Tag: Mohan Dasari

  • ಭ್ರಷ್ಟಾಚಾರ, ಕಮಿಷನ್ ದಂಧೆ ನಿಲ್ಲಿಸಿದ್ರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತೆ: ಎಎಪಿ

    ಭ್ರಷ್ಟಾಚಾರ, ಕಮಿಷನ್ ದಂಧೆ ನಿಲ್ಲಿಸಿದ್ರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಹಣ ಉಳಿಯುತ್ತೆ: ಎಎಪಿ

    ಬೆಂಗಳೂರು: ಗ್ಯಾರಂಟಿ ಯೋಜನೆಗಳ (Guarantee Scheme) ಹೆಸರಲ್ಲಿ ರಾಜ್ಯ ಸರ್ಕಾರವು ಒಂದು ಕೈಯಲ್ಲಿ ಕೊಟ್ಟಂತೆ ನಟಿಸಿ ಇನ್ನೊಂದು ಕೈಯಲ್ಲಿ ಜನಸಾಮಾನ್ಯರ ಹಣವನ್ನು ತೆರಿಗೆ ರೂಪದಲ್ಲಿ ಕಿತ್ತುಕೊಳ್ಳುತ್ತಿದೆ. ಸಮರ್ಪಕವಾಗಿ ಸಂಪನ್ಮೂಲ ಕ್ರೋಡಿಕರಣ ಮಾಡಿದರೆ ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆಯನ್ನು ನಿಲ್ಲಿಸಿದರೆ ಗ್ಯಾರಂಟಿ ಯೋಜನೆಗಳಿಗೂ ಮಿಕ್ಕಿ ಇತರೆ ಎಲ್ಲಾ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಹಣ ಉಳಿಯುತ್ತದೆ ಎಂದು ಎಎಪಿ ಪಕ್ಷದ ನಾಯಕ ಮೋಹನ್ ದಾಸರಿ (Mohan Dasari) ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

    ತೈಲ ಬೆಲೆ ಏರಿಸಿರುವ (Price Hike) ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಮುಖಂಡರು, ಸ್ವಾತಂತ್ರ‍್ಯ ಉದ್ಯಾನವನ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ದ್ವಿಚಕ್ರ ವಾಹನಗಳಿಗೆ ಹೂವಿನ ಹಾರಗಳನ್ನು ಹಾಕಿ ಅಣುಕು ಅಂತ್ಯಕ್ರಿಯೆ ನಡೆಸುವ ಮೂಲಕ ಗಮನ ಸೆಳೆದರು. ಸೈಕಲ್‌ಗಳನ್ನು ಏರಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು. ಇದನ್ನೂ ಓದಿ: ಠಾಣೆಯಲ್ಲಿ ಪವಿತ್ರಾ ಗೌಡ ಕುಸಿದು ಬಿದ್ದಿದ್ದು ಲೋ ಬಿಪಿಯಿಂದ: ವೈದ್ಯೆ

    ಈ ಸಂದರ್ಭ ಮಾತನಾಡಿದ ಪಕ್ಷದ ಪ್ರಧಾನಕಾರ್ಯದರ್ಶಿ ಮೋಹನ್ ದಾಸರಿ, ಮೇ 2023ರಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ 1 ವರ್ಷದ ಅವಧಿಯೊಳಗೆ ಅಬಕಾರಿ ತೆರಿಗೆಯನ್ನು ಮೂರು ಬಾರಿ ಹೆಚ್ಚಿಸಿದ್ದಾರೆ. ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಗರಿಷ್ಠ 25% ರವರೆಗೆ ಏರಿಕೆ ಮಾಡಿದ್ದಾರೆ. ನಾನಾ ಹಂತದ ವಾಹನಗಳಿಗೆ ವಿಧಿಸುವ ತೆರಿಗೆಯನ್ನು ಹೆಚ್ಚಳ ಮಾಡಿದ್ದಾರೆ. ಬೇರೆ ಯಾವೆಲ್ಲ ಮೂಲಗಳಿಂದ ತೆರಿಗೆ ಹೆಸರಲ್ಲಿ ಜನಸಾಮಾನ್ಯರನ್ನು ಹಿಂಡಬಹುದು ಎಂದು ಹುಡುಕುತ್ತಿದ್ದಾರೆ. ಇದರರ್ಥ, ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕವಾಗಿ ಸುರಿಯುತ್ತಿರುವ 52 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒದ್ದಾಡುತ್ತಿದ್ದಾರೆ ಎಂಬುದಾಗಿದೆ. ಅಧಿಕಾರಕ್ಕೆ ಬರಬೇಕು ಎಂಬ ಹಪಾಹಪಿಯಲ್ಲಿ ಅಧ್ಯಯನ ರಹಿತವಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದೇ ಇದಕ್ಕೆಲ್ಲ ಮೂಲ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಜನರ ದುಡ್ಡು ತಗೊಂಡು ಜನರಿಗೆ ಕೊಡೋಕೆ ನೀವೇ ಆಡಳಿತ ಮಾಡಬೇಕಾ?- ಸಿಎಂ ವಿರುದ್ಧ ಹೆಚ್‌ಡಿಕೆ ಕಿಡಿ 

    ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಅನುಷ್ಠಾನಕ್ಕೆ ತಂದಿರುವ ಉಚಿತ ಯೋಜನೆಗಳು ಭಾರಿ ಯಶಸ್ಸು ಕಂಡಿವೆ. ಕಾರಣ ಸಮರ್ಪಕ ಸಂಪನ್ಮೂಲ ಕ್ರೋಡೀಕರಣ, ಭ್ರಷ್ಟಾಚಾರ ರಹಿತ ಆಡಳಿತ, ಅಧ್ಯಯನಶೀಲ ಉಚಿತ ಯೋಜನೆಗಳ ಅನುಷ್ಠಾನಗಳಾಗಿವೆ. ಆದರೆ ಈ ಯೋಜನೆಗಳನ್ನು ಕಾಪಿ ಮಾಡಿದ ಕಾಂಗ್ರೆಸ್ ಸರ್ಕಾರ ತರಾತುರಿಯಲ್ಲಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಳ್ಳುವ ಸಲುವಾಗಿ ಉಚಿತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಭ್ರಷ್ಟಾಚಾರ, ಕಮಿಷನ್ ದಂಧೆ ಎಂದಿನಂತೆ ಎಗ್ಗಿಲ್ಲದೆ ಮುಂದುವರಿದಿದೆ. ಮೊದಲು ಭ್ರಷ್ಟಾಚಾರ, ಕಮಿಷನ್‌ಗಿರಿಯನ್ನು ನಿಲ್ಲಿಸಿ. ಗ್ಯಾರಂಟಿ ಯೋಜನೆಗಳು ಸುಗಮವಾಗಿ ಸಾಗುತ್ತವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಿಸಾನ್ ಸಮ್ಮಾನ್ ಯೋಜನೆಯಡಿ 20 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

  • ಆಮ್ ಆದ್ಮಿ ಪಾರ್ಟಿ ಸೇರಿಕೊಂಡ ‘ಮುಖ್ಯಮಂತ್ರಿ’

    ಆಮ್ ಆದ್ಮಿ ಪಾರ್ಟಿ ಸೇರಿಕೊಂಡ ‘ಮುಖ್ಯಮಂತ್ರಿ’

    ಟ, ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಇಂದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ. ನಿನ್ನೆಯಷ್ಟೇ ಅವರು ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆ ಎಂದು ಅಧಿಕೃತವಾಗಿ ಪಾರ್ಟಿಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಅಲ್ಲದೇ, ಕೆಲವು ದಿನಗಳ ಹಿಂದೆಯಷ್ಟೇ ಚಂದ್ರು ಕೂಡ ಈ ಕುರಿತು ಮಾತನಾಡಿದ್ದಾರೆ. ದನ್ನೂ ಓದಿ: ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ : ಬಾಕ್ಸ್ ಆಫೀಸ್ ಧೂಳಿಪಟ

    ಇಂದು ಬೆಂಗಳೂರಿನಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಕರ್ನಾಟಕ ರಾಜ್ಯ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಪೃಥ್ವಿ ರೆಡ್ಡಿ, ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, ವಕ್ತಾರ ಮತಾಯಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು. ಚಂದ್ರು ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಕುರಿತು ಮಾತನಾಡಿದರು. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?

    ಮುಖ್ಯಮಂತ್ರಿ ಚಂದ್ರು ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆಗಿದ್ದರು. ಆದರೆ, ಆ ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಇತ್ತೀಚೆಗಷ್ಟೇ ಆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಆಮ್ ಆದ್ಮಿ ಪಾರ್ಟಿಯ ಸಿದ್ಧಾಂತಗಳು ಇಷ್ಟವಾದ ಕಾರಣದಿಂದಾಗಿ ಈ ಪಕ್ಷವನ್ನು ಸೇರ್ಪಡೆಗೊಂಡಿರುವುದಾಗಿ ಅವರು ಹೇಳಿದ್ದಾರೆ.

  • ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ – ಪ್ರಧಾನಿಗೆ ಪತ್ರ ಬರೆದು ತನಿಖೆಗೆ ಆಗ್ರಹ

    ಗುತ್ತಿಗೆ ಕಾಮಗಾರಿಗಳಲ್ಲಿ ಭ್ರಷ್ಟಾಚಾರ – ಪ್ರಧಾನಿಗೆ ಪತ್ರ ಬರೆದು ತನಿಖೆಗೆ ಆಗ್ರಹ

    ಬೆಂಗಳೂರು: ಗುತ್ತಿಗೆ ಕಾಮಗಾರಿಗಳಲ್ಲಿ ಶೇ.40ರಷ್ಟು ಭ್ರಷ್ಟಾಚಾರ ಆಗುತ್ತಿರುವ ಕುರಿತು ಸ್ವತಃ ಗುತ್ತಿಗೆದಾರರ ಸಂಘವೇ ಪ್ರಧಾನಿಗೆ ಪತ್ರ ಬರೆದಿದ್ದರೂ ಯಾವುದೇ ತನಿಖೆಗೆ ಆದೇಶಿಸದಿರುವುದನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ನಡೆಸಿ ಖಂಡಿಸಿದೆ.

    ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷರಾದ ಮೋಹನ್ ದಾಸರಿ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿರುವ ಡಿ.ಕೆಂಪಣ್ಣರವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾರೆ. ಯಾವುದೇ ರಾಜಕಾರಣಿ ಅಥವಾ ವಿರೋಧ ಪಕ್ಷದವರಲ್ಲದ ಡಿ.ಕೆಂಪಣ್ಣರವರು ಲಿಖಿತ ರೂಪದಲ್ಲಿ ಮಾಡಿರುವ ಆರೋಪಕ್ಕೆ ಭಾರೀ ಮಹತ್ವವಿದೆ. ನರೇಂದ್ರ ಮೋದಿಯವರು ತಕ್ಷಣವೇ ಮಧ್ಯಪ್ರವೇಶಿಸಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿಗೆ ನಿಷೇಧವಿಲ್ಲ- ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ

    ಬೇರೆ ಪಕ್ಷದ ಆಡಳಿತವಿದ್ದಾಗ ಬೆಂಗಳೂರಿಗೆ ಬಂದಿದ್ದ ಮೋದಿಯವರು ಕರ್ನಾಟಕ ಸರ್ಕಾರವನ್ನು 10% ಸರ್ಕಾರವೆಂದು ಟೀಕಿಸಿದ್ದರು. ಆದರೆ ಈಗ ಡಿ.ಕೆಂಪಣ್ಣರವರು ಪತ್ರ ಬರೆದು ಒಂದು ವಾರವಾದರೂ ಮೋದಿಯವರು ಪ್ರತಿಕ್ರಿಯಿಸಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜ್ಯಕ್ಕೆ ಶಾಪವಾಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಗುತ್ತಿಗೆ ಭ್ರಷ್ಟಾಚಾರದ ಬಗ್ಗೆ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿವೆ. ಆದ್ದರಿಂದಲೇ ಡಿ.ಕೆಂಪಣ್ಣರವರ ಪತ್ರವು ಸಂಚಲನ ಸೃಷ್ಟಿಸಿದ್ದರೂ ಮೂರು ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಪ್ರಕರಣವನ್ನು ಮುಚ್ಚಿ ಹಾಕಲು ಮೂರು ಪಕ್ಷಗಳೂ ಯತ್ನಿಸುತ್ತಿವೆ ಎಂದು ಮೋಹನ್ ದಾಸರಿ ಆರೋಪಿಸಿದ್ದಾರೆ. ಇದನ್ನೂ ಓದಿ: ಡಿಜೆ ಮ್ಯೂಸಿಕ್ ಶಬ್ದಕ್ಕೆ 63 ಕೋಳಿ ಬಲಿ

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂರವರು ಮಾತನಾಡಿ, ಗುತ್ತಿಗೆ ಕಾಮಗಾರಿಗಳ ಮೊತ್ತದಲ್ಲಿ ಸಚಿವರಿಗೆ 5%. ಸಂಸದರಿಗೆ 2%, ಸ್ಥಳೀಯ ಜನಪ್ರತಿನಿಧಿಗಳಿಗೆ 10%, ಬಿಲ್ ಪಾವತಿಸುವ ಅಧಿಕಾರಿಗಳಿಗೆ 6% ಹೀಗೆ ಶೇ. 40ರಷ್ಟು ಬಿಜೆಪಿ ಟ್ಯಾಕ್ಸ್ ಅಕ್ರಮವಾಗಿ ಜನಪ್ರತಿನಿಧಿಗಳ ಜೇಬು ಸೇರುತ್ತಿರುವುದನ್ನು ಡಿ.ಕೆಂಪಣ್ಣರವರು ಪತ್ರದಲ್ಲಿ ಬಹಿರಂಗಪಡಿಸಿದ್ದಾರೆ. ಕೆಲವೇ ವರ್ಷಗಳಲ್ಲಿ ತಮ್ಮ ಆಸ್ತಿಪಾಸ್ತಿಗಳನ್ನು ಅನೇಕ ಪಟ್ಟು ಹೆಚ್ಚಿಸಿಕೊಂಡಿರುವ ಜನಪ್ರತಿನಿಧಿಗಳ ಆಸ್ತಿ ಗಳಿಕೆಯ ಮೂಲದ ಕುರಿತು ಸಮಗ್ರ ತನಿಖೆ ನಡೆಯಲೇಬೇಕು, ಕಳೆದ ಹತ್ತು ವರ್ಷಗಳಲ್ಲಿ ಯಾವ್ಯಾವ ಕಾಮಗಾರಿಗಳಲ್ಲಿ ಎಷ್ಟೆಷ್ಟು ಮೊತ್ತ ಯಾವ್ಯಾವ ರಾಜಕಾರಣಿಯ ಜೇಬು ಸೇರಿದೆ ಎಂಬುದು ಜನರಿಗೆ ತಿಳಿಯಬೇಕು ಎಂದು ಹೇಳಿದರು.

    ಎಎಪಿ ಮುಖಂಡರಾದ ಬಿ.ಟಿ.ನಾಗಣ್ಣ, ಸುರೇಶ್ ರಾಥೋಡ್, ಪ್ರಕಾಶ್ ನೆಡುಂಗಡಿ, ವಿಜಯ್ ಶಾಸ್ತ್ರಿಮಠ್, ಮಹೇಶ್ ಬಾಬು, ಜಗದೀಶ್ ಚಂದ್ರ, ಉಷಾ ಮೋಹನ್, ಸುಹಾಸಿನಿ, ಡಾ. ರಮೇಶ್ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

  • ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಕಾಣೆಯಾಗಿದ್ದಾರೆ: ಎಎಪಿ

    ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಕಾಣೆಯಾಗಿದ್ದಾರೆ: ಎಎಪಿ

    ಬೆಂಗಳೂರು: ಗಾಂಧಿನಗರ ಕ್ಷೇತ್ರದ ರಸ್ತೆಗಳ ತುಂಬಾ ಗುಂಡಿಗಳು ಬಿದ್ದು ಜನರು ಪರದಾಡುತ್ತಿದ್ದರೆ, ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್‍ರವರು ಸಮಸ್ಯೆ ಆಲಿಸಿ ಪರಿಹರಿಸುವ ಬದಲು ಕಾಣೆಯಾಗಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದ್ದಾರೆ.

    ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಜನರು ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್‍ರವರನ್ನು ನೆನಪಿಸಿಕೊಂಡು ದಿನೇಶ್ ಗುಂಡೂರಾವ್‍ರವರನ್ನು ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಆದರೆ ಕ್ಷೇತ್ರದ ಮೇಲೆ ಅವರಿಗಿರುವ ಅಸಡ್ಡೆಯಿಂದಾಗಿ ಅವರ ತಂದೆಯ ಹೆಸರಿಗೆ ಧಕ್ಕೆಯಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಸಂಪೂರ್ಣ ಕಡೆಗಣಿಸಿ ಹೊರರಾಜ್ಯಗಳಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಗಾಂಧಿನಗರದ ಶಾಸಕ ಸ್ಥಾನಕ್ಕಿಂತ ಗೋವಾ ಮತ್ತು ತಮಿಳುನಾಡಿನ ಕಾಂಗ್ರೆಸ್ ಉಸ್ತುವಾರಿಯೇ ಅವರಿಗೆ ಮುಖ್ಯವಾಗಿದೆ. ಪರಿಣಾಮವಾಗಿ ಮತ ನೀಡಿದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ

    ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿರುವ ದಿನೇಶ್ ಗುಂಡೂರಾವ್‍ರವರನ್ನು ಸಾಮಾಜಿಕ ತಾಣಗಳಲ್ಲಿ ಪ್ರಶ್ನಿಸಿದರೆ, ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಚುನಾವಣೆ ವೇಳೆ ಆಶ್ವಾಸನೆಗಳನ್ನು ನೀಡಿ ಗೆದ್ದು, ಅಧಿಕಾರ ಸಿಕ್ಕ ನಂತರ ಅಸಹಾಯಕತೆ ವ್ಯಕ್ತಪಡಿಸುವ ಅವರಿಗೆ ನಾಚಿಕೆಯಾಗಬೇಕು. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವೇ ಹೊರತು ಬೇರೇನೂ ಅಲ್ಲ. ನೆರೆ ರಾಜ್ಯಗಳಿಗೆ ಪಲಾಯನ ಮಾಡಿರುವ ಅವರು ಇನ್ನಾದರೂ ವಾಪಸ್ ಬಂದು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ. ಸಾಧ್ಯವಾಗದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ಏನಾದರೂ ಮಾಡಿಕೊಳ್ಳಲಿ ಎಂದು ಮೋಹನ್ ದಾಸರಿಯವರು ದಿನೇಶ್ ಗುಂಡೂರಾವ್‍ರವರನ್ನು ತರಾಟೆಗೆ ತೆಗೆದುಕೊಂಡರು.

    ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಕಾರ್ಪೋರೇಟರ್‌ಗಳು ಹಾಗೂ ಕಾರ್ಯಕರ್ತರ ನಡವಳಿಕೆ ಮೀತಿಮೀರಿದ್ದು, ಕ್ಷೇತ್ರದ ಸಮಸ್ಯೆಗಳನ್ನು ಪ್ರಶ್ನಿಸುವ ಆಮ್ ಆದ್ಮಿ ಪಾರ್ಟಿ ಮುಖಂಡರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅವರ ಗೂಂಡಾಗಿರಿ ಇದೇ ರೀತಿ ಮುಂದುವರಿದರೆ ‘ದಿನೇಶ್ ಗುಂಡೂರಾವ್ ಹಠಾವೋ’ ಆಂದೋಲನದ ಮೂಲಕ ಜನರ ಬಳಿ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು- ಸಿದ್ದುಗೆ ಸಿ.ಟಿ.ರವಿ ಪ್ರಶ್ನೆ

    ದಿನೇಶ್ ಗುಂಡೂರಾವ್‍ರವರು 1999ರಿಂದಲೂ ಕ್ಷೇತ್ರ ಶಾಸಕರಾಗಿದ್ದು, ರಾಜಕೀಯ ಹೊಂದಾಣಿಕೆಯಿಂದ ಕಳೆದ ಐದು ಚುನಾವಣೆ ಗೆದ್ದಿದ್ದಾರೆ. ಸ್ವಲ್ಪವಾದರೂ ಸುಸ್ಥಿತಿಯಲ್ಲಿದ್ದ ಕ್ಷೇತ್ರವನ್ನು ಸಂಪೂರ್ಣ ಹಾಳುಗೆಡವಿರುವುದೇ ಅವರ 22 ವರ್ಷಗಳ ಸಾಧನೆ. ಶಾಲೆ, ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳು ಸೂಕ್ತ ರೀತಿಯಲ್ಲಿ ಇಲ್ಲದ ಗಾಂಧಿನಗರ ಕ್ಷೇತ್ರವು ದೇಶದಲ್ಲೇ ಅತ್ಯಂತ ಹಿಂದುಳಿದ ಕ್ಷೇತ್ರವಾಗಿರಬಹುದು. ಕ್ಷೇತ್ರದ ಬಗ್ಗೆ ಹಾಗೂ ಮತದಾರರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತೋರುವ ಶಾಸಕರು ಬಹುಶಃ ಮತ್ತೊಬ್ಬರು ಇರಲಿಕ್ಕಿಲ್ಲ. ಸಮಸ್ತ ಗಾಂಧಿನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಇಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಬಲಗೊಳಿಸಲಾಗುತ್ತಿದೆ ಎಂದರು.

    ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ದಿನೇಶ್ ಗುಂಡೂರಾವ್‍ರವರ ಅಧಿಕಾರದಲ್ಲಿ ಅವರ ಪತ್ನಿ ಟಬು ರಾವ್‍ರವರ ಹಸ್ತಕ್ಷೇಪ ಅತಿಯಾಗಿದೆ. ಶಾಸಕರು ಕ್ಷೇತ್ರದಲ್ಲಿ ದೀರ್ಘಕಾಲ ಇಲ್ಲದಿರುವುದರ ಲಾಭವನ್ನು ಟಬು ರಾವ್ ಪಡೆಯುತ್ತಿದ್ದಾರೆ. ಜನಪ್ರತಿನಿಧಿಯಂತೆ ಅಧಿಕಾರದಿಂದ ಮೆರೆಯುತ್ತಿದ್ದಾರೆ. ಇದು ಅಸಂವಿಧಾನಿಕವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದ್ರೋಹವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿಎಂ ಆಗ್ಲೇಬೇಕುಂತ ರಗ್ಗು ಹೊದ್ದು ಮಲಗಿದ್ದ ಸಿದ್ದರಾಮಯ್ಯರನ್ನು ಕರ್ಕೊಂಡು ಬಂದಿದ್ದು ನಾನು: ಹೆಚ್‍ಡಿಕೆ

    ಕಾನೂನು ಸಮರಕ್ಕೆ 57 ವಕೀಲರು
    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ವಕೀಲರ ಘಟಕದ ಅಧ್ಯಕ್ಷ ಮಂಜುನಾಥ ಸ್ವಾಮಿಯವರು ಮಾತನಾಡಿ, ರಸ್ತೆಗುಂಡಿಗಳಿಗೆ ಕಾರಣರಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಲು 57 ಅನುಭವಿ ವಕೀಲರ ತಂಡವನ್ನು ರಚಿಸಲಾಗಿದೆ. ಸದ್ಯದಲ್ಲೇ 150ಕ್ಕೂ ಹೆಚ್ಚು ವಕೀಲರು ನಮ್ಮೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ. ಕರ್ತವ್ಯದಲ್ಲಿ ಲೋಪ ಎಸಗಿದ ಹಾಗೂ ಅಕ್ರಮದಲ್ಲಿ ಭಾಗಿಯಾದವರು ತಕ್ಕ ಬೆಲೆ ತೆರುವಂತೆ ಮಾಡುತ್ತೇವೆ ಎಂದು ಹೇಳಿದರು.

    ಕ್ಷೇತ್ರದ ಮುಖಂಡರುಗಳಾದ ಪುಷ್ಪ ಕೇಶವ್, ಗೋಪಿನಾಥ್ ಹಾಗೂ ಪಕ್ಷದ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

  • ಬೆಂಗಳೂರಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧ: ಜಗದೀಶ್

    ಬೆಂಗಳೂರಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧ: ಜಗದೀಶ್

    ಬೆಂಗಳೂರು: ನಗರದ ರಸ್ತೆ ಗುಂಡಿಗಳು ಹಾಗೂ ಕಳಪೆ ರಸ್ತೆ ಕಾಮಗಾರಿ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿಯು ಕಾರ್ಯಪಡೆ ಹಾಗೂ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದ್ದು, ಇಲ್ಲಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ಸಿದ್ಧವಿದ್ದೇವೆ ಎಂದು ಪಕ್ಷದ ಮುಖಂಡ ಹಾಗೂ ಖ್ಯಾತ ವಕೀಲರಾದ ಜಗದೀಶ್ ಮಹಾದೇವ್ ತಿಳಿಸಿದರು.

    ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಭ್ರಷ್ಟಾಚಾರದಿಂದಾಗಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳು ಬಿದ್ದಿವೆ. ಇವುಗಳಿಂದಾಗಿ ಕೆಲವು ವಾಹನಸವಾರರು ಕೈಕಾಲು ಮುರಿದುಕೊಂಡರೆ, ಇನ್ನು ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ. ರಸ್ತೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿಯು ಸಮರ ಆರಂಭಿಸಿದ್ದು, ಇದಕ್ಕಾಗಿ ವಿಶೇಷ ಕಾರ್ಯಪಡೆ ಹಾಗೂ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸುತ್ತಿದ್ದೇವೆ. ಸೂಕ್ತ ಕಾನೂನು ಹೋರಾಟದ ಮೂಲಕ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವ ಪಣತೊಟ್ಟಿದ್ದೇವೆ” ಎಂದು ಹೇಳಿದರು. ಇದನ್ನೂ ಓದಿ: ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಖ್ಯಾತ ವಕೀಲ ಜಗದೀಶ್

    ನಗರದಲ್ಲಿ ರಸ್ತೆ ಕಳಪೆ ಕಾಮಗಾರಿ ನಡೆಯುತ್ತಿರುವುದು ಹಾಗೂ ಅಪಾಯಕಾರಿ ಗುಂಡಿಗಳು ಕಂಡುಬಂದರೆ ತಕ್ಷಣವೇ ನಮ್ಮ ವಾಟ್ಸಪ್ ಸಹಾಯವಾಣಿ 9513319676 ಸಂಖ್ಯೆಗೆ ಮೆಸೇಜ್ ಕಳುಹಿಸಬಹುದು. ನಮ್ಮ ಕಾರ್ಯಪಡೆಯು ಪ್ರಕರಣದ ಬಗ್ಗೆ ಪರಾಮರ್ಶೆ ನಡೆಸಿ ಕೂಡಲೇ ಕಾರ್ಯಪ್ರವೃತ್ತವಾಗಲಿದೆ. ಬಿಬಿಎಂಪಿ, ಸ್ಥಳೀಯ ಶಾಸಕ, ಮಾಜಿ ಕಾರ್ಪೊರೇಟರ್‌, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಆರಂಭಿಸುತ್ತೇವೆ. ರಾಜಧಾನಿ ಬೆಂಗಳೂರು ಹಾಗೂ ಇಲ್ಲಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ನಾವು ಸಂಪೂರ್ಣ ಸಿದ್ಧವಿದ್ದೇವೆ ಎಂದು ಅಭಯ ವ್ಯಕ್ತಪಡಿಸಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿಯವರು ಮಾತನಾಡಿ, ಬೆಂಗಳೂರಿನ ರಸ್ತೆಗುಂಡಿಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವು ನಿರಂತರವಾಗಿ ಹೋರಾಡುತ್ತಿದೆ. ಹಲವು ಪ್ರತಿಭಟನೆ ಹಾಗೂ ರಸ್ತೆಗುಂಡಿ ಹಬ್ಬ ಎಂಬ ವಿನೂತನ ಚಳುವಳಿ ನಡೆಸಿ ಜನಜಾಗೃತಿ ಮೂಡಿಸಿದ್ದೇವೆ. ಈಗ ವಾಟ್ಸಪ್ ಸಹಾಯವಾಣಿ ಹಾಗೂ ಕಾರ್ಯಪಡೆಯ ಮೂಲಕ ಮತ್ತೊಂದು ಹಂತದ ಹೋರಾಟ ಆರಂಭಿಸುತ್ತಿದ್ದೇವೆ. ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಬೆಂಗಳೂರಿನ ರಸ್ತೆಗಳಿಗಾಗಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 20,000 ಕೋಟಿ ಮೊತ್ತವನ್ನು, ಅಂದರೆ ದಿನಕ್ಕೆ ಸರಾಸರಿ 11 ಕೋಟಿ ರೂಪಾಯಿಯನ್ನು ಖರ್ಚು ಮಾಡಿವೆ. ಇದು ಜನರ ತೆರಿಗೆ ಹಣವಾಗಿದ್ದು, ಇದರಲ್ಲಾದ ಭ್ರಷ್ಟಾಚಾರವನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕು ಜನರಿಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊರಗಜ್ಜನಿಗೆ ನೈವೇದ್ಯ ರೂಪದಲ್ಲಿಟ್ಟ ಮದ್ಯ ಎಗರಿಸಿದ ಭೂಪ

    ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಹಾಗೂ ಜ್ಯೋತಿಷ್ ಕುಮಾರ್ ಉಪಸ್ಥಿತರಿದ್ದರು.

  • ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹ

    ಶೈಕ್ಷಣಿಕ ಗೊಂದಲಗಳ ನಿವಾರಣೆಗಾಗಿ ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹ

    – ಬೃಹತ್ ಜನಜಾಗೃತಿ ಕಾರ್ಯಕ್ರಮ

    ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಶೈಕ್ಷಣಿಕ ಶುಲ್ಕಗಳು, ಸರ್ಕಾರಿ ಶಾಲೆಗಳ ದುವ್ರ್ಯವಸ್ಥೆ, ಖಾಸಗಿ ಶಿಕ್ಷಕರ ಸಮಸ್ಯೆ, ಶುಲ್ಕ ನಿಯಂತ್ರಣ ಪ್ರಾಧಿಕಾರದ ರಚನೆ ಸೇರಿದಂತೆ ಹಲವಾರು ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರವು ಸಂಪೂರ್ಣ ವೈಫಲ್ಯಗೊಂಡಿದೆ. ಈ ಗೊಂದಲ ನಿವಾರಣೆಗಾಗಿ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹ ಮತ್ತು ಜನಗಾಗೃತಿ ಕಾರ್ಯಕ್ರಮ ನಡೆಯಲಿದೆ.

