Tag: monkeys

  • ಕಾಗೋಡು ಪಾಲ್ಗೊಂಡಿದ್ದ ಕಾರ್ಯಕ್ರಮದ ಸ್ಟೇಜ್ ನಲ್ಲಿ ಕೋತಿಗಳ ಕಿತಾಪತಿ!

    ಕಾಗೋಡು ಪಾಲ್ಗೊಂಡಿದ್ದ ಕಾರ್ಯಕ್ರಮದ ಸ್ಟೇಜ್ ನಲ್ಲಿ ಕೋತಿಗಳ ಕಿತಾಪತಿ!

    ಬಾಗಲಕೋಟೆ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ರೈತರ ಜೊತೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಕೋತಿಗಳು ಎಂಟ್ರಿಕೊಟ್ಟು ಆಹಾರವನ್ನು ಸೇವಿಸಿದ ಪ್ರಸಂಗ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಡೆದಿದೆ.

    ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಇಂದು ಕೂಡಲಸಂಗಮದ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಸಂತ್ರಸ್ತರ ಭೂಮಿ ಬೆಲೆ ನಿಗದಿಗಾಗಿ ರೈತರ ಜೊತೆ ಮಾತನಾಡುತ್ತಿದ್ದರು.

    ಈ ಸಂದರ್ಭದಲ್ಲಿ ಕೋತಿಗಳು ರಾಜರೋಷವಾಗಿ ವೇದಿಕೆಯ ಮೇಲೆ ಸಚಿವರಿಗಾಗಿ ಇಟ್ಟಿದ್ದ ಬಿಸ್ಕೆಟ್ ಸಹಿತ ತಿನಿಸುಗಳನ್ನು ತೆಗೆದುಕೊಂಡು ಹೋಗಿವೆ. ಅಷ್ಟೇ ಅಲ್ಲದೇ ಸಭೆಯ ಬ್ಯಾನರ್ ಮೇಲೆಯೂ ಕುಳಿತು ಆಟವಾಡಿವೆ. ಸಭೆಯಲ್ಲಿದ್ದ ಸಿಬ್ಬಂದಿ ಕೋತಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

    ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಅಲ್ಲದೇ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • ವಾನರ ಸೈನ್ಯದೊಂದಿಗೆ 3 ವರ್ಷದ ಬಾಲಕನ ಒಡನಾಟ- ಬೆಳಗ್ಗೆ ಬಂದು ಮಗುವನ್ನ ಎಬ್ಬಿಸ್ತವಂತೆ ಈ ಮಂಗಗಳು

    ವಾನರ ಸೈನ್ಯದೊಂದಿಗೆ 3 ವರ್ಷದ ಬಾಲಕನ ಒಡನಾಟ- ಬೆಳಗ್ಗೆ ಬಂದು ಮಗುವನ್ನ ಎಬ್ಬಿಸ್ತವಂತೆ ಈ ಮಂಗಗಳು

    ಹುಬ್ಬಳ್ಳಿ: ಸಾಮಾನ್ಯವಾಗಿ ಮಂಗಗಳನ್ನು ಕಂಡರೆ, ಅವು ಮೈ ಮೇಲೆ ಎರಗುತ್ತವೆಂಬ ಭಯದಿಂದ ಹೆದರಿ ಓಡವವರೇ ಹೆಚ್ಚು. ಆದರೆ ಇಲ್ಲೊಬ್ಬ ಬಾಲಕ ಪ್ರತಿನಿತ್ಯ ಮಂಗಗಳ ಜೊತೆಗೆ ಆಟ ಊಟ ಎಲ್ಲವನ್ನು ಮಾಡುತ್ತಾನೆ. ಇಂತಂಹ ಅಚ್ಚರಿಯ ಲವ್ ಕಹಾನಿಯೊಂದು ಜಿಲ್ಲೆಯಲ್ಲಿ ನಡೆದಿದೆ.

    ಮಂಗಗಳ ಜೊತೆ ಒಡನಾಟ ಬೆಳೆಸಿಕೊಂಡಿರೋ ಬಾಲಕನ ಹೆಸರು ಸಮರ್ಥ ಬಂಗಾರಿ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ನಂದಾ ಮತ್ತು ಸುನೀಲ್ ಅವರ ಪುತ್ರ. ಈತನಿಗೆ ಸುಮಾರು ಮೂರು ವರ್ಷ ವಯಸ್ಸು. ಆದರೆ ಮಂಗಗಳನ್ನು ಕಂಡರೆ ಭಯ ಪಡದೆ ದಿನಾಲೂ ಅವುಗಳ ಜೊತೆ ಆಟವಾಡುತ್ತಾನೆ. ಅವುಗಳು ಕೂಡ ಈ ಸಮರ್ಥ ಜೊತೆ ಸಲಿಗೆಯಿಂದ ಇರುತ್ತವೆ.

    ಕೆಲ ದಿನಗಳ ಹಿಂದೆ ಸಮರ್ಥ ಮನೆ ಮುಂದೆ ರೊಟ್ಟಿ ತಿನ್ನುತ್ತಾ ಕುಳಿತ್ತಿದ್ದಾಗ ಮಂಗಗಳು ಬಂದಿದ್ದವು. ಮೊದಲ ದಿನ ಮಂಗಗಳನ್ನು ನೋಡಿ ಹೆದರಿದ್ದ. ಆದರೆ ಮರುದಿನವೇ ಮತ್ತೆ ಮಂಗಗಳು ಬಂದಿದ್ದು, ಆಗ ಅವುಗಳಿಗೆ ರೊಟ್ಟಿಯನ್ನು ಕೊಟ್ಟಿದ್ದ. ಅಂದು ಆರಂಭವಾದ ಮಂಗಗಳ ಸ್ನೇಹ ಇನ್ನೂ ಹಾಗೇ ಮುಂದುವರೆದಿದೆ.

    ಮುಂಜಾನೆ ಅವುಗಳೇ ಬಂದು ಸಮರ್ಥ ಇನ್ನೂ ಮಲಗಿಕೊಂಡಿದ್ದರೆ ನಿದ್ದೆಯಿಂದ ಎಬ್ಬಿಸುತ್ತವೆ. ಮನೆ ಒಳಗೆ ಬಂದು ಹಾಸಿಗೆಯಿಂದ ಎಬ್ಬಿಸಿ ಆಟ ಆಡಲು ಕರೆದುಕೊಂಡು ಹೋಗುತ್ತವೆ. ಸಮರ್ಥ ಅವುಗಳಿಗೆ ಆಹಾರ ನೀಡಿ ಅವುಗಳೊಂದಿಗೆ ಆಟ ಆಡುತ್ತಾನೆ. ನಂತರ ಮಂಗಳಗಳು ಮುಂಜಾನೆ ಕೆಲವು ಸಮಯ ಸಮರ್ಥನೊಂದಿಗೆ ಕಾಲವನ್ನು ಕಳೆದು ಆಹಾರ ಅರಸಿಕೊಂಡು ಹೋಗುತ್ತವೆ.

    ಹೀಗೆ ದಿನ ನಿತ್ಯ ಸಮರ್ಥ ಸುಮಾರು ಒಂದು ಗಂಟೆಗಳ ಕಾಲ ಈ ವಾನರ ಸೈನ್ಯದೊಂದಿಗೆ ಕಳೆಯುತ್ತಾನೆ.

    https://www.youtube.com/watch?v=IA77D_kFC68

     

     

  • ಕೋಟೆನಾಡಿಗೆ ಮಂಗಗಳ ಕಾಟ – ಕೋತಿಗಳ ಟಾರ್ಚರ್‍ಗೆ ಪ್ರವಾಸಿಗರು ಹೈರಾಣ

    ಕೋಟೆನಾಡಿಗೆ ಮಂಗಗಳ ಕಾಟ – ಕೋತಿಗಳ ಟಾರ್ಚರ್‍ಗೆ ಪ್ರವಾಸಿಗರು ಹೈರಾಣ

    ಚಿತ್ರದುರ್ಗ: ಕೋಟೆನಾಡು ಐತಿಹಾಸಿಕ ತಾಣಗಳಿಗೆ ಪ್ರಸಿದ್ಧವಾದ ಸ್ಥಳವಾಗಿದೆ. ಆದ್ದರಿಂದ ಪ್ರತಿದಿನ ನೂರಾರು ಜನ ಪ್ರವಾಸಿಗರು ಈ ಸುಂದರ ತಾಣಗಳ ವೀಕ್ಷಣೆಗಾಗಿ ಭೇಟಿ ನೀಡುತ್ತಾರೆ. ಆದರೆ ಚಂದ್ರವಳ್ಳಿ ಅರಣ್ಯದ ಬಳಿ ಮಾತ್ರ ಮಂಗಗಳ ಕಾಟದಿಂದಾಗಿ ಪ್ರವಾಸಿಗರು ಹೈರಾಣಾಗುವಂತಾಗಿದೆ.

    ಜಿಲ್ಲೆಯ ಚಂದ್ರವಳ್ಳಿಯ ಅರಣ್ಯ ಪ್ರದೇಶವಿದ್ದು, ಇಲ್ಲಿನ ಬೆಟ್ಟಗುಡ್ಡಗಳ ಮಧ್ಯೆ ಐತಿಹಾಸಿಕ ಗುಹಾಂತರ ದೇವಾಲಯಗಳಿವೆ. ಹೀಗಾಗಿ ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಯಾರೊಬ್ಬರು ತಮ್ಮ ಕೈಯಲ್ಲಿ ಏನೂ ತರುವಂತಿಲ್ಲ. ಪ್ರವಾಸಿಗರು ತರುವಂತಹ ಹಣ್ಣು, ಬಿಸ್ಕಟ್, ಊಟ, ಉಪಹಾರ ಏನೇ ತಂದರೂ ಸಹ ಇಲ್ಲಿ ಬೀಡು ಬಿಟ್ಟಿರುವ ಮಂಗಗಳ ಪಾಲಾಗುತ್ತದೆ.

    ಅಷ್ಟೇ ಅಲ್ಲದೇ ಇಲ್ಲಿ ಪಾರ್ಕಿಂಗ್ ಮಾಡಿದ ಬೈಕ್‍ಗಳ ಸೀಟು, ಸೈಡ್ ಬ್ಯಾಗ್ ಹಾಗೂ ಕಾರುಗಳ ಕನ್ನಡಿ ಮಂಗಗಳ ದಾಳಿಗೆ ಎಲ್ಲಾ ಹಾಳಾಗಿರುತ್ತವೆ. ಇವುಗಳ ಬಗ್ಗೆ ಗೊತ್ತಿರುವ ಕೆಲವರು ಬೈಕಿನ ಮೇಲೆ ಮುಳ್ಳಿನ ಬೇಲಿಯನ್ನಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶಾಲಾ ವಿದ್ಯಾರ್ಥಿಗಳು, ಮಹಿಳೆಯರಂತೂ ಇಲ್ಲಿಗೆ ಬಂದು ಖುಷಿ ಪಡುವ ಬದಲು ಮಂಗಗಳಿಂದ ಭಯಪಡುವುದೇ ಹೆಚ್ಚಾಗಿದೆ ಎಂದು ಪ್ರವಾಸಿಗರಾದ ಪರಮೇಶ್ ಹೇಳಿದ್ದಾರೆ.

    ಇಲ್ಲಿನ ವ್ಯಾಪಾರಿಗಳು ಸಹ ಮಂಗಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಕೀಲರಾದ ಅಶೋಕ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಸದ್ಯಕ್ಕೆ ಈ ಚಂದ್ರವಳ್ಳಿ ಅರಣ್ಯ ಪ್ರದೇಶದಲ್ಲಿ ಸುಮಾರು 300 ಮಂಗಗಳು ಬೀಡು ಬಿಟ್ಟಿವೆ. ಈ ಮಂಗಗಳ ಚೇಷ್ಟೆ ಒಂದು ಕ್ಷಣ ಮನರಂಜನೆ ನೀಡಿದ್ರೆ ಮತ್ತೊಂದು ಕ್ಷಣ ಭಯವನ್ನು ಸೃಷ್ಠಿಸುತ್ತಿದೆ.

     

  • ಬೊಂಬೆನಾಡಿನಲ್ಲಿ ಅದ್ಧೂರಿಯಾಗಿ ನಡೆಯಿತು ಮಂಗಗಳ ತಿಥಿ

    ಬೊಂಬೆನಾಡಿನಲ್ಲಿ ಅದ್ಧೂರಿಯಾಗಿ ನಡೆಯಿತು ಮಂಗಗಳ ತಿಥಿ

    ರಾಮನಗರ: ನವೆಂಬರ್ 4ರಂದು ಪೇಟೆಯ ಬಳಿ ಮನೆಯ ಮೇಲಿದ್ದ ವಿದ್ಯುತ್ ತಂತಿಯನ್ನ ಸ್ಪರ್ಶಿಸಿ ಆರು ಕೋತಿಗಳು ಸಾವನ್ನಪ್ಪಿದ್ದವು. ಅಂದು ಮೃತಪಟ್ಟಿದ್ದ ಕೋತಿಗಳ ತಿಥಿ ಕಾರ್ಯವನ್ನು ಮನುಷ್ಯರ ತಿಥಿಗಿಂತ ಅದ್ಧೂರಿಯಾಗಿ ಗ್ರಾಮದ ಜನರು ಮಾಡಿದ್ದಾರೆ.

    ಸಾಮೂಹಿಕವಾಗಿ ಅಂತ್ಯ ಸಂಸ್ಕಾರವಾಗಿದ್ದ ಮಂಗಗಳಿಗಾಗಿ ಸ್ಥಳೀಯರೊಬ್ಬರು ಕೇಶ ಮುಂಡನ ಮಾಡಿಸಿಕೊಂಡು ತಿಥಿ ಕಾರ್ಯವನ್ನು ನೆರವೇರಿಸಿದ್ದಾರೆ. ಸಮಾಧಿ ಮೇಲೆ ನಾನಾ ಬಗೆಯ ತಿಂಡಿ ತಿನಿಸುಗಳನ್ನು ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ಜನರಿಗೆ ಪಲಾವ್, ಮೊಸರು ಅನ್ನವನ್ನು ಬಡಿಸಿ ಶ್ರಧ್ಧಾಭಕ್ತಿಯಿಂದ ಕಾರ್ಯವನ್ನು ನೆರವೇರಿಸಿದ್ದಾರೆ.

    ಕಳೆದ 4 ನೇ ತಾರೀಕು ಮಂಗಳವಾರ ಪೇಟೆಯ ಬಳಿ ಮನೆಯ ಮೇಲಿದ್ದ ವಿದ್ಯುತ್ ತಂತಿಯನ್ನ ಸ್ಪರ್ಶಿಸಿ ನಾಲ್ಕು ಕೋತಿಗಳು ನರಳಾಡುತ್ತಿದ್ದವು. ಈ ವೇಳೆ ಮತ್ತೆರೆಡು ಕೋತಿಗಳು ಪ್ರಾಣಾಪಾಯದಲ್ಲಿದ್ದ ಕೋತಿಗಳ ರಕ್ಷಿಸಲು ಹೋಗಿ 6 ಕೋತಿಗಳು ಸಹ ಸಾವನ್ನಪ್ಪಿದ್ದವು. ನಾವು ಎಲ್ಲಾ ಕೋತಿಗಳ ಅಂತ್ಯ ಸಂಸ್ಕಾರವನ್ನ ನೆರವೇರಿಸಿದ್ದೆವು. ಇಂದು ಕೋತಿಗಳಿಗೆ ಇಷ್ಟವಾಗಿದ್ದ ಪಧಾರ್ಥಗಳನ್ನು ಎಡೆಯಿಟ್ಟು, ತಿಥಿ ಕಾರ್ಯದಲ್ಲಿ ಪಾಲ್ಗೊಂಡಿದ್ದವರಿಗೆ ಅನ್ನದಾನ ಮಾಡಿದ್ದೇವೆ ಎಂದು ಸ್ಥಳೀಯ ಅಶೋಕ್ ಹೇಳಿದ್ದಾರೆ.

    ಮಂಗಗಳ ಸಾವು ಕಂಡು ಮರುಗಿದ ಗ್ರಾಮಸ್ಥರು ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಿದ್ದರು. ಮನುಷ್ಯರ ತಿಥಿಯಂತೆ ಪುರೋಹಿತರ ಮೂಲಕ ಪ್ರಾರ್ಥನೆ ಸಲ್ಲಿಸಿ ಮಂಗಗಳಿಗೆ ಇಷ್ಟವಾದ ರಸಾಯನ, ಪಂಚಾಮೃತ, ಕಡಲೇಕಾಯಿ, ಕಡ್ಲೆಪುರಿ, ಬಗೆ ಬಗೆಯ ಹಣ್ಣುಗಳು, ವಿವಿಧ ಸ್ವೀಟ್‍ಗಳು, ಅಲ್ಲದೆ ರೈಸ್‍ಬಾತ್, ಮೊಸರನ್ನ ಇನ್ನು ಅನೇಕ ತಿಂಡಿಗಳನ್ನು ಸಮಾಧಿಯ ಮೇಲೆ ನೈವೇದ್ಯವಾಗಿಟ್ಟು ತಿಥಿ ಮಾಡಿದ್ದೇವೆ. ಇನ್ನೂ ಮಂಗಗಳಿಗಾಗಿ ಮಿಡಿದ ಸೋಮು ಎಂಬವರು ಕೇಶಮುಂಡನ ಸಹ ಮಾಡಿಸಿಕೊಂಡಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದರು.

    ಇಂದು ಯಾರೋ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದರೆ. ಆತನ ಅಂತ್ಯಸಂಸ್ಕಾರ ನೆರವೇರಿಸೋಕೆ ಜನ ಮುಂದಾಗೋದಿಲ್ಲ. ಅಂತಹದರಲ್ಲಿ ಮೂಕಪ್ರಾಣಿಗಳಾದ ಮಂಗಗಳ ಸಾವಿಗೆ ಮಿಡಿದ ಜನ ಅಂತ್ಯಸಂಸ್ಕಾರ ನಡೆಸಿ ತಿಥಿಯನ್ನು ಕೂಡಾ ಮಾಡಿದ್ದಾರೆ. ಅಲ್ಲದೇ ಸಮಾಧಿ ಸ್ಥಳದಲ್ಲಿ ದೇಗುಲವೊಂದನ್ನು ನಿರ್ಮಿಸೋಕು ಸಹ ಮುಂದಾಗಿದ್ದಾರೆ.

  • ಮನುಷ್ಯತ್ವವನ್ನೇ ಮರೆತ ಜನ- 20 ಕ್ಕೂ ಹೆಚ್ಚು ಮಂಗಗಳ ಮಾರಣಹೋಮ

    ಮನುಷ್ಯತ್ವವನ್ನೇ ಮರೆತ ಜನ- 20 ಕ್ಕೂ ಹೆಚ್ಚು ಮಂಗಗಳ ಮಾರಣಹೋಮ

    ಉಡುಪಿ: 20 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿರುವ ಹೃದಯವಿದ್ರವಾಕ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೋಮೇಶ್ವರ ಬಳಿ ನಡೆದಿದೆ.

    ಬೇರೆ ಪ್ರದೇಶದಲ್ಲಿ ಮಂಗಗಳಿಗೆ ವಿಷಪ್ರಾಶನ ಮಾಡಿರುವ ದುಷ್ಕರ್ಮಿಗಳು, ನಾಲ್ಕು ಮೂಟೆಗಳಲ್ಲಿ ಮಂಗಗಳನ್ನು ತಂದು ಆಗುಂಬೆ ಘಾಟ್ ಎರಡನೇ ಸುತ್ತಿನಲ್ಲಿ ಎಸೆದು ಹೋಗಿದ್ದಾರೆ.

    ಮೂಕಪ್ರಾಣಿಗಳ ನರಳಾಟ ಕಂಡು ಮರುಗಿದ ಪ್ರವಾಸಿಗರು ತಕ್ಷಣ ಅವುಗಳಿಗೆ ನೀರು ಕುಡಿಸಿ ಆರೈಕೆ ಮಾಡಿದರಾದ್ರೂ, ಸ್ವಲ್ಪ ಸಮಯದಲ್ಲಿಯೇ ಮಂಗಗಳು ನರಳಿ ನರಳಿ ಸಾವನ್ನಪ್ಪಿವೆ.

    ಮಂಗಗಳು ತೋಟಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತವೆ ಎಂಬ ಕಾರಣದಿಂದ ತೋಟದ ಮಾಲೀಕರು ಮಂಗಗಳಿಗೆ ವಿಷಪ್ರಾಶನ ಮಾಡಿ ಇಲ್ಲಿ ತಂದು ಎಸೆದಿರಬಹುದು ಎಂಬ ಶಂಕೆ ಸ್ಥಳೀಯರಲ್ಲಿ ಮೂಡಿದೆ.

  • ಮಾತು ಬರಲ್ಲ, ಪ್ರಾಣಿಗಳಂತೆ ನಡಿಗೆ- ಕೋತಿಗಳೊಂದಿಗೆ ಜೀವಿಸ್ತಿದ್ದ 8ರ ಬಾಲಕಿಯ ರಕ್ಷಣೆ

    ಮಾತು ಬರಲ್ಲ, ಪ್ರಾಣಿಗಳಂತೆ ನಡಿಗೆ- ಕೋತಿಗಳೊಂದಿಗೆ ಜೀವಿಸ್ತಿದ್ದ 8ರ ಬಾಲಕಿಯ ರಕ್ಷಣೆ

    ಲಕ್ನೋ: ಕೋತಿಗಳ ಗುಂಪಿನೊಂದಿಗೆ ಬದುಕುತ್ತಿದ್ದ 8 ವರ್ಷದ ಬಲಕಿಯನ್ನು ಉತ್ತರಪ್ರದೇಶದ ಪೊಲೀಸರು ರಕ್ಷಿಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಎರಡು ತಿಂಗಳ ಹಿಂದೆ ಕತಾರ್ನಿಯಾ ವನ್ಯಜೀವ ಅಭಯಾರಣ್ಯ ವ್ಯಾಪ್ತಿಯ ಮೋತಿಪುರ್ ಪ್ರದೇಶದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಯದವ್ ಎಂದಿನಂತೆ ಗಸ್ತು ತಿರುಗುತ್ತಿದ್ರು. ಈ ವೇಳೆ ಈ ಬಾಲಕಿಯನ್ನು ನೋಡಿದ್ದಾರೆ. ಕೋತಿಗಳ ಜೊತೆ ಆರಾಮಾಗಿದ್ದ ಈ ಬಾಲಕಿಯನ್ನು ಯಾದವ್ ರಕ್ಷಿಸಲು ಯತ್ನಿಸಿದ್ದಾರೆ. ಆಗ ವಾನರ ಪಡೆ ಚೀರಾಡಲು ಶುರು ಮಾಡಿವೆ. ಅಲ್ಲದೆ ಆ ಬಾಲಕಿಯೂ ಕೂಡ ಚೀರಾಡಿದ್ದಾಳೆ. ಆದರೂ ಹೇಗೋ ಕಷ್ಟಪಟ್ಟು ಪೊಲೀಸರು ಬಾಲಕಿಯನ್ನ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಈ ಬಾಲಕಿಗೆ ಮಾತನಾಡಲು ಬರಲ್ಲ. ಹಾಗೆ ಯಾವುದೇ ಭಾಷೆ ಆಕೆಗೆ ಅರ್ಥವಾಗ್ತಿಲ್ಲ. ಮನುಷ್ಯರನ್ನ ನೋಡಿದ್ರೆ ಭಯಪಡ್ತಾಳೆ. ಜೊತೆಗೆ ಕೆಲವೊಮ್ಮೆ ವೈಲೆಂಟ್ ಆಗ್ತಾಳೆ ಅಂತ ಬಾಲಕಿಗೆ ಚಿಕಿತ್ಸೆ ನೀಡ್ತಿರೋ ವೈದ್ಯರು ಹೇಳಿದ್ದಾರೆ.

    ಚಿಕಿತ್ಸೆ ಬಳಿಕ ಬಾಲಕಿ ಸ್ವಲ್ಪ ಚೇತರಿಸಿಕೊಂಡಿದ್ದಾಳೆ. ಆದರೂ ಆಕೆಯ ಚೇತರಿಕೆ ತುಂಬಾ ನಿಧಾನಗತಿಯಲ್ಲಿದೆ. ಆಕೆ ಪ್ರಾಣಿಗಳಂತೆ ನೇರವಾಗಿ ಬಾಯಿಯಿಂದ ಊಟ ಮಾಡ್ತಿದ್ದಾಳೆ. ಆಕೆಯ ಚರ್ಮದ ಮೇಲೆ ಗುರುತುಗಳಿವೆ. ತುಂಬಾ ಸಮಯದಿಂದ ಆಕೆ ಕೋತಿಗಳ ಜೊತೆಯೇ ಜೀವಿಸಿರಬೇಕು. ಕೈಗಳು ಹಾಗೂ ಕಾಲುಗಳೆರಡನ್ನೂ ಬಳಸಿ ಪ್ರಾಣಿಗಳಂತೆಯೇ ನಡೆದಾಡುತ್ತಿದ್ದಳು. ಈಗ ಕೇವಲ ಎರಡು ಕಾಲಿನ ಮೇಲೆ ನಡೆದಾಡಲು ಆಕೆಗೆ ತರಬೇತಿ ನೀಡಲಾಗ್ತಿದೆ. ಆದ್ರೂ ಒಮ್ಮೊಮ್ಮೆ ಪ್ರಾಣಿಗಳಂತೆ ನಡೆಯುತ್ತಾಳೆ ಅಂತ ವೈದ್ಯರು ಹೇಳಿದ್ದಾರೆ.