Tag: MLA Renukacharya

  • ಸರ್ ನಿಮ್ಮೊಂದಿಗೆ ಫೋಟೋ ಬೇಕು- ಸೆಲ್ಫಿ ಕ್ಲಿಕ್ಕಿಸಿಕೊಂಡ ಬಾಲಕಿ

    ಸರ್ ನಿಮ್ಮೊಂದಿಗೆ ಫೋಟೋ ಬೇಕು- ಸೆಲ್ಫಿ ಕ್ಲಿಕ್ಕಿಸಿಕೊಂಡ ಬಾಲಕಿ

    – ಪುಸ್ತಕ ನೀಡಿ ಹಾರೈಸಿದ ರೇಣುಕಾಚಾರ್ಯ

    ದಾವಣಗೆರೆ: ಕೊರೊನಾ ಕಾಲದಲ್ಲಿ ಜನರಿಗೆ ಹೋಳಿಗೆ ಊಟ ಹಾಕಿಸಿ, ಜನಪರವಾಗಿ ಕೆಲಸಮಾಡಿದ್ದೀರಿ, ನನ್ನ ಬಳಿ ವೀಡಿಯೋ ಇದೆ. ನಿಮ್ಮ ಜನಸೇವೆ ಮರೆಯುವುದಿಲ್ಲ ಎಂದು ವೀಡಿಯೋ ತೋರಿಸಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಬಾಲಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ.

    ರೇಣುಕಾಚಾರ್ಯ ಅವರು ಹೊನ್ನಾಳಿ ಕ್ಷೇತ್ರ ಪ್ರವಾಸದಲ್ಲಿದ್ದರು. ಈ ವೇಳೆ ಶಾಸಕರ ಕಾರ್ಯಕ್ಕೆ ಹೊನ್ನಾಳಿ ತಾಲೂಕಿನ ತುಂಬಿಗೆರೆ ಗ್ರಾಮದ ವಿದ್ಯಾರ್ಥಿನಿ ಮೈತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಸರ್ ನಿಮ್ಮೊಂದಿಗೆ ಒಂದು ಫೋಟೋ ಬೇಕೆಂದು ಕೇಳಿ ಸೆಲ್ಫಿ ತೆಗೆದುಕೊಂಡಳು. ಇದನ್ನೂ ಓದಿ: ಅಂಬುಲೆನ್ಸ್‌ಗೂ ದಾರಿ ಬಿಡದ ಕಾಂಗ್ರೆಸ್ ಕಾರ್ಯಕರ್ತರು

    ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಸಕ ರೇಣುಕಾಚಾರ್ಯ ಮಾಡಿದ ಕಾರ್ಯಕ್ಕೆ ಮನಸೋತ ಬಾಲಕಿ, ಅವರ ಸೇವೆಯನ್ನು ಜನರ ಮುಂದೆ ಹಾಡಿ ಹೊಗಳಿದಳು. ಬಳಿಕ ಶಾಸಕ ರೇಣುಕಾಚಾರ್ಯ ಪುಟ್ಟ ಬಾಲಕಿಯ ಮಾತುಗಳನ್ನು ಆಲಿಸಿ, ಮನಸೋತು, ಪುಸ್ತಕ ನೀಡಿ ಚೆನ್ನಾಗಿ ಓದುವಂತೆ ತಿಳಿಸಿದರು.

  • ನಿಮ್ಮಂಗೆ ಬ್ರಿಗೇಡ್ ಕಟ್ಟಿಲ್ಲ, ರಾಜ್ಯಪಾಲರಿಗೆ ಪತ್ರ ಬರೆದಿಲ್ಲ- ಈಶ್ವರಪ್ಪಗೆ ರೇಣುಕಾಚಾರ್ಯ ಟಾಂಗ್

    ನಿಮ್ಮಂಗೆ ಬ್ರಿಗೇಡ್ ಕಟ್ಟಿಲ್ಲ, ರಾಜ್ಯಪಾಲರಿಗೆ ಪತ್ರ ಬರೆದಿಲ್ಲ- ಈಶ್ವರಪ್ಪಗೆ ರೇಣುಕಾಚಾರ್ಯ ಟಾಂಗ್

    – ನಾನು ವೇಷಧಾರಿಯಲ್ಲ, ಜನಸೇವಕ, ಹಗುರವಾಗಿ ಮಾತಾಡ್ಬೇಡಿ

    ದಾವಣಗೆರೆ: ನಾನು ಯಾವುದೇ ವೇಷಧಾರಿಯಲ್ಲ, ನಾನೊಬ್ಬ ಜನಸೇವಕ, ಕ್ಷೇತ್ರದ ಜನರಿಗಾಗಿ ಹಗಲಿರುಳು ಸೇವೆ ಮಾಡುವವ ಎಂದು ಹೇಳುವ ಮೂಲಕ ಶಾಸಕ ಎಂ.ಪಿ.ರೇಣುಕಾಚಾರ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪಗೆ ತಿರುಗೇಟು ನೀಡಿದರು.

    ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿ ಮಾತನಾಡಿ, ರೇಣುಕಾಚಾರ್ಯ ವೇಷಧಾರಿ ಎಂಬ ಸಚಿವ ಈಶ್ವಪ್ಪ ಹೇಳಿಕೆಗೆ ಟಾಂಗ್ ನೀಡಿದರು. ಹಿರಿಯರ ಬಗ್ಗೆ ಗೌರರವಿದೆ, ನನಗೆ ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲ. ನನ್ನ ಬಗ್ಗೆ ಹುಲಿ ವೇಷ ಎಂದು ಹೇಳಿದವರು ಆತ್ಮವಲೋಕನ ಮಾಡಿಕೊಳ್ಳಲಿ. ಯಡಿಯೂರಪ್ಪನವರನ್ನು ರಾಜ್ಯಾದ್ಯಕ್ಷರಾಗಿ ಮಾಡಿದಾಗ ನೀವು ಬ್ರೀಗೇಡ್ ಕಟ್ಟಿ ಯಾವ ವೇಷ ಹಾಕಿಕೊಂಡಿದ್ದಿರಿ ಎಂಬುದು ಗೊತ್ತಿರಲಿ. ಸಚಿವರಾಗಿ ರಾಜ್ಯಪಾಲರಿಗೆ ಪತ್ರ ಬರೆದು ಆಮೇಲೆ ಉಲ್ಟಾ ಹೊಡೆದ್ರಿ, ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ನನ್ನನ್ನು ಯಡಿಯೂರಪ್ಪನವರ ವಿರುದ್ಧ ಎತ್ತಿ ಕಟ್ಟಲಿಲ್ವಾ? ನೀವು ಚುನಾವಣಾ ಪೂರ್ವದಲ್ಲಿ ಏನು ಮಾಡಿದ್ರಿ ಗೊತ್ತಿಲ್ಲವೇ? ನನ್ನ ಬಗ್ಗೆ ಹಗುರವಾಗಿ ಮಾತನಾಡುವುದು ಬಿಡಬೇಕು ಎಂದರು.

    ಶಾಸಕ ಅರವಿಂದ್ ಬೆಲ್ಲದ್ ವಿರುದ್ಧ ಗುಡುಗಿದ ಅವರು, ಬೆಲ್ಲದ್ ಅವರೇ ಸುಮಾರು 65ಕ್ಕೂ ಹೆಚ್ಚು ಜನ ಶಾಸಕರು ಸಿಎಂ ಪರವಾಗಿ ಸಹಿ ಮಾಡಿರೋ ಪತ್ರ ನನ್ನ ಬಳಿ ಇದೆ. ಹಳೆ ಪತ್ರ ಎಂದು ಯಾರು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಕಳುಹಿಸಿ ಕೊಡುತ್ತೇನೆ. ರಾಜ್ಯಾಧ್ಯಕ್ಷರು ಪತ್ರ ಕೊಡುವುದು ಬೇಡ ಎಂದು ಹೇಳಿದ್ದಾರೆ, ಹೀಗಾಗಿ ಕೊಟ್ಟಿಲ್ಲ. ನನ್ನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಡಬೇಕು. 2013ರಲ್ಲಿ ನೋವು ಪಟ್ಟಿದ್ದೇವೆ, ಇದು ಪದೆ ಪದೇ ಆಗಬಾರದು. ಹಡಗಿನಲ್ಲಿ ಕೂತವರೇ ರಂದ್ರ ಕೊರೆಯಬಾರದು. ನಾಯಕನ ಜೊತೆ ಎಲ್ಲರೂ ಮುಳುಗುತ್ತಾರೆ ಎಂದು ಟಾಂಗ್ ನೀಡಿದರು.

  • ‘ಜಮೀರ್ ಅಹ್ಮದ್ ಒಬ್ಬ ಚಿಲ್ಲರೆ ಗಿರಾಕಿ’- ಏಕವಚನದಲ್ಲೇ ರೇಣುಕಾಚಾರ್ಯ ವಾಗ್ದಾಳಿ

    ‘ಜಮೀರ್ ಅಹ್ಮದ್ ಒಬ್ಬ ಚಿಲ್ಲರೆ ಗಿರಾಕಿ’- ಏಕವಚನದಲ್ಲೇ ರೇಣುಕಾಚಾರ್ಯ ವಾಗ್ದಾಳಿ

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಜಮೀರ್ ಅಹ್ಮದ್ ಹಾಗೂ ರೇಣುಕಾಚಾರ್ಯ ಅವರ ವಾಕ್ ಸಮರ ಹೆಚ್ಚು ಸದ್ದು ಮಾಡುತ್ತಿದೆ. ಇಬ್ಬರು ನಾಯಕರು ಪರಸ್ಪರ ಮಾತಿನ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಇಬ್ಬರ ನಡುವಿನ ವಾಕ್ ಸಮರ ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದು, ಜಮೀರ್ ಒಬ್ಬ ಚಿಲ್ಲರೆ ಗಿರಾಕಿ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.

    ಇಂದು ಮಾಜಿ ಸಚಿವ ಜಮೀರ್ ವಿಚಾರಕ್ಕಾಗಿಯೇ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಜಮೀರ್ ಒಬ್ಬ ಚಿಲ್ಲರೆ ಗಿರಾಕಿ. ಪುಟ್‍ಪಾತ್‍ನಲ್ಲಿ ಇದ್ದವನು. ಚಾಮರಾಜಪೇಟೆಯಲ್ಲಿ ದಂಧೆ ಮಾಡಿಕೊಂಡಿದ್ದವನನ್ನು ಕರೆತಂದು ದೇವೇಗೌಡರು ಮಂತ್ರಿ ಮಾಡಿದ್ದರು. ಅವರಿಗೆ ಜಮೀರ್ ಏನು ಮಾಡಿದ್ದರೂ ಎಂದು ಎಲ್ಲರಿಗೂ ಗೊತ್ತಿದೆ ಎಂದರು.

    ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ಹಿಂದೆ ‘ಅಣ್ಣ ಕುಮಾರಣ್ಣ ಅಂತಾ ಹೇಳಿಕೊಂಡು ತಿರುಗುತ್ತಿದ್ದ’. ಅವರಿಗೂ ಜಮೀರ್ ಏನು ಮಾಡಿದ್ರು ಎಂದು ಗೊತ್ತಿದೆ. ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಜಮೀರ್ ಮಾತನಾಡಿದ್ರೆ ನಾನೂ ಕೂಡ ಅದೇ ಭಾಷೆಯಲ್ಲಿ ಮಾತನಾಡುವುದು ನನಗೆ ಗೊತ್ತಿದೆ. ಜಮೀರ್ ಗೆ ಸಂದರ್ಭದಲ್ಲಿ ಎಚ್ಚರಿಕೆ ಕೊಡುತ್ತೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದನ್ನು ಓದಿ: ರೇಣುಕಾಚಾರ್ಯ ಇಸ್ಪೀಟ್ ಎಲೆಯಲ್ಲಿರುವ ಜೋಕರ್‌ನಂತೆ: ಜಮೀರ್ ವ್ಯಂಗ್ಯ

    ರೇಣುಕಾಚಾರ್ಯ ಏಕವಚನ ವಾಗ್ದಾಳಿ ಜಮೀರ್ ವಿರುದ್ಧ ಮಾತ್ರ ಸೀಮಿತವಾಗಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೂ ಕೂಡ ತಿರುಗಿತ್ತು. ‘ದಿನೇಶ್ ಗುಂಡೂರಾವ್, ಮೊದಲು ನಿನ್ನ ಪಕ್ಷ ಸರಿಪಡಿಸಿಕೋ. ನಿನಗೆ ರಾಜಕಾರಣದ ಮೆದುಳೇ ಇಲ್ಲ. ಅದು ಬಿಟ್ಟು ನನ್ನ ಬಗ್ಗೆ ಮಾತನಾಡಬೇಡ’ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಇದೆಲ್ಲವನ್ನು ನೋಡುತ್ತಿದ್ದರೆ ರೇಣುಕಾಚಾರ್ಯ ವರ್ಸಸ್ ಕಾಂಗ್ರೆಸ್ ಶಾಸಕರ ನಡುವಿನ ವೈಯುಕ್ತಿಕ ವಾಕ್ ಸಮರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲ.

  • ಹೊನ್ನಾಳಿಯಲ್ಲೂ ಪ್ರವಾಹ ಭೀತಿ- ಜನರ ಸ್ಥಳಾಂತರ ಕಾರ್ಯಕ್ಕೆ ರೇಣುಕಾಚಾರ್ಯ ಸಾಥ್

    ಹೊನ್ನಾಳಿಯಲ್ಲೂ ಪ್ರವಾಹ ಭೀತಿ- ಜನರ ಸ್ಥಳಾಂತರ ಕಾರ್ಯಕ್ಕೆ ರೇಣುಕಾಚಾರ್ಯ ಸಾಥ್

    ದಾವಣಗೆರೆ: ತುಂಗಭದ್ರಾ ನದಿಯಲ್ಲಿ ನೀರು ಹೆಚ್ಚಾದ ಕಾರಣ ಹೊನ್ನಾಳಿಯಲ್ಲಿಯೂ ಸಹ ಪ್ರವಾಹ ಭೀತಿ ಉಂಟಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಜನರನ್ನು ಕಾಪಾಡಲು ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರೇ ಅಖಾಡಕ್ಕಿಳಿದ್ದಿದ್ದು, ಸಂತ್ರಸ್ತರ ಮೆನೆಗೆ ತೆರಳಿ ಜನರನ್ನು ಹೊರಗೆ ಕರೆ ತರುತ್ತಿದ್ದಾರೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ಅವರೇ ಸ್ವತಃ ನೀರಿಗೆ ಇಳಿದು ಜನರನ್ನು ಸ್ಥಳಾಂತರ ಮಾಡಿಸುತ್ತಿದ್ದಾರೆ. ತುಂಗಾಭದರ್ರಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ. ಹೊನ್ನಾಳಿಯ ಬಾಲ್ ರಾಜ್ ಘಾಟ್, ಬಂಬುಬಜಾರ್ ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಪ್ರವಾಹ ಇನ್ನು ಹೆಚ್ಚಾಗುವ ಹಿನ್ನಲೆ ಅಧಿಕಾರಿಗಳು ಮನೆಗಳನ್ನು ಖಾಲಿ ಮಾಡಿಸುತ್ತಿದ್ದಾರೆ.

    ಅಧಿಕಾರಿಗಳ ಜೊತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹ ಕಾರ್ಯಕರ್ತರೊಂದಿಗೆ ನೀರಿಗೆ ಇಳಿದು ಜನರನ್ನು ಮನೆಯಿಂದ ಹೊರಗೆ ಕರೆ ತರುತ್ತಿದ್ದಾರೆ. ತಕ್ಷಣ ಮನೆ ಖಾಲಿ ಮಾಡಿ ಎಂದು ಸೂಚನೆ ನೀಡುತ್ತಿದ್ದಾರೆ. ರೇಣುಕಾಚಾರ್ಯ ಜೊತೆ ಕಾರ್ಯಕರ್ತರು ಸಹ ಸಾಥ್ ನೀಡಿದ್ದಾರೆ. ಶಿಂಗಟಾಲೂರು ಏತ ನೀರಾವರಿ ಬ್ಯಾರೇಜ್‍ನಿಂದ 1.80 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿದ್ದರಿಂದ ತುಂಗಭದ್ರಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ.

    ಕುರವತ್ತಿ, ಹರವಿ, ಅಲ್ಲಿಪುರ, ಮಾಗಳ, ಅಂಗೂರು, ಗ್ರಾಮದಲ್ಲಿ ಬೆಳೆ ಹಾನಿ ಸಂಭವಿಸಿದೆ. ಕುರವತ್ತಿ ಗ್ರಾಮದಲ್ಲಿ 5 ಕುಟುಂಬಗಳನ್ನು ಈಗಾಗಿಲೇ ಸ್ಥಳಾಂತರಿಸಲಾಗಿದ್ದು, ಉಳಿದ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹಡಗಲಿ ತಾಲೂಕಿನಲ್ಲಿ ಒಟ್ಟು 127 ಮನೆಗಳು ನೆಲಸಮವಾಗಿದೆ.