Tag: monsoon

  • ರಾಜ್ಯದಲ್ಲಿ ಮುಂದುವರೆದ ಮುಂಗಾರು ಮಳೆ-ಸಿಡಿಲು ತಾಗಿ ಓರ್ವ ಸಾವು

    ರಾಜ್ಯದಲ್ಲಿ ಮುಂದುವರೆದ ಮುಂಗಾರು ಮಳೆ-ಸಿಡಿಲು ತಾಗಿ ಓರ್ವ ಸಾವು

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗ್ತಿದೆ. ಮೈಸೂರಿನಲ್ಲಿ ಮಂಗಳವಾರ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.

    ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಕತ್ತಲಲ್ಲಿ ಕಳೆದರು. ಇನ್ನು, ಚಾಮುಂಡಿಬೆಟ್ಟದ ಮೆಟ್ಟಲುಗಳ ಮೇಲೆ ಹರಿಯುತ್ತಿದ್ದ ನೀರು ಮಿನಿ ಜಲಪಾತದಂತೆ ಕಂಗೊಳಿಸುತ್ತಿತ್ತು. ಮಳೆಯಲ್ಲಿಯೂ ಪ್ರವಾಸಿಗರನ್ನು ಪ್ರಕೃತಿ ಸೌಂದರ್ಯದತ್ತ ಆಕರ್ಷಿಸಿತು. ಇತ್ತ ಹಾಸನದ ಅರಸೀಕೆರೆಯಲ್ಲಿ ಸಿಡಿಲು ಬಡಿದು 46 ವರ್ಷದ ಹುಚ್ಚಪ್ಪ ಎಂಬವರು ಮೃತಪಟ್ಟಿದ್ದಾರೆ. ಇತ್ತ ಬೆಳಗಾವಿಯಲ್ಲಿ ಸಂಜೆ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿತ್ತು.

    ಕೆರೆ ಹಾವನ್ನು ಅರ್ಧ ನುಂಗಿ ನದಿದಡದಲ್ಲೇ ಬಿದ್ದಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನ ರಕ್ಷಿಸಿ ಕಾಡಿಗೆ ಬಿಟ್ಟಿರೋ ಘಟನೆ ಚಿಕ್ಕಮಗಳೂರಿನ ಮಹಲ್‍ಗೋಡು ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯ ಪಡೆದು ಕಾಳಿಂಗನನ್ನ ಉರಗ ತಜ್ಞ ಹರೀಂದ್ರ ಕಾಳಿಂಗನನ್ನ ಕಾಡಿಗೆ ಬಿಟ್ಟಿದ್ದಾರೆ. ಕಳೆದ 2 ತಿಂಗಳಲ್ಲಿ ಕಾಫಿನಾಡಿನ ವಿವಿಧ ಭಾಗದಲ್ಲಿ 10 ಕ್ಕೂ ಹೆಚ್ಚು ಬೃಹತ್ ಕಾಳಿಂಗ ಸರ್ಪಗಳನ್ನ ಸ್ಥಳಿಯ ಉರಗ ತಜ್ಞರು ಅರಣ್ಯ ಇಲಾಖೆಯ ನೇತೃತ್ವದಲ್ಲಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

  • ರಾಜ್ಯಾದ್ಯಂತ ಮಳೆಯ ಅಬ್ಬರ-ಹಳ್ಳ, ಕೊಳ್ಳಗಳು ಭರ್ತಿ-ಇತ್ತ ಮಳೆಯಿಂದ ಜನಜೀವನ ಅಸ್ತವ್ಯಸ್ಥ

    ರಾಜ್ಯಾದ್ಯಂತ ಮಳೆಯ ಅಬ್ಬರ-ಹಳ್ಳ, ಕೊಳ್ಳಗಳು ಭರ್ತಿ-ಇತ್ತ ಮಳೆಯಿಂದ ಜನಜೀವನ ಅಸ್ತವ್ಯಸ್ಥ

    ಬೆಂಗಳೂರು: ಈ ಬಾರಿ ಅವಧಿಗೂ ಮುನ್ನವೆ ಮಳೆ ಆರಂಭವಾಗಿದ್ದು, ಹಳ್ಳ ಕೊಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಎಡೆಬಿಡದೇ ಮಳೆಯಾಗುತ್ತಿದೆ. ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಯಾದಗಿರಿ, ರಾಯಚೂರು, ಸೇರಿದಂತೆ ಹಲವೆಡೆ ಮಳೆಯಾಗುತ್ತಿರುವದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ.

    ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಬೆಂಗಳೂರಿನ ಮೆಜೆಸ್ಟಿಕ್, ವಿಧಾನಸೌಧ, ಕೆಆರ್ ಮಾರ್ಕೆಟ್, ಚಿಕ್ಕಪೇಟೆ, ಕಾರ್ಪೋರೇಷನ್, ಶಿವಾಜಿನಗರ, ಎಮ್ ಜಿ ರೋಡ್, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.

    ಬಳ್ಳಾರಿ: ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ನಗರದ ದುರ್ಗಮ್ಮ ದೇವಾಲಯದ ಬಳಿಯ ರೈಲ್ವೆ ಅಂಡರ್ ಪಾಸ್ ನಲ್ಲಿ ಸಿಲುಕಿದ ಸಾರಿಗೆ ಬಸ್ ಸಿಲುಕಿಕೊಂಡಿತ್ತು. ಮಳೆ ಹೆಚ್ಚಾದ ಕಾರಣ ಅಂಡರ್ ಪಾಸ್‍ನಲ್ಲಿಯ ನೀರಿನಲ್ಲಿ ಬಸ್ ಸಿಲುಕಿಕೊಂಡಿದ್ದರಿಂದ ಡ್ರೈವರ್ ಸೇರಿದಂತೆ ಎಲ್ಲರೂ ಪ್ರಯಾಣಿಕರು ಇಳಿದು ಹೋಗಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಸ್‍ನ್ನು ಹೊರ ತೆಗೆದಿದ್ದಾರೆ.

    ಕೊಪ್ಪಳ: ಜಿಲ್ಲೆಯಾದ್ಯಂತ ಇಂದು ಸಂಜೆ ಉತ್ತಮ ಮಳೆಯಾಗಿದ್ದು, ಗಂಗಾವತಿಯಲ್ಲಿ ವರುಣ ಅವಾಂತರ ಸೃಷ್ಠಿಸಿದ್ದಾನೆ. ಜಿಲ್ಲೆಯ ಗಂಗಾವತಿ ತಾಲೂಕ ಆಸ್ಪತ್ರೆಗೆ ನೀರು ನುಗ್ಗಿದೆ. ಬಾಣಂತಿಯರ ಕೊಠಡಿ, ಎಕ್ಸ್ ರೇ ಕೊಠಡಿಗೆ ನೀರು ನುಗ್ಗಿದ್ದರಿಂದ ಕೆಲ ಹೊತ್ತು ಬಾಣಂತಿಯರು ಮತ್ತವರ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದರು. ಆಸ್ಪತ್ರೆ ಸುತ್ತಲಿನ ಚರಂಡಿಗಳು ಬ್ಲಾಕ್ ಆಗಿದ್ದು, ನೀರು ಸರಾಗವಾಗಿ ಹರಿದಿಲ್ಲ. ಇದರಿಂದ ಆಸ್ಪತ್ರೆ ಕಟ್ಟಡದ ಮೇಲ್ಚಾವಣಿ ಮೇಲೆ ಬಿದ್ದ ಮಳೆ ನೀರು, ಚರಂಡಿ ಸೇರುವ ಬದಲಿಗೆ ಆಸ್ಪತ್ರೆಗೆ ನುಗ್ಗಿದೆ. ಇದರಿಂದ ಆಸ್ಪತ್ರೆ ಆಡಳಿತದ ವಿರುದ್ದ ರೋಗಿಗಳ ಸಂಭಂದಿಕರ ಆಕ್ರೋಶ ವ್ಯಕ್ತಪಡಿಸಿದ್ರು.

    ನೆಲಮಂಗಲ: ಸತತ ಅರ್ಧಗಂಟೆಯ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮಲ್ಲಾಪುರ ಸಂಪೂರ್ಣ ಜಲಾವೃತವಾಗಿದೆ. ರಾಜ ಕಾಲುವೆ ಒತ್ತುವರಿಯಿಂದ ಮನೆಗಳಿಗೆ ನೀರು ನುಗ್ಗಿ ಭಾರಿ ಅನಾಹುತ ಉಂಟಾಗಿದೆ. ಇನ್ನೂ ಮಳೆ ನೀರು ಮನೆಗಳಿಗೆ ನುಗ್ಗಿರುವದರಿಂದ ಹಳೆಯ ಮನೆಗಳ ಗೋಡೆಗಳು ಬಿರುಕು ಬಿಟ್ಟಿ ಕುಸಿಯುವಂತಹ ಸ್ಥಿತಿ ಎದುರಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ಇತ್ತ ಖಾಸಗಿ ಶಾಲೆ ಮಳೆಯ ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ.

    ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ವರ್ಷದಿಂದ ಭೀಕರ ಬರಕ್ಕೆ ತುತ್ತಾಗಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ವರುಣನ ಅಬ್ಬರ ಜೋರಾಗಿದೆ. ತಾಲೂಕಿನ ಯಗಟಿ ಹೋಬಳಿಯ ಸುತ್ತಲೂ ವರುಣ ಆರ್ಭಟಕ್ಕೆ ರಸ್ತೆ ಮುಳುಗಡೆಯಾಗಿದ್ದು, ತೆಂಗಿನ ತೋಟಗಳಲ್ಲಿ ಅಡಿಯಷ್ಟು ನೀರು ನಿಂತಿದ್ದು, ಮಳೆಯ ಅಬ್ಬರ ಜೋರಾಗಿದ್ದರ ಪರಿಣಾಮ ಯಗಟಿ ಸಮೀಪದ ಕಲ್ಲಾಪುರ ಗ್ರಾಮ ನೀರಿನಿಂದ ತುಂಬಿದೆ. ಕಡೂರು ತಾಲೂಕಿನ ಸುತ್ತಮುತ್ತಲು ಉತ್ತಮ ಮಳೆಯಾಗಿದೆ. ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ಕಡೂರು-ಯಗಟಿ ಮಾರ್ಗ ನೀರಿನಿಂದ ಮುಚ್ಚಿ ಹೋಗಿದೆ. ಮಳೆ ನಿಂತ ಮೇಲೆ ಗ್ರಾಮಗಳಲ್ಲಿ ಮನೆಯ ಬದಿಯಲಿ ಹರಿಯುತ್ತಿರೋ ನೀರು ಜನರಲ್ಲಿ ಆತಂಕ ತಂದಿದೆ. ಎರಡು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ರೆ, ಕಳೆದ ಎರಡ್ಮೂರು ವರ್ಷಗಳಿಂದ ಹನಿ ನೀರಿಗೂ ಹಾಹಾಕಾರ ಅನುಭವಿಸ್ತಿದ್ದ ಕಡೂರಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ವಿಜಯಪುರ: ಜಿಲ್ಲೆಯಲ್ಲಿ ಮಳೆರಾಯಣ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಿರೇ ಮುರಾಳ ಗ್ರಾಮದಲ್ಲಿ ಶಿವಾಜಿ ಬಣಕಾರ ಎಂಬವರಿಗೆ ಸೇರಿದ ಎರಡು ಕುರಿಗಳು ಸಾವನ್ನಪ್ಪಿವೆ. ಇದೇ ವೇಳೆ ಸ್ಥಳದಲ್ಲಿದ್ದ ದಾವಲಸಾಬ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹಾವೇರಿ: ಹಾವೇರಿ, ಶಿಗ್ಗಾಂವಿ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಒಂದು ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೊಂದೆಡೆ ಧಾರಕಾರ ಮಳೆಗೆ ಭಾನುವಾರದ ಸಂತೆಗೆ ಬಂದ ಜನರು ಪರದಾಡಿದರು. ಮಳೆಯಿಂದ ಕೆಲಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ನಗರದ ಬೈಕ್ ಹಾಗೂ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಣವಾಗಿತ್ತು. ಮತ್ತೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಸವಣೂರು ತಾಲೂಕಿನ ಕುರಬರಮಲ್ಲೂರು ಗ್ರಾಮದ ಬಳಿ ಇರೋ ಬಾಜಿರಾಯನಹಳ್ಳ ತುಂಬಿ ಹರಿಯುತ್ತಿದೆ. ಹಳ್ಳ ತುಂಬಿ ರಸ್ತೆ ಮೇಲೆಲ್ಲ ನೀರು ಹರಿಯುತ್ತಿದೆ. ಇದ್ರಿಂದಾಗಿ ರಸ್ತೆ ಮೇಲೆ ಓಡಾಡಲು ಜನರಿಗೆ ಭೀತಿ ಎದುರಾಗಿದೆ. ಮಳೆಗಾಲದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಈ ರೀತಿಯ ಭೀತಿ ಎದುರಾಗ್ತಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳು ಹಳ್ಳದ ಬ್ರಿಡ್ಜ್ ಎತ್ತರಿಸಲು ಕ್ರಮ ಕೈಗೊಳ್ಳಬೇಕು ಅಂತಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಧಾರವಾಡ: ಶನಿವಾರ ರಾತ್ರಿಯಿಡಿ ಸುರಿದ ಮಳೆಯಿಂದ ಜಿಲ್ಲೆಯ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದು, ತುಪ್ಪರಿಹಳ್ಳ, ಬೆಣ್ಣಿಹಳ್ಳಗಳು ತುಂಬಿವೆ. ಎರಡು ಹಳ್ಳದ ದಂಡೆಯ ಗ್ರಾಮಗಳ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮೊರಬ, ಶಿರಕೋಳ, ಜಾವೂರ, ತುಪ್ಪದ ಕುರಹಟ್ಟಿ, ಹನಸಿ ಸೊಟಕನಾಳ ಮತ್ತಿತರರ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

  • ಎಚ್ಚರವಿರಲಿ: ಜೂನ್ 6, 7ರಂದು ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ..!

    ಎಚ್ಚರವಿರಲಿ: ಜೂನ್ 6, 7ರಂದು ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ..!

    ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೂನ್ 6 ಮತ್ತು 7ರಂದು ರಾಜ್ಯಾದ್ಯಂತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಯಾವಾಗ, ಎಲ್ಲಿ ಸುರಿಯುತ್ತೆ ಮಳೆ?
    ಜೂನ್ 6ರಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆ, ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

    ಜೂನ್ 7ರಂದು ಉತ್ತರ ಒಳನಾಡಿನ ಪ್ರದೇಶಗಳಾದ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಕರಾವಳಿ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ದಕ್ಷಿಣ ಒಳನಾಡಿನ ಪ್ರದೇಶಗಳಾದ ಬಳ್ಳಾರಿ, ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯ ಕೆಲಭಾಗಗಳು, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಕೊಡಗು, ಕೋಲಾರ, ಶಿವಮೊಗ್ಗ ಜಿಲ್ಲೆಯ ಹಲವೆಡೆ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

    ಚುರುಕಾಗಲಿದೆ ಮುಂಗಾರು: ಅರಬ್ಬೀ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಮುಂಗಾರು ಇನ್ನಷ್ಟು ಚುರುಕುಗೊಂಡಿದೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದೆ. ಸಂಜೆ ವೇಳೆ ಬೆಂಗಳೂರಿನಲ್ಲಿ ಬಿರುಸಿನ ಮಳೆ ಸುರಿಯುವ ಸಾಧ್ಯತೆಯಿದೆ ಎನ್ನಲಾಗಿದೆ.

  • ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕು

    ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕು

    ಬೆಂಗಳೂರು: ಜೂನ್ 26 ರಿಂದ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ತೇವಾಂಶ ಕೊರತೆ ಹಾಗೂ ಗಾಳಿಯು ದುರ್ಬಲವಾಗಿರುವ ಹಿನ್ನಲೆಯಲ್ಲಿ ಮುಂಗಾರು ಮಳೆ ದುರ್ಬಲವಾಗಿದೆ. ರಾಜ್ಯದ 30 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಮುಂಗಾರು ಮಳೆ ಕೊರತೆ ಇದೆ. ದಕ್ಷಿಣ ಒಳನಾಡಿನ 8 ಜಿಲ್ಲೆಗಳಲ್ಲಿ, ಹಾಗೂ ಉತ್ತರ ಒಳನಾಡಿನ ಮೂರು ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕ ಏಳು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂದು ತಿಳಿಸಿದರು.

    ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಶೇ.42 ರಷ್ಟು ಮಳೆ ಕೊರತೆ ಇದೆ. ಹಾಗೆ ಕಾವೇರಿ ಭಾಗದಲ್ಲಿ ಶೇಕಡಾ 36ರಷ್ಟು ಮಳೆ ಕೊರತೆ ಇದೆ. ಇನ್ನೂ ನಾಲ್ಕು ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದರು.

  • ರಾಜ್ಯದಲ್ಲಿ ಚುರುಕಾಗಬೇಕಿದ್ದ ಮಳೆ ತಗ್ಗಿದ್ದು ಯಾಕೆ?

    ರಾಜ್ಯದಲ್ಲಿ ಚುರುಕಾಗಬೇಕಿದ್ದ ಮಳೆ ತಗ್ಗಿದ್ದು ಯಾಕೆ?

    ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮುಂಗಾರು ಮಳೆಗೆ ಬೇಕಾದ ಗಾಳಿ ದುರ್ಬಲವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ವಿಜ್ಞಾನಿ ಗವಾಸ್ಕರ್ ತಿಳಿಸಿದ್ದಾರೆ.

    ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಚದುರಿದ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತವರಣವಿದ್ದು, ಕರವಾಳಿ ಪ್ರದೇಶ, ದಕ್ಷಿಣ ಓಳನಾಡು ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದೆ ಎಂದು ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ಜೂನ್‍ನಲ್ಲಿ ವಾಡಿಕೆಗಿಂತ ಮಳೆಯ ಪ್ರಮಾಣ ಹೆಚ್ಚಾಗಿದೆ. ವಾಡಿಕೆಯಂತೆ 110 ಮಿ.ಮೀ ಮಳೆಯಾಗಬೇಕಿತ್ತು. ಅದ್ರೆ ಈಗಾಗಲೇ 116 ಮಿ.ಮೀ ಮಳೆಯಾಗಿದೆ ಎಂದು ಗವಾಸ್ಕರ್ ತಿಳಿಸಿದರು.

  • ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

    ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ

    ಮಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ.

    ಇಂದಿನಿಂದ ಜೂನ್ 16ರವರೆಗೆ ಮಳೆ ಮತ್ತಷ್ಟು ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಪ್ರವಾಹ ಸ್ಥಿತಿ ಏರ್ಪಟ್ಟರೆ ಪರಿಸ್ಥಿತಿ ನೋಡಿಕೊಂಡು ಶಾಲೆಗಳಿಗೆ ರಜೆ ನೀಡುವಂತೆಯೂ ಜಿಲ್ಲಾಡಳಿತ ನಿರ್ದೇಶಿಸಿದೆ.

    ಉತ್ತರ ಕನ್ನಡ ಜಿಲ್ಲೆಯಾದ್ಯಾಂತ ಮುಂಗಾರು ಚುರುಕುಗೊಂಡಿದ್ದು ಜಿಲ್ಲೆಯಾದ್ಯಾಂತ ಸರಾಸರಿ 84.1 ಮಿ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿಯೇ ಕುಮಟಾದಲ್ಲಿ ಅತಿ ಹೆಚ್ಚು 163.4 ಮಿ.ಮೀಟರ್ ಮಳೆ ದಾಖಲಾಗಿದೆ. ಕುಮಟಾ ತಾಲೂಕಿನ ಮಾದನಗೇರಿಯಲ್ಲಿ ಗುಡ್ಡ ಕುಸಿದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಜೆಸಿಬಿ ಬಳಸಿ ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಲಾಯಿತು.

  • ಮುಂಗಾರು ಟೈಂನಲ್ಲಿ ಕಸ ಕಗ್ಗಂಟು – 5 ಸಾವಿರ ಪೌರ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

    ಮುಂಗಾರು ಟೈಂನಲ್ಲಿ ಕಸ ಕಗ್ಗಂಟು – 5 ಸಾವಿರ ಪೌರ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ

    ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ್ದ ಕಸ ಈಗ ಮತ್ತೆ ಸುದ್ದಿಯಲ್ಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೌರ ಕಾರ್ಮಿಕರು ಮುಷ್ಕರ ಆರಂಭ ಮಾಡಿದ್ದು ಕಸ ಎತ್ತುವುದನ್ನು ಸ್ಥಗಿತಗೊಳಿಸಿದ್ದಾರೆ

    ಸೋಮವಾರದಿಂದ ಮಹಾನಗರಿಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಹೈಕೋರ್ಟ್ ಆದೇಶದಂತೆ ನಮ್ಮನ್ನು ಖಾಯಂಗೊಳಿಸಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಅಂತ ಪಟ್ಟು ಹಿಡಿದಿರೋ ಪೌರ ಕಾರ್ಮಿಕರು ಬೆಂಗಳೂರಿನ ಬನ್ನಪ್ಪಪಾರ್ಕ್‍ನಲ್ಲಿ ಅನಿರ್ದಿಷ್ಠಾವಧಿಯ ಮುಷ್ಕರ ನಡೆಸುತ್ತಿದ್ದಾರೆ. ಇದರಲ್ಲಿ 5 ಸಾವಿರ ಮಂದಿ ಪೌರ ಕಾರ್ಮಿಕರು ಭಾಗವಹಿಸಿದ್ದಾರೆ.

    ಬೇಡಿಕೆ ಈಡೇರುವವರೆಗೆ ಕಸ ಎತ್ತಲ್ಲ ಎಂದು ಕಾರ್ಮಿಕರು ಸ್ಪಷ್ಟಪಡಿಸಿದ್ದಾರೆ. ಒಂದು ಕಡೆ ಮುಂಗಾರು ಮಳೆ ಕೂಡಾ ಬರುತ್ತಿರುವ ಕಾರಣ ಕಸ ವಿಲೇವಾರಿಯಾಗದೇ ರೋಗ-ರುಜಿನಗಳು ಶುರುವಾಗೋ ಆತಂಕ ಎದುರಾಗಿದೆ.

  • ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿಹೋದ ಕಾರು – ನಾಲ್ವರ ಸಾವು

    ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿಹೋದ ಕಾರು – ನಾಲ್ವರ ಸಾವು

    – ಇಂದು ರಾಜ್ಯಕ್ಕೆ ಎಂಟ್ರಿ ಕೊಡಲಿದೆ ಮುಂಗಾರು

    ಬಾಗಲಕೋಟೆ: ಮುಂಗಾರು ಮಳೆ ಆರ್ಭಟ ಶುರುವಾಗುವ ಮೊದಲೇ ಮಳೆಗೆ ನಾಲ್ವರು ಸಾವನ್ನಪ್ಪಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅನವಾಲ್ ಗ್ರಾಮದ ಕೊಳ್ಳದಲ್ಲಿ ನಡೆದಿದೆ.

    ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಕಾರು ಚಲಾಯಿಸಿದಾಗ ಕಾರು ಕೊಚ್ಚಿಕೊಂಡು ಹೋಗಿ ನಾಲ್ವರು ಜೀವಬಿಟ್ಟಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಬದುಕುಳಿದಿದ್ದಾರೆ. ಹಂಡಗೆರಿ ಗ್ರಾಮದ ಯಮನಪ್ಪ ಬಸಪ್ಪ(45), ರುದ್ರಪ್ಪ ಗುರಪ್ಪನವರ(55), ಅಶೋಕ್(40), ಹೊಳಬಸಪ್ಪ(55) ಅನ್ನೋರು ಸಾವನ್ನಪ್ಪಿದ್ದಾರೆ. ಯಂಡಿಗೇರಿಯ ಬಸಲಿಂಗಪ್ಪ ಶಿರಗುಂಪಿ ಕಾರಿನಿಂದ ಜಿಗಿದು ಪ್ರವಾಹದ ನೀರಲ್ಲಿ ಈಜಿ ಅದೃಷ್ಷವಶಾತ್ ಸಾವಿನಿಂದ ಪಾರಾಗಿದ್ದಾರೆ.

    ಇವತ್ತಿನಿಂದ ಮುಂಗಾರು ಮಳೆ ಕರಾವಳಿಗೆ ಬಂದು ಅಪ್ಪಳಿಸಲಿದೆ. ವಾಡಿಕೆಯಂತೆ ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ. ಜೂನ್‍ನಿಂದ ಡಿಸೆಂಬರ್ ಅವಧಿಯಲ್ಲಿ ದೇಶದೆಲ್ಲೆಡೆ ಶೇಕಡಾ 96 ರಿಂದ ಶೇಕಡಾ 104 ರಷ್ಟು ಮಳೆಯಾಗಲಿದೆ. ಜೂನ್‍ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬರೋಬ್ಬರಿ 887ಮಿಲಿ ಮೀಟರ್‍ನಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

    ವಾಯುವ್ಯ ಭಾರತದಲ್ಲಿ 100ಕ್ಕೆ 100ರಷ್ಟು ಮಳೆಯಾಗಲಿದ್ರೆ, ಮಧ್ಯ ಭಾರತದಲ್ಲಿ 99ರಷ್ಟು, ದಕ್ಷಿಣ ಭಾರತ ಹಾಗು ಆಗ್ನೇಯ ಭಾರತದ ಕಡೆ 96ರಷ್ಟು ಮುಂಗಾರು ಮಳೆ ಬರಲಿದೆ ಎಂಬ ಅಂಕಿ ಅಂಶವನ್ನು ಮೊದಲ ಬಾರಿಗೆ ನೀಡಿದೆ. ಹವಾಮಾನದಲ್ಲಿ ಏನೇ ಬದಲಾವಣೆಯಾದ್ರೂ ಈ ಬಾರಿ 95ರಷ್ಟು ಮುಂಗಾರು ಮಳೆ ಆಗಲಿದೆ ಅಂತಾ ಹವಾಮಾನ ಇಲಾಖೆ ಖಚಿತವಾಗಿ ಹೇಳಿದೆ.

  • ಕೇರಳ ಪ್ರವೇಶಿಸಿದ್ರೂ ರಾಜ್ಯಕ್ಕೆ ಇನ್ನೂ ಮುಂಗಾರು ಮಳೆ ಬಂದಿಲ್ಲ ಯಾಕೆ?

    ಕೇರಳ ಪ್ರವೇಶಿಸಿದ್ರೂ ರಾಜ್ಯಕ್ಕೆ ಇನ್ನೂ ಮುಂಗಾರು ಮಳೆ ಬಂದಿಲ್ಲ ಯಾಕೆ?

    ಬೆಂಗಳೂರು: ರಾಜ್ಯಕ್ಕೆ ಮೇ 30ರ ಒಳಗಡೆ ಮುಂಗಾರು ಮಳೆ ಪ್ರವೇಶಿಸಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸಿ ಐದು ಕಳೆದರೂ ಇನ್ನೂ ರಾಜ್ಯಕ್ಕೆ ಆಗಮಿಸದೇ ಇರುವುದು ರೈತರಿಗೆ ಬೇಸರ ತಂದಿದೆ.

    ಮೇ 28 ರಿಂದ 30 ರೊಳಗೆ ಕೇರಳ ಮೂಲಕ ದೇಶಕ್ಕೆ ಮುಂಗಾರು ಪ್ರವೇಶ ಮಾಡಲಿದೆ. ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುತ್ತಿದ್ದ ಹಾಗೇ ರಾಜ್ಯಕ್ಕೂ ಮುಂಗಾರು ಪ್ರವೇಶ ಆಗಲಿದೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ಹಿಂದೆ ಮಾಹಿತಿ ನೀಡಿತ್ತು.

    ಆದರೆ ಇನ್ನೂ ಯಾಕೆ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿಲ್ಲ ಎಂದು ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ, ನೈಋತ್ಯ ಮಾರುತಗಳು ಬಲ ಹೊಂದದೇ ಇರುವುದು ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಿರುವುದು ಮಳೆ ವಿಳಂಬಕ್ಕೆ ಕಾರಣವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

    ಹಾಗಾದರೆ ಯಾವಾಗ ಮಳೆಯಾಗಬಹುದು ಎಂದು ಕೇಳಿದ್ದಕ್ಕೆ, ರಾಜ್ಯಕ್ಕೆ ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಉತ್ತರಿಸಿದರು.

    ಕಳೆದ ವರ್ಷ ರಾಜ್ಯಕ್ಕೆ ಮುಂಗಾರು ಮಳೆ ಜೂನ್ 9 ರಂದು ಪ್ರವೇಶ ಮಾಡಿತ್ತು.

  • ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 94 ಮಿ.ಮೀ ಮಳೆ

    ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 94 ಮಿ.ಮೀ ಮಳೆ

    ಬೆಂಗಳೂರು: ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿದೆ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ರಾಜಧಾನಿ ಬೆಂಗಳೂರಿನ ರಸ್ತೆಗಳು ಸಂಪೂರ್ಣ ಹೊಳೆಗಳಂತಾಗಿದ್ದವು. ನಗರದಲ್ಲಿ ಸೋಮವಾರ ಗರಿಷ್ಠ 94 ಮಿ.ಮೀ ಮಳೆಯಾಗಿದೆ.

    ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಅದ್ರಲ್ಲೂ ಪ್ರಮುಖ, ಪ್ರತಿಷ್ಠಿತ ಏರಿಯಾಗಳಾದ ಮಲ್ಲೇಶ್ವರಂ, ಸದಾಶಿವನಗರ, ಗುಟ್ಟಹಳ್ಳಿ, ಯಶವಂತಪುರ ಮತ್ತು ನಾಗವಾರ ಜಲಾವೃತವಾಗಿದ್ದವು. ಮರಗಳು ಬುಡಮೇಲಾಗಿ ಬಿದ್ದಿದ್ದು, ಟ್ರಾಫಿಕ್ ಜಾಮ್ ಆಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.

    ಮಳೆ ಹಾಗೂ ಗಾಳಿಯಿಂದಾಗಿ ಬೆಂಗಳೂರಿನ ಬಹುತೇಕ ಪ್ರದೇಶಗಳು ಕಗ್ಗತ್ತಲೆಯಲ್ಲಿದ್ದವು. ಈ ಮಧ್ಯೆ ಮೂರು ದಿನಗಳ ಹಿಂದೆ ರಾಜಕಾಲುವೆಯಲ್ಲಿ ಕೊಚ್ಚಿಹೋಗಿರುವ ಶಾಂತಕುಮಾರ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಇಂದು 9 ಗಂಟೆಗೆ ಮತ್ತೆ ಕಾರ್ಯಾಚರಣೆ ಶುರುವಾಗಲಿದೆ.

    ಎಲ್ಲೆಲ್ಲಿ ಎಷ್ಟೆಷ್ಟು ಮಳೆಯಾಗಿದೆ?
    * ಹೊರಮಾವು, ಮಹದೇವಪುರ ಸುತ್ತಮುತ್ತ – 50 ಮಿಮೀ.
    * ದೊಡ್ಡಬನಹಳ್ಳಿ ಸುತ್ತಮುತ್ತ – 54 ಮಿಮೀ.
    * ಆವಲಹಳ್ಳಿ ಸುತ್ತಮುತ್ತ – 56 ಮಿಮೀ.
    * ಬೊಮ್ಮನಹಳ್ಳಿ ಸುತ್ತಮುತ್ತ – 64 ಮಿಮೀ.
    * ಸಿಂಗಸಂದ್ರ-64 ಮಿಮೀ.
    * ಹಂಪಿನಗರ ಸುತ್ತಮುತ್ತ – 64 ಮಿಮೀ.
    * ಹಾಲನಾಯಕನಹಳ್ಳಿ ಸುತ್ತಮುತ್ತ – 66 ಮಿಮೀ.
    * ನಾಗಪುರ ಸುತ್ತಮುತ್ತ – 78 ಮಿಮೀ.
    * ಮನೋರಯ್ಯನ ಪಾಳ್ಯ ಸುತ್ತಮುತ್ತ – 94 ಮಿಮೀ.