Tag: modak

  • ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!

    ಮೋದಕ ಅಷ್ಟೇ ಅಲ್ಲ ಈ ಸಿಹಿ ತಿಂಡಿಗಳೂ ವಿನಾಯಕನಿಗೆ ತುಂಬಾ ಇಷ್ಟ!

    ಸಾಮಾನ್ಯವಾಗಿ ಗಣೇಶ ಚತುರ್ಥಿ ಬಂತೆಂದರೆ ಸಾಕು ಗಣೇಶನಿಗೆ ಇಷ್ಟವಾಗುವ ಮೋದಕವನ್ನು ತಯಾರಿಸುತ್ತಾರೆ. ಆದರೆ ಮೋದಕದ ಹೊರತಾಗಿಯೂ ಇನ್ನು ಕೆಲವು ಸಿಹಿ ತಿಂಡಿಗಳು ವಿಘ್ನ ವಿನಾಶಕನಿಗೆ ಬಲು ಇಷ್ಟ.

    ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಈ ಗಣೇಶ ಚತುರ್ಥಿಯಂದು ಮೋದಕದ ಜೊತೆಗೆ ಈ ಕೆಲವು ಸಿಹಿ ತಿಂಡಿಗಳನ್ನು ಮಾಡಿ ವಿನಾಯಕನಿಗೆ ಅರ್ಪಿಸಿ.

    ಹೋಳಿಗೆ:
    ಗಣೇಶನಿಗೆ ಮತ್ತೊಂದು ಪ್ರಿಯವಾದ ಭೋಜನವೆಂದರೆ ಅದು ಹೋಳಿಗೆ. ಮೈದಾ ಹಿಟ್ಟು ಅಥವಾ ಗೋಧಿ ಹಿಟ್ಟನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಕಡಲೆ ಬೇಳೆಯನ್ನು ಚೆನ್ನಾಗಿ ಬೇಯಿಸಿ ಅದಕ್ಕೆ ಬೆಲ್ಲವನ್ನು ಸೇರಿಸಿ ರುಬ್ಬಿಕೊಳ್ಳಲಾಗುತ್ತದೆ. ಬಳಿಕ ಚಪಾತಿ ಮಾಡುವ ಹಾಗೆ ಚಿಕ್ಕದಾಗಿ ಉಂಡೆ ಮಾಡಿಕೊಂಡು ಅದರೊಳಗೆ ಬೇಳೆ ಮಿಶ್ರಣವನ್ನು ಸೇರಿಸಿ ವೃತಾಕಾರದಲ್ಲಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಅದನ್ನು ಕಾದ ತವೆಯ ಮೇಲೆ ಬೇಯಿಸಿಕೊಂಡರೆ ಹೋಳಿಗೆ ತಯಾರಾಗುತ್ತದೆ.

    ಮೋತಿಚೂರ್ ಲಡ್ಡು:
    ಈ ಲಡ್ಡು ಕೂಡ ಗಣೇಶನಿಗೆ ಅತ್ಯಂತ ಇಷ್ಟವಾದ ನೈವೇದ್ಯ. ಕಡಲೆ ಹಿಟ್ಟು ಅಥವಾ ಬೇಸನ್ ಹಿಟ್ಟು ಬಳಸಿ ಇದನ್ನು ತಯಾರಿಸಲಾಗುತ್ತದೆ. ಸಕ್ಕರೆ ಪಾಕದಲ್ಲಿ ಬೇಸನ್ ಅಥವಾ ಕಡಲೆ ಹಿಟ್ಟು ಹಾಕಿ, ಬಳಿಕ ರವೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಲಾಗುತ್ತದೆ. ಅದಕ್ಕೆ ಕೇಸರಿ ಬಣ್ಣ ಬರುವಂತೆ ಬಣ್ಣ ಹಾಕಿ ಚೆನ್ನಾಗಿ ಕಲಸಿ ಉಂಡೆ ಮಾಡಿಕೊಳ್ಳಲಾಗುತ್ತದೆ.