    ಸರ್ಕಾರದ ಹೊಣೆಗೇಡಿತನದ ಪರಿಣಾಮವಾಗಿ ಇಂದು ರಾಜ್ಯದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸಂಕಷ್ಟಕ್ಕೀಡಾಗಿದೆ. ಶಾಲಾ ಶುಲ್ಕ ಗಳ ವಿಚಾರದಲ್ಲಿಯೂ ಸಹ ಪೋಷಕ ವರ್ಗ ಸಮಸ್ಯೆಗೀಡಾಗಿದೆ. ಈ ಎಲ್ಲ ಗೊಂದಲಗಳಿಂದಾಗಿ ಲಕ್ಷಾಂತರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಸರ್ಕಾರದ ಈ ಎಲ್ಲಾ ವೈಫಲ್ಯಗಳನ್ನು ಬಗೆಹರಿಸಲು ಒತ್ತಾಯಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಸಾವಿರಾರು ಕಾರ್ಯಕರ್ತರು ಸತತ 15 ದಿನಗಳ ಕಾಲ ರಾಜ್ಯದಾದ್ಯಂತ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕನಿಷ್ಠ 5 ಲಕ್ಷ ಮನೆಗಳಿಗೆ ತೆರಳಿ ಸಹಿ ಸಂಗ್ರಹಣೆ ಹಾಗೂ ಬೃಹತ್ ಜನಾಂದೋಲನ ಕಾರ್ಯ ಕ್ರಮವನ್ನು ನಡೆಸುವವರಿದ್ದಾರೆ ಎಂದು ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಪತ್ರಿಕಾಗೋಷ್ಠಿ ನಡೆಸಿ ಸಮಗ್ರ ಚಿತ್ರಣ ನೀಡಿದರು. ಇದನ್ನೂ ಓದಿ: ಕರ್ನಾಟಕ ನಂಬರ್ 1 ಕೈಗಾರಿಕಾ ಸ್ನೇಹಿ ರಾಜ್ಯವಾಗುತ್ತೆ: ಜಗದೀಶ್ ಶೆಟ್ಟರ್

    ಕರಪತ್ರ, ಎಲ್.ಇ.ಡಿ ವಾಹನ, ವಿಚಾರಗೋಷ್ಠಿಗಳು, ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಈ ಅಭಿಯಾನವನ್ನು ಯಶಸ್ವಿಯಾಗಿಸಲು ಈಗಾಗಲೇ ಹಲವು ರೂಪುರೇಷೆಗಳನ್ನು ಪಕ್ಷವು ಕೈಗೊಂಡಿದೆ ಎಂದು ಮಾಹಿತಿ ಹಂಚಿಕೊಂಡರು.

  • ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

    ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

    – ಸಾವಿರಾರು ಕೋಟಿ ಮೌಲ್ಯದ ಮೌಲ್ಯದ ಭೂ ಕಬಳಿಕೆ ಆರೋಪ
    – ಈ ಹಿಂದೆ ವಿರೋಧಿಸಿದ್ದ ಯೋಜನೆಗೆ ಬಿಜೆಪಿ ಮುಂದಾಗಿದ್ದೇಕೆ?

    ಬೆಂಗಳೂರು: ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ರವರು ಅಕ್ರಮವಾಗಿ ಹಣ ಮಾಡಲು ಒಂದಿಲ್ಲೊಂದು ಯೋಜನೆ ರೂಪಿಸುತ್ತಲೇ ಇದ್ದಾರೆ. ಈಗ ಏಳು ಬಿಡಿಎ ಕಾಂಪ್ಲೆಕ್ಸ್ ಗಳ ಮರು ನಿರ್ಮಾಣ ಮಾಡುವ ಉದ್ದೇಶ ಕೂಡ ದೊಡ್ಡ ಪ್ರಮಾಣದಲ್ಲಿ ಲೂಟಿ ಮಾಡುವುದೇ ಆಗಿದೆ. ಇಂದಿರಾನಗರ, ಆಸ್ಟಿನ್ ಟೌನ್, ವಿಜಯನಗರ, ಸದಾಶಿವನಗರ ,ದೊಮ್ಮಲೂರು, ಎಚ್.ಎಸ್. ಆರ್ ಬಡಾವಣೆ ಸೇರಿದಂತೆ ಸೇರಿದಂತೆ ಯಾವುದೇ ಕಾರಣಕ್ಕೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಂಪ್ಲೆಕ್ಸ್ ಗಳನ್ನು ಒಡೆಯಲು ಹಾಗೂ ಅವು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

    ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಕೂಡ ಇದೇ ಯೋಜನೆಗೆ ಕೈಹಾಕಿತ್ತು. ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯೋಜನೆಯನ್ನು ಜಾರಿಗೆ ತಂದಿರಲಿಲ್ಲ. ಆಗ ವಿರೋಧಿಸಿದ್ದ ಬಿಜೆಪಿಯವರೇ ಈಗ ಮರುನಿರ್ಮಾಣದ ಹೆಸರಿನಲ್ಲಿ ದುಡ್ಡು ಮಾಡಲು ಹೊರಟಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಒಂದು ನಿಲುವು, ಅಧಿಕಾರದಲ್ಲಿದ್ದಾಗ ಮತ್ತೊಂದು ನಿಲುವು ತೆಗೆದುಕೊಳ್ಳುವ ಬಿಜೆಪಿಗೆ ನಾಚಿಕೆಯಾಗಬೇಕು ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

    ಬಿಡಿಎ ಕಾಂಪ್ಲೆಕ್ಸ್‍ಗಳು ಅಮೂಲ್ಯ ಸರ್ಕಾರಿ ಸ್ವತ್ತುಗಳು. ಮರುನಿರ್ಮಾಣದ ಹೆಸರಿನಲ್ಲಿ ಬರೋಬ್ಬರಿ 5,000 ಕೋಟಿ ರೂಪಾಯಿ ಮೌಲ್ಯದ ಅವುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಖಾಸಗಿಯವರಿಂದ ಬಿಡಿಎ ಅಧ್ಯಕ್ಷರಿಗೆ ಭಾರೀ ಪ್ರಮಾಣದ ಕಿಕ್‍ಬ್ಯಾಕ್ ಸಿಗಲಿದೆ. ಈಗ 30 ವರ್ಷಗಳ ಅವಧಿಗೆ ಖಾಸಗಿಯವರಿಗೆ ಬಿಟ್ಟುಕೊಟ್ಟು, ನಂತರ ಅದನ್ನು ಮತ್ತೆ 30 ವರ್ಷ ವಿಸ್ತರಿಸಲೂ ಅವಕಾಶ ನೀಡಲಾಗುತ್ತಿದೆ. ಆದರೆ 60 ವರ್ಷಗಳ ಬಳಿಕವೂ ಅವು ಸರ್ಕಾರದ ಸುಪರ್ದಿಗೆ ಮರಳುವುದಿಲ್ಲ. ದಿವ್ಯಶ್ರೀ ಚೇಂಬರ್ಸ್, ಚಿಕ್ಕಪೇಟೆಯಲ್ಲಿರುವ ಕೆಂಪೇಗೌಡ ಮಹಾರಾಜ ಕಾಂಪ್ಲೆಕ್ಸ್, ಗಾಂಧಿನಗರದಲ್ಲಿರುವ ಗುಪ್ತಾ ಮಾರುಕಟ್ಟೆಯು ಈಗಾಗಲೇ ಖಾಸಗಿಯವರ ಪಾಲಾಗಿದ್ದು, ಇವುಗಳನ್ನು ವಾಪಸ್ ಪಡೆಯಲು ಬಿಬಿಎಂಪಿಗೆ ಸಾಧ್ಯವಾಗುತ್ತಿಲ್ಲ ಎಂದು ಎಂದು ಮೋಹನ್ ದಾಸರಿ ಹೇಳಿದರು.

    ಯೋಜನೆಯ ಗುತ್ತಿಗೆ ಪಡೆದಿರುವ ಎಂಬೆಸ್ಸಿ, ಮೇವರಿಕ್ ಹಾಗೂ ಎಂ-ಫಾರ್ ಸಂಸ್ಥೆಗಳೊಂದಿಗೆ ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್‍ಗೆ ಲಿಂಕ್ ಇದೆ. ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿ ಕೆ.ಜೆ.ಜಾರ್ಜ್ ಮಾಲೀಕತ್ವದ ಎಂಬೆಸ್ಸಿ ಕಂಪನಿಯು ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಉದಯ್ ಗರುಡಾಚಾರ್ ರವರ ಮೇವರಿಕ್ ಹಾಗೂ ಎಂ-ಫಾರ್ ಕಂಪನಿಗಳೊಂದಿಗೆ ಹಿಂದೆಯೂ ಅನೇಕ ಪ್ರಾಜೆಕ್ಟ್ ಗಳಲ್ಲಿ ಪಾಲುದಾರಿಕೆ ಹೊಂದಿತ್ತು. ಈಗಾಗಲೇ ಬಿಬಿಎಂಪಿ ಆಸ್ತಿಯಾಗಿದ್ದ ಎಂಜಿ ರಸ್ತೆಯ ಗರುಡಾಮಾಲ್ ಇವರುಗಳ ಪಾಲಾಗಿದೆ.

    ಪಿಪಿಪಿ ಮಾದರಿಯಲ್ಲಿ ಮರುನಿರ್ಮಾಣ ಎಂಬುದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಒಟ್ಟಾಗಿ ಮಾಡುತ್ತಿರುವ ಗೋಲ್‍ಮಾಲ್ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ:ಗಾಜಿಪುರ ಗಡಿಯಲ್ಲಿ ಧರಣಿ ನಿರತ ರೈತರು, ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ

    ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಂಗ್ರೆಸ್- ಬಿಜೆಪಿ ಪಕ್ಷಗಳ ಪ್ರಭಾವಿ ನಾಯಕರುಗಳ ಒಡೆತನದ ಬಿಲ್ಡರ್ ಕಂಪೆನಿಗಳಿಗೆ ಬೆಂಗಳೂರಿನ ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಸಾರಾಸಗಟಾಗಿ ನುಂಗಲು ಹೊರಟಿರುವುದು ಬೆಂಗಳೂರಿಗರ ಪಾಲಿಗೆ ದುರ್ದೈವದ ಸಂಗತಿ.ಸಾರ್ವಜನಿಕರ ಆಸ್ತಿಯನ್ನು ಕೊಳ್ಳೆ ಹೊಡೆಯುವ ಈ ನಿರ್ಧಾರದಿಂದ ತಕ್ಷಣವೇ ಹಿಂದೆಸರಿಯದಿದ್ದರೆ ಆಮ್ ಆದ್ಮಿ ಪಾರ್ಟಿ ಭಾರೀ ಪ್ರತಿಭಟನೆ ಮಾಡಲಿದೆ ಎಂದು ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ರಾಯಚೂರು ನಗರಸಭೆಯಲ್ಲಿ ತಿಂಗಳ ಮಾಮೂಲಿ ಜಗಳ-ಅಧ್ಯಕ್ಷನ ವಿರುದ್ಧ ಜೀವಬೆದರಿಕೆ ದೂರು