Tag: MLC

  • ಸಿದ್ದಿ ಜನಾಂಗಕ್ಕೆ ಒಲಿದು ಬಂತು ಎಂಎಲ್‍ಸಿ ಪಟ್ಟ

    ಸಿದ್ದಿ ಜನಾಂಗಕ್ಕೆ ಒಲಿದು ಬಂತು ಎಂಎಲ್‍ಸಿ ಪಟ್ಟ

    ಕಾರವಾರ: ವಿಧಾನ ಪರಿಷತ್ ಸದಸ್ಯರಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬುಡಕಟ್ಟು ಜನಾಂಗದ ಶಾಂತಾರಾಮ ಬುದ್ನಾ ಸಿದ್ಧಿ ಆಯ್ಕೆಯಾಗುವ ಮೂಲಕ ಇಡೀ ರಾಜ್ಯದ ಜನರೇ ಆಶ್ಚರ್ಯ ಪಡುವಂತಾಗಿದೆ. ಇವರ ಕುರಿತು ಅಧಿಕೃತ ಪ್ರಕಟಣೆಯನ್ನು ರಾಜ್ಯಪಾಲರಾದ ವಜುಬಾಯಿ ವಾಲಾ ಹೊರಡಿಸಿದ್ದಾರೆ. ಅಷ್ಟಕ್ಕೂ ಇವರು ಯಾರು? ಏನು ಸಾಧನೆ ಎಂದು ತಿಳಿದರೆ ಇವರ ಮೇಲೆ ಗೌರವ ಹೆಚ್ಚಾಗಲಿದೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಸಮುದಾಯದಲ್ಲಿ ಶಾಂತರಾಮ್ ಸಿದ್ದಿ ಅವರ ಹೆಸರು ದೊಡ್ಡದು. 55 ವರ್ಷ ವಯಸ್ಸನ್ನು ಅರ್ಥಪೂರ್ಣವಾಗಿ ಕಳೆದ ಶಾಂತರಾಮ್ ಸಿದ್ದಿಯವರು ಯಲ್ಲಾಪುರ ತಾಲೂಕಿನ ಹಿತ್ನಳ್ಳಿ ಗ್ರಾಮ ಪಂಚಾಯಿತಿಯ ಪುರ್ಲೆ ಮನೆಯ ಕಡು ಬಡತನದ ಕುಟುಂಬದಿಂದ ಬಂದವರು.

    ಸಿದ್ದಿ ಸಮುದಾಯದಲ್ಲಿ ಅಕ್ಷರ ಎನ್ನುವ ಅರಿವಿರದ ಆ ಸಮಯದಲ್ಲಿಯೇ ಇಡೀ ಸಿದ್ದಿ ಜನಾಂಗದಲ್ಲಿ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ ಸ್ಥಾನಗಳಿಸಿದ ಕೀರ್ತಿ ಇವರದ್ದು. ಅಲ್ಲಿಗೆ ಶಿಕ್ಷಣವನ್ನು ಬಿಟ್ಟು ದುಡುಮೆಗಾಗಿ ಹೊರಟ ಇವರನ್ನು ತಡೆದ ಇವರ ಶಿಕ್ಷಕರು ಅಂಕೋಲದ ಮದರ್ ತೆರೇಸಾ ಪ್ರೊ.ನಿರ್ಮಲ ಗಾಂವ್ಕರ್ ಅವರ ಆಶ್ರಮದಲ್ಲಿ ಪಿ.ಎಂ.ಹೆಚ್.ಎಸ್.ಗೆ ಸೇರಿಸಿದರು. ನಂತರ ಕಾಲೇಜು ಶಿಕ್ಷಣಕ್ಕಾಗಿ ಕಾರವಾರದಲ್ಲಿ ಕೂಲಿ ಕೆಲಸ ಮಾಡಿ ಕಾಲೇಜು ಶಿಕ್ಷಣ ಪೂರೈಸಿದ ಸಿದ್ದ ಜನಾಂಗದ ಮೊದಲ ಪದವೀಧರ ಕೂಡ ಇವರಾಗಿದ್ದಾರೆ.

    ನಂತರ ಆರ್.ಎಸ್.ಎಸ್ ಸಕ್ರಿಯ ಕಾರ್ಯಕರ್ತರಾಗಿ ವನವಾಸಿ ಕಲ್ಯಾಣ ಸಂಸ್ಥೆಯನ್ನು ಕರ್ನಾಟಕ ರಾಜ್ಯದಲ್ಲಿ ಪ್ರಥಮವಾಗಿ ಮುಂಡಗೋಡಿನ ಚಿಪಗಿಯಲ್ಲಿ ಪ್ರಾರಂಭಿಸಿದರು. ಆ ಸಂಸ್ಥೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಇಂದು ಇದೇ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತಿದ್ದಾರೆ. ಇವರ ಮಾತೃ ಭಾಷೆ ಕೊಂಕಣಿಯಾದರೂ ಕನ್ನಡ ಭಾಷೆಯ ಅಭಿಮಾನ ಇವರದ್ದು. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿರುವ ಇವರು, ಕೊಂಕಣಿ ಅಕಾಡಮಿ ಸದಸ್ಯರಾಗಿ ಎರಡು ಅವಧಿ ಸೇವೆ ಸಲ್ಲಿಸಿದ್ದಾರೆ.

    ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯರಾಗಿದ್ದು ಆಕಾಶವಾಣಿಯ ಸಲಹಾ ಸಮಿತಿಯ ಸದಸ್ಯರಾಗಿರುವುದಲ್ಲದೇ ಹತ್ತು ಹಲವು ಸಂಘಟನೆಗಳ ಮೂಲಕ ಸದಾ ಸಮಾಜಮುಖಿಯಾಗಿ ಕೆಲಸ ಮಾಡುವ ಅತ್ಯಂತ ಸರಳ ವ್ಯಕ್ತಿ. ಬಡತನದಲ್ಲಿಯೇ ಇರುವ ಇವರು ಪದವಿ ಮುಗಿಸಿದ ಮಗಳು ಪಿ.ಯು.ಸಿ ಓದುವ ಓರ್ವ ಮಗ ಹಾಗೂ ಪತ್ನಿಯೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ. ಯಾವುದೇ ರಾಜಕೀಯ ಪ್ರಭಾವ ಬಳಸದೆ ಕಾಡಿನಲ್ಲಿ ಬದುಕು ಕಳೆಯುತ್ತಿರುವ ಸಿದ್ದಿ ಜನಾಂಗದ ಅಭಿವೃದ್ಧಿಗಾಗಿ ಹಾಗೂ ಹಸಿರು ಉಳಿವಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಹೋರಾಟದ ಬದುಕು ಕಟ್ಟಿಕೊಂಡಿರುವ ಶಾಂತರಾಮ್ ಸಿದ್ದಿಯವರಿಗೆ ಈ ಸ್ಥಾನ ದೊರೆತಿದ್ದು ಸಿದ್ದಿ ಜನಾಂಗಕ್ಕೆ ನೀಡಿದ ಗೌರವವಾಗಿದೆ.

  • ವಿಶ್ವನಾಥ್ ಅನಾಥರಲ್ಲ, ನಮ್ಮ ಜೊತೆಗೇ ಇದ್ದಾರೆ: ಸಚಿವ ಸೋಮಶೇಖರ್

    ವಿಶ್ವನಾಥ್ ಅನಾಥರಲ್ಲ, ನಮ್ಮ ಜೊತೆಗೇ ಇದ್ದಾರೆ: ಸಚಿವ ಸೋಮಶೇಖರ್

    ಗದಗ: ಮಾಜಿ ಸಚಿವ ಎಚ್.ವಿಶ್ವನಾಥ್ ಅನಾಥರಲ್ಲ, ನಮ್ಮ ಜೊತೆಯಲ್ಲೇ ಇದ್ದಾರೆ. ಬಿಜೆಪಿಗೆ ಬಂದವರಿಗೆ ಒಂದೊಂದು ಅವಕಾಶ ಆಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ವಿಶ್ವನಾಥ ಅವರಿಗೂ ಅವಕಾಶ ಸಿಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಅನಾಥರಲ್ಲ, ಜೊತೆಯಲ್ಲೇ ಇದ್ದಾರೆ. ಬಂದವರಿಗೆ ಒಂದೊಂದು ಅವಕಾಶ ಆಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೂ ಅವಕಾಶ ಸಿಗುತ್ತದೆ. ನಮಗೆ ಹತ್ತೂ ಜನರಿಗೆ ಒಂದು ಬಾರಿ ಅವಕಾಶ ಆಯಿತು. ಇದೀಗ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರಗೆ ಸ್ಥಾನ ನೀಡಲಾಗಿದೆ. ಮುನಿರತ್ನ ಹಾಗೂ ಪ್ರತಾಪ್‍ಗೌಡ ಪಾಟೀಲ್ ಅವರಿಗೆ ಮುಂದಿನ ತಿಂಗಳು ಚುನಾವಣೆ ನಿಗದಿಯಾಗುತ್ತದೆ. ಎಲ್ಲರಿಗೂ ಹಂತ ಹಂತವಾಗಿ ಸ್ಥಾನ ಸಿಗುತ್ತದೆ ಎಂದು ಹೇಳಿದರು.

    ವಿಶ್ವನಾಥ್ ಅವರಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಎಂಎಲ್‍ಸಿ ಸ್ಥಾನದ ಆಶ್ವಾಸನೆ ನೀಡಿದ್ದಾರೆ. ಯಾರಿಗೂ ಇಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ವಿಶ್ವನಾಥ್ ಸಮೇತ ಮುಖ್ಯಮಂತ್ರಿಗಳ ಭೇಟಿ ಮಾಡಿ, ಈ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ಬಾರಿ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ವಿಶ್ವನಾಥ್ ಸಹ ಒಪ್ಪಿಕೊಂಡಿದ್ದಾರೆ ಎಂದರು.

    ವಿಶ್ವನಾಥ್ ಅವರಿಗೆ ಅವಕಾಶ ತಪ್ಪಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಕಾರಣ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅವರ ವೈಯಕ್ತಿಕ ಅಭಿಪ್ರಾಯ. ಬಿಜೆಪಿ ಸರ್ಕಾರ ಯಾವಾಗಲೂ ವಿಶ್ವನಾಥ್ ಅವರ ಜೊತೆಗಿರುತ್ತದೆ ಎಂದು ತಿಳಿಸಿದರು.

  • ಕೊರೊನಾ ಟೆಸ್ಟ್ ನಡೆಸದಂತೆ ಕಿರಿಕ್ – ಜೆಡಿಎಸ್ ಎಂಎಲ್‍ಸಿ, ಪುತ್ರನ ವಿರುದ್ಧ ಎಫ್‍ಐಆರ್

    ಕೊರೊನಾ ಟೆಸ್ಟ್ ನಡೆಸದಂತೆ ಕಿರಿಕ್ – ಜೆಡಿಎಸ್ ಎಂಎಲ್‍ಸಿ, ಪುತ್ರನ ವಿರುದ್ಧ ಎಫ್‍ಐಆರ್

    ಮಂಡ್ಯ: ಕೋವಿಡ್-19 ಟೆಸ್ಟ್ ನಡೆಸದಂತೆ ಕಿರಿಕ್ ಮಾಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143 (ಅಕ್ರಮ ಗುಂಪು), 147 (ದೊಂಬಿ) 341 (ಅಕ್ರಮವಾಗಿ ತಡೆಯುವುದು), ವಿಪತ್ತು ನಿರ್ವಹಣಾ ಕಾಯ್ದೆ 2005 ಅಡಿ ಪ್ರಕರಣ ದಾಖಲಾಗಿದೆ. ಶ್ರೀಕಂಠೇಗೌಡ ಎ2, ಪುತ್ರ ಕೃಷಿಕ್ ಗೌಡ ಎ3, ಬೆಂಬಲಿಗರಾದ ಚಂದ್ರಕಲಾ ಎ4, ಜಗದೀಶ್ ಐದನೇ ಆರೋಪಿ ಆಗಿದ್ದಾರೆ.

    ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಪತ್ರಕರ್ತರ ಕೋವಿಡ್ 19 ಟೆಸ್ಟ್ ಇತ್ತು. ಆದರೆ ಅಂಬೇಡ್ಕರ್ ಭವನದ ಬಳಿಯೇ ವಿಧಾನಸಭಾ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಅವರ ಮನೆಯಿದೆ. ಹೀಗಾಗಿ ಇಲ್ಲಿ ಟೆಸ್ಟ್ ಮಾಡಬೇಡಿ ಎಂದು ತನ್ನ ಸಂಗಡಿಗರನ್ನು ಕರೆದುಕೊಂಡು ಬಂದು ಖ್ಯಾತೆ ತೆಗೆದಿದ್ದರು. ಅಲ್ಲದೆ ಕೋವಿಡ್ ಟೆಸ್ಟ್ ನಿಲ್ಲಿಸುವಂತೆ ಜಗಳ ಮಾಡಿದ್ದರು.

    ಇದೇ ವೇಳೆ ಕೆಟಿಎಸ್ ಪುತ್ರ ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕೆಟಿಎಸ್ ನಡೆದುಕೊಂಡ ರೀತಿ ಕಾನೂನು ಬಾಹಿರ ಹಾಗೂ ಅಕ್ಷಮ್ಯ ಅಪರಾಧವಾಗಿದೆ. ಈ ಸಂಬಂಧ ದೂರು ಪರಿಶೀಲಿಸಿ ಎಫ್‍ಐಆರ್ ದಾಖಲಿಸಲು ನಿರ್ಧಾರ ಮಾಡುವುದಾಗಿ ತಿಳಿಸಿದ್ದರು.

  • ಪೊಲೀಸ್ರ ಜೊತೆ ಲಾಠಿ ಹಿಡಿದು ಜನರ ಮನವೊಲಿಸಿದ ಎಂಎಲ್‍ಸಿ ಗೋಪಾಲಸ್ವಾಮಿ

    ಪೊಲೀಸ್ರ ಜೊತೆ ಲಾಠಿ ಹಿಡಿದು ಜನರ ಮನವೊಲಿಸಿದ ಎಂಎಲ್‍ಸಿ ಗೋಪಾಲಸ್ವಾಮಿ

    ಹಾಸನ: ಕೊರೊನಾ ವಿರುದ್ಧ ಹೋರಾಟಕ್ಕೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಜೊತೆ ಸದಾ ನಾವಿದ್ದೇವೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿ ಪೊಲೀಸರೊಂದಿಗೆ ಲಾಠಿ ಹಿಡಿದು ಸ್ವಲ್ಪ ಸಮಯ ಕೆಲಸ ನಿರ್ವಹಿಸಿದ್ದಾರೆ.

    ಚನ್ನರಾಯಪಟ್ಟಣದಲ್ಲಿ ಪೊಲೀಸರು ಲಾಕ್ ಡೌನ್ ಬಂದೋಬಸ್ತ್ ನಲ್ಲಿ ಬ್ಯುಸಿಯಾಗಿದ್ರು. ಅದೇ ಸಮಯಕ್ಕೆ ಬಂದ ಎಂಎಲ್‍ಸಿ ಗೋಪಾಲಸ್ವಾಮಿ, ಕರ್ತವ್ಯ ನಿರತ ಪೊಲೀಸರ ಯೋಗಕ್ಷೇಮ ವಿಚಾರಿಸಿದ್ರು.

    ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕೆಲವರು ಅನಗತ್ಯವಾಗಿ ವಾಹನಗಳಲ್ಲಿ ಓಡಾಡ್ತಿದ್ದರು. ಇದನ್ನು ನೋಡಿ ಹಗಲಿರುಳು ನಮಗಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ಜೊತೆ ನಾವಿದ್ದೇವೆ ಎಂದು ಕೃತಜ್ಞತೆ ಸಲ್ಲಿಸುವ ಸಲುವಾಗಿ ಎಂಎಲ್‍ಸಿ ಗೋಪಾಲಸ್ವಾಮಿ ಸ್ವತಃ ಪೊಲೀಸ್ ಲಾಠಿ ಹಿಡಿದ ಕೆಲಸಕ್ಕೆ ನಿಂತ್ರು.

    ಎಷ್ಟು ಹೇಳಿದರೂ ಪದೇ ಪದೇ ಅನಗತ್ಯವಾಗಿ ವಾಹನದಲ್ಲಿ ಓಡಾಡುತ್ತಿದ್ದವರಿಗೆ ಅನಾವಶ್ಯಕವಾಗಿ ಓಡಾಡದಂತೆ ಮನವರಿಕೆ ಮಾಡಿದರು. ಎಂಎಲ್‍ಸಿಯೇ ಜೊತೆಗೆ ನಿಂತಾಗ ಪೊಲೀಸರೂ ಉತ್ಸಾಹದಿಂದ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಕಿರಣ್ ಹಾಜರಿದ್ದರು.

    ಎಂಎಲ್‍ಸಿ ಗೋಪಾಲಸ್ವಾಮಿ ಪೊಲೀಸರ ಜೊತೆ ಲಾಠಿ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಂಎಲ್‍ಸಿಯ ಕೆಲಸಕ್ಕೆ ಜನ ಶಹಬ್ಬಾಸ್ ಅಂತಿದ್ದಾರೆ.

  • ಯಾರಿಗೆ ಕೊರೊನಾ ಬಂದ್ರೂ ಸರವಣಗೆ ಬರಲ್ಲ: ಹೊರಟ್ಟಿ

    ಯಾರಿಗೆ ಕೊರೊನಾ ಬಂದ್ರೂ ಸರವಣಗೆ ಬರಲ್ಲ: ಹೊರಟ್ಟಿ

    – ಸರವಣ ಅವ್ರ ಆರೋಗ್ಯ ತಪಾಸಣೆ ಆಗ್ಲೇ ಬೇಕು

    ಬೆಂಗಳೂರು: ಕಲಾಪಕ್ಕೆ ಮಂಗಳವಾರ ಮಾಸ್ಕ್ ಹಾಕಿಕೊಂಡು ಬಂದ ಉದ್ದೇಶವನ್ನು ವಿಧಾನ ಪರಿಷತ್ ಸದಸ್ಯ ಸರವಣ ರಿವೀಲ್ ಮಾಡಿದ್ದಾರೆ.

    ಕಲಾಪದಲ್ಲಿ ಮಾತನಾಡಿದ ಅವರು, ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಿನ್ನೆ ಮಾಸ್ಕ್ ಹಾಕಿಕೊಂಡು ಕಲಾಪಕ್ಕೆ ಬಂದಿದ್ದೆ. ಆದರೆ ಕೆಲವರು ನಿಮಗೆ ಕೊರೊನಾ ಬಂದಿದೆಯಾ ಅಂತ ವಿಧಾನ ಪರಿಷತ್‍ನ ಕೆಲ ಸದಸ್ಯರು ರೇಗಿಸಿದರು ಎಂದು ಹೇಳಿದರು. ಆಗ ಬಸವರಾಜ ಹೊರಟ್ಟಿ ಅವರು, ಯಾರಿಗೆ ಕೊರೊನಾ ಬಂದರೂ ಸರವಣಗೆ ಬರಲ್ಲ ಬಿಡಿ ಎಂದು ಗೇಲಿ ಮಾಡಿದರು.

    ಈ ಮಧ್ಯೆ ಧ್ವನಿಗೂಡಿಸಿದ ತೇಜಸ್ವಿನಿ ರಮೇಶ್, ಸರವಣ ಅವರ ಆರೋಗ್ಯ ತಪಾಸಣೆ ಆಗಲೇ ಬೇಕು. ಅನುಮಾನ ನಿವಾರಣೆಯಾಗಲು ತಪಾಸಣೆ ಅಗತ್ಯ ಎಂದು ಹೇಳಿದರು. ಆಗ ಸರವಣ, ನಾನು ಆರೋಗ್ಯವಾಗಿದ್ದೇನೆ. ನೀವು ಕುಳಿತುಕೊಳ್ಳಿ ಎಂದರು.

    ರಾಜ್ಯದ ಜನರು ಕೊರೊನಾ ಬಗ್ಗೆ ಆತಂಕದಲ್ಲಿ ಇದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಯಾವ ರೀತಿ ಕ್ರಮ ಕೈಗೊಂಡಿದೆ ಎನ್ನುವುದನ್ನು ಚರ್ಚಿಸಲು ಮಾಸ್ಕ್ ಹಾಕಿಕೊಂಡು ಬಂದಿದ್ದೆ. ಆದರೆ ಸದನವನ್ನು ಗಲಾಟೆಗೆ ತಳ್ಳಿದ್ರಿ ಎಂದು ಹೇಳಿದರು.

    ಇದಕ್ಕೂ ಮುನ್ನ ಕೃಷಿ ಸಚಿವ ಬಿ.ಸಿ.ಪಾಟೀಲ್, ಕೊರೊನಾ ವೈರಸ್ ವಿವಿಧ ದೇಶಗಳಿಗೆ ಹರಡಿ ಆತಂಕ ಹೆಚ್ಚಿಸಿದೆ. ಅದು ವಿರೋಧ ಪಕ್ಷ, ಆಡಳಿತ ಪಕ್ಷ ಎಂದು ಭೇದಭಾವ ಮಾಡುವುದಿಲ್ಲ. ನಿಮಗೆ ಸ್ವಲ್ಪ ಜಾಸ್ತಿ ಇದೆ ಎಂದು ವಿಪಕ್ಷ ನಾಯಕ ಕಾಲೆಳೆದಿದ್ದರು.

    ಈ ಮಧ್ಯೆ ಎದ್ದು ನಿಂತ ಸಿ.ಸಿ.ಪಾಟೀಲ್ ಅವರು, ನಿನ್ನೆ ಪ್ರಭಾಕರ್ ಕೋರೆ ಅವರು ಸಿಕ್ಕಿದ್ರು. ಅವರಿಗೆ ಶೇಕ್‍ಹ್ಯಾಂಡ್ ಮಾಡೋದಕ್ಕೆ ಹೋದ್ರೆ ಅವರು, ಬೇಡ ಬೇಡ ಎಂದು ಹೋಗಿ ಬಿಟ್ಟರು. ಅದಕ್ಕೆ ನಾನು, ಯಾಕ್ರಿ ಎಂದು ಪ್ರಶ್ನಿಸಿದೆ. ಆಗ ಕೋರೆ, ಕೊರೊನಾ ಬಂದ್ರೆ ಏನ್ ಮಾಡ್ಲಿ ಅಂತ ಹೇಳಿದರು. ಹೀಗಾಗಿ ನಿಮಗೆ ಕೊರೊನಾ ಆಂತಕ ಹೆಚ್ಚಾಗಿದೆ ಎಂದು ಬಿ.ಸಿ.ಪಾಟೀಲ್ ಅವರಿಗೆ ಟಾಂಗ್ ಕೊಟ್ಟಿದ್ದರು.

  • ವಿಧಾನ ಪರಿಷತ್‍ಗೆ ಲಕ್ಷ್ಮಣ ಸವದಿ ಆಯ್ಕೆ

    ವಿಧಾನ ಪರಿಷತ್‍ಗೆ ಲಕ್ಷ್ಮಣ ಸವದಿ ಆಯ್ಕೆ

    ಬೆಂಗಳೂರು : ನಿರೀಕ್ಷೆಯಂತೆ ವಿಧಾನ ಪರಿಷತ್‍ನ ಒಂದು ಸ್ಥಾನ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿಸಿಎಂ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಚುನಾವಣೆಯಿಂದ ಹಿಂದೆ ಸರಿದಿದ್ದರು. ನೆಪ ಮಾತ್ರಕ್ಕೆ ನಡೆದ ಚುನಾವಣೆಯಲ್ಲಿ 113 ಮತಗಳನ್ನ ಪಡೆದು ಲಕ್ಷ್ಮಣ ಸವದಿ ವಿಧಾನ ಪರಿಷತ್ ಗೆ ಆಯ್ಕೆ ಆಗಿದ್ದಾರೆ. ಈ ಮೂಲಕ ತಮ್ಮ ಡಿಸಿಎಂ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

    ಇಂದು ಬೆಳಗ್ಗೆ 9 ಗಂಟೆಗೆ ಚುನಾವಣೆ ಪ್ರಾರಂಭ ಆಯ್ತು. ಬಿಜೆಪಿಯ ಶಾಸಕರು ಒಬ್ಬೊಬ್ಬರೇ ಆಗಮಿಸಿ ಮತ ಚಲಾವಣೆ ಮಾಡಿದ್ರು. ಅನಾರೋಗ್ಯದಿಂದ ಬಳಲುತ್ತಿರೋ ಶಾಸಕ ರಾಮದಾಸ್ ಹೊರತುಪಡಿಸಿ ಉಳಿದ ಎಲ್ಲಾ ಬಿಜೆಪಿ ಶಾಸಕರು ಮತ ಚಲಾಯಿಸಿದ್ರು. ಪರಿಣಾಮ 113 ಮತಗಳಿಂದ ಬಿಜೆಪಿ ಅಭ್ಯರ್ಥಿ ಸವದಿ ಗೆಲುವು ಸಾಧಿಸಿದರು. ಸಂಖ್ಯಾಬಲ ಇಲ್ಲದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿತ್ತು.

    ಒಟ್ಟಾರೆ 120 ಮತಗಳು ಚಲಾವಣೆ ಆಗಿದ್ದವು. ಅದ್ರಲ್ಲಿ 113 ಮತಗಳು ಸಿಂಧುವಾಗಿದ್ದು, 7 ಮತಗಳು ಅಸಿಂಧುವಾಗಿವೆ. ವಿಶೇಷ ಅಂದ್ರೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸವದಿ ಪರ ಮತ ಚಲಾವಣೆ ಮಾಡಿದ್ರು. ಸಚಿವ ಸಿಟಿ ರವಿ ಜೊತೆ ಆಗಮಿಸಿ ಮತ ಚಲಾಯಿಸಿದ್ರು. ಜೆಡಿಎಸ್ ಪಕ್ಷ ಚುನಾವಣೆಯಿಂದ ದೂರ ಉಳಿದಿದ್ರು ಪಕ್ಷದ ನಿರ್ಣಯದ ವಿರುದ್ಧವೇ ಮತ ಹಾಕಿದ್ರು. ಈ ವೇಳೆ ಮಾತನಾಡಿದ ಜಿಟಿಡಿ ಪಕ್ಷ ಯಾವುದೇ ಸೂಚನೆ ಕೊಟ್ಟಿರಲಿಲ್ಲ. ಶಾಸಕರಾದವರು ವೋಟ್ ಮಾಡಬೇಕು. ಹೀಗಾಗಿ ಡಿಸಿಎಂ ಸವದಿಗೆ ಮತ ಹಾಕಿದ್ದೇನೆ ಎಂದು ತಿಳಿಸಿದರು.

    ಇನ್ನು ವಿಚಿತ್ರ ಅಂದ್ರೆ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಜೆಪಿ ಶಾಸಕ ಪ್ರೀತಂಗೌಡ ಜೊತೆ ಆಗಮಿಸಿ ಮತ ಚಲಾವಣೆ ಮಾಡಿದ್ರು. ಯಾರಿಗೆ ಮತ ಹಾಕಿದ್ದೇನೆ ಅನ್ನೊ ಗುಟ್ಟು ಬಿಟ್ಟುಕೊಡಲಿಲ್ಲ. ಇನ್ನುಳಿದಂತೆ ಪಕ್ಷೇತರ ಶಾಸಕ ಸಚಿವ ನಾಗೇಶ್, ಬಿಎಸ್ಪಿ ಶಾಸಕ ಮಹೇಶ್ ಮತ ಚಲಾವಣೆ ಮಾಡಿದ್ರು. ಅಂತಿಮವಾಗಿ 120 ಮತಗಳು ಚಲಾವಣೆ ಆಗಿ, 113 ಮತಗಳು ಸವದಿ ಅವ್ರಿಗೆ ಬಿದ್ದು ಗೆಲುವಿನ ನಗೆ ಬೀರಿದರು. ಗೆಲುವಿನ ಬಳಿಕ ಮಾತನಾಡಿದ ಅಭ್ಯರ್ಥಿ ಲಕ್ಷ್ಮಣ ಸವದಿ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

  • ನೀನ್ ಯಾವ ಊರ ಲೀಡರ್ ಹೋಗಲೇ- ಗ್ರಾಮಸ್ಥರಿಗೆ ಎಂಎಲ್‍ಸಿ ತೇಜಸ್ವಿನಿ ಅವಾಜ್

    ನೀನ್ ಯಾವ ಊರ ಲೀಡರ್ ಹೋಗಲೇ- ಗ್ರಾಮಸ್ಥರಿಗೆ ಎಂಎಲ್‍ಸಿ ತೇಜಸ್ವಿನಿ ಅವಾಜ್

    ಚಿಕ್ಕಬಳ್ಳಾಪುರ: ಮಾಜಿ ಸಂಸದೆ ಹಾಗೂ ಹಾಲಿ ಎಂಎಲ್‍ಸಿ ತೇಜಸ್ವಿನಿ ರಮೇಶ್ ತಮ್ಮ ತವರೂರಿನ ಗ್ರಾಮಸ್ಥರ ಮೇಲೆಯೇ ದರ್ಪ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ದೊಡ್ಡರಾಯಪ್ಪನಹಳ್ಳಿ ಗ್ರಾಮದ ತೇಜಸ್ವಿನಿ ರಮೇಶ್ ಕಳೆದ 6 ತಿಂಗಳಿಂದ ತವರೂರಿನಲ್ಲೇ ನೆಲೆಸಿದ್ದು, ಗ್ರಾಮದಲ್ಲಿ ಶಾಲೆಯೊಂದನ್ನ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮದಲ್ಲಿನ ದಲಿತರಿಗೆ ಸೇರಿದ ಜಾಗವನ್ನ ಮಂಜೂರು ಮಾಡಿಸಿಕೊಂಡು ಶಾಲೆಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಇದಕ್ಕೆ ಸರ್ಕಾರಿ ಅನುದಾನ ಒಂದು ಕೋಟಿ ರೂಪಾಯಿ ಬಳಸಿಕೊಂಡು ಶಾಲೆ ನಿರ್ಮಾಣ ಮಾಡುತ್ತಿರುವುದಾಗಿ ಗ್ರಾಮಸ್ಥರಿಗೆ ತೇಜಸ್ವಿನಿ ರಮೇಶ್ ತಿಳಿಸಿದ್ದಾರಂತೆ.

    ಸದ್ಯ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿರುವ ತೇಜಸ್ವಿನಿ ರಮೇಶ್, ಮಂಜೂರಾದ ಜಾಗದ ಜೊತೆಗೆ ದಲಿತರ ಕೇರಿಗೆ ಇದ್ದ ರಸ್ತೆಯನ್ನ ಸೇರಿಸಿ ಶಾಲಾ ಕಟ್ಟಡ ಕಟ್ಟಲು ಮುಂದಾಗಿದ್ದಾರಂತೆ. ಇದರಿಂದ ಅಸಮಾಧಾನಗೊಂಡಿರುವ ಗ್ರಾಮದ ಕೆಲವರು, ಇದು ನಮ್ಮದೇ ಜಾಗ ಆದರೆ ಶಾಲೆಯ ನಿರ್ಮಾಣಕ್ಕೆ ಅಂದಿದ್ದಕ್ಕೆ ಬಿಟ್ಟುಕೊಟ್ವಿ. ಈಗ ನಮಗೆ ಓಡಾಡೋಕೆ ಜಾಗ ಬಿಡದೆ ಶಾಲೆ ಕುಟ್ಟುತ್ತಿದ್ರೆ ಹೇಗೆ? ನಮ್ಮ ಜಾಗ ನಮಗೆ ಬಿಟ್ಟುಬಿಡಿ ಶಾಲೆ ಕಟ್ಟೋದು ಬೇಡ ಅಂತ ವಾಗ್ವಾದ ನಡೆಸಿದ್ದಾರೆ.

    ಈ ವೇಳೆ ಕೆಲ ಗ್ರಾಮಸ್ಥರು ಗ್ರಾಮದಲ್ಲಿ ಶಾಲೆ ನಿರ್ಮಾಣವಾಗಲಿ ಅಂತ ಎಂಎಲ್‍ಸಿ ತೇಜಸ್ವಿನಿ ರಮೇಶ್ ಪರ ಮಾತನಾಡಿದ್ರೇ, ಇನ್ನೂ ಕೆಲವರು ನಮಗೆ ಓಡಾಡೋಕೆ ರಸ್ತೆ ಇಲ್ಲವಾದರೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ತೇಜಸ್ವಿನಿ ರಮೇಶ್, ಕಾಮಗಾರಿಗೆ ಅಡ್ಡಿಪಡಸಲು ಮುಂದಾದ ಮೂವರ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್ ಟಿವಿ, ಎಂಎಲ್‍ಸಿ ತೇಜಸ್ವಿನಿ ರಮೇಶ್ ರವರಿಗೆ ಕರೆ ಮಾಡಿದ್ರೆ ಕರೆ ಸ್ವೀಕರಿಸಿಲ್ಲ. ಸದ್ಯ ತೇಜಸ್ವಿನಿ ರಮೇಶ್ ವಿರುದ್ಧ ತಮ್ಮದೇ ತವರೂರಿನ ಕೆಲ ಗ್ರಾಮಸ್ಥರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಜೆಡಿಎಸ್‍ನಲ್ಲಿ ಎಂಎಲ್‍ಸಿ ಸ್ಥಾನಕ್ಕೆ ಫೈಟ್- ನಿಷ್ಠರಿಗೆ ಕೊಡಿ ಅಂತಿದ್ದಾರೆ ಕಾರ್ಯಕರ್ತರು

    ಜೆಡಿಎಸ್‍ನಲ್ಲಿ ಎಂಎಲ್‍ಸಿ ಸ್ಥಾನಕ್ಕೆ ಫೈಟ್- ನಿಷ್ಠರಿಗೆ ಕೊಡಿ ಅಂತಿದ್ದಾರೆ ಕಾರ್ಯಕರ್ತರು

    ಬೆಂಗಳೂರು: ಜೂನ್‍ನಲ್ಲಿ ಖಾಲಿಯಾಗಲಿರುವ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಜೆಡಿಎಸ್‍ನಲ್ಲಿ ಬಿಗ್ ಫೈಟಿಂಗ್ ಪ್ರಾರಂಭ ಆಗಿದೆ. ಒಂದು ಸ್ಥಾನಕ್ಕೆ ಹಲವರು ಆಕಾಂಕ್ಷಿಗಳು ಇದ್ದು, 6 ತಿಂಗಳ ಮುಂಚೆಯೇ ಸ್ಥಾನಕ್ಕಾಗಿ ಲಾಬಿ ಆರಂಭ ಮಾಡಿದ್ದಾರೆ. ತಮಗೆ ಸ್ಥಾನ ಕೊಡಿ ಅಂತ ವರಿಷ್ಠ ದೇವೇಗೌಡರಿಗೆ ಈಗಿಂದನೇ ಒತ್ತಡಗಳನ್ನ ಹಾಕೋ ಕೆಲಸಗಳು ಜೆಡಿಎಸ್‍ನಲ್ಲಿ ಜೋರಾಗಿ ನಡೆಯುತ್ತಿದೆ.

    ಸದ್ಯ ಟಿ.ಎ.ಶರವಣ ಪರಿಷತ್ ಸದಸ್ಯರಾಗಿದ್ದಾರೆ. ಜೂನ್‍ಗೆ ಇವರ ಅವಧಿ ಮುಕ್ತಾಯವಾಗಲಿದೆ. ವಿಧಾನ ಸಭೆಯಿಂದ ಪರಿಷತ್‍ಗೆ ಆಯ್ಕೆಯಾಗಲಿರುವ ಈ ಸ್ಥಾನಕ್ಕೆ ಅಗತ್ಯವಾದ ಸಂಖ್ಯಾಬಲ ಜೆಡಿಎಸ್‍ಗೆ ಇದೆ. ಹೀಗಾಗಿ ಒಂದು ಸ್ಥಾನ ನೀರಾಯಾಸವಾಗಿ ಜೆಡಿಎಸ್‍ಗೆ ಸಿಗಲಿದೆ. ಈ ಒಂದು ಸ್ಥಾನಕ್ಕೆ ಈಗಾಗಲೇ ಅನೇಕ ನಾಯಕರು, ಮುಖಂಡರು ಲಾಬಿ ಆರಂಭ ಮಾಡಿದ್ದಾರೆ. ಶರವಣ ಅವರು ಮತ್ತೊಮ್ಮೆ ಪರಿಷತ್‍ಗೆ ಆಯ್ಕೆಯಾಗೋ ಆಸೆ ವ್ಯಕ್ತಪಡಿಸಿದ್ದಾರೆ. ಪಕ್ಷ ಮತ್ತೊಂದು ಅವಕಾಶ ಕೊಟ್ಟರೆ ಪಕ್ಷದ ಕೆಲಸ ಮಾಡ್ತೀನಿ ಅಂತ ಹೇಳ್ತಿದ್ದಾರೆ. ಶರವಣ ಜೊತೆಗೆ ಬೆಂಗಳೂರು ಘಟಕ ಅಧ್ಯಕ್ಷ ಪ್ರಕಾಶ್, ಮಾಜಿ ಶಾಸಕ ಕೋನರೆಡ್ಡಿ ಸೇರಿ ಹಲವರು ರೇಸ್ ನಲ್ಲಿ ಇದ್ದಾರೆ.

    ಪಕ್ಷದ ನಿಷ್ಠರಿಗೆ ಸ್ಥಾನ ಕೊಡಿ:
    ಒಂದು ಕಡೆ ಪರಿಷತ್ ಸ್ಥಾನದ ಆಕಾಂಕ್ಷಿಗಳು ಲಾಬಿ ಪ್ರಾರಂಭ ಮಾಡ್ತಿದ್ರೆ, ಮತ್ತೊಂದು ಕಡೆ ಪಕ್ಷದ ಕಾರ್ಯಕರ್ತರು ಹೊಸ ಡಿಮ್ಯಾಂಡ್ ವರಿಷ್ಠರ ಮುಂದೆ ಇಡೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇಂತಹ ಸನ್ನಿವೇಶ ಬಂದ್ರೆ ಜೆಡಿಎಸ್‍ನಲ್ಲಿ ಹೊರಗಡೆಯಿಂದ ಬೇರೆ ಅವರು ಬಂದು ಆಯ್ಕೆ ಆಗುತ್ತಾರೆ ಅನ್ನೋ ಆರೋಪ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೊರಗಡೆಯಿಂದ ಕರೆತಂದು ಈ ಬಾರಿ ಸ್ಥಾನ ಕೊಡಬಾರದು ಅಂತ ಕಾರ್ಯಕರ್ತರು ಷರತ್ತು ಹಾಕಿದ್ದಾರೆ. ಪಕ್ಷದಲ್ಲಿ ದುಡಿಯೋರಿಗೆ, ಪಕ್ಷದ ಕಾರ್ಯಕರ್ತರಿಗೆ ಪರಿಷತ್ ಸ್ಥಾನ ಕೊಡಬೇಕು ಅಂತ ವರಿಷ್ಠರಿಗೆ ಅಹವಾಲು ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ಹೊರಗಡೆ ಅವರಿಗೆ ಕೊಟ್ರೆ ನಮ್ಮ ದಾರಿ ನಾವು ನೋಡಿಕೊಳ್ತೀವಿ ಅಂತ ವರಿಷ್ಠರಿಗೆ ಎಚ್ಚರಿಕೆ ಸಂದೇಶವನ್ನು ಕೊಟ್ಟಿದ್ದಾರೆ.

    ಲಾಬಿ, ಒತ್ತಡ, ಆಕಾಂಕ್ಷಿಗಳು ಯಾರೇ ಇರಲಿ. ಜೆಡಿಎಸ್‍ನಲ್ಲಿ ಏನೇ ತೀರ್ಮಾನ ಆಗಬೇಕಾದರೂ ಪದ್ಮನಾಭ ನಗರವೇ ಹೈಕಮಾಂಡ್. ದೇವೇಗೌಡರ ಮಾತೇ ಶಾಸನ. ಅವರ ಮಾತು ಯಾರು ಮಿರೋಕೆ ಸಾಧ್ಯವಿಲ್ಲ. ಹೀಗಾಗಿ ಆಕಾಂಕ್ಷಿಗಳನ್ನ ಸುಧಾರಿಸಿಕೊಂಡು, ಕಾರ್ಯಕರ್ತರ ಡಿಮಾಂಡನ್ನು ಪೂರೈಸಬೇಕಾದ ತಂತ್ರಗಾರಿಗೆ ದೇವೇಗೌಡರು ಮಾಡಬೇಕು. ರಾಜಕೀಯ ಚತುರ ದೇವೇಗೌಡರು ಈ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ ಎಂಬುದೇ ಸದ್ಯದ ಕುತೂಹಲವಾಗಿದೆ.

  • ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಉಚ್ಚಾಟನೆ

    ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಉಚ್ಚಾಟನೆ

    ಬೆಂಗಳೂರು: ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

    ಪಕ್ಷ ವಿರೋಧಿ ಚಟುವಟಿಕೆ, ವರಿಷ್ಠರ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಅಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

    ಈ ಹಿಂದೆ ರಾಮನಗರದಲ್ಲಿ ಮಾತನಾಡಿದ್ದ ಪುಟ್ಟಣ್ಣ ಅವರು, ನಾನು ಜೆಡಿಎಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಆದರೆ ಮುಂದಿನ ನಡೆ ಗೊತ್ತಿಲ್ಲ. 2-3 ಜನ ಹೊರತುಪಡಿಸಿದರೆ ಉಳಿದೆಲ್ಲ ಪರಿಷತ್ ಸದಸ್ಯರು ಈ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಎಲ್ಲರೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ಜೆಡಿಎಸ್ ಬಿಡಲು ಕಾರಣ ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಅದಕ್ಕೂ ಸಮಯ ಬರುತ್ತದೆ ಎಂದಿದ್ದರು.

    ದೇವೇಗೌಡರು ಹಿರಿಯರು ಅವರ ಬಗ್ಗೆ ಗೌರವವಿದೆ. ಚಲುವರಾಯಸ್ವಾಮಿ ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದಾರೆ. ಅಧಿಕಾರಾವಧಿ ಇರುವುದರಿಂದ ನಾವು ತೀರ್ಮಾನ ತೆಗೆದುಕೊಳ್ಳಲು 2020ರ ವರೆಗೆ ಸಮಯವಿದೆ. ಆದರೆ ಈಗ ಎಲ್ಲರೂ ಸೇರಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆವು. ಹೀಗಾಗಿ ಈಗಲೇ ಬಹುತೇಕ ಎಲ್ಲ ಎಂಎಲ್‌ಸಿಗಳೂ ಸೇರಿ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುತ್ತಿದ್ದಾರೆ. ಈ ಕುರಿತು ಹೊರಟ್ಟಿಯವರು ಮಾತನಾಡಿದ್ದಾರೆ. ಇಂದು ಚರ್ಚೆ ಮಾಡೋಣ ಎಂದಿದ್ದರು. ನೀವು ತೀರ್ಮಾನ ಮಾಡಿ ನಾನು ಅದಕ್ಕೆ ಬದ್ಧ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

    ಹಾಲಿ ಎಂಎಲ್‌ಸಿಗಳು ಒಮ್ಮೆ ತೀರ್ಮಾನ ಮಾಡಿದ್ದಾರೆ ಮತ್ತೊಮ್ಮೆ ಸೇರಲು ನಿರ್ಧರಿಸಿದ್ದಾರೆ. ಕೆಲವರಿಗೆ ಯಾರಿಗೆ ನೋವಾದರೂ, ಯಾರು ಸತ್ತರೂ ಏನೂ ಅನಿಸುವುದಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೆಸರನ್ನು ಹೇಳದೆ ಟಾಂಗ್ ನೀಡಿದ್ದರು.

  • ನಮ್ಮ ಬಂಡಾಯ ಬಹುತೇಕ ಶಮನವಾಗಿದೆ – ಬಸವರಾಜ್ ಹೊರಟ್ಟಿ

    ನಮ್ಮ ಬಂಡಾಯ ಬಹುತೇಕ ಶಮನವಾಗಿದೆ – ಬಸವರಾಜ್ ಹೊರಟ್ಟಿ

    ಹುಬ್ಬಳ್ಳಿ: ನಮ್ಮ ಬಂಡಾಯ ಬಹುತೇಕ ಶಮನವಾಗಿದೆ. ನಾವೆಲ್ಲ ದೇವೇಗೌಡರನ್ನು ಭೇಟಿ ಮಾಡಿದ್ದೇವೆ, ನಮ್ಮ ಅಸಮಾಧಾನದ ಕುರಿತು ತಿಳಿಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬಂಡಾಯ ಬಹುತೇಕ ಶಮನವಾಗಿದೆ. ನಾವೆಲ್ಲ ದೇವೇಗೌಡರನ್ನು ಭೇಟಿ ಮಾಡಿದ್ದೇವೆ. ನಾವು ನಡೆಸಿದ ಸಭೆಯ ಬಗ್ಗೆ ತಿಳಿಸಿದ್ದೇವೆ. ದೇವೇಗೌಡರು ಸಹ ನವೆಂಬರ್ 6-7ಕ್ಕೆ ಮತ್ತೊಂದು ಸಭೆ ನಡೆಸುವುದಾಗಿ ಹೇಳಿದ್ದಾರೆ. ಈಗ ನಮ್ಮದು ಸರ್ಕಾರನೂ ಏನೂ ಇಲ್ಲ. ಮಂತ್ರಿ ಮಾಡಿ ಬೋರ್ಡ್ ಅಧ್ಯಕ್ಷರನ್ನು ಮಾಡಿ ಎಂದು ಕೇಳಲು ಸಾಧ್ಯವಿಲ್ಲ ಎಂದರು.

    ನಮ್ಮ ಬಗ್ಗೆ ಕಾಳಜಿ ಮಾಡಿದ್ದಾರೆ. ನಮ್ಮ ಬಂಡಾಯ ಸ್ವಲ್ಪ ಶಮನವಾಗಿದೆ. ನಮ್ಮ ಬೇಡಿಕೆಗಳು ಏನೂ ದೊಡ್ಡದಾಗಿಲ್ಲ. ರೇವಣ್ಣ-ಕುಮಾರಸ್ವಾಮಿ ಒಮ್ಮೊಮ್ಮೆ ಒಬ್ಬಬ್ಬರನ್ನು ಒಮ್ಮೆಲೆ ಮೇಲೆ ಎಬ್ಬಿಸಿ ಬಿಡುತ್ತಾರೆ. ಜೆಡಿಎಸ್‍ನಿಂದ ಏರ್ಪಡಿಸಿರುವ ವಿದೇಶ ಪ್ರವಾಸಕ್ಕೆ ನಾವು 11 ಜನ ಸಹ ಬರುವುದಿಲ್ಲ ಎಂದು ತಿಳಿಸಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಇರುವಾಗ ವಿದೇಶ ಪ್ರವಾಸ ಒಳ್ಳೆಯದಲ್ಲ ಎಂದು ತಿಳಿಸಿದ್ದೇವೆ ಎಂದು ಹೇಳಿದರು.

    ಸಚಿವ ಜಗದೀಶ್ ಶೆಟ್ಟರ್ ಆಗಲಿ ಬೇರೆ ಯಾರೇ ಆಗಲಿ ವಿದೇಶ ಪ್ರವಾಸಕ್ಕೆ ಹೋಗುವುದು ಸೂಕ್ತವಲ್ಲ. ಅಲ್ಲದೆ ಈ ಹಿಂದೆ ನಾನು ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ರಾಜ್ಯಕ್ಕೆ ಪ್ರತ್ಯೇಕ ಧ್ವಜ ವಿವಾದಕ್ಕೆ ಸಿಲುಕಬೇಡಿ ಎಂದು ಹೇಳಿದ್ದೆ. ಆದರೂ ಅವರು ಮಾಡಿದರು. ಕನ್ನಡದ ಧ್ವಜದ ಬಗ್ಗೆ ವಿನಾಕಾರಣ ಚರ್ಚೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.