    ತೆಂಗಿನ ಕಾಯಿ ಲಡ್ಡು:
    ಹೆಚ್ಚಿನ ಕಡೆ ತೆಂಗಿನಕಾಯಿ ಲಡ್ಡುವನ್ನು ಗಣೇಶನಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಒಣಗಿದ ತೆಂಗಿನ ಕಾಯಿ ತುರಿ, ಏಲಕ್ಕಿ ಪುಡಿ, ತುಪ್ಪ ಹಾಗೂ ಪುಡಿ ಸಕ್ಕರೆಯನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ.

    ಶ್ರೀಖಂಡ:
    ಈ ಸಿಹಿ ಖಾದ್ಯವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಹೆಚ್ಚಾಗಿ ತಯಾರಿಸುತ್ತಾರೆ. ಅದೊಂದು ಪ್ರಸಿದ್ಧ ಸಿಹಿ ತಿಂಡಿಯು ಹೌದು. ಮೊದಲಿಗೆ ಮೊಸರನ್ನು ಒಂದು ತೆಳುವಾದ ಬಟ್ಟೆಗೆ ಹಾಕಿ ಚೆನ್ನಾಗಿ ನೀರನ್ನು ಬೇರ್ಪಡಿಸಿಕೊಳ್ಳಬೇಕು. ಬಳಿಕ ಈ ಮೊಸರಿಗೆ ಪುಡಿ ಸಕ್ಕರೆಯನ್ನು ಹಾಕಿಕೊಳ್ಳಬೇಕು. ಅನಂತರ ಇದಕ್ಕೆ ಏಲಕ್ಕಿ ಪುಡಿ ಹಾಕಿ, ನಂತರ ಸಣ್ಣದಾಗಿ ಹೆಚ್ಚಿದ ಬಾದಾಮಿ ಹಾಗೂ ಪಾಸ್ತಾವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ಆಗ ಶ್ರಿಖಂಡ ತಯಾರಾಗುತ್ತದೆ.

    ತೆಂಗಿನಕಾಯಿ ಬರ್ಫಿ:
    ಹೆಸರೇ ಸೂಚಿಸುವಂತೆ ತೆಂಗಿನಕಾಯಿ ತುರಿಯನ್ನು ಬಳಸಿ ಈ ಬರ್ಫಿಯನ್ನು ತಯಾರಿಸಲಾಗುತ್ತದೆ. ಒಣಗಿದ ತೆಂಗಿನ ಕಾಯಿ ತುರಿಗೆ ಏಲಕ್ಕಿ ಪುಡಿ, ಸ್ವಲ್ಪ ರೋಜ್ ವಾಟರ್, ತುಪ್ಪ, ಸಕ್ಕರೆ ಹಾಗೂ ಕೆನೆ ಹಾಲು ಸೇರಿಸಿ ಈ ತೆಂಗಿನಕಾಯಿ ಬರ್ಫಿ ತಯಾರಿಸಲಾಗುತ್ತದೆ.

    ಇಷ್ಟೇ ಅಲ್ಲದೇ ಇನ್ನೂ ಹಲವು ಸಿಹಿ ತಿನಿಸುಗಳು ಗಣೇಶನಿಗೆ ತುಂಬಾ ಇಷ್ಟ. ಈ ಬಾರಿಯ ಗಣೇಶ ಚತುರ್ಥಿಗೆ ಈ ಸಿಹಿ ತಿಂಡಿಗಳನ್ನು ಅರ್ಪಿಸಿ, ವಿಘ್ನ ವಿನಾಶಕನಲ್ಲಿ ಭಕ್ತಿಯಿಂದ ಪಾರ್ಥಿಸಿ

  • ಕಾರ್ಡ್ ಹಾಕಿದ್ರೆ ಎಟಿಎಂನಲ್ಲಿ ಬರುತ್ತೆ ಮೋದಕ- ವಿಡಿಯೋ ನೋಡಿ!

    ಕಾರ್ಡ್ ಹಾಕಿದ್ರೆ ಎಟಿಎಂನಲ್ಲಿ ಬರುತ್ತೆ ಮೋದಕ- ವಿಡಿಯೋ ನೋಡಿ!

    ಮುಂಬೈ: ಎಟಿಎಂನಿಂದ ಹಣ ಬರುವುದು ಗೊತ್ತೆ ಇದೆ. ಆದರೆ ಮಹಾರಾಷ್ಟ್ರದ ಒಂದು ಕಡೆ ಕಾರ್ಡ್ ಹಾಕಿದರೆ ಮೋದಕ ಬರುತ್ತದೆ.

    ಹೌದು, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ಸಹಕಾರ ನಗರದಲ್ಲಿ ಎಟಿಎಂ (ಎನಿ ಟೈಮ್ ಮೋದಕ) ಯತ್ರವನ್ನು ಸಿದ್ಧ ಪಡಿಸಲಾಗಿದೆ. ಎಟಿಎಂನಿಂದ ಮೋದಕ ಹೊರ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

    ಸಹಕಾರ ನಗರದ ನಿವಾಸಿ ಸಂಜೀವ್ ಕುಲಕರ್ಣಿ ಎಂಬವರು ಈ ಎಟಿಎಂ ಯಂತ್ರವನ್ನು ಅಭಿವೃದ್ಧಿಪಡಿಸಿ, ಅದರೊಳಗೆ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಭಕ್ತರು ಗಣೇಶನ ಆಶೀರ್ವಾದ ಪಡೆದು, ಬಳಿಕ ವಿಶೇಷ ಕಾರ್ಡ್ ಹಾಕಿದರೆ ಮೋದಕ ಬರುವಂತೆ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಕಾರ್ಡ್ ಹಾಕಿದ ಬಳಿಕ ಪುಟ್ಟ ಡಬ್ಬಿ ಹೊರ ಬರುತ್ತದೆ. ಅದರೊಳಗೆ ಮೋದಕವಿದ್ದು, ಮುಚ್ಚಳದ ಮೇಲೆ ಓಂ ಎಂದು ಬರೆಯಲಾಗಿರುತ್ತದೆ.

    ಸಾಮಾನ್ಯ ಎಟಿಎಂ ನಂತೆಯೇ ಅದನ್ನು ಸಿದ್ಧಪಡಿಸಲಾಗಿದ್ದು, ಬಟನ್‍ಗಳ ಮೇಲೆ ಸಂಖ್ಯೆ ಹಾಗೂ ಸೂಚನೆ ಬದಲಾಗಿ, ಕ್ಷಮೆ, ಭಕ್ತಿ, ಪ್ರೀತಿ, ಶಾಂತಿ, ಜ್ಞಾನ ಮತ್ತು ದಾನ ಎಂದು ಬರೆಯಲಾಗಿದೆ.

    ತಂತ್ರಜ್ಞಾನ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಕೂಡಿಸಿಕೊಂಡು ಮುಂದುವರಿಯುವ ಸಂಕೇತವಾಗಿ ಈ ಎಟಿಎಂ ಸಿದ್ಧಪಡಿಸಲಾಗಿದೆ. ಇದಕ್ಕಾಗಿಯೇ ತಯಾರಿಸಿದ ವಿಶೇಷ ಕಾರ್ಡ್ ತೋರಿಸಿದರೆ ಪ್ರಸಾದದ ರೂಪದಲ್ಲಿ ಮೋದಕ ಪಡೆಯಬಹುದು ಎಂದು ಯಂತ್ರವನ್ನು ಅಭಿವೃದ್ಧಿ ಪಡಿಸಿದ ಸಂಜೀವ್ ಕುಲಕರ್ಣಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv