Tag: MM Hills

  • ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ ಕೇಸ್: ಹಸು ಮಾಲೀಕನ ಬಂಧನ – ಸ್ಥಳಕ್ಕೆ PCCF ಭೇಟಿ

    ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ ಕೇಸ್: ಹಸು ಮಾಲೀಕನ ಬಂಧನ – ಸ್ಥಳಕ್ಕೆ PCCF ಭೇಟಿ

    ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಸುವಿನ ಮಾಲೀಕ ಚಂದು ಸೇರಿ ಅಭಿಷೇಕ ಎಂಬಾತನ ಬಂಧನವಾಗಿದೆ.

    ಈ ಹಿನ್ನೆಲೆ ಹನೂರಿಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಆಗಮಿಸಿದ್ದರು. ತನಿಖಾ ವರದಿ ಕೊಡಲೂ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತನಿಖಾ ತಂಡವನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇಮಿಸಿದ್ದರು. ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?

    ತನಿಖಾಧಿಕಾರಿ ಮುಂದೆ ಆರೋಪಿಗಳ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಕೂಡ 30 ವರ್ಷಕ್ಕಿಂತ ವಯಸ್ಸು ಕಮ್ಮಿಯಿದೆ. ಇಂತಹ ಪ್ರಕರಣದಲ್ಲಿ ಭಾಗಿಯಾಗದಂತೆ ನೀವೆಲ್ಲ ಸೇರಿ ಬುದ್ದಿ ಹೇಳಬೇಕಿತ್ತು. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಆರೋಪಿಗಳ ಕುಟುಂಬಸ್ಥರು ಕೈ ಮುಗಿದು ಮನವಿ ಮಾಡಿಕೊಂಡರು.

    ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ಭೇಟಿ ಕೊಟ್ಟಿದ್ದ ವೇಳೆ ಮಾತನಾಡಿದ್ದಾರೆ. ಇದನ್ನೂ ಓದಿ: ಹಸು ಬೇಟೆಯಾಡಿದ್ದಕ್ಕೆ ಸೇಡು – ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಕೊಂದಿದ್ದ ನಾಲ್ವರು ಅರೆಸ್ಟ್‌

  • ಮಲೆ ಮಹದೇಶ್ವರ ವನ್ಯಧಾಮ ಹುಲಿ ಹತ್ಯೆ ಕೇಸ್: ಮತ್ತೊಬ್ಬ ಆರೋಪಿ ಬಂಧನ

    ಮಲೆ ಮಹದೇಶ್ವರ ವನ್ಯಧಾಮ ಹುಲಿ ಹತ್ಯೆ ಕೇಸ್: ಮತ್ತೊಬ್ಬ ಆರೋಪಿ ಬಂಧನ

    ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಪಚ್ಚೆದೊಡ್ಡಿಯಲ್ಲಿ ಹುಲಿ‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಆತನ ಕುಟುಂಬಸ್ಥರೇ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.

    ಪಚ್ಚೆದೊಡ್ಡಿ ಹುಲಿ ಹತ್ತೆ ಪ್ರಕರಣದ ಸಂಬಂಧ ಅರಣ್ಯಾಧಿಕಾರಿಗಳು ಈಗಾಗಲೇ ಪಚ್ಚಮಲ್ಲು, ಗಣೇಶ, ಸಂಪು ಮೂವರನ್ನು ಬಂಧಿಸಿ ನ್ಯಾಯಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದು ಉಳಿದ ನಾಲ್ವರ ಪತ್ತೆಗೆ ಬಲೆ ಬೀಸಿದ್ದರು.

    ಈ ನಡುವೆ ಸಿದ್ದು ಕುಟುಂಬಸ್ಥರೇ ಆತನನ್ನು ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದರು. ಅಧಿಕಾರಿಗಳು ವಶಕ್ಕೆ ಪಡೆದು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದ ಮೂವರ ಬಂಧನಕ್ಕೂ ಬಲೆ ಬೀಸಿದ್ದಾರೆ.

  • ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ – ಇಬ್ಬರು ಶಂಕಿತರು ವಶಕ್ಕೆ

    ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿ ಹತ್ಯೆ – ಇಬ್ಬರು ಶಂಕಿತರು ವಶಕ್ಕೆ

    – ʻಮಲೆ ಮಹದೇಶ್ವರ ಹುಲಿ ಸಂರಕ್ಷಿತ ಪ್ರದೇಶʼ ಪ್ರಸ್ತಾವನೆ ಮುನ್ನೆಲೆಗೆ
    – ಸ್ಥಳೀಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಈಶ್ವರ ಖಂಡ್ರೆ ಸೂಚನೆ

    ಬೆಂಗಳೂರು/ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (Malai Mahadeshwara Wildlife Sanctuary) ಮತ್ತೊಂದು ಹುಲಿ ಹತ್ಯೆ ಆಗಿರುವ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಸ್ಥಳೀಯರೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ತಿಳಿಸಿದರು.

    ರಾಜ್ಯದ ಎಲ್ಲ ಹುಲಿ ಸಂರಕ್ಷಿತ ಪ್ರದೇಶ (Tiger Reserve Forest) ಹಾಗೂ ಮೈಸೂರು ವಿಭಾಗದ ಅರಣ್ಯಾಧಿಕಾರಿಗಳೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ ಸಚಿವರು, ಈಗಾಗಲೇ ವನ್ಯಜೀವಿ ಮಂಡಳಿ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ತಿಳಿಸಿದರು.

    ಅರಣ್ಯ ಪ್ರದೇಶದೊಳಗೆ ಇರುವ ಹಾಡಿಗಳಲ್ಲಿರುವ ದನಕರುಗಳೆಷ್ಟು? ಈ ಹಾಡಿಗಳಲ್ಲಿ ಎಷ್ಟು ಜನರಿದ್ದಾರೆ? ಎಂಬ ಬಗ್ಗೆ ಸಂಪೂರ್ಣ ದತ್ತಾಂಶ ಕಲೆ ಹಾಕಿ ದಾಖಲಿಸಲು ಮತ್ತು ಒಂದೊಮ್ಮೆ ಹಾಡಿಯಲ್ಲಿರುವ ದನಕರುಗಳು ವನ್ಯಜೀವಿಯಿಂದ ಮೃತಪಟ್ಟರೆ (Wild Animal Death) ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚಿಸಿದರು.

    ಜಾಗೃತಿ ಮೂಡಿಸಿ:
    ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮದ ಅಂಚಿನ ಗ್ರಾಮಗಳಲ್ಲಿ ಮತ್ತು ಅರಣ್ಯದ ಹಾಡಿಯ ಬಳಿ ವನ್ಯಜೀವಿಗಳಿಗೆ ವಿಷ ಹಾಕುತ್ತಿರುವ ಘಟನೆಗಳು ಮತ್ತು ಕಳ್ಳಬೇಟೆ ಪ್ರಕರಣಗಳು ವರದಿಯಾಗುತ್ತಿದ್ದು, ಅರಣ್ಯವಾಸಿಗಳು ಮತ್ತು ಕಾಡಿನಂಚಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುವಂತೆ ಹಾಗೂ ವನ್ಯಜೀವಿಗಳಿಂದ ಬೆಳೆ ಹಾನಿ ಆಗಿದ್ದಲ್ಲಿ ಪರಿಶೀಲಿಸಿ, ಪರಿಹಾರ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಶಂಕಿತರಿಬ್ಬರು ವಶಕ್ಕೆ:
    ಹುಲಿಯನ್ನು ಮೂರು ಭಾಗವಾಗಿ ಕತ್ತರಿಸಿ ಹತ್ಯೆ ಮಾಡಿರುವ ಪ್ರಕರಣದ ಇಬ್ಬರು ಶಂಕಿತರನ್ನ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆದಿದ್ದು, ಶೀಘ್ರವೇ ಹುಲಿ ಹತ್ಯೆಗೆ ನೈಜ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

    ಮಲೆ ಮಹದೇಶ್ವರ ಅರಣ್ಯ ಭಾಗದಲ್ಲಿ ಗಸ್ತು ಹೆಚ್ಚಿಸಲು ಸೂಚಿಸಿದ ಸಚಿವರು, ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ ಕ್ರಮಕ್ಕೆ ಶಿಫಾರಸು ಮಾಡುವಂತೆ ಹಾಗೂ 5 ಹುಲಿ ಹಾಗೂ ಮೊನ್ನೆ ನಡೆದಿರುವ ಹುಲಿ ಹತ್ಯೆಯ ಆರೋಪಿಗಳಿಗೆ ಶೀಘ್ರ ಶಿಕ್ಷೆ ಕೊಡಿಸಲು ಕ್ರಮಕೈಗೊಂಡು ಸ್ಪಷ್ಟ ಸಂದೇಶ ರವಾನಿಸಲು ಸೂಚಿಸಿದರು.

    ಮೂಲಸೌಕರ್ಯ ಒದಗಿಸಲು ಸೂಚನೆ:
    ಹೊರಗುತ್ತಿಗೆಯ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿ ಆಗುತ್ತಿದೆಯೇ ಇಲ್ಲವೇ, ಇವರು ಸರಿಯಾಗಿ ಗಸ್ತು ನಡೆಸುತ್ತಿದ್ದಾರೋ ಇಲ್ಲವೋ, ಎಂಸ್ಟ್ರೈಪ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಚಿವರು ಸೂಚಿಸಿದರು.

    ಸಿಬ್ಬಂದಿ ಗಸ್ತು ತಿರುಗುತ್ತಿರುವ ಕುರಿತಂತೆ ಜಿಪಿಎಸ್ ಸಹಿತ ಫೋಟೋ ತೆಗೆಯಲು ಸೂಚಿಸಿ, ಅದನ್ನು ಹಿರಿಯ ಅಧಿಕಾರಿಗಳು ಆಗಾಗ್ಗೆ ಪರಾಮರ್ಶಿಸಬೇಕು, ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದೂ ಈಶ್ವರ ಖಂಡ್ರೆ ತಿಳಿಸಿದರು. ಕಳ್ಳಬೇಟೆ ನಿಗ್ರಹ ಶಿಬಿರಗಳಲ್ಲಿರುವ ಸಿಬ್ಬಂದಿಗೆ ಬೂಟು, ಜಾಕೆಟ್, ಕುಡಿಯುವ ನೀರು, ಆಹಾರ ಧಾನ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲೂ ಸಚಿವರು ಸೂಚನೆ ನೀಡಿದರು.

    ಚನ್ನಪಟ್ಟಣ ಆನೆ ಸಾವಿನ ಬಗ್ಗೆ ಪರಾಮರ್ಶೆ:
    ಚನ್ನಪಟ್ಟಣದ ಗೊಲ್ಲರದೊಡ್ಡಿಯ ಬಳಿ ಇಂದು ತೆಂಗಿನಮರದ ಹೊಂಬಾಳೆ ತಿನ್ನಲು ಯತ್ನಿಸಿದ ಆನೆಯೊಂದು ಪಕ್ಕದಲ್ಲಿದ್ದ ವಿದ್ಯುತ್ ಕಂಬದ ತಂತಿ ಸ್ಪರ್ಶದಿಂದ ಮೃತಪಟ್ಟಿರುವ ಕುರಿತಂತೆಯೂ ಸಭೆಯಲ್ಲಿ ಪರಾಮರ್ಶಿಸಲಾಯಿತು. ಪ್ರತಿವರ್ಷ ಸರಾಸರಿ ವಿದ್ಯುತ್ ಸ್ಪರ್ಶದಿಂದ 14 ಆನೆಗಳು ಮೃತಪಡುತ್ತಿವೆ. ಆದ್ರೆ ಈ ವರ್ಷ 7 ಆನೆಗಳು ಮಾತ್ರ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ. ರೈತರಿಗೆ, ತೋಟದ ಮಾಲೀಕರಿಗೆ ಬೇಲಿಯ ತಂತಿಗೆ ಅಕ್ರಮವಾಗಿ ವಿದ್ಯುತ್ ಹರಿಸದಂತೆ ಮನವಿ ಮಾಡಲಾಗಿದೆ. ತಪಾಸಣೆ ನಡೆಲಾಗುತ್ತಿದೆ ಎಂದೂ ಸಭೆಗೆ ಅಧಿಕಾರಿಗಳು ತಿಳಿಸಿದರು.

    ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗದಂತೆ ಹಾಗೂ ಅರಣ್ಯ ಪ್ರದೇಶದಲ್ಲಿ ಅಥವಾ ಅರಣ್ಯದಂಚಿನಲ್ಲಿ ತೂಗಾಡುತ್ತಿರುವ ಅಥವಾ ಜೋತು ಬಿದ್ದಿರುವ ವಿದ್ಯುತ್ ತಂತಿಯ ದುರಸ್ತಿ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪತ್ರ ಬರೆದು ಕ್ರಮ ವಹಿಸಲು ಸೂಚಿಸುವಂತೆ ತಿಳಿಸಿದರು.

    ಸಭೆಯಲ್ಲಿ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಪಿ.ಸಿ. ರೇ ಮತ್ತಿತರರು ಪಾಲ್ಗೊಂಡಿದ್ದರು.

  • ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?

    ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿ ಹತ್ಯೆ – ದೈತ್ಯ ಹುಲಿ ಕೊಂದಿದ್ದು ಪ್ರತೀಕಾರಕ್ಕಾ?

    – ಪಿಸಿಸಿಎಫ್ ನೇತೃತ್ವದ ತಂಡದಿಂದ ತೀವ್ರ ಪರಿಶೀಲನೆ

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ (Malai Mahadeshwara Wildlife Sanctuary) 12 ಅಡಿ ಉದ್ದ 12 ವರ್ಷ ಪ್ರಾಯದ 250 ಕೆಜಿಗೂ ಅಧಿಕ ತೂಕದ ಹುಲಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಅಲ್ಲದೇ ಪಿಸಿಸಿಎಫ್ (PCCF) ನೇತೃತ್ವದ ತಂಡ ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಘಟನೆಯ ಬಗ್ಗೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು,ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಆದ್ರೆ ಈ ಹುಲಿ ಹತ್ಯೆಯೂ ಕೂಡ ಪ್ರತೀಕಾರಕ್ಕೆ ನಡೆದಿದೆ ಅನ್ನೋ ವಾದ ಪರಿಸರವಾದಿಗಳಾಗಿದ್ದಾಗಿದೆ.

    mm hills sanctuary tiger death

    ಮಲೆ ಮಹದೇಶ್ವರ ವನ್ಯಧಾಮದ ಹನೂರು (Hanuru) ತಾಲೂಕಿನ ಪಚ್ಚೆದೊಡ್ಡಿ ಗಸ್ತಿನಲ್ಲಿ ದೈತ್ಯ ಹುಲಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಈ ಹುಲಿಯ ಹತ್ಯೆ ನಡೆದಿರುವುದೇ ಪ್ರತೀಕಾರಕ್ಕೆ ಎಂಬ ಆತಂಕಕಾರಿ ವಿಚಾರ ಗೊತ್ತಾಗ್ತಿದೆ. ಸತ್ತ ಹುಲಿಯನ್ನು ಹೊತ್ತೊಯ್ಯಲು ಸಾಧ್ಯವಾಗದ ಕಾರಣ ಮೂರು ಭಾಗಗಳಾಗಿ ತುಂಡರಿಸಿ ಸಾಗಿಸುವ ಯತ್ನ ಮಾಡಿದ್ದಾರೆ. ಆದ್ರೆ ಹುಲಿಯ ತೂಕ ಹೆಚ್ಚಿದ ಕಾರಣ ಹೊತ್ತೊಯ್ಯಲು ಸಾಧ್ಯವಾಗಿಲ್ಲ. ಎರಡು ಭಾಗಗಳನ್ನು ಒಂದು ಪೊಟರೆಯಲ್ಲಿಟ್ಟು ಅದರ ಮೇಲೆ ಎಲೆಗಳನ್ನು ಮುಚ್ಚಿದ್ದರು. ಮತ್ತೊಂದು ಭಾಗವನ್ನು ಅರ್ಧ ಮಣ್ಣಿನಲ್ಲಿ ಮುಚ್ಚಿದ್ದರು. ಈ ಹುಲಿಯ ಹತ್ಯೆಯ (Tiger Death) ಬಗ್ಗೆ ಯಾರಿಗೂ ಗೊತ್ತಾಗಬಾರದೆಂದು ದುರುಳರು ಸಖತ್ ಪ್ಲ್ಯಾನ್ ಮಾಡಿದ್ದರು.

    ಮರಣೋತ್ತರ ಪರೀಕ್ಷೆ ನಡೆಸಿದರು ಕೂಡ ಹುಲಿಯ ಸಾವಿಗೆ ನಿಖರ ಕಾರಣ ಗೊತ್ತಾಗಬಾರದೆಂದು ಹುಲಿಯ ಕರುಳು ಹಾಗೂ ಲಿವರ್ ಎರಡನ್ನೂ ಕೂಡ ಬೇರೆಡೆ ತೆಗೆದುಕೊಂಡು ಹೋಗಿ ಬಿಸಾಕಿ ಸಾಕ್ಷ್ಯ ನಾಶಕ್ಕೂ ಕೂಡ ಮುಂದಾಗಿದ್ದಾರೆಂಬ ಆತಂಕಕಾರಿ ಸತ್ಯ ಹೊರ ಬಿದ್ದಿದೆ. ಇದನ್ನೂ ಓದಿ: ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಆ ಹುಲಿಯ ಹತ್ಯೆ ಎಷ್ಟು ಭೀಕರವಾಗಿತ್ತು ಅನ್ನೊದಕ್ಕೆ ಒಂದಷ್ಟು ವಿಡಿಯೋಗಳು ಕೂಡ ಸಾಕ್ಷಿಯಾಗಿದೆ. ಹುಲಿಯ ದೇಹವನ್ನು ಒಂದು ಮರದ ತುಂಡಿನ ಮೇಲೆ ಇರಿಸಿ ಕೊಡಲಿಯಿಂದ ಕತ್ತರಿಸಿದ್ದಾರೆ. ಅಲ್ಲದೇ ಹುಲಿಯ ಕರುಳು ಹಾಗೂ ಲೀವರ್ ಅನ್ನೂ ಕೂಡ ಬೇರೆಡೆ ಬಿಸಾಡಿದ್ದಾರೆ. ಹಂತಕರ ಕೈಗೆ ಅಂಟಿದ್ದ ರಕ್ತವನ್ನು ಪಕ್ಕದಲ್ಲಿ ಹರಿಯುವ ನೀರಿನಲ್ಲಿ ತೊಳೆದಿದ್ದಾರೆ. ಸಂಪೂರ್ಣ ಪ್ಲ್ಯಾನ್ ಮಾಡೇ ಈ ದೈತ್ಯ ಹುಲಿಯ ಹತ್ಯೆಗೆ ಸಂಚು ಮಾಡಿದ್ದಾರೆಂಬುದು ಈ ದೃಶ್ಯಗಳಿಂದ ಗೊತ್ತಾಗ್ತಿದೆ.

    ಅರಣ್ಯ ಸಚಿವರ ಆದೇಶದ ಹಿನ್ನೆಲೆ ಹುಲಿ ಹತ್ಯೆ ನಡೆದ ಸ್ಥಳಕ್ಕೆ ಪಿಸಿಸಿಎಫ್ ನೇತೃತ್ವದಲ್ಲಿ ತಂಡ ಭೇಟಿ ಕೊಟ್ಟು ತನಿಖೆಗೆ ಮುಂದಾಗಿದೆ. ಗಸ್ತಿನ ಸಿಬ್ಬಂದಿ ಹಾಗೂ ಅರಣ್ಯಾಧಿಗಳಿಂದ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಸ್ಥಳೀಯವಾಗಿಯೂ ಕೂಡ ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ಕೊಟ್ಟು ಕೆಲವರಿಂದ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದಾರೆ.

    ಒಟ್ನಲ್ಲಿ ಈ ಹುಲಿ ಹತ್ಯೆಯ ಹಿಂದೆ ಅಕ್ಕಪಕ್ಕದ ಗ್ರಾಮಸ್ಥರೇ ಇದ್ದಾರೆಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಕೃತ್ಯದಲ್ಲಿ ಇಬ್ಬರು ಅಥವಾ ಮೂವರು ಭಾಗಿಯಾಗಿರುವ ಶಂಕೆ ಕೂಡ ಇದೆ. ಶಂಕಿತ ಆರೋಪಿಗಳು ತಲೆ ಮರೆಸಿಕೊಂಡಿದ್ದು. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ

  • ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ

    ಎಂಎಂ ಹಿಲ್ಸ್‌ನಲ್ಲಿ ಮತ್ತೊಂದು ಹುಲಿ ಹತ್ಯೆ; ಪಿಸಿಸಿಎಫ್ ತಂಡದ ತನಿಖೆಗೆ ಖಂಡ್ರೆ ಆದೇಶ

    ಬೆಂಗಳೂರು: ವನ್ಯಜೀವಿ ಸಪ್ತಾಹದ ಆರಂಭದ ದಿನವೇ ಮಲೆ ಮಹದೇಶ್ವರ ಬೆಟ್ಟ ಕಾನನದ ಹನೂರು ವಲಯದಲ್ಲಿ ಮತ್ತೊಂದು ಹುಲಿ ಹತ್ಯೆ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶ ನೀಡಿದ್ದಾರೆ.

    ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿಗೆ ಲಿಖಿತ ಆದೇಶ ನೀಡಿರುವ ಅವರು, ಮಲೆ ಮಹದೇಶ್ವರ ಬೆಟ್ಟದ ಕಾನನದ ಹನೂರು ವಲಯದ, ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಬಳಿ ನಿನ್ನೆ ಸತ್ತ ಹುಲಿಯ ಅರ್ಧ ಕಳೇಬರ ಪತ್ತೆಯಾಗಿರುವ ಬಗ್ಗೆ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಆದೇಶಿಸುವಂತೆ ಸೂಚಿಸಿದ್ದಾರೆ.

    ಈ ಕಾನನದಲ್ಲಿ ಕಳೆದ 3 ವರ್ಷದಲ್ಲಿ ದಾಖಲಾಗಿರುವ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನಹರಿಸಿ, ಹಿಂದಿನ ತನಿಖಾ ವರದಿಗಳನ್ನೂ ಪರಾಮರ್ಶಿಸಿ ಮುಂದೆ ಈ ಭಾಗದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸಲು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮದ ಶಿಫಾರಸಿನೊಂದಿಗೆ 8 ದಿನಗಳಲ್ಲಿ ವರದಿ ಸಲ್ಲಿಸಿ. ಹುಲಿ ಹಂತಕರನ್ನು ಪತ್ತೆ ಮಾಡಿ ಅವರಿಗೆ ಕಾನೂನು ರೀತ್ಯ ದಂಡನೆ ಕೊಡಿಸಲು ತುರ್ತು ಕ್ರಮ ವಹಿಸಲು ಆದೇಶ ಹೊರಡಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

    ಈ ಘಟನೆ ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ಧಾಮದಲ್ಲಿ ನಿರಂತರವಾಗಿ ವನ್ಯಜೀವಿಗಳ ಕಳ್ಳಬೇಟೆ ನಡೆಯುತ್ತಿರುವುದನ್ನು ದೃಢಪಡಿಸುತ್ತಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

  • ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಮಲೆ ಮಹದೇಶ್ವರನ ವನ್ಯಧಾಮದಲ್ಲಿ ಮತ್ತೆ ಹುಲಿಯ ದಾರುಣ ಸಾವು – ಅರ್ಧ ಹುಲಿ ದೇಹ ಪತ್ತೆ

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಮತ್ತೆ ಹುಲಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಹುಲಿಯ ಅರ್ಧ ದೇಹ ಪತ್ತೆಯಾಗಿದೆ.

    ಹನೂರು ವಲಯ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ತಲೆ, ಭುಜ, ಮುಂದಿನ ಕಾಲುಗಳು ಪತ್ತೆಯಾಗಿವೆ. ಸಿಕ್ಕಿರುವ ಕಳೇಬರದ ಭಾಗದಲ್ಲಿ ‌ಉಗುರು ಮತ್ತು ಹಲ್ಲುಗಳು ಸೇಫ್ ಆಗಿವೆ.

    ಹುಲಿಯ ಕಳ್ಳಬೇಟೆ ಶಂಕೆ ಶಂಕೆ ವ್ಯಕ್ತವಾಗಿದ್ದು, ತನಿಖೆಗೆ ಅರಣ್ಯ ಇಲಾಖೆ ಕ್ರಮವಹಿಸಿದೆ. ಹುಲಿ ದೇಹದ ಉಳಿತ ಭಾಗ ಹುಡುಕಲು ಶೋಧ ನಡೆದಿದೆ. ಹುಲಿ ಸಾವಿಗೆ ಕಾರಣವೇನು ಮತ್ತು ಕಾರಣಕರ್ತರು ಯಾರು ಎಂಬುದನ್ನು ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗೆ ಮಹದೇಶ್ವರ ಬೆಟ್ಟದ ಬಳಿ ಐದು ಹುಲಿಗಳಿಗೆ ವಿಶಪ್ರಾಷಣ ಮಾಡಿ ಕೊಲ್ಲಲಾಗಿತ್ತು. ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ಉಪಟಳ ತಪ್ಪಿಸುವ ಉದ್ದೇಶದಿಂದ ಮೃತ ಹಸುವಿನ ದೇಹಕ್ಕೆ ವಿಷ ಹಾಕಿ, ಮಾಂಸವನ್ನು ತಿಂದು ಹುಲಿಗಳು ಸಾಯುವಂತೆ ಮಾಡಲಾಗಿತ್ತು.

  • ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷವಿಕ್ಕಿ 5 ಹುಲಿಗಳ ಸಾವು ಕೇಸ್:‌ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

    ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷವಿಕ್ಕಿ 5 ಹುಲಿಗಳ ಸಾವು ಕೇಸ್:‌ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು

    ಚಾಮರಾಜನಗರ: ಮಲೆ ಮಹದೇಶ್ವರ ವನ್ಯಜೀವಿ (MM Hills) ವಿಭಾಗದ ಹೂಗ್ಯಂ ವಲಯದಲ್ಲಿ ಈಚೆಗೆ ಐದು ಹುಲಿಗಳಿಗೆ ವಿಷವಿಕ್ಕಿ ಕೊಂದ ಆರೋಪದ ಮೇಲೆ ಜೈಲಿನಲ್ಲಿದ್ದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

    ಆರೋಪಿಗಳಾದ ಮಾದರಾಜು, ನಾಗರಾಜು, ಕೋನಪ್ಪಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಕೊಳ್ಳೇಗಾಲ) ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಚಾ.ನಗರದಲ್ಲಿ 5 ಹುಲಿಗಳ ಸಾವು ಕೇಸ್‌ – ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಸೂಚನೆ

    50,000 ರೂಪಾಯಿ ಭದ್ರತಾ ಠೇವಣಿಯೊಂದಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ ಅನುಮತಿ ಪಡೆಯದೇ ಸ್ವಸ್ಥಾನ ತೊರೆಯುವಂತಿಲ್ಲ. ನ್ಯಾಯಾಲಯದಲ್ಲಿ ನಿಯಮಿತವಾಗಿ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ.

  • 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್ ಚಕ್ರಪಾಣಿ ಸೇರಿ 3 ಅಧಿಕಾರಿಗಳ ಅಮಾನತಿಗೆ ಖಂಡ್ರೆ ಶಿಫಾರಸು

    5 ಹುಲಿಗಳ ಸಾವು ಪ್ರಕರಣ: ಡಿಸಿಎಫ್ ಚಕ್ರಪಾಣಿ ಸೇರಿ 3 ಅಧಿಕಾರಿಗಳ ಅಮಾನತಿಗೆ ಖಂಡ್ರೆ ಶಿಫಾರಸು

    ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ ಡಿಸಿಎಫ್ ಚಕ್ರಪಾಣಿ (Chakrapani) ಮತ್ತು ಮೂವರು ಅಧಿಕಾರಿಗಳನ್ನು ಅಮಾನತು ಮಾಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ಶಿಫಾರಸು ಮಾಡಿದ್ದಾರೆ.

    ಉನ್ನತ ಮಟ್ಟದ ವಿಚಾರಣಾ ಸಮಿತಿಯ ಪ್ರಾಥಮಿಕ ವರದಿ ಸ್ವೀಕರಿಸಿ, ಪರಾಮರ್ಶಿಸಿದ ಸಚಿವರು, ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಕರ್ತವ್ಯಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಈ ಶಿಫಾರಸು ಮಾಡಿದ್ದಾರೆ. ಇದನ್ನೂ ಓದಿ: ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

    ವೇತನ ಪಾವತಿಸದಿರುವುದೂ ಕರ್ತವ್ಯಲೋಪ
    ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಏಪ್ರಿಲ್ ತಿಂಗಳಾಂತ್ಯಕ್ಕೇ ಹಣ ಬಿಡುಗಡೆಯಾಗಿದ್ದರೂ, ಜೂನ್ ತಿಂಗಳವರೆಗೆ ವೇತನ ಪಾವತಿಸದಿರುವುದು ಡಿಸಿಎಫ್ ಚಕ್ರಪಾಣಿ ಅವರ ಮೂಲಭೂತ ಕರ್ತವ್ಯ ಲೋಪವಾಗಿದ್ದು, ಇದು ಗಸ್ತು ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ. ಈ ಸಂಬಂಧ ಡಿಸಿಎಫ್ ಚಕ್ರಪಾಣಿ ಅಮಾನತಿಗೆ ಶಿಫಾರಸು ಮಾಡಿ, ಇಲಾಖೆಯ ವಿಚಾರಣೆ ಮಾಡಲು ಶಿಫಾರಸು ಮಾಡಿದ್ದಾರೆ. ಇದನ್ನೂ ಓದಿ: ಎಸ್‌ಸಿ ಜನಗಣತಿಯಲ್ಲಿ 50%ಕ್ಕಿಂತ ಹೆಚ್ಚು ಜನರು ಭಾಗವಹಿಸಲಾಗದು: ಛಲವಾದಿ ಆರೋಪ

    ಹೊರಗುತ್ತಿಗೆ ಸಿಬ್ಬಂದಿ ಮಾರ್ಚ್‌ನಿಂದ 3 ತಿಂಗಳ ವೇತನ ಪಾವತಿ ಆಗಿಲ್ಲ ಎಂದು ಜೂನ್ 23ರಂದು ಪ್ರತಿಭಟನೆ ನಡೆಸಿದ್ದರು. ಸಕಾಲದಲ್ಲಿ ವೇತನ ಸಿಗದೇ ಮುಂಚೂಣಿಯ ಸಿಬ್ಬಂದಿ ಕರ್ತವ್ಯ ವಿಮುಖರಾಗಲು ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

    ಸುಮಾರು 11 ವರ್ಷದ ತಾಯಿ ಹುಲಿ ಮತ್ತು 10ರಿಂದ 11ತಿಂಗಳ 4 ಮರಿ ಹುಲಿಗಳ ಸಾವಿಗೆ ಹುಲಿ ದಾಳಿ ಮಾಡಿ ಕೊಂದ ಹಸುವಿನ ಮೃತದೇಹದ ಒಳಗೆ ಸೇಡು ತೀರಿಸಿಕೊಳ್ಳಲು ಸಿಂಪಡಿಸಲಾದ ರಾಸಾಯನಿಕ ಸಂಯುಕ್ತ ಕಾರಣ ಎಂಬುದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಾರು ರೇಸ್‌ಗೆ ಕಿಚ್ಚ ಎಂಟ್ರಿ – ಬೆಂಗಳೂರು ತಂಡ ಖರೀದಿಸಿದ ಸುದೀಪ್‌

    ಗಸ್ತು ಸಿಬ್ಬಂದಿಯ ಕಾರ್ಯಕ್ಷಮತೆಯ ಮೇಲೆ ಸಂಬಂಧಿತ ವಲಯದ ಎ.ಸಿ.ಎಫ್, ಆರ್.ಎಫ್.ಓ. ಮತ್ತು ಡಿ.ಆರ್.ಎಫ್.ಓ. ನಿಗಾ ಇಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ತಮ್ಮ ಮೂಲಭೂತ ಕರ್ತವ್ಯವಾದ ಅರಣ್ಯ ರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರಿರುತ್ತಾರೆ ಎಂದು ತಿಳಿಸಿರುವ ಈಶ್ವರ್ ಖಂಡ್ರೆ, ಮೂರು ಸಿಬ್ಬಂದಿಯನ್ನು ಅಮಾನತು ಮಾಡಿ, ಇಲಾಖೆಯ ವಿಚಾರಣೆ ನಡೆಸಲು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ಫೋಟೋಗೆ ಬ್ಯಾಡ್ ಕಾಮೆಂಟ್, ಗೌರಮ್ಮನಾದ ಸಪ್ತಮಿ!

    ಪ್ರಾಥಮಿಕ ತನಿಖಾ ವರದಿ ಸಲ್ಲಿಸಿರುವ ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಶ್ಕರ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಶ್ರೀನಿವಾಸುಲು, ಚಾಮರಾಜನಗರ ಸಿಸಿಎಫ್ ಹೀರಾಲಾಲ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎ.ಐ.ಜಿ ಹರಿಣಿ ವೇಣುಗೋಪಾಲ್, ವನ್ಯಜೀವಿ ತಜ್ಞ ಡಾ.ಸಂಜಯ್ ಗುಬ್ಬಿ ಮತ್ತು ಮೈಸೂರು ಮೃಗಾಲಯದ ಸಹಾಯಕ ನಿರ್ದೇಶಕ ಡಾ.ಶಶಿಧರ್ ಸದಸ್ಯರಾಗಿದ್ದರು. ಈ ಸಮಿತಿಗೆ ಅಂತಿಮ ವರದಿಯನ್ನು ಇದೇ ತಿಂಗಳ 10ರೊಳಗೆ ಸಲ್ಲಿಸುವಂತೆಯೂ ಸೂಚಿಸಿದ್ದಾರೆ.

  • ಹುಲಿಗಳು ಇನ್ನೂ ಉಸಿರು ಚೆಲ್ಲಬೇಕೆ? ವಿಷವಿಕ್ಕುವ ಕೃತ್ಯಕ್ಕೆ ಕೊನೆ ಎಂದು?

    ಹುಲಿಗಳು ಇನ್ನೂ ಉಸಿರು ಚೆಲ್ಲಬೇಕೆ? ವಿಷವಿಕ್ಕುವ ಕೃತ್ಯಕ್ಕೆ ಕೊನೆ ಎಂದು?

    ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (MM Hills Forest) 5 ಹುಲಿಗಳು ವಿಷಪ್ರಾಶನಕ್ಕೆ ಬಲಿ ಆಗಿರುವುದು ಇಡೀ ರಾಜ್ಯದಲ್ಲಿ ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿಸಿವೆ. ಈಗಾಗಲೇ ಹಂತಕರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದೊಂದಿಗೆ ಮಾನವ ಹಾಗೂ ವನ್ಯಜೀವಿ ಸಂಘರ್ಷದ ಪಾತ್ರವೂ ಕಂಡುಬಂದಿದೆ.

    ಹೌದು. ಹುಲಿಗಳ ಸಂರಕ್ಷಣೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದೊಂದು ದಶಕದ ಅವಧಿಯಲ್ಲಿ ದೇಶದಲ್ಲಿನ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, 3,650ಕ್ಕೂ ಹೆಚ್ಚು ಹುಲಿಗಳು (Tigers) ಭಾರತದಲ್ಲಿವೆ ಎಂಬುದನ್ನು ಸಮೀಕ್ಷೆಗಳು ತಿಳಿಸಿವೆ. ವಿಶ್ವದ ಒಟ್ಟು ಹುಲಿಗಳಲ್ಲಿ ಶೇ 75ರಷ್ಟು ಭಾರತದಲ್ಲಿಯೇ ಇವೆ. ಹುಲಿ ಸಂರಕ್ಷಣೆಯ ಸಾಧನೆ ಮೂಲಕ ವಿಶ್ವದ ಗಮನಸೆಳೆದಿರುವ ದೇಶದಲ್ಲಿ ಮನುಷ್ಯನ ಹಸ್ತಕ್ಷೇಪದಿಂದಾಗಿ ಹುಲಿಗಳ ದಾರುಣ ಸಾವುಗಳೂ ಸಂಭವಿಸುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ, ಚಾಮರಾಜನಗರ ಜಿಲ್ಲೆಯ ಮೀಣ್ಯಂನ ಕಾಡಿನಲ್ಲಿ ಸಂಭವಿಸಿರುವ ಐದು ಹುಲಿಗಳ ಸಾವು.

    ವನ್ಯಜೀವಿ ಮಾನವ ಸಂಘರ್ಷದ ಭಾಗವಾಗಿ ಪ್ರಾಣಿಗಳಿಗೆ ವಿಷವಿಕ್ಕುವುದು ಅವುಗಳನ್ನು ಹತ್ಯೆಗೈಯುವುದು ಹೊಸದೇನಲ್ಲ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಇಂತಹ ನೀಚ ಕೃತ್ಯಗಳನ್ನು ನೋಡುತ್ತಲೇ ಇರುತ್ತೇವೆ. ತಮ್ಮ ಜಾನುವಾರುಗಳನ್ನು ಕೊಂದು ಅದಕ್ಕೆ ವಿಷವಿಕ್ಕುವ ಮೂಲಕ ಆ ಪ್ರಾಣಿ (Animal) ಅಥವಾ ಮಾಂಸವನ್ನು ವನ್ಯಜೀವಿಗಳು ತಿಂದು ಮೃತಪಟ್ಟ ಘಟನೆಗಳು ಅನೇಕಬಾರಿ ಕರ್ನಾಟಕದಲ್ಲೇ ನಡೆದಿದೆ. ಆದ್ರೆ ಒಂದೇ ಬಾರಿ 5 ಹುಲಿಗಳು ಮೃತಪಟ್ಟಿರುವ ಘಟನೆ ದೇಶದಲ್ಲೇ ಮೊದಲಬಾರಿ ಆಗಿರುವುದರಿಂದ ಘಟನೆ ತೀವ್ರತೆ ಪಡೆದುಕೊಂಡಿದೆ. ಈ ಹೊತ್ತಿನಲ್ಲಿ ಹತ್ತಾರು ವರ್ಷಗಳಿಂದ ಇಂತಹ ಕೃತ್ಯಗಳು ನಡೆದಿದ್ದು, ಅವುಗಳನ್ನು ಒಂದು ಸುತ್ತು ಮೆಲುಕು ಹಾಕೋಣ. ಅದಕ್ಕೂ ಮುನ್ನ ಮಲೆ ಮದೇಶ್ವರ ಬೆಟ್ಟದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಹೇಗೆ ಎಂಬುದನ್ನೂ ತಿಳಿಯೋಣ..

    ಬೆಟ್ಟದಲ್ಲಿ ಹುಲಿಗಳು ಸತ್ತಿದ್ದು ಹೇಗೆ?

    ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ವಿಷ ಬೆರೆಸಿದ್ದ ಜಾನುವಾರುವಿನ ಕಳೇಬರ ತಿಂದು ದುರ್ಮರಣಕ್ಕೆ ಒಳಗಾಗಿವೆ. ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದಿರುವ ಆರೋಪದ ಮೇಲೆ ಹನೂರು ತಾಲ್ಲೂಕಿನ ಕೊಪ್ಪ ಗ್ರಾಮದ ಮೂವರು ಹಾಗೂ ಕೃತ್ಯಕ್ಕೆ ನೆರವು ನೀಡಿರುವ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಅರಣ್ಯದೊಳಗೆ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದು ಹಾಕಿರುವ ಘಟನೆಗೆ ಪ್ರತೀಕಾರದ ರೂಪದಲ್ಲಿ ದುಷ್ಕೃತ್ಯ ನಡೆದಿದ್ದು, ಹುಲಿ ತಿಂದು ಉಳಿಸಿದ್ದ ಕಳೇಬರಕ್ಕೆ ವಿಷ ಹಾಕಲಾಗಿದೆ. ಆ ವಿಷಪೂರಿತ ಕಳೇಬರವನ್ನು ತಿಂದು ಐದು ಹುಲಿಗಳೂ ಪ್ರಾಣಬಿಟ್ಟಿವೆ. ಹುಲಿಗಳ ಸಾವಿನ ಹಿಂದೆ ತಮಿಳುನಾಡಿನ ಜಾನುವಾರುಗಳ ಮಾಲೀಕರ ʻಸಗಣಿ ಮಾಫಿಯಾ’ದ ಪರೋಕ್ಷ ಪಾತ್ರ ಇರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಮೈಸೂರಿನಲ್ಲಿ ಆನೆಗಳಿಗೂ ವಿಷಪ್ರಾಶನ ನಡೆದಿತ್ತು

    2003-04ರ ಸಂದರ್ಭದಲ್ಲಿ ಮೈಸೂರು ಮೃಗಾಲಯದಲ್ಲಿ ಆತಂಕ ಮನೆ ಮಾಡಿತ್ತು. ಅಧಿಕಾರಿಗಳ ಪ್ರಾಮಾಣಿಕ ಕಾರ್ಯವನ್ನು ಸಹಿಸದ ಕೆಲವು ದುಷ್ಕರ್ಮಿಗಳು ಪ್ರಾಣಿಗಳನ್ನು ವಿಕೃತವಾಗಿ ಕೊಲ್ಲುವ, ಅವುಗಳಿಗೆ ವಿಷವಿಕ್ಕುವ ಕೃತ್ಯ ಎಸಗಿದ್ದರು. 2000 ಇಸವಿಗೂ ಮುನ್ನ ಮೈಸೂರು ಮೃಗಾಲಯ ಕೊಟ್ಟಿಗೆಯಂತಿತ್ತು. ನಂತರ ಮೃಗಾಲಯಕ್ಕೆ ಬಂದ ಅಧಿಕಾರಿ ಕುಮಾರ್‌ ಪುಷ್ಕರ್‌, ಮೃಗಾಲಯದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿಬಿಟ್ಟರು. ಹೆಚ್ಚು ಸಂಖ್ಯೆಯಲ್ಲಿದ್ದ ಜಿಂಕೆಗಳನ್ನ ಕಡಿಮೆ ಮಾಡಿ ಜನರಿಗೆ ಅಗತ್ಯವಿರುವಷ್ಟನ್ನು ಮಾತ್ರ ಪ್ರದರ್ಶನಕ್ಕಿಡುವಂತೆ ಮಾಡಿದರು. ಸಿಬ್ಬಂದಿಗೆ ದಿನವಿಡೀ ಕೆಲಸ ಕೊಟ್ಟರು. ಇದನ್ನು ಸಹಿಸದ ಕೆಲವರು ಎಮು ಪಕ್ಷಿಯ ಕುತ್ತಿಗೆ ಕತ್ತರಿಸಿ ಹಾಕಿದ್ದರು. ಇದಾದ ಕೆಲ ದಿನಗಳಲ್ಲೇ ಹಂದಿಯನ್ನ ಕೊಂದು ಕಾಡೆಮ್ಮೆ ಕೋಣೆಯ ಮುಂದೆ ಬಿಸಾಡಿದ್ದರು, ಕಾಡೆಮ್ಮೆಯೆ ಕೊಂದಿದೆ ಎಂದು ಹಬ್ಬಿಸಿದ್ದರು. ಘಟನೆ ಬಳಿಕ ಪುಷ್ಕರ್‌ ಅವರನ್ನ ವರ್ಗಾವಣೆ ಮಾಡಲಾಗಿತ್ತು. ಆ ಜಾಗಕ್ಕೆ ಮನೋಜ್‌ ಕುಮಾರ್‌ ಅವರನ್ನು ನೇಮಕ ಮಾಡಲಾಯಿತು. ಕೆಲವೇ ದಿನಗಳಲ್ಲಿ ಆನೆಯೊಂದು ಸಾವಿಗೀಡಾಯಿತು. ಕಿಡಿಗೇಡಿಗಳು ಜಿಂಕ್‌ ಪಾಸ್ಪೆಟ್‌ ತಿನಿಸಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾತಿತು. ಧೈರ್ಯಗೆಡದ ಮನೋಜ್‌ ಕೆಲಸ ಮುಂದುವರಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಮತ್ತೆರಡು ಆನೆಗಳನ್ನು ಕೊಲ್ಲಲಾಯಿತು. ಅವುಗಳಿಗೂ ವಿಷಪ್ರಾಶನ ಮಾಡಿಸಲಾಗಿತ್ತು. ಸತ್ತ ಆನೆಗಳಲ್ಲಿ ಒಂದನ್ನು ವಿದೇಶಕ್ಕೆ ಕಳುಹಿಸಲು ರಾಷ್ಟ್ರಪತಿ ಕಚೇರಿಯಿಂದ ಆಯ್ಕೆ ಮಾಡಲಾಗಿತ್ತು. ಮುಂದೆ ಕಣ್ಣೊರೆಸುವ ತಂತ್ರಗಾರಿಕೆ ಭಾಗವಾಗಿ ತನಿಖೆ ನಡೆಯಿತು. ಆದ್ರೆ ಅದರಿಂದ ಏನಾಯಿತು ಅನ್ನೋ ಕಾರಣ ಮಾತ್ರ ಹೊರಗೆ ಬರಲೇ ಇಲ್ಲ.

    ಯಾವ-ಯಾವ ವರ್ಷ ಎಲ್ಲೆಲ್ಲಿ ಹುಲಿ ಸಾವು?

    2013: ಆ ವರ್ಷದ ಜನವರಿ 13ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ ಕುಪ್ಪೆ ವಲಯದ ಮಾಸ್ತಿಗುಡಿ ಬೀಟ್‌ನ ತಡಿಕೆಹಳ್ಳದ ಕಬಿನಿ ಹಿನ್ನೀರು ಪ್ರದೇಶದಲ್ಲಿ 4-5 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿತ್ತು. ಮೈಮೇಲೆ ಯಾವುದೇ ಗಾಯದ ಗುರುತುಗಳೂ ಇರಲಿಲ್ಲ ಮತ್ತು ಅದರ ಅಂಗಾಂಗಗಳು ಸುರಕ್ಷಿತವಾಗಿದ್ದವು. ಬಳಿಕವೇ ಅದು ವಿಷಪ್ರಾಶನದಿಂದ ಮೃತಪಟ್ಟಿದೆ ಎಂಬುದು ಗೊತ್ತಾಯಿತು.

    2013ರ ಅದೇ ವರ್ಷ ಫೆ.16ರಂದು ಮೇಟಿಕುಪ್ಪೆ ವಲಯದ ಸೊಳ್ಳೇಪುರ ಹಾಡಿಯ ಬಳಿ ಹೆಣ್ಣು ಹುಲಿಯೊಂದು ಮೃತಪಟ್ಟಿತ್ತು. ಉರುವಲು ತರಲು ಹೋದ ಜನರು ಅದನ್ನ ನೋಡಿ ಅರಣ್ಯ ಇಲಾಖೆಗೆ ತಿಳಿಸಿದ್ದರು. ಹುಲಿ ಕಳೇಬರ ಸಿಕ್ಕಿದ್ದರ ಸಮೀಪದಲ್ಲಿ ಹಸುವಿನ ಕಳೇಬರ ಕೂಡ ಸಿಕ್ಕಿತ್ತು. ಕೊನೆಗೆ ವಿಷಪ್ರಾಶನದಿಂದ ಮೃತಪಟ್ಟಿರುವುದು ಗೊತ್ತಾಗಿ ಬೊಮ್ಮಲಾಪುರ ರೈತರೊಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಆಗ ಹಸುಗಳನ್ನು ಸಾಕಿಕೊಂಡು ಬದುಕುತ್ತಿದ್ದೇವೆ. ಹುಲಿಗಳ ಹಾವಳಿ ಇದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಸಾಕು ಪ್ರಾಣಿಗಳನ್ನು ಕೊಂದು ತಿಂದರೆ ನಾವು ಬದುಕುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದರು.

    2014: 2014ರ ಜನವರಿ 26ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ ಅರಣ್ಯ ಪ್ರದೇಶದಲ್ಲಿ ಗಂಡು ಚಿರತೆಯನ್ನು ವಿಷವಿಕ್ಕಿ ಕೊಲ್ಲಲಾಗಿತ್ತು. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಆಲತ್ತೂರು ಗ್ರಾಮದಲ್ಲಿ ಚಿರತೆ ಹಸುವಿನ ಮಾಂಸಕ್ಕೆ ವಿಷ ಹಾಕಿದ್ದಾರೆ ಅದರ ಮಾಂಸ ತಿಂದ ಕಾರಣ ಚಿರತೆ ಮೃತಪಟ್ಟಿತ್ತಯ ಎಂಬ ಆರೋಪ ಕೇಳಿಬಂದಿತ್ತು.

    2016: 2016ರ ಜುಲೈ 12ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ಪ್ರದೇಶದ ವ್ಯಾಪ್ತಿಯ ಗುಂಡ್ಲುಪೇಟೆ ಹಂಚಿಪುರ ಗ್ರಾಮದ ಜಮೀನಿನಲ್ಲಿ ಕಪ್ಪು ಚಿರತೆ ಸೇರಿ ಎರಡು ಚಿರತೆ ಸಾವನ್ನಪ್ಪಿದ್ದವು. ಚಿರತೆ ಒಂದು ನಾಯಿಯನ್ನು ಕೊಂದಿತ್ತು. ಅದಕ್ಕೆ ವಿಷ ಹಾಕಲಾಗಿತ್ತು ಎಂದು ಹೇಳಲಾಗಿತ್ತು.

    2023: 2023ರ ಜೂನ್‌ಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಮೂರು ವರ್ಷದ ಹೆಣ್ಣು ಚಿರತೆಯನ್ನು ವಿಷ ಹಾಕಿ ಕೊಲ್ಲಲಾಗಿತ್ತು.

    2025: ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ನಾಗರಹೊಳೆ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನವನದಲ್ಲಿ ಶೆಟ್ಟಿಹಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದ ಬಳಿ ಹಾರಂಗಿ ಸೇತುವೆ ಕೆಳಗೆ 5-6 ವರ್ಷದ ಹುಲು ಕಳೇಬರ ಪತ್ತೆಯಾಗಿತ್ತು. ಇದು ಕಿಡಿಗೇಡಿಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದ್ರೆ ಈವರೆಗೆ ಇದರ ತನಿಖಾ ವರದಿ ಹೊರಬಂದಿಲ್ಲ.

    13 ವರ್ಷಗಳಲ್ಲಿ 1,519 ಹುಲಿಗಳು ಸಾವು

    2013ರಿಂದ ಈ ವರ್ಷ ಜೂನ್‌ 26ರ ವರೆಗೆ ದೇಶಾದ್ಯಂತ 1,519 ಹುಲಿಗಳು ಸಾವನ್ನಪ್ಪಿವೆ. ಈ ವರ್ಷ ಮೊದಲ ಆರೂವರೆ ತಿಂಗಳಲ್ಲೇ 103 ಹುಲಿಗಳು ಮೃತಪಟ್ಟಿವೆ. ಮಹಾರಾಷ್ಟ್ರದಲ್ಲಿ 28, ಮಧ್ಯಪ್ರದೇಶದಲಲಿ 26, ಅಸ್ಸಾಂನಲ್ಲಿ 10 ಹುಲಿಗಳು ಮೃತಪಟ್ಟರೆ, ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಸೇರಿದಂತೆ ಕರ್ನಾಟಕದ ಒಟ್ಟು 8 ಹುಲಿಗಳು ಮೃತಪಟ್ಟಿವೆ. ಇದಲ್ಲದೇ ಸಹಜ ಸಾವು, ಬೇಟೆ ಹೊರತುಪಡಿಸಿ ಅಸಹಜ ಸಾವು, ಮೂರ್ಛೆ ಅಥವಾ ಪಾರ್ಶ್ವವಾಯು, ಹೃದಯಾಘಾತ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ 4-5 ವರ್ಷಗಳಲ್ಲಿ ನೂರಾರು ಹುಲಿಗಳು ಸತ್ತಿವೆ.

    ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಹುಲಿಗಳು ಸಾವು?

    2012 ರಿಂದ 2025ರ ಜೂನ್‌ ವರೆಗೆ
    * ಮಧ್ಯಪ್ರದೇಶ – 392
    * ಮಹಾರಾಷ್ಟ್ರ – 321
    * ಕರ್ನಾಟಕ – 189
    * ಉತ್ತರಾಖಂಡ – 140
    * ತಮಿಳುನಾಡು – 96
    * ಅಸ್ಸಾಂ – 95
    * ಕೇರಳ – 86
    * ಉತ್ತರ ಪ್ರದೇಶ- 71
    * ರಾಜಸ್ಥಾನ – 41
    * ಬಿಹಾರ – 22

    ದೇಶಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು?

    ದೇಶದಲ್ಲಿ ಹುಲಿಗಳ ಸಾವು ಒಂದೆಡೆಯಾದ್ರೆ ಸೂಕ್ತ ಪರಿಸರ ವ್ಯವಸ್ಥೆಯಿಂದ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. 2006ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 1,411 ಇತ್ತು ಆಗ ಕರ್ನಾಟಕದಲ್ಲಿ 290 ಹುಲಿಗಳಿದ್ದವು. 2010ರಲ್ಲಿ ದೇಶದಲ್ಲಿ 1,706 ಈ ಪೈಕಿ ಕರ್ನಾಟಕದಲ್ಲಿ 300, 2014ರಲ್ಲಿ ದೇಶದಲ್ಲಿ 2,226 ಈ ಪೈಕಿ ಕರ್ನಾಟಕದಲ್ಲಿ 406, 2018ರಲ್ಲಿ ದೇಶದಲ್ಲಿ 2,967 ಈ ಪೈಕಿ ಕರ್ನಾಟಕದಲ್ಲಿ 524 ಹುಲಿಗಳಿದ್ದವು ಸದ್ಯ 2022ರ ಸಮೀಕ್ಷಾ ವರದಿ ಪ್ರಕಾರ ದೇಶದಲ್ಲಿ 3,682 ಹುಲಿಗಳಿದ್ದರೆ ಈ ಪೈಕಿ ಕರ್ನಾಟಕದಲ್ಲಿ 563 ಹುಲಿಗಳಿವೆ. ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೆಮ 785 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ ಅಗ್ರಸ್ಥಾನದಲ್ಲಿದೆ.

    ಪರಿಸರ ವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಹಲಿಗಳ ಪಾತ್ರ ಬಹುಮುಖ್ಯವಾಗಿದೆ. ಕಾಡಿನ ಬೇಟೆಗಾರನಾಗಿರುವ ಹುಲಿ ಮಾಂಸಾಹಾರಿ ಪ್ರಾಣಿಯಾಗಿದ್ದು, ಇತರ ಪ್ರಾಣಿಗಳನ್ನು ಬೇಟೆಯಾಡುವ ಮೂಲಕ ಪ್ರಾಕೃತಿಕ ಸಮತೋಲನವನ್ನೂ ಕಾಪಾಡುತ್ತದೆ. ಈಗಾಗಲೇ ಗಂಧದಗುಡಿ, ಮಾಸ್ತಿ ಗುಡಿ ಅಂತಹ ಸಿನಿಮಾಗಳಲ್ಲಿ ಹುಲಿಗಳ ಪ್ರಾಮುಖ್ಯತೆಯನ್ನು ಸಾರಲಾಗಿದೆ. ಈ ನಿಟ್ಟಿನಲ್ಲಿ ಹುಲಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ.

  • 5 ಹುಲಿಗಳ ಸಾವು ಪ್ರಕರಣ – ಡಿಸಿಎಫ್, ಎಸಿಎಫ್‌ಗಳಿಗೆ ಕಡ್ಡಾಯ ರಜೆ ಮೇಲೆ ತೆರಳಲು ಸರ್ಕಾರ ಆದೇಶ

    5 ಹುಲಿಗಳ ಸಾವು ಪ್ರಕರಣ – ಡಿಸಿಎಫ್, ಎಸಿಎಫ್‌ಗಳಿಗೆ ಕಡ್ಡಾಯ ರಜೆ ಮೇಲೆ ತೆರಳಲು ಸರ್ಕಾರ ಆದೇಶ

    ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟ (MM Hills) ವನ್ಯಧಾಮದಲ್ಲಿ ಐದು ಹುಲಿಗಳಿಗೆ ವಿಷಪ್ರಾಶನ ಮಾಡಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

    ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಗಳಿಗೆ ಕಡ್ಡಾಯ ರಜೆಯ ಮೇಲೆ ತೆರಳಲು ಆದೇಶಿಸಿದೆ. ತನಿಖಾ ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇದನ್ನೂ ಓದಿ: 5 ಹುಲಿಕೊಂದ ಹಂತಕರು ಲಾಕ್ – ಕೊನೆಗೂ ಹೊರಬಂತು ರಹಸ್ಯ, 3 ಆರೋಪಿಗಳಿಗೆ ನ್ಯಾಯಾಂಗ ಬಂಧನ

    ಸರ್ಕಾರಿ ಆದೇಶದಲ್ಲಿ ಏನಿದೆ?
    ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿ ವಿಭಾಗದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಅಸಹಜ ಸಾವಿಗಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಐದು ಹುಲಿಗಳು ರಸ್ತೆಯಿಂದ ಕೇವಲ 100 ಮೀಟರ್ ದೂರದಲ್ಲಿ ಸತ್ತುಬಿದ್ದಿದ್ದರೂ ಎರಡು ದಿನಗಳವರೆಗೆ ಇಲಾಖೆಯ ಸಿಬ್ಬಂದಿ ಗಮನಕ್ಕೆ ಬಾರದಿರುವುದು ಅರಣ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ಲೋಪವಾಗಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಇದನ್ನೂ ಓದಿ: ಐದು ಹುಲಿಗಳ ಸಾವು – ಹಸು ಕೊಂದಿದ್ದಕ್ಕೆ ವಿಷ ಹಾಕಿದ್ನಾ ಹಸು ಮಾಲೀಕ?

    ಸಾವಿಗೀಡಾದ ಸ್ಥಳದಿಂದ ಕೇವಲ 800 ಮೀಟರ್ ದೂರದಲ್ಲಿ ಕಳ್ಳಬೇಟೆ ನಿಗ್ರಹ ಶಿಬಿರವಿದ್ದರೂ ವನ್ಯಜೀವಿ ರಕ್ಷಣೆಯಾಗದಿರುವುದು ಹಾಗೂ ಕಳೆದ ಮೂರು ತಿಂಗಳಿನಿಂದ ಮಾಧ್ಯಮಗಳಲ್ಲಿ ಮುಂಚೂಣಿಯ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಭತ್ಯೆ ನೀಡದೇ ಇರುವುದು ಗಸ್ತು ಕಾರ್ಯಕ್ಕೆ ಅಡಚಣೆ ಉಂಟಾಗಿರುತ್ತದೆ. ಇದಕ್ಕೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹಾಗೂ ಗಸ್ತು ಸಿಬ್ಬಂದಿಯ ಕರ್ತವ್ಯ ಲೋಪವೇ ಕಾರಣವೆಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದನ್ನೂ ಓದಿ: 5 ಹುಲಿಗಳ ನಿಗೂಢ ಸಾವು ಬೆನ್ನಲ್ಲೇ ಬಂಡೀಪುರದಲ್ಲಿ ಮತ್ತೊಂದು ಹುಲಿ ಸಾವು

    ಈ ಕಾರಣದಿಂದ ತನಿಖೆ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಶಾಖೆಯ ಉಪ ವಲಯ ಅರಣ್ಯಾಧಿಕಾರಿ-ಕಂ-ಮೋಜಣಿದಾರ ಮತ್ತು ಗಸ್ತು ಸಿಬ್ಬಂದಿಗಳ ಸಂಬಂಧ ಕ್ರಮವನ್ನು ಪ್ರತ್ಯೇಕವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತ, ಚಾಮರಾಜನಗರ ರವರ ಹಂತದಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಮಲೆಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹನೂರು ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಹೂಗ್ಯಂ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಇವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಕಡ್ಡಾಯ ರಜೆಯ ಮೇಲೆ ಕಳುಹಿಸಲು ನಿರ್ದೇಶಿಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ವಿಷ ಪ್ರಾಷನದಿಂದಲೇ 5 ಹುಲಿಗಳು ಸಾವು: ಖಚಿತ ಪಡಿಸಿದ ಸಿಸಿಎಫ್ ಹೀರಾಲಾಲ್

    ಏನಿದು ಪ್ರಕರಣ?
    ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ವಿಷ ಬೆರೆಸಿದ್ದ ಜಾನುವಾರುವಿನ ಕಳೇಬರ ತಿಂದು ದುರ್ಮರಣಕ್ಕೆ ಒಳಗಾಗಿವೆ. ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದಿರುವ ಆರೋಪದ ಮೇಲೆ ಹನೂರು ತಾಲ್ಲೂಕಿನ ಕೊಪ್ಪ ಗ್ರಾಮದ ಮೂವರು ಹಾಗೂ ಕೃತ್ಯಕ್ಕೆ ನೆರವು ನೀಡಿರುವ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಅರಣ್ಯದೊಳಗೆ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದು ಹಾಕಿರುವ ಘಟನೆಗೆ ಪ್ರತೀಕಾರದ ರೂಪದಲ್ಲಿ ದುಷ್ಕೃತ್ಯ ನಡೆದಿದ್ದು, ಹುಲಿ ತಿಂದು ಉಳಿಸಿದ್ದ ಕಳೇಬರಕ್ಕೆ ವಿಷ ಹಾಕಲಾಗಿದೆ. ಆ ವಿಷಪೂರಿತ ಕಳೇಬರ ತಿಂದು ಐದು ಹುಲಿಗಳೂ ಪ್ರಾಣಬಿಟ್ಟಿವೆ.

    ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳನ್ನ ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗ್ಲೆ ಮೂವರು (ಮಾದ ಅಲಿಯಾಸ್ ಮಾದುರಾಜು, ನಾಗರಾಜ್ ಹಾಗೂ ಕೋನಪ್ಪ) ಆರೋಪಿಗಳ ಕೈಗೆ ಖಾಕಿ ಕೋಳ ತೊಡಿಸಿದೆ. ಅರಣ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿವೆ. ಹುಲಿಗಳ ಸಾವಿನ ಹಿಂದೆ ತಮಿಳುನಾಡಿನ ಜಾನುವಾರುಗಳ ಮಾಲೀಕರ ʻಸಗಣಿ ಮಾಫಿಯಾ’ದ ಪರೋಕ್ಷ ಪಾತ್ರ ಇರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನೂ ಪ್ರಕರಣದ ಬಗ್ಗೆ ಕೇಳಿದ್ದಕ್ಕೆ ಡಿಸಿಎಫ್‌ ಹಾರಿಕೆ ಉತ್ತರ ನೀಡಿದ್ದರು. ಆ ತರ ಯಾವುದೇ ಸಮಸ್ಯೆ ಇಲ್ವೆ ಇಲ್ಲ ನಮ್ಮ ಮೇಲೆ ಒತ್ತಡ ಕ್ರಿಯೆಟ್‌ ಮಾಡೋಕೆ ಕೆಲವರು ಈ ರೀತಿ ಮಾಡ್ತಾ ಇದ್ದಾರೆ ಎಂದು ಪಲಾಯನ ಮಾಡ್ತಿದ್ದರು. ಈ ಬೆನ್ನಲ್ಲೇ ಸರ್ಕಾರ ಶಿಸ್ತುಕ್ರಮ ಕೈಗೊಂಡಿದೆ.