Tag: Moharam festival

  • ಕೊರೊನಾ ಭೀತಿ- ಮುದಗಲ್ ಮೊಹರಂ ಆಚರಣೆ ರದ್ದು

    ಕೊರೊನಾ ಭೀತಿ- ಮುದಗಲ್ ಮೊಹರಂ ಆಚರಣೆ ರದ್ದು

    ರಾಯಚೂರು: ಕೊರೊನಾ ಹಿನ್ನೆಲೆ ಜಿಲ್ಲೆಯ ಮುದಗಲ್ ನ ಮೊಹರಂ ಆಚರಣೆಯನ್ನು ರದ್ದು ಮಾಡಲಾಗಿದೆ.

    ಪ್ರತಿ ವರ್ಷ ಹಿಂದೂ, ಮುಸ್ಲಿಮರು ಸೇರಿ ಭಾವೈಕ್ಯದಿಂದ ಸುಮಾರು ಹತ್ತು ದಿನಗಳ ಕಾಲ ಮೊಹರಂ ಆಚರಣೆ ಮಾಡುತ್ತಿದ್ದರು. ಮುದಗಲ್ ಮೊಹರಂ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ಆಚರಣೆ ಮೂಲಕ ಪ್ರಸಿದ್ಧಿ ಪಡೆದಿದೆ. ಆದರೆ ಈ ವರ್ಷ ತ್ಯಾಗ ಬಲಿದಾನಗಳ ಸಂಕೇತವಾದ ಮೊಹರಂ ಆಚಣೆಯನ್ನು ಭಕ್ತರು ಮನೆಯಲ್ಲೇ ಮಾಡಿಕೊಳ್ಳಬೇಕಾಗಿದೆ.

    ಮುದಗಲ್ ಮೊಹರಂ ಆಚರಣೆ ನೋಡಲು ರಾಜ್ಯ ಹಾಗೂ ಅಂತರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತಿ ವರ್ಷ ಆಗಮಿಸುತ್ತಾರೆ. ಆದರೆ ಈ ವರ್ಷ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ನಿಯಮ ಪಾಲನೆ ಮಾಡುವ ಉದ್ದೇಶದಿಂದ ಇಂದಿನಿಂದ ಆರಂಭ ವಾಗಬೇಕಿದ್ದ ಮೊಹರಂ ಆಚರಣೆಯನ್ನು ದರ್ಗಾ ಕಮಿಟಿ ನಿರ್ಣಯದಂತೆ ರದ್ದು ಮಾಡಲಾಗಿದೆ.

    ಪ್ರತಿ ವರ್ಷ ಬೇರೆ ಜಿಲ್ಲೆಗಳಿಂದ ಆಲಂಗಳನ್ನು ಹೊತ್ತು ತಂದು ದೇವರ ಬಾವಿಯಲ್ಲಿ ತೊಳೆದುಕೊಂಡು ಹೋಗುತಿದ್ದ ಕಾರ್ಯವನ್ನು ಸಹ ನಿಷೇಧ ಮಾಡಲಾಗಿದೆ. ಬೇರೆ ಜಿಲ್ಲೆಯಿಂದ ಭಕ್ತರು ಆಲಂ ತರದಂತೆ ದರ್ಗಾ ಕಮಿಟಿ ಮನವಿ ಮಾಡಿದೆ. ದರ್ಗಾ ಕಮಿಟಿ ಸಭೆಯಲ್ಲಿ ಅಧ್ಯಕ್ಷ ಅಮಿರಬೇಗ್ ಉಸ್ತಾದ್ ಸೇರಿದಂತೆ ಕಮಿಟಿಯ ಸದಸ್ಯರು ಭಾಗವಹಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.