Tag: Model School

  • ಮಕ್ಕಳಿಗಾಗಿ ರೈಲು ಶಾಲೆ ನಿರ್ಮಿಸಿದ ಗ್ರಾಮಸ್ಥರು

    ಮಕ್ಕಳಿಗಾಗಿ ರೈಲು ಶಾಲೆ ನಿರ್ಮಿಸಿದ ಗ್ರಾಮಸ್ಥರು

    ಧಾರವಾಡ: ಮಕ್ಕಳಿಗಾಗಿ ರೈಲಿನ ಬೋಗಿಯಂತಿರುವ ಶಾಲೆಯನ್ನು ಬಡಾವಣೆಯ ಜನರು ನಿರ್ಮಾಣ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಧಾರವಾಡದ ದುರ್ಗಾ ಕಾಲನಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಮಕ್ಕಳಿಗೆ ಈ ಪುಟ್ಟ ಸರ್ಕಾರಿ ಶಾಲೆಯೇ ತಮ್ಮ ಶೈಕ್ಷಣಿಕ ಭವಿಷ್ಯ ರೂಪಿಸಲು ಬಹುದೊಡ್ಡ ಆಧಾರವಾಗಿದೆ. ಹೀಗಾಗಿ ಈ ಶಾಲೆಯ ಅಭಿವೃದ್ಧಿಗೆ ಆಧಾರವಾಗಿ ಬಡಾವಣೆಯ ಜನರು ನಿಂತಿದ್ದಾರೆ.

    ಈ ಶಾಲೆಗೆ ಹತ್ತು ವರ್ಷದಿಂದ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ ರವೀಂದ್ರ ಯಲಿಗಾರ ಅವರು ಬಣ್ಣ ಮಾಡಿಸಿ ವಿದ್ಯುತ್ ಕೂಡಾ ಹಾಕಿಸಿದ್ದಾರೆ. ಈ ಶಾಲೆಗೆ ಇದೇ ಬಡಾವಣೆಯ ಶಂಕ್ರಯ್ಯ ಹಿರೇಮಠ ಜಮೀನು ಕೊಟ್ಟು ಶಾಲಾ ನಿರ್ಮಾಣಕ್ಕೆ ಸಹಕರಿಸಿದ್ದಾರೆ.

    ಮೊದಲು ಈ ಶಾಲೆ ದುರ್ಗಾ ಕಾಲೋನಿಯ ಸಣ್ಣ ಮನೆಯಲ್ಲಿ ನಡೆಯುತಿತ್ತು. ಆದರೆ ಮಕ್ಕಳಿಗಾಗಿ ಇಲ್ಲಿರುವ ಜನರೆಲ್ಲ ಸೇರಿ ಮೂರು ಕೊಠಡಿಯ ಶಾಲೆಯನ್ನು ನಿರ್ಮಾಣ ಮಾಡಿದ್ದಾರೆ. ರೈಲಿನ ಬೋಗಿಯಂತಿರುವ ಬಣ್ಣ ಮಾಡಿ, ಮಕ್ಕಳನ್ನ ಶಾಲೆಗೆ ಬರಲು ಸೆಳೆಯುವಂತೆ ಮಾಡಲಾಗಿದೆ. ಹೀಗಾಗಿ ಶಾಲಾ ಮಕ್ಕಳಿಗೆ ಇದು ಒಂದು ರೀತಿಯಾಗಿ ಟ್ರೆನ್ ಆಗಿ ಬಿಟ್ಟಿದೆ.

    ಚಿಕ್ಕ ಜಾಗದಲ್ಲೇ ಮಾದರಿ ಶಾಲೆ ನಿರ್ಮಾಣ ಮಾಡೊಣ ಎಂದು ಕೆಲಸ ಮಾಡಲಾಗುತ್ತಿದೆ. ಒಂದು ಕೊಠಡಿಯಲ್ಲಿ ಅಂಗನವಾಡಿ ನಡೆಸುತ್ತಿದ್ದಾರೆ. ಉಳಿದ ಎರಡು ಕೊಠಡಿಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ ನಡೆಸಲಾಗುತ್ತಿದೆ. ಸದ್ಯ ಕಿರಿಯ ಪ್ರಾಥಮಿಕ ಶಾಲೆ ಆರಂಭ ಇಲ್ಲದೇ ಇದ್ದರೂ ಮಕ್ಕಳು ಮಾತ್ರ ಇಲ್ಲಿಗೆ ಬಂದು ಟ್ರೆನ್‍ನಲ್ಲಿ ಹತ್ತುವಂತೆ ಆಟವಾಡುವುದರ ಜೊತೆಯಲ್ಲಿ ಪಾಠ ಕಲಿತು ಹೋಗುತ್ತಿದ್ದಾರೆ.

  • ಸರ್ಕಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ ಬಸ್, ರೈಲು, ವಿಮಾನ, ಹಡುಗು!

    ಸರ್ಕಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ ಬಸ್, ರೈಲು, ವಿಮಾನ, ಹಡುಗು!

    ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಬಹಳ ಮಂದಿ, ಪಾಳು ಬೀಳೋ ಸ್ಥಿತಿಯಲ್ಲಿರೋ ಕಟ್ಟಡಗಳು, ಮುರಿದ ಕಿಟಕಿಗಳು, ಬಾಗಿಲುಗಳೇ ಇಲ್ಲದ ಕೊಠಡಿಗಳು ಈ ತರ ಸರ್ಕಾರಿ ಶಾಲೆಗಳಲ್ಲಿ ನಾನಾ ಸಮಸ್ಯೆಗಳು, ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಅಂದ-ಚೆಂದವಾಗಿ ಕಂಗೊಳಿಸುತ್ತಿದೆ.

    ಅಂದಹಾಗೆ ಶಾಲೆಯ ಗೋಡೆಗಳ ಮೇಲೆ 3ಡಿ ಮಾದರಿಯಲ್ಲಿ ಬಸ್, ರೈಲು, ವಿಮಾನದ ಚಿತ್ರಗಳನ್ನ ಬಿಡಿಸಲಾಗಿದ್ದು, ಶಾಲೆಯ ಅಂದ ಚೆಂದವೇ ಬದಲಾಗಿ ಹೋಗಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ. ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಜೊತೆಗೂಡಿ ಗ್ರಾಮಪಂಚಾಯತಿ ಅನುದಾನ ಪಡೆದು ಶಾಲೆಯ ಗೋಡೆಗಳ ಮೇಲೆ ಈ ಚಿತ್ರಗಳನ್ನ ಬಿಡಿಸಲಾಗಿದ್ದು ಶಾಲೆಯ ರೂಪವೇ ಬದಲಾಗಿ ಬಣ್ಣ ಬಣ್ಣಗಳಿಂದ ಮಿಂಚುತ್ತಿದೆ.

    ಶಾಲೆಯ ಹೊರಭಾಗದ ಗೋಡೆಗಳ ಮೇಲೆ ರೈಲು, ಬಸ್, ವಿಮಾನ ಹಾಗೂ ಹಡುಗು ಸೇರಿದಂತೆ ಶಾಲೆಯ ಕೊಠಡಿಗಳ ಒಳಭಾಗದಲ್ಲಿ ಶಿಡ್ಲಘಟ್ಟ ರೇಷ್ಮೆ ನಗರಿ ಅನ್ನೋ ಖ್ಯಾತಿ ಪ್ರತೀಕವಾಗಿ ರೇಷ್ಮೆ ಹುಳು. ಚಂದ್ರಿಕೆ ಹಾಗೂ ರೈತನ ಚಿತ್ರ ಬಿಡಿಸಲಾಗಿದೆ. ಈ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರಂಭವಾಗಿ 75 ವರ್ಷಗಳ ಕಳೆದ ಹಿನ್ನೆಲೆ ಅಮೃತ ಮಹೋತ್ಸವ ಸಮಾರಂಭ ನಡೆಸಿ, ಶಿಕ್ಷಣ ಇಲಾಖಾಧಿಕಾರಿಗಳು, ಹಾಗೂ ತಹಶೀಲ್ದಾರ್ ರನ್ನ ಶಾಲೆಗೆ ಆಹ್ವಾನಿಸಿ, ನೂತನ ಚಿತ್ರಗಳನ್ನು ಉದ್ಘಾಟನೆ ಮಾಡಲಾಗಿದೆ.

    ಶಾಲೆಯ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸಾಕಷ್ಟು ಶ್ರಮಿಸುತ್ತಿದ್ದು, ಶಾಲೆಗಾಗಿ 9 ಎಕೆರೆ ಭೂಮಿಯನ್ನ ಮೀಸಲಿಡಲಾಗಿದೆ. ಈ ಜಾಗದಲ್ಲಿ ನೂರಾರು ಮರ ಗಿಡಗಳನ್ನ ಬೆಳೆಸಲಾಗುತ್ತಿದೆ. ಮತ್ತೊಂದೆಡೆ ಇದೇ ಜಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಿ ಆಧುನಿಕ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರ ಬಾ ಪುಲೆ ಹೆಸರನ್ನ ನಾಮಕರಣ ಮಾಡಲಾಗಿದೆ. ಸದ್ಯ ಶಾಲೆ ಬಣ್ಣ ಬಣ್ಣದ ಚಿತ್ರಗಳಿಂದ ಮಿರ ಮಿರ ಮಿಂಚುತ್ತಿದ್ದು, ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಗ್ರಾಮಸ್ಥರು ಹಾಗೂ ಅಧಿಕಾರಿಗಳಿಗೂ ಶಾಲೆ ಮಾದರಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

  • ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ಶಿಕ್ಷಣ

    ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೈಟೆಕ್ ಶಿಕ್ಷಣ

    ಕೊಪ್ಪಳ: ಅಧುನಿಕ ಯುಗದಲ್ಲಿ ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಲ್ಲೊಂದು ಶಾಲೆ ಖಾಸಗಿ ಶಾಲೆಯನ್ನೇ ಮೀರಿಸುವಂತಿದೆ. ಶಿಕ್ಷಕರ ಪ್ರಯತ್ನದಿಂದ ಅಲ್ಲಿನ ಶಾಲೆಯ ಮಕ್ಕಳಿಗೆ ಹೈಟೆಕ್ ಶಿಕ್ಷಣ ಸಿಗುತ್ತಿದೆ.

    ಕೊಪ್ಪಳ ತಾಲೂಕಿನ ಉಪಳಾಪೂರ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ಉಪಳಾಪೂರ ಮಕ್ಕಳಿಗೆ ಪ್ರೂಜೆಕ್ಟರ್ ಮೂಲಕ ಶಿಕ್ಷಣ ನೀಡಲಾಗುತ್ತದೆ. ಶಾಲೆಯ ಶಿಕ್ಷಕರು ಗ್ರಾಮಸ್ಥರ ನೆರವಿನಿಂದ ಶಾಲೆಯಲ್ಲಿ ಪ್ರೂಜೆಕ್ಟರ್ ಅಳವಡಿಕೆ ಮಾಡಲಾಗಿದೆ. ಆನ್‍ಲೈನ್ ಮೂಲಕ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

    ಒಂದರಿಂದ ಮೂರನೇ ತರಗತಿ ಮಕ್ಕಳಿಗೆ ನಲಿ ಕಲಿ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯ ನಲಿ ಕಲಿ ಕೊಠಡಿಯನ್ನು ಉತ್ತಮವಾಗಿ ವಿನ್ಯಾಸ ಮಾಡಲಾಗಿದೆ. ಉಪಳಾಪೂರ ಶಾಲೆಯ ಶಿಕ್ಷಕ ಮಹೇಶ್ ತಮ್ಮ ಸ್ವಂತ ಹಣದಿಂದ ನಲಿ ಕಲಿ ಕೊಠಡಿಯನ್ನು ವಿನ್ಯಾಸ ಮಾಡಿದ್ದಾರೆ. ಉಪಳಾಪರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಲಿ ಕಲಿ ಕೊಠಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಡೀ ನಲಿ ಕಲಿ ಕೊಠಡಿಯನ್ನು ಶಿಕ್ಷಕರೇ ಪೈಟಿಂಗ್ ಮಾಡಿದ್ದಾರೆ. ಥರ್ಮಕೋಲ್ ಬಳಸಿ ಪಿಓಪಿ ಮಾದರಿಯಲ್ಲಿ ಕೊಠಡಿ ವಿನ್ಯಾಸ ಮಾಡಿದ್ದಾರೆ.

    ಪೇಪರ್ ಸೀಟ್‍ಗಳನ್ನು ಕಟ್ ಮಾಡಿ ಕಾಗುಣಿತ ಹೊಂದಿಸುವ ಮಾದರಿಯಲ್ಲಿ ಶಿಕ್ಷಕರು ಡಿಸೈನ್ ಮಾಡಿದ್ದಾರೆ. ಅದೇ ರೀತಿ ಗೋಡೆಯನ್ನು ನಲಿ ಕಲಿ ಮಾದರಿಯಲ್ಲಿ ಮೂರು ಮಕ್ಕಳಿಗೊಂದು ಬೋರ್ಡ್ ನಿರ್ಮಿಸಿದ್ದಾರೆ. ನಲಿ ಕಲಿ ಕೊಠಡಿಯಲ್ಲಿ ಆಡಿಯೋ ಸಾಂಗ್ಸ್ ಮೂಲಕ ಪಾಠ ಮಾಡಲಾಗುತ್ತದೆ. ಜೊತೆಗೆ ಶಾಲೆಯ ಹೊರಗಡೆ ಮಕ್ಕಳಿಗೆ ಲೈಬ್ರರಿಯನ್ನು ಕೂಡ ನಿರ್ಮಾಣ ಮಾಡಲಾಗಿದೆ.

  • ಗ್ರಾಮಸ್ಥರ, ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಸಿಕ್ತು ಹೈಟಕ್ ಟಚ್

    ಗ್ರಾಮಸ್ಥರ, ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗೆ ಸಿಕ್ತು ಹೈಟಕ್ ಟಚ್

    ಹಾವೇರಿ: ಖಾಸಗಿ ಶಾಲೆಗಳ ಪ್ರಭಾವದಿಂದ ವರ್ಷದಿಂದ ವರ್ಷಕ್ಕೆ  ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಾಲೆಯ ದಾಖಲಾತಿ ಹೆಚ್ಚಳ ಹಾಗೂ ಉತ್ತಮ ಶಿಕ್ಷಣ ನೀಡಲು ಶಿಕ್ಷಕರ ಬಳಗ ಹೊಸ ಪ್ಲಾನ್ ಮಾಡಿದ್ದಾರೆ. ಗ್ರಾಮದ ದಾನಿಗಳ ಸಹಾಯ ಪಡೆದು ಕಂಪ್ಯೂಟರ್, ಸ್ಮಾರ್ಟ ಕ್ಲಾಸ್, ಡೆಸ್ಕ್ ಸೇರಿದಂತೆ ಮೂಲಭೂತ ಸೌಕರ್ಯವನ್ನ ಶಾಲೆಗೆ ಪಡೆದುಕೊಂಡಿದ್ದಾರೆ. ಈ ಮೂಲಕ ಖಾಸಗಿ ಶಾಲೆಯನ್ನು ಮೀರಿಸುವಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಮಾಡಿದ್ದಾರೆ.

    ಹೌದು, ಇದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸಕಟ್ಟಿ ಗ್ರಾಮದಲ್ಲಿ ಕಂಡು ಬಂದ ದೃಶ್ಯಗಳು. ಕಳೆದ ಒಂದು ವರ್ಷದಿಂದ ಸರ್ಕಾರಿ ಶಾಲೆಯ ಚಿತ್ರಣವೇ ಬದಲಾವಣೆಯಾಗಿದೆ. ಪುಟ್ಟಗ್ರಾಮ ಹೊಸಕಟ್ಟಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಕಳೆದ ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಶಾಲೆಯ ದಾಖಲಾತಿ ಪ್ರಮಾಣ ಕಡಿಮೆಯಾಗಿತ್ತು. ಶಾಲೆಯ ಅಭಿವೃದ್ಧಿ ಪಡಿಸಲು ಶಿಕ್ಷಕರ ಬಳಗವು ಒಂದು ಹೊಸ ಪ್ಲಾನ್ ಮಾಡಿ, ಗ್ರಾಮದ ಮನೆ ಮನೆಗೆ ತೆರಳಿ ದಾನ ರೂಪದಲ್ಲಿ ಮೂಲಭೂತ ಸೌಕರ್ಯವನ್ನ ಕೇಳಿದ್ದಾರೆ. ಹೊಸಕಟ್ಟಿ ಗ್ರಾಮದ ಜನರಿಂದ 10 ರೂ. ನಿಂದ ಒಂದು ಸಾವಿರ ರೂ. ವರೆಗೂ ಹಣವನ್ನು ವಂತಿಕೆಯಾಗಿ ಸಂಗ್ರಹಿಸಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

    ಗ್ರಾಮದ ಜನರು ಇದುವರೆಗೆ ಐದು ಕಂಪ್ಯೂಟರ್, ಒಂದೂವರೇ ಲಕ್ಷ ರುಪಾಯಿ ಖರ್ಚು ಮಾಡಿ ಡಿಜಿಟಲ್ ಕ್ಲಾಸ್ ರೂಂ ನಿರ್ಮಿಸಿ, ಖಾಸಗಿ ಶಾಲೆಗಳಿಗಿಂತ ನಾವು ಕಮ್ಮಿ ಇಲ್ಲ ಎಂದು ತಂತ್ರಜ್ಞಾನ ಬಳಿಸಿ ಮಕ್ಕಳಿಗೆ ಪಾಠಭೋಧನೆ ಮಾಡುತ್ತಿದ್ದಾರೆ. ಶಿಕ್ಷಕರು ಹಾಗೂ ಗ್ರಾಮಸ್ಥರ ಈ ಕಾರ್ಯದಿಂದ ಹೊಸಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

    ಪ್ರಸ್ತುತ ಗ್ರಾಮದ ಮಕ್ಕಳು ಖಾಸಗಿ ಶಾಲೆಗೆ ಹೋಗುವದನ್ನ ನಿಲ್ಲಿಸಿ, ಸರ್ಕಾರಿ ಶಾಲೆಯ ಕಡೆ ಬರುತ್ತಿದ್ದಾರೆ. 180 ಮಕ್ಕಳು ಇದ್ದ ಸಂಖ್ಯೆ ಈಗ 240 ಕ್ಕೆ ಏರಿಕೆಯಾಗಿದೆ. ಒಂಬತ್ತು ಜನ ಶಿಕ್ಷಕರು ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರು ಶನಿವಾರ ಮತ್ತು ಭಾನುವಾರು ಮಕ್ಕಳಿಗೆ ರಜೆ ನೀಡಿದ ಪ್ರತಿವಾರ ಒಬ್ಬರು ಸ್ಪೇಷಲ್ ಕ್ಲಾಸ್ ನೀಡುತ್ತಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಮಕ್ಕಳು ಸರ್ಕಾರಿ ಶಾಲೆಯ ಪ್ರವೇಶ ಪಡೆಯುತ್ತಿದ್ದಾರೆ.

    ಇನ್ನು ಗ್ರಾಮದ ಜನರಿಗೆ ತಮ್ಮ ಕಾರ್ಯದ ಬಗ್ಗೆ ಮೆಚ್ಚುಗೆ ಇದ್ದು, ಶಾಲೆಯನ್ನ ಇನ್ನು ಹೆಚ್ಚು ಅಭಿವೃದ್ದಿ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನ ಕೊಡಿಸುತ್ತೆವೆ ಎನ್ನುತ್ತಿದ್ದಾರೆ. ಶಾಲೆಯ ಶಿಕ್ಷಕರ ಬಳಗದ ಪರಿಶ್ರಮ ಹಾಗೂ ಗ್ರಾಮದ ದಾನಿಗಳಿಗೆ ಬಡಮಕ್ಕಳು ಡಿಜಿಟಲ್ ಶಿಕ್ಷಣ ಸೇರಿದಂತೆ ಕಂಪ್ಯೂಟರ್ ಶಿಕ್ಷಣವನ್ನ ಪಡೆದು ಜಿಲ್ಲೆಯಲ್ಲಿ ಮಾದರಿ ಶಾಲೆಯಲ್ಲಿಗೆ. ಗ್ರಾಮದ ಸರ್ಕಾರಿ ಶಾಲೆಯನ್ನ ಅಭಿವೃದ್ದಿ ಮಾಡಿದ ಹೊಸಕಟ್ಟಿ ಗ್ರಾಮಸ್ಥರಿಗೆ ನಮ್ಮದೊಂದು ಸಲಾಂ.

    https://www.youtube.com/watch?v=o0_5VconZHU