Tag: MLA Preetham gowda

  • ಶಿರಾ ಉಪಕದನದಲ್ಲಿ ವೋಟಿಗಾಗಿ ನೋಟಿನ ಮಳೆ- ವೈರಲ್ ವೀಡಿಯೋ

    ಶಿರಾ ಉಪಕದನದಲ್ಲಿ ವೋಟಿಗಾಗಿ ನೋಟಿನ ಮಳೆ- ವೈರಲ್ ವೀಡಿಯೋ

    – ಹಣ ಹಂಚಿಸ್ತಿದ್ದಾರಾ ಬಿಜೆಪಿ ಶಾಸಕ ಪ್ರೀತಂಗೌಡ?

    ತುಮಕೂರು: ಜಿಲ್ಲೆಯ ಶಿರಾ ಉಪಚುನಾವಣೆ ಕಣ ರಣರಣ ಅಂತಿದೆ. ನಾಯಕರ ಟಾಕ್‍ಫೈಟ್ ಭರ್ಜರಿಯಾಗಿ ನಡೆಯುತ್ತಿದ್ದು, ಈ ನಡುವೆಯೇ ವೋಟಿಗಾಗಿ ನೋಟು ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಮತದಾರರನನ್ನು ಸೆಳೆಯಲು ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ತಮ್ಮ ಬೆಂಬಲಿಗರ ಮೂಲಕ ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್, ಬಿಜೆಪಿ ಮಾಡಿದೆ. ಮಹಿಳೆಯರಿಗೆ ಹರಿಶಿಣ-ಕುಂಕುಮದ ಜೊತೆ ಹಣದ ಆಮಿಷ ನೀಡಲಾಗುತ್ತಿದೆ ಎಂಬ ಬಗ್ಗೆ ವಿಡಿಯೋ ಸಮೇತ ಆರೋಪ ಮಾಡಲಾಗಿದೆ. ಸದ್ಯ ಕ್ಷೇತ್ರದಲ್ಲಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಮಹಿಳೆಯರಿಗೆ ಹಣ ಹಂಚಿಕೆ ಮಾಡುತ್ತಿರುವ ಪ್ರೀತಂ ಗೌಡ ಅವರ ಬೆಂಬಲಿಗರು ಎನ್ನಲಾದ ವ್ಯಕ್ತಿಗಳು, ನಮ್ಮ ಎಂಎಲ್‍ಎ ಪ್ರೀತಂ ಗೌಡ ಹೇಳಿದ್ದಾರೆ ಹಣ ಕೊಡೋಕೆ. ಪ್ರತಿ ಚುನಾವಣೆಯಲ್ಲಿ ಬರೀ ಗಂಡಸರಿಗೆ ಕೈಗೆ ಹಣ ಕೊಟ್ಟು ಹೋಗುತ್ತಾರೆ. ತಾಯಂದಿರಿಗೆ ಏನೂ ಕೊಡಲ್ಲ ಮರೆತು ಹೋಗುತ್ತಾರೆ. ಇವತ್ತು 200 ರೂಪಾಯಿ ಕೊಡ್ತಿವಿ, ನಾಳೆ, ಆಚೆ ನಾಳಿದ್ದು ಕೊಡ್ತಿವಿ. ಚುನಾವಣೆ ಹಿಂದಿನ ದಿನನೂ ಕೊಡೋದನ್ನು ಕೊಡ್ತಿವಿ. ದುಡ್ಡು ತಗೊಂಡು ಬಿಜೆಪಿಗೆ ಮತ ಹಾಕಿ ಎಂದು ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇತ್ತ ಉಪ ಚುನಾವಣೆ ಹೊತ್ತಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಮಠಗಳ ಮೊರೆ ಹೋಗಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ನಿನ್ನೆ ಡಿಸಿಎಂ ಗೋವಿಂದ ಕಾರಜೋಳ ಹಾಗೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಭೇಟಿ ನೀಡಿದ್ದರು. ನಂತರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಕಾರಜೋಳ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಂಬೇಡ್ಕರ್‍ಗೆ ಕಾಂಗ್ರೆಸ್ ಮಹಾ ಮೋಸ ಮಾಡಿದೆ. ಕಾಂಗ್ರೆಸ್‍ನವರಿಗೆ ದಲಿತರ ಬಳಿ ಮತ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದರು. ಇನ್ನು ಆದಿ ಚುಂಚನಗಿರಿ ಮಠಕ್ಕೂ ಭೇಟಿ ಕೊಟ್ಟ ಅಭ್ಯರ್ಥಿ ರಾಜೇಶ್‍ಗೌಡ, ನಿರ್ಮಲಾನಂದ ಶ್ರೀಗಳ ನೇತೃತ್ವದಲ್ಲಿ 2 ಗಂಟೆಗಳಿಗೂ ಹೆಚ್ಚುಕಾಲ ಕಾಲಭೈರವೇಶ್ವರ ಆರಾಧನೆ ಮಾಡಿದ್ದಾರೆ. ರಾಜೇಶ್‍ಗೌಡಗೆ ಶುಭವಾಗಲಿ ಅಂತ ಶ್ರೀಗಳು ಆರ್ಶೀವಾದ ನೀಡಿದ್ದಾರೆ. ಪೂಜೆ ಬಳಿಕ ಮಾತನಾಡಿದ ರಾಜೇಶ್‍ಗೌಡ, ದಸರಾ ಹಿನ್ನೆಲೆ ಶ್ರೀಗಳ ಭೇಟಿಯಾಗಿದ್ದೇನೆ. ಶಿರಾ ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕೆಆರ್ ಪೇಟೆ ಉಪಚುನಾವಣೆಯಲ್ಲಿ ಗೆಲುವು ಪಡೆದ ರೀತಿಯಲ್ಲೇ ಶಿರಾದಲ್ಲೂ ಬಿಜೆಪಿ ಕಮಾಲ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

  • ತಂದೆಯಾಗಿ ಕೋವಿಡ್ ಸಮಯದಲ್ಲಿ ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ: ಶಾಸಕ ಪ್ರೀತಂ ಗೌಡ

    ತಂದೆಯಾಗಿ ಕೋವಿಡ್ ಸಮಯದಲ್ಲಿ ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ: ಶಾಸಕ ಪ್ರೀತಂ ಗೌಡ

    ಹಾಸನ: ಶಾಲೆ ಆರಂಭಕ್ಕೆ ಇದು ಸೂಕ್ತ ಸಮಯ ಅಲ್ಲ. ನಾನು ಒಬ್ಬ ತಂದೆಯಾಗಿ ನನ್ನ ಮಕ್ಕಳನ್ನು ಈ ಸಂದರ್ಭದಲ್ಲಿ ಶಾಲೆಗೆ ಕಳುಹಿಸಲ್ಲ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಕೂಡ ಇಬ್ಬರು ಮಕ್ಕಳಿದ್ದಾರೆ. ಇದು ನಾನು ಒಬ್ಬ ಪೋಷಕನಾಗಿ ಹೇಳುವ ಮಾತು ಅಷ್ಟೇ. ಸರ್ಕಾರ ಶಾಲೆ ಆರಂಭದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡರು ನಿರ್ದಾಕ್ಷಿಣ್ಯವಾಗಿ ನನ್ನ ಸಲಹೆ ತಿಳಿಸುತ್ತೇನೆ.

    ನಾನು ಪೋಷಕನಾಗಿ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ. ಶಾಸಕನಾಗಿ ನಾನು ಸರ್ಕಾರದ ಮಾತನ್ನ ಕೇಳಿಸಿಕೊಳ್ಳುತ್ತೇನೆ. ಆದರೆ ನನಗೂ ಕುಟುಂಬ ಇದೆ. ಮೊದಲು ಕುಟುಂಬ, ನಂತರ ರಾಜಕೀಯ. ಜೀವ ಇದ್ದರೆ ಜೀವನ ನಡೆಯಲಿದೆ ಎಂದು ಶಾಸಕ ಪ್ರೀತಂಗೌಡ ತಿಳಿಸಿದ್ದಾರೆ.

  • ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು, ಮಾಧ್ಯಮಗಳ ಮುಂದೆಯಲ್ಲ: ಪ್ರಜ್ವಲ್‍ಗೆ ಪ್ರೀತಂಗೌಡ ಟಾಂಗ್

    ಸ್ಪೀಕರ್‌ಗೆ ರಾಜೀನಾಮೆ ನೀಡಬೇಕು, ಮಾಧ್ಯಮಗಳ ಮುಂದೆಯಲ್ಲ: ಪ್ರಜ್ವಲ್‍ಗೆ ಪ್ರೀತಂಗೌಡ ಟಾಂಗ್

    – ದೇವೇಗೌಡರನ್ನು ಹಾಡಿ ಹೊಗಳಿದ ಶಾಸಕರು

    ಹಾಸನ: ನೂತನ ಸಂಸದರು ರಾಜೀನಾಮೆಗೂ ಮುನ್ನ ಪ್ರಮಾಣ ವಚನ ಸ್ವೀಕರಿಸಬೇಕು. ಅಷ್ಟೇ ಅಲ್ಲ ರಾಜೀನಾಮೆಯನ್ನು ಸ್ಪೀಕರ್‍ಗೆ ರಾಜೀನಾಮೆ ನೀಡಬೇಕೆ ಹೊರತು ಮಾದ್ಯಮಗಳ ಮುಂದಲ್ಲ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ, ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಹಾಸನ ಲೋಕಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿಗೆ ಐದು ಲಕ್ಷಕ್ಕೂ ಹೆಚ್ಚು ಮತಗಳು ಬಂದಿದೆ. ಇದು ಪಕ್ಷದ ಸಾಧನೆ. ಈ ಬಾರಿಯ ಕಾಂಗ್ರೆಸ್ ಎಲ್ಲಿದೆ ಅಂತ ಹುಡುಕಬೇಕಿದೆ ಎಂದು ಹೇಳಿದರು.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನದಿಂದ ಸ್ಪರ್ಧಿಸಬೇಕು ಎಂಬುದು ಜಿಲ್ಲೆಯ ಜನರ ಅಭಿಪ್ರಾಯವಾಗಿತ್ತು. ಆದರೆ ಕುಟುಂಬ ರಾಜಕಾರಣ ಅವರನ್ನು ತುಮಕೂರಿಗೆ ಹೋಗುವಂತೆ ಮಾಡಿತು. ಅವರು ಇಡೀ ದೇಶದ ಮುತ್ಸದಿರಾಜಕಾರಣಿ, ರಾಜ್ಯ ಹಾಗೂ ದೇಶದ ಆಸ್ತಿ. ಅವರನ್ನು ತುಮಕೂರಿನಲ್ಲಿ ಸೋಲಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಾವು ಸೋತರೂ ವ್ಯವಸ್ಥಿತವಾಗಿ ಚುನಾವಣೆಯನ್ನ ಎದುರಿಸಿದ್ದೇವೆ. ಇನ್ನಷ್ಟು ತಂತ್ರಗಳನ್ನ ಮಾಡಿದ್ದರೆ ಗೆಲುವನ್ನು ಕಾಣಬಹುದಿತ್ತು. ನರೇಂದ್ರ ಮೋದಿಯವರ ನೇತ್ರತ್ವದಲ್ಲಿ ಪಕ್ಷ ಸುಭದ್ರವಾಗಿದೆ. ಕಾಶ್ಮೀರದಿಂದ ಕರ್ನಾಟಕದ ಚಾಮರಾಜನಗರದವರೆಗೂ ಪಕ್ಷದ ಬೆಳವಣಿಗೆ ಆಗಿದೆ. ರಾಜ್ಯ ಸರ್ಕಾರದ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿ ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀನಾಯವಾಗಿ ಹೀಯಾಳಿಸಿದವರು ಹೀನಾಯವಾಗಿ ಸೋತಿದ್ದಾರೆ. ಈ ಪಟ್ಟಿಯಲ್ಲಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಿಎಂ ಕುಮಾರಸ್ವಾಮಿ ಕೂಡ ಇದ್ದಾರೆ. ಎಚ್.ಡಿ.ರೇವಣ್ಣ ಅಭಿವೃದ್ಧಿ ಬಗ್ಗೆ ಮಾತಾಡಿದರೆ ಅವರ ಪರ ಇರುತ್ತೇನೆ. ರಾಜಕೀಯ ಮಾತನಾಡಿದರೆ ನಾನು ಅವರ ವಿರುದ್ಧವಾಗಿರುತ್ತೇನೆ. ನಾನು ಎನ್ನುವುದನ್ನು ಬಿಡದಿದ್ದರೆ ಜನ ಮನೆಗೆ ಕಳುಹಿಸುತ್ತಾರೆ. ಇದಕ್ಕೆ ಉದಾಹರಣೆಯೆಂದರೆ ಮಂಡ್ಯ ಕ್ಷೇತ್ರ ಎಂದು ಸಿಎಂ ಕುಮಾರಸ್ವಾಮಿಯವರ ವಿರುದ್ಧ ಗುಡುಗಿದರು.

    ನರೇಂದ್ರ ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದರು. ಸಚಿವರು ತಮ್ಮ ಮಾತಿಗೆ ಬದ್ಧರಾಗಿರಬೇಕು ಎಂದರು.

    ಆಪರೇಷನ್ ಕಮಲದ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಯಾರಾದರು ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ. ಆಪರೇಷನ್ ಮಾಡಲು ನಾನು ಡಾಕ್ಟರ್ ಅಲ್ಲ ಎಂದು ನಗೆ ಬೀರಿದರು.

    ಹಾಸನ ಜಿಲ್ಲೆಗೆ ಐಐಟಿ ಬೇಡ. ಮೊದಲು ರೈತರಿಂದ ವಶಪಡಿಸಿಕೊಂಡಿರುವ ಭೂಮಿ ವಾಪಾಸ್ ನೀಡಬೇಕು. ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ ಐಐಟಿಗೆ ವಶಪಡಿಸಿಕೊಂಡಿರುವು ಭೂಮಿಯನ್ನು ರೈತರಿಗೆ ವಾಪಾಸ್ ಕೊಡಿಸುತ್ತೇನೆ. ಇದೇ ನನ್ನ ಮೊದಲ ಕಮಿಟ್ ಮೆಂಟ್. ಜಾಗ ಪಡೆದು ಮನೆ ರೈತರ ಹಾಳುಮಾಡುವುದು ಬೇಡ. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲೇ ವಿಮಾನ ನಿಲ್ದಾಣ ಮಾಡಲಿ. ಹೆಚ್ಚುವರಿ ಭೂಮಿ ಸ್ವಾಧೀನ ಅವಶ್ಯಕತೆ ಇಲ್ಲ ಎಂದು ಹೇಳಿದರು.

  • ಕಾರು ಚಾಲಕನನ್ನು ಎತ್ತಿಕಟ್ಟಿ ಅಂಬೇಡ್ಕರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ : ಪ್ರೀತಂ ಗೌಡ

    ಕಾರು ಚಾಲಕನನ್ನು ಎತ್ತಿಕಟ್ಟಿ ಅಂಬೇಡ್ಕರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್ : ಪ್ರೀತಂ ಗೌಡ

    ಹಾಸನ: ಒಬ್ಬ ಕಾರು ಚಾಲಕನನ್ನು ಎತ್ತಿಕಟ್ಟುವ ಮೂಲಕ ಬಿ.ಆರ್.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಇದೇ ಕಾಂಗ್ರೆಸ್ ಮತ್ತು ಘಟಬಂಧನ್ ಎಂದು ಹೇಳಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕರು, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಅಂತ್ಯಸಂಸ್ಕಾರಕ್ಕೆ ಕಾಂಗ್ರೆಸ್ಸಿಗರು ಆರು ಬೈ ಮೂರು ಜಾಗವನ್ನೂ ಸಹ ನೀಡಲಿಲ್ಲ. ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮೃತಪಟ್ಟಾಗ ಸಮಾಧಿ ನಿರ್ಮಾಣಕ್ಕೆ 11 ಎಕರೆ ನೀಡಿದರು. ಇಂದಿರಾ ಗಾಂಧಿ ಅಂತ್ಯ ಸಂಸ್ಕಾರವನ್ನು 16 ಎಕರೆಯಲ್ಲಿ ಮಾಡಿದರು. ಆದರೆ ಅಂಬೇಡ್ಕರ್ ಅವರು ಮೃತಪಟ್ಟಾಗ ಮುಂಬೈನ ಕಡಲ ತೀರದಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ಮಾಡಿದ್ದು ಇದೇ ಕಾಂಗ್ರೆಸ್ ಎಂದು ದೂರಿದರು.

    ಕಾಂಗ್ರೆಸ್‍ನವರು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡರೇ ಹೊರತು ಯಾವತ್ತೂ ಅಧಿಕಾರ ನೀಡಲಿಲ್ಲ. ಹತ್ತು ವರ್ಷಗಳ ಯುಪಿಎ ಅಧಿಕಾರದಲ್ಲಿದ್ದರೂ ಒಬ್ಬ ದಲಿತರಿಗೆ ರಾಷ್ಟ್ರಪತಿ ಸ್ಥಾನ ಮಾಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಹಲವು ಆಯ್ಕೆಗಳಿದ್ದರೂ ಸಹ ದಲಿತ ನಾಯಕ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದರು ಎಂದು ತಿಳಿಸಿದರು.

    ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲವೂ ಗಾಂಧಿ ಕುಟುಂಬಕ್ಕೆ ಇರಲಿ ಎನ್ನುತ್ತಾರೆ. ಹಾಸನದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಪ್ಪ ಮಕ್ಕಳು, ಮೊಮ್ಮಕ್ಕಳು ಎಲ್ಲವೂ ನಮಗೆ ಇರಲಿ ಅಂತ ಹೇಳುತ್ತಾರೆ. ಇವರು ದಲಿತರಿಗೆ ಯಾವುದೇ ಅಧಿಕಾರ ಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.

  • ಗೌಡರ ಕುಟುಂಬ ಗೂಂಡಾಗಿರಿ ಕುಟುಂಬವಲ್ಲ – ಕಲ್ಲು ತೂರಾಟ ಮಾಡಿದವ್ರನ್ನ ಕ್ಷಮಿಸಲ್ಲ: ಸಿಎಂ ಎಚ್‍ಡಿಕೆ

    ಗೌಡರ ಕುಟುಂಬ ಗೂಂಡಾಗಿರಿ ಕುಟುಂಬವಲ್ಲ – ಕಲ್ಲು ತೂರಾಟ ಮಾಡಿದವ್ರನ್ನ ಕ್ಷಮಿಸಲ್ಲ: ಸಿಎಂ ಎಚ್‍ಡಿಕೆ

    ಬೆಂಗಳೂರು: ಹಾಸನ ನಡೆದಿರುವ ಗಲಾಟೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದು, ಬಿಜೆಪಿ ಶಾಸಕರ ಅಭಿಮಾನಿಗಳೇ ಪ್ರಚೋದನೆ ನೀಡಿದ್ದಾರೆ. ಆದರೆ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಸಿಎಂ ಎಚ್‍ಡಿಕೆ, ಹಾಸನದಲ್ಲಿ ನಡೆದ ಘಟನೆಯಲ್ಲಿ ಕೆಲ ದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಭಿಮಾನಿಗಳು ಅಥವಾ ಪಕ್ಷದ ಕಾರ್ಯಕರ್ತರೋ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಶಾಸಕರ ಬೆಂಬಲಿಗರೇ ಉದ್ರೇಕಕಾರಿಯಾಗಿ ಮಾತನಾಡಿ ಪ್ರಚೋದನೆ ನೀಡಿದ್ದಾರೆ. ಆದರೆ ಜೆಡಿಎಸ್ ಕಾರ್ಯಕರ್ತರೇ ಆದರೂ ಕೂಡ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸಲ್ಲ ಎಂದು ಸಿಎಂ ತಿಳಿಸಿದ್ದಾರೆ. ಇದನ್ನು ಓದಿ: ದೇವೇಗೌಡರ ವಿಕೆಟ್ ಉರುಳುತ್ತೆ ಎಂದ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ

    ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿ ತಕ್ಷಣ ಮೈಸೂರು ವಲಯ ಐಜಿ ಮತ್ತು ಹಾಸನ ಎಸ್‍ಪಿ ಅವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಯಾರೇ ತಪ್ಪು ಮಾಡಿದ್ದರೂ ಕೂಡ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಆದರೆ ದೇವೇಗೌಡರ ಬಗ್ಗೆ ಆವಹೇಳನಕಾರಿಯಾಗಿ ಮಾತನಾಡಿದ್ದೇ ಕಾರಣ ಎಂಬುವುದು ನನಗೆ ಮಾಹಿತಿ ಲಭಿಸಿದೆ. ದೇವೇಗೌಡರ ಕುಟುಂಬ ಯಾವತ್ತೂ ಗೂಂಡಾ ಸಂಸ್ಕೃತಿಯನ್ನ ಬೆಂಬಲಿಸಲ್ಲ. ದೇವೇಗೌಡರ ಬಗ್ಗೆ ಇಂತಹ ಹೇಳಿಕೆಗಳು ಇದೇ ಮೊದಲೇನಲ್ಲ. ಈ ಹಿಂದೆ ಇಂತಹ ಅನೇಕ ದಾಳಿಗಳು ದೇವೇಗೌಡರ ಮೇಲೆ ಆಗಿವೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ಗಲಾಟೆ ಮಾಡಿಕೊಂಡರೆ ನನಗೆ ಅಪಮಾನ ಮಾಡಿದಂತೆ ಎಂದು ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಿದ್ದೇನೆ ಎಂದು ಹೇಳಿದ್ದಾಗಿ ವಿವರಿಸಿದರು.

    ನಮ್ಮ ಕುಟುಂಬದ ಮೇಲೆ ದೇವರ ಅನುಕಂಪವಿದ್ದು, ಯಾವುದೋ ಒಂದು ಶಕ್ತಿ ನಮ್ಮನ್ನ ಕಾಪಾಡುತ್ತಿದೆ. ಇಲ್ಲದಿದ್ದರೆ ಸರ್ಕಾರ ನಡೆಸಲು ಆಗುತ್ತಿತ್ತಾ? ಇಷ್ಟೆಲ್ಲಾ ಗಂಡಾಂತರಗಳು ಬಂದರೂ ಕೂಡ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಎಂದು ಭರವಸೆ ನೀಡಿದರು.

    https://www.youtube.com/watch?v=V2Yszl9rLEg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಳೆ ಬಂದ್ರು ನಾವೇ ಬರ್ಸಿದ್ವಿ ಅಂತಾರೆ, ರೋಡ್ ಮಾಡಿದ್ರು ನಾವೇ ಅಂತಾರೆ: ಎಚ್‍ಡಿಡಿ ವಿರುದ್ಧ ಬಿಜೆಪಿ ಶಾಸಕ ಗರಂ

    ಮಳೆ ಬಂದ್ರು ನಾವೇ ಬರ್ಸಿದ್ವಿ ಅಂತಾರೆ, ರೋಡ್ ಮಾಡಿದ್ರು ನಾವೇ ಅಂತಾರೆ: ಎಚ್‍ಡಿಡಿ ವಿರುದ್ಧ ಬಿಜೆಪಿ ಶಾಸಕ ಗರಂ

    ಹಾಸನ: ಮಳೆ ಬಂದರು ನಾವೇ ಮಳೆ ಬರುವಂತೆ ಮಾಡಿದ್ದು ಎಂದು ಹೇಳುತ್ತಾರೆ. ಕ್ಷೇತ್ರದಲ್ಲಿ ರಸ್ತೆ ಕೆಲಸ ಮಾಡಿಸಿದರು ನಮ್ಮದೇ ಎಂದು ಹೇಳುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಹಾಸನ ಲೋಕಸಭಾ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಶಕ್ತಿ ಕೊಟ್ಟಿದ್ದು, ಆದರೆ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಸಮಸ್ಯೆ ಪರಿಹರಿಸಲು ಮಾತ್ರ ವಿಫಲರಾಗಿದ್ದಾರೆ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಮಾಜಿ ಪ್ರಧಾನಿಗಳ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಆನೆ ದಾಳಿ ನಿಯಂತ್ರಣ ಹಾಗೂ ಪರಿಹಾರ ಕೋರಿ ಸಕಲೇಶಪುರದ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದ್ದು, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಇಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ನಾಲ್ಕು ದಶಕದಿಂದ ಹಾಸನ ಲೋಕಸಭಾ ಪ್ರತಿನಿಧಿಯಾಗಿದ್ದು, ದೇವರ ಆಶೀರ್ವಾದದಿಂದ ಅವರು ಪಧಾನಿಯೂ ಆಗಿದ್ದಾರೆ. ಆದರೆ ಕ್ಷೇತ್ರದ ಸಂಸದರು ಮಾತ್ರ ಕಾಡಾನೆ ಹಾವಳಿ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಈ ಹೋರಾಟ ಕಳೆದ 3 ವರ್ಷಗಳಿಂದ ನಡೆಯುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ಬೇಕಿರುವುದು ಇಚ್ಛಾಶಕ್ತಿ ಎಂದು ಹೇಳಿದ್ದಾರೆ.

    ಆನೆ ಹಾವಳಿಯಲ್ಲಿ ರಾಜಕೀಯ ಮಾಡಲ್ಲ ಎನ್ನುತ್ತಲೇ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರೀತಂಗೌಡ, ಹಾಸನ ಸಂಸದರೂ ಕಾಡಾನೆ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಹೆದ್ದಾರಿಗೆ ನಿತಿನ್ ಗಡ್ಕರಿ ಭೇಟಿ ಮಾಡಿದಂತೆ ಕೇಂದ್ರ ಅರಣ್ಯ ಸಚಿವರನ್ನ ಭೇಟಿ ಮಾಡಿ ಸಮಸ್ಯೆ ಪರಿಹರಿಸಬಹುದಿತ್ತು. ಅವರದ್ದೇ ಶಾಸಕರೂ, ಸಚಿವರು, ಸಂಸದರು ಹಾಗೂ ಸಿಎಂ ಆಗಿದ್ದರು ಏನು ಮಾಡುತ್ತಾರೋ ಮಾಡಲಿ. ಆನೆ ಹಾವಳಿ ಎಂದಾಕ್ಷಣ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಾರೆ. ಈ ರೀತಿ ಬುದ್ಧಿವಂತಿಕೆ ಮಾತುಗಳನ್ನ ಬಿಟ್ಟು ಕ್ಷೇತ್ರದ ಕಡೆ ಗಮನಹರಿಸಿ ಎಂದು ವ್ಯಂಗ್ಯ ಮಾಡಿದರು. ಇದನ್ನು ಓದಿ : 4 ದಿನದಿಂದ ಪ್ರತಿಭಟನೆ ನಡೆಸಿದ್ರು ಕೇರ್ ಮಾಡ್ತಿಲ್ಲ : ಸಿಎಂಗೆ ಹಾಸನ ಮಹಿಳೆ ಅವಾಜ್

    ರೈತರ ಸಮಸ್ಯೆ ಬಗೆ ಹರಿದರೆ ನಾವೇ ಬೇಕಿದ್ದರೆ ಗಂಧದ ಹಾರ ಹಾಕಿ, ಜೇನು ತುಪ್ಪದ ಅಭಿಷೇಕ ಮಾಡಿ ದೆಹಲಿವರೆಗೂ ಕರೆದುಕೊಂಡು ಹೋಗುತ್ತೇವೆ. ಹೆಸರಿಗೆ ಮಾತ್ರ ರೈತರ ಮಗ, ಮೊದಲು ರೈತರ ಹೆಸರಿನಲ್ಲಿ ಪ್ರಮಾಣ ಮಾಡುವುದನ್ನ ಬಿಡಿ. ನಿಜವಾದ ರೈತರ ಸಮಸ್ಯೆ, ನಿಮ್ಮನ್ನ ಆಯ್ಕೆ ಮಾಡಿದವರ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯ ಮಾಡಿದರು.

    ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಕೈಯಲ್ಲಿ ವಿಷದ ಬಾಟಲ್ ಹಿಡಿದ ರೈತರು ನಾಳೆ ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರುವಂತೆ ಒತ್ತಾಯ ಮಾಡಿದ್ದಾರೆ. ಸಮಸ್ಯೆ ಬಗೆಹರಿಸಲು ವಿಫಲವಾದರೆ ಸಾಮೂಹಿಕವಾಗಿ ವಿಷ ಸೇವನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv