ಮುಂಬೈ: ಕೊರೊನಾ ಭೀತಿಗೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಒಂದೆಡೆ ಕೊರೊನಾ ಭಯಕ್ಕೆ ಮನೆಯಲ್ಲಿಯೇ ಜನರು ಲಾಕ್ ಆಗಿದ್ದಾರೆ. ಇನ್ನೊಂದೆಡೆ ಜನರ ಹಾವಳಿ ಇಲ್ಲದೇ ಪ್ರಾಣಿಗಳು ಹೊರಗೆಲ್ಲಾ ಸುತ್ತಾಡಿಕೊಂಡು ಎಂಜಾಯ್ ಮಾಡುತ್ತಿದೆ. ಮುಂಬೈನಲ್ಲಿ ಕೋತಿಗಳು ಕೂಲ್ ಆಗಿ ಪೂಲ್ ಪಾರ್ಟಿ ಮಾಡುತ್ತಿರುವ ವಿಡಿಯೋ ಇದಕ್ಕೆ ಉದಾಹರಣೆ ಎನ್ನಬಹುದು.
ಹೌದು. ಜನರ ಓಡಾಟವಿಲ್ಲದ ಕಾರಣ ಪ್ರಾಣಿ, ಪಕ್ಷಿಗಳು ರಸ್ತೆಗಳಲ್ಲಿ ಆರಾಮಾಗಿ ಓಡಾಡಿಕೊಂಡಿವೆ. ಲಾಕ್‍ಡೌನ್ ಪರಿಣಾಮ ವಾಹನಗಳ ಕಿರಿಕಿರಿ ಇಲ್ಲದೇ ಪರಿಸರದಲ್ಲಿ ಮಾಲಿನ್ಯ ಕೂಡ ಕಡಿಮೆಯಾಗಿದೆ. ಈ ನಡುವೆ ಮುಂಬೈನ ಬೋರಿವಿಲಾದಲ್ಲಿರುವ ಅಪಾರ್ಟ್‍ಮೆಂಟ್ ಒಂದರ ಸ್ವಿಮ್ಮಿಂಗ್ ಪೂಲ್‍ನಲ್ಲಿ ಕೋತಿಗಳ ಗ್ಯಾಂಗ್ ಬಿಸಿಲ ಝಳಕ್ಕೆ ಕೂಲ್ ಆಗಿ ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
https://www.instagram.com/p/B-1Fg2PD5Fg/
ವಿಡಿಯೋದಲ್ಲಿ ಅಪಾರ್ಟ್‍ಮೆಂಟ್ ಬಾಲ್ಕಾನಿಗಳಿಂದ, ಕಿಟಕಿ ಮೇಲಿಂದ ಸ್ವಿಮ್ಮಿಂಗ್ ಪೂಲ್ ಒಳಗೆ ಕೋತಿಗಳು ಹಾರುತ್ತಿರುವುದು, ನೀರಿನಲ್ಲಿ ಈಜುತ್ತಾ ಮಸ್ತಿ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಕ್ಯೂಟ್ ವಿಡಿಯೋವನ್ನು ಬಾಲಿವುಡ್ ನಟಿ ಟಿಸ್ಕಾ ಚೋಪ್ರಾ ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗೆ ಮನಸೋತ ನಟಿ ರವೀನಾ ತಂಡನ್ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡು ಇದು ‘ಶುದ್ಧವಾದ ಕೋತಿಗಳ ಆಟ’ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಕೂಲ್ ವಿಡಿಯೋ ಮಾತ್ರ ನೆಟ್ಟಿಗರ ಮನಗೆದ್ದಿದ್ದು, ಸಖತ್ ವೈರಲ್ ಆಗುತ್ತಿದೆ.
ಈ ಲಾಕ್‍ಡೌನ್ ಸಮಯದಲ್ಲಿ ಇನ್ನೊಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ. ಅದು ಕೂಡ ಸ್ವಿಮ್ಮಿಂಗ್ ಪೂಲ್ ಅಲ್ಲಿ ಕೋತಿಗಳು ಆಟವಾಡುತ್ತಾ, ಈಜುತ್ತಾ ಕಾಲ ಕಳೆಯುತ್ತಿರುವ ವಿಡಿಯೋ. ಇದನ್ನು ನೋಡಿದ ನೆಟ್ಟಿಗರು ಕೋತಿಗಳ ಪೂಲ್ ಪಾರ್ಟಿಗೆ ಫಿದಾ ಆಗಿದ್ದಾರೆ. ವಿಡಿಯೋ ಹಂಚಿಕೊಂಡ ಟ್ವಿಟ್ಟರ್ ಬಳಕೆಯಾರರು, ನಾವು ನಮ್ಮ ಅಪಾರ್ಟ್‍ಮೆಂಟ್‍ನಲ್ಲಿರುವ ಸ್ವಿಮ್ಮಿಂಗ್ ಪೂಲ್ ಯಾರು ಉಪಯೋಗಿಸುತ್ತಿಲ್ಲ, ಹೀಗಾಗಿ ಅದರಲ್ಲಿರುವ ನೀರನ್ನು ಖಾಲಿ ಮಾಡಬೇಕು ಎಂದು ನಿರ್ಧರಿಸಿದ್ದೆವು. ಆದರೆ ಅಷ್ಟರಲ್ಲಿ ನಮ್ಮ ನೆರೆಯ ವಾರನ ಸೇನೆ ಬಂದು ನಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿದೆ. ಕೋತಿಗಳು ಖುಷಿಯಾಗಿ ನೀರಿನಲ್ಲಿ ಆಟವಾಡುತ್ತಾ ಎಂಜಾಯ್ ಮಾಡುತ್ತಿರೋದನ್ನ ನೋಡಿದರೆ ಖುಷಿ ಆಗುತ್ತೆ. ಲಾಕ್‍ಡೌನ್‍ನಲ್ಲಿ ನಮಗೆ ಲೈವ್ ಎಂಟರ್‌ಟೈನ್‌ಮೆಂಟ್ ಸಿಗುತ್ತಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.
https://twitter.com/PreetiManiar/status/1248694395416674304
ಅದೇನೆ ಇರಲಿ ಲಾಕ್‍ಡೌನ್‍ನಿಂದ ಮನೆಯಲ್ಲಿದ್ದು ಜನರು ಬೋರ್ ಆಗಿದ್ದಾರೆ. ಆದ್ರೆ ಮೂಕ ಪ್ರಾಣಿಗಳು ಮಾತ್ರ ಖುಷಿಯಾಗಿವೆ. ಹಲವೆಡೆ ಆಹಾರ ಸಿಗದೆ ಒದ್ದಾಡುತ್ತಿರುವ ಪ್ರಾಣಿಗಳಿಗೆ ಹಲವರು ಆಹಾರ ನೀಡಿ ಮಾನವಿಯತೆ ಮೆರೆಯುತ್ತಿದ್ದಾರೆ. ಇನ್ನು ಕೆಲವೆಡೆ ನೀವು ಲಾಕ್ ಆಗಿ ಮನೆಲ್ಲೇ ಇರಿ, ನಾವು ಎಂಜಾಯ್ ಮಾಡುತ್ತೇವೆ ಎನ್ನುವ ಹಾಗೆ ಕೋತಿಗಳು ಬೇಸಿಗೆ ಬಿಸಿಯಲ್ಲಿ ಕೂಲ್ ಪೂಲ್ ಪಾರ್ಟಿ ಮಾಡುತ್ತಿವೆ.