Tag: MLA Shivalingegowda

  • ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ – ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ

    ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ – ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ

    ಹಾಸನ: ಡ್ರಗ್ಸ್ ಮೂಲ ಎಲ್ಲಿ ಅಂತ ನನಗೆ ಗೊತ್ತಿದ್ದು, ಆ ಮೂಲವನ್ನು ಬೈಯ್ಯಲು ಹೋದರೆ ಯಾರ್ಯಾರಿಗೋ ಬೇಜಾರಾಗುತ್ತೆ ಎಂದು ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಅರಸೀಕೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡ್ರಗ್ಸ್ ದಂಧೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಲ್ಲಾ ದೇಶದಲ್ಲೂ ಡ್ರಗ್ಸ್ ಇದೆ. ನಮ್ಮ ಭಾರತದಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಕೆಟ್ಟದ್ದು ಎಂದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. ಯಾವುದೇ ಬೀಚ್‍ಗೆ ಹೋಗಿ ಅಲ್ಲಿ ಕುಡಿದು ಮಲಗಿರುವವರೆಲ್ಲಾ ಡ್ರಗ್ಸ್ ತೆಗೆದುಕೊಂಡು ಮಲಗಿರುತ್ತಾರೆ. ಎಲ್ಲಿ ಲಾಭವಿದೆ ಅಲ್ಲಿ ಅದಕ್ಕೆ ಬಿಸಿನೆಸ್‍ದಾರರು ಹುಟ್ಟಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಈ ದೇಶ, ರಾಜ್ಯದಲ್ಲಿ ಡ್ರಗ್ಸ್ ಅಡಿಕ್ಟ್ ಆಗಿದೆ ಎಂದರು.

    ಈ ಬಗ್ಗೆ ವಿಧಾನಸೌಧದಲ್ಲಿ ಈ ಹಿಂದೆ 3-4 ಗಂಟೆಗಳ ಕಾಲ ಚರ್ಚೆಯಾಗಿತ್ತು. ಆಗಲೇ ನಾನು ಡ್ರಗ್ಸ್ ಬಗ್ಗೆ ವಿರೋಧ ಮಾಡಿದ್ದೆ. ಈ ಹಿಂದೆ ಶಾಸಕ ಕಳಕಪ್ಪ ಬಂಡಿ, ನನ್ನ ಮಗ ಎಂಬಿಬಿಎಸ್ ಓದುತ್ತಿದ್ದಾನೆ ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದಾನೆ. ನನ್ನ ಮಗನನ್ನ ಉಳಿಸಿಕೊಡಿ ಎಂದು ಕೈಮುಗಿದು ಕೇಳಿಕೊಂಡಿದ್ದರು. ಅಂದೇ ಈ ಬಗ್ಗೆ ಎಚ್ಚೆತ್ತುಕೊಂಡಿದ್ದರೆ ಈಗ ನಿಯಂತ್ರಣಕ್ಕೆ ತರಬಹುದಿತ್ತು. ಈಗಲಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

    ಎಂಬಿಬಿಎಸ್ ಮತ್ತು ಪಿಜಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಯಾರ ಕೈಯಲ್ಲಿದ್ದಾರೆ. ಇದೆಲ್ಲವೂ ಸರ್ಕಾರಕ್ಕೆ ಗೊತ್ತಿಲ್ಲವೇ. ಅದರ ಮೂಲ ಎಲ್ಲಿ ಅಂತ ನನಗೆ ಗೊತ್ತಿದೆ. ಆ ಮೂಲವನ್ನ ಬೈಯ್ಯಲು ಹೋದರೆ ಯಾರಿಗಾದರೂ ಬೇಜಾರಾಗುತ್ತೆ. ಯಾರೋ ನಾಲ್ಕು ಜನ ಆರ್ಥಿಕವಾಗಿ ಮುಂದುವರಿಯಲು ಯುವಕರನ್ನ ಹಾಳು ಮಾಡುವ ಕೆಟ್ಟ ಪ್ರವೃತ್ತಿ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಡ್ರಗ್ಸ್ ವಿಚಾರದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕೆಂದು ಶಾಸಕ ಶಿವಲಿಂಗೇಗೌಡ ಕಿಡಿಕಾರಿದ್ದಾರೆ.

  • ಮೋದಿ ಬಂದರೆ ಎತ್ತಿ ದವಡೆಗೆ ಹೊಡೆಯಿರಿ: ಶಾಸಕ ಶಿವಲಿಂಗೇಗೌಡ

    ಮೋದಿ ಬಂದರೆ ಎತ್ತಿ ದವಡೆಗೆ ಹೊಡೆಯಿರಿ: ಶಾಸಕ ಶಿವಲಿಂಗೇಗೌಡ

    ಹಾಸನ: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಜನರಿಗೆ ಹಾಗೂ ರೈತರಿಗೆ ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆ ಎನಾಯ್ತು ಅಂತ ಪ್ರಶ್ನಿಸಿ, ಎಲ್ಲರು ಸೇರಿ ಎತ್ತಿದವಡೆಗೆ ಹೊಡೆಯಿರಿ ಎಂದು ಜಿಲ್ಲೆಯ ಅರಸೀಕೆರೆ ತಾಲೂಕಿನ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಭಾಷಣ ಮಾಡಿದ್ದಾರೆ.

    ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತ ಪ್ರಧಾನಿ ಮೋದಿ ವಿರುದ್ಧ ಶಿವಲಿಂಗೇಗೌಡ ಕಾರ್ಯಕರ್ತರನ್ನು ಎತ್ತಿಕಟ್ಟುವ ರೀತಿ ಭಾಷಣ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

    ನಾನು ನೇರವಾಗಿ ಪ್ರಧಾನಿ ಅವರನ್ನೇ ಪ್ರಶ್ನಿಸುತ್ತಿದ್ದೇನೆ, ನೀವು ಆಡಳಿತಕ್ಕೆ ಬರುವ ಮುನ್ನ ದೇಶದ ರೈತಾಪಿ ವರ್ಗಕ್ಕೆ ಕೊಟ್ಟ ವಾಗ್ದಾನ ಏನು? ರಾಜಕಾರಣಿಗಳು ಸ್ವೀಸ್ ಬ್ಯಾಂಕ್‍ನಲ್ಲಿಟ್ಟಿರುವ ಕಪ್ಪು ಹಣವನ್ನು ತಂದು ರೈತರ ಅಕೌಂಟ್‍ಗೆ 10, 15 ಲಕ್ಷ ರೂ. ಹಾಕುತ್ತೇನೆ ಎಂದು ಭರವಸೆ ನೀಡಿದ್ದೀರಿ. ಆ ಭರವಸೆ ಏನಾಯ್ತು? ಈ ಬಗ್ಗೆ ಬಿಜೆಪಿಯವರನ್ನು ನೀವು ಕೇಳಬೇಕು. ಅವರನ್ನು ಪ್ರಶ್ನಿಸುವುದನ್ನು ನೀವು ಬೆಳೆಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

    ಮೋದಿ ಅವರು ರಾಜ್ಯಕ್ಕೆ ಬಂದರೆ ನೀವೆಲ್ಲ ಕೇಳಬೇಕು ಕಪ್ಪು ಹಣ ಎಲ್ಲಿ? 15 ಲಕ್ಷ ಎಲ್ಲಿ ಎಂದು ಮೋದಿಗೆ ದವಡೆಗೆ ಹೊಡೆಯಿರಿ ಎಂದು ಕಾರ್ಯಕರ್ತರಿಗೆ ಪ್ರಚೋದನೆ ನೀಡಿದ್ದಾರೆ. ಕಪ್ಪು ಹಣ ಹೊರತರುತ್ತೇವೆ ಅಂತ ನೋಟ್ ಬ್ಯಾನ್ ಮಾಡಿದರು. ಅದರಿಂದ ಬಡವರಿಗೆ ಏನು ಲಾಭವಾಯ್ತು? ಚಾಲ್ತಿಯಲ್ಲಿದ್ದ ನೋಟ್‍ಗಳೆಲ್ಲ ಬ್ಯಾಂಕ್ ಸೇರಿದ್ದು ಬಿಟ್ಟರೆ, ಕಪ್ಪು ಹಣ ಹೊರ ಬರಲಿಲ್ಲ. ಬಡವರಿಗೆ, ರೈತರಿಗೆ ಹಣ ಸಿಗಲಿಲ್ಲ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದರು.

  • ಆಪರೇಷನ್ ಕಮಲ:  60 ಕೋಟಿ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ

    ಆಪರೇಷನ್ ಕಮಲ: 60 ಕೋಟಿ ಬಾಂಬ್ ಸಿಡಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ

    ಹಾಸನ: ಪದೇ ಪದೇ ರಾಜ್ಯ ಸರ್ಕಾರ ಉರುಳಿಸುತ್ತಿರುವ ಪ್ರಯತ್ನವನ್ನು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಂಗಳವಾರ ರಾತ್ರಿ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷದ ತುಮಕೂರು ಗ್ರಾಮಾಂತರ ಶಾಸಕರಿಗೆ ದೂರವಾಣಿ ಕರೆ ಮಾಡಿ ಆಮಿಷ ಒಡ್ಡಿದ್ದಾರೆ ಎಂದು ಶಾಸಕ ಕೆ.ಎಸ್ ಶಿವಲಿಂಗೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

    ಆಪರೇಷನ್ ಕಮಲ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಸನದ ಅರಸೀಕೆರೆ ಕ್ಷೇತ್ರದ ಶಾಸಕರಾದ ಗೌರಿಶಂಕರ್ ಅವರಿಗೆ ಫೋನ್ ಮಾಡಿ 60 ಕೋಟಿ ರೂ. ದುಡ್ಡು ಹಾಗೂ ಸಚಿವ ಸ್ಥಾನದ ನೀಡುವ ಕುರಿತು ಆಮಿಷ ಒಡ್ಡಿದ್ದಾರೆ. ಈ ಕುರಿತು ಸಿಎಂ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡಿದ್ದೇನೆ. ಆದರೆ ನಮಗೆ 60 ಕೋಟಿ ರೂ. ಅಲ್ಲ, 500 ಕೋಟಿ ರೂ. ನೀಡಿದರೂ ಬಿಜೆಪಿಗೆ ಹೋಗಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಸಚಿವ ರೇವಣ್ಣ ಅವರು, ದೆಹಲಿಯಲ್ಲಿ ದಿನಕ್ಕೆ ಲಕ್ಷ ಲಕ್ಷ ರೂ. ನೀಡಿ ಬಿಎಸ್ ಯಡಿಯೂರಪ್ಪ ಅವರು, ಶಾಸಕರು ಇದ್ದಾರೆ. ಇದಕ್ಕಿಂತ ಆಪರೇಷನ್ ಕಮಲಕ್ಕೆ ಬೇರೆ ಯಾವ ಸಾಕ್ಷಿ ಬೇಕು ಎಂದು ಪ್ರಶ್ನೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv