Tag: Modi victory

  • ಮೋದಿ ಪ್ರಮಾಣ ವಚನ – ಶೂ ಪಾಲಿಶ್ ಮಾಡಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

    ಮೋದಿ ಪ್ರಮಾಣ ವಚನ – ಶೂ ಪಾಲಿಶ್ ಮಾಡಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

    ಇಂದೋರ್: ಒಂದೆಡೆ ಎರಡನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದರೆ, ಇತ್ತ ಬಿಜೆಪಿ ಕಾರ್ಯಕರ್ತರು ವಿಶಿಷ್ಟ ರೀತಿಯಲ್ಲಿ ತಮ್ಮ ಪಕ್ಷ ಹಾಗೂ ನಾಯಕನ ಜಯವನ್ನು ಸಂಭ್ರಮಿಸಿದ್ದಾರೆ.

    ಗುರುವಾರ ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಮೊದಲು ಬಿಜೆಪಿಯ ಕಾರ್ಪೋರೇಟರ್ಸ್ ಸೇರಿದಂತೆ ಹಲವು ಕಾರ್ಯಕರ್ತರು ರ್ಯಾಡಿಸನ್ ಚೌಕ್ ನಲ್ಲಿ ಸಾರ್ವಜನಿಕರ ಶೂ ಪಾಲಿಶ್ ಮಾಡಿದ್ದಾರೆ. ಕಾರ್ಪೋರೇಟರ್ ಸಂಜಯ್ ಕಠಾರಿಯಾ ನೇತೃತ್ವದ ತಂಡ ಈ ರೀತಿ ಜನ ಸೇವೆ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ದು ಎಲ್ಲರ ಗಮನ ಸೆಳೆದಿದೆ.

    ಬಿಜೆಪಿ ಲೋಕಸಭಾ ಚುನಾವನೆಯಲ್ಲಿ ಭರ್ಜರಿ ಜಯಗಳಿಸಿ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಉಚಿತ ಬಸ್, ಆಟೋ ಸೇವೆ, ಉಚಿತ ಊಟದ ವ್ಯವಸ್ಥೆ ಹೀಗೆ ವಿಧವಿಧವಾಗಿ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಕಠಾರಿಯಾ ಅವರು, ಪ್ರತಿಯೊಂದು ಕೆಲಸವನ್ನು ಸಮಾನವಾಗಿ ನೋಡಬೇಕು ಎಂದು ಮೋದಿ ಅವರು ಹೇಳಿದ್ದಾರೆ. ಸ್ವತಃ ಅವರೇ ಕೈಯಲ್ಲಿ ಪೊರಕೆ ಹಿಡಿದು ಸ್ವಚ್ಛತೆ ಕಾರ್ಯವನ್ನು ಮಾಡಿದ್ದಾರೆ. ಹೀಗಾಗಿ ನಾವು ಮೋದಿ ಅವರ ಹಾದಿಯಲ್ಲೇ ಸಾಗುತ್ತಿದ್ದೇವೆ. ನಾವು ಈ ರೀತಿ ಕೆಲಸ ಮಾಡುವ ಮೂಲಕ ಎಲ್ಲರೂ ಒಂದೇ ಎನ್ನುವ ಸಂದೇಶ ಸಾರುತ್ತಿದ್ದೇವೆ ಎಂದು ತಿಳಿಸಿದರು.

    ಪಶ್ಚಿಮ ಬಂಗಾಳದ ಚಾಯ್‍ವಾಲಾ ಒಬ್ಬರು ಗುರುವಾರ ಉಚಿತವಾಗಿ ಟೀ ಹಂಚಿದ್ದಾರೆ. ನನ್ನ ನಾಯಕ ಪ್ರಧಾನಿಯಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಈ ರೀತಿ ಉಚಿತ ಟೀ ಹಂಚಿದ್ದೇನೆ ಎಂದಿದ್ದಾರೆ. ಇನ್ನೂ ಸೂರತ್ ಮೂಲದ ಐಸ್ ಕ್ರೀಂ ವ್ಯಾಪಾರಿಯೊಬ್ಬರು `ಮೋದಿ ಸೀತಾಫಲ್ ಕುಲ್ಫಿ’ ಹೆಸರಿನ ಐಸ್ ಕ್ರೀಂ ಪರಿಚಯಿಸಿದ್ದಾರೆ. ಈ ಕುಲ್ಫಿಯ ವಿಶೇಷತೆ ಏನೆಂದರೆ ಮೋದಿ ಅವರ ಮೂಖದ ಆಕಾರದಲ್ಲಿ ಈ ಕುಲ್ಫಿ ತಯಾರಿಸಲಾಗಿದ್ದು, ಸುಮಾರು 200 ಮೋದಿ ಸೀತಾಫಲ್ ಕುಲ್ಫಿ ತಯಾರಿಸಲು 24 ಗಂಟೆ ಸಮಯ ಬೇಕಾಯ್ತು ಎಂದು ವ್ಯಾಪಾರಿ ತಿಳಿಸಿದ್ದಾರೆ.