Tag: mobile application

  • ಕೋಲ್ಕತ್ತಾ ವೈದ್ಯೆ ಹತ್ಯಾಚಾರ; ನೈಟ್ ಶಿಫ್ಟ್ ಮಹಿಳೆಯರ ಸುರಕ್ಷತೆಗಾಗಿ ಪಶ್ಚಿಮ ಬಂಗಾಳ ಸರ್ಕಾರದಿಂದ 5 ಕ್ರಮ

    ಕೋಲ್ಕತ್ತಾ ವೈದ್ಯೆ ಹತ್ಯಾಚಾರ; ನೈಟ್ ಶಿಫ್ಟ್ ಮಹಿಳೆಯರ ಸುರಕ್ಷತೆಗಾಗಿ ಪಶ್ಚಿಮ ಬಂಗಾಳ ಸರ್ಕಾರದಿಂದ 5 ಕ್ರಮ

    ಕೋಲ್ಕತ್ತಾ: ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ (Kolkata Doctor Rape And Murder) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ (West Bengal) ಸರ್ಕಾರ ರಾತ್ರಿ ಪಾಳಿಯಲ್ಲಿ (Night Shift) ಕೆಲಸ ಮಾಡುವ ಮಹಿಳೆಯರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಪ್ರಸ್ತಾಪಿಸಿದೆ.

    ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ಹಾಸ್ಟೆಲ್‌ಗಳು ಮತ್ತು ಮಹಿಳೆಯರು ಅಗತ್ಯವಿರುವ ಇತರೆ ಕೆಲಸದ ಸ್ಥಳಗಳಲ್ಲಿ ಸುರಕ್ಷಿತ ಕೆಲಸದ ಪರಿಸ್ಥಿತಿಗಳನ್ನು ಒದಗಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಐದು ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮ ವಿಶೇಷ ಮೊಬೈಲ್ ಅಪ್ಲಿಕೇಶನ್, ಸುರಕ್ಷಿತ ವಲಯಗಳು ಮತ್ತು ಮಹಿಳಾ ಸ್ವಯಂಸೇವಕರನ್ನು ಒಳಗೊಂಡಿದೆ. ಇದನ್ನೂ ಓದಿ: ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಮಹೇಶ್‌ ಚಂದ್ರ ಗುರು ನಿಧನ

    ಐದು ಕ್ರಮಗಳು ಏನು?
    *ಮಹಿಳೆಯರಿಗೆ ಶೌಚಾಲಯದೊಂದಿಗೆ ಪ್ರತ್ಯೇಕ ಗೊತ್ತುಪಡಿಸಿದ ವಿಶ್ರಾಂತಿ ಕೊಠಡಿಗಳು ಇರಬೇಕು.
    *’ರಾಟ್ಟಿರೇರ್ ಶಾಥಿ’ ಅಥವಾ ಮಹಿಳಾ ಸ್ವಯಂಸೇವಕರು ರಾತ್ರಿಯಲ್ಲಿ ಕರ್ತವ್ಯದಲ್ಲಿರಬೇಕು.
    *ಸಿಸಿಟಿವಿಯ ಸಂಪೂರ್ಣ ಕವರೇಜ್‌ನೊಂದಿಗೆ ಮಹಿಳೆಯರಿಗೆ ಸುರಕ್ಷಿತ ವಲಯಗಳಲ್ಲಿ ಕೆಲಸ ನೀಡಲಾಗುವುದು.
    *ಅಲರಾಂ ಸಾಧನಗಳೊಂದಿಗೆ ವಿಶೇಷ ಮೊಬೈಲ್ ಫೋನ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗುವುದು. ಇದನ್ನು ಎಲ್ಲಾ ಕೆಲಸ ಮಾಡುವ ಮಹಿಳೆಯರು ಕಡ್ಡಾಯವಾಗಿ ಡೌನ್‌ಲೋಡ್ ಮಾಡಬೇಕು. ಇದು ಸ್ಥಳೀಯ ಪೊಲೀಸ್ ಠಾಣೆಗಳು/ಪೊಲೀಸ್ ನಿಯಂತ್ರಣ ಕೊಠಡಿಗಳ ಸಂಪರ್ಕದಲ್ಲಿರುತ್ತದೆ.
    *ಯಾವುದೇ ಪ್ಯಾನಿಕ್/ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ 100/112 ಅನ್ನು ವ್ಯಾಪಕವಾಗಿ ಬಳಸಿಕೊಳ್ಳಬೇಕು.

