Tag: monkeys

  • ಆಹಾರಕ್ಕಾಗಿ ಮೂಕ ರೋಧನೆ – ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ

    ಆಹಾರಕ್ಕಾಗಿ ಮೂಕ ರೋಧನೆ – ಅಂಜನಾದ್ರಿ ಬೆಟ್ಟದಲ್ಲಿ ಆಹಾರ, ನೀರಿಗಾಗಿ ಮಂಗಗಳ ನರಳಾಟ

    ಕೊಪ್ಪಳ: ಮಹಾಮಾರಿ ಕೊರೊನಾ ವೈರಸ್ ವಿಶ್ವದ ಮನುಕುಲವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ ಮೂಕ ಪ್ರಾಣಿಗಳನ್ನು ಕಂಗಾಲಾಗಿಸಿದೆ. ಕೊರೊನಾ ಭೀತಿಯಿಂದ ದೇಶವನ್ನು ಲಾಕ್‍ಡೌನ್ ಮಾಡಿ ಜನರಿಗೆ ಅಗತ್ಯ ವಸ್ತು, ಆಹಾರ ಒದಗಿಸುವ ಪ್ರಯತ್ನವೆನೋ ನಡೆಯುತ್ತಿದೆ. ಆದರೆ ಲಾಕ್‍ಡೌನಿಂದ ಆಹಾರ ಸಿಗದೇ ಮೂಕ ಪ್ರಾಣಿಗಳು ನರಳುತ್ತಿವೆ.

    ಕೊಪ್ಪಳ ಜಿಲ್ಲೆಯಲ್ಲಿರುವ ಆಂಜನೇಯ ಹುಟ್ಟಿದ ಸ್ಥಳ ಎಂದೇ ಪ್ರಖ್ಯಾತಿ ಪಡೆದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಸಾವಿರಾರು ಮಂಗಗಳು ನಿತ್ಯ ಆಹಾರಕ್ಕಾಗಿ ಪರದಾಡುವಂತಾಗಿದೆ. ಲಾಕ್‍ಡೌನ್‍ನಿಂದಾಗಿ ಕಳೆದ ಒಂದು ತಿಂಗಳನಿಂದ ದೇವಸ್ಥಾನದ ಬಾಗಿಲು ಮುಚ್ಚಿದ್ದು, ದೇವಸ್ಥಾನದಲ್ಲಿ ಭಕ್ತರು ನೀಡುತ್ತಿದ್ದ ಹಣ್ಣು, ಆಹಾರವನ್ನೇ ತಿಂದು ಬದುಕುತ್ತಿದ್ದ ಮಂಗಗಳು ಆಹಾರ ಸಿಗದೇ ಪರಿತಪಿಸುವಂತಾಗಿದೆ.

    ಸಾವಿರಾರು ಭಕ್ತರು ದೇವಸ್ಥನಕ್ಕೆ ಭೇಟಿ ನೀಡಿ ಮಂಗಗಳಿಗೂ ಆಹಾರ ನೀಡುತ್ತಿದ್ದರು. ಈಗ ದೇಗುಲಕ್ಕೆ ಭಕ್ತರು ಭೇಟಿ ನೀಡುತ್ತಿಲ್ಲ. ಹೀಗಾಗಿ ಮಂಗಗಳ ಸ್ಥಿತಿ ಮನಗಂಡ ದೇವಸ್ಥಾನದ ಆಡಳಿತ ಮಂಡಳಿ ಮಂಗಗಳಿಗೆ ನಿತ್ಯ ಆಹಾರ ಪೂರೈಕೆ ಮಾಡುತ್ತಿದೆ. ಈಗ ಪ್ರತಿನಿತ್ಯ ದೇವಸ್ಥಾನದಿಂದ ಮಂಗಗಳಿಗೆ ಮೂರು ಹೊತ್ತು ಶೇಂಗಾ, ಕಡಲೆ ಕಾಳು ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ.

    ಆದರೆ ನಿತ್ಯ ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಭಕ್ತರಿಂದಲು ಆಹಾರ ಸಿಗುತ್ತಿದ್ದ ಮಂಗಗಳಿಗೆ ಈಗ ಆಹಾರಕ್ಕೆ ಅಲೆದಾಡುವಂತ ಸ್ಥಿತಿ ಕೊರೊನಾದಿಂದ ನಿರ್ಮಾಣವಾಗಿದೆ. ದೇವಸ್ಥಾನದ ಕೆಳಗೆ ಇರುವ ಮಂಗಗಳು ಅಲ್ಲಿನ ಸಿಬ್ಬಂದಿ ನೀಡುತ್ತಿರುವ ಆಹಾರ ತಿಂದು ಜೀವ ಉಳಿಸಿಕೊಂಡಿವೆ. ಆದ್ರೆ ಬೆಟ್ಟದ ಮೇಲಿರುವ ಸಾವಿರಾರು ಮಂಗಗಳು ಆಹಾರ, ನೀರು ಸಿಗದೇ ನರಳಾಡುತ್ತಿವೆ.

  • ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು: ಚಂದನ್

    ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು: ಚಂದನ್

    – ನಂದಿ ಬೆಟ್ಟದಲ್ಲಿರುವ ಮಂಗಳಿಗೆ ಬಾಳೆಹಣ್ಣು ನೀಡಿದ ನಟ

    ಬೆಂಗಳೂರು: ಗುಂಪು ಸೇರುವುದಕ್ಕಿಂತ 500 ಕೋತಿಗಳಿಗೆ ಆಹಾರ ನೀಡುವುದು ಒಳ್ಳೆಯದು ಎಂದು ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಅವರು ಹೇಳಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ದೇಶ ಲಾಕ್‍ಡೌನ್ ಆಗಿದೆ. ಜನರಿಗೆ ಊಟ ಸಿಗದೆ ಪರಾದಾಡುತ್ತಿದ್ದಾರೆ. ಇನ್ನೂ ಈ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ಕಷ್ಟವಂತು ಹೇಳತೀರದು. ಹಾಗಾಗಿ ಹಲವಾರು ಈ ಲಾಕ್‍ಡೌನ್ ಸಮಯದಲ್ಲಿ ಪ್ರಾಣಿ ಪಕ್ಷಿಗಳ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಅಂತಯೇ ನಟ ಚಂದನ್ ಅವರು ಕೂಡ ನಂದಿ ಬೆಟ್ಟಕ್ಕೆ ತೆರಳಿ ಅಲ್ಲಿನ ಕೋತಿಗಳಿಗೆ ಬಾಳೆಹಣ್ಣು ನೀಡಿ ಬಂದಿದ್ದಾರೆ.

    https://www.instagram.com/p/B-cJpFwAw91/

    ಈ ವಿಚಾರವಾಗಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಚಂದನ್, ಪಾಠವನ್ನು ಕಲಿತೆ. ಸಾಮಾಜಿಕ ಅಂತರ ಎಂಬುದನ್ನು ನಾವು ಯಾವಾಗ ಕಲಿಯುತ್ತೆವೆ ಎಂದರೆ, 500 ಮಂಗಗಳಿಗೆ ಆಹಾರ ನೀಡುವುದು ಗುಂಪು ಸೇರುವುದಕ್ಕಿಂತ ಒಳ್ಳೆಯದು ಎಂದು ನಮಗೆ ಅರ್ಥವಾದಾಗ ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಕೋತಿಗೆ ಬಾಳೆಹಣ್ಣು ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    https://www.instagram.com/p/B-CN2ddgZeM/

    ನಂದಿ ಬೆಟ್ಟದಲ್ಲಿ ಸಾಕಷ್ಟು ಮಂಗಗಳು ಇದ್ದಾವೆ. ಇವುಗಳು ಅಲ್ಲಿಗೆ ಬರುವ ಪ್ರವಾಸಿಗರು ನೀಡುವ ಆಹಾರವನ್ನು ನಂಬಿ ಮತ್ತು ಅಲ್ಲಿನ ಅಂಗಡಿಗಳನ್ನು ನಂಬಿ ಬದುಕುತ್ತಿದ್ದವು. ಈಗ ದೇಶವೇ ಲಾಕ್‍ಡೌನ್ ಆಗಿದೆ. ಜೊತೆಗೆ ನಂದಿ ಬೆಟ್ಟದ ಬಾಗಿಲು ಮುಚ್ಚಿದೆ. ಅಲ್ಲಿಗೆ ಯಾವುದೇ ಪ್ರವಾಸಿಗರು ಹೋಗುತ್ತಿಲ್ಲ. ಅಂಗಡಿಗಳು ತೆರೆಯುತ್ತಿಲ್ಲ. ಆದ್ದರಿಂದ ಅಲ್ಲಿರುವ ಸಾವಿರಾರು ಮಂಗಗಳು ಹಸಿವಿನಿಂದ ಬಳಲುತ್ತಿವೆ. ಇದನ್ನು ಅರಿತ ಚಂದನ್ ಅಲ್ಲಿಗೆ ಹೋಗಿ ಅವುಗಳಿಗೆ ಆಹಾರ ನೀಡಿದ್ದಾರೆ.

    https://www.instagram.com/p/B9WlVsagIVt/

    ಸಾಕಷ್ಟು ಸಿನಿಮಾ ನಟ-ನಟಿಯರು ಕೂಡ ತಮ್ಮ ಮನೆ ಅಕ್ಕಪಕ್ಕ ನಾಯಿಗಳು ಮತ್ತು ಬೀದಿನಾಯಿಗಳಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ ಐಂದ್ರಿಂತಾ ರೇ ಅವರು ತಮ್ಮ ಮನೆಯ ಅಕ್ಕಪಕ್ಕದ ಬೀದಿನಾಯಿಗಳಿಗೆ ಊಟ ನೀಡಿದ್ದರು. ಈ ಹಿಂದೆ ಸಂಯುಕ್ತ ಹೊರನಾಡು ಅವರು ಕೂಡ ತಮ್ಮ ಸ್ನೇಹಿತ ಬಳಗವನ್ನು ಕಟ್ಟಿಕೊಂಡು ಬೆಂಗಳೂರಿನ ಹಲವಡೆ ಬೀದಿನಾಯಿಗಳಿಗೆ ಆಹಾರ ನೀಡಿದ್ದರು.

  • ಹಸಿವಿನಿಂದ ಬಳಲುತ್ತಿದ್ದ ಕೋತಿಗಳಿಗೆ ಹಣ್ಣು ತಿನ್ನಿಸಿದ ಪೊಲೀಸರು

    ಹಸಿವಿನಿಂದ ಬಳಲುತ್ತಿದ್ದ ಕೋತಿಗಳಿಗೆ ಹಣ್ಣು ತಿನ್ನಿಸಿದ ಪೊಲೀಸರು

    ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಈ ಮಧ್ಯೆ ತಿನ್ನಲು ಆಹಾರ ಸಿಗದೇ ಅದೆಷ್ಟೋ ಮೂಕ ಪ್ರಾಣಿಗಳು ಬಳಲುತ್ತಿದೆ. ಹೀಗೆ ಹಸಿವಿನಿಂದ ರೋಧಿಸುತ್ತಿದ್ದ ಕೋತಿಗಳಿಗೆ ಸಿಲಿಕಾನ್ ಸಿಟಿ ಪೊಲೀಸರು ಹಣ್ಣು ನೀಡಿ ಮಾನವೀಯತೆ ಮೆರೆದಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಬೆಂಗಳೂರಿನ ಕೆಆರ್ ಮಾರ್ಕೆಟ್ ಬಂದ್ ಆಗಿದೆ. ವ್ಯಾಪಾರಿಗಳು ತಮ್ಮ ಬಳಿ ಉಳಿಯುತ್ತಿದ್ದ ತರಕಾರಿ ಅಥವಾ ಹಣ್ಣುಗಳನ್ನು ಸ್ಥಳದಲ್ಲಿ ಇರುತ್ತಿದ್ದ ಕೋತಿಗಳಿಗೆ ನೀಡುತ್ತಿದ್ದರು. ಹೀಗಾಗಿ ಸ್ಥಳದಲ್ಲಿದ್ದ ಕೋತಿಗಳ ಹೊಟ್ಟೆ ತುಂಬುತ್ತಿತ್ತು. ಆದರೆ ಈಗ ಕೆಆರ್ ಮಾರ್ಕೆಟ್ ಬಂದ್ ಆಗಿರುವ ಹಿನ್ನೆಲೆ ಕೋತಿಗಳಿಗೆ ಆಹಾರ ಸಿಗುತ್ತಿಲ್ಲ. ಹಸಿವಿನಿಂದ ಮೂಕ ಪ್ರಾಣಿಗಳು ರೋಧಿಸುತ್ತಿದ್ದ ದೃಶ್ಯವನ್ನು ಕಂಡ ಸಬ್ ಇನ್ಸ್‌ಪೆಕ್ಟರ್ ಭಗವಂತ್ ಅವರು ಕೋತಿಗಳಿಗೆ ಹಣ್ಣು ತಿನ್ನಲು ನೀಡಿ ಅವುಗಳ ಹಸಿವು ನೀಗಿಸಿದ್ದಾರೆ.

    ಎಸ್‍ಐ ಅವರು ಕೋತಿಗಳಿಗೆ ಕಲ್ಲಂಗಡಿ ಹಣ್ಣನ್ನು ನೀಡಿ ಹಸಿವು ನೀಗಿಸಿದ್ದಾರೆ. ಎಸ್‍ಐ ಅವರು ಕೋತಿಗಳಿಗೆ ಹಣ್ಣು ನೀಡುವಾಗ ಪೊಲೀಸ್ ಸಿಬ್ಬಂದಿಯೊಬ್ಬರು ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಕೊಟ್ಟು ಸಹಾಯ ಮಾಡಿದ್ದಾರೆ. ಹಣ್ಣು ನೀಡುತ್ತಿದ್ದಂತೆ ಕೋತಿಗಳು ಬಂದು ಅದನ್ನು ತೆಗೆದುಕೊಂಡು ತಿಂದು ಅವುಗಳ ಹೊಟ್ಟೆ ತುಂಬಿಸಿಕೊಂಡಿವೆ. ಈ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

  • ಬಿಜೆಪಿಯವರು ಕೋತಿಗಳು – ಬೈರತಿ ಸುರೇಶ್

    ಬಿಜೆಪಿಯವರು ಕೋತಿಗಳು – ಬೈರತಿ ಸುರೇಶ್

    ಬೆಂಗಳೂರು: ಬಿಜೆಪಿಗರು ಕೋತಿಗಳು. ಬಿಜೆಪಿಯವರು ಯಾವತ್ತುನೂ ಕೋತಿ ತಾನು ತಿಂದು ಬಿಟ್ಟು, ಮೇಕೆ ಮೂತಿಗೆ ಒರೆಸುವುದು ಅವರ ಪ್ರವೃತ್ತಿ ಅಂತ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸಿ ಹೆಬ್ಬಾಳ ಸಾರ್ವಜನಿಕರ ಶಾಂತಿ ಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಬೈರತಿ ಸುರೇಶ್ ಈ ಹೇಳಿಕೆಯನ್ನು ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪರ ಮಾತನಾಡುವ ಕೆಲ ಬಿಜೆಪಿಗರನ್ನು ಕೋತಿಗಳು ಅನ್ನದಿದ್ರೆ ಮತ್ತೇನು ಹೇಳಬೇಕು ಎಂದು ಪ್ರಶ್ನಿಸಿದರು.

    ಕಾಯ್ದೆ ಬೇಕು ಬೇಡ ಅಂತಲ್ಲ. ಮೊದಲು ಹೊಟ್ಟೆಗೆ ಊಟ ಕೊಡಿ. ಮಹಿಳೆಯರಿಗೆ ರಕ್ಷಣೆ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಈ ಕಾಯ್ದೆ ಸಂಬಂಧ ದೇಶಾದ್ಯಂತ ದೊಡ್ಡ ಮಟ್ಟದ ಅಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಆದರೆ ನಮ್ಮ ಕರ್ನಾಟಕದಲ್ಲಿ ಯಾವುದೇ ಹಿಂಸಾ ಘಟನೆಗಳು ನಡೆದಿಲ್ಲ. ನಮ್ಮ ಕರ್ನಾಟಕದ ಜನ ಶಾಂತಿ ಸ್ವಭಾವದವರು ಎಂದು ತಿಳಿಸಿದರು.

  • ತಿಂಡಿ ಕೊಟ್ರೆ ಸೆಲ್ಫಿಗೆ ಪೋಸ್ ಕೊಡ್ತಾಳೆ ರಾಣಿ, ಸಿಟ್ಟಿಗೇಳ್ತಾನೆ ಜಾನ್- ಇದು ಕೋತಿಗಳ ಲವ್ ಸ್ಟೋರಿ

    ತಿಂಡಿ ಕೊಟ್ರೆ ಸೆಲ್ಫಿಗೆ ಪೋಸ್ ಕೊಡ್ತಾಳೆ ರಾಣಿ, ಸಿಟ್ಟಿಗೇಳ್ತಾನೆ ಜಾನ್- ಇದು ಕೋತಿಗಳ ಲವ್ ಸ್ಟೋರಿ

    ಯಾದಗಿರಿ: ಸಾಮಾನ್ಯವಾಗಿ ಹುಡುಗ, ಹುಡಗಿ ಲವ್ ಮಾಡೋದನ್ನ ನೋಡಿರುತ್ತೀರಿ. ತನ್ನ ಹುಡುಗಿ ಯಾರ ಜೊತೆಗಾದ್ರು ಮಾತಾಡಿದರೆ ಹುಡುಗ ಸಿಟ್ಟು ಮಾಡಿಕೊಳ್ಳುವುದು ಸಹಜ. ಆದರೆ ಯಾದಗಿರಿಯಲ್ಲಿ ಒಂದು ಡಿಫರೆಂಟ್ ಜೋಡಿ ಸಖತ್ ಫೇಮಸ್ ಆಗಿದ್ದಾರೆ.

    ಲವರ್ಸ್ ಅಂದಾಕ್ಷಣ ಯಾವುದೋ ಹುಡುಗ ಹುಡುಗಿ ಅನ್ಕೊಬೇಡಿ. ಯಾದಗಿರಿಯಲ್ಲಿ ಸಖತ್ ಸದ್ದು ಮಾಡುತ್ತಿರೋದು ಎರಡು ಕೋತಿಗಳು ಲವ್ ಸ್ಟೋರಿ. ಹೌದು ಯಾದಗಿರಿಯ ದೇವದುರ್ಗ ಕ್ರಾಸ್ ಬಳಿ ಈ ಕ್ಯೂಟ್ ಕೋತಿಗಳು ಇರುತ್ತವೆ. ಇಲ್ಲಿನ ಜನರು ಈ ಕೋತಿ ಜೋಡಿಗೆ ಜಾನ್ ಮತ್ತು ರಾಣಿ ಅಂತ ಹೆಸರನ್ನು ಕೂಡ ಇಟ್ಟಿದ್ದಾರೆ. ಈ ರಾಣಿ, ಜಾನ್ ಜೋಡಿಗೆ ಮಾಂಸ ಮತ್ತು ಸಸ್ಯ ಎರಡು ಬಗೆಯ ತಿಂಡಿ ತಿನಿಸುಗಳು ಅಚ್ಚುಮೆಚ್ಚು. ಆದರೆ ರಾಣಿಗೆ ಮೊಸರು ಎಂದರೆ ಸಿಕ್ಕಪಟ್ಟೆ ಇಷ್ಟ. ಹೀಗಾಗಿ ಮೊಸರು ಕೊಟ್ಟರೆ ಸಾಕು ರಾಣಿ ಸೆಲ್ಫಿ ಸಖತ್ ಪೋಸ್ ಕೊಡುತ್ತಾಳೆ.

    ಮೊಸರು ಅಥವಾ ತಿನ್ನೋಕೆ ತಿಂಡಿ ಕೊಟ್ಟರೆ ಸೆಲ್ಫಿಗೆ ಪೋಸ್ ಕೊಡುವ ರಾಣಿಯ ಗುಣ ಜಾನ್‍ಗೆ ಒಂದು ಸ್ವಲ್ಪವೂ ಇಷ್ಟ ಇಲ್ಲ. ಯಾರಾದರು ರಾಣಿ ಜೊತೆ ಸೆಲ್ಫಿ ತಗೆದುಕೊಂಡರೆ ಜಾನ್ ಸಿಟ್ಟು ಮಾಡಿಕೊಂಡು ಚಾವಣಿ ಏರಿಬಿಡುತ್ತಾನೆ. ಈ ಎರಡು ಕೋತಿಗಳ ಲವ್‍ಗೆ ದೇವದುರ್ಗ ಕ್ರಾಸ್ ಬಳಿ ಇರುವ ವ್ಯಾಪಾರಿಗಳು ಫುಲ್ ಫೀದಾ ಆಗಿದ್ದಾರೆ. ಈ ಕೋತಿಗಳೆಂದರೆ ಇಲ್ಲಿನ ನಿವಾಸಿಗಳಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ತಮ್ಮ ಮಕ್ಕಳಂತೆ ಈ ಕೋತಿಗಳನ್ನು ಸ್ಥಳೀಯರು ನೋಡಿಕೊಳ್ಳುತ್ತಿದ್ದಾರೆ.

  • ಕೋತಿಗಳ ನಡುವೆ ಗ್ಯಾಂಗ್ ವಾರ್ – ವಾನರ ಕಾಳಗಕ್ಕೆ ಬೆಚ್ಚಿಬಿದ್ದ ಜನ

    ಕೋತಿಗಳ ನಡುವೆ ಗ್ಯಾಂಗ್ ವಾರ್ – ವಾನರ ಕಾಳಗಕ್ಕೆ ಬೆಚ್ಚಿಬಿದ್ದ ಜನ

    ಚಿಕ್ಕಬಳ್ಳಾಪುರ: ರೌಡಿಗಳ ನಡುವೆ ಗ್ಯಾಂಗ್ ವಾರ್ ನಡೆಯೋದು ಸಾಮಾನ್ಯ ಆದರೆ ಎರಡು ಕೋತಿಗಳ ಗುಂಪು ಗ್ಯಾಂಗ್ ವಾರ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ನಡೆದಿದೆ.

    ಚಿಂತಾಮಣಿ ನಗರದ ಎನ್.ಆರ್ ಬಡಾವಣೆ ಬಳಿ ಎರಡು ಕೋತಿಗಳ ಗುಂಪಿನ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಗಲಾಟೆ ನಡೆದಿದೆ. ಕೋತಿಗಳ ಗುಂಪುಗಳು ನಾನಾ, ನೀನಾ ಅಂತ ಕಾದಾಡಿದ್ದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೋತಿಗಳ ಗುಂಪಿನ ಗ್ಯಾಂಗ್ ವಾರ್ ವಿಡಿಯೋವನ್ನ ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು ವಾನರ ಕಾದಾಟ ಬೆಚ್ಚಿಬೀಳಿಸುವಂತಿದೆ.

    ಅದ್ಯಾವ ಕಾರಣಕ್ಕೆ ಈ ಕೋತಿಗಳು ಕಾದಾಡಿದವೋ ಗೊತ್ತಿಲ್ಲ. ಆದರೆ ಮೈ ಕೈ ಗಾಯ ಆಗಿ ರಕ್ತ ಬರೋವವರೆಗೂ ಈ ಕೋತಿಗಳು ಬಡಿದಾಡಿಕೊಂಡಿವೆ. ಕೊನೆಗೆ ಸಾರ್ವಜನಿಕರು ಕೋತಿಗಳನ್ನ ಚದುರಿಸಿ ಕಾಳಗಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸಿದರೂ ಕಾದಾಟ ನಿಲ್ಲಿಸದ ಕೋತಿಗಳು ರಸ್ತೆ ಬದಿಯ ಅಂಗಡಿಗಳ ಓಳ ಭಾಗಕ್ಕೂ ನುಗ್ಗಿ ಕಿತ್ತಾಡಿವೆ.

    ಚಿಂತಾಮಣಿ ನಗರದಲ್ಲಿ ಕೋತಿಗಳ ಉಪಟಳ ಮೀತಿ ಮೀರಿದ್ದು, ಸಾರ್ವಜನಿಕರು ಕೋತಿಗಳ ಕಾಟಕ್ಕೆ ಬ್ರೇಕ್ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

  • ಮಂಗಗಳ ಹಾವಳಿ ತಪ್ಪಿಸಲು ನಾಯಿಗೆ ಹುಲಿಯ ಬಣ್ಣ ಬಳಿದ ರೈತ

    ಮಂಗಗಳ ಹಾವಳಿ ತಪ್ಪಿಸಲು ನಾಯಿಗೆ ಹುಲಿಯ ಬಣ್ಣ ಬಳಿದ ರೈತ

    ಶಿವಮೊಗ್ಗ: ಮಲೆನಾಡಿನಲ್ಲಿ ಹೆಚ್ಚುತ್ತಿರುವ ಮಂಗಗಳ ಹಾವಳಿಯನ್ನು ತಡೆಯಲು ರೈತರು ವಿವಿಧ ಉಪಾಯಗಳ ಮೊರೆ ಹೋಗುತ್ತಿದ್ದಾರೆ.

    ಮಂಗಗಳ ಹಾವಳಿಯಿಂದ ಬೆಳೆ ರಕ್ಷಿಸಲು ಇಲ್ಲೊಬ್ಬ ರೈತ ಭರ್ಜರಿ ಪ್ಲಾನ್ ಮಾಡಿದ್ದು, ನಾಯಿಗೆ ಹುಲಿಯ ಬಣ್ಣವನ್ನು ಬಳಿದಿದ್ದಾರೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನಲ್ಲೂರು ಗ್ರಾಮದ ಶ್ರೀಕಾಂತ ಗೌಡ ಎಂಬವರು ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ರೈತರೊಬ್ಬರು ಹುಲಿಯ ರೀತಿಯ ದೊಡ್ಡ ಗೊಂಬೆಯನ್ನು ಇಡುವ ಮೂಲಕ ಮಂಗಗಳಿಂದ ಬೆಳೆ ರಕ್ಷಿಸಲು ಮುಂದಾಗಿದ್ದರು. ಇದರಿಂದಾಗಿ ಮಂಗಗಳು ಬೆಳೆ ಹತ್ತಿರ ಬಂದಿರಲಿಲ್ಲ. ಅಲ್ಲದೆ ಎರಡು ದಿನಗಳ ನಂತರ ಈ ಗೊಂಬೆಯನ್ನು ಬೇರೆ ಸ್ಥಳದಲ್ಲಿ ಇರಿಸಿದ್ದರು. ಇದೂ ಫಲಕಾರಿಯಾಗಿತ್ತು. ಇದನ್ನೂ ಓದಿ: ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಇದೇ ರೀತಿಯ ಉಪಾಯವನ್ನು ಶ್ರೀಕಾಂತ ಗೌಡ ಅವರು ಮಾಡಿದ್ದಾರೆ. ಆದರೆ ಇದರ ಮೇಲೆಯೇ ಹೆಚ್ಚು ದಿನಗಳ ಕಾಲ ಅವಲಂಬಿತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಅರಿತು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ನಾಯಿಗೆ ಹುಲಿಯ ರೀತಿಯ ಬಣ್ಣ ಬಳಿಯಲು ನಿರ್ಧರಿಸಿದ್ದಾರೆ. ನಾಯಿಗೆ ಹುಲಿಯ ರೀತಿಯ ಬಣ್ಣವನ್ನು ಬಳಿದು ತೋಟದಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಿದ್ದಾರೆ.

    ಇದು ಹೇರ್ ಡೈ ಆಗಿದ್ದರಿಂದ ಬೇಗ ಬಣ್ಣ ಹೋಗುವುದಿಲ್ಲ. ತಿಂಗಳ ಕಾಲ ಇರಲಿದೆ. ಅಲ್ಲದೆ ಇದರಿಂದ ನಾಯಿಗೂ ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ. ಹೀಗೆ ಮಾಡಿದ್ದರಿಂದ ಮಂಗಗಳ ಹಾವಳಿ ತಪ್ಪಿದೆ ಎಂದು ಶ್ರೀಕಾತ ಗೌಡ ಅವರು ವಿವರಿಸಿದ್ದಾರೆ.

    ಸೊರಬ ತಾಲೂಕಿನ ಕಕ್ಕರಸಿಯ ಮತ್ತೋರ್ವ ರೈತ ಜೆ.ಎಸ್.ಚಿದಾನಂದಗೌಡ ಅವರು, ಇನ್ನೊಂದು ವಿಭಿನ್ನ ಪ್ರಯತ್ನ ಮಾಡಿದ್ದು, ನಾಯಿಗಳು ಬೊಗಳುವ ಶಬ್ದದ ಆಡಿಯೋವನ್ನು ಹೊಲದ ವಿವಿಧ ಭಾಗಗಳಲ್ಲಿ ಕೇಳುವಂತೆ ಮಾಡಿದ್ದಾರೆ. ಇದಕ್ಕಾಗಿ ಸ್ಪೀಕರ್ ಗಳನ್ನು ಅಳವಡಿಸಿಕೊಂಡಿದ್ದು, ಇದರಿಂದಲೂ ಮಂಗಗಳು ತೋಟದ ಹತ್ತಿರ ಬರದಂತೆ ತಡೆಯುತ್ತಿದ್ದಾರೆ.

    ಮಲೆನಾಡಿನ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಸರ್ಕಾರ ಸಹ ಕ್ರಮ ಕೈಗೊಳ್ಳಲು ಮುಂದಾಗಿದೆ. ಅರಣ್ಯ ಪ್ರದೇಶದಲ್ಲಿ ಮಂಕಿ ಪಾರ್ಕ್ ನಿರ್ಮಿಸಿ ಅಲ್ಲಿಯೇ ಮಂಗಗಳ ವಾಸಕ್ಕೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಈ ಕುರಿತು ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ತಿಂಗಳಲ್ಲಿ ಮಂಕಿ ಪಾರ್ಕ್ ನಿರ್ಮಾಣವಾಗಲಿದೆ.

  • ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ

    ಸಿಕ್ಕಸಿಕ್ಕವರನ್ನು ಕಚ್ಚಿ, ದಾಳಿ ಮಾಡ್ತಿರೋ ವಾನರ ಸೇನೆ

    – 8ರಿಂದ 10 ಮಂದಿ ಮೇಲೆ ದಾಳಿ

    ಬೀದರ್: ದರೋಡೆಕೋರರಿಗೆ ಹೆದರಿ ಜನರು ಮನೆಯಿಂದ ಹೊರಗೆ ಬಾರದ ಪ್ರಕರಣ ಬಗ್ಗೆ ಕೇಳಿರುತ್ತೇವೆ, ನೋಡಿರುತ್ತೇವೆ. ಆದರೆ ಬೀದರ್‌ನ ಗ್ರಾಮವೊಂದರಲ್ಲಿ ಮಂಗಗಳಿಗೆ ಹೆದರಿ ಗ್ರಾಮಸ್ಥರು ಮನೆಯಲ್ಲಿ ಕೂರುವಂತ ಸ್ಥಿತಿ ನಿರ್ಮಾಣವಾಗಿದೆ.

    ಹೌದು ಜಿಲ್ಲೆಯ ಭಾಲ್ಕಿ ತಾಲೂಕಿನ ಜವಳಗಾ ಗ್ರಾಮಸ್ಥರು ಮಂಗಗಳ ಹಾವಳಿಗೆ ಹೆದರಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಜವಳಗಾ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಸುಮಾರು 2 ತಿಂಗಳಲ್ಲಿ ಗ್ರಾಮದ 8 ರಿಂದ 10 ಮಂದಿ ಮೇಲೆ ಮಂಗಗಳು ಕಚ್ಚಿ, ದಾಳಿ ನಡೆಸಿವೆ. ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಕಾರಣವಿಲ್ಲದೆ ಮಂಗಗಳು ದಾಳಿ ಮಾಡುತ್ತಿವೆ. ಜನರನ್ನು ಕಂಡರೆ ಸಾಕು ಅವರ ಮೇಲೆ ಎಗರಿ, ಕಚ್ಚಿ ಗಾಯಗೊಳಿಸುತ್ತಿವೆ. ಆದ್ದರಿಂದ ಮಂಗಗಳು ಯಾವಾಗ? ಯಾರ ಮೇಲೆ ದಾಳಿ ಮಾಡುತ್ತವೋ ಎನ್ನುವ ಭಯದಲ್ಲಿ ಇಲ್ಲಿನ ಜನರು ಬದುಕುತ್ತಿದ್ದಾರೆ.

    ಈ ಗ್ರಾಮದ ಜನರು ವಾನರ ಸೈನ್ಯದ ದಾಳಿಗೆ ಹೆದರಿ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮಂಗಗಳು ಹಿಂಡು ಹಿಂಡಾಗಿ ಬಂದು ಜನರ ಮೇಲೆ ದಾಳಿ ಮಾಡುತ್ತಿದ್ದು, ಗಾಯಗಳಿಗೆ 15-20 ಹೊಲಿಗೆಗಳು ಹಾಕುವ ರೀತಿ ತೀವ್ರವಾಗಿ ಮಂಗಗಳು ಜನರನ್ನು ಗಾಸಿಗೊಳಿಸುತ್ತಿದೆ. ದರೋಡೆಕೋರು ಚಾಕುವಿನಿಂದ ಭೀಕರವಾಗಿ ಹಲ್ಲೆ ಮಾಡುವ ರೀತಿ ಮಂಗಗಳು ಜನರ ಮೇಲೆ ದಾಳಿ ಮಾಡುತ್ತಿವೆ.

    ಸತತ ಎರಡು ತಿಂಗಳಿನಿಂದ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಜನರ ಮೇಲೆ ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ. ಆದಷ್ಟು ಬೇಗ ಈ ಬಗ್ಗೆ ಕ್ರಮ ತೆಗೆದುಕೊಂಡು ಮಂಗಗಳ ಕಾಟದಿಂದ ಮುಕ್ತಿಗೊಳಿಸಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

  • ಮಂಗಗಳ ಪಾರ್ಕ್ ನಿರ್ಮಾಣದಿಂದ ಯುವಕರ ವಲಸೆ ತಪ್ಪಲಿದೆ – ಅರಗ ಜ್ಞಾನೇಂದ್ರ

    ಮಂಗಗಳ ಪಾರ್ಕ್ ನಿರ್ಮಾಣದಿಂದ ಯುವಕರ ವಲಸೆ ತಪ್ಪಲಿದೆ – ಅರಗ ಜ್ಞಾನೇಂದ್ರ

    ಬೆಂಗಳೂರು: ಮಂಗಗಳ ಪಾರ್ಕ್ ನಿರ್ಮಾಣದಿಂದಾಗಿ ಕೃಷಿ ಬಿಟ್ಟು ಪಟ್ಟಣಗಳಿಗೆ ವಲಸೆ ಬರುತ್ತಿರುವ ಯುವಕರನ್ನು ತಡೆಯಬಹುದಾಗಿದೆ ಎಂದು ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ರೀತಿಯ ಪ್ರಾಣಿಗಳ ತೊಂದರೆಯಿಂದ ಯುವ ಸಮೂಹ ಕೃಷಿ ಮಾಡದೇ ಪಟ್ಟಣಗಳಿಗೆ ವಲಸೆ ಬರುತ್ತಿದ್ದಾರೆ. ಆ ಭಾಗದಲ್ಲಿ ಪ್ರಾಣಿಗಳ ಸಂತತಿ ತುಂಬಾ ಹೆಚ್ಚಾಗಿದೆ. ವಿಶೇಷವಾಗಿ ಕಾಡುಕೋಣ, ಮಂಗ ಹಾಗೂ ಹಂದಿ ಸಾಕಷ್ಟು ಹಾನಿ ಮಾಡುತ್ತಿವೆ ಎಂದು ವಿವರಿಸಿದರು. ಇದನ್ನೂ ಓದಿ: ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮಂಗಗಳ ಹಾವಳಿ – ತೋಟ ಆಯ್ತು, ಈಗ ಮನೆಗೆ ಪ್ರವೇಶ

    ಬೇಸಾಯದ ಬದುಕನ್ನು ಹಾಳು ಮಾಡುತ್ತಿರುವ ಪ್ರಾಣಿಗಳ ಬಗ್ಗೆ ಸಭೆ ನಡೆಸಿದ್ದಾರೆ. ಈ ವೇಳೆ ಮಲೆನಾಡು ಭಾಗದಲ್ಲಿ ಮಂಗನ ಪಾರ್ಕ್ ನಿರ್ಮಿಸಲು ಸಹ ಚರ್ಚಿಸಿದ್ದಾರೆ. ಮೂವರು ಮಂತ್ರಿಗಳು ಹಾಗೂ ಸಿಎಂ ಸೇರಿದಂತೆ ರೈತ ಮುಖಂಡರ ಸಭೆ ನಡೆಸಿದ್ದಾರೆ. ಆದರೆ ಮಂಗನ ವಿಚಾರಕ್ಕೆ ಇಷ್ಟೊಂದು ದೊಡ್ಡ ಮಟ್ಟದ ಸಭೆಯೇ ಎಂದು ಕೆಲವರು ಕೇಳಿದ್ದಾರೆ. ರೈತರ ಕಷ್ಟ ಇವರಿಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ.

    ಮಂಗಗಳು ಗಿಡಬಳ್ಳಿಗಳನ್ನು ಹಾಳು ಮಾಡುತ್ತಿವೆ. ಮಂಗಗಳ ಹಾವಳಿಯಿಂದ ಏಲಕ್ಕಿ ಹಾಳಾಗುತ್ತಿದೆ. ಪ್ರಾಣಿಗಳ ಹಾವಳಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ 2 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ನಮ್ಮ ಕಷ್ಟವನ್ನು ಅರ್ಥ ಮಾಡಿಕೊಂಡಿರುವುದರಿಂದ ಸಿಎಂ ಸಭೆ ಮಾಡಿದ್ದಾರೆ ಎಂದರು.

    ಕಾಡುಕೋಣಗಳಿಂದ ಬೆಳೆ ಹಾಳಾಗದಂತೆ ತಡೆಯಲು ಸರ್ಕಾರವೇ ಸೋಲಾರ್ ಫೆನ್ಸ್ ಮಾಡಿಕೊಡಬೇಕು. ಸೋಲರ್ ಫೆನ್ಸ್ ಗಳಿಂದ ಬೆಳೆ ರಕ್ಷಣೆ ಮಾಡಬಹುದು. ಅಲ್ಲದೆ ಮಂಗಗಳ ಹಾವಳಿ ತಡೆಯಲು ಮಂಕಿ ಪಾರ್ಕ್ ಅಗತ್ಯವಿದೆ. ಈ ಕುರಿತು ಈಗಾಗಲೇ ಮನವಿ ಮಾಡಿದ್ದೇವು. ಈ ಕುರಿತು ಮುಖ್ಯಮಂತ್ರಿಗಳು ಸಭೆ ಕರೆದು ಚರ್ಚಿಸಿದ್ದಾರೆ ಎಂದರು.

    ಹೊಸನಗರ ತಾಲೂಕಿನ ನಾಗೋಡಿಯಲ್ಲಿ ಮಂಕಿ ಪಾರ್ಕ್ ನಿರ್ಮಾಣಕ್ಕೆ 100 ಎಕರೆಗೆ ಸರ್ಕಾರ ಒಪ್ಪಿದೆ. ಮಂಗಗಳನ್ನು ಆ ಪಾರ್ಕಿನಲ್ಲಿ ಹಾಕುವುದರಿಂದ ಅವುಗಳನ್ನು ರಕ್ಷಣೆ ಮಾಡಿದಂತೆ ಆಗುತ್ತದೆ. ಅಲ್ಲದೆ ರೈತರಿಗೆ ಇದರಿಂದ ಭಾರೀ ಅನುಕೂಲವಾಗಲಿದೆ. ಬೆಳೆ ನಷ್ಟ ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

    ನಾಗೋಡಿಯಲ್ಲಿ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಹಣವನ್ನು ಸರ್ಕಾರ ನೀಡುತ್ತದೆ. ಇದರ ಬಗ್ಗೆ ವರದಿ ನೀಡಬೇಕಿದೆ ಎಂದರು.

  • ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮಂಗಗಳ ಹಾವಳಿ – ತೋಟ ಆಯ್ತು, ಈಗ ಮನೆಗೆ ಪ್ರವೇಶ

    ಮಲೆನಾಡಿನಲ್ಲಿ ಹೆಚ್ಚುತ್ತಿದೆ ಮಂಗಗಳ ಹಾವಳಿ – ತೋಟ ಆಯ್ತು, ಈಗ ಮನೆಗೆ ಪ್ರವೇಶ

    – ಮಂಕಿ ಪಾರ್ಕ್ ಸ್ಥಾಪನೆಗೆ ಆಗ್ರಹ

    ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಂಗಗಳ ಕಾಟ ವಿಪರೀತವಾಗುತ್ತಿದ್ದು, ಬೆಳೆಗಳನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.

    ಅತೀವೃಷ್ಟಿಯಿಂದ ಕಂಗೆಟ್ಟ ರೈತರಿಗೆ ಮಂಗಗಳ ಕಾಟ ಇನ್ನೊಂದು ರೀತಿಯ ಸವಾಲಾಗಿದ್ದು, ಬೆಳೆಗಳನ್ನು ರಕ್ಷಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ದಶಕದಿಂದಲೂ ಮಂಗಗಳ ಕಾಟವಿದ್ದು, ಕಳೆದೆರಡು ವರ್ಷಗಳಿಂದ ಮಿತಿಮೀರಿದೆ.

    ಮಂಗಗಳು ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು, ಮನುಷ್ಯರ ಭಯವೇ ಇಲ್ಲದಂತೆ ಮನೆಯೊಳಕ್ಕೆ ನುಗ್ಗಲಾರಂಭಿಸಿವೆ. ಮಲೆನಾಡು ಭಾಗದಲ್ಲಿ ಬೆರಳೆಣಿಕೆಯಷ್ಟಿದ್ದ ಕೆಂಪು ಮೂತಿ ಮಂಗಗಳ ಸಂಖ್ಯೆ ಇಂದು ಹತ್ತಾರು ಪಟ್ಟು ಹೆಚ್ಚಿದೆ. ತಂಡೋಪತಂಡವಾಗಿ ಕೃಷಿ ಜಮೀನಿಗೆ ನುಗ್ಗಿ, ಫಸಲನ್ನು ಹಾಳು ಮಾಡುವ ಮಂಗಗಳು ಜಿಲ್ಲೆಯ ಅನ್ನದಾತರನ್ನು ಹೈರಣಾಗಿಸಿದೆ.

    ಮಲೆನಾಡಿನ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಭಾಗದ ಅರಣ್ಯದಂಚಿನ ರೈತರು ತಮ್ಮ ಬೆಳೆಗಳನ್ನು ಮಂಗಗಳ ಕಾಟದಿಂದ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಡಿಕೆ, ಎಳನೀರು, ಶುಂಠಿ, ತರಕಾರಿಗಳನ್ನು ಕಿತ್ತು ತಿನ್ನುವ ಮಂಗಗಳು, ಬಾಳೆಮರದ ಮೊಳಕೆಗಳನ್ನು ಸಹ ಬಿಡುತ್ತಿಲ್ಲ. ನಾಯಿ, ಏರ್‍ಗನ್, ಪಟಾಕಿಗಳ ಸದ್ದಿಗೆ ಕ್ಯಾರೇ ಎನ್ನದ ಮಂಗಗಳ ಉಪಟಳ ಇಂದು ರೈತರ ನಿದ್ದೆಗೆಡಿಸಿವೆ. ಕೆಲವು ಬೆಳೆಗಳನ್ನು ಎಳವೆಯಲ್ಲಿಯೇ ಕಿತ್ತು ತಿಂದರೆ, ಇನ್ನೇನು ಫಸಲು ಕಟಾವಿಗೆ ಬರಬೇಕು ಎನ್ನುವ ಹಂತದಲ್ಲಿ ಏಕಾಏಕಿ ದಾಳಿ ಬೆಳೆಗಳನ್ನು ನಾಶ ಮಾಡುತ್ತಿವೆ.

    ಬಯಲು ಸೀಮೆ ಪ್ರದೇಶಗಳಲ್ಲಿ ಸೆರೆ ಹಿಡಿದ ಮಂಗಗಳನ್ನು ಸಹ ಮಲೆನಾಡಿಗೆ ತಂದು ಬಿಡುತ್ತಿರುವುದು ಇಲ್ಲಿನ ರೈತರಿಗೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ. ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.

    ಮಂಗಗಳ ಉಪಟಳಕ್ಕೆ ಇತಿಶ್ರೀ ಹಾಡಲು ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ದೆಹಲಿ, ಅಸ್ಸಾಂ ರಾಜ್ಯಗಳಲ್ಲಿ ಸ್ಥಾಪಿಸಿರುವ ಮಾದರಿಯಲ್ಲಿ ಮಂಕಿ ಪಾರ್ಕ್ ಸ್ಥಾಪನೆ ಮಾಡಬೇಕು. ಮಂಗಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು ಎನ್ನುವ ಬೇಡಿಕೆಯನ್ನೂ ಇಟ್ಟಿದ್ದಾರೆ. ಅರಣ್ಯ ಕಾಯ್ದೆಯಡಿಯಲ್ಲಿ ಈ ಮಂಗಗಳಿಗೆ ಮಕಾಕ ರೆಡಿಯಾಟ್ ಎಂದು ಹೆಸರಿಸಿದರೆ ಈ ಮಂಗಗಳು ವನ್ಯಜೀವಿ ವ್ಯಾಪ್ತಿಯಲ್ಲಿ ಬರಲಿದ್ದು ಇದಕ್ಕೆ ಕೂಡಲೇ ಸರ್ಕಾರ ಪರಿಹಾರ ಸೂಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಮಲೆನಾಡಿನಲ್ಲಿ ಅಡಕೆ ಹಾಗೂ ಇತರ ಪ್ರಮುಖ ಬೆಳೆ ಬೆಳೆಯುವವರಿಗೆ ಮಂಗಗಳ ಹಾವಳಿ ಶಾಪವಾಗಿ ಪರಿಣಮಿಸಿದ್ದು, ಶೇ.30 ರಿಂದ 50ರಷ್ಟು ಬೆಳೆ ನಷ್ಟವಾಗುತ್ತಿದೆ. ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮಲೆನಾಡಿನಲ್ಲಿ ಕಾಣಿಸಿಕೊಂಡಿರುವ ಮಂಗನ ಖಾಯಿಲೆ ತಡೆಗಟ್ಟುವಿಕೆಗೂ ಇದು ಸಹಕಾರಿಯಾಗಲಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.