಿಡದೆ ಸುರಿಯುತ್ತಿದೆ ಮಳೆ

    ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಬಿಟ್ಟು ಬಿಡದೆ ಸುರಿಯುತ್ತಿದೆ ಮಳೆ

    – ತಗ್ಗು ಪ್ರದೇಶದಲ್ಲಿರೋ ಮನೆಗಳಿಗೆ ನುಗ್ಗಿದ ನೀರು

    ಬೀದರ್: ಕಲಬುರಗಿ, ದಕ್ಷಿಣ ಕನ್ನಡ ಮತ್ತು ಗಡಿ ಜಿಲ್ಲೆ ಬೀದರ್ ಸೇರಿದಂತೆ ಅನೇಕ ಕಡೆ ಬೆಳಗ್ಗೆಯಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

    ಶನಿವಾರ ತಡರಾತ್ರಿ ಕೂಡ ಜಿಲ್ಲೆಯ ಹಲವು ಕಡೆ ಮಳೆಯಾಗಿದ್ದು, ಇಂದು ಜಿಲ್ಲೆಯಲ್ಲಿ ವರುಣದೇವ ಅಬ್ಬರಿಸುವ ಸಾಧ್ಯತೆ ಇದೆ. ರೈತರು ಬಿತ್ತನೆಗಾಗಿ ಬೀಜಗಳನ್ನು ಸಿದ್ಧ ಮಾಡಿಕೊಂಡು ಮಳೆಯಾಗಿ ಕಾದುಕುಳಿತ್ತಿದ್ದರು. ಹೀಗಾಗಿ ಇಂದು ವರುಣ ದೇವ ಕೃಪೆ ತೋರಿದ್ದಾನೆ.

    ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮಳೆ ಸುರಿಯುತ್ತಿರುವ ಕಾರಣ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಪ್ರಾರಂಭವಾದರು ಮಳೆಯಾಗದ ಕಾರಣ ರೈತರು ಆತಂಕಗೊಂಡಿದ್ದರು. ಆದರೆ ಬೆಳಗ್ಗೆಯಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ನೋಡಿ ಕೃಷಿ ಚಟುವಟಿಕೆ ಪ್ರಾರಂಭಿಸುವ ಮೂಲಕ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದಾರೆ.

    ರಾಜ್ಯದ ಕರಾವಳಿಯ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಮುಂಜಾನೆಯಿಂದ ಮಳೆ ಆರಂಭಗೊಂಡಿದೆ. ಕರಾವಳಿಗೆ ಮುಂಗಾರು ಮಳೆ ಪ್ರವೇಶವಾಗಿ ಇಪ್ಪತ್ತು ದಿನ ಕಳೆದಿದ್ದರೂ ಸರಿಯಾಗಿ ಮಳೆಯಾಗಿಲ್ಲ. ಕಳೆದ ಕೆಲದಿನಗಳಿಂದ ವಿಶ್ರಾಂತಿಯಲ್ಲಿದ್ದ ಮಳೆ ಇಂದು ಮುಂಜಾನೆಯಿಂದ ಸುರಿಯಲಾರಂಭಿಸಿದೆ. ಇಂದು ದಿನಪೂರ್ತಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಇನ್ನುಳಿದಂತೆ ಜಿಲ್ಲಾದ್ಯಂತ ತುಂತುರು ಮಳೆಯಾಗುತ್ತಿದೆ.

    ಕಲಬುರಗಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಹಲವೆಡೆ ಉತ್ತಮ ಮಳೆಯಾಗಿದೆ. ನಗರದ ಹಲವೆಡೆ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿನ ದಿನಸಿ ವಸ್ತುಗಳು ಹಾಗೂ ಎಲೆಕ್ಟ್ರಿಕಲ್ ವಸ್ತುಗಳು ನಾಶವಾಗಿವೆ. ಮಳೆಗಾಲ ಆರಂಭದಲ್ಲೇ ಸಮಸ್ಯೆಗಳು ಶುರುವಾಗಿವೆ. ಈಗಲಾದರೂ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಚರಂಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಕೊಡಗಿನಲ್ಲಿ ಮಳೆಗಾಲ ಎದುರಿಸಲು ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ: ಬಿ.ಸೋಮಶೇಖರ್

    ಕೊಡಗಿನಲ್ಲಿ ಮಳೆಗಾಲ ಎದುರಿಸಲು ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ: ಬಿ.ಸೋಮಶೇಖರ್

    ಮಡಿಕೇರಿ: ಕೊಡಗಿನ ಮಳೆಗಾಲದಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗಳನ್ನು ಎದುರಿಸಲು ಈಗಾಗಲೇ ಚೆಸ್ಕಾಂ ಇಲಾಖೆ ಸನ್ನದ್ಧವಾಗಿದೆ ಎಂದು ಚೆಸ್ಕಾಂ ಕಾರ್ಯನಿರ್ವಹಕ ಎಂಜಿನಿಯರ್.ಬಿ.ಸೋಮಶೇಖರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಗಾಲದಲ್ಲಿ ವಿಪರೀತ ಗಾಳಿ-ಮಳೆ ಆಗುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಎದುರಾಗುವ ವಿದ್ಯುತ್ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಇಲಾಖೆ ಸನ್ನದ್ಧವಾಗಿದೆ. ವಿದ್ಯುತ್ ಇಲಾಖೆ ಪ್ರತೀ ಮಳೆಗಾಲವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. 2018ರಿಂದ ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದರು.

    ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಸಿಬ್ಬಂದಿ ರೆಡಿಯಾಗಿದ್ದಾರೆ. ಈಗಾಗಲೇ ನಿಗದಿಪಡಿಸಿರುವ ಸ್ಥಳಗಳಲ್ಲಿ ವಿದ್ಯುತ್ ಕಂಬಗಳನ್ನು ಸಂಗ್ರಹಿಸಿದ್ದೇವೆ. ಮಳೆಗಾಲದಲ್ಲಿ ಅಧಿಕ ಕೆಲಸ ಇರುವುದರಿಂದ ಅಗತ್ಯವಿರುವ ಸಿಬ್ಬಂದಿಯ ಜೊತೆಗೆ 150 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲು ಟೆಂಡರ್ ಕರೆಯಲಾಗಿದೆ. ಸಾಮಾನ್ಯವಾಗಿ 5 ವಾಹನಗಳನ್ನು ಬಳಸುತ್ತಿದ್ದ ಸಿಬ್ಬಂದಿ ಈ ಸಂದರ್ಭದಲ್ಲಿ 20 ವಾಹನಗಳನ್ನು ಬಳಸಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಸಾಮಾನ್ಯವಾಗಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳದ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ, ಸೂರ್ಲಬ್ಬಿ, ಮಾದಾಪುರ, ಮಡಿಕೇರಿ ತಾಲೂಕಿನ ಭಾಗಮಂಡಲ ಹಾಗೂ ಪಾಲಿಬೆಟ್ಟ ಭಾಗಗಳಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡುಬರುತ್ತವೆ. ಟ್ರಾನ್ಸ್ ಫಾರ್ಮರ್ನಿಂದ ವಿದ್ಯುತ್ ಲೈನ್‍ಗಳು 50 ರಿಂದ 60 ಕಿ.ಮೀಟರ್ ದೂರಕ್ಕೆ ಸಂಪರ್ಕ ಕಲ್ಪಿಸಿರುವುದರಿಂದ ಸಮಸ್ಯೆಗಳು ಎದುರಾಗುತ್ತವೆ ಎಂದರು.