    ಸಾಧ್ಯವಾದಲ್ಲೆಲ್ಲಾ ಮಹಿಳೆಯರನ್ನು ರಾತ್ರಿ ಕರ್ತವ್ಯದಿಂದ ಮುಕ್ತಗೊಳಿಸಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮುಖ್ಯ ಸಲಹೆಗಾರ ಅಲಾಪನ್ ಬಂಡೋಪಾಧ್ಯಾಯ ತಿಳಿಸಿದ್ದಾರೆ. ಇದನ್ನೂ ಓದಿ: Udaipur Stabbing Case| ಶಾಲೆಗೆ ಹರಿತವಾದ ಸಾಧನ ಒಯ್ಯುವುದುಕ್ಕೆ ನಿಷೇಧ ಹೇರಿದ ಸರ್ಕಾರ

  • ಡಿಬಿಟಿ ಮೊಬೈಲ್ ಅಪ್ಲಿಕೇಷನ್‍ಗೆ ಮುಖ್ಯಮಂತ್ರಿ ಚಾಲನೆ

    ಡಿಬಿಟಿ ಮೊಬೈಲ್ ಅಪ್ಲಿಕೇಷನ್‍ಗೆ ಮುಖ್ಯಮಂತ್ರಿ ಚಾಲನೆ

    – 12 ಸಾವಿರ ಕೋಟಿ ರೂ.ಗೂ ಅಧಿಕ ನೆರವು ವಿತರಣೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಿಬ್ಬಂದಿ ಮತ್ತು ಆಡಳಿ ಸುಧಾರಣೆ ಇಲಾಖೆ (ಇ-ಆಡಳಿತ) ಅಭಿವೃದ್ಧಿ ಪಡಿಸಿರುವ ‘ಡಿ.ಬಿ.ಟಿ’ ಮೊಬೈಲ್ ಅಪ್ಲಿಕೇಶನ್‍ಗೆ ಚಾಲನೆ ನೀಡಿದರು.

    ರಾಜ್ಯದಲ್ಲಿ ಈವರೆಗೆ ಸುಮಾರು 120 ಯೋಜನೆಗಳನ್ನು ಈ ವೇದಿಕೆಗೆ ಒಳಪಡಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 12 ಸಾವಿರ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತವನ್ನು ಫಲಾನುಭವಿಗಳ ಆಧಾರ್ ಜೋಡಣೆಯಾದ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಹಣ ದುರುಪಯೋಗ, ಲೋಪ ದೋಷ ಅಥವಾ ಮಧ್ಯವರ್ತಿಗಳ ಹಾವಳಿ ಇಲ್ಲ ಎಂದು ಮುಖ್ಯಮಂತ್ರಿಗಳು ಹರ್ಷ ವ್ಯಕ್ತಪಡಿಸಿದರು.

    ಕೋವಿಡ್-19ರ ಮೊದಲನೆ ಮತ್ತು ಎರಡನೆಯ ಅಲೆಯ ಸಂದರ್ಭದಲ್ಲಿ ಸರ್ಕಾರವು ಘೋಷಿಸಿದ ಎಲ್ಲಾ ಪ್ಯಾಕೇಜ್‍ಗಳು ಈ ವೇದಿಕೆ ಮೂಲಕವೇ ಪಾವತಿ ಮಾಡಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯದಲ್ಲಿ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಎಲ್ಲ ಯೋಜನೆಗಳನ್ನು ಡಿಬಿಟಿ ವೇದಿಕೆಯಡಿ ತರಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಈ ವೇದಿಕೆಯು ಫಲಾನುಭವಿಯನ್ನು ಆಧಾರ್ ಸಂಖ್ಯೆ ಮೂಲಕ ಗುರುತಿಸಿ ಫಲಾನುಭವಿಯ ಆಧಾರ್ ಅನ್ನು ಆರ್ಥಿಕ ವಿಳಾಸವಾಗಿ (Financial Address) ಪರಿಗಣಿಸಿ ನಗದು ವರ್ಗಾವಣೆಯನ್ನು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು. ಬ್ಯಾಂಕ್ ಖಾತೆಗೆ ಆಧಾರ್ ಜೋಡನೆ ಮಾಹಿತಿಯು ಯು.ಐ.ಡಿ.ಐ. ಜಾಲತಾಣದಲ್ಲಿ ಮಾತ್ರ ಲಭ್ಯವಿದ್ದು ನಾಗರಿಕರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿರುವ ಬಗ್ಗೆ ತಿಳಿದುಕೊಳ್ಳಲು ಕಷ್ಟವಾಗಿತ್ತು. ನಾಗರಿಕರ ಆಧಾರ್ ಬ್ಯಾಂಕ್ ಖಾತೆಗೆ ಜೋಡಣೆಯಾಗದೇ ಇದ್ದಲ್ಲಿ ರಾಜ್ಯ ಸರ್ಕಾರವು ನಗದು ಸೌಲಭ್ಯ ವರ್ಗಾವಣೆಗೆ ಬಳಸುತ್ತಿರುವ ಆಧಾರ್ ಆಧಾರಿತ ನಗದು ವರ್ಗಾವಣೆ ವ್ಯವಸ್ಥೆ (Aadhaar Based Payment System) ಮೂಲಕ ಹಣ ಪಡೆಯಲು ಸಾಧ್ಯವಾಗುವುದಿಲ್ಲ.

    ಬಹಳಷ್ಟು ನಾಗರಿಕರಿಗೆ ತಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿದೆ ಎಂಬ ಮಾಹಿತಿ ತಿಳಿದಿರುವುದಿಲ್ಲ. ಇದರಿಂದ ಸರ್ಕಾರವು ಯಾವ ಬ್ಯಾಂಕ್ ಖಾತೆಗೆ ನಗದು ಸೌಲಭ್ಯವನ್ನು ಜಮೆ ಮಾಡಿದೆ ಎಂಬ ವಿವರಗಳನ್ನು ತಿಳಿದುಕೊಳ್ಳಲು ಇವರುಗಳಿಗೆ ಬಹಳ ಕಷ್ಟವಾಗುತ್ತದೆ. ಅಲ್ಲದೆ ಇತ್ತೀಚೆಗೆ ರಾಜ್ಯ ಸರ್ಕಾರವು ನಾಗರಿಕರಿಂದ ಯಾವುದೇ ಅರ್ಜಿ ಪಡೆಯದೇ ಅರ್ಹತೆ ಆಧಾರದ ಮೇಲೆ ನಗದು ವರ್ಗಾವಣೆಯನ್ನು ಮಾಡುತ್ತಿರುವುದರಿಂದ ಇವರುಗಳಿಗೆ ಹಣ ಬ್ಯಾಂಕ್ ಖಾತೆಯಲ್ಲಿ ಜಮೆಯಾಗುವ ಬಗ್ಗೆಯು ಮಾಹಿತಿ ಲಭ್ಯ ಇರುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಡಿ.ಬಿ.ಟಿ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ಈ ಆ್ಯಪ್ ಅನ್ನು ನಾಗರೀಕರು ಹೆಚ್ಚು-ಹೆಚ್ಚಾಗಿ ಬಳಸಿದಾಗ ಪಾರದರ್ಶಕತೆ ಇರುವ ಸರ್ಕಾರದ ಉದ್ದೇಶ ಯಶಸ್ವಿಯಾಗಲು ಸಾಧ್ಯ. ಆದ್ದರಿಂದ ನಾಗರೀಕರು ಈ ಆ್ಯಪ್‍ನ ಸದುಪಯೋಗ ಪಡೆದುಕೊಂಡು ಫಲಾನುಭವಿಗಳಿಗೆ ವರ್ಗಾವಣೆಯಾಗಿರುವ ನಗದು ವಿವರವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.

    ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಇ-ಆಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಡಿಬಿಟಿ ಯೋಜನಾ ನಿರ್ದೇಶಕ ಶ್ರೀವತ್ಸ, ಎನ್.ಐ.ಸಿ ಉಪ ನಿರ್ದೇಶಕರಾದ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

    ಡಿ.ಬಿ.ಟಿ ಅಪ್ಲಿಕೇಷನ್ ಬಗ್ಗೆ: ಈ ಆ್ಯಪ್‍ನ್ನು ಗೂಗಲ್ ಪ್ಲೇ-ಸ್ಟೋರ್ನ ಮೂಲಕ ಡೌನ್‍ಲೋಡ್ ಮಾಡಿಕೊಂಡು, ಆಧಾರ್ e-ಕೆವೈಸಿ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್ NPCI (National Payment Corporation of India) ಗೆ ಸಂಪರ್ಕಿಸಿ ಆಧಾರ್ ಬ್ಯಾಂಕ್ ಸೀಡಿಂಗ್ನ ಪ್ರಸ್ತುತ ಸ್ಥಿತಿಯನ್ನು ನೀಡುತ್ತದೆ. ಡಿ.ಬಿ.ಟಿ ಮೊಬೈಲ್ ಆಪ್ ಯೋಜನೆವಾರು ವಿವಿಧ ಕಂತುಗಳಲ್ಲಿ ವರ್ಗಾಹಿಸಿದ ಪಾವತಿ ಮೊತ್ತ, ಪಾವತಿ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಯು.ಟಿ.ಆರ್ ಸಂಖ್ಯೆಯನ್ನು ಒದಗಿಸುತ್ತದೆ.

  • ‘ಕೈ’ ಗೆಲ್ಲಿಸಿದ್ದು 1 ವಿಶೇಷ ವಿಮಾನ, 1 ಮೊಬೈಲ್ ಆ್ಯಪ್! – ಮತ ಎಣಿಕೆಗೂ ಮುನ್ನವೇ ಸಿಕ್ಕಿತ್ತು ಸೋಲಿನ ಸುಳಿವು!

    ‘ಕೈ’ ಗೆಲ್ಲಿಸಿದ್ದು 1 ವಿಶೇಷ ವಿಮಾನ, 1 ಮೊಬೈಲ್ ಆ್ಯಪ್! – ಮತ ಎಣಿಕೆಗೂ ಮುನ್ನವೇ ಸಿಕ್ಕಿತ್ತು ಸೋಲಿನ ಸುಳಿವು!

    ವಿಶೇಷ ವರದಿ
    ನವದೆಹಲಿ/ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯವರು ಸಂಭ್ರಮಪಡುವುದಕ್ಕೂ ಮುನ್ನವೇ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದ್ದು 1 ವಿಶೇಷ ವಿಮಾನ, 1 ಫೋನ್ ಕಾಲ್ ರೆಕಾರ್ಡಿಂಗ್ ಆ್ಯಪ್. ಹೌದಾ, ಇದು ಹೇಗೆ ಸಾಧ್ಯ ಅಂತಾ ಪ್ರಶ್ನೆ ನಿಮ್ಮದಾದ್ರೆ ನೀವು ಈ ಸುದ್ದಿ ಓದ್ಲೇಬೇಕು.

    ಕರ್ನಾಟಕ ಚುನಾವಣೆಯ ಮತ ಎಣಿಕೆಗೂ ಮುನ್ನವೇ ಕಾಂಗ್ರೆಸ್ ಹೈಕಮಾಂಡ್ ಗೆ ಅಕ್ಷರಶಃ ಸೋಲಿನ ಸುಳಿವು ಸಿಕ್ಕಿಬಿಟ್ಟಿತ್ತು. ಹೀಗಾಗಿ ಮೇ 14ರಂದು ಬೆಳಗ್ಗೆಯೇ ಕಾಂಗ್ರೆಸ್ ಹೈಕಮಾಂಡ್ ನಾಯಕರು 100ಕ್ಕಿಂತ ಕಡಿಮೆ ಸ್ಥಾನ ಸಿಕ್ಕಿದರೆ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಬೇಕು ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಮೇ 14ರಂದು ಬೆಳಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಹಮದ್ ಪಟೇಲ್, ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಭೆ ಸೇರಿದ್ದರು. ಈ ಸಭೆಯಲ್ಲಿ ಮ್ಯಾಜಿಕ್ ನಂಬರ್ ದಾಟಲು ಸಾಧ್ಯವಾಗದಿದ್ದರೆ ಜೆಡಿಎಸ್ ಮೈತ್ರಿಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಜೆಡಿಎಸ್‍ಗೆ ಬೆಂಬಲ ನೀಡುವ ವಿಚಾರವನ್ನು ತಕ್ಷಣ ಜೆಡಿಎಸ್ ಪಕ್ಷದವರಿಗೆ ತಿಳಿಸಲಾಯಿತು.

    ಇದರ ಜೊತೆಗೆ ಎಲ್ಲಾ ಶಾಸಕರನ್ನು ರೆಸಾರ್ಟ್ ಗೆ ಕರೆದೊಯ್ಯಲು ಹಾಗೂ ಕಾಂಗ್ರೆಸ್ ಶಾಸಕರಿಗೆ ಬರುವ ಆಮಿಷದ ಕರೆಗಳನ್ನು ರೆಕಾರ್ಡ್ ಮಾಡಲು ಆ್ಯಪ್ ಡೌನ್‍ಲೋಡ್ ಮಾಡಲು ಸೂಚಿಸಿದ್ದರು. ಅಲ್ಲದೆ ಖಾಸಗಿ ಕೆಲಸದ ನಿಮಿತ್ತ ಚಂಡೀಘಡದಲ್ಲಿದ್ದ ಕಾಂಗ್ರೆಸ್ ಮುಖಂಡ ಹಾಗೂ ಕಾನೂನು ತಜ್ಞ ಅಭಿಷೇಕ್ ಮನು ಸಿಂಘ್ವಿ ಅವರನ್ನು ದೆಹಲಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗಿತ್ತು.

    ಆಯಾ ವಲಯ ಉಸ್ತುವಾರಿಗೆ ಜವಾಬ್ದಾರಿ: ಮತ ಎಣಿಕೆ ದಿನ ಕರ್ನಾಟಕದ ಎಲ್ಲಾ ವಲಯಗಳ ಉಸ್ತುವಾರಿಗಳು ಆಯಾ ವಲಯಗಳಲ್ಲಿ ಇರಬೇಕೆಂದು ಕಟ್ಟುನಿಟ್ಟಿನ ಸೂಚನೆ ಕಾಂಗ್ರೆಸ್ ಹೈಕಮಾಂಡ್ ನಿಂದ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಐಸಿಸಿಯ ಐವರು ಕಾರ್ಯದರ್ಶಿಗಳಾದ ಮಾಣಿಕ್ ಠಾಗೋರ್, ಪಿ.ಸಿ.ವಿಷ್ಣುನಾಥ್, ಮಧು ಯಾಸ್ಕಿ ಗೌಡ, ಶೈಲಜನಾಥ್ ಹಾಗೂ ಯಶೋಮತಿ ಠಾಕೂರ್ ಕರ್ನಾಟಕ ವಿವಿಧ ವಲಯಗಳಲ್ಲಿ ಠಿಕಾಣಿ ಹೂಡಿದ್ದರು. ಹೈಕಮಾಂಡ್ ನಾಯಕರಾದ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್ ಹಾಗೂ ಕೆ.ಸಿ. ವೇಣುಗೋಪಾಲ್ ಆಗಲೇ ಬೆಂಗಳೂರು ಸೇರಿಯಾಗಿತ್ತು. ಯಾವಾಗ ಬಿಜೆಪಿಗೆ ಮ್ಯಾಜಿಕ್ ನಂಬರ್ ತಲುಪುವುದು ಕಷ್ಟ ಎಂದು ಖಚಿತವಾಯಿತೋ ಈ ಐವರು ಕಾರ್ಯದರ್ಶಿಗಳಿಗೂ ಕಾಂಗ್ರೆಸ್ ನಿಂದ ಗೆದ್ದ ಎಲ್ಲಾ ಶಾಸಕರಿಗೆ ಫೋನ್ ಮಾಡಿ ತಕ್ಷಣ ಬೆಂಗಳೂರಿಗೆ ತಲುಪಲು ಸೂಚನೆ ಕೊಟ್ಟರು.

    ಕರ್ನಾಟಕದಿಂದ ಎಂ.ಬಿ.ಪಾಟೀಲ್: ಮೇ 15ರಂದು ಯಾವಾಗ ಬಿಎಸ್ ಯಡಿಯೂರಪ್ಪ ರಾಜ್ಯಪಾಲ ವಾಲಾ ಅವರನ್ನು ಭೇಟಿಯಾದರೋ ತಕ್ಷಣ ದೆಹಲಿಯಲ್ಲಿ ಕಾಂಗ್ರೆಸ್ ಸಭೆ ಶುರುವಾಯಿತು. ಕಾನೂನು ಹೋರಾಟ ನಡೆಸಬೇಕು ಎಂಬ ನಿರ್ಧಾರವನ್ನೂ ಮಾಡಿದರು. ಆದರೆ ಕಾಂಗ್ರೆಸ್‍ನ ಪ್ರಮುಖ ಮುಖಂಡ ಅಭಿಷೇಕ್ ಮನು ಸಿಂಘ್ವಿ ಮಾತ್ರ ಚಂಡೀಗಢದಲ್ಲಿದ್ದರು. ಅಹಮದ್ ಪಟೇಲ್ ಹಾಗೂ ರಣದೀಪ್ ಸುರ್ಜೇವಾಲಾ ಪದೇ ಪದೇ ಫೋನ್ ಮಾಡಿ ಸಿಂಘ್ವಿಯನ್ನು ಸಂಪರ್ಕಿಸಿದರು. ಕೋರ್ಟ್‍ಗೆ ಸಲ್ಲಿಸಬೇಕಾದ ಕರಡು ಪ್ರತಿಯನ್ನು ಫೋನ್ ಮೂಲಕವೇ ಚರ್ಚಿಸಿ ಸಿದ್ಧಪಡಿಸಲಾಯಿತು. ಈ ವೇಳೆ ಕರ್ನಾಟಕದಿಂದ ಎಂ.ಬಿ.ಪಾಟೀಲ್ ಕಾಂಗ್ರೆಸ್ ಮುಖಂಡರ ನಿರಂತರ ಸಂಪರ್ಕದಲ್ಲಿದ್ದರು.

    ಸಿಂಘ್ವಿ ಅವರು ಇನ್ನೋರ್ವ ವಕೀಲರಾದ ದೇವದತ್ತ ಕಾಮತ್ ಅವರನ್ನು ಸಂಪರ್ಕಿಸಿದರು. ತಕ್ಷಣ ದೆಹಲಿಗೆ ವಾಪಸ್ ಆಗುವಂತೆ ಸಿಂಘ್ವಿಗೆ ಸೂಚನೆ ಹೋಯಿತು. ಆದರೆ ಸಮಯ ಮಿತಿ ಮೀರಿತ್ತು. ಚಂಡೀಗಢ ಏರ್‍ಪೋರ್ಟ್ ಕ್ಲೋಸ್ ಆಗಿತ್ತು. ಹೀಗಾಗಿ ಪಿಂಜೋರ್ ಏರ್‍ಪೋರ್ಟ್‍ಗೆ ವಿಶೇಷ ವಿಮಾನ ಕಳಿಸಿದ್ದರು. ಸಂಜೆ 4.30ಕ್ಕೆ ವಿಮಾನ ಹತ್ತಿದ ಸಿಂಘ್ವಿ ಸಂಜೆ 6.30ಕ್ಕೆ ದೆಹಲಿಯಲ್ಲಿದ್ದರು. ಏರ್‍ಪೋರ್ಟ್‍ನಿಂದ ಸಿಂಘ್ವಿ ನೇರವಾಗಿ ದೆಹಲಿಯಲ್ಲಿರುವ ಕಾಂಗ್ರೆಸ್ ವಾರ್ ರೂಂಗೆ ಆಗಮಿಸಿದರು. ಅಹಮದ್ ಪಟೇಲ್, ಪಿ.ಚಿದಂಬರಂ, ಸುರ್ಜೇವಾಲಾ, ವಿವೇಕ್ ಟಂಖಾ ಹಾಗೂ ಕಪಿಲ್ ಸಿಬಲ್ ಅವರು ಸಿಂಘ್ವಿಗಾಗಿ ಕಾಯುತ್ತಾ ನಿಂತಿದ್ದರು.

    ಯಾವಾಗ ರಾಜ್ಯಪಾಲರು ಯಡಿಯೂರಪ್ಪ ಅವರನ್ನು ಪ್ರಮಾಣವಚನಕ್ಕೆ ಆಹ್ವಾನಿಸಿದ್ದಾರೆ ಎಂದು ಖಚಿತವಾಯಿತೋ ಸುದ್ದಿಗೋಷ್ಠಿ ನಡೆಸಲು ಮುಂದಾಗಿದ್ದ ತಂಡದಿಂದ ಅಭಿಷೇಕ್ ಮನು ಸಿಂಘ್ವಿ ಹಿಂದೆ ಸರಿದರು. ಅರ್ಧ ದಾರಿಯಿಂದಲೇ ವಾಪಾಸಾದ ಸಿಂಘ್ವಿ ಮತ್ತೆ ಸುಪ್ರೀಂ ಕೋರ್ಟ್‍ಗೆ ನೀಡುವ ದೂರಿನಲ್ಲಿ ಬದಲಾವಣೆ ಮಾಡಿದರು. ಬಿಜೆಪಿಯ ಆತುರವೇ ನಾವು ದೂರು ನೀಡಲು ಪ್ರಮುಖ ಕಾರಣವಾಯಿತು ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

     

    10 ಕೈ ಶಾಸಕರಿಗೆ ಓರ್ವ ನಾಯಕ: ದೆಹಲಿಯಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಎಲ್ಲಾ ಶಾಸಕರನ್ನು ಬೆಂಗಳೂರಿನ ಈಗಲ್ಟನ್ ರೆಸಾರ್ಟ್‍ಗೆ ಕರೆದೊಯ್ಯಲಾಯಿತು. ಬಿಜೆಪಿಯ ಆಮಿಷ ಹೆಚ್ಚಾಗುತ್ತಿರೋದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರನ್ನು 10 ಜನರ ತಂಡವಾಗಿ ವಿಂಗಡಿಸಲಾಯಿತು. ಈ ತಂಡಗಳಿಗೆ ಓರ್ವ ಹಿರಿಯ ರಾಜ್ಯ ನಾಯಕನ ಉಸ್ತುವಾರಿ ನೀಡಲಾಯಿತು. ನಿಷ್ಠೆ ಬದಲಿಸಬಹುದಾದ ಸಾಧ್ಯತೆಯಿರುವ ಶಾಸಕರ ಮೇಲೆ ಹೆಚ್ಚು ಕಣ್ಗಾವಲಿಟ್ಟಿರುವಂತೆ ಈ ನಾಯಕರಿಗೆ ಸೂಚನೆ ಹೋಗಿತ್ತು. ಕೆ.ಜೆ.ಜಾರ್ಜ್, ಡಿಕೆ ಸುರೇಶ್ ಕುಮಾರ್, ಅರ್.ಧ್ರುವನಾರಾಯಣ, ಎಂ.ಬಿ.ಪಾಟೀಲ್ ಆಪ್ತರಿಗೆ ಶಾಸಕರನ್ನು ನೋಡಿಕೊಳ್ಳುವ ಉಸ್ತುವಾರಿ ನೀಡಲಾಯಿತು. ಇದೇ ವೇಳೆ ಕೆಲ ಶಾಸಕರು ನಮಗೆ ಫೋನ್ ಕಾಲ್ ಮೂಲಕ ಆಮಿಷ ನೀಡುತ್ತಿದ್ದಾರೆ ಎಂದು ದೂರಿದರು. ತಕ್ಷಣ ಅವರೆಲ್ಲರಿಗೂ ಮೊಬೈಲ್ ಕಾಲ್ ರೆಕಾರ್ಡಿಂಗ್ ಆ್ಯಪ್ ಡೌನ್ ಲೋಡ್ ಮಾಡಲು ಸೂಚನೆ ನೀಡಲಾಯಿತು.

    5 ಕೋಟಿ ಜೊತೆ ವಾಹನ ನಿಂತಿದೆ, ಹೊರಗೆ ಬಾ..!: ನಮ್ಮ ಶಾಸಕರಿಗೆ ಎಲ್ಲಾ ಬಗೆಯ ಆಫರ್ ಗಳನ್ನು ನೀಡುತ್ತಿದ್ದರು. ‘5 ಕೋಟಿ ಹಣ ಇರುವ ವಾಹನ ರೆಸಾರ್ಟ್ ಹೊರಗೆ ನಿಮಗಾಗಿ ಕಾಯುತ್ತಿದೆ. ನೀವು ಹೊರಗೆ ಬನ್ನಿ’ ಎಂದು ಕಾಲ್ ಮಾಡಿ ಹೇಳುತ್ತಿದ್ದರು. ನಮ್ಮ ಬಳಿ ಬಿಜೆಪಿಯವರ ಆಮಿಷದ ಇನ್ನೂ ಸಾಕಷ್ಟು ಕಾಲ್ ರೆಕಾರ್ಡ್ ಗಳಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಯಾವಾಗ ರೆಸಾರ್ಟ್ ಗೆ ನೀಡಿದ್ದ ಪೊಲೀಸ್ ಭದ್ರತೆ ವಾಪಸ್ ತೆಗೆದರೋ ನಾವು ಕೇರಳದ ಕೊಚ್ಚಿಗೆ ಹೊರಡಲು ನಿರ್ಧರಿಸಿದ್ದೆವು. ಕೊಚ್ಚಿಯ ಫೈವ್ ಸ್ಟಾರ್ ಹೋಟೆಲನ್ನು ನಾವು ಬುಕ್ ಮಾಡಿದ್ದೆವು. ಆದರೆ ಬುಕ್ ಮಾಡಿ 2 ಗಂಟೆ ಕಳೆಯುವಷ್ಟರಲ್ಲಿ ಬಿಜೆಪಿ ನಾಯಕರ ಒತ್ತಡ ಹಿನ್ನೆಲೆಯಲ್ಲಿ ನಾವು ಬುಕಿಂಗ್ ಕ್ಯಾನ್ಸಲ್ ಮಾಡಿದ್ದೇವೆ ಎಂದು ಹೋಟೆಲ್‍ನವರು ಫೋನ್ ಮಾಡಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ನಾವು ಕೊಚ್ಚಿಯಲ್ಲೇ ಇನ್ನೊಂದು ಹೋಟೆಲ್ ಬುಕ್ ಮಾಡಿದ್ದೆವು. ಆದರೆ ವಿಶೇಷ ವಿಮಾನದ ಹಾರಾಟಕ್ಕೆ ನಮಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ನಾವು ಕೊಚ್ಚಿ ಪ್ಲ್ಯಾನ್ ಕೈಬಿಡಲಾಯಿತು. ಆದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಾತ್ರ, ವಿಶೇಷ ವಿಮಾನಕ್ಕೆ ನಮ್ಮ ಅನುಮತಿಯ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.

    ಹೀಗಾಗಿ ನಾವು ರಸ್ತೆ ಮಾರ್ಗದಲ್ಲೇ ಹೈದರಾಬಾದ್ ಗೆ ತೆರಳಲು ನಿರ್ಧರಿಸಿದ್ದೆವು. ಕರ್ನಾಟಕದ ಗಡಿ ದಾಟುತ್ತಿದ್ದಂತೆಯೇ ಶಾಸಕರ ಬಸ್‍ಗೆ ಬೆಂಗಾವಲು ನೀಡಲು ತೆಲಂಗಾಣ ಪೊಲೀಸರು ಸಜ್ಜಾಗಿ ನಿಂತಿದ್ದರು. ಇದು ಕಾಂಗ್ರೆಸ್ ನಾಯಕರ ಅಚ್ಚರಿಗೆ ಕಾರಣವಾಗಿತ್ತು. ತೆಲಂಗಾಣದಲ್ಲಿ ಅಲ್ಲಿನ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ಉತ್ತಮ ಕುಮಾರ್ ರೆಡ್ಡಿ ಹಾಗೂ ಮಾಜಿ ಸಂಸದ ಟಿ.ಸುಬ್ಬರಾಮಿ ರೆಡ್ಡಿ ಎಲ್ಲಾ ವ್ಯವಸ್ಥೆ ಮಾಡಿದ್ದರು. ರಾಣೆಬೆನ್ನೂರಿನ ಪಕ್ಷೇತರ ಸದಸ್ಯ ಆರ್.ಶಂಕರ್ ನಮ್ಮನ್ನು ಬಿಟ್ಟು ಹೋಗಿದ್ದರು. ಆದರೆ ಸಿದ್ದರಾಮಯ್ಯ ಅವರು ಶಂಕರ್ ಗೆ ಕಾಲ್ ಮಾಡಿ, ನನ್ನ ಮೇಲೆ ಗೌರವವಿದ್ದರೆ ವಾಪಸ್ ಬಾ ಎಂದು ಕರೆದ್ರು. ತಕ್ಷಣ ಶಂಕರ್ ವಾಪಸ್ ಬಂದ್ರು ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

    ಹೀಗೆ ಕಾಂಗ್ರೆಸ್ ಕೈತಪ್ಪಿ ಹೋಗ್ತಾರೆ ಎಂದು ಅಂದುಕೊಂಡಿದ್ದವರೆಲ್ಲಾ ಕಾಂಗ್ರೆಸ್ ನಲ್ಲೇ ಉಳಿದುಕೊಂಡರು. ಚುನಾವಣೆಯಲ್ಲಿ ಸೋತರೂ ಮೈತ್ರಿ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ತನ್ನ ಅಧಿಕಾರ ಉಳಿಸಿಕೊಂಡಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಮತ್ತೆ ಓಪನ್ ಆಗಿದ್ದ ಹೆಬ್ಬಾಗಿಲನ್ನು ಕಾಂಗ್ರೆಸ್ ಸದ್ಯಕ್ಕೆ ಬಂದ್ ಮಾಡಿದೆ.