Tag: Modi Government

  • ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ, ಯಾಕೆ ದ್ವೇಷಿಸ್ತಾರೋ ಗೊತ್ತಿಲ್ಲ: ಈಶ್ವರಪ್ಪ

    ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ, ಯಾಕೆ ದ್ವೇಷಿಸ್ತಾರೋ ಗೊತ್ತಿಲ್ಲ: ಈಶ್ವರಪ್ಪ

    ಶಿವಮೊಗ್ಗ: ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ ಅದನ್ನ ಯಾಕೆ ದ್ವೇಷ ಮಾಡುತ್ತಾರೋ ಗೊತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಟಾಟಿಸಿ, ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ ಅವರು, ನಮ್ಮ ಮಾತೃಭಾಷೆ ಕನ್ನಡ, ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ. ಆದರೆ ಅದನ್ನು ಯಾಕೆ ದ್ವೇಷ ಮಾಡುತ್ತಿದ್ದಾರೊ ಗೊತ್ತಿಲ್ಲ ಎಂದರು. ಇದನ್ನೂ ಓದಿ:ಸಿದ್ದರಾಮಯ್ಯ ಒಬ್ಬ ದಡ್ಡ ವಡ್ಡ, ತಲೆ ಇಲ್ಲ – ಈಶ್ವರಪ್ಪ

    ಹಿಂದಿ ಭಾಷೆಯಿಂದ ಕನ್ನಡದ ಆದ್ಯತೆ ಕಡಿಮೆ ಆಗಲ್ಲ. ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿಯನ್ನು ಜಾರಿಗೆ ತರಲು ನೋಡುತ್ತಿಲ್ಲ. ಆದರೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮಾತನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ತಿಳಿಸಿದರು.

  • ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತೇವೆ – ರಾಜನಾಥ್ ಸಿಂಗ್

    ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಯೇ ತೀರುತ್ತೇವೆ – ರಾಜನಾಥ್ ಸಿಂಗ್

    ನವದೆಹಲಿ: ಭಾರತ- ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣವಾಗಿರುವ ಕಾಶ್ಮೀರ ವಿವಾದ ಇತ್ಯರ್ಥ ಹಂತವನ್ನು ತಲುಪಿದ್ದು, ಜಗತ್ತಿನ ಯಾವ ಶಕ್ತಿಯಿಂದಲೂ ಈ ವಿಚಾರ ಇತ್ಯರ್ಥ ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ.

    ಕಾರ್ಗಿಲ್ ವಿಜಯದ 20ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶನಿವಾರ ಜಮ್ಮು-ಕಾಶ್ಮೀರದ ದ್ರಾಸ್ ವಲಯದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ ರಾಜ್‍ನಾಥ್ ಸಿಂಗ್ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಬಳಿಕ ಕಠುವಾ ಜಿಲ್ಲೆಯ ಉಜ್ ಮತ್ತು ಸಾಂಬಾ ಜಿಲ್ಲೆಯ ಬಸಂತರ್‍ನಲ್ಲಿ 50 ಕೋಟಿ ರೂ. ಮೊತ್ತದಲ್ಲಿ ನಿರ್ಮಿಸಲಾಗಿರುವ ಎರಡು ಸೇತುವೆಗಳನ್ನು ಉದ್ಘಾಟನೆ ಮಾಡಿದರು.

    ಈ ವೇಳೆ ಮಾತನಾಡುತ್ತ ಕಾಶ್ಮೀರದ ವಿವಾದದ ಬಗ್ಗೆ ಪ್ರಸ್ತಾಪಿಸಿ, ಕಾಶ್ಮೀರ ನನ್ನ ಹೃದಯದಲ್ಲಿದೆ. ಅಲ್ಲದೆ ಸರ್ಕಾರ ಕಾಶ್ಮೀರವನ್ನು ಕೇವಲ ಭಾರತದ ಸ್ವರ್ಗವನ್ನಾಗಿ ಅಷ್ಟೇ ಇರಿಸಿದೆ. ಜಾಗತಿಕ ಮಟ್ಟದಲ್ಲಿ ಕಾಶ್ಮೀರವನ್ನು ಪ್ರವಾಸಿಗರ ಸ್ವರ್ಗವನ್ನಾಗಿಸಲು ಪ್ರಯತ್ನಿಸುತ್ತಿದೆ. ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ಸಾಗಲು ಸರ್ಕಾರ ಹೆಚ್ಚಿನ ಶ್ರಮವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.

    ನಮ್ಮ ಸರ್ಕಾರ ಕಾಶ್ಮೀರ ವಿವಾದವನ್ನು ಬಗೆಹರಿಸಲಿದೆ. ಮಾತುಕತೆಯ ಮೂಲಕ ಬಗೆಹರಿಯದಿದ್ದರೆ ಯಾವ ತಂತ್ರವನ್ನು ಬಳಸಬೇಕು ಎಂಬುದು ನಮಗೆ ಗೊತ್ತಿದೆ. ಈ ಭೂಮಿ ಮೇಲಿನ ಯಾವ ಶಕ್ತಿಯೂ ಕಾಶ್ಮೀರ ವಿವಾದ ಇತ್ಯರ್ಥವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಇದನ್ನು ನಾವು ಬಗೆಹರಿಸಿಯೇ ತೀರುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    1999ರಲ್ಲಿ ಭಾರತೀಯ ಸೇನೆಯು ಅಕ್ರಮವಾಗಿ ಒಳ ನುಸುಳುತ್ತಿದ್ದ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಹೋರಾಡಿ, ಶ್ರೀನಗರದ ಲೇಹ್ ಹೆದ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಕಿಸ್ತಾನ ಆಕ್ರಮಿಸಿದ್ದ ಹಲವು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿತ್ತು.

    ಜು.14ರ ಭಾರತದ ವಿಜಯ ದಿನದಂದು ರಾಜ್‍ನಾಥ್ ಸಿಂಗ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, `ವಿಜಯ ಜ್ವಾಲೆ’ಯನ್ನು ಹೊತ್ತಿಸಿದ್ದರು. ಜ್ವಾಲೆಯು ಜು.26 ರಂದು ದ್ರಾಸ್ ತಲುಪಲಿದ್ದು, ಸುಮಾರು 9 ಪಟ್ಟಣಗಳು ಹಾಗೂ ನಗರಗಳನ್ನು ಹಾದು ಹೋಗಲಿದೆ. ನಂತರ ಕಾರ್ಗಿಲ್‍ಗೆ ತಲುಪಿ ಶಾಶ್ವತ ವಿಜಯ ಜ್ವಾಲೆ ಬಳಿ ವಿಲೀನಗೊಳಿಸಲಾಗುತ್ತದೆ.

    ವಿಜಯ ದಿನವನ್ನು ಭಾರತೀಯ ಸೇನೆ ವಿಜೃಂಭಣೆಯಿಂದ ಆಚರಿಸಿದೆ. ಈ ಮೂಲಕ ಆಪರೇಷನ್ ವಿಜಯ್‍ನಲ್ಲಿ ಭಾಗವಹಿಸಿದ ಯೋಧರಿಗೆ ನಮನ ಸಲ್ಲಿಸಲಾಯಿತು. ಆಪರೇಷನ್ ವಿಜಯ್‍ನ್ನು `ರಿಮೆಂಬರ್, ರೀಜಾಯ್ಸ್ ಆಂಡ್ ರಿನ್ಯೂ(ನೆನಪಿಡಿ, ಹೆಮ್ಮೆಪಡಿ ಮತ್ತು ನವೀಕರಿಸಿ)’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಯಿತು. ಅಲ್ಲದೆ, ಸೈನ್ಯದ ಮೂರು ಬೆಟಾಲಿಯನ್‍ಗಳು ಅಸಾಧ್ಯವಾಗದ ಸ್ಥಿಯಲ್ಲಿ ಹೋರಾಡಿದ ಶಿಖರಗಳಿಗೆ ದಂಡಯಾತ್ರೆ ಕೈಗೊಳ್ಳಲಾಗಿದೆ.

    ಕಾರ್ಗಿಲ್ ವಿಜಯ ದಿನದ ಅಂಗವಾಗಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಬಿಎಸ್‍ಎಫ್ ಯೋಧರ ತಂಡಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸೈನಿಕರು, ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಧೈರ್ಯದ ಕಥೆಗಳನ್ನು ಪ್ರದರ್ಶಿಸಿತು. ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಸೇನೆ ಏರ್ಪಡಿಸಿದ್ದು, ಕಾರ್ಗಿಲ್ ವಿಜಯ ದಿನದ ಹಿನ್ನೆಲೆ ಯುದ್ಧದಲ್ಲಿ ಸಾವನ್ನಪ್ಪಿದ ಸೈನಿಕರ ಕುಟುಂಬ ಸದಸ್ಯರನ್ನು ಗೌರವಿಸಲಾಯಿತು.

  • 126 ಉಗ್ರರ ಹತ್ಯೆ, 27 ಮಂದಿ ಬಂಧನ: ಗೃಹ ಸಚಿವಾಲಯ

    126 ಉಗ್ರರ ಹತ್ಯೆ, 27 ಮಂದಿ ಬಂಧನ: ಗೃಹ ಸಚಿವಾಲಯ

    ನವದೆಹಲಿ: ಕಳೆದ ಮೂರು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ರಕ್ಷಣಾ ಸಿಬ್ಬಂದಿ ಒಟ್ಟು 126 ಉಗ್ರರನ್ನು ಹತ್ಯೆಗೈದಿದ್ದಾರೆ ಎಂದು ಸರ್ಕಾರ ತಿಳಿಸಿದೆ.

    ಕಳೆದ ಮೂರೂವರೆ ವರ್ಷಗಳಲ್ಲಿ 400 ಉಗ್ರರು ಜಮ್ಮು ಕಾಶ್ಮೀರದಲ್ಲಿ ಒಳನುಸುಳಿದ್ದು ಅದರಲ್ಲಿ 126 ಉಗ್ರರನ್ನು ಹತ್ಯೆ ಮಾಡಿದ್ದರೆ, 27 ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಇಂದು ರಾಜ್ಯಸಭೆಗೆ ತಿಳಿಸಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಉಗ್ರರು ಹಾಗೂ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಲಿಖಿತ ಉತ್ತರ ನೀಡಿದೆ.

    2019ರಲ್ಲಿ ಜೂನ್‍ವರೆಗೆ ಅಂತರರಾಷ್ಟ್ರೀಯ ಕ್ರಿಮಿನಲ್ ಪೊಲೀಸ್ ಸಂಸ್ಥೆ ಮೂಲಕ 16 ಉಗ್ರರನ್ನು ಬಂಧಿಸಲಾಗಿದೆ. 2018ರಲ್ಲಿ 24 ಮಂದಿಯನ್ನು, 2017ರಲ್ಲಿ 35 ಮತ್ತು 2016 ರಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ. ವಿದೇಶದಲ್ಲಿ ತಲೆ ಮರೆಸಿರುವ ಆರೋಪಿಗಳ ಬಂಧನಕ್ಕಾಗಿ 2019ರಲ್ಲಿ ಇಂಟರ್ ಪೋಲ್‍ಗೆ ಭಾರತವು 41 ರೆಡ್ ಕಾರ್ನರ್ ನೋಟಿಸ್ ಕಳುಹಿಸಿದೆ. ಅದರಲ್ಲಿ 32ಪ್ರಕಟವಾಗಿದೆ. 2016ರಲ್ಲಿ ಸಿಬಿಐ 91 ನೋಟಿಸ್ ಕಳುಹಿಸಿದ್ದು, ಅದರಲ್ಲಿ 87 ಪ್ರಕಟವಾಗಿದೆ, 2017 ರಲ್ಲಿ 94 ನೋಟಿಸ್‍ಗಳಲ್ಲಿ 87 ಪ್ರಕಟವಾಗಿದೆ, 2018ರಲ್ಲಿ 123 ನೋಟಿಸ್‍ಗಳನ್ನು ಪೈಕಿ ಕೇವಲ 76 ನೋಟಿಸ್‍ಗಳನ್ನು ಪ್ರಕಟಗೊಂಡಿದೆ ಎಂದು ಹೇಳಿದೆ.

    ಸೋಮವಾರ ರಾಜ್ಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ, 2018 ರಲ್ಲಿ ಒಟ್ಟು 318 ಉಗ್ರರ ದಾಳಿ ನಡೆದಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ 2017ರಲ್ಲಿ ನಡೆದಿದ್ದ ದಾಳಿಗೆ ಹೋಲಿಸಿದರೆ 2018ರಲ್ಲಿ ಉಗ್ರ ದಾಳಿ ಸಂಖ್ಯೆ 187 ಹೆಚ್ಚಾಗಿದೆ. ಆದರೆ 2014ರಲ್ಲಿ ಮೋದಿ ಸರ್ಕಾರ ಬಂದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಬರೋಬ್ಬರಿ 963 ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಲೋಕಸಭೆಯಲ್ಲಿ ಮಂಗಳವಾ ಗೃಹ ಸಚಿವಾಲಯ ಉತ್ತರ ನೀಡಿದೆ.

    2019ರಲ್ಲಿ ಭಾರತ ಹಲವಾರು ಉಗ್ರರ ದಾಳಿಗಳಿಗೆ ಸಾಕ್ಷಿಯಾಗಿದೆ. ಅದರಲ್ಲೂ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಗೆ 40ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದರು.

  • ಅಂತರ್ಜಲ ಮಾಲಿನ್ಯ ಕಡಿಮೆಗೊಳಿಸಿದ ಸ್ವಚ್ಛತಾ ಅಭಿಯಾನ

    ಅಂತರ್ಜಲ ಮಾಲಿನ್ಯ ಕಡಿಮೆಗೊಳಿಸಿದ ಸ್ವಚ್ಛತಾ ಅಭಿಯಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ಸ್ವಚ್ಛ ಭಾರತ ಅಭಿಯಾನದಿಂದ ಭಾರತದಲ್ಲಿ ಅಂತರ್ಜಲ ಮಾಲಿನ್ಯ ಕಡಿಮೆಯಾಗಿದೆ ಎಂದು ಯುನಿಸೆಫ್ ಅಧ್ಯಯನ ಮಾಡಿ ವರದಿ ನೀಡಿದೆ.

    ಹೌದು, ಅಕ್ಟೋಬರ್ 2, 2014ರ ಗಾಂಧಿ ಜಯಂತಿಯಂದು ಮೋದಿ ಸರ್ಕಾರ ಆರಂಭಿಸಿದ `ಸ್ವಚ್ಛ ಭಾರತ್ ಅಭಿಯಾನ’ಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಯುನಿಸೆಫ್ ಮತ್ತು ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ಜಂಟಿಯಾಗಿ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ಅಧ್ಯಯನ ನಡೆಸಿದೆ. ಈ ರಾಜ್ಯಗಳಲ್ಲಿ ಸಂಗ್ರಹಿಸಿದ ಅಂತರ್ಜಲ ಮಾದರಿಗಳ ಮೇಲೆ ಅಧ್ಯಯನ ನಡೆಸಿರುವ ಯುನಿಸೆಫ್ ಈ ವರದಿ ನೀಡಿದೆ. ಶೌಚಕ್ಕಾಗಿ ಬಯಲುಗಳನ್ನು ಆಧರಿಸಿರುವ ಗ್ರಾಮಗಳಿಗೆ ಹೋಲಿಸಿದರೆ ಬಯಲು ಶೌಚ ಮುಕ್ತ ಗ್ರಾಮಗಳಲ್ಲಿ 11.25 ಪಟ್ಟು ಹೆಚ್ಚು ಅಂತರ್ಜಲ ಮಾಲಿನ್ಯ ಕಡಿಮೆಯಾಗಿದೆ. ಹೀಗಾಗಿ ಸ್ವಚ್ಛ ಭಾರತದ ಅಭಿಯಾನದಿಂದ ದೇಶದಲ್ಲಿ ಅಂತರ್ಜಲ ಮಾಲಿನ್ಯ ಕಡಿಮೆಯಾಗುತ್ತಿದೆ ಎಂದು ಯುನಿಸೆಫ್ ತಿಳಿಸಿದೆ.

    ಸ್ವಚ್ಛತಾ ಅಭಿಯಾನದ ಭಾಗವಾಗಿ ಬಯಲು ಶೌಚಮುಕ್ತ ರಾಷ್ಟ್ರದ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಡಿಯಲ್ಲಿ ಹಲವು ಗ್ರಾಮಗಳಲ್ಲಿ ಸರ್ಕಾರ ಶೌಚಾಲಯ ನಿರ್ಮಿಸಿ ಅದರ ಬಗ್ಗೆ ಜಾಗೃತಿ ಮೂಡಿಸಿದೆ.

    ಅಧ್ಯಯನ ಪ್ರಕಾರ, ಮಾದರಿಗಳನ್ನು ಸಂಗ್ರಹಿಸಿದ ಗ್ರಾಮೀಣ ಪ್ರದೇಶಗಳಲ್ಲಿ ಮೊದಲು ಬಯಲು ಶೌಚ ಸಾಮಾನ್ಯವಾಗಿತ್ತು. ಆದರೆ ಸ್ವಚ್ಛ ಭಾರತ ಅಭಿಯಾನದ ನಂತರ ಈ ಗ್ರಾಮೀಣ ಪ್ರದೇಶಗಳು ಬಯಲು ಶೌಚ ಮುಕ್ತ ಪ್ರದೇಶವಾಗಿರುವುದನ್ನು ಯುನಿಸೆಫ್ ವರದಿಯಲ್ಲಿ ಉಲ್ಲೇಖಿಸಿದೆ.

    ಕೇಂದ್ರದ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವರದಿ ಬಗ್ಗೆ ಪ್ರತಿಕ್ರಿಯಿಸಿ, ಸ್ವಚ್ಛತೆ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಬಯಲು ಶೌಚ ಮುಕ್ತ ಪ್ರದೇಶಗಳು ತನ್ನಿಂದ ತಾನೇ ರೋಗ ಮುಕ್ತ ಪ್ರದೇಶಗಳಾಗುತ್ತವೆ. 2018ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್‍ಓ) ಅಧ್ಯಯನವು, ಭಾರತ ಬಯಲು ಶೌಚ ಮುಕ್ತವಾದರೆ ಸುಮಾರು 3 ಲಕ್ಷ ಮಂದಿಯ ಜೀವಗಳು ಉಳಿಯಬಹುದೆಂದು ತಿಳಿಸಿತ್ತು ಎಂದು ಹೇಳಿದರು.

  • #SelfiewithSapling- ಪರಿಸರ ದಿನಾಚರಣೆ ಪ್ರಯುಕ್ತ ಹೊಸ ಅಭಿಯಾನಕ್ಕೆ ಜಾವಡೇಕರ್ ಕರೆ

    #SelfiewithSapling- ಪರಿಸರ ದಿನಾಚರಣೆ ಪ್ರಯುಕ್ತ ಹೊಸ ಅಭಿಯಾನಕ್ಕೆ ಜಾವಡೇಕರ್ ಕರೆ

    ನವದೆಹಲಿ: ನಸಿ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ(#SelfiewithSapling) ನೂತನ ಅಭಿಯಾನಕ್ಕೆ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಚಾಲನೆ ನೀಡಿದ್ದಾರೆ.

    ಜೂನ್ 5ರಂದು ವಿಶ್ವಾದ್ಯಂತ ಪರಿಸರ ದಿನಾಚರಣೆ ಆಚರಿಸಲಾಗುತ್ತದೆ. ಈ ವಿಶೇಷ ದಿನದ ಅಂಗವಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ #SelfiewithSapling ಗಿಡ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಮೂಲಕ ನಮ್ಮ ಜೀವ ಉಳಿಸುವ ಪರಿಸರವನ್ನು ನಾವು ಉಳಿಸೋಣ ಎಂದು ಎಲ್ಲರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    ಈ ಬಗ್ಗೆ ಟ್ವಿಟ್ಟರ್ ನಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿರುವ ಅವರು, ಭಾರತೀಯರೆಲ್ಲರೂ ಉತ್ಸಾಹದಿಂದ ಪರಿಸರ ದಿನಾಚರಣೆಯನ್ನು ಆಚರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನಾವು ಸೆಲ್ಫಿ ಅಭಿಯಾನಕ್ಕೆ ಕರೆ ನೀಡಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಸೆಲ್ಫಿ ತೆಗೆದು ನಿಮ್ಮ ಸಾಮಾಜಿಕ ತಾಣಗಳಲ್ಲಿ #SelfiewithSapling ಹ್ಯಾಶ್ ಟ್ಯಾಗ್ ಜೊತೆ ಪೋಸ್ಟ್ ಮಾಡುವಂತೆ ತಿಳಿಸಿದ್ದಾರೆ.

    ನವದೆಹಲಿಯ ಪರ್ಯಾವರಣ ಭವನದಲ್ಲಿ ಬುಧವಾರ ನಡೆಯಲಿರುವ ಗಿಡ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಕ್ರಿಕೆಟರ್ ಕಪಿಲ್ ದೇವ್ ಮತ್ತು ನಟ ಜಾಕಿ ಶ್ರಾಫ್ ಭಾಗವಹಿಸಲಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರ `ಸ್ವಚ್ಛ ಗಾಳಿ’ ಯೋಜನೆಗೂ ಇಲ್ಲರೂ ಸಹಕಾರ ನೀಡಬೇಕು. ಪರಿಸರ ರಕ್ಷಣೆಯ ಯೋಜನೆಗಳು ಬರೀ ಸರ್ಕಾರಕ್ಕೆ ಸೀಮಿತವಾದದಲ್ಲ. ಜನರೂ ಕೂಡ ಈ ಬಗ್ಗೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಪರಿಸರಕ್ಕೆ ಸಂಬಂಧಿಸಿದ ಯೋಜನೆಗಳು ಜನರ ಯೋಜನೆ ಎಂದು ಮೋದಿ ಸರ್ಕಾರ ನಂಬುತ್ತದೆ. ಹೀಗಾಗಿ ಕೇವಲ ಈ ಯೋಜನೆಗೆ ಮಾತ್ರವಲ್ಲ ಮುಂದೆ ಬರುವ ಸರ್ಕಾರದ ಪ್ರತಿ ಯೋಜನೆಗೂ ಜನರು ಕೈಜೋಡಿಸುತ್ತೀರಿ ಎಂದು ನಾವು ಆಶಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಬಾರಿ ವಿಶ್ವಸಂಸ್ಥೆ `ಸ್ವಚ್ಛ ಗಾಳಿ’ ಅಭಿಯಾನವನ್ನು ಆರಂಭಿಸಿದೆ. ಹೀಗಾಗಿ ನಾವೆಲ್ಲರು ಪರಿಸರವನ್ನು ಉಳಿಸುವ ಕೆಲಸ ಮಾಡಬೇಕು. ಈಗಾಗಲೇ ಕೇಂದ್ರ ಸರ್ಕಾರ ಸ್ಚಚ್ಛ ಗಾಳಿ ಮಿಷನ್‍ಗೆ ಚಾಲನೆ ನೀಡಿದೆ. ಹೀಗಾಗಿ ನಾವು ಗಾಳಿಯನ್ನು ಸ್ವಚ್ಛಗೊಳಿಸಲು ಸಸಿಗಳನ್ನು, ಗಿಡಗಳನ್ನು ಬೆಳೆಸಬೇಕು. ಆದ್ದರಿಂದ ಸಸಿಗಳನ್ನು ನೆಟ್ಟು ಅದರ ಆರೈಕೆ ಮಾಡುವುದು ಮುಖ್ಯ ಎಂದು ತಿಳಿಸಿದರು.

  • ಸೈಕಲ್‍ನಲ್ಲಿ ಆಗಮಿಸಿ ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ

    ಸೈಕಲ್‍ನಲ್ಲಿ ಆಗಮಿಸಿ ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ

    ನವದೆಹಲಿ: ಸೈಕಲ್‍ನಲ್ಲಿ ಸಿಂಪಲ್ ಆಗಿ ಆರೋಗ್ಯ ಸಚಿವಾಲಯಕ್ಕೆ ಬಂದ ಡಾ. ಹರ್ಷವರ್ಧನ್ ಅವರು ಕೇಂದ್ರ ಸರ್ಕಾರದ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

    ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಟ್ವೀಟ್ ಮಾಡಿದ ಅವರು, ನನ್ನ ಮೇಲೆ ನಂಬಿಕೆ ಇಟ್ಟು ಆರೋಗ್ಯ ಸಚಿವರ ಸ್ಥಾನ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಇಂದು ನಾನು ಕೇಂದ್ರ ಸರ್ಕಾರದ ನೂತನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮೋದಿ ಸರ್ಕಾರ ದೇಶದ ಜನತೆಯ ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತದೆ. ಆರೋಗ್ಯ ಸಚಿವನಾಗಿ ನನ್ನ ಕರ್ತವ್ಯ ಹಾಗೂ ಜವಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಶ್ರಮಿಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಅಷ್ಟೇ ಅಲ್ಲದೆ ಇಂದು `ವಿಶ್ವ ಬೈಸಿಕಲ್ ದಿನ’ವಾಗಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವರು ಸೈಕಲಿಂಗ್ ತಮ್ಮ ಅಚ್ಚುಮೆಚ್ಚಿನ ಕ್ರೀಡೆ ಎಂದು ಹೇಳಿಕೊಂಡಿದ್ದಾರೆ.

    ವೈದ್ಯ ಮತ್ತು ರಾಜಕಾರಣಿ ಡಾ.ಹರ್ಷವರ್ಧನ್ ಮತ್ತೊಮ್ಮೆ ಆರೋಗ್ಯ ಸಚಿವಾಲಯದ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದೆ ಮೇ 2014 ರಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಹರ್ಷವರ್ಧನ್ ನಂತರ ಮೇ 2017 ರಲ್ಲಿ ಭೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯದ ಜವಾಬ್ದಾರಿ ವಹಿಸಿಕೊಂಡಿದ್ದರು. ನಂತರ ಜೆ.ಪಿ. ನಡ್ಡ ಆರೋಗ್ಯ ಸಚಿವರಾಗಿದ್ದರು.

  • ಇಂದಿನಿಂದ ಬಜೆಟ್ ಅಧಿವೇಶನ ಆರಂಭ – ನಾಳೆ ಮಧ್ಯಂತರ ಬಜೆಟ್ ಮಂಡನೆ

    ಇಂದಿನಿಂದ ಬಜೆಟ್ ಅಧಿವೇಶನ ಆರಂಭ – ನಾಳೆ ಮಧ್ಯಂತರ ಬಜೆಟ್ ಮಂಡನೆ

    ನವದೆಹಲಿ: ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭವಾಗಲಿದೆ. ಮೋದಿ ಸರ್ಕಾರದ ಕೊನೆಯ ಬಜೆಟ್ ಅಧಿವೇಶನ ಇದಾಗಿದ್ದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

    ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಇಂದಿನಿಂದ ಫೆಬ್ರವರಿ 13ರತನಕ ಬಜೆಟ್ ಅಧಿವೇಶನ ನಡೆಯಲಿದ್ದು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂಸತ್‍ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅನಾರೋಗ್ಯದಿಂದ ಬಳಲ್ತಿರುವ ಜೇಟ್ಲಿ ಅನುಪಸ್ಥಿತಿಯಲ್ಲಿ ಸಚಿವ ಪಿಯೋಷ್ ಗೊಯಲ್ ನಾಳೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.

    ಮಧ್ಯಂತರ ಬಜೆಟ್ ಕೂಡ ಪೂರ್ಣ ಬಜೆಟ್‍ನಂತೆಯೇ ಇರಲಿದ್ದು, ನಿರ್ದಿಷ್ಟ ವರ್ಷದ ಆರ್ಥಿಕ ವರದಿಯ ಮೇಲ್ನೋಟ ನೀಡುತ್ತದೆ. ಚುನಾವಣೆಯ ಹಿನ್ನೆಲೆ ಮಧ್ಯಂತರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಹಾಕಿದ್ದು ರೈತಾಪಿ ಹಾಗೂ ಜನ ಸಾಮಾನ್ಯರಿಗೆ ಮೋದಿ ಬಂಪರ್ ಆಫರ್ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಲೋಕಸಭೆ ಚುನಾವಣೆಯವರೆಗೂ ಮೋದಿ ಸರ್ಕಾರಕ್ಕೆ ಅಮೆರಿಕದಿಂದ ರಿಲೀಫ್

    ಲೋಕಸಭೆ ಚುನಾವಣೆಯವರೆಗೂ ಮೋದಿ ಸರ್ಕಾರಕ್ಕೆ ಅಮೆರಿಕದಿಂದ ರಿಲೀಫ್

    ನವದೆಹಲಿ: ಲೋಕಸಭಾ ಚುನಾವಣೆಯವರೆಗೂ ಮೋದಿ ಸರ್ಕಾರಕ್ಕೆ ಅಮೆರಿಕದಿಂದ ಸ್ವಲ್ಪ ರಿಲೀಫ್ ಸಿಕ್ಕಿದ್ದು, ಇರಾನ್‍ನಿಂದ ತೈಲ ಖರೀದಿಗೆ ಮೇ ಮೊದಲ ವಾರದ ತನಕ ಭಾರತಕ್ಕೆ ಅನುಮತಿ ನೀಡಿದೆ.

    ಇರಾನ್‍ನಿಂದ ತೈಲ ಖರೀದಿಗೆ ಅಮೆರಿಕ ನಿರ್ಬಂಧ ವಿಧಿಸಿದ್ದು ನವೆಂಬರ್ 4 ರಿಂದ ಜಾರಿಯಾಗಿದೆ. ಈ ನಿರ್ಬಂಧದಿಂದ ಭಾರತ, ಜಪಾನ್, ಚೀನಾ, ದಕ್ಷಿಣ ಕೊರಿಯಾ ಸೇರಿದಂತೆ 8 ರಾಷ್ಟ್ರಗಳಿಗೆ ವಿನಾಯಿತಿ ಸಿಕ್ಕಿದೆ. ಹಾಗೆಂದ ಮಾತ್ರ ಪೂರ್ಣ ವಿನಾಯಿತಿ ಸಿಕ್ಕಿಲ್ಲ. ಮೇವರೆಗೆ ತೈಲವನ್ನು ಖರೀದಿ ಮಾಡಬಹುದು ಎಂದು ಅಮೆರಿಕ ತಿಳಿಸಿದೆ.

    ಒಟ್ಟು 180 ದಿನಗಳವರೆಗೆ ವಿನಾಯಿತಿಯನ್ನು ನೀಡಿದ್ದು ಈ ಡೆಡ್‍ಲೈನ್ ಒಳಗಡೆ ವಿನಾಯಿತಿ ಪಡೆದ ದೇಶಗಳು ಪರ್ಯಾಯ ಮಾರ್ಗವನ್ನು ಹುಡುಕಬೇಕೆಂದು ಅಮೆರಿಕ ಸರ್ಕಾರ ಸೂಚಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇರಾನಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದರ ಜೊತೆಗೆ ಕೆಲವು ಆಹಾರ ವಸ್ತು, ಔಷಧೀಯ ಉತ್ಪನ್ನಗಳು ಮತ್ತು ಆಟೋಮೊಬೈಲ್ ವಸ್ತುಗಳನ್ನು ರಫ್ತು ಮಾಡುವುದಕ್ಕೆ ಅಮೆರಿಕ ಅನುಮತಿ ನೀಡಿದೆ.

    ಮೇ ತಿಂಗಳ ಸಮಯದಲ್ಲಿ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದಿರುತ್ತದೆ. ಅಲ್ಲಿಯವರೆಗೂ ಅಮೆರಿಕ ನೀಡಿರುವ ತೈಲ ಆಮದು ಮಾಡಿಕೊಳ್ಳುವ ಅವಕಾಶ ಮೋದಿ ಸರ್ಕಾರಕ್ಕೆ ಶಕ್ತಿ ತುಂಬಿದೆ.

    ಅಮೆರಿಕ ನಿರ್ಬಂಧ ಏಕೆ?
    2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಈಗ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು. ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ. ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೇ ತನ್ನ ಮಿತ್ರ ರಾಷ್ಟ್ರಗಳು ಸಹ ಇರಾನ್ ನೊಂದಿಗೆ ಖರೀದಿಯನ್ನು ಸ್ಥಗಿತಗೊಳಿಸಲಿವೆ ಎನ್ನುವ ನಿರೀಕ್ಷೆಹೊಂದಿದ್ದೇವೆ. ಇರಾನ್ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮುಂದುವರಿಸುವ ಯಾವುದೇ ದೇಶದೊಂದಿಗೆ ಅಮೆರಿಕಾದ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳಿತ್ತು.

    ಇರಾನ್ ಜೊತೆ ತೈಲ ಖರೀದಿಯಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ಅಮೆರಿಕದ ಇರಾನ್ ನಿರ್ಬಂಧ ವಿಶ್ವದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅಷ್ಟು ಪ್ರಮಾಣದ ತೈಲವನ್ನು ಇರಾನ್ ಹೊರತು ಪಡಿಸಿ, ಎಲ್ಲಿಂದ ಸಂಗ್ರಹಿಸುವುದು ಎನ್ನುವುದರ ಬಗ್ಗೆ ವಿವಿಧ ದೇಶಗಳು ಆತಂಕವನ್ನು ವ್ಯಕ್ತಪಡಿಸಿದ್ದವು.

    ಈಗ ತೈಲ ದರ ಕಡಿಮೆಯಾಗುತ್ತಿದ್ದರೂ, ಕೆಲ ದಿನಗಳ ಹಿಂದೆ ಭಾರೀ ಏರಿಕೆಯಾಗಿತ್ತು. ತೈಲ ಖರೀದಿಗೆ ನಿರ್ಬಂಧ ಹೇರಿದ ಸುದ್ದಿಯಿಂದಾಗಿ ಷೇರು ಮಾರುಕಟ್ಟೆಗೂ ಭಾರೀ ಹೊಡೆತ ಬಿದ್ದಿತ್ತು. ಅಷ್ಟೇ ಅಲ್ಲದೇ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತಿತ್ತು. ಈಗ ಈ ನಿರ್ಬಂಧದಿಂದ ಭಾರತವನ್ನು ಹೊರಗೆ ಇಟ್ಟ ಹಿನ್ನೆಲೆಯಲ್ಲಿ ತೈಲ ದರ ಏರಿಕೆಯ ಭೀತಿಯಿಂದ ಭಾರತೀಯರು ಪಾರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪವರ್ ಸ್ಟಾರ್ ಗೆ ಕಿಂಗ್ ಆಫ್ ಸ್ಯಾಂಡಲ್ ವುಡ್ ಎಂದ್ರು ಶೋಭಾ ಕರಂದ್ಲಾಜೆ

    ಪವರ್ ಸ್ಟಾರ್ ಗೆ ಕಿಂಗ್ ಆಫ್ ಸ್ಯಾಂಡಲ್ ವುಡ್ ಎಂದ್ರು ಶೋಭಾ ಕರಂದ್ಲಾಜೆ

    ಬೆಂಗಳೂರು: ಉಡುಪಿ ಹಾಗೂ ಚಿಕ್ಕಮಗಳೂರು ಸಂಸದೆ, ಕರ್ನಾಟಕ ರಾಜ್ಯದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಅವರು ಇಂದು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

    ಪುನೀತ್ ಅವರನ್ನು ಭೇಟಿ ಮಾಡಿ ಪ್ರಧಾನಿ ಮೋದಿ ಸರ್ಕಾರದ ಸಾಧನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ Sampark For Samarthan ಅಭಿಯಾನ ವಿಚಾರವಾಗಿ ಶೋಭಾ ಕರಂದ್ಲಾಜೆ ಅವರು ಪುನೀತ್ ಜೊತೆ ಮಾತನಾಡಿ ಕಳೆದ ನಾಲ್ಕು ವರ್ಷಗಳಲ್ಲಿ ಮೋದಿ ನೇತೃತ್ವದ ಸರ್ಕಾರ ಏನೇನು ಕೆಲಸ ಮಾಡಿದೆ ಎಂಬ ಸಾಧನೆಯ ಪುಸ್ತಕವನ್ನು ಅವರಿಗೆ ನೀಡಿದ್ದಾರೆ.

    ಪುನೀತ್ ಭೇಟಿಯಾದ ವಿಚಾರ ಬಗ್ಗೆ ಶೋಭಾ ಕರಂದ್ಲಾಜೆ ಅವರು ಟ್ವಿಟ್ಟರ್ ನಲ್ಲಿ ಹೇಳಿದ್ದು, “ಅಪ್ಪನಂತೆ ಮಗ, Sampark For Samarthan ವಿಷಯಕ್ಕಾಗಿ ಇಂದು ಕಿಂಗ್ ಆಫ್ ಸ್ಯಾಂಡಲ್ ವುಡ್ ಹಾಗೂ ಒಬ್ಬ ಒಳ್ಳೆಯ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಅವರ ಜೊತೆಗೆ ಪ್ರಧಾನಿ ಮೋದಿ ಅವರ ಸಾಧನೆಗಳ ಬಗ್ಗೆ ಚರ್ಚೆ ಮಾಡಿದೆ.” ಬರೆದು ಟ್ವೀಟ್ ಮಾಡಿದ್ದಾರೆ.

    ಈ ಹಿಂದೆ ಇದೇ ವಿಚಾರವಾಗಿ ಶಾಸಕ ಶ್ರೀರಾಮಲು ನಟ ಸುದೀಪ್ ರನ್ನು ಅವರ ಮನೆಯಲ್ಲಿಯೇ ಭೇಟಿ ಮಾಡಿದ್ದರು. ಬಿಜೆಪಿಯ ರಾಷ್ಟ್ರಾಧ್ಯಾಕ್ಷ ಅಮಿತ್ ಶಾ ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ನಾಯಕರು ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಹಲವು ಮಂದಿ ಗಣ್ಯರ ನಿವಾಸಕ್ಕೆ ತೆರಳಿ ಮೋದಿ ಸರ್ಕಾರದ ಸಾಧನೆಯ ಕಿರುಹೊತ್ತಿಯನ್ನು ನೀಡಿ ಬಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/ShobhaBJP/status/1030670391713325056