Tag: MLA Munirathna

  • ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ

    ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ

    ಬೆಂಗಳೂರು: ಆರ್.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನ ಜನಪ್ರತಿನಿಧಿಗಳಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಆಕ್ಸಿಜನ್, ಐಸಿಯು ಹಾಗೂ ವೆಂಟಿಲೇಟರ್ ಸಹಿತ 400 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ಸದ್ಯದಲ್ಲೇ ಆರಂಭಿಸುತ್ತಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ ಅವರು, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ದೂರ ದೃಷ್ಟಿಯಿಂದ ಸುಮಾರು 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ನಡೆಯುತ್ತಿದೆ. ಕೇವಲ 40 ದಿನಗಳಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದು ಕೋವಿಡ್ ಕೇರ್ ಸೆಂಟರ್ ಅಲ್ಲ, ಆಸ್ಪತ್ರೆ. 200 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

    ಒಟ್ಟು 400 ಹಾಸಿಗೆಗಳ ಆಸ್ಪತ್ರೆ 75 ಐಸಿಯು ಬೆಡ್, 300 ಆಕ್ಸಿಜನ್ ಬೆಡ್, 25-30 ಹೈ ಫ್ಲೋ ಆಕ್ಸಿಜನ್ ಬೆಡ್ ಒಳಗೊಂಡಿದೆ. ಅಲ್ಲದೆ ನಮ್ಮ ಕ್ಷೇತ್ರದಲ್ಲಿ 10 ಸಾವಿರ ಲೀಟರ್ ಆಕ್ಸಿಜನ್ ಸ್ಟೋರ್ ಮಾಡಿಕೊಳ್ಳುವ ಟ್ಯಾಂಕ್ ನಿರ್ಮಿಸಲಾಗುತ್ತಿದೆ ಎಂದು ಮುನಿರತ್ನ ಅವರು ವಿವರಿಸಿದರು.

    ಈ ಬಾರಿ ಅತೀ ಹೆಚ್ಚು ಸಾವು ಸಂಭವಿಸಿರುವುದು ನೋವು ತಂದಿದೆ. 5 ಲಕ್ಷ ಮತದಾರರಿರುವ ನಮ್ಮ ಆರ್.ಆರ್ ನಗರ ಕ್ಷೇತ್ರದಲ್ಲಿ ಸಹ ಹೆಚ್ಚು ಸಾವು ಸಂಭವಿಸಿವೆ. ಹೀಗಾಗಿ ಆರ್.ಆರ್.ನಗರದಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ಗಂಭೀರ ಸ್ವರೂಪದ ಸೋಂಕಿತರಿಗೆ ಇದರಿಂದ ಸಹಾಯವಾಗಲಿದ್ದು, ಐಸಿಯು ಬೆಡ್ ಸಮಸ್ಯೆ ನೀಗಲಿದೆ ಎಂದರು.

    ಕೊರೊನಾ ಮೊದಲ ಅಲೆ ಮಾರ್ಚ್‍ನಲ್ಲಿ ಆರಂಭವಾಗಿ, ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಇಳಿಕೆಯಾಗಿತ್ತು. ಈ ವರ್ಷ ಸಹ ಮಾರ್ಚ್‍ನಲ್ಲಿ 2ನೇ ಅಲೆ ಆರಂಭವಾಗಿದೆ. ಮಾರ್ಚ್, ಏಪ್ರಿಲ್‍ನಲ್ಲಿ ಅತೀ ಹೆಚ್ಚು ಸಾವು ಸಂಭವಿಸಿವೆ. ನಮ್ಮ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನಾಯಕರು, ಉಸ್ತುವಾರಿ ಸಚಿವರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಾವು ಸಂಭವಿಸಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.

    ಮುನಿರತ್ನ ಅವರ ಕಾರ್ಯವೈಖರಿಗೆ ವಾರ್ ರೂಂ ಮುಖ್ಯಸ್ಥರೂ ಆಗಿರುವ ಸಚಿವ ಅರವಿಂದ ಲಿಂಬಾವಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಎಲ್ಲ ಜನಪ್ರತಿನಿಧಿಗಳು ಕೈ ಜೋಡಿಸಿ ಕೊರೊನಾ ತೊಲಗಿಸಬೇಕಿದೆ. ಕೊರೊನಾ ಯುದ್ಧದಲ್ಲಿ ಮುನಿರತ್ನ ಕೈಜೋಡಿಸಿರುವುದು ಖುಷಿ ತಂದಿದೆ. ಆಕ್ಸಿಜನ್, ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಚಿಕಿತ್ಸಾ ಕೇಂದ್ರವನ್ನು ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ ಎಂದಿದ್ದಾರೆ.

  • ಮುನಿರತ್ನ ರಾಜೀನಾಮೆ ನೀಡಿದ್ರೂ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಡಿಕೆಶಿ

    ಮುನಿರತ್ನ ರಾಜೀನಾಮೆ ನೀಡಿದ್ರೂ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಡಿಕೆಶಿ

    – ಅವ್ರು ನನ್ನ ಜೊತೆಗಿದ್ದಾರೆ, ನಾನು ಅವ್ರ ಜೊತೆ ಇದ್ದೇನೆ

    ಬೆಂಗಳೂರು: ಆರ್.ಆರ್.ನಗರ ಶಾಸಕ ಮುನಿರತ್ನ ರಾಜೀನಾಮೆ ನೀಡಿದರೂ ಅವರ ನಿರ್ಮಾಣದ ಕುರುಕ್ಷೇತ್ರ ಸಿನಿಮಾ ಆಡಿಯೋ ರಿಲೀಸ್‍ಗೆ ಸಚಿವ ಡಿ.ಕೆ.ಶಿವಕುಮಾರ್ ಆಗಮಿಸಿದ್ದಾರೆ.

    ಕೋರಮಂಗಲ ಸ್ಟೇಡಿಯಂನಲ್ಲಿ ಕುರುಕ್ಷೇತ್ರ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮುಖ್ಯ ಅತಿಥಿಗಳು ಸಿಎಂ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಮುದ್ರಿಸಲಾಗಿತ್ತು. ಆದರೆ ಸರ್ಕಾರ ಉಳಿಸಿಕೊಳ್ಳುವಲ್ಲಿ ದೋಸ್ತಿಗಳ ಮಧ್ಯೆ ಅಸಲಿ ಕುರುಕ್ಷೇತ್ರ ನಡೆಯುತ್ತಿದೆ. ಹೀಗಾಗಿ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.

    ನಿರ್ಮಾಪಕ ಮುನಿರತ್ನ ಅವರು ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರ ಆಪ್ತರಾಗಿದ್ದಾರೆ. ಆಪ್ತರೇ ರಾಜೀನಾಮೆ ರಾಜೀನಾಮೆ ನೀಡಿ ಶಾಕ್ ಕೊಟ್ಟಿದ್ದರೂ ಸಚಿವರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಮುನಿರತ್ನ ನನ್ನ ಆತ್ಮೀಯ ಸ್ನೇಹಿತ. ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸದ್ಯದ ರಾಜಕೀಯ ಬೆಳವಣಿಗೆ ಎಲ್ಲರಿಗೂ ಗೊತ್ತಿದೆ ಎಂದರು. ಶಾಸಕರ ಮನವೊಲಿಸುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುನಿರತ್ನ ನನ್ನ ಜೊತೆಗಿದ್ದಾರೆ. ನಾನು ಅವರ ಜೊತೆ ಇದ್ದೇನೆ ಎಂದು ಹೇಳಿದರು.

  • ಮುನಿರತ್ನ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ರಾ ಡಿಕೆಶಿ?

    ಮುನಿರತ್ನ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ರಾ ಡಿಕೆಶಿ?

    ಬೆಂಗಳೂರು: ರಾಜರಾಜೇಶ್ವರಿ ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಹರಿದು ಹಾಕಿದ್ದಾರಾ ಎಂಬ ಪ್ರಶ್ನೆ ಭಾರೀ ಚರ್ಚೆಯಾಗುತ್ತಿದೆ.

    ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ಒಟ್ಟು 12 ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಲು ತೆರಳಿದ್ದರು. ರಾಜೀನಾಮೆ ನೀಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಪೀಕರ್ ಕಚೇರಿಯನ್ನು ಡಿಕೆ ಶಿವಕುಮಾರ್ ಪ್ರವೇಶಿಸಿದ್ದಾರೆ. ಈ ವೇಳೆ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ.

    ಶಾಸಕರು ರಾಜೀನಾಮೆ ನೀಡಿದ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಕಾರಿನಲ್ಲಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಈಗಾಗಲೇ ಮುನಿರತ್ನ ಅವರ ರಾಜೀನಾಮೆಯನ್ನು ತಪ್ಪಿಸಿರುವ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು, ಉಳಿದ ಮೂವರು ಶಾಸಕರ ಮನವೊಲಿಸಿ ರಾಜೀನಾಮೆಯನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

    ರಾಜೀನಾಮೆ ನೀಡಿದವರು ಯಾರ‍್ಯಾರು?:
    ಗೋಕಾಕ್‍ನ ಶಾಸಕ ರಮೇಶ್ ಜಾರಕಿಹೊಳಿ, ಹೀರೆಕೆರೂರಿನ ಬಿ.ಸಿ.ಪಾಟೀಲ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಅಥಣಿಯ ಮಹೇಶ್ ಕುಮಕಟಳ್ಳಿ, ಕೆ.ಆರ್.ಪೇಟೆಯ ನಾರಾಯಣಗೌಡ, ಜೆಡಿಎಸ್‍ನ ಗೋಪಾಲಯ್ಯ, ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ, ಯಶವಂತಪುರದ ಎಸ್.ಟಿ.ಸೋಮಶೇಖರ್ ಹಾಗೂ ಭೈರತಿ ಬಸವರಾಜು ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಮಾಜಿ ಅಧ್ಯಕ್ಷ ಹುಣಸೂರು ಶಾಸಕ ವಿಶ್ವನಾಥ್, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ರಾಜೀನಾಮೆ ನೀಡಿದ್ದಾರೆ.

  • ಬಿಬಿಎಂಪಿ ಅಧಿಕಾರಿಗಳಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು: ಮುನಿರತ್ನ ಕಿಡಿ

    ಬಿಬಿಎಂಪಿ ಅಧಿಕಾರಿಗಳಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು: ಮುನಿರತ್ನ ಕಿಡಿ

    ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಶಾಸಕ ಮುನಿರತ್ನ ಅವರು ಅಸಮಾಧಾನ ಹೊರಹಕಿದ್ದಾರೆ.

    ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಶಾಸಕರು, ಹಣ ಕೊಟ್ಟರೆ ರಾತ್ರೋ ರಾತ್ರಿ ಡಾಂಬರ್ ಹಾಕುತ್ತಾರೆ. ಆದರೆ ರಸ್ತೆ ಅಗಲೀಕರಣ ವಿಚಾರದಲ್ಲಿ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. 2006ರಿಂದಲೂ ನಗರದಲ್ಲಿ ರಸ್ತೆ ಅಗಲೀಕರಣ ಆಗಿಲ್ಲ ಎಂದು ಗುಡುಗಿದರು.

    ಇಂದಿರಾ ಕ್ಯಾಂಟೀನ್‍ನಲ್ಲಿ ಪ್ರತಿ ದಿನ 100 ಜನರೂ ಊಟ ಮಾಡುತ್ತಿಲ್ಲ. ಸದ್ಯ ಇರುವ ಗುತ್ತಿಗೆದಾರರನ್ನು ರದ್ದು ಮಾಡಿ, ಹೊಸದಾಗಿ ಗುತ್ತಿಗೆದಾರರಿಗೆ ನೀಡಿ. ಈ ಸಂಬಂಧ ಆಗಸ್ಟ್‍ನಲ್ಲಿ ಹೊಸ ಟೆಂಡರ್ ನೀಡಬೇಕು ಎಂದು ಆಗ್ರಹಿಸಿದರು.

    ಈ ವೇಳೆ ಧ್ವನಿಗೂಡಿಸಿದ ಬಿಬಿಎಂಪಿ ಬಿಜೆಪಿ ಸದಸ್ಯ ಡಾ.ರಾಜು ಅವರು, ಚೆನ್ನಾಗಿಲ್ಲದ ಇಂದಿರಾ ಕ್ಯಾಂಟೀನ್ ಊಟವನ್ನೇ ಕೌನ್ಸಿಲ್ ಸಭೆಯಲ್ಲಿ ನಮಗೆ ಕೊಡುತ್ತಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದದಿಂದಲೇ ಊಟದ ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ಊಟದ ಲೆಕ್ಕದಲ್ಲಿಯೂ ವ್ಯತ್ಯಾಸವಾಗುತ್ತಿದೆ. ತಿಂದವರು 10 ಜನ, ಆದರೆ ಬಿಲ್ ಇರುವುದು 100 ಜನರದ್ದು. ಕೂಡಲೇ ಲೆಕ್ಕದಲ್ಲಿ ಆಗುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಿ ಎಂದು ಪಕ್ಷಾತೀತವಾಗಿ ಆಗ್ರಹ ಕೇಳಿ ಬಂದಿತು.

    ಬಿಬಿಎಂಪಿ ಕೌನ್ಸಿಲ್ ಸಭೆಯ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಹೊಸ ಅಪಾರ್ಟ್‍ಮೆಂಟ್‍ಗಳಿಗೆ ಅನುಮತಿ ನೀಡಬಾರದು. ಈ ಕುರಿತಂತೆ ಗುರುವಾರ ಡಿಸಿಎಂ ಜಿ.ಪರಮೇಶ್ವರ್ ವಿಚಾರ ಪ್ರಸ್ತಾಪಿಸಿದ್ದರು. ನಗರದ ಹಿತ ದೃಷ್ಟಿಯಿಂದ ಈ ನಿರ್ಧಾರ ಒಳ್ಳೆಯದು ಎಂದು ಹೇಳಿದರು.

    ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯಿದೆ. ಜಲಮಮಂಡಳಿ ಪೂರೈಕೆ ಮಾರುತ್ತಿರುವ ನೀರಿನಲ್ಲಿ ಶೇ.40ರಷ್ಟು ಸೋರಿಕೆ ಆಗುತ್ತಿದೆ. ಪೆಟ್ರೋಲ್, ಡೀಸೆಲ್ ಲಕ್ಷಾಂತರ ಲೀಟರ್ ಪೂರೈಕೆ ಆಗುತ್ತಿದ್ದರೂ ಒಂದು ಹನಿಯೂ ಸೋರಿಕೆ ಆಗುತ್ತಿಲ್ಲ. ಆದರೆ ಜಲಮಂಡಳಿ ನೀರು ಮಾತ್ರ ಸೋರಿಕೆ ಆಗುತ್ತಿದೆ. ಇದು ಜಲಮಂಡಳಿ ನಿರ್ಲಕ್ಷ್ಯವನ್ನು ತಿಳಿಸುತ್ತದೆ ಎಂದು ಚಾಟಿ ಬೀಸಿದರು.

    ಈ ಮಧ್ಯೆ ಸಭೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಆರೋಗ್ಯ ಕೇಂದ್ರಗಳು, ಶಾಲೆಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡುವಂತೆ ಆಗ್ರಹ ಕೇಳಿ ಬಂದಿತು. ಲೈಬ್ರರಿ ಸೆಸ್, ಬೆಗ್ಗರ್ ಸೆಸ್ ಹಣ ಪಾಲಿಕೆ ವ್ಯಾಪ್ತಿಗೆ ಸೇರಬೇಕು. ಬಿಬಿಎಂಪಿ ತೆರಿಗೆ ಸಂಗ್ರಹಿಸಿ ರಾಜ್ಯಕ್ಕೆ ಕೊಡುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಿ ಎಂಬ ಆಗ್ರಹ ಕೇಳಿ ಬಂದಿತು.

    ಶಾಸಕ ಸತೀಶ್ ರೆಡ್ಡಿ ಅವರು ಮಾತನಾಡಿ, ತೆರಿಗೆ ಹಣ ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಆಡಳಿತ ಪಕ್ಷ ವಿಫಲವಾಗಿದೆ. ಅಭಿವೃದ್ಧಿ ಹೆಸರಲ್ಲಿ ಹಣ ಪೋಲು ಮಾಡಲಾಗುತ್ತದೆ. ಟ್ರಾಫಿಕ್, ನೀರಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಆಡಳಿತದಲ್ಲಿ ಹೊಸದಾಗಿ ಯಾವುದೇ ನೀರಿನ ಯೋಜನೆ ಜಾರಿ ತಂದಿಲ್ಲ. ಬಿಜೆಪಿ ಆಡಳಿತದಲ್ಲಿದ್ದಾಗ ನೀರಿನ ಯೋಜನೆ ಕೈಗೊಂಡಿದ್ದೇವು. ಆದರೆ ರಾಜ್ಯ, ಬಿಬಿಎಂಪಿ ಆಡಳಿತ ವರ್ಗ ಹೊಸ ಯೋಜನೆ ಜಾರಿಗೆ ತರಲು ವಿಫಲವಾಗಿವೆ ಎಂದು ಅಸಮಧಾನ ಹೊರ ಹಾಕಿದರು.

  • ವಿಷ್ಣು ಕುಟುಂಬದ ನಿರ್ಧಾರದ ಮೇಲೆ ಸ್ಮಾರಕದ ಚರ್ಚೆ: ಶಾಸಕ ಮುನಿರತ್ನ

    ವಿಷ್ಣು ಕುಟುಂಬದ ನಿರ್ಧಾರದ ಮೇಲೆ ಸ್ಮಾರಕದ ಚರ್ಚೆ: ಶಾಸಕ ಮುನಿರತ್ನ

    ಬೆಂಗಳೂರು: ಕುಟುಂಬದವರ ಅನಿಸಿಕೆಗೂ ಅಭಿಮಾನಿಗಳ ಮಾತಿಗೂ ವ್ಯತ್ಯಾಸವಿರುತ್ತದೆ. ಹೀಗಾಗಿ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ಅವರ ಕುಟುಂಬದವರ ನಿರ್ಧಾರದ ಮೇಲೆ ನಾನು ಸಿಎಂ ಕುಮಾರಸ್ವಾಮಿ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಹೇಳಿದ್ದಾರೆ.

    ಭಾರತಿ ವಿಷ್ಣುವರ್ಧನ್ ನಿವಾಸಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿ ಮಾತನಾಡಿದ ಅವರು, ವರನಟ ರಾಜ್‍ಕುಮಾರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಸ್ಮಾರಕದಂತೆ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ಆದರೆ ಎಲ್ಲಿ, ಹೇಗೆ ಎನ್ನುವ ಕುರಿತು ವೈಯಕ್ತಿಕವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ ಎಂದರು. ಇದನ್ನು ಓದಿನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್

    ನಾನು ಕೂಡ ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿ. ಅವರ ಸ್ಮಾರಕ ಆದಷ್ಟು ಬೇಗ ನಿರ್ಮಾಣವಾಗಬೇಕು ಎನ್ನುವುದು ನನ್ನ ಉದ್ದೇಶ. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಭಾರತಿ ವಿಷ್ಣುವರ್ಧನ್ ಅವರು ನೀಡಿರುವ ಮನವಿ ಪತ್ರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಲುಪಿಸಿ, ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಜಾಗದ ಮಾಲೀಕ ನಡುವೆ ಜಗಳ ಉಂಟಾಗಿ, ಕಾಮಗಾರಿ ತಡೆಯಲಾಗಿತ್ತು. ಜಾಗದ ಸಮಸ್ಯೆಯನ್ನು ಬಗೆಹರಿಸಿ ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

    ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಮುಂದಾದರೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ ಕೈ ಮುಗಿದ ಭಾರತೀ ವಿಷ್ಣುವರ್ಧನ್ ಅವರು, ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂದು ಮೌನವಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv