Tag: Monkey Disease

  • ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಹೆಚ್ಚಾಯ್ತು ಮಂಗನ ಕಾಯಿಲೆ

    ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಹೆಚ್ಚಾಯ್ತು ಮಂಗನ ಕಾಯಿಲೆ

    – ಊರು ಬಿಟ್ಟು ಹೋದ ಮಂಗನ ಕಾಯಿಲೆ ಸೋಂಕಿತರು

    ಕಾರವಾರ: ಕೊರೊನಾ ವೈರಸ್‍ಗೆ ರಾಜ್ಯದ ಜನ ಭಯಗೊಂಡಿದ್ದರೆ ಇತ್ತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಕ್ಷೇತ್ರ ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚುತ್ತಿರುವ ಮಂಗನಕಾಯಿಲೆ (ಕೆ.ಎಫ್.ಡಿ)ಯಿಂದ ಜನರು ಭಯಪಟ್ಟು ಊರು ಬಿಡುತ್ತಿದ್ದಾರೆ.

    ಹೌದು. ಉತ್ತರ ಕನ್ನಡ ಜಿಲ್ಲೆಯ ಜನರೀಗ ಕೆ.ಎಫ್.ಡಿ ವೈರಸ್‍ಗೆ ಭಯಪಟ್ಟು ಊರು ತೊರೆಯುತಿದ್ದಾರೆ. ವಿಧಾನಸಭಾ ಸ್ಪೀಕರ್ ಕಾಗೇರಿಯವರ ಸ್ವಕ್ಷೇತ್ರ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಾಳಗೋಡು, ಮಳಗುಳಿ, ಹನುಮನಜಡ್ಡಿ, ಹೊನ್ನೆಗಟಗಿ, ತ್ಯಾಗಲಿಗಳಲ್ಲಿ 200ಕ್ಕೂ ಹೆಚ್ಚು ಮಂಗಗಳು ಈ ವರ್ಷ ಸಾವನ್ನಪ್ಪಿದ್ದು ಇವುಗಳಲ್ಲಿ ಹಲವು ಮಂಗಗಳಲ್ಲಿ ಕೆ.ಎಫ್.ಡಿ ವೈರಸ್ ಪತ್ತೆಯಾಗಿದೆ.

    ಈ ವೈರಸ್ ಜನರಿಗೂ ಹಬ್ಬುತ್ತಿದ್ದು ಈ ಗ್ರಾಮದಲ್ಲಿ ಈಗಾಗಲೇ 11 ಜನರಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. ಇದೇ ತಿಂಗಳಲ್ಲಿ ಮಳಗುಳಿ ಗ್ರಾಮದ ಭಾಸ್ಕರ್ ಗಣಪತಿ ಹೆಗಡೆ ಎಂಬುವವರು ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದರು. ಕಳೆದ ವರ್ಷ ಜಿಲ್ಲೆಯಲ್ಲಿ 87 ಪ್ರಕರಣಗಳು ವರದಿಯಾಗಿದ್ದು, ಸಿದ್ದಾಪುರ ತಾಲೂಕಿನಲ್ಲಿಯೇ 15 ಜನರಿಗೆ ಮಂಗನಕಾಯಿಲೆ ಬಂದಿದ್ದು, ಇದರಲ್ಲಿ ಆರು ಜನರು ಸಾವನ್ನಪ್ಪಿದ್ದರು. ಹೀಗಾಗಿ ಸಿದ್ದಾಪುರ ತಾಲೂಕಿನ ಮಂಗನಕಾಯಿಲೆ ಪೀಡಿತ ಪ್ರದೇಶವಾದ ಬಾಳಗೋಡು ಸೇರಿದಂತೆ ಹಲವು ಗ್ರಾಮದಲ್ಲಿ ಜನರು ಮನೆ ಬಿಡುತಿದ್ದು ಊರಿನಲ್ಲಿ ಬಿಕೋ ಎನ್ನುತ್ತಿದೆ.

    ಸಿದ್ದಾಪುರ ಭಾಗದಲ್ಲಿ ಚಿಕಿತ್ಸೆ ನೀಡಲು ವೈದ್ಯರ, ಸಿಬ್ಬಂದಿ ಕೊರತೆ ಎದುರಾಗಿದೆ. ಜೊತೆಗೆ ಇಲ್ಲಿ ಕೆಲಸ ಮಾಡಲು ಸಿಬ್ಬಂದಿ ಕೂಡ ಮುಂದೆ ಬರುತ್ತಿಲ್ಲ ಹೀಗಾಗಿ ಆರೋಗ್ಯ ಇಲಾಖೆ ಸಹ ತೊಂದರೆ ಅನುಭವಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲು ತೊಡಕಾಗಿದೆ ಎಂಬುದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಕಾಗೇರಿಯವರೇ ನಮ್ಮ ನೋವು ಕೇಳಿ
    ವಿಧಾನಸಭಾ ಸ್ಪೀಕರ್ ಸ್ವಕ್ಷೇತ್ರದಲ್ಲಿಯೇ ಅತೀ ಹೆಚ್ಚು ಮಂಗನಕಾಯಿಲೆ ಪ್ರಕರಣ ಪತ್ತೆಯಾಗುತ್ತಿದ್ದು ಜನರು ಊರು ಬಿಡುತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಈ ಪ್ರದೇಶದಲ್ಲಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಆದರೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಾಗೂ ಕಳೆದ ವರ್ಷ ಮರಣ ಹೊಂದಿದ ಜನರಿಗೆ ಪರಿಹಾರ ಕೊಡಿಸಲು ಸ್ಪೀಕರ್ ಕಾಗೇರಿ ಎಡವಿದ್ದಾರೆ. ಈವರೆಗೂ ಕ್ಷೇತ್ರಕ್ಕೆ ಬರುವುದಿರಲಿ ಇದರ ಬಗ್ಗೆ ಗಮನ ಹರಿಸುವ ಗೋಜಿಗೆ ಹೋಗದೇ ತಮ್ಮ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಿದ್ದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ ವರ್ಷ ಸಾವನ್ನಪ್ಪಿದ ಯಾವೊಬ್ಬರಿಗೂ ಈವರೆಗೂ ಪರಿಹಾರ ಬಂದಿಲ್ಲ. ಇನ್ನು ಆರೋಗ್ಯ ಇಲಾಖೆ ಹಲವು ಕಾರಣಗಳಿಗೆ ಆರು ಜನರನ್ನು ಮಾತ್ರ ದಾಖಲೆಯಲ್ಲಿ ತೋರಿಸಿದ್ದು ಉಳಿದವರನ್ನು ಮಾತ್ರ ದಾಖಲೆಗಳಲ್ಲಿ ತೋರಿಸಿಲ್ಲ. ಇದಲ್ಲದೇ ಪಕ್ಕದ ಜಿಲ್ಲೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯಿಂದ ಸತ್ತವರಿಗೆ ಪರಿಹಾರ ಬಂದಿದೆ. ಆದರೆ ವಿಧಾನಸಭಾ ಸ್ಪೀಕರ್ ಸ್ವಕ್ಷೇತ್ರಕ್ಕೆ ಈ ಭಾಗ್ಯ ಇಲ್ಲ. ಕೊನೆ ಪಕ್ಷ ಸ್ಪೀಕರ್ ರವರು ತಮ್ಮ ಕ್ಷೇತ್ರಕ್ಕೆ ಬಂದು ಇರುವ ಸಮಸ್ಯೆ ಆಲಿಸಿ ಕ್ರಮ ಕೈಗೊಳ್ಳಲಿ ಎಂಬುದು ಮಂಗನಕಾಯಿಲೆಯಿಂದ ಬಳಲುತ್ತಿರುವ ಗ್ರಾಮಸ್ಥರು ಅಗ್ರಹಿಸಿದ್ದಾರೆ.

    ಒಂದೆಡೆ ಸಿಬ್ಬಂದಿಗಳ ಕೊರತೆ ಮತ್ತೊಂದೆಡೆ ಈ ಹಳ್ಳಿಗಳಲ್ಲಿ ಕೆಲಸ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಮನಸ್ಸು ಮಾಡದಿರುವುದು. ಜೊತೆಯಲ್ಲಿ ಜನರಲ್ಲಿ ಮಂಗನಕಾಯಿಲೆ ಕುರಿತು ಜಾಗೃತಿ ಮೂಡಿಸಲು ವಿಫಲವಾಗಿರುವುದರಿಂದ ಕಾಯಿಲೆ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಯಿಲೆ ಉಲ್ಭಣವಾಗುತ್ತಿದೆ. ತಕ್ಷಣ ಈ ಬಗ್ಗೆ ಸರ್ಕಾರ ಗಮನಹರಿಸಿ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಜನರ ಬಲಿಯಾಗಲಿದ್ದು ತಕ್ಷಣ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ.

  • ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

    ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

    – ಕಳೆದ 2 ತಿಂಗಳಲ್ಲಿ ಮೂವರು ಸಾವು

    ಶಿವಮೊಗ್ಗ: ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಕಸಗುಪ್ಪೆ ಗ್ರಾಮದ ನಿವಾಸಿ ಕೋಮರಾಜ್ ಜೈನ್ (32) ಎಂದು ಗುರುತಿಸಲಾಗಿದೆ. ಈ ಘಟನೆಯಿಂದಾಗಿ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಮಂಗನ ಕಾಯಿಲೆಗೆ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ.

    ಮೂಲತಃ ಕೃಷಿಕರಾಗಿದ್ದ ಮೃತ ಕೋಮರಾಜ್ ಜೈನ್ ಕಳೆದೊಂದು ವಾರದಿಂದ ಜ್ವರ ಹಾಗೂ ದೊಡ್ಡ ಕರಳು ಬೇನೆಯಿಂದ ಬಳಲುತ್ತಿದ್ದರು. ಹೀಗಾಗಿ ಈ ಮೊದಲು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ವೈದ್ಯರು ಪರಿಕ್ಷೀಸಿದಾಗ ಮಂಗನ ಕಾಯಿಲೆ ಇರುವುದು ಪತ್ತೆಯಾಗಿತ್ತು.

    ಅಲ್ಲದೇ ಕಳೆದ ನಾಲ್ಕು ದಿನಗಳ ಹಿಂದೆ ಮತ್ತೆ ಜ್ವರ ಕಾಣಿಸಿಕೊಂಡಿದ್ದರಿಂದ ಕೋಮರಾಜ್ ಜೈನ್‍ರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೋಮರಾಜ್ ಜೈನ್ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

  • ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ – ಮೂವರು ಕಾರ್ಮಿಕರಲ್ಲಿ ಸೋಂಕು ಪತ್ತೆ

    ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ – ಮೂವರು ಕಾರ್ಮಿಕರಲ್ಲಿ ಸೋಂಕು ಪತ್ತೆ

    ಚಿಕ್ಕಮಗಳೂರು: ಮಧ್ಯಪ್ರದೇಶ ಹಾಗೂ ಅಸ್ಸಾಂನಿಂದ ಕಾಫಿ ತೋಟದ ಕೆಲಸಕ್ಕೆ ಬಂದಿದ್ದ ಕಾರ್ಮಿಕರಲ್ಲಿ ಮೂವರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಮಡಬೂರು ಗ್ರಾಮದ ಸುತ್ತಮುತ್ತಲಿನ ಎಸ್ಟೇಟಿನಲ್ಲಿ ಕೆಲಸ ಮಾಡುವ ಕೆಲಸಗಾರರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.

    ಮೂವರು ಕಾರ್ಮಿಕರ ರಕ್ತದ ಮಾದರಿಯನ್ನ ಶಿವಮೊಗ್ಗದ  ವೈರಸ್ ಪರಿಶೋಧನ ಪ್ರಯೋಗಾಲಯಕ್ಕೆ(ವಿಡಿಎಲ್) ಕಳುಹಿಸಲಾಗಿದೆ. ಮೂವರು ಸೋಂಕಿತರಲ್ಲಿ ಇಬ್ಬರು ಮಧ್ಯಪ್ರದೇಶಕ್ಕೆ ಹಿಂದಿರುಗಿದ್ದು, ಓರ್ವ ಮಹಿಳೆಗೆ ಎನ್.ಆರ್ ಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ತೋಟದ ಉಳಿದ ಕಾರ್ಮಿಕರಿಗೂ ಸೋಂಕು ಹರಡದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಮಂಗನ ಕಾಯಿಲೆ ಪತ್ತೆಯಾಗಿರೋ ಜಾಗವನ್ನ ಹಾಟ್ ಸ್ಪಾಟ್ ಎಂದು ಗುರುತಿಸಿರೋ ಜಿಲ್ಲಾಡಳಿತ, ಆ ಜಾಗದ ಐದು ಕಿ.ಮೀ ಸುತ್ತಳತೆಯಲ್ಲಿ ಕೆಎಫ್‍ಡಿ ರೋಗ ನಿರೋಧಕ ಔಷಧಿಯನ್ನ ಸಿಂಪಡಿಸಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿ ಸುಭಾಷ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಮಹಿಳೆಯಿಂದಲೂ ರೋಗ ಇನ್ನಿತರರಿಗೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮಡಬೂರು ಸುತ್ತಮುತ್ತಲಿನ ಗ್ರಾಮಗಳ 6ರಿಂದ 65 ವರ್ಷದ ಎಲ್ಲಾ ವಯೋಮಾನದವರಿಗೂ ಕೆಎಫ್‍ಡಿ ನಿರೋಧಕ ಲಸಿಕೆ ಹಾಕಲಾಗ್ತಿದೆ.

  • ಮಲೆನಾಡಿನಲ್ಲಿ ಕೆಎಫ್‍ಡಿ ಸೋಂಕಿಗೆ ಮೊದಲ ಬಲಿ

    ಮಲೆನಾಡಿನಲ್ಲಿ ಕೆಎಫ್‍ಡಿ ಸೋಂಕಿಗೆ ಮೊದಲ ಬಲಿ

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶೀಗೆಮಕ್ಕಿ ಗ್ರಾಮದಲ್ಲಿ ಮಂಗನ ಕಾಯಿಲೆಗೆ ತುತ್ತಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಈ ವರ್ಷ ಮತ್ತೆ ಕೆಎಫ್‍ಡಿ ಸೋಂಕಿನ ಆತಂಕ ಮಲೆನಾಡಿಗರಲ್ಲಿ ಕಾಡಲಾರಂಭಿಸಿದೆ.

    ಮೃತಪಟ್ಟ ಮಹಿಳೆಯನ್ನು ಹೂವಮ್ಮ(58) ಎಂದು ಗುರುತಿಸಲಾಗಿದೆ. ಹೂವಮ್ಮ ಜ. 8ರಂದು ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೂವಮ್ಮ ಅವರ ಕುಟುಂಬಸ್ಥರು ತಾಲೂಕಿನ ತುಮರಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಕೆಎಫ್‍ಡಿ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಮಣಿಪಾಲ್ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಣಿಪಾಲ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ನಂತರ ಮೃತ ಮಹಿಳೆಗೆ ಕೆಎಫ್‍ಡಿ ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡು ಬರದೇ ಮಹಿಳೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಕೆಎಫ್‍ಡಿ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಆರೋಗ್ಯ ಇಲಾಖೆ ಮಲೆನಾಡಿನ ಭಾಗದ ಜನರಿಗೆ ಲಸಿಕೆ ಹಾಕಿಸಲಾಗಿತ್ತು. ಹೂವಮ್ಮನ ಕುಟುಂಬಸ್ಥರು ಲಸಿಕೆ ಹಾಕಿಸಿಕೊಂಡಿದ್ದರು. ಆದರೆ ಹೂವಮ್ಮ ಮಾತ್ರ ಲಸಿಕೆ ಹಾಕಿಸಿಕೊಂಡಿರಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ವರ್ಷ ಜಿಲ್ಲೆಯಲ್ಲಿ ಕೆಎಫ್‍ಡಿ ಸೋಂಕಿಗೆ 23 ಮಂದಿ ಬಲಿಯಾಗಿದ್ದರು.

  • ಹಾಸನದಲ್ಲೂ ಮಂಗನ ಕಾಯಿಲೆ ವೈರಸ್ ಪತ್ತೆ

    ಹಾಸನದಲ್ಲೂ ಮಂಗನ ಕಾಯಿಲೆ ವೈರಸ್ ಪತ್ತೆ

    ಹಾನಸ: ಮಲೆನಾಡಿಗರ ನಿದ್ದೆ ಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಹಾಸನ ಜಿಲ್ಲೆಯಲ್ಲಿಯೂ ಮಾರಕ ರೋಗದ ವೈರಸ್ ಪತ್ತೆಯಾಗಿದೆ.

    ಹಾಸನ ಜಿಲ್ಲೆಯ ಎರಡು ಗ್ರಾಮಗಳಲ್ಲಿ ದನ ಕರುಗಳ ಉಣ್ಣೆಯಲ್ಲಿ ವೈರಸ್ ಕಂಡು ಬಂದಿದೆ. ಹಾಸನ ತಾಲೂಕಿನ ಚಿಕ್ಕ ಬಸವನಹಳ್ಳಿ ಗ್ರಾಮ ಹಾಗೂ ಸಕಲೇಶಪುರ ಬಸವನಗುಡಿ ಗ್ರಾಮದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ.

    ವೈರಸ್ ಪತ್ತೆಯಾದ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ವಿಜಯ್ ಹಾಗೂ ಡಿಎಚ್‍ಓ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಸ್ಥರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ತಂಡ ಮನೆ ಮನೆಗೆ ಔಷಧ ನೀಡಿ, ಬಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಲು ಗ್ರಾಮದಲ್ಲೇ ಬಿಡು ಬಿಟ್ಟಿದ್ದಾರೆ. ಈಗಾಗಲೇ ಜಿಲ್ಲೆಯ 625 ದನ-ಕರುಗಳು, ಕುರಿ, ಮೇಕೆಯ ರಕ್ತದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡು ಸ್ಯಾಂಪಲ್ ಗಳಲ್ಲಿ ಮಂಗನ ಕಾಯಿಲೆ ವೈರಸ್ ಪಾಸಿಟಿವ್ ಆಗಿ ಬಂದಿದೆ.

    ಈಗಾಗಲೇ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆಯಿಂದ ಅನೇಕರು ಮೃತಪಟ್ಟಿದ್ದಾರೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆ, ಜನರಿಗೆ ಒಂದು ಔಷಧಿ (Oil)ಯನ್ನು ಕೊಡುತ್ತಿದ್ದಾರೆ. ಅದನ್ನು ಪ್ರಾಣಿಗಳನ್ನು ಕಾಡಿನಲ್ಲಿ ಮೇಯಿಸಲು ಹೋದಾಗ ಅದನ್ನು ತಮ್ಮ ದೇಹಕ್ಕೆ ಹಂಚಿಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

    ಲೆನಾಡಿನಲ್ಲಿ ಈಗ ಮಂಗನ ಜ್ವರದ ಹಾವಳಿ ಈಗ ಹೆಚ್ಚಾಗಿದೆ. ಮಂಗನಜ್ವರ ಅಥವಾ ಕ್ಯಾಸನೂರು ಡಿಸೀಸ್ ಎಂದು ಕರೆಯಲ್ಪಡುವ ಸಾವಿನ ಜ್ವರಕ್ಕೆ 7 ದಶಕಗಳ ಇತಿಹಾಸವಿದೆ. ಪ್ರತೀ ವರ್ಷ ಬೇಸಿಗೆಯಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತಿತ್ತು. ಆದರೆ ಈ ವರ್ಷ ಮೂರು ತಿಂಗಳು ಮೊದಲೇ ಕಾಣಿಸಿಕೊಂಡಿದ್ದು, ಈಗಾಗಲೇ ಒಂದು ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಏಳು ಮಂದಿಯನ್ನು ಬಲಿತೆಗೆದುಕೊಂಡಿದೆ. ಹೀಗಾಗಿ ಇಲ್ಲಿ ಮಂಗನ ಜ್ವರ ಎಂದರೇನು? ಯಾಕೆ ಬರುತ್ತದೆ? ಏನೆಲ್ಲ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಆರಂಭಗೊಂಡಿದ್ದು ಹೇಗೆ?
    ಭಾರತಕ್ಕೆ ಸ್ವಾತಂತ್ರ್ಯ ಬಂದು ಹತ್ತು ವರ್ಷಗಳಾದ ಬಳಿಕ ಅಂದರೆ 1957ರಲ್ಲಿ ಬೇಸಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿಗೆ ಸೇರಿದ ಕ್ಯಾಸನೂರು ಗ್ರಾಮದಲ್ಲಿ ಮೊದಲ ಬಾರಿಗೆ ಮಂಗನ ಜ್ವರ ಕಾಣಿಸಿಕೊಂಡಿತ್ತು. ಈ ಕಾಯಿಲೆ ಕಾಡಿನಲ್ಲಿ ಮಂಗಗಳು ಮೃತಪಟ್ಟಾಗ ಅದರಿಂದ ಜನರಿಗೆ ಹರಡುತ್ತಿತ್ತು. ಆದ್ದರಿಂದ ಈ ಕಾಯಿಲೆಗೆ `ಮಂಗನ ಕಾಯಿಲೆ ಎಂದು ಜನ ಕರೆದಿದ್ದರು. ಆದರೆ ವೈದ್ಯ ವಿಜ್ಞಾನಿಗಳು ಪ್ರಪಂಚದಲ್ಲಿ ಎಲ್ಲೂ ಕಾಣದ ಈ ಕಾಯಿಲೆ ಕ್ಯಾಸನೂರು ಗ್ರಾಮದಲ್ಲಿ ಮಾತ್ರ ಕಂಡು ಬಂದಿರುವುದರಿಂದ ಈ ಕಾಯಿಲೆಗೆ `ಕ್ಯಾಸನೂರು ಕಾಡಿನ ಕಾಯಿಲೆ’ ಎಂದು ಕರೆದರು.

    ಕಾಯಿಲೆ ಹುಟ್ಟಿ ಎರಡು ದಶಕಗಳಾಗಿದ್ದು, ಮನುಷ್ಯರು ಕಾಡನ್ನು ನಾಶ ಮಾಡುವುದರಿಂದ ರೋಗ ಪೀಡಿತ ಮಂಗಗಳು ಕಾಡನ್ನು ಹುಡುಕುತ್ತಾ ಹೋಗುತ್ತವೆ. ಆಗ ಅವುಗಳು ಹೋದಂತೆಲ್ಲಾ ಕಾಯಿಲೆ ಕೂಡ ವಿಸ್ತರಿಸುತ್ತಾ ಹೋಗುತ್ತದೆ. ಅದರಂತೆಯೇ ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಹಲವು ಕಡೆ ಕಾಯಿಲೆ ಕಂಡು ಬಂದಿತ್ತು. ಬಳಿಕ ಕ್ಯಾಸನೂರು ಕಾಡಿನ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೂ ಹರಡಿತ್ತು. ಈ ಕಾಯಿಲೆ ಸುಮಾರು 6,000 ಚದರ ಕಿಲೋ ಮೀಟರ್ ಪ್ರದೇಶವನ್ನು ಆಕ್ರಮಿಸಿದ್ದು, ಪ್ರತಿವರ್ಷ ಈ ಕಾಯಿಲೆಗೆ ಅನೇಕ ಮಂದಿ ಬಲಿಯಾಗುತ್ತಿದ್ದಾರೆ.

    ಯಾವ ವೈರಣ್ ಕಾರಣ?
    ಕ್ಯಾಸನೂರು ಮಂಗನ ಕಾಯಿಲೆ (KFD) ಯು KFDV ವೈರಾಣು (Kyasanur Forest disease virus) ಕುಟುಂಬಕ್ಕೆ ಸೇರಿದ ವೈರಾಣುವಾಗಿದೆ. ಇದನ್ನು 1957ರಲ್ಲಿ ಮರಣ ಹೊಂದಿದ ಮಂಗನ ದೇಹದಲ್ಲಿ ಪತ್ತೆ ಮಾಡಲಾಗಿದೆ.

    ಹೇಗೆ ಹರಡುತ್ತದೆ?
    ಕ್ಯಾಸನೂರ ಕಾಯಿಲೆ ಮೂಲತಃ ಪ್ರಾಣಿಗಳ ರೋಗವಾಗಿದ್ದು, ಮುಖ್ಯವಾಗಿ KFDV ವೈರಾಣು ಇರುವ ಉಣ್ಣಿ ಅಥವಾ ಉಣುಗು (Ticks) ಕಚ್ಚಿದಾಗ ರೋಗಕಾರಕ ವೈರಸ್‍ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಸಾಮಾನ್ಯವಾಗಿ ಈ ರೋಗಗ್ರಸ್ತ ಉಣ್ಣೆಗಳು ಮಾನವನನ್ನು ಕಚ್ಚುವುದರಿಂದ ಆಕಸ್ಮಿಕವಾಗಿ ಮಾನವನಿಗೆ ಸೋಂಕು ತಗಲುತ್ತದೆ. ಆದರೆ ಮಾನವನಿಂದ ಮಾನವನಿಗೆ ಈ ಸೋಂಕು ಹರಡುವುದಿಲ್ಲ.

    ರೋಗ ಲಕ್ಷಣ ಏನು?
    – ಉಣುಗು ಕಡಿತದಿಂದ ವೈರಸ್‍ ಗಳು ದೇಹ ಸೇರಿದ ಒಂದು ವಾರದ ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
    – ವಿಪರೀತ, ಜ್ವರ, ತಲೆನೋವು, ನರದೌರ್ಬಲ್ಯ, ಮಾಂಸಖಂಡಗಳ ಸೆಳೆತ, ವಾಂತಿ ಪ್ರಾರಂಭವಾಗುತ್ತದೆ.
    – ಆಯಾಸ ಉಂಟಾಗುವುದಲ್ಲದೆ ಬಾಯಿ, ವಸಡು ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವವಾಗುತ್ತದೆ. ಆದರೆ ಶೇ.10-20 ಜನರಲ್ಲಿ ಈ ಕಾಯಿಲೆಯು 2ನೇ ಹಂತಕ್ಕೆ ತಲುಪುವ ಸಾಧ್ಯತೆ ಇರುತ್ತದೆ.

    – ಜ್ವರದ ಜೊತೆಗೆ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ, ಮೂರನೇ ವಾರದ ಪ್ರಾರಂಭದಲ್ಲಿ ತಲೆನೋವು, ಮಾನಸಿಕ ಅಸ್ವಸ್ಥತೆಯ ಲಕ್ಷಣ, ಕಣ್ಣು ಮಂಜಾಗುತ್ತದೆ.
    – ರೋಗಿಯು ಕಡಿಮೆ ರಕ್ತದೊತ್ತಡ ಹಾಗೂ ಪ್ಲೇಟ್‍ಲೇಟ್, ಕೆಂಪು ರಕ್ತಕಣ ಸಂಖ್ಯೆ ಮತ್ತು ಬಿಳಿರಕ್ತಕಣಗಳ ಕೊರತೆಯಿಂದ ಬಳಲುತ್ತಾನೆ.
    – ರೋಗನಿರೋಧಕ ಶಕ್ತಿಯಿರುವ ವ್ಯಕ್ತಿಯು ಒಂದೆರೆಡು ವಾರಗಳಲ್ಲಿ ಚೇತರಿಸಿಕೊಳ್ಳಬಹುದಾದ ಸಾಧ್ಯತೆ ಇರುತ್ತದೆ.
    – 15-20 ದಿನಗಳವರೆಗೆ ರೋಗಿಯ ಸ್ಥಿತಿ ಗಂಭೀರವಾಗಿರುತ್ತದೆ. ಈ ಕಾಯಿಲೆಯಿಂದ ಮರಣ ಹೊಂದುವವರ ಸಂಖ್ಯೆ 3-5%.

    ಯಾವ ಅವಧಿಯಲ್ಲಿ ಬರುತ್ತೆ?
    ಶುಷ್ಕವಾತಾವರಣದ ಸಮಯದಲ್ಲಿ ಅಂದರೆ ನವೆಂಬರ್-ಜೂನ್ ತಿಂಗಳವರೆಗೆ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಕಾಡುತ್ಪನ್ನಗಳನ್ನು ಸಂಗ್ರಹಿಸುವ, ಬೇಟೆಗೆ ಹೋಗುವ, ಅರಣ್ಯದಲ್ಲಿ ಕೆಲಸ ಮಾಡುವ ಅಥವಾ ರೈತರಿಗೆ ಈ KFDV ವೈರಾಣು ತಗಲುವ ಸಾಧ್ಯತೆ ಹೆಚ್ಚಿರುತ್ತದೆ.

    ರೋಗ ಪತ್ತೆ ಹೇಗೆ?
    ಪ್ರಾಥಮಿಕ ಹಂತದಲ್ಲೆ ರಕ್ತ ಪರೀಕ್ಷೆಯ ಮೂಲಕ ವೈರಾಣುವಿನ ಪತ್ತೆ ಮಾಡುವುದು ಸಾಧ್ಯ. ನಂತರದ ಹಂತದಲ್ಲಿ ಎಲಿಸಾ (Enzyme-linked imunosorbent serologic assay) ಪರೀಕ್ಷೆಯ ಮೂಲಕ ಪತ್ತೆ ಮಾಡಲಾಗುತ್ತದೆ.

    ಚಿಕಿತ್ಸೆ ಹೇಗೆ?
    ನಿಖರವಾದ ಚಿಕಿತ್ಸಾ ಕ್ರಮ ಲಭ್ಯವಿಲ್ಲದಿದ್ದರೂ, ಸರಿಯಾದ ಸಮಯಕ್ಕೆ ಆಸ್ಪತ್ರೆಯ ವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಅತಿಮುಖ್ಯವಾಗಿದೆ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಹಾಗೂ ರಕ್ತಸ್ರಾವ ಆಗದಂತೆ ಚಿಕಿತ್ಸೆ ನೀಡುವುದು ಈ ಹಂತದಲ್ಲಿ ಬಹಳ ಮುಖ್ಯವಾಗಿವೆ. ಮಂಗನ ಕಾಯಿಲೆಯಿಂದ ರಕ್ಷಣೆ ನೀಡುವ ಲಸಿಕೆ ಲಭ್ಯವಿದೆ. ರೋಗ ಆರಂಭವಾದ ಅನಂತರ ಈ ಲಸಿಕೆ ಬಳಸುವುದರಿಂದ ಯಾವುದೇ ಪ್ರಯೋಜನವಿಲ್ಲ. ರೋಗ ಆರಂಭಗೊಳ್ಳುವ ಮೂರು ತಿಂಗಳ ಮುಂಚೆ ತಿಂಗಳಿಗೆ ಒಂದು ಇಂಜೆಕ್ಷನ್ ಅಂತೆ ಎರಡು ಇಂಜೆಕ್ಷನ್ ತೆಗೆದುಕೊಂಡಲ್ಲಿ ಮಾತ್ರ ಲಸಿಕೆಯಿಂದ ರಕ್ಷಣೆ ದೊರೆಯುತ್ತದೆ.

    ಮುಂಜಾಗ್ರತಾ ಕ್ರಮ ಏನು?
    – ಮಂಗನ ಕಾಯಲೆ ಪೀಡಿತ ಪ್ರದೇಶಗಳಲ್ಲಿ ವಾಸಿಸುವವರು, ಶುಷ್ಕವಾದ ವಾತಾವರಣ ಹಾಗೂ ಉಣುಗು ಜಾಗೃತವಾಗಿರುವ ಸಮಯದಲ್ಲಿ ದಪ್ಟನೆಯ ಬಟ್ಟೆ ಧರಿಸುವುದು, ಕಾಲಿಗೆ ಬೂಟು ಧರಿಸುವುದು ಉತ್ತಮ
    – ಮಂಗಗಳು ಸತ್ತು ಬೀಳುತ್ತಿರುವುದು ಗೊತ್ತಾದ ತಕ್ಷಣ ಆ ಪ್ರದೇಶದ ಕಾಡಿಗೆ ಹೆಲಿಕಾಪ್ಟರ್ ಮೂಲಕ ಉಣುಗು ನಾಶಕ ಔಷಧಿ ಸಿಂಪಡಿಸಬೆಕು.- ಉಣುಗುಗಳು ನಿಗದಿತ ಪ್ರದೇಶದಲ್ಲಿ ಹಾಗೂ ಅನುಕೂಲಕರವಾದ ವಾತಾವರಣದಲ್ಲಿ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತವೆ. ಹೀಗೆ ಸಂಖ್ಯೆ ವೃದ್ಧಿಸಿಕೊಳ್ಳುವುದಕ್ಕೆ ನೇರವಾಗಿ ನಮ್ಮಗಳ ಚಟುವಟಿಕೆಗಳು ಕಾರಣವಾಗಿರುತ್ತದೆ. ಉದಾ: ಮಲೆನಾಡಿನಲ್ಲಿ ಮನೆಯ ಹಿಂಭಾಗ ಮತ್ತು ಕಾಡಿನಂಚಿನಲ್ಲಿ ಬೆಂಕಿ ಹಾಕುವುದು ಸರ್ವೇಸಾಮಾನ್ಯವಾಗಿದೆ. ಇದರಿಂದ ಕಾಡಂಚಿನಲ್ಲಿಯ ನೈಸರ್ಗಿಕ ಮರಗಳು ಮತ್ತು ಸಸ್ಯಗಳು ನಾಶವಾಗಿ ಅಲ್ಲಿ ಯುಪಟೋರಿಯಂ ಕಳೆ ಯಥೇಚ್ಛವಾಗಿ ಬೆಳೆಯುತ್ತದೆ. ಯುಪಟೋರಿಯಂ ಗಿಡಗಳು ಉಣುಗುಗಳ ಸಂಖ್ಯಾವೃದ್ಧಿಗೆ ಪೂರಕ ಕಳೆಯಾಗಿದೆ.

    – ಬೆಂಕಿಯ ನಂತರದಲ್ಲಿ ಯುಪಟೋರಿಯಂ ಕಳೆಗಿಡಗಳು ವೇಗವಾಗಿ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ಜೊತೆಗೆ ಉಣ್ಣಿಗಳ ಸಂಖ್ಯೆಯನ್ನು ಹೆಚ್ಚು ಮಾಡುತ್ತದೆ. ಇದರಿಂದ KFDV ವೈರಾಣು ಹರಡುವ ಸಾಧ್ಯತೆ ತೀರಾ ಹೆಚ್ಚಾಗಿರುತ್ತದೆ. ಆದ್ದರಿಂದ ಯಾವುದೇ ಉದ್ಧೇಶವನ್ನು ಹಿನ್ನೆಲೆಯಲ್ಲಿಟ್ಟುಕೊಂಡು ಕಾಡಿಗೆ ಅಥವಾ ಕಾಡಿನಂಚಿಗೆ ಬೆಂಕಿ ಹಚ್ಚುವುದನ್ನು ಅಲ್ಲಿನ ವಾಸಿಗಳು ಕಡ್ಡಾಯವಾಗಿ ನಿಲ್ಲಿಸುವುದು ಈ ರೋಗವನ್ನು ತಡೆಗಟ್ಟುವ ಪ್ರಥಮ ಮಾರ್ಗವಾಗಿದೆ.
    – ಕಾಯಿಲೆ ಆರಂಭಗೊಂಡಾಗ ಜನರು ಕಾಡಿಗೆ ಹೋಗುವುದನ್ನು ಬಿಡಬೇಕು. ಅನಿವಾರ್ಯವಾಗಿ ಕಾಡಿಗೆ ಹೊಗಲೇಬೇಕಾದರೆ ಮೈತುಂಬಾ ಬಟ್ಟೆ ಕಾಲಿಗೆ ಬೂಟು, ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸಿಕೊಳ್ಳಬೇಕು. ತಮ್ಮ ಮತ್ತು ತಮ್ಮ ಜಾನುವಾರುಗಳ ಮೈಗೆ ಉಣ್ಣೆ ನಾಶಕ ಪುಡಿ ಲೇಪಿಸಿಕೊಳ್ಳಬೇಕು.
    – ಕಾಡಿನಲ್ಲಿ ಕೂರುವುದು, ಮಲಗುವುದು, ಅನಾವಶ್ಯಕ ತಿರುಗಾಡುವುದು ಮಾಡಬಾರದು. ಕಾಡಿನಿಂದ ಹಿಂದಿರುಗಿದ ತಕ್ಷಣ ಸ್ನಾನ ಮಾಡಬೇಕು. ಜಾನುವಾರುಗಳ ಮೈಗೆ ಹತ್ತಿದ ಉಣ್ಣೆಗಳನ್ನು ಕಿತ್ತೆಸೆಯಬೇಕು.


    ವೈರಾಣುವಿನ 4 ಜೀವನ ಕ್ರಮಗಳು:
    ಏಗಿಆಗಿ ವೈರಾಣುಗಳ ಜೀವನ ಚಕ್ರದಲ್ಲಿ ನಾಲ್ಕು ವಿಧಗಳು, 1.ಮೊಟ್ಟೆ (Egg), 2. ಶೈಶಾವಸ್ಥೆ (ಲಾರ್ವಾ), 3. ಬಾಲ್ಯಾವಸ್ಥೆ (Nimph) ಮತ್ತು 4. ಪ್ರೌಢಾವಸ್ಥೆ (Adult). ವೈರಾಣುಗಳನ್ನು ವಾನರ ಅಥವಾ ಮನುಷ್ಯರಿಗೆ ಅಂಟಿಸುವವ ಕೆಲಸ ಮಾಡುವುದು ನಿಂಫ್ ಅವಸ್ಥೆಯಲ್ಲಿರುವ ಉಣುಗು ಮಾತ್ರವಾಗಿದೆ. ಈ ರೋಗಕ್ಕೆ ಈಗಾಗಲೇ ಮುಂಜಾಗರೂಕತಾ ಲಸಿಕೆಯನ್ನು ಸಿದ್ಧ ಪಡಿಸಲಾಗಿದ್ದು, ವೈದ್ಯರ ಸಲಹೆಯಂತೆ ತೆಗೆದುಕೊಂಡಲ್ಲಿ KFDV ವೈರಾಣುವಿನಿಂದ ಸಾಯುವ ಪ್ರಮಾಣ 83% ಕಡಿಮೆಯಾಗುತ್ತದೆ.

    -ಹಾಲಸ್ವಾಮಿ/ ಮಂಜುಳ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv