Tag: Moharram

  • ಗಣೇಶ ಹಬ್ಬದ ಜೊತೆ ಮೊಹರಂ – ಒಂದೇ ಮನೆಯಲ್ಲಿ 2 ದೇವರಿಗೆ ಪೂಜೆ

    ಗಣೇಶ ಹಬ್ಬದ ಜೊತೆ ಮೊಹರಂ – ಒಂದೇ ಮನೆಯಲ್ಲಿ 2 ದೇವರಿಗೆ ಪೂಜೆ

    ಧಾರವಾಡ: ಜಾತಿ, ಧರ್ಮದ ಹೆಸರಿನಲ್ಲಿ ಅದೆಷ್ಟು ಯುದ್ಧಗಳು ನಡೆದಿವೆಯೋ ಗೊತ್ತಿಲ್ಲ. ಅದೆಷ್ಟು ಗಲಭೆಗಳು ನಡೆದಿವೆಯೋ ಗೊತ್ತಿಲ್ಲ. ಆದರೆ ಇಲ್ಲೊಬ್ಬರು ವ್ಯಕ್ತಿ ಹಿಂದೂ ಧರ್ಮದ ಹಬ್ಬದ ಜೊತೆಗೆ ಮುಸ್ಲಿಂ ಧರ್ಮದ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

    ಧಾರವಾಡ ನಗರದ ಮೇದಾರ ಓಣಿಯ ಸುಧೀರ ಮುಧೋಳ ಅವರು ಗಣಪತಿ ಹಬ್ಬವನ್ನು ಬಹಳ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಹಿಂದೂ ಧರ್ಮದವರಾದರೂ ಮೊಹರಂ ಹಬ್ಬವನ್ನೂ ಅಷ್ಟೇ ವಿಭಿನ್ನವಾಗಿ ಆಚರಣೆ ಮಾಡುತ್ತಾರೆ. ಇದೇನಪ್ಪ ಹಿಂದೂ ಆಗಿ ಮೊಹರಂ ಹಬ್ಬ ಆಚರಣೆ ಮಾಡುತ್ತಾರಾ ಎಂದು ನೀವು ಪ್ರಶ್ನೆ ಮಾಡಿದರೆ ತಪ್ಪೇನಿಲ್ಲ. ಕಳೆದ 40 ವರ್ಷಗಳಿಂದ ಮುಧೋಳ ಅವರ ಕುಟುಂಬ ಈ ಗಣಪತಿ ಹಾಗೂ ಮೊಹರಂ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾ ಬಂದಿದ್ದಾರೆ.

    ಸುಧೀರ್ ಅವರ ತಂದೆ ಮೊದಲು ಮುಸ್ಲಿಂ ಸಮುದಾಯದ ಪಾಂಜಾಗಳು ಪ್ರತಿಷ್ಠಾಪನೆಗೊಳ್ಳುವ ಜಾಗವನ್ನು ಖರೀದಿ ಮಾಡಿದ್ದರು. ಖರೀದಿ ಮಾಡಿದ ಜಾಗದಲ್ಲಿ ಮನೆ ಕಟ್ಟಿಸಿದ ಬಳಿಕವೂ ಮುಸ್ಲಿಂ ಸಂಪ್ರದಾಯದಂತೆ ತಮ್ಮ ಮನೆಯಲ್ಲಿಯೇ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿದ್ದರು. ಅದಕ್ಕೆ ಮುಸ್ಲಿಂ ಸಂಪ್ರದಾಯದಂತೆ ಪೂಜೆ ಸಲ್ಲಿಸುತ್ತ ಬಂದಿದ್ದಾರೆ. ಮೊಹರಂ ವೇಳೆಯೇ ಮೂರು ವರ್ಷಕ್ಕೊಮ್ಮೆ ಗಣೇಶ ಚತುರ್ಥಿ ಬರುವುದರಿಂದ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡುವ ಜಾಗದ ಪಕ್ಕವೇ ಗಣೇಶನ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡಿ ಈ ಕುಟುಂಬ ಪೂಜೆ ಸಲ್ಲಿಸುತ್ತಿದೆ.

    ಇದರಿಂದ ಒಂದೇ ಮನೆಯಲ್ಲಿ ರಾಮನೂ, ರಹೀಮನೂ ನೆಲೆಸುವಂತಾಗಿದೆ. ಕಳೆದ 40 ವರ್ಷಗಳಿಂದ ತಮ್ಮ ಮನೆಯಲ್ಲಿ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡಿ, ಗಣೇಶನನ್ನೂ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಒಂದು ಭಾವೈಕ್ಯತೆಯ ಸಂದೇಶ ಸಾರುತ್ತಿದ್ದಾರೆ. ತಮ್ಮ ತಂದೆಯ ತರುವಾಯ ತಾವೇ ಪಾಂಜಾಗಳನ್ನು ಪ್ರತಿಷ್ಠಾಪನೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.

  • ಕುಳಿತಿರುವಾಗ್ಲೇ ಕುಸಿದ ಮನೆ ಮೇಲ್ಛಾವಣಿ- 20 ಮಂದಿಗೆ ಗಾಯ

    ಕುಳಿತಿರುವಾಗ್ಲೇ ಕುಸಿದ ಮನೆ ಮೇಲ್ಛಾವಣಿ- 20 ಮಂದಿಗೆ ಗಾಯ

    ಹೈದರಾಬಾದ್: ಮೊಹರಂ ಆಚರಣೆ ವೀಕ್ಷಿಸಲು ನೂರಾರು ಜನರು ಕುಳಿತಿದ್ದ ಮೇಲ್ಛಾವಣಿ ಕುಸಿದಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಥಂದ್ರಪಡು ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು, 20 ಜನರು ಗಾಯಗೊಂಡಿದ್ದಾರೆ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೊಹರಂ ಹಬ್ಬದ ಪ್ರಯುಕ್ತ ಹರಕೆ ಹೊತ್ತ ಭಕ್ತರು ಕೆಂಡದಲ್ಲಿ ಹಾಯುತ್ತಿದ್ದರು. ಈ ವೇಳೆ ಮನೆಯ ಮೇಲ್ಛಾವಣಿ ಕುಸಿಯುವ ದೃಶ್ಯಗಳು ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿವೆ.

    ಕೆಂಡ ಹಾಯುವ ದೃಶ್ಯಗಳನ್ನು ನೋಡಲು ಗ್ರಾಮಸ್ಥರು ಸುತ್ತಲಿನ ಮನೆಗಳ ಮೇಲ್ಛಾವಣಿ ಮೇಲೆ ಕುಳಿತಿದ್ದರು. ಹಳೆಯ ಮನೆಯಾಗಿದ್ದರಿಂದ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದಿದೆ. ನೆರದಿದ್ದ ಸ್ಥಳೀಯರು ಕೂಡಲೇ ಅವಶೇಷಗಳಡಿ ಸಿಲುಕಿದ್ದ ಎಲ್ಲರನ್ನು ರಕ್ಷಿಸಿದ್ದಾರೆ. ಸದ್ಯ ಎಲ್ಲ ಗಾಯಾಳುಗಳು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಳೆಗಾಗಿ ದೇವರ ಮುಂದೆ ಧರಣಿ ಕುಳಿತ ಗ್ರಾಮಸ್ಥರು

    ಮಳೆಗಾಗಿ ದೇವರ ಮುಂದೆ ಧರಣಿ ಕುಳಿತ ಗ್ರಾಮಸ್ಥರು

    ಕೊಪ್ಪಳ: ಮೊಹರಂ ಕೊನೆ ದಿನವಾದ ಮಂಗಳವಾರ ಕೊಪ್ಪಳದ ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರು ಧರಣಿ ಕುಳಿತಿದ್ದಾರೆ.

    ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಮೊಹರಂ ಕೊನೆ ದಿನದ ನಿಮಿತ್ತ ದೇವರನ್ನು ವಿಸರ್ಜನೆ ಮಾಡಲು ಹೋಗುವ ವೇಳೆ ಗ್ರಾಮಸ್ಥರು ಅಡ್ಡಗಟ್ಟಿ ಧರಣಿ ಕೂತಿದ್ದರು. ನೀರು ತುಂಬಿದ ಐದು ಕೊಡವನ್ನು ದೇವರ ಮುಂದೆ ಇಟ್ಟು ಗ್ರಾಮಸ್ಥರು ವರ ಕೇಳಿದ್ದರು. ಮಳೆ ಬರುವುದಾದರೆ ತಲೆ ಮೇಲೆ ನೀರು ಹಾಕು, ಬರುವುದಿಲ್ಲ ಎಂದಾದರೆ ನಮ್ಮನ್ನು ದಾಟಿಕೊಂಡು ಹಾಗೆ ಹೋಗು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಮಳೆ ಬರುತ್ತಾ ಇಲ್ವಾ ಎಂದು ಹೇಳಿ ಹೋಗು ಎಂದು ಪಟ್ಟು ಹಿಡಿದು ರಸ್ತೆಯಲ್ಲಿ ಧರಣಿ ಕುಳಿತಿದ್ದರು.

    ಈ ವೇಳೆ ಮೊಲಾಲಿ ದೇವರನ್ನು ಹೊತ್ತಿದ್ದವರು ಕೊಡದಲ್ಲಿದ್ದ ನೀರನ್ನು ಎತ್ತಿ ಸುರಿದುಕೊಂಡು ಮಳೆಯ ಮುನ್ಸೂಚನೆ ಕೊಟ್ಟು ಮುಂದೆ ಸಾಗಿದರು. ಈ ಮೂಲಕ ಗ್ರಾಮಸ್ಥರು ಬೇಡಿಕೆಗೆ ಮೊಲಾಲಿ ದೇವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಗ್ರಾಮದಲ್ಲಿ ಮಳೆಯಾಗದೆ ಭತ್ತ, ನಾಟಿ ಕಾರ್ಯ ಆರಂಭವಾಗದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದರು. ಈಗ ದೇವರ ಮಳೆಯ ಮುನ್ಸೂಚನೆ ನೀಡುರುವ ಪರಿಣಾಮ ಗುಂಡೂರು ಗ್ರಾಮಸ್ಥರು ಮಳೆಯ ನಿರೀಕ್ಷೆಯಲ್ಲಿದ್ದಾರೆ.