Tag: MLA Mahesh Kumathalli

  • ಶಾಸಕ ಮಹೇಶ್ ಕುಮಟಳ್ಳಿಯಿಂದ ಆಟೋ ಚಾಲಕನಿಗೆ ಟ್ರಾಫಿಕ್ ಪಾಠ

    ಶಾಸಕ ಮಹೇಶ್ ಕುಮಟಳ್ಳಿಯಿಂದ ಆಟೋ ಚಾಲಕನಿಗೆ ಟ್ರಾಫಿಕ್ ಪಾಠ

    ಚಿಕ್ಕೋಡಿ (ಬೆಳಗಾವಿ): ಜಿಲ್ಲೆಯ ಅಥಣಿಯಲ್ಲಿ ಕಾಂಗ್ರೆಸ್ ರೆಬೆಲ್ ಶಾಸಕ ಮಹೇಶ್ ಕುಮಟಳ್ಳಿ ಅವರು ಆಟೋ ಚಾಲಕನಿಗೆ ಟ್ರಾಫಿಕ್ ಪಾಠ ತೆಗೆದುಕೊಂಡಿದ್ದಾರೆ.

    ಭೂಸ್ವಾಧೀನ ಕಾಯಿದೆ ತಿದ್ದುಪಡಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಸದಸ್ಯರು ಅಥಣಿಯಲ್ಲಿ ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಶಾಸಕರು ಕೂಡ ರೈತರಿಗೆ ಬೆಂಬಲ ನೀಡಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಟೋದಲ್ಲಿ ಕೂರಿಸಿಕೊಂಡು ಚಾಲಕ ಹೋಗುತ್ತಿದ್ದ. ತಕ್ಷಣವೇ ಪೊಲೀಸರು ತಡೆದು ವಿಚಾರಣೆ ನಡೆಸಿದರು.

    ಆಟೋ ಚಾಲಕ ಬಳಿಗೆ ಬಂದ ಶಾಸಕ ಮಹೇಶ್ ಕುಮಟಳ್ಳಿ ಅವರು, ನಿನಗೆ ಬುದ್ಧಿ ಇದೇಯೊ ಇಲ್ಲವೋ? ಇಷ್ಟು ಮಕ್ಕಳನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಿರುವೆ. ಏನಾದರೂ ಅನಾಹುತವಾದರೆ ಯಾರು ಜವಾಬ್ದಾರರು? ಸಂಚಾರ ನಿಯಮ ಪಾಲನೆ ಮಾಡಬೇಕು. ಇದೇ ಕೊನೆ ಮತ್ತೊಮ್ಮೆ ಹೀಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚಾಲಕನಿಗೆ ಎಚ್ಚರಿಕೆ ನೀಡಿದರು.

    ಪ್ರತಿಭಟನೆಯ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯು ರೈತ ವಿರೊಧಿ ನೀತಿಯನ್ನು ಹೊಂದಿದೆ. ಕೂಡಲೇ ಇದನ್ನು ನಿಲ್ಲಿಸಬೇಕು. ಯಾವುದೇ ಸರ್ಕಾರವು ರೈತ ವಿರೋಧಿ ನೀತಿ ಅನುಸರಿಸಬಾರದು. ರೈತರ ಭೂಮಿಯನ್ನು ಯೋಗ್ಯ ಬೆಲೆಗೆ ಖರೀದಿಸುವಂತಾಗಬೇಕು ಎಂದು ಆಗ್ರಹಿಸಿದರು.

  • ಕುತೂಹಲ ಮೂಡಿಸಿದ ಸಿಎಂ ಕುಮಟಳ್ಳಿ ಮಾತುಕತೆ

    ಕುತೂಹಲ ಮೂಡಿಸಿದ ಸಿಎಂ ಕುಮಟಳ್ಳಿ ಮಾತುಕತೆ

    ಬೆಂಗಳೂರು: ಮಾಜಿ ಪ್ರಧಾನಿ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದ ಬಳಿಕ ವಿಧಾನಸೌಧದಲ್ಲಿ ಶಾಸಕ ಮಹೇಶ್ ಕುಮಟಳ್ಳಿ ಅವರೊಂದಿಗೆ ಚರ್ಚೆ ನಡೆಸಿ ಸಿಎಂ ಕುಮಾರಸ್ವಾಮಿ ಅವರು ಕುತೂಹಲ ಮೂಡಿಸಿದರು.

    ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಅವರ ಮನವೊಲಿಕೆಗೆ ಮತ್ತೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದ್ದು, ಮಹೇಶ್ ಕುಮಟಳ್ಳಿ ಅವರು ಮೂಲಕ ಸಂದೇಶ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

    ಸತತ ಒಂದು ಗಂಟೆ ವಿಧಾನಸೌಧದಲ್ಲಿ ಮಹೇಶ್ ಕುಮಟಳ್ಳಿ ಜೊತೆ ಸಿಎಂ ಎಚ್‍ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಚರ್ಚೆ ನಡೆಸಿದ್ದರು. ಆ ಬಳಿಕ ಕುಮಟಳ್ಳಿ ಅವರು ನೇರ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಆಗಮಿಸಿದ್ದರು. ಕುಮಟಳ್ಳಿ ಅವರ ಮೂಲಕ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ರಮೇಶ್ ಜಾರಕಿಹೊಳಿಗೆ ಸಿಎಂ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದ್ದು, ಮತ್ತೆ ರಮೇಶ್ ಜಾರಕಿಹೊಳಿಯವರನ್ನ ಮಂತ್ರಿ ಮಾಡುವ ಆಫರ್ ನೀಡಿದ್ದರಾ ಎಂಬ ಪ್ರಶ್ನೆ ಮೂಡಿದೆ.

    ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮತ್ತೆ ಮಹೇಶ್ ಕುಮಟಳ್ಳಿ ಅವರು ಸಿಎಂ ಕುಮಾರಸ್ವಾಮಿರನ್ನ ಭೇಟಿ ಮಾಡಲಿದ್ದಾರೆ. ಈ ವೇಳೆ ಸಿಎಂ ಸಂದೇಶಕ್ಕೆ ಜಾರಕಿಹೊಳಿ ಏನು ಹೇಳಿದ್ದಾರೆ ಎಂಬ ವರದಿ ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲದೇ ರಮೇಶ್ ಅವರ ಬೇಡಿಕೆಗಳನ್ನು ಕುಮಟಳ್ಳಿ ಅವರು ಸಿಎಂ ಮುಂದಿಡಲಿದ್ದಾರೆ.

    ಇತ್ತ ರಮೇಶ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಶಾಸಕ ಮಹೇಶ ಕುಮಟಳ್ಳಿ, ಸತೀಶ್ ಜಾರಕಿಹೊಳಿ ಜೊತೆಗೆ ರಮೇಶ್ ಜಾರಕಿಹೊಳಿ ಅವರಿಗೂ ಸಚಿವ ಸ್ಥಾನ ಕೊಡಲಿ. ಇಬ್ಬರು ಸಹೋದರು ಕೂಡ ಸಂಘಟನಾ ಚತುರರು. ಸದ್ಯ ಸತೀಶ ಜಾರಕಿಹೊಳಿ ಸಚಿವರಿದ್ದಾರೆ. ರಮೇಶ ಜಾರಕಿಹೊಳಿ ಅವರನ್ನು ಮಂತ್ರಿ ಮಾಡಲಿ. ನಾನು ಸಿಎಂ ಭೇಟಿ ಮಾಡಿ ಕ್ಷೇತ್ರಕ್ಕೆ ಅಗತ್ಯವಿರುವ ನೀರಿನ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇನೆ. ಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಮಾಡುವಷ್ಟು ದೊಡ್ಡವನಲ್ಲ ಎಂದು ತಿಳಿಸಿದರು. ಅಲ್ಲದೇ ಆಪರೇಷನ್ ಕಮಲದ ಬಗ್ಗೆ ಮಾತನಾಡುವುದಾದರೆ ರಹಸ್ಯವಾಗಿ ಬರಬಹುದಿತ್ತು, ಆದರೆ ನಾನು ಆ ಬಗ್ಗೆ ಚರ್ಚೆ ಮಾಡಲು ಬಂದಿಲ್ಲ ಎಂದು ಸಿಎಂ ಮತ್ತು ರಮೇಶ್ ಜಾರಕಿಹೊಳಿ ಮಧ್ಯೆ ಸಂದೇಶ ವಾಹಕನ ವಿಚಾರವನ್ನ ಅಲ್ಲಗೆಳೆದರು.

  • ನಾನು, ರಮೇಶಣ್ಣ ಪಕ್ಷದಲ್ಲೇ ಇದ್ದೇವೆ : ಮಹೇಶ್ ಕುಮಟಳ್ಳಿ

    ನಾನು, ರಮೇಶಣ್ಣ ಪಕ್ಷದಲ್ಲೇ ಇದ್ದೇವೆ : ಮಹೇಶ್ ಕುಮಟಳ್ಳಿ

    ಹುಬ್ಬಳ್ಳಿ: ನಮ್ಮಲ್ಲಿ ಸಣ್ಣ ಅಸಮಾಧಾನ ಇರುವುದು ನಿಜ. ಆದರೆ ಪಕ್ಷದಲ್ಲಿಯೇ ಅವುಗಳನ್ನು ಸರಿ ಮಾಡಿಕೊಳ್ಳುತ್ತೇವೆ. ನಾನು ಮತ್ತು ರಮೇಶಣ್ಣ ಪಕ್ಷದಲ್ಲೇ ಇರುತ್ತೇವೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕುಂದಗೋಳ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಧಾರ ಮಾಡಲ್ಲ. ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿ ಗೆಲ್ಲಿಸಿಕೊಂಡು ಬರುತ್ತೇವೆ. ರಮೇಶಣ್ಣ ನಾನು ಪಕ್ಷದಲ್ಲೇ ಇದ್ದೇವೆ. ಇದು ಹೈಕಮಾಂಡ್ ಅವರಿಗೂ ತಿಳಿದಿದೆ. ಆದ್ದರಿಂದ ಮಾಧ್ಯಮಗಳಿಗೆ ಈ ಮೂಲಕ ಸ್ಪಷ್ಟಪಡಿಸುತ್ತೇನೆ ಎಂದರು.

    ನಮ್ಮಲ್ಲಿ ಇರುವ ಅಸಮಾಧಾನವನ್ನು ನಾವೇ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸುಕೊಳ್ಳುತ್ತೇವೆ. ಈ ಬಗ್ಗೆ ಹೈಕಮಾಂಡ್‍ಗೆ ತಿಳಿಸಿದ್ದೇವೆ. ನಮ್ಮಲ್ಲಿ ಯಾರು ಸಂಧಾನ ಮಾಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ. ಕುಂದಗೋಳದಲ್ಲಿ ನಾವು ಗೆಲ್ಲುತ್ತೇವೆ. ಸಿಎಂ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಲ್ಲರೂ ನಮ್ಮ ನಾಯಕರಾಗಿದ್ದಾರೆ. ಯಾರು ಅಂತಕ ಪಡೆಯುವ ಅಗತ್ಯವಿಲ್ಲ ಎಂದರು.

    ಇತ್ತ ಕುಂದಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ಕುಮಟಳ್ಳಿ ತಮ್ಮತ್ತ ಸೆಳೆದು ಬಿಜೆಪಿಗೆ ಚಮಕ್ ನೀಡಿದ್ದಾರೆ. ಆ ಮೂಲಕ ಸಮ್ಮಿಶ್ರ ಸರ್ಕಾರ ಚುನಾವಣೆ ಬಳಿಕ ಉಳಿಯುವುದಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.

  • ರಾಜಕೀಯ ಗುರು ರಮೇಶ್ ಜಾರಕಿಹೊಳಿಗೆ ಮಹೇಶ್ ಕುಮಟಳ್ಳಿ ತಿರುಮಂತ್ರ

    ರಾಜಕೀಯ ಗುರು ರಮೇಶ್ ಜಾರಕಿಹೊಳಿಗೆ ಮಹೇಶ್ ಕುಮಟಳ್ಳಿ ತಿರುಮಂತ್ರ

    – ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ

    ಬೆಳಗಾವಿ (ಚಿಕ್ಕೋಡಿ): ರಾಜಕೀಯ ಗುರು, ಮಾಜಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ತಿರುಮಂತ್ರ ಹೇಳಿದ್ದಾರೆ.

    ಮತದಾನದ ಬಳಿಕ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಬಿಡುವುದಿಲ್ಲ. ಅವರು ನಮ್ಮ ನಾಯಕರು ನಿಜ. ಆದರೆ ಪಕ್ಷದ ವರಿಷ್ಠರು ಕೂಡ ನಮ್ಮ ನಾಯಕರೇ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.

    ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅವರ ಪರ ಕಳೆದ 20 ದಿನಗಳಿಂದ ಅಥಣಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಪಕ್ಷ ಬಿಡುವ ಬಗ್ಗೆ ರಮೇಶ್ ಜಾರಕಿಹೊಳಿ ಅವರು ನನ್ನ ಬಳಿ ಏನನ್ನೂ ಹೇಳಿಕೊಂಡಿಲ್ಲ. ಈ ಹಿಂದೆ ನಾನು ಅಲ್ಲಿ ಹೋಗಿದ್ದೆ, ಇಲ್ಲಿದ್ದೆ ಎಂದು ಹೇಳಲಾಗಿತ್ತು. ಯಾರು ಏನೇ ಹೇಳಿದರೂ ನಾನು ಪಕ್ಷ ಬಿಡುವ ಮಾತೇ ಇಲ್ಲ ಎಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮನವೊಲಿಸುವ ಯತ್ನ ಮಾಡಲಾಗುತ್ತದೆ. ಮೈತ್ರಿ ಸರ್ಕಾರ ಬೀಳಿಸಲು ಯಾವುದೇ ಅವಕಾಶ ನೀಡುವುದಿಲ್ಲ. ಸರ್ಕಾರವು 5 ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದೆ ಎಂದು ತಿಳಿಸಿದರು.

  • ದಿಗ್ಬಂಧನದಲ್ಲಿರೋ ಶಾಸಕರನ್ನು ಬಿಡಿಸಿಕೊಡಿ: ಸ್ಪೀಕರ್‌ಗೆ ಯೂತ್ ಕಾಂಗ್ರೆಸ್‍ನಿಂದ ಮನವಿ

    ದಿಗ್ಬಂಧನದಲ್ಲಿರೋ ಶಾಸಕರನ್ನು ಬಿಡಿಸಿಕೊಡಿ: ಸ್ಪೀಕರ್‌ಗೆ ಯೂತ್ ಕಾಂಗ್ರೆಸ್‍ನಿಂದ ಮನವಿ

    – ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯ

    ಬೆಂಗಳೂರು: ದಿಗ್ಬಂಧನದಲ್ಲಿರುವ ನಮ್ಮ ಶಾಸಕರನ್ನು ಬಿಡಿಸಿಕೊಡಿ ಎಂದು ಯೂತ್ ಕಾಂಗ್ರೆಸ್ ಹಾಗೂ ಕ್ಷೇತ್ರದ ಜನರು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

    ಶಾಸಕ ಮಹೇಶ್ ಕುಮಟಳ್ಳಿ ಅವರಿಗಾಗಿ ಅಥಣಿ ಯೂತ್ ಕಾಂಗ್ರೆಸ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಪತ್ತೆಗಾಗಿ ಕ್ಷೇತ್ರದ ಜನರು ಮನವಿ ಸಲ್ಲಿಸಿದ್ದಾರೆ. ಶಾಸಕರು ಕ್ಷೇತ್ರಕ್ಕೆ ಬರುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಸಂಬಂಧ ಕ್ರಮಕೈಗೊಳ್ಳಬೇಕು ಎಂದು ಪತ್ರದ ಮೂಲಕ ಸ್ಪೀಕರ್ ಅವರಿಗೆ ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿರುವ ರಮೇಶ್ ಕುಮಾರ್ ಅವರು, ಗೃಹ ಇಲಾಖೆಗೆ ಪ್ರಕರಣ ವರ್ಗಾವಯಿಸಿದ್ದು, ಶಾಸಕರ ಪತ್ತೆ ಮಾಡುವಂತೆ ತಿಳಿಸಿದ್ದಾರಂತೆ. ಇದನ್ನು ಓದು: ಬಂಡಾಯ ಶಾಸಕರ ಅನರ್ಹತೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ ಕಾಂಗ್ರೆಸ್

    ಪತ್ರದಲ್ಲಿ ಏನಿದೆ?:
    ಅಥಣಿ ಮತ ಕ್ಷೇತ್ರದ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ವಕೀಲ ಪ್ರಮೋದ್ ಹಿರೇಮನಿ ಅವರು ಈ ಪತ್ರವನ್ನು ಬರೆದಿದ್ದಾರೆ. ಶಾಸಕ ಮಹೇಶ್ ಕಮಟಳ್ಳಿ ಅವರ ಗೆಲುವಿಗೆ ನಾನು ಪ್ರಮುಖ ಪಾತ್ರವಹಿಸಿದ್ದೇನೆ. ಕಳೆದ ಕೆಲವು ತಿಂಗಳಿಂದ ಶಾಸಕರು ಕ್ಷೇತ್ರಕ್ಕೆ ಬರದೆ ತಮ್ಮ ಕಚೇರಿಗೆ ಬೀಗ ಹಾಕಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನು ಓದು: ಬಂಡಾಯ ಶಾಸಕರ ರೂಮ್ ಮುಂದೇ ‘ಡು ನಾಟ್ ಡಿಸ್ಟ್ರಬ್’ ಬೋರ್ಡ್

    ಈ ಎಲ್ಲ ಬೆಳವಣಿಗೆಯನ್ನು ನೋಡಿದರೆ ಶಾಸಕರನ್ನು ಯಾರೋ ಅಪಹರಿಸಿ ಗೃಹ ಬಂಧನದಲ್ಲಿ ಇಟ್ಟಿದ್ದಾರೆ ಎಂದು ಅಥಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಈ ಸಂಬಂಧ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದೇವೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದರೂ ಶಾಸಕರು ಕ್ಷೇತ್ರ ಅಥವಾ ಅಧಿವೇಶನಕ್ಕೆ ಬರುತ್ತಿಲ್ಲ. ಇದರಿಂದಾಗಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಅಥಣಿ ಯೂತ್ ಕಾಂಗ್ರೆಸ್ ಕೇಳಿಕೊಂಡಿದೆ.

    ಗೋಕಾಕ ಕ್ಷೇತ್ರದಿಂದ ಕಳೆದ ಐದು ಬಾರಿ ಆಯ್ಕೆಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನಾಪತ್ತೆಯಾಗಿದ್ದಾರೆ. ಕಳೆದ ಐದು ತಿಂಗಳಿನಿಂದ ಬೆರೆಳೆಣಿಕೆಯಷ್ಟು ದಿನಗಳು ಮಾತ್ರ ಕ್ಷೇತ್ರಕ್ಕೆ ಬಂದಿದ್ದಾರೆ. ಕ್ಷೇತ್ರದ ಜನತೆಯ ಕುಂದುಕೊರತೆ ಆಲಿಸುತ್ತಿಲ್ಲ. ಅವರ ಮನೆ ಹಾಗೂ ಕಾರ್ಯಾಲಯದಲ್ಲಿ ವಿಚಾರಿಸಿದರೆ ಮಾಜಿ ಸಚಿವರು ಮುಂಬೈನಲ್ಲಿ ಇರುವುದಾಗಿ ಹೇಳುತ್ತಿದ್ದಾರೆ. ಕ್ಷೇತ್ರ ಅಭಿವೃದ್ಧಿಯ ವಿಚಾರವಾಗಿ ಮಾತನಾಡಲು ಮಾಜಿ ಸಚಿವರು ಕಲಾಪದಲ್ಲಿ ಭಾಗವಹಿಸಿಲ್ಲ ಎಂದು ಜನರು ಆರೋಪಿಸಿದ್ದಾರೆ.

    ಕ್ಷೇತ್ರಕ್ಕೆ ಆದಷ್ಟು ಬೇಗ ಭೇಟಿ ನೀಡಿ, ಜನರ ಕುಂದುಕೊರತೆ ಆಲಿಸುವಂತೆ ರಮೇಶ್ ಜಾರಕಿಹೊಳಿ ಅವರಿಗೆ ಸೂಚನೆ ನೀಡಬೇಕು. ಒಂದು ವೇಳೆ ಅವರು ಒಪ್ಪದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದ ಮೂಲಕ ಸ್ಪೀಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv