Tag: MLA CT ravi

  • ಸ್ಪೀಕರ್ ಮಾತು, ಕೃತಿಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ತಿದ್ದಾರೆ – ಸಿಟಿ ರವಿ ಅಸಮಾಧಾನ

    ಸ್ಪೀಕರ್ ಮಾತು, ಕೃತಿಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ತಿದ್ದಾರೆ – ಸಿಟಿ ರವಿ ಅಸಮಾಧಾನ

    ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ಪಕ್ಷದ ಬಂಡಾಯ ಶಾಸಕರನ್ನು ಅನರ್ಹ ಮಾಡಿರುವ ಸ್ಪೀಕರ್ ನಿರ್ಧಾರಕ್ಕೆ ಬಿಜೆಪಿ ಶಾಸಕ ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಿಎಸ್‍ ಯಡಿಯೂರಪ್ಪ ಅವರು ಸಿಎಂ ಆಗುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿ ಮಲ್ಲೇಶ್ವರದಲ್ಲಿರುವ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ವಿಧಾನ ಸಭಾಧ್ಯಕ್ಷರು ನಿನ್ನೆ ತೆಗೆದುಕೊಂಡ ನಿರ್ಣಯ ಸರಿಯಿಲ್ಲ. ಕೆಲ ತಿಂಗಳ ಹಿಂದೆ ಕೊಟ್ಟಿರುವ ಶಾಸಕರ ಅನರ್ಹ ದೂರಿಗೆ ಈಗ ಅವರನ್ನು ಅನರ್ಹ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ರಾಜೀನಾಮೆ ವಿಚಾರವಾಗಿ ತೀರ್ಮಾನ ಮಾಡಿ ಎಂದು ಹೇಳಿದ್ದರು ಕೂಡ ಅವರು ಅನರ್ಹ ಮಾಡಿದ್ದಾರೆ. ಆ ಮೂಲಕ ಸ್ಪೀಕರ್ ಮಾತು ಮತ್ತು ಕೃತಿಗೆ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.

    ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿ ಸ್ಪೀಕರ್ ಅವರಿಗೆ ನಾನು ತಪ್ಪು ಮಾಡುತ್ತಿದ್ದೇನೆ ಎನ್ನುವಂತೆ ಕಂಡು ಬಂದರು. ಆದ್ದರಿಂದಲೇ ಅವರು ಒಂದೂವರೆ ಗಂಟೆಗಳ ಕಾಲ ವಿವರಣೆ ನೀಡಿದ್ದಾರೆ. ಸಭಾಧ್ಯಕ್ಷರ ಸ್ಥಾನದಲ್ಲಿ ಇರುವ ಅವರು, ಪಕ್ಷಪಾತಿಯಂತೆ ನಡೆದುಕೊಂಡಿದ್ದಾರೆ. ಅವರಿಗೆ ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಕಳೆದ 14 ತಿಂಗಳಿಂದ ಪಂಚ ತಾರಾ ಹೋಟೆಲ್‍ನಲ್ಲಿದ್ದುಕೊಂಡೇ ಆಡಳಿತ ಮಾಡುತ್ತಿದ್ದ ಕುಮಾರಸ್ವಾಮಿ ಅವರ ವಾಸ್ತವ್ಯದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ರೆಸಾರ್ಟ್ ವಾಸ್ತವ್ಯದ ಬಗ್ಗೆಯೂ ಮಾತನಾಡಬೇಕಿತ್ತು. ಅಲ್ಲದೇ ಎಲ್ಲೋ ಒಂದು ಕಡೆ ಸ್ಪೀಕರ್ ಅವರ ನಡೆ ಅನುಮಾನ ಹುಟ್ಟಿಸಿದೆ. ಸಭಾಧ್ಯಕ್ಷರೇ ಸುಪ್ರೀಂ ಅಲ್ಲ, ಅಂತಿಮವಾಗಿ ನ್ಯಾಯಾಲಯ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂಬ ವಿಶ್ವಾಸ ಇದೆ ಎಂದರು.

    ಬಿಎಸ್‍ವೈ ಅವರು ಬಹುಮತ ಸಾಬೀತು ಪಡಿಸುವ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಬಹುಮತ ಸಾಬೀತು ಪಡೆಸಬೇಕಾಗಿರುವುದು ವಿಧಾನ ಸೌಧದಲ್ಲಿ ವಿನಃ, ರಾಜಭವನದಲ್ಲಿ ಅಲ್ಲ. ಎಲ್ಲರೂ ಕಾದು ನೋಡಿ. ಸದನದಲ್ಲೇ ಕುಮಾರಸ್ವಾಮಿ ಅವರ ವಿಶ್ವಾಸ ಮತಯಾಚನೆ ನಡೆದಿದ್ದು, ಅಲ್ಲಿ ಅವರು ವಿಫಲರಾದರು. ಆದರೆ ಬಿಎಸ್‍ವೈ ಅವರು ಖಂಡಿತ ಬಹುಮತ ಸಾಬೀತು ಪಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಸರ್ವೇ ಜನಾಃ ಸುಖಿನೋ ಭವಂತು ಹಾಗಿದೆ ಕೇಂದ್ರದ ಬಜೆಟ್

    ಸರ್ವೇ ಜನಾಃ ಸುಖಿನೋ ಭವಂತು ಹಾಗಿದೆ ಕೇಂದ್ರದ ಬಜೆಟ್

    – ಕಾಂಗ್ರೆಸ್ಸಿಗರಿಗೆ ದೃಷ್ಟಿಯೇ ಇಲ್ಲ, ದೂರದೃಷ್ಟಿ ಎಲ್ಲಿಂದ ಬರಬೇಕು
    – ಮಾಜಿ ಸಿಎಂ, ಡಿಸಿಎಂ ವಿರುದ್ಧ ಶಾಸಕ ಕಿಡಿ

    ಬೆಂಗಳೂರು: ಕೇಂದ್ರದ ಬಜೆಟ್ ಸರ್ವೇ ಜನಾಃ ಸುಖಿನೋ ಭವಂತು ಹಾಗಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗಿದೆ. ರೈತ ಭಾರತ, ಯುವ ಭಾರತ, ಮಹಿಳಾ ಭಾರತ ಬಜೆಟ್‍ನಲ್ಲಿ ಕಾಣುತ್ತಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಬಡವರಿಗೆ ಏನೂ ಮಾಡಿಲ್ಲ ಅಂತ ಆರೋಪಿಸಿದ್ದಾರೆ. ಬಡವರಿಗೆ 1.95 ಕೋಟಿ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಅಸಂಘಟಿತ ಕಾರ್ಮಿಕ ವಲಯಕ್ಕೆ ಪಿಂಚಣಿ ವ್ಯವಸ್ಥೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ತಂದಿದ್ದು ಕಾಂಗ್ರೆಸ್ ಅಲ್ಲ ಬಿಜೆಪಿ ಎಂದು ಕುಟುಕಿದರು.

    ಕಾಂಗ್ರೆಸ್‍ನವರಿಗೆ ದೃಷ್ಟಿಯೇ ಇಲ್ಲ. ಇನ್ನು ದೂರದೃಷ್ಟಿ ಎಲ್ಲಿಂದ ಬರಬೇಕು. ವಿರೋಧ ಮಾಡಬೇಕು ಅಂತ ವಿರೋಧ ಮಾಡುವುದು ಸರಿಯಲ್ಲ. ಅವರಿಗೆ 2019 ಬಜೆಟ್ ಅರ್ಥನೇ ಆಗಿಲ್ಲ ಎಂದು ವ್ಯಂಗ್ಯವಾಡಿದರು.

    ಬಜೆಟ್‍ನಲ್ಲಿ ಘೋಷಿಸಿರುವ ಎಲ್ಲ ಯೋಜನೆಗಳಲ್ಲೂ ರಾಜ್ಯಕ್ಕೂ ಫಲ ಸಿಗುತ್ತಿದೆ. ಯುಪಿಎ ಅವಧಿಯಲ್ಲಿ ತೈಲ ಬೆಲೆ ಹೆಚ್ಚಿಸಿದ್ದಾಗ ಕಾಂಗ್ರೆಸ್ ನವರು ಬಾಯಿ ಮುಚ್ಚಿಕೊಂಡಿದ್ದರು. ಈಗ ಬಾಯಿ ಬಡಿದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

    ಪುತ್ತೂರು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣದ ಸಂಬಂಧ ಎಬಿವಿಪಿ ಸಂಘಟನೆ ನಿಷೇಧಕ್ಕೆ ಆಗ್ರಹ ಕೇಳಿ ಬರುತ್ತಿದೆ. ಆರೋಪಿಗಳು ