Tag: MLA Umesh Katti

  • ಆನ್‌ಲೈನ್‌ನಲ್ಲಿ ಆಯ್ಕೆ ನೀಡಿ – ಹಲಾಲ್ ವಿರುದ್ಧ ಕತ್ತಿಗೆ ಸಂಬರಗಿ ಪತ್ರ

    ಆನ್‌ಲೈನ್‌ನಲ್ಲಿ ಆಯ್ಕೆ ನೀಡಿ – ಹಲಾಲ್ ವಿರುದ್ಧ ಕತ್ತಿಗೆ ಸಂಬರಗಿ ಪತ್ರ

    ಬೆಂಗಳೂರು: ಹಲಾಲ್ ಮಾಂಸವನ್ನು ಖರೀದಿಸದಂತೆ ಹಿಂದೂ ಸಂಘಟನೆಗಳು ಅಭಿಯಾನ ಮಾಡುತ್ತಿರುವ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿಗೆ ಪತ್ರ ಬರೆದಿದ್ದಾರೆ.

    ಬಹುಸಂಖ್ಯಾತ ಜನರು ಹಲಾಲ್ ಆಚರಣೆಯ ಅನುಯಾಯಿಗಳಲ್ಲದ ಕಾರಣ, ಇದು ಗ್ರಾಹಕರ ಹಕ್ಕುಗಳ ಉದ್ದೇಶಪೂರ್ವಕ ಉಲ್ಲಂಘನೆ ಮತ್ತು ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ. ಹೀಗಾಗಿ ಆನ್‌ಲೈನ್‌ನಲ್ಲಿ ಮಾಂಸ ಖರೀದಿಯ ಆಯ್ಕೆಯನ್ನು ಕೊಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಹಲಾಲ್ ಅಥವಾ ಶರಿಯಾ ಉತ್ಪನ್ನಗಳ ಹೆಸರಿನಲ್ಲಿ ಸಾಮಾನ್ಯ ಗ್ರಾಹಕರ ಮೇಲೆ ಒಂದು ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಬಲವಂತವಾಗಿ ಹೇರುವ ಪ್ರವೃತ್ತಿಯನ್ನು ನಾವು ಗಮನಿಸುತ್ತಿರುವುದು ಆತಂಕ ಮತ್ತು ಕಾಳಜಿಯ ವಿಷಯ. ಯಾವುದೇ ಸ್ಥಳೀಯ, ರಾಜ್ಯ ಅಥವಾ ರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಆಧಾರವನ್ನು ಹೊಂದಿರದ ‘ಹಲಾಲ್’ ಪ್ರಮಾಣೀಕರಣ ಒಂದು ನಿರ್ದಿಷ್ಟ ಧರ್ಮದ ಧಾರ್ಮಿಕ ಆಚರಣೆಯಾಗಿದೆ. ಆದಾಗ್ಯೂ, ರೆಸ್ಟೋರೆಂಟ್‌ಗಳು, ಪ್ಯಾಕ್ ಮಾಡಿದ ಆಹಾರ ಮತ್ತು ಸೌಂದರ್ಯವರ್ಧಕಗಳಲ್ಲಿಯೂ ಕೂಡ ಈ ಧಾರ್ಮಿಕ ಆಚರಣೆಯನ್ನು ಹೇರಿಕೆ ಮಾಡಲಾಗುತ್ತಿದೆ. ಇದನ್ನೂ ಓದಿ: ಅಲ್ಲಾಹ್‍ನಿಗೆ ಅರ್ಪಿಸಿದ ಕೋಳಿ ಹಿಂದೂಗಳಿಗೆ ಯಾಕೆ?, ಮುಸ್ಲಿಮರು ವರ್ತನೆ ಸರಿಮಾಡಿಕೊಳ್ಳಬೇಕು: ರಘುಪತಿ ಭಟ್

    ಇದು ಧಾರ್ಮಿಕ ಪ್ರಚಾರದ ಹೊರತಾಗಿ, ಬಹುಪಾಲು ಜನಸಂಖ್ಯೆಯ ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಮತ್ತೆ ಹೇಳಬೇಕಾಗಿಲ್ಲ. ಆನ್‌ಲೈನ್‌ನಲ್ಲಿ ಮಾಂಸ ಮತ್ತು ಇತರೇ ವಸ್ತುಗಳನ್ನು ಪೂರೈಕೆದಾರರಲ್ಲಿ ಈ ಹಲಾಲಿಕರಣ ಹೆಚ್ಚುತ್ತಿದೆ. ಮಾಂಸ ಮತ್ತು ಮಾಂಸಾಹಾರಿ ಉತ್ಪನ್ನಗಳನ್ನು ಮಾರಾಟ ಮಾಡುವ ಮತ್ತು ವಿತರಿಸುವ ವೆಬ್‌ಸೈಟ್‌ಗಳು ನಿರ್ದಿಷ್ಟವಾಗಿ ‘ಹಲಾಲ್ ಪ್ರಮಾಣೀಕೃತ’ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತವೆ. ಆದರೆ ಗ್ರಾಹಕರು ಧಾರ್ಮಿಕೇತರ ಉತ್ಪನ್ನಗಳು ಅಥವಾ ಸರ್ಕಾರದ ಪ್ರಮಾಣೀಕರಣವನ್ನು ಅನುಸರಿಸುವ ಉತ್ಪನ್ನಗಳನ್ನು ಸೇವಿಸುವ ಆಯ್ಕೆಯನ್ನು ನೀಡುವುದಿಲ್ಲ.

    ಬಹುಸಂಖ್ಯಾತ ಜನರು ಹಲಾಲ್ ಆಚರಣೆಯ ಅನುಯಾಯಿಗಳಲ್ಲದ ಕಾರಣ, ಇದು ಗ್ರಾಹಕರ ಹಕ್ಕುಗಳ ಉದ್ದೇಶಪೂರ್ವಕ ಉಲ್ಲಂಘನೆ ಮತ್ತು ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ. ಆನ್‌ಲೈನ್ ಮಾರಾಟಗಾರರು ಗ್ರಾಹಕ ಸಂರಕ್ಷಣಾ ಕಾಯ್ದೆಯ ಹಲವು ನಿಬಂಧನೆಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದಾರೆ. ಗ್ರಾಹಕರಿಗೆ ಇತರ ಆಯ್ಕೆಗಳಿಲ್ಲದ ಹಲಾಲ್ ಪ್ರಮಾಣೀಕರಣವು ‘unfair trade practice,'(ಅನ್‌ಫೇರ್ ಟ್ರೇಡ್ ಪ್ರ್ಯಾಕ್ಟೀಸ್) ಮತ್ತು ‘ಸೇವೆಯ ಕೊರತೆ’ ಎಂದು ನಾನು ನಿಮ್ಮ ಗಮನಸೆಳೆಯಲು ಬಯಸುತ್ತೇನೆ. ಇದನ್ನೂ ಓದಿ: ಅಕ್ರಮ ವೇಶ್ಯಾವಾಟಿಕೆಗೆ ಕುಮ್ಮಕ್ಕು – ಸಿಪಿಐ ಉದಯರವಿ ವಿರುದ್ಧ ಗೃಹ ಸಚಿವರಿಗೆ ದೂರು

    ಆದ್ದರಿಂದ ವೆಬ್‌ಸೈಟ್‌ಗಳಲ್ಲಿ ಹಲಾಲ್ ಅಲ್ಲದ ಮಾಂಸ/ಉತ್ಪನ್ನಗಳ ಪ್ರತ್ಯೇಕ ಆಯ್ಕೆಯನ್ನು ಹೊಂದಲು ಕಟ್ಟುನಿಟ್ಟಾದ ಆದೇಶಗಳನ್ನು ನೀಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ಬೆಂಗಳೂರಿನಲ್ಲಿ ಹಲಾಲ್ ಅಲ್ಲದ ಉತ್ಪನ್ನಗಳನ್ನು ಹೊಂದಿರದ ವೆಬ್‌ಸೈಟ್‌ಗಳ ಭಾಗಶಃ ಪಟ್ಟಿ ಇಲ್ಲಿದೆ. Freshtohome.com, Licious.in, Zappfresh.com, Bigbasket.com, TenderCuts.com, hibachi.com

    ನೀವು ಈ ಸಮಸ್ಯೆಯನ್ನು ಪರಿಹರಿಸುತ್ತೀರಿ ಮತ್ತು ಬಹುಸಂಖ್ಯಾತ ಹಿಂದೂ ನಾಗರಿಕರಿಗೆ ಸಹಾಯ ಮಾಡುತ್ತೀರಿ ಮತ್ತು ಆನ್‌ಲೈನ್‌ನಲ್ಲಿ ಮಾಂಸ ಖರೀದಿಯ ಆಯ್ಕೆಯನ್ನು ಹೊಂದಲು ಅವರಿಗೆ ಸಹಾಯ ಮಾಡುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ.

  • ಹೈಕಮಾಂಡ್‍ನಿಂದ ಸಚಿವ ಸ್ಥಾನದ ಭರವಸೆ: ಉಮೇಶ್ ಕತ್ತಿ

    ಹೈಕಮಾಂಡ್‍ನಿಂದ ಸಚಿವ ಸ್ಥಾನದ ಭರವಸೆ: ಉಮೇಶ್ ಕತ್ತಿ

    – ಬಾಲಚಂದ್ರ ಜಾರಕಿಹೊಳಿಗೂ ಸಿಗುತ್ತೆ ಮಂತ್ರಿಗಿರಿ
    – ಒಂದೇ ವಿಮಾನದಲ್ಲಿ ಬೆಳಗಾವಿಗೆ ಬಂದ ‘ಕೈ’- ಕಮಲ ಶಾಸಕರು

    ಬೆಳಗಾವಿ: ಮುಂದಿನ ವಾರದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ಆಗುತ್ತೆ. ನಿಮಗೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಂತ್ರಿಗಿರಿ ಸಿಗುತ್ತೆ. ಸ್ವಲ್ಪ ಕಾಯಿರಿ ಅಂತ ಹೈಕಮಾಂಡ್ ಸೂಚನೆ ನೀಡಿದೆ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರು ಸಮಾಧಾನವಾದ ಬಳಿಕ ನಾನು ಹಾಗೂ ಬಾಲಚಂದ್ರ ಸಚಿವರಾಗುತ್ತೇವೆ. ಎಲ್ಲರಿಗೂ ಸಚಿವ ಸ್ಥಾನ ಹಂಚಿಕೆ ಮಾಡಿ ನಮಗೆ ಉಳಿಯದಿದ್ದರೆ ನಾವು ಮಂತ್ರಿಯಾಗಲ್ಲ. ಈ ಹಿಂದೆ ಎಂಟೂವರೆ ವರ್ಷ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಮಂತ್ರಿಯಾಗಬೇಕು ಅಂತ ನನಗೆ ಹಂಬಲವೇನಿಲ್ಲ, ಕೊಟ್ಟರೆ ಜವಾಬ್ದಾರಿಯಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ಸಚಿವ ಲಕ್ಷ್ಮಣ ಸವದಿ ಹಾಗೂ ನಾನು ಇಂದು ಭೇಟಿಯಾಗಿಲ್ಲ. ಭೇಟಿಯಾಗಿದ್ದೇವೆ ಅಂತ ಮಾಧ್ಯಮಗಳು ವರದಿ ಮಾಡಿದರೆ ನಾನೇನು ಮಾಡಲು ಆಗುವುದಿಲ್ಲ. ಯಾರೊಂದಿಗೂ ವೈರತ್ವ ಸಾಧಿಸಲ್ಲ. ಲಕ್ಷ್ಮಣ ಸವದಿ ಅವರು ದಿನಕ್ಕೆ ಮೂರಿ ಬಾರಿ ಫೋನ್ ಮಾಡುತ್ತಾರೆ. ನಾನು ಕೂಡ ಅವರಿಗೆ ಕರೆ ಮಾಡುತ್ತೇನೆ. ಸಚಿವ ಸ್ಥಾನ ಸಿಗದಿದ್ದರೆ ಏನಂತೆ ತಿನ್ನಲು ಉನ್ನಲು ನಮಗೆ ಕಡಿಮೆ ಇಲ್ಲ ಎಂದರು.

    ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ, ಬಿಜೆಪಿಯ ಉಮೇಶ್ ಕತ್ತಿ ಹಾಗೂ ಮುರಗೇಶ್ ನಿರಾಣಿ ಅವರು ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ್ದಾರೆ. ಅದರಲ್ಲೂ ಸತೀಶ್ ಜಾರಕಿಹೊಳಿ ಹಾಗೂ ಉಮೇಶ್ ಕತ್ತಿ ಅಕ್ಕಪಕ್ಕದಲ್ಲಿ ಕುಳಿತು ಬಂದಿದ್ದಾರೆ ಎಂದು ಮೂಲಳಿಂದ ಮಾಹಿತಿ ಲಭ್ಯವಾಗಿದೆ.

  • ಸಮ್ಮಿಶ್ರ ಸರ್ಕಾರ ಉಳಿವಿಗೆ ಸಿಎಂ ನಡೆಸಿರೋ ತಂತ್ರಗಾರಿಕೆ ವ್ಯರ್ಥ: ಉಮೇಶ್ ಕತ್ತಿ

    ಸಮ್ಮಿಶ್ರ ಸರ್ಕಾರ ಉಳಿವಿಗೆ ಸಿಎಂ ನಡೆಸಿರೋ ತಂತ್ರಗಾರಿಕೆ ವ್ಯರ್ಥ: ಉಮೇಶ್ ಕತ್ತಿ

    ಚಿಕ್ಕೋಡಿ (ಬೆಳಗಾವಿ): ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ನಡೆಸುತ್ತಿರುವ ತಂತ್ರಗಾರಿಕೆ ಪ್ರಯೋಜನವಾಗುವುದಿಲ್ಲ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಬರ ನಿರ್ವಹಣೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಶಾಸಕರು, ಮೇ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುತ್ತಾರೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಪಕ್ಷಕ್ಕೆ ಸೇರಲಿರುವ ಶಾಸಕರ ವಿಶ್ವಾಸ ಪಡೆದು ಸರ್ಕಾರ ರಚನೆಗೆ ಮುಂದಾಗಲಿದ್ದೇವೆ ಎಂದು ಆಪರೇಷನ್ ಕಮಲದ ಗುಟ್ಟು ಬಿಚ್ಚಿಟ್ಟರು.

    ರಾಜ್ಯದಲ್ಲಿ ಆವರಿಸಿರುವ ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆ ಮಾಡಬೇಕಿದ್ದ ರಾಜ್ಯದ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರು ವಿದೇಶದಲ್ಲಿ ಮೋಜು ಮಸ್ತಿ ಮಾಡಿ ಬಂದಿದ್ದಾರೆ. ಬರಗಾಲ ಸಂದರ್ಭದಲ್ಲಿ ಕೃಷ್ಣಾ ನದಿಗೆ ನೀರು ತರಿಸುವಲ್ಲಿ ಬೇಜವಾಬ್ದಾರಿ ತೋರಿದ ಡಿ.ಕೆ.ಶಿವಕುಮಾರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಅವರಂತೆ ಲೋಕಸಭಾ ಚುನಾವಣೆಯ ಜನಾದೇಶವನ್ನು ಅರಿತು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಮೂಲಕ ಸರ್ಕಾರ ನಡೆಸಲು ಬಿಜೆಪಿಗೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.