Tag: Mobile Phones Explosion

  • Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    – ಬೆಂಕಿ ನಂದಿಸಿದ ವೇಳೆ 100ಕ್ಕೂ ಹೆಚ್ಚು ಮೊಬೈಲ್ ಫೋನ್‌ ಅವಶೇಷಗಳು ಪತ್ತೆ

    ಹೈದರಾಬಾದ್‌: ಶುಕ್ರವಾರ ಮುಂಜಾನೆ ಸಂಭವಿಸಿದ ಕರ್ನೂಲ್‌ ಬಸ್‌ ದುರಂತಕ್ಕೆ (Kurnool Bus Fire) ಕಾರಣವಾದ ಮತ್ತೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ ಅಂತ ಆಂಧ್ರಪ್ರದೇಶ ಅಗ್ನಿಶಾಮಕ ಇಲಾಖೆಯ (Andhra Pradesh Fire Department) ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಅಧಿಕಾರಿಗಳು ಹೇಳುವಂತೆ ದುರಂತಕ್ಕೀಡಾದ ಬಸ್‌ನ ಹಿಂದಿನ ಸೀಟುಗಳ ಕೆಳಗೆ ಲಗೇಜ್‌ ಜಾಗದಲ್ಲಿ ಹೊಸ ಮೊಬೈಲ್‌ ಫೋನ್‌ಗಳನ್ನ ಇಡಲಾಗಿತ್ತು. ಬೆಂಕಿ ಹೊತ್ತಿಕೊಂಡು ಶಾಖ ಹೆಚ್ಚಾಗಿದ್ದರಿಂದಾಗಿ 100ಕ್ಕೂ ಹೆಚ್ಚು ಹೊಸ ಫೋನ್‌ಗಳು ಒಮ್ಮೆಲೆ ಸ್ಫೋಟಗೊಂಡಿವೆ (Mobile Phones Explosion). ಹಿಂದಿನ ಸೀಟುಗಳ ಕೆಳಗೆ ಹಾನಿಯಾಗಿದ್ದ ನಿರ್ದಿಷ್ಟ ಬ್ರ್ಯಾಂಡ್‌ನ ಹ್ಯಾಂಡ್‌ಸೆಟ್‌ಗಳ ಬಿಡಿಭಾಗಗಳನ್ನ ನೋಡಿ ನಮಗೇ ಆಶ್ಚರ್ಯವಾಯಿತು ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್‌ ಫೋನ್ಸ್‌
    ಬೆಂಗಳೂರಿನ ಕ್ಲೈಂಟ್‌ ಒಬ್ಬರಿಗೆ ತಲುಪಿಸಲು 100ಕ್ಕೂ ಹೆಚ್ಚು ಹ್ಯಾಂಡ್‌ಸೆಟ್‌ಗಳನ್ನ ಲಗೇಜ್‌ ಜಾಗದಲ್ಲಿ ಇರಿಸಲಾಗಿತ್ತು. ಈ ಮೊಬೈಲ್‌ಗಳು ಒಮ್ಮೆಲೆ ಸ್ಫೋಟಗೊಂಡಿರುವುದರಿಂದ ಬೆಂಕಿಯ ಪ್ರಮಾಣ ವ್ಯಾಪಿಸಿರಬಹುದು. ಜೊತೆಗೆ ಎಸಿಗಳು ಹಾಗೂ ಇತರ ಉದ್ದೇಶಗಳಿಗಾಗಿ ಬಸ್‌ನಲ್ಲಿ ಅಳವಡಿಸಿದ್ದ ವಿದ್ಯುತ್‌ ಬ್ಯಾಟರಿಗಳು ಸಹ ಸ್ಫೋಟಗೊಂಡಿದ್ದು ದುರಂತಕ್ಕೆ ಕಾರಣವಾಗಿದೆ. ಬೆಂಕಿಯ ಪ್ರಮಾಣ ಎಷ್ಟಿತ್ತೆಂದರೆ ಬಸ್‌ಗೆ ಅಳವಡಿಸಿದ್ದ ಅಲ್ಯೂಮಿನಿಯಂ ನೆಲಹಾಸು ನೀರಿನಂತೆ ಕರಗಿಹೋಗಿತ್ತು, ಮೊಳೆಗಳು ಕರಗಿ ಬೂದಿಯಂತೆ ಉದುರುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

    ಮೊದಲ ಕಾರಣ ಏನು?
    ಬೈಕ್‌ನಲ್ಲಿದ್ದ ವ್ಯಕ್ತಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಬಸ್ಸು ಮತ್ತು ಬೈಕ್ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುತ್ತಿತ್ತು. ವೇಗವಾಗಿ ಬರುತ್ತಿದ್ದ ಬಸ್ಸು ಮೊದಲು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಕೆಳಗಡೆ ಬಿದ್ದಿದೆ. ಬೈಕ್ ಕೆಳಗಡೆ ಬಿದ್ದರೂ ಚಾಲಕ ಬಸ್ಸನ್ನು ವೇಗವಾಗಿ ಚಲಾಯಿಸಿದ್ದಾನೆ.

    ಕೆಳಭಾಗದಲ್ಲಿ ಸಿಲುಕಿಕೊಂಡಿದ್ದ ಬೈಕನ್ನು ಬಸ್ಸು 300 ಮೀ. ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕಿನಲ್ಲಿದ್ದ ಪೆಟ್ರೋಲ್ ಕೆಳಕ್ಕೆ ಚೆಲ್ಲಿದೆ. ರಸ್ತೆಯಲ್ಲಿ ಬೈಕನ್ನು ಎಳೆದುಕೊಂಡು ಹೋಗಿದ್ದರಿಂದ ಘರ್ಷಣೆಯಿಂದಾಗಿ ಕಿಡಿ ಹೊತ್ತಿದೆ. ಬೆಂಕಿಯ ಕಿಡಿ ಡೀಸೆಲ್ ಟ್ಯಾಂಕ್ ಮೇಲೆ ಚಿಮ್ಮಿದೆ. ಟ್ಯಾಂಕ್‌ಗೆ ಕಿಡಿ ಚಿಮ್ಮಿದ ಕೂಡಲೇ ಬೆಂಕಿ ಹೊತ್ತಿಕೊಂಡು ಟ್ಯಾಂಕ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಡೀಸೆಲ್ ಮೇಲುಗಡೆ ಹಾರಿದ್ದರಿಂದ ಸುಲಭವಾಗಿ ಬೆಂಕಿ ಹರಡಿ ಕ್ಷಣಮಾತ್ರದಲ್ಲಿ ಬಸ್ಸು ಧಗಧಗಿಸಿದೆ.

    ಕರ್ನೂಲ್ ಡಿಸಿ ಹೇಳಿದ್ದೇನು?
    ಕರ್ನೂಲ್ ಬಸ್ ದುರಂತದ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಎ ಸಿರಿ, ಖಾಸಗಿ ಬಸ್ ದುರಂತ ಬೆಳಗ್ಗಿನ ಜಾವ 3 ರಿಂದ 3:10ರ ಸುಮಾರಿಗೆ ಆಗಿದೆ. ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂಧನ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನಲ್ಲಿದ್ದ 41 ಪ್ರಯಾಣಿಕರಲ್ಲಿ 23 ಜನರನ್ನ ರಕ್ಷಿಸಲಾಗಿದೆ. ಇಲ್ಲಿಯವರೆಗೆ ಮೃತರಲ್ಲಿ 11 ಜನರನ್ನು ಗುರುತಿಸಲಾಗಿದೆ, ಉಳಿದವರ ಗುರುತು ಪತ್ತೆ ಮಾಡುವ ಕಾರ್ಯ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.