Tag: MM kalaburgi

  • ನಾವು ತಪ್ಪು ಮಾಡಿಲ್ಲ, ನ್ಯಾಯ ಕೊಡಿಸಿ- ಕಲಬುರ್ಗಿ ಹತ್ಯೆ ಆರೋಪಿಗಳ ಕೂಗು

    ನಾವು ತಪ್ಪು ಮಾಡಿಲ್ಲ, ನ್ಯಾಯ ಕೊಡಿಸಿ- ಕಲಬುರ್ಗಿ ಹತ್ಯೆ ಆರೋಪಿಗಳ ಕೂಗು

    ಧಾರವಾಡ: ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ವಿಚಾರಣೆಗೆ ಆಗಮಿಸಿದ್ದ ಆರೋಪಿಗಳು ಕೋರ್ಟ್ ಆವರಣದಲ್ಲಿ ನಾವು ತಪ್ಪು ಮಾಡಿಲ್ಲ, ನಮಗೆ ನ್ಯಾಯ ಕೊಡಿಸಿ ಎಂದು ಕೂಗಿದ್ದಾರೆ.

    ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ. ಬೆಳಗಾವಿ, ಧಾರವಾಡ ಮತ್ತು ಮುಂಬೈನಲ್ಲಿದ್ದ ಐವರು ಆರೋಪಿಗಳನ್ನು ಇಂದು 3ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

    ಅಮೋಲ್ ಕಾಳೆ ಹೊರತುಪಡಿಸಿ ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್, ಪ್ರವೀಣ್ ಚತುರ, ವಾಸುದೇವ ಸೂರ್ಯವಂಶಿ ಹಾಗೂ ಶರದ್ ಬಾಹು ಸಾಹೇಬರನ್ನು ಪೊಲೀಸರು ವಿಚಾರಣೆಗೆ ಹಾಜರುಪಡಿಸಿದ್ದರು. ಆದರೆ ಪ್ರಮುಖ ಆರೋಪಿ ಅಮೋಲ್ ಕಾಳೆಯನ್ನು ಅನಾರೋಗ್ಯದ ಹಿನ್ನೆಲೆ ಮೈಸೂರು ಕಾರಾಗೃಹದಿಂದ ಕರೆ ತಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲ ಆರೋಪಿಗಳನ್ನು ಅಕ್ಟೋಬರ್ 24ರಂದು ಹಾಜರುಪಡಿಸಲೇಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ ನ್ಯಾಯಾಧೀಶರು, ವಿಚಾರಣೆಯನ್ನು ಮುಂದೂಡಿದರು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಶಂಕಿತ ಹಂತಕರಿಂದ ಸ್ಫೋಟಕ ಮಾಹಿತಿ-ಮಾಧ್ಯಮಗಳ ಜೊತೆ ಮಾತನಾಡಿದ ಪರಶುರಾಮ್ ವಾಗ್ಮೋರೆ ಮತ್ತು ಮನೋಹರ್ ಯಡವೆ

    ಬೆಳಗ್ಗೆ ನ್ಯಾಯಾಲಯ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ನಾವು ಏನೂ ಮಾಡಿಲ್ಲ. ನಾವು ಅಮಾಯಕರಿದ್ದೇವೆ. ನಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ, ನಮಗೆ ನ್ಯಾಯ ಕೊಡಿಸಿ ಎಂದು ಗೊಣಗುತ್ತಲೇ ಒಳಪ್ರವೇಶಿಸಿದ್ದರು.

    ಅಲ್ಲದೆ ಸಂಜೆ ಕೋರ್ಟ್ ನಿಂದ ತೆರಳುತ್ತಿದ್ದಾಗಲೂ ಅಮಿತ್ ಬದ್ದಿ ಹಾಗೂ ಇತರರು, ನಾವು ಅಮಾಯಕರಿದ್ದೇವೆ. ನಾವು ಏನೂ ಮಾಡಿಯೇ ಇಲ್ಲ. ಎಲ್ಲರೂ ನಮ್ಮನ್ನು ಈ ಪ್ರಕರಣದಲ್ಲಿ ಸಿಲಕಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ನ್ಯಾಯ ಬೇಕು, ನ್ಯಾಯ ಕೊಡಿಸಿ ಎಂದು ಕೂಗಾಡುತ್ತಲೇ ಪೊಲೀಸ್ ವಾಹನ ಏರಿದರು.

    https://youtu.be/oKmyWQuoB5M

  • ಪತಿಗೆ ಗುಂಡಿಕ್ಕಿದ ಆರೋಪಿಯನ್ನು ಗುರುತಿಸಿದ ಎಂ.ಎಂ ಕಲಬುರ್ಗಿ ಪತ್ನಿ

    ಪತಿಗೆ ಗುಂಡಿಕ್ಕಿದ ಆರೋಪಿಯನ್ನು ಗುರುತಿಸಿದ ಎಂ.ಎಂ ಕಲಬುರ್ಗಿ ಪತ್ನಿ

    ಧಾರವಾಡ: ಸಾಹಿತಿ ಮತ್ತು ವಿಚಾರವಾದಿ ಎಂ.ಎಂ ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಯನ್ನು ಕಲಬುರ್ಗಿ ಅವರ ಧರ್ಮಪತ್ನಿ ಉಮಾದೇವಿ ಗುರುತಿಸಿದ್ದಾರೆ.

    ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಗುಂಡು ಹಾರಿಸಿದ ವ್ಯಕ್ತಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಎಂದು ಸಾಬೀತು ಆಗಿದೆ. ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ನಡೆದ ಗುರುತು ಪತ್ತೆ ಕಾರ್ಯದಲ್ಲಿ ಉಮಾದೇವಿ ಅವರು ಆರೋಪಿ ಗಣೇಶ್ ಮಿಸ್ಕಿನ್‍ನನ್ನು ಗುರುತಿಸಿದ್ದಾರೆ.

    ಧಾರವಾಡ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಗುರುತುಪತ್ತೆ ಕಾರ್ಯದಲ್ಲಿ, ಎಸ್‍ಐಟಿ ಅಧಿಕಾರಿಗಳು ಗಣೇಶ್ ಮಿಸ್ಕಿನ್ ಸೇರಿದಂತೆ ಹತ್ತು ಜನರನ್ನು ನಿಲ್ಲಿಸಿ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ. ಮೂರು ಸುತ್ತಿನಲ್ಲಿ ನಡೆದ ಈ ಗುರುತು ಪತ್ತೆಯಲ್ಲಿ ಮೂರು ಬಾರಿಯೂ ಮಿಸ್ಕಿನ್‍ನನ್ನೇ ಉಮಾದೇವಿ ಅವರು ಗುರುತಿಸಿದ್ದಾರೆ.

    2015ರ ಅಗಸ್ಟ್ 30ರಂದು ಎಂ.ಎಂ ಕಲಬುರ್ಗಿ ನಿವಾಸಕ್ಕೆ ಬೈಕ್‍ನಲ್ಲಿ ಬಂದ ಆರೋಪಿಗಳು ಗುಂಡಿಕ್ಕಿ ಕಲಬುರ್ಗಿಯವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. 4 ವರ್ಷಗಳ ಸುದೀರ್ಘ ತನಿಖೆ ಬಳಿಕ ಇದೀಗ ಪ್ರಕರಣ ಕೊನೆ ಹಂತ ತಲುಪಿದೆ.

  • ಒಂದೇ ಒಂದು ಪಿಸ್ತೂಲಿನಿಂದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆ!

    ಒಂದೇ ಒಂದು ಪಿಸ್ತೂಲಿನಿಂದ ದಾಬೋಲ್ಕರ್, ಕಲ್ಬುರ್ಗಿ, ಗೌರಿ ಹತ್ಯೆ!

    – ಎಸ್‍ಐಟಿ ಅಧಿಕಾರಿಗಳಿಗೆ ಸಿಕ್ಕಿದೆ ಸ್ಫೋಟಕ ಮಾಹಿತಿ
    – ಹತ್ಯೆಗೆ ಕಲ್ಬುರ್ಗಿ ಹೇಳಿಕೆ ಕಾರಣ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಪ್ರಗತಿ ಪರರಾದ ನರೇಂದ್ರ ದಾಬೋಲ್ಕರ್, ಎಂ.ಎಂ. ಕಲ್ಬುರ್ಗಿ ಹಾಗು ಪತ್ರಕರ್ತೆ ಗೌರಿ ಲಂಕೇಶ್ ಮೂವರ ಹತ್ಯೆಯನ್ನು ಒಂದೇ ಪಿಸ್ತೂಲ್ ನಿಂದ ಮಾಡಲಾಗಿದೆ ಎಂಬ ರೋಚಕ ಮಾಹಿತಿ ಈಗ ಬೆಳಕಿಗೆ ಬಂದಿದೆ.

    ಮೂವರು ಪ್ರಗತಿಪರರನ್ನು ಒಂದೇ ಪಿಸ್ತೂಲ್ ನಿಂದ ಹತ್ಯೆ ಮಾಡಿದರೆ ಗೋವಿಂದ್ ಪನ್ಸಾರೆ ಹತ್ಯೆಗೆ ಬೇರೆ ಪಿಸ್ತೂಲ್ ಬಳಸಲಾಗಿದೆ ಎನ್ನುವ ಮಾಹಿತಿ ಎಸ್‍ಐಟಿ ಮೂಲಗಳಿಂದ ತಿಳಿದು ಬಂದಿದೆ. ಗೌರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಬೈಕ್ ರೈಡರ್ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ವಿಚಾರಣೆ ವೇಳೆ ತಿಳಿಸಿದ ಮಾಹಿತಿಯಿಂದ ಕಲ್ಬುರ್ಗಿ ಹತ್ಯೆಯ ಮಾಹಿತಿ ಈಗ ಬೆಳಕಿಗೆ ಬಂದಿದೆ.

    ಕಲ್ಬುರ್ಗಿ ಹಂತಕ ಯಾರು?: ಸಾಹಿತಿ ಹಾಗು ಪ್ರಗತಿಪರ ಚಿಂತಕರಾದ ಧಾರವಾಡದ ಎಂ.ಎಂ.ಕಲ್ಬುರ್ಗಿ ಅವರಿಗೆ ಗುಂಡಿಟ್ಟಿದ್ದು ಅಮೋಲ್ ಕಾಳೆ ಎನ್ನಲಾಗಿದೆ. ಅಮೋಲ್ ಕಾಳೆ ಮಹಾರಾಷ್ಟ್ರ ಮತ್ತು ಕರ್ನಾಟಕ ಆಪರೇಷನ್ ಗಳಿಗೆ ಮುಖ್ಯಸ್ಥನಾಗಿದ್ದು ಕಲ್ಬುರ್ಗಿ ಅವರ ವಿವಾದಾತ್ಮಕ ಹೇಳಿಕೆಯೇ ಕೊಲೆಗೆ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಕಲ್ಬುರ್ಗಿ ಅವರ ಮನೆ ಬಾಗಿಲು ತಟ್ಟಿದ ಅಮೋಲ್ ಕಾಳೆ, ಅವರು ಹೊರ ಬಂದ ಕೂಡಲೇ ಗುಂಡು ಹಾರಿಸಿದ್ದನು. ನಂತರ ಅಲ್ಲಿಂದ ಬೈಕ್ ಮುಖಾಂತರ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

    ಕಲ್ಬುರ್ಗಿ ಅವರನ್ನು ಕೊಲ್ಲಲು ಕಾಕಾ ಅಲಿಯಾಸ್ ಶಂಕರ್ ನಾರಾಯಣ್ ಎಂಬಾತನೇ ಹೇಳಿದ್ದನಂತೆ. ಕಾಕಾನ ಆಜ್ಞೆಯಂತೆಯೇ ಅಮೋಲ್ ಕಾಳೆ ಕೊಲೆ ಮಾಡಿದ್ದನು. ಕಾಕಾ ಆರು ತಿಂಗಳ ಹಿಂದೆಯೇ ಸಾವನ್ನಪ್ಪಿದ್ದು, ಆತನ ಬಲಗೈ ಬಂಟನೇ ಗೌರಿ ಹತ್ಯೆಗೆ ಸಂಚು ರೂಪಿಸಿದ್ದನಂತೆ. ಕಾಕಾನ ಬಲಗೈ ಬಂಟ ಮಹಾರಾಷ್ಟ್ರದ ಸಂಘಟನೆಯೊಂದು ಕಟ್ಟಾಳು ಎಂಬ ವಿಚಾರ ತಿಳಿದು ಬಂದಿದೆ. ಅರೋಪಿಗಳ ಬಳಿ ಒಟ್ಟು 12 ಪಿಸ್ತೂಲ್ ಗಳಿದ್ದು, ಒಂದನ್ನು ಕೊಲೆಗಾಗಿ ತೆಗೆದಿರಿಸಿದ್ದರು. ಗುರುವಾರ ವಶಕ್ಕೆ ಪಡೆದಿರುವ ಪಿಸ್ತೂಲ್ ನ್ನು ಗುಜರಾತ್ ನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಈಗ ಕಳುಹಿಸಲಾಗಿದೆ.

    ಹತ್ಯೆಗೆ ಕಲ್ಬುರ್ಗಿ ಹೇಳಿಕೆ ಕಾರಣ:
    `ದೇವರ ವಿಗ್ರಹದ ಮೂತ್ರ ವಿಸರ್ಜನೆ ಮಾಡಿದರೂ ನನಗೇನೂ ಆಗಲಿಲ್ಲ’ ಎಂದು ಕಲ್ಬುರ್ಗಿಯವರು ಈ ಹಿಂದೆ ಹೇಳಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಬಲಪಂಥೀಯ ವಿಚಾರಗಳನ್ನು ಖಂಡಿಸಿ ಭಾಷಣ ಮಾಡುತ್ತಿದ್ದರು. ಹಿಂದೂ ಧರ್ಮದ ವಿರುದ್ಧ ಭಾಷಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನಾವು ಅವರ ಕೊಲೆ ಮಾಡಿದ್ದೆವು ಎಂದು ಗಣೇಶ್ ಮಿಸ್ಕಿನ್ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv