Tag: Monsoon rain

  • ಹಿಮಾಚಲದಲ್ಲಿ ಮೇಘಸ್ಫೋಟ| ಮಧ್ಯರಾತ್ರಿ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ

    ಹಿಮಾಚಲದಲ್ಲಿ ಮೇಘಸ್ಫೋಟ| ಮಧ್ಯರಾತ್ರಿ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ

    ಶಿಮ್ಲಾ:  ಹಿಮಾಚಲ ಪ್ರದೇಶದಲ್ಲಿ (Himachal Pradesh) ಮೇಘಸ್ಫೋಟ ಸಂಭವಿಸಿ ಸುಮಾರು 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿ 80ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದುರಂತದ ನಡುವೆ ಮಂಡಿ (Mandi) ಜಿಲ್ಲೆಯ ಹಳ್ಳಿಯೊಂದರಲ್ಲಿ ಶ್ವಾನವೊಂದು (Dog) ಬೊಗಳಿದ್ದರಿಂದ 20 ಕುಟುಂಬಗಳ 67 ಜನರು ಕೊನೆ ಕ್ಷಣದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

    ಜೂನ್ 30 ರಂದು ಮಧ್ಯರಾತ್ರಿ ಮಂಡಿಯ ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಭಾರೀ ಮಳೆಯಾಗುತ್ತಿತ್ತು. ಈ ಗ್ರಾಮದ ನರೇಂದ್ರ ಅವರ ನಿವಾಸದ ಎರಡನೇ ಮಹಡಿಯಲ್ಲಿ ಮಲಗಿದ್ದ ಸಾಕು ನಾಯಿ ಇದ್ದಕ್ಕಿದ್ದಂತೆ ಬೊಗಳಲು ಆರಂಭಿಸಿದೆ.

    ರಾತ್ರಿ ಇಷ್ಟೊಂದು ಬೊಗಳದ ನಾಯಿ ಯಾಕೆ ಈ ಪರಿ ಬೊಗಳುವುದನ್ನು ನೋಡಿ ಅಚ್ಚರಿಗೊಂಡು ನರೇಂದ್ರ ಎಚ್ಚರಗೊಂಡಿದ್ದಾರೆ. ನಂತರ ನಾಯಿ ಬೊಗಳಿದ ಜಾಗದ ಬಳಿ ಹೋದಾಗ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಮೂಡಿದ್ದನ್ನು ನೋಡಿದ್ದಾರೆ. ನೋಡುತ್ತಿರುವಾಗಲೇ ಆ ಬಿರುಕಿನ ಮೂಲಕ ನೀರು ಮನೆ ಒಳಗಡೆ ಹರಿಯಲು ಆರಂಭಿಸಿತ್ತು.  ಇದನ್ನೂ ಓದಿ: ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹತ್ಯೆ ಪ್ರಮುಖ ಆರೋಪಿ ಎನ್‌ಕೌಂಟರ್‌ಗೆ ಬಲಿ

    ನೀರು ಮನೆಗೆ ನುಗ್ಗಿದೆ ಎಂಬದು ಖಾತ್ರಿ ಆಗುತ್ತಿದ್ದಂತೆ  ನಾಯಿಯ ಜೊತೆ ಕೆಳಗಡೆ ಮಲಗಿದ್ದ ಕುಟುಂಬದ ಸದಸ್ಯರನ್ನು ಎಬ್ಬಿಸಿ ಕೂಡಲೇ ಹೊರ ಬರುವಂತೆ ಹೇಳಿದ್ದಾರೆ.  ಇದನ್ನೂ ಓದಿ: ಹಿಮಾಚಲಪ್ರದೇಶ: 17 ದಿನದಲ್ಲಿ 19 ಬಾರಿ ಮೇಘಸ್ಫೋಟ 82 ಸಾವು, ಬದರೀನಾಥ ಮಾರ್ಗ ಬಂದ್

    ನರೇಂದ್ರ ಅವರು ನಂತರ ಸಮೀಪದಲ್ಲಿ ಇದ್ದ ನೆರೆ ಹೊರೆಯ ನಿವಾಸಿಗಳನ್ನು ಎಬ್ಬಿಸಿ  ಮನೆಯಿಂದ ಹೊರ ಬಂದು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಿದ್ದಾರೆ.

    ಈ ಸಂದರ್ಭದಲ್ಲಿ ಜೋರು ಮಳೆ (Rain) ಸುರಿಯುತ್ತಲೇ ಇತ್ತು. ಕೂಡಲೇ ಗ್ರಾಮಸ್ಥರು ಮನೆಯನ್ನು ತೊರೆದು ಓಡಿದ್ದಾರೆ. ಮನೆ ತೊರೆದ ಕೆಲ ಸಮಯದಲ್ಲಿ ಈ ನಿವಾಸಿಗಳು ಮಲಗಿದ್ದ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

    ಗ್ರಾಮವು ಭೂಕುಸಿತಕ್ಕೆ ಒಳಗಿದ್ದು ಸುಮಾರು ಒಂದು ಡಜನ್‌ ಮನೆಗಳು ನೆಲಸಮವಾಗಿದೆ. ಗ್ರಾಮದಲ್ಲಿ ಈಗ ಕೇವಲ ನಾಲ್ಕೈದು ಮನೆಗಳು ಮಾತ್ರ ಗೋಚರಿಸುತ್ತಿವೆ. ಉಳಿದವು ಭೂಕುಸಿತದ ಅವಶೇಷಗಳ ಅಡಿಯಲ್ಲಿವೆ.

    ಬದುಕುಳಿದವರು ಕಳೆದ 7 ದಿನಗಳಿಂದ ತ್ರಿಯಂಬಲ ಗ್ರಾಮದಲ್ಲಿರುವ ನೈನಾ ದೇವಿ ದೇವಾಲಯದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ನಾಯಿ ಸರಿಯಾದ ಸಮಯದಲ್ಲಿ ಬೊಗಳಿದ್ದರಿಂದ ಸುಮಾರು 67 ಮಂದಿ ಪಾರಾಗಿದ್ದಾರೆ.

  • ರೈತರಿಗೆ ಸಿಹಿ ಸುದ್ದಿ – ವಾಡಿಕೆಗೂ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶ

    ರೈತರಿಗೆ ಸಿಹಿ ಸುದ್ದಿ – ವಾಡಿಕೆಗೂ ಮೊದಲೇ ಕೇರಳಕ್ಕೆ ಮುಂಗಾರು ಪ್ರವೇಶ

    ನವದೆಹಲಿ: ವಾಡಿಕೆಗೂ ಮೊದಲೇ ಕೇರಳ ಕರಾವಳಿಗೆ ಮುಂಗಾರು ಪ್ರವೇಶವಾಗಿದೆ.

    ಭಾರತೀಯ ಹವಾಮಾನ ಇಲಾಖೆ ಮೇ 27ಕ್ಕೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ 3 ದಿನದ ಮೊದಲೇ ಮುಂಗಾರು ಪ್ರವೇಶವಾಗಿದ್ದು ರೈತರು ಸಂತಸಗೊಂಡಿದ್ದಾರೆ.

    ಸಾಮಾನ್ಯವಾಗಿ ಭಾರತದಲ್ಲಿ ಜೂನ್ 1 ರಂದು ಮುಂಗಾರು ಮಳೆ ಭಾರತವನ್ನು ಪ್ರವೇಶಿಸುತ್ತದೆ. ಆದರೆ ಈ ಬಾರಿ ನೈಋತ್ಯ ಮಾನ್ಸೂನ್ ಕೇರಳದಲ್ಲಿ ಸಾಮಾನ್ಯ ದಿನಾಂಕಕ್ಕಿಂತ 8 ದಿನಗಳು ಮುಂಚಿತವಾಗಿ ಪ್ರಾರಂಭವಾಗಿರುವುದು ವಿಶೇಷ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೆ ಭಾರೀ ಮಳೆ ಎಚ್ಚರಿಕೆ – 3 ದಿನ ರೆಡ್‌ ಅಲರ್ಟ್‌

    ಈ ಹಿಂದೆ 2009 ರಲ್ಲಿ ಮೇ 23ಕ್ಕೆ ಮುಂಗಾರು ಮಳೆ ಪ್ರವೇಶವಾಗಿತ್ತು. 2023 ರಲ್ಲಿ ಜೂನ್‌ 9, 2024ರಲ್ಲಿ ಮೇ 30 ರಂದು ಮುಂಗಾರು ಪ್ರವೇಶವಾಗಿತ್ತು.

  • ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮುಂಗಾರು ಆಗಮನ: ಹವಾಮಾನ ಇಲಾಖೆ

    ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಕ್ಕೆ ಮುಂಗಾರು ಆಗಮನ: ಹವಾಮಾನ ಇಲಾಖೆ

    ನವದೆಹಲಿ: ನೈಋತ್ಯ ಮಾನ್ಸೂನ್(Southwest Monsoon) ಮಂಗಳವಾರ ದಕ್ಷಿಣ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪ ಮತ್ತು ಉತ್ತರ ಅಂಡಮಾನ್ ಸಮುದ್ರದ ಕೆಲವು ಭಾಗಗಳಿಗೆ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಕಳೆದ ಎರಡು ದಿನಗಳಲ್ಲಿ ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗಿದೆ. ದಕ್ಷಿಣ ಬಂಗಾಳ ಕೊಲ್ಲಿ, ನಿಕೋಬಾರ್ ದ್ವೀಪಗಳು ಮತ್ತು ಅಂಡಮಾನ್ ಸಮುದ್ರದ ಮೇಲೆ ಪಶ್ಚಿಮ ದಿಕ್ಕಿನ ಗಾಳಿಯ ಬಲವು ಹೆಚ್ಚಾಗಿದೆ. ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದಲ್ಲಿ ಗಾಳಿಯ ವೇಗ 20 ನಾಟಿಕಲ್ ಮೈಲ್ ಮೀರಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಧಾರಾಕಾರ ಮಳೆ – ಅಂಚೆ ಕಚೇರಿ, ಅಂಡರ್ ಪಾಸ್‌ಗಳಲ್ಲಿ ನೀರು, ವಾಹನ ಸವಾರರ ಪರದಾಟ

    ಈ ಪ್ರದೇಶದಲ್ಲಿ ದೀರ್ಘ ತರಂಗ ವಿಕಿರಣ(OLR) ಸಹ ಕಡಿಮೆಯಾಗಿದೆ. ಇದು ಮಾನ್ಸೂನ್ ಆಗಮನದ ಮುನ್ಸೂಚನೆಯನ್ನು ನೀಡುತ್ತದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ

    ದಕ್ಷಿಣ ಅರೇಬಿಯನ್ ಸಮುದ್ರ, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶಗಳು, ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕೆಲವು ಭಾಗಗಳಿಗೆ ಮಾನ್ಸೂನ್ ಆಗಮಿಸಿದೆ. ಇನ್ನುಳಿದ ಅಂಡಮಾನ್ ಸಮುದ್ರದ ಭಾಗಗಳಿಗೆ ಹಾಗೂ ಬಂಗಾಳ ಕೊಲ್ಲಿಯ(Bay of Bengal) ಮಧ್ಯ ಭಾಗಗಳಿಗೆ ಮುಂದಿನ ಮರ‍್ನಾಲ್ಕು ದಿನಗಳಲ್ಲಿ ಮಾನ್ಸೂನ್ ಪ್ರವೇಶಿಸಲಿದ್ದು, ಮೇ 27ರಂದು ಕೇರಳವನ್ನು(Kerala) ತಲುಪುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

  • Karnataka Rain| ಜುಲೈನಲ್ಲಿ ವಾಡಿಕೆಗಿಂತಲೂ 48% ಜಾಸ್ತಿ ಮಳೆ

    Karnataka Rain| ಜುಲೈನಲ್ಲಿ ವಾಡಿಕೆಗಿಂತಲೂ 48% ಜಾಸ್ತಿ ಮಳೆ

    ಬೆಂಗಳೂರು: ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಾಗಿ ಕರ್ನಾಟಕದಲ್ಲಿ (Karnataka Rain) ಮುಂಗಾರು ಮಳೆ (Monsoon Rain) ಸುರಿದಿದೆ.

    ಜುಲೈನಲ್ಲಿ 263 ಮಿ.ಮೀ ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಜುಲೈ 1 ರಿಂದ 30ರ ವರೆಗೆ ರಾಜ್ಯದಲ್ಲಿ 390 ಮಿ.ಮೀ ನಷ್ಟು ಮಳೆ ಸುರಿದಿದೆ. ವಾಡಿಕೆಗಿಂತ 48% ಹೆಚ್ಚಾಗಿ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ. ಇದನ್ನೂ ಓದಿ: Wayanad Landslide : ರಕ್ಷಣಾ ಕಾರ್ಯಾಚರಣೆ ಯಾಕೆ ಕಷ್ಟವಾಗುತ್ತಿದೆ?

    ಜೂನ್‌ನಲ್ಲಿ 199 ಮಿ.ಮೀ ಮಳೆಯಾಗಬೇಕಿತ್ತು. ಆದರೆ 194 ಮಿ.ಮೀ. ಮಳೆಯಾಗುವ ಮೂಲಕ 3% ಕಡಿಮೆ ಮಳೆ ಸುರಿದಿತ್ತು. ಇದನ್ನೂ ಓದಿ: Wayanad Landslides: ಸಿಎಂ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ವಯನಾಡಿಗೆ

     

  • ಕೇರಳ, ಈಶಾನ್ಯ ರಾಜ್ಯಗಳಿಗೆ 2 ದಿನ ಮೊದಲೇ ಮುಂಗಾರು ಪ್ರವೇಶ

    ಕೇರಳ, ಈಶಾನ್ಯ ರಾಜ್ಯಗಳಿಗೆ 2 ದಿನ ಮೊದಲೇ ಮುಂಗಾರು ಪ್ರವೇಶ

    ನವದೆಹಲಿ/ಬೆಂಗಳೂರು: ಈ ಬಾರಿಯ ಮುಂಗಾರು ಮಳೆ (Monsoon Rain) ಇಂದು ಕೇರಳ (Kerala) ಮತ್ತು ಈಶಾನ್ಯ ರಾಜ್ಯಗಳಿಗೆ (Northeast States) ಪ್ರವೇಶವಾಗಿದ್ದು, 2 ದಿನ ಮುನ್ನವೇ ಮುಂಗಾರು ಆರಂಭವಾಗಿದೆ.

    ರೆಮಲ್ ಚಂಡಮಾರುತದ ಪರಿಣಾಮವಾಗಿ ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈಗಾಗಲೇ ಜೋರಾಗಿ ಮಳೆ ಸುರಿಯುತ್ತಿದೆ. ಜುಲೈ 15ರ ಒಳಗಡೆ ಇಡೀ ಭಾರತದಲ್ಲಿ ಮುಂಗಾರು ಮಳೆ ಆಗಲಿದೆ.

     

    ಹವಾಮಾನ ತಜ್ಞರ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕೇರಳ ಮತ್ತು ಈಶಾನ್ಯ ಭಾರತದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಸಾಧಾರಣ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕೇರಳ, ಲಕ್ಷದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಾಧಾರಣ ಮಳೆ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಹಗುರ ಮಳೆ ಆಗಲಿದೆ. ಕೇರಳದ ಮೂರು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಜಾರಿಯಾಗಿದೆ.  ಇದನ್ನೂ ಓದಿ: ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಯೋಜನೆ – ಏನು ಷರತ್ತುಗಳು ಹಾಕ್ತಾರೋ ಗೊತ್ತಿಲ್ಲ ಎಂದ ಡಿಕೆಶಿ

    ಕರ್ನಾಟಕದಲ್ಲಿ (Karnataka) ಮುಂದಿನ 7 ದಿನ ಗುಡುಗು ಸಹಿತ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರು ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣದ ಜೊತೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಅತ್ತ, ಮಣಿಪುರದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ 3 ಮಂದಿ ಬಲಿಯಾಗಿದ್ದಾರೆ.

     

  • NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    NFSM ಅಭಿಯಾನದಡಿ 12.60 ಕೋ.ರೂ. ಮೌಲ್ಯದ ಬಿತ್ತನೆ ಬೀಜ ಮಿನಿಕಿಟ್ ವಿತರಣೆ: ಬಿ.ಸಿ.ಪಾಟೀಲ್

    ಬೆಂಗಳೂರು: ತೊಗರಿ, ಹೆಸರು, ಶೇಂಗಾ, ಸೋಯಾ, ಅವರೆ ಬೆಳೆಗಳ ವಿಸ್ತೀರ್ಣ ಹಾಗೂ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲು ರೈತರಿಗೆ ಪ್ರಮುಖವಾಗಿ ಬೆಳೆಯುವ 19 ಜಿಲ್ಲೆಗಳಲ್ಲಿ ಬಿತ್ತನೆ ಬೀಜಗಳ ಮಿನಿಕಿಟ್ ರೂಪದಲ್ಲಿ “ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ”(ಎನ್.ಎಫ್.ಎಸ್.ಎಂ)ಯೋಜನೆಯಡಿ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ನೀಡಲಾಗುತ್ತಿದ್ದು, ಇಲ್ಲಿಯವರೆಗೆ 12.60 ಕೋ.ರೂ. ಮೌಲ್ಯದ ಮಿನಿಕಿಟ್ ಗಳನ್ನು ವಿತರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

    ವಿಕಾಸಸೌಧದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್, ಎನ್.ಎಫ್.ಎಸ್.ಎಂ ಯೋಜನೆಯಡಿ 4 ಕೆಜಿ ತೊಗರಿಯನ್ನು 16 ಜಿಲ್ಲೆಗಳಿಗೆ, 4 ಕೆ.ಜಿ.ಹೆಸರು 4 ಜಿಲ್ಲೆಗಳಿಗೆ 20 ಕೆ.ಜಿಯಂತೆ 8 ಜಿಲ್ಲೆಗಳಿಗೆ ಹಾಗೂ 8 ಕೆ.ಜಿಯಂತೆ 2 ಜಿಲ್ಲೆಗಳಿಗೆ ಸೋಯಾ ಅವರೆಗಳ ಮಿನಿಕಿಟ್ ಗಳನ್ನು ವಿತರಿಸಲಾಗಿದ್ದು, ಮಿಶ್ರಬೆಳೆಗಳನ್ನು ಬೆಳೆಯಲು ಸಹ ಈ ಅಭಿಯಾನದಡಿ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

    2020-21 ನೇ ಸಾಲಿನಲ್ಲಿ 153.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿದ್ದು, ದೇಶದ ಸರಾಸರಿಗೆ ಹೋಲಿಸಿದಲ್ಲಿ ಶೇ.2 ರಷ್ಟು ಹಾಗೂ ರಾಜ್ಯದ ಸರಾಸರಿಗೆ ಇದನ್ನು ಹೋಲಿಸಿದರೆ ಕರ್ನಾಟಕದಲ್ಲಿ ಶೇ.10 ರಷ್ಟು ಹೆಚ್ಚಿನ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಕೂಡ ಕಳೆದ ಬಾರಿ ದಾಖಲೆಯ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿರುವುದನ್ನು ನೋಡಿದರೆ ಕೃಷಿಯತ್ತ ಜನರ ಒಲವು ಹಾಗೂ ಕೋವಿಡ್ ಅವಧಿಯಲ್ಲಿಯೂ ಸಹ ರೈತರ ಶ್ರಮಕ್ಕೆ ಇದು ಸಾಧನೆಯಾಗಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

    ಬಿತ್ತನೆ ಗುರಿ:
    ಮುಂಗಾರು ಹಂಗಾಮಿಗೆ 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, ಇಲ್ಲಿಯವರೆಗೆ 11.73 ಲಕ್ಷ ಹೆಕ್ಟೇರ್ ಬಿತ್ತನೆ ಅಂದರೆ ಶೇ.15.23 ಬಿತ್ತನೆಯಾಗಿದೆ. ಈ ಬಾರಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 7.74 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯತೆಯಿದ್ದು, ಇಲ್ಲಿಯವರೆಗೆ 1.79 ಲಕ್ಷ ಕ್ವಿಂಟಾಲ್ ವಿತರಣೆಯಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ 1.15 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನುಯಿದೆ.

    ರಸಗೊಬ್ಬರ ವಿವರ:
    ಏಪ್ರಿಲ್ ನಿಂದ ಜೂನ್ ವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್ ಹಾಗೂ ಯೂರಿಯಾ ಸೇರಿದಂತೆ ಒಟ್ಟು 12,77,815 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಇದರಲ್ಲಿ ಒಟ್ಟು 8,02.504 ಮೆ.ಟನ್ ಸರಬರಾಜು, ಒಟ್ಟು 11,54,320 ಆರಂಭಿಕ ಶಿಲ್ಕು, 7,84,075 ಮಾರಾಟವಾಗಿದ್ದು, ಇನ್ನೂ 11,72,750 ದಾಸ್ತಾನು ಉಳಿದಿದೆ. ಈ ಬಾರಿ ಹಂಗಾಮಿನಲ್ಲಿ ಇಲ್ಲಿಯವರೆಗೆ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇಲ್ಲಿಯವರೆಗೆ ಎಲ್ಲಿಯೂ ರಸಗೊಬ್ಬರವಾಗಲೀ, ಬಿತ್ತನೆ ಬೀಜದ ಕೊರತೆ ಕಂಡುಬಂದಿಲ್ಲ. ಕಾಳಸಂತೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಕೃಷಿ ವಿಚಕ್ಷಣಾ ದಳ ನಿರಂತರವಾಗಿ ಕಾಳಸಂತೆಕೋರರು ನಕಲಿ ಮಾರಾಟಗಾರರ ಮೇಲೆ ದಾಳಿ ಮಾಡುತ್ತಲೇ ಇದೆ. ಕಳೆದ ಬಾರಿ 1731.63 ಲಕ್ಷ ಮೌಲ್ಯದ ಕೃಷಿ ಪರಿಕರ ನಕಲಿಬಿತ್ತನೆ ಬೀಜ ರಸಗೊಬ್ಬರ ವಶಪಡಿಸಿಕೊಳ್ಳಲಾಗಿದ್ದು, 263 ಮೊಕ್ಕದ್ದಮೆಗಳನ್ನು ನ್ಯಾಯಾಲಯದಲ್ಲಿ ಹೂಡಲಾಗಿದೆ. ಈ ಬಾರಿ 2021-22 ನೇ ಸಾಲಿನಲ್ಲಿ ಏಪ್ರಿಲ್ 1 ರಿಂದ ಜೂನ್ 11 ರವರೆಗೆ 424.52 ಲಕ್ಷ ಮೌಲ್ಯದ ವಿವಿಧ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಹಾವೇರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಪ್ತಿ ಮಾಡಲಾಗಿದೆ. ಇನ್ನೂ ಏಪ್ರಿಲ್ 1 ರಿಂದ ಜೂ 13 ರವರೆಗೆ ಶೇ.31 ಹೆಚ್ಚುವರಿ ಅಂದರೆ 169 ಮಿಮೀ ವಾಡಿಕೆ ಮಳೆಯಾಗಿದ್ದು, 222 ಮಿ.ಮೀ ವಾಸ್ತವಿಕ ಮಳೆಯಿತ್ತು.

    ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ:
    2021-22 ನೇ ಸಾಲಿನಲ್ಲಿ 53,35.967 ಕೇಂದ್ರ ಸರ್ಕಾರದಿಂದ ರೈತ ಫಲಾನುಭವಿಯಾಗಿದ್ದು, ಇದರಲ್ಲಿ 1067.1934 ಕೋ.ರೂ.ಆರ್ಥಿಕ ನೆರವು ನೀಡಲಾಗಿದ್ದು, 55,07,256 ಫಲಾನುಭವಿಗಳಿಗೆ ಇಲ್ಲಿಯವರೆಗೆ 7017.1520 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ.ರಾಜ್ಯ ಸರ್ಕಾರ 47,98.095 ರೈ ಫಲಾನುಭವಿಗಳಿಗೆ 2849.1632 ಕೋ.ರೂ. ಆರ್ಥಿಕ ನೆರವು ನೀಡಲಾಗಿದೆ. ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಈಗಾಗಲೇ ಶೇಕಡಾ 85 ರಷ್ಟು ಆಧಾರ್ ಲಿಂಕ್ ಮಾಡಿದ್ದೇವೆ. ಶೇಕಡ 15 ರಷ್ಟು ಅಕೌಂಟ್ ಮೂಲಕ ನೀಡಲಾಗುತ್ತಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ 5.01 ಲಕ್ಷ ಟಾರ್ಪಲಿನ್ ಗಳನ್ನು ವಿತರಿಸಲಾಗಿದೆ. ರಾಜ್ಯದಲ್ಲಿ 690 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದ್ದು, 210 ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಗಳ ಸ್ಥಾಪನೆ ಮಾಡಲಾಗಿದೆ.

  • ನೈಋತ್ಯ ಮುಂಗಾರು ಚುರುಕು- ಉಡುಪಿಯಲ್ಲಿ ಗಾಳಿ ಮಳೆ

    ನೈಋತ್ಯ ಮುಂಗಾರು ಚುರುಕು- ಉಡುಪಿಯಲ್ಲಿ ಗಾಳಿ ಮಳೆ

    ಉಡುಪಿ: ಕಳೆದೊಂದು ವಾರದಿಂದ ದುರ್ಬಲಗೊಂಡಿದ್ದ ನೈಋತ್ಯ ಮುಂಗಾರು ಚುರುಕು ಪಡೆದಿದೆ. ಉಡುಪಿ ಜಿಲ್ಲೆಯಲ್ಲಿ ಮಧ್ಯರಾತ್ರಿಯಿಂದ ನಿರಂತರವಾಗಿ ಭಾರೀ ಗಾಳಿ ಮಳೆಯಾಗುತ್ತಿದೆ.

    ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ಗುಡುಗು, ಮಿಂಚು ಸಹಿತ ಅತಿ ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರತೀ 24 ತಾಸುಗಳಲ್ಲಿ ಜಿಲ್ಲೆಯಲ್ಲಿ 64 ರಿಂದ 115 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ತಾಸಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ, ಉಡುಪಿ ಎಲ್ಲಾ ತಾಲೂಕುಗಳಲ್ಲಿಯೂ ವ್ಯಾಪಕ ಮಳೆ ಸುರಿಯುತ್ತಿದೆ. ಇದರಿಂದ ಭತ್ತದ ಬೇಸಾಯ ಆರಂಭಿಸಲು ಕಾದಿದ್ದ ಕೃಷಿಕರಿಗೆ ಅನುಕೂಲವಾಗಿದೆ.

    ಉಡುಪಿ ನಗರ ಭಾಗದಲ್ಲಿ ಭಾರಿ ಮಳೆಯಾಗಿರುವುದರಿಂದ ವಾಹನ ಸಂಚಾರಕ್ಕೆ ಕೊಂಚ ವ್ಯತ್ಯಯವಾಯ್ತು. ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಜಿಲ್ಲೆಯಾದ್ಯಂತ ಮೋಡಮುಸುಕಿದ ವಾತಾವರಣವಿದೆ.

  • ಹಾವೇರಿಯಲ್ಲಿ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ, ವಾರಕ್ಕೊಮ್ಮೆ ಮಾನಿಟರ್: ಬೊಮ್ಮಾಯಿ

    ಹಾವೇರಿಯಲ್ಲಿ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮ, ವಾರಕ್ಕೊಮ್ಮೆ ಮಾನಿಟರ್: ಬೊಮ್ಮಾಯಿ

    ಹಾವೇರಿ: ಹವಾಮಾನ ಇಲಾಖೆಯ ವರದಿಯಂತೆ ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ. ಈಗಾಗಲೇ ಭಾರೀ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಬೀಜ ಮತ್ತು ಗೊಬ್ಬರದ ಕೊರತೆಯಾಗದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗೃಹ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಮುಂಗಾರು ಬಿತ್ತನೆ ಕೃಷಿ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹವಾಮಾನ ಇಲಾಖೆಯ ಮಾಹಿತಿಯಂತೆ ಈ ವರ್ಷ ಮುಂಗಾರು ಮಳೆ ಶೇ.4ರಷ್ಟು ಕಡಿಮೆಯಾಗಲಿದೆ ಎಂದು ಮುನ್ಸೂಚನೆ ದೊರೆತಿದೆ. ಆದಾಗ್ಯೂ ವಾಡಿಕೆ ಮಳೆಯಂತೆ ಜಿಲ್ಲೆಯಲ್ಲಿ ಮುಂಗಾರಿಗೆ ಅಗತ್ಯವಾದ ಡಿಎಪಿ, ಕಾಂಪ್ಲೆಕ್ಸ್ ಗೊಬ್ಬರಗಳು ಹಾಗೂ ಬಿತ್ತನೆ ಬೀಜಗಳ ದಾಸ್ತಾನು ಕುರಿತಂತೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

    ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಂಗಾರು ಬಿತ್ತನೆ ಆರಂಭಗೊಳ್ಳಲಿದೆ. ಜಿಲ್ಲೆಯಲ್ಲಿ 15 ರಿಂದ 18 ಸಾವಿರ ಮೆಟ್ರಿಕ್ ಡಿಎಪಿ ಗೊಬ್ಬರ ಬೇಡಿಕೆ ಇದೆ. ಈಗಾಗಲೇ ಅಂದಾಜು 15 ಸಾವಿರ ಮೆಟ್ರಿಕ್ ಟನ್‍ನಷ್ಟು ಗೊಬ್ಬರ ದಾಸ್ತಾನು ಇದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ನಿಗದಿಯಾದ ಗೊಬ್ಬರ ಹಂಚಿಕೆಯನ್ನು ತಿಂಗಳ ಮೊದಲವಾರದಲ್ಲಿ ಪೂರೈಕೆ ಮಾಡಲು ಈಗಾಗಲೇ ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದರಿಂದ ಈ ವರ್ಷ ಡಿಎಪಿ ಗೊಬ್ಬರದ ಯಾವುದೇ ಕೊರತೆ ಇರುವುದಿಲ್ಲ. ಮುಂಗಾರು ಬಿತ್ತನೆ ಬೀಜ ಹಾಗೂ ರಸಗೊಬ್ಬರ ನಿರ್ವಹಣೆ ಕುರಿತು ಪ್ರತಿ ವಾರ ಮಾನಿಟರ್ ಮಾಡಲಾಗುವುದು ಎಂದು ತಿಳಿಸಿದರು.

    ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರ ಬೇಡಿಕೆ ಹೆಚ್ಚಾಗುತ್ತಿದೆ. ಕಳೆದ ಮೂರು ವರ್ಷದ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ 2018ರಲ್ಲಿ 14,653, 2019ರಲ್ಲಿ 16,291, 2020ರಲ್ಲಿ 20,312 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿದೆ. ಪ್ರಸಕ್ತ ಮುಂಗಾರು ಸಾಲಿನಲ್ಲಿ 26,635 ಮೆಟ್ರಿಕ್ ಟನ್ ಹಂಚಿಕೆಯಾಗಿದೆ. ಈ ವರ್ಷ 6,323 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಜಿಲ್ಲೆಗೆ ಹೆಚ್ಚುವರಿಯಾಗಿ ಹಂಚಿಕೆಯಾಗಿದೆ. ಮೇ ಕೊನೆಯವರೆಗೆ 10,450 ಮೆಟ್ರಿಕ್ ಟನ್ ಡಿಎಪಿ ಜಿಲ್ಲೆಗೆ ಪೂರೈಕೆಯಾಗಿದ್ದು, 5,960 ಮೆಟ್ರಿಕ್ ಟನ್ ಹಳೆಯ ದಾಸ್ತಾನು ಸೇರಿದಂತೆ ಮೇ ತಿಂಗಳಲ್ಲಿ 9,200 ಮೆಟ್ರಿಕ್ ಟನ್ ಸೇರಿದಂತೆ 15,161 ಮೆಟ್ರಿಕ್ ಡಿಎಪಿ ಗೊಬ್ಬರ ಬಳಕೆಗೆ ಲಭ್ಯವಿದೆ ಎಂದು ವಿವರಿಸಿದರು.

    ಈಗಾಗಲೇ 5,745 ಮೆಟ್ರಿಕ್ ಟನ್ ಗೊಬ್ಬರ ವಿತರಣೆಗೆ ಕ್ರಮ ವಹಿಸಲಾಗಿದೆ. ಪ್ರಸ್ತುತ 9,416 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಮಹಾ ಮಂಡಳ ನಿಯಮಿತ(ಕೆಎಸ್‍ಸಿಎಂಎಫ್)ನಲ್ಲಿ 2,626 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಅಂದಾಜು 14,657 ಮೆಟ್ರಿಕ್ ಟನ್ ಡಿಎಪಿ ಗೊಬ್ಬರ ಲಭ್ಯವಿದೆ. ಜೂನ್ ತಿಂಗಳಲ್ಲಿ ಜಿಲ್ಲೆಗೆ ನಿಗದಿಯಾದ 5,242 ಮೆಟ್ರಿಕ್ ಟನ್ ಹಾಗೂ ಜುಲೈ ತಿಂಗಳಿಗೆ ನಿಗದಿಯಾದ ಕೋಟವನ್ನು ತಿಂಗಳ ಆರಂಭದಲ್ಲಿ ನೀಡಿದರೆ ನಮಗೆ ಜುಲೈವರೆಗೆ 18 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಲಭ್ಯವಾಗಲಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಈ ವರ್ಷ ಡಿಎಪಿ ಹೊರತು ಕಾಂಪ್ಲೆಕ್ಸ್, ಎಂಒಪಿ ಹಾಗೂ ಯೂರಿಯಾ ಸೇರಿದಂತೆ 98,425 ಮೆಟ್ರಿಕ್ ಟನ್ ಗೊಬ್ಬರ ಹಂಚಿಕೆಯಾಗಿದೆ. 33,635 ಕ್ವಿಂಟಲ್ ಬಿತ್ತನೆ ಬೀಜ ಹಂಚಿಕೆಯಾಗಿದೆ ಎಂದು ತಿಳಿಸಿದರು.

  • ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಕರ್ನಾಟಕದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

    ಬೆಂಗಳೂರಿನಲ್ಲಿ ಧಾರಾಕಾರ ಮಳೆ – ಕರ್ನಾಟಕದಲ್ಲಿ ಮೂರು ದಿನ ಯೆಲ್ಲೋ ಅಲರ್ಟ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರುಣರಾಯ ತಂಪರೆದಿದ್ದಾನೆ. ಮುಂದಿನ ಮೂರು ದಿನ ವ್ಯಾಪಕ ಮಳೆಯಾಗುವ ಹಿನ್ನೆಲೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರಿನ ಮಲ್ಲೇಶ್ವರಂ, ವಸಂತನಗರ, ಶೇಷಾದ್ರಿಪುರಂ, ವೈಯಾಲಿಕಾವಲ್, ಕೋದಂಡ ರಾಂಪುರದಲ್ಲಿ ಭಾರೀ ಮಳೆಯಾಗಿದೆ. ನೆಹರು ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತಿನ ರಸ್ತೆಗಳು ಕೆರೆಗಳಾಗಿ ಬದಲಾದವು. ಬೆಂಗಳೂರಿನಲ್ಲಿ ಎರಡು ದಿನ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ.

    ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ. ಜೂನ್ 3ರಿಂದ 5ರವರೆಗೆ ಈ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಹಿನ್ನೆಲೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ 3 ದಿನ ಭಾರಿ ಮಳೆಯಾಗುವ ಸಾಧ್ಯತೆ. ಶಿವಮೊಗ್ಗ, ಚಿತ್ರದುರ್ಗ, ಹಾಸನ, ಕೊಡಗು, ಚಾಮರಾಜನಗರ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರದಲ್ಲಿಯೂ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.

    ಹಾಸನ ನಗರ ಹಲವೆಡೆ ಸಾಧಾರಣ ಮಳೆಯಾಗಿದ್ದು, ನಿನ್ನೆ ರಾತ್ರಿ ಚನ್ನರಾಯಪಟ್ಟಣ ತಾಲ್ಲೂಕಿನ ಹಲವೆಡೆ ಉತ್ತಮ ಮಳೆಯಾಗಿತ್ತು. ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ನಿನ್ನೆ ರಾತ್ರಿಯಿಂದಲೇ ಮಳೆಯಾಗುತ್ತಿದೆ.

    ಎರಡು ದಿನಗಳು ತಡವಾದರೂ ಅಂತಿಮವಾಗಿ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿವೆ. ಕೇರಳದ ದಕ್ಷಿಣ ಭಾಗಗಳಿಗೆ ನೈಋತ್ಯ ಮಾನ್ಸೂನ್ ಪ್ರವೇಶಿಸಿವೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಮಾಹಿತಿ ನೀಡಿದ್ದು, ಸಾಮಾನ್ಯವಾಗಿ ಜೂನ್ 1ರಂದೇ ನೈಋತ್ಯ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುತ್ತಿದ್ದವು. ಆದರೆ ಈ ವರ್ಷ 2 ದಿನಗಳ ಕಾಲ ತಡವಾಗಿದೆ. ಕೇರಳ ಪ್ರವೇಶಿಸಿರುವ ಮಾನ್ಸೂನ್ ಮಾರುತಗಳು ಭಾರತದಲ್ಲಿ ಬಾಲ್ಕು ತಿಂಗಳ ಕಾಲ ಸುಧೀರ್ಘ ಮಳೆಗಾಲದ ಆರಂಭವನ್ನು ಸೂಚಿಸುತ್ತವೆ ಎಂದು ಹೇಳಿದ್ದಾರೆ.

    ಅರಬ್ಬಿ ಸಮುದ್ರ ದಕ್ಷಿಣ ಭಾಗ, ಲಕ್ಷದ್ವೀಪ ಪ್ರದೇಶ, ದಕ್ಷಿಣ ಕೇರಳ, ದಕ್ಷಿಣ ತಮಿಳುನಾಡು, ಕೊಮೊರಿನ್- ಮಾಲ್ಡೀವ್ಸ್ ನ ಕೆಲ ಭಾಗಗಳು ಹಾಗೂ ಬಂಗಾಳಕೊಲ್ಲಿಯ ನೈಋತ್ಯ ಭಾಗಗಳಲ್ಲಿ ಇಂದು ಮಳೆಯಾಗಲಿದೆ ಎಂದು ವಿವರಿಸಿದ್ದಾರೆ.

  • ಮುಂಗಾರು ಆರಂಭ- ಬೀಜ, ಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು

    ಮುಂಗಾರು ಆರಂಭ- ಬೀಜ, ಗೊಬ್ಬರ ಖರೀದಿಗೆ ಮುಗಿಬಿದ್ದ ರೈತರು

    ಗದಗ: ಜಿಲ್ಲೆಯಲ್ಲಿ 2 ದಿನ ಲಾಕ್‍ಡೌನ್ ಸಡಿಲಿಕೆ ಇರುವುದರಿಂದ ಅನೇಕ ಕಡೆಗಳಲ್ಲಿ ಬೀಜ, ಗೊಬ್ಬರ ಖರೀದಿಗಾಗಿ ರೈತರು ಮುಗಿಬಿದ್ದಿದ್ದಾರೆ.

    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇದರಿಂದ ಗದಗ, ಲಕ್ಷ್ಮೇಶ್ವರ, ಗಜೇಂದ್ರಗಡ ಪಟ್ಟಣಗಳಲ್ಲಿ ಬೀಜ, ಗೊಬ್ಬರ ಖರೀದಿ ವೇಳೆ ಮಾಸ್ಕ್, ಸಾಮಾಜಿಕ ಅಂತರ ಮರೆತು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಂತರ ರೈತರು ಸರದಿ ಸಾಲಿನಲ್ಲಿ ನಿಂತು ರಸಗೊಬ್ಬರ ಪಡೆದರು. ಇದನ್ನೂ ಓದಿ: ಅನಾಥ ವೃದ್ಧೆಗೆ ತುತ್ತು ತಿನ್ನಿಸಿದ ಪೊಲೀಸ್ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ರಾಜ್ಯಕ್ಕೆ ಜೂನ್ 2ನೇ ವಾರದಲ್ಲಿ ಮುಂಗಾರು ಪ್ರವೇಶ ಮಾಡಲಿದ್ದು, ಮಳೆಯ ನಿರೀಕ್ಷೆ ಹಿನ್ನೆಲೆ ರೈತರು ಬೀಜ, ಗೊಬ್ಬರವನ್ನು ಖರೀದಿಸುತ್ತಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ವಿಧಿಸಲಾಗಿದ್ದು, ವಾರದಲ್ಲಿ 2 ದಿನ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರೈತರು ತಂಡೋಪತಂಡವಾಗಿ ಆಗಮಿಸಿ ಬೀಜ, ಗೊಬ್ಬರ ಖರೀದಿಸುತ್ತಿದ್ದಾರೆ.