Tag: Mobile SIM

  • ಮೊಬೈಲ್ ಸಿಮ್ ಖರೀದಿಸಿ ಸಿಕ್ಕಿಬಿದ್ದ ಜಿಹಾದಿ ಉಗ್ರರು

    ಮೊಬೈಲ್ ಸಿಮ್ ಖರೀದಿಸಿ ಸಿಕ್ಕಿಬಿದ್ದ ಜಿಹಾದಿ ಉಗ್ರರು

    ಬೆಂಗಳೂರು: ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬಲಪಡಿಸಲು ಹೊರಟಿದ್ದ ಜಿಹಾದಿ ಗ್ಯಾಂಗನ್ನು ಮೊಬೈಲ್ ಸಿಮ್ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.

    ದಕ್ಷಿಣ ಭಾರತದ ಐಸಿಸ್ ಕಮಾಂಡರ್ ಮೆಹಬೂಬ್ ಪಾಷಾನನ್ನ ಸಿಸಿಬಿ ಪೊಲೀಸರು ಬಂಧಿಸಿದ ಬಳಿಕ ಮತ್ತಷ್ಟು ಮಾಹಿತಿಗಳು ಹೊರಬರಲಾಭಿಸಿವೆ. 10 ಮೊಬೈಲ್ ಸಿಮ್ ಖರೀದಿಸಿರುವುದನ್ನು ಆಧರಿಸಿಯೇ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಇದೀಗ ತಿಳಿದು ಬಂದಿದೆ. ಇದನ್ನೂ ಓದಿ: ಶಂಕಿತ ನಾಲ್ವರು ಉಗ್ರರು 10 ದಿನ ಸಿಸಿಬಿ ಕಸ್ಟಡಿಗೆ

    2019ರ ಏಪ್ರಿಲಿನಲ್ಲಿ ತಮಿಳುನಾಡಿನ ಹಿಂದೂ ಮುಖಂಡ ಸುರೇಶ್ ಹತ್ಯೆ ಪ್ರಕರಣದ ಆರೋಪಿ, ಜಿಹಾದಿ ಶಂಕಿತ ಉಗ್ರ ಮೊಹಿನುದ್ದೀನ್ ಖಾಜಾ ಜಾಮೀನು ಪಡೆದು ಬಂದು ತಲೆ ಮರೆಸಿಕೊಂಡಿದ್ದ. ಖಾಜಾ ಪತ್ತೆಗೆ ತಮಿಳುನಾಡು ನ್ಯಾಯಾಲಯ ಸೂಚಿಸಿದ ನಂತರ ಕೇಂದ್ರ ತನಿಖಾ ಸಂಸ್ಥೆಗಳು ಎಚ್ಚೆತ್ತುಕೊಂಡಿದ್ದವು. ಸೇಲಂ ನಲ್ಲಿ ಖಾಜಾ ಶಿಷ್ಯನೊಬ್ಬ ನಕಲಿ ದಾಖಲೆ ನೀಡಿ 10 ಸಿಮ್ ಖರೀದಿಸಿದ್ದ. ಈ ಸಿಮ್‍ಗಳು ಕೋಲಾರ, ಬರ್ದಾನ್ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ಪತ್ತೆ ಮಾಡಲಾಗಿತ್ತು. ಕೂಡಲೇ ಐಎಸ್‍ಡಿ ಮತ್ತು ಸಿಸಿಬಿ ಪೊಲೀಸರು ಸದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ ಮೆಹಬೂಬ್ ಪಾಷಾನ ಸಹಚರರನ್ನು ಬಂಧಿಸಿದ್ದರು. ಹಿಂದೂ ಮುಖಂಡ ಸುರೇಶ್ ಹತ್ಯೆ ಬಳಿಕ ಮೊಹಿನುದ್ದೀನ್ ಖಾಜಾ ಇಸ್ಲಾಮಿಕ್ ಸ್ಟೇಟ್ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.

    ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸುವ ಸಲುವಾಗಿ ಆಪ್ತರೊಬ್ಬರ ಮೂಲಕ ಮೆಹಬೂಬ್ ಪಾಷಾ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದ. ಮೆಹಬೂಬ್ ಪಾಷಾನಿಗಿದ್ದ ಇಸ್ಲಾಮಿಕ್ ಸ್ಟೇಟ್ ಪರ ಒಲವು ಕಂಡು ಇಡೀ ದಕ್ಷಿಣ ಭಾರತದ ಕಮಾಂಡರ್ ಆಗಿ ಖಾಜಾನನ್ನು ನೇಮಿಸಲಾಗಿತ್ತು. ಈ ಮೂಲಕ ಯುವಕರ ಮೈಂಡ್ ವಾಶ್ ಮಾಡಿ, ತರಬೇತಿ ನೀಡುತ್ತಿದ್ದ ಪಾಶಾ, ಕೊನೆಗೆ ತನ್ನ ಅಣ್ಣನ ಮಕ್ಕಳಿಬ್ಬರಿಗೂ ಮೈಂಡ್ ವಾಶ್ ಮಾಡಿ ತರಬೇತಿ ನೀಡಲು ಮುಂದಾಗಿದ್ದ. ಬಹುದೊಡ್ಡ ಗಂಡಾಂತರ ನಡೆಯುವ ಮುನ್ನವೇ ಸಿಸಿಬಿ ಮತ್ತು ಐಎಸ್‍ಡಿ ಪೊಲೀಸರು ಉಗ್ರರನ್ನು ಬಂಧಿಸಿದ್ದಾರೆ.

  • ಮೊಬೈಲ್ ಸಿಮ್‍ಗಾಗಿ ಜಗಳ – ತಾಯಿ, ಮಗನಿಗೆ ಚಾಕು ಇರಿತ

    ಮೊಬೈಲ್ ಸಿಮ್‍ಗಾಗಿ ಜಗಳ – ತಾಯಿ, ಮಗನಿಗೆ ಚಾಕು ಇರಿತ

    ಹುಬ್ಬಳ್ಳಿ: ಮೊಬೈಲ್ ಸಿಮ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿ ಹಾಗೂ ಮಗನಿಗೆ ಯುವಕರ ಗುಂಪೊಂದು ಚಾಕುವಿನಿಂದ ಇರಿದ ಘಟನೆ ಹಳೇ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ನಡೆದಿದೆ.

    ಘಟನೆಯಲ್ಲಿ ನಿಯಾಜ್ ಅಹ್ಮದ್ ಶೇಖ್ (29) ಮೇಹಬೂಬಿ ಶೇಖ್ (50) ಗಾಯಗೊಂಡಿದ್ದಾರೆ. ನಿಯಾಜ್ ಬೆನ್ನಿಗೆ ಹಾಗೂ ಮೇಹಬೂಬಿ ಅವರ ಬಲ ಭಾಗಕ್ಕೆ ಶಾರುಖ್ ಕಲಾದಗಿ, ಮಹ್ಮದ್ ಕಲಾದಗಿ, ಸಾದೀಖ್ ಹಾಗೂ ಸಂಗಡಿಗರು ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

    ಮೊಬೈಲ್ ಸಿಮ್ ವಿಷಯಕ್ಕೆ ಚಾಕುವಿನಿಂದ ಇರಿಯಲಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಆರೋಪಿ ಶಾರುಖ್ ಸಿಮ್‍ನ್ನು ನಿಯಾಜ್ ಶೇಖ್ ತಗೆದುಕೊಂಡಿದ್ದನಂತೆ. ಅದನ್ನು ಕೆಳಲು ಪದೇ ಪದೇ ಮನೆಗೆ ಬರುತ್ತಿದ್ದರು. ಆದರೆ ನಿನ್ನೆ ತನ್ನ ಸಿಮ್ ಕೊಡುವಂತೆ ಕೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ತಾಯಿ ಹಾಗೂ ಮಗನ ಮೇಲೆ ಚಾಕು ಇರಿದು ಪರಾರಿಯಾಗಿದ್ದಾರೆ.

    ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಕಸಬಾಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.