Tag: MLC C.M Lingappa

  • ಸರ್ಕಾರಿ ಕಚೇರಿಗಳಲ್ಲಿ 100ರ ನೋಟಿಗೆ ಬೆಲೆಯಿಲ್ಲ, ಪಿಂಕ್ ನೋಟ್‍ಗೆ ಮಾತ್ರ ಬೆಲೆ: ಎಂಎಲ್‍ಸಿ ಸಿ.ಎಂ ಲಿಂಗಪ್ಪ

    ಸರ್ಕಾರಿ ಕಚೇರಿಗಳಲ್ಲಿ 100ರ ನೋಟಿಗೆ ಬೆಲೆಯಿಲ್ಲ, ಪಿಂಕ್ ನೋಟ್‍ಗೆ ಮಾತ್ರ ಬೆಲೆ: ಎಂಎಲ್‍ಸಿ ಸಿ.ಎಂ ಲಿಂಗಪ್ಪ

    ರಾಮನಗರ: ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ 100 ರೂ. ನೋಟಿಗೆ ಬೆಲೆಯೇ ಇಲ್ಲ, ಏನಿದ್ರೂ ಪಿಂಕ್ ನೋಟಿಗೆ ಬೆಲೆ. ಇಂತಹ ವಿಚಾರವಾಗಿ ಕ್ಲೀನಿಂಗ್ ಕೆಲಸವನ್ನು ಡಿಸಿಎಂ ಅಶ್ವಥ್ ನಾರಾಯಣ ಅವರು ಮಾಡಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ ಟಾಂಗ್ ನೀಡಿದ್ದಾರೆ.

    ಡಿ.9ರ ನಂತರ ರಾಮನಗರದಲ್ಲಿ `ಕ್ಲೀನಿಂಗ್’ ಆರಂಭಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ. ಮೋದಿ ಸರ್ಕಾರ ಸ್ವಚ್ಛ ಭಾರತ ಕಾರ್ಯಕ್ರಮ ಆರಂಭಿಸಿ ನಾಲ್ಕು ವರ್ಷವಾಯಿತು. ಅದನ್ನು ಜಿಲ್ಲೆಯಲ್ಲಿ ಅವರು ಮುಂದುವರಿಸುವುದಾದರೆ ನಾವೇ ಅವರಿಗೆ ಪೊರಕೆ, ಫಿನಾಯಿಲ್ ಕೊಡುತ್ತೇವೆ. ಸ್ವಚ್ಛತಾ ಕಾರ್ಯಕ್ಕೆ ಪಂಚಾಂಗದಲ್ಲಿ ಒಳ್ಳೆಯ ದಿನವನ್ನು ಹುಡುಕಿ ಕೊಡುತ್ತೇವೆ. ಅದನ್ನು ಬಿಟ್ಟು ಸಚಿವರು ಡಿ.ಕೆ ಸಹೋದರರ ವಿರುದ್ಧ ವೈಯಕ್ತಿಕ ಟೀಕೆ ಮಾಡಿದರೆ ಅದನ್ನು ಸಹಿಸುವುದಿಲ್ಲ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

    ರಾಮನಗರದಲ್ಲಿ ಈಗ ಇರುವ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಎಸ್‍ಪಿ ಎಲ್ಲರೂ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವರ್ಗಾವಣೆ ಆಗಿ ಬಂದವರೇ. ಇದರಲ್ಲಿ ಡಿ.ಕೆ ಸಹೋದರರ ಕೈವಾಡ ಏನೂ ಇಲ್ಲ. ಇವರನ್ನು ಜಿಲ್ಲೆಗೆ ಹಾಕುವಂತೆ ಅವರೇನು ಶಿಫಾರಸು ಮಾಡಿಲ್ಲ. ಹೀಗಾಗಿ ಯಾವ ವ್ಯವಸ್ಥೆಯನ್ನು ಸಚಿವರು ಈಗ ಕ್ಲೀನ್ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

    ಎಸ್‍ಪಿ ಅನೂಪ್ ಶೆಟ್ಟಿ ಬಗ್ಗೆ ಡಿಕೆ ಬ್ರದರ್ಸ್ ಹೇಳಿಕೆಯನ್ನು ನಾನು ಬೆಂಬಲಿಸುವುದಿಲ್ಲ. ಅಲ್ಲದೇ ಅದನ್ನು ಸಮರ್ಥನೆ ಕೂಡ ಮಾಡಿಕೊಳ್ಳುವುದಿಲ್ಲ. ಅದಕ್ಕೆ ಅವರೇ ಸಮರ್ಥನೆ ಮಾಡಿಕೊಳ್ಳುವಷ್ಟು ಸಮರ್ಥರಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಕೆಲವು ಅಧಿಕಾರಿಗಳಿಂದ ರೈತರಿಗೆ ಅನ್ಯಾಯ ಆಗುತ್ತಿದೆ. ಬಿಡದಿಯ ಎಂ. ಕರೇನಹಳ್ಳಿಯಲ್ಲಿನ ತೋಟಿಗಳ ಏಳು ಕುಟುಂಬಕ್ಕೆ 10 ಎಕರೆ ಭೂಮಿ ಹಂಚಿಕೆ ಮಾಡಲು ರಾಮನಗರದ ಅಧಿಕಾರಿಯೊಬ್ಬರು 10 ಲಕ್ಷ ರೂ. ಲಂಚ ಕೇಳುತ್ತಿದ್ದಾರೆ. ಇಂತಹವರನ್ನು ಬೇಕಿದ್ದರೆ ಸ್ವಚ್ಛ ಮಾಡಿ ಎಂದರು.

    ಇದೇ ವೇಳೆ ಕನಕಪುರ ಮೆಡಿಕಲ್ ಕಾಲೇಜು ವಿಚಾರದ ಬಗ್ಗೆ ಮಾತನಾಡಿ, ಡಿಕೆಶಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ರಾಮನಗರಕ್ಕೆ ಈಗಾಗಲೇ ರಾಜೀವ್‍ಗಾಂಧಿ ವಿ.ವಿ. ಘೋಷಿಸಿರುವ ಕಾರಣ ಜಿಲ್ಲೆಯ ಕೋಟಾ ಅಡಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ನೀಡುವುದು ಎಂದು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲೇ ತೀರ್ಮಾನ ಆಗಿತ್ತು. ಬಿಜೆಪಿ ಸರ್ಕಾರ ಇಲ್ಲಿಂದ ಕಿತ್ತು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದು ಸರಿಯಲ್ಲ. ಇದರ ವಿರುದ್ಧ ಹೋರಾಟ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರ ಜೊತೆಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರೂ ಹೋರಾಟಕ್ಕೆ ನಿಲ್ಲಲಿದ್ದೇವೆ’ ಎಂದು ಲಿಂಗಪ್ಪ ಎಚ್ಚರಿಸಿದರು.