Tag: MLA Venkatappa Nayak

  • ನಿನ್ನೆ ಉದ್ಘಾಟನೆಯಾಗಿದ್ದ ಆಸ್ಪತ್ರೆ ಇಂದು ಬಂದ್

    ನಿನ್ನೆ ಉದ್ಘಾಟನೆಯಾಗಿದ್ದ ಆಸ್ಪತ್ರೆ ಇಂದು ಬಂದ್

    ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದ 60 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಾವುದೇ ಕನಿಷ್ಠ ಸೌಲಭ್ಯ ಹಾಗೂ ಸಿಬ್ಬಂದಿಯಿಲ್ಲದೆ ಉದ್ಘಾಟನೆಯಾದ ಒಂದೇ ದಿನಕ್ಕೆ ಬಾಗಿಲು ಮುಚ್ಚಿದೆ.

    ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಅವರು ಸಚಿವ ಹಾಲಪ್ಪ ಆಚಾರ್ ಅವರನ್ನು ಕರೆಸಿ ತರಾತುರಿಯಲ್ಲಿ ಉದ್ಘಾಟನೆ ಮಾಡಿಸಿದ್ದರು. ಆಸ್ಪತ್ರೆಗೆ 12 ವೈದ್ಯರು ಸೇರಿದಂತೆ 50 ಸಿಬ್ಬಂದಿ ಅಗತ್ಯವಿದೆ. ಜೊತೆಗೆ ಆಸ್ಪತ್ರೆಯಲ್ಲಿ ಅಗತ್ಯವಿರುವ ಉಪಕರಣಗಳನ್ನು ತರಿಸಬೇಕು. ಆದರೆ ಇದ್ಯಾವುದರ ಬಗ್ಗೆಯೂ ಆಸಕ್ತಿ ತೋರದ ಶಾಸಕ ವೆಂಕಟಪ್ಪ ನಾಯಕ್ ಉದ್ಘಾಟನೆಗೆ ಮಾತ್ರ ಆಸಕ್ತಿ ತೋರಿದ್ದಾರೆ.

    ಜನವರಿ 11 ರಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಕರೆಸಿ ಉದ್ಘಾಟನೆ ಮಾಡಿಸಿದ್ದಾರೆ. ಕಟ್ಟಡ ನಿರ್ಮಾಣವಾಗಿ ಮೂರುವರೆ ವರ್ಷ ಬಳಿಕ ಯಾವುದೇ ಸೌಲಭ್ಯಗಳಿಲ್ಲದೆ ಉದ್ಘಾಟನೆಯಾದ ಆಸ್ಪತ್ರೆಗೆ ಒಂದೇ ದಿನಕ್ಕೆ ಬೀಗ ಹಾಕಲಾಗಿದೆ. ಇದನ್ನೂ ಓದಿ: ಅಶ್ಲೀಲ ಪದ ಬಳಸಿ ನಿಂದನೆ – ಸಭೆಯಲ್ಲಿ ಕಾಮನ್ ಸೆನ್ಸ್ ಮರೆತ ಜೆಡಿಎಸ್ ಶಾಸಕ

    ಆಸ್ಪತ್ರೆಗೆ ವೈದ್ಯರು ಹಾಗೂ ಸಿಬ್ಬಂದಿ ನೇಮಕ ವಿಚಾರಕ್ಕೆ ಪ್ರಶ್ನಿಸಿದಾಗ ಮಾಧ್ಯಮದವರ ಮೇಲೆ ಎಗರಾಡಿದ್ದ ಶಾಸಕ ವಿವಾದಕ್ಕೀಡಾಗಿದ್ದರು. ಕೋವಿಡ್ ಮೂರನೇ ಅಲೆ ವೇಳೆ ಅನುಕೂಲಕ್ಕೆ ಬರಬೇಕಿದ್ದ ಆಸ್ಪತ್ರೆ ದುಸ್ಥಿತಿಗೆ ಈಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪುಷ್ಪ ಸಿನಿಮಾ ಮಾದರಿಯಲ್ಲಿ ದರೋಡೆ – ಇಬ್ಬರು ಹೆಡ್ ಕಾನ್‍ಸ್ಟೇಬಲ್ ಸಸ್ಪೆಂಡ್

  • ಶಾಸಕರ ಮಳೆ ಹಾನಿ ವೀಕ್ಷಣೆ ವೇಳೆಯೇ ಸೇತುವೆ ಕುಸಿತ- ಗ್ರಾಮಸ್ಥರಿಬ್ಬರಿಗೆ ತೀವ್ರ ಗಾಯ

    ಶಾಸಕರ ಮಳೆ ಹಾನಿ ವೀಕ್ಷಣೆ ವೇಳೆಯೇ ಸೇತುವೆ ಕುಸಿತ- ಗ್ರಾಮಸ್ಥರಿಬ್ಬರಿಗೆ ತೀವ್ರ ಗಾಯ

    ರಾಯಚೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಯಾದ ಹಳ್ಳದ ಸೇತುವೆಯನ್ನು ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ವೀಕ್ಷಿಸುತ್ತಿದ್ದರು. ಇದೇ ವೇಳೆ ಪುನಃ ಸೇತುವೆ ಕುಸಿದಿದ್ದು, ಗ್ರಾಮಸ್ಥರಿಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

    ಸಿರವಾರ ತಾಲೂಕಿನ ನುಗಡೋಣಿ ಹೊಸೂರಿನಲ್ಲಿ ಘಟನೆ ನಡೆದಿದ್ದು, ಹನುಮಂತ ಹಾಗೂ ಶಿವರಾಮರೆಡ್ಡಿ ಗಾಯಗೊಂಡ ಗ್ರಾಮಸ್ಥರು. ಸೆಪ್ಟೆಂಬರ್ 26 ರಂದು ಸುರಿದ ಭಾರೀ ಮಳೆಗೆ ಸೇತುವೆ ಅರ್ಧ ಕುಸಿದು ವಾಹನ ಸಂಚಾರ ಬಂದ್ ಆಗಿತ್ತು. ಸಿರವಾರದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಬಂದ್ ಆಗಿರುವುದರಿಂದ ಜನ ಪರದಾಡುತ್ತಿದ್ದಾರೆ. ಹೀಗಾಗಿ ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಮಳೆ ಹಾನಿ ಹಾಗೂ ಸೇತುವೆ ವೀಕ್ಷಣೆಗೆ ಬಂದಿದ್ದರು. ಶಾಸಕರು ಬಂದಿದ್ದರಿಂದ ಹೆಚ್ಚು ಜನ ಸೇರಿದ್ದರು ಹೀಗಾಗಿ ಶಿಥಿಲಗೊಂಡ ಸೇತುವೆ ಭಾರ ತಾಳದೆ ಇನ್ನಷ್ಟು ಕುಸಿದು ಬಿದ್ದಿದೆ.

    ಈ ವೇಳೆ ಗ್ರಾಮಸ್ಥರಿಬ್ಬರು ಕುಸಿದ ಸೇತುವೆ ಒಳಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ವತಃ ತಮ್ಮ ಕಾರಿನಲ್ಲೆ ಆಸ್ಪತ್ರೆಗೆ ದಾಖಲಿಸುವ ಮೂಲಕ ಶಾಸಕ ವೆಂಕಟಪ್ಪ ನಾಯಕ್ ಮಾನವೀಯತೆ ಮೆರೆದಿದ್ದಾರೆ. ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತ ಹಾಗೂ ಶಿವರಾಮರೆಡ್ಡಿ ಚೇತರಿಸಿಕೊಳ್ಳುತ್ತಿದ್ದಾರೆ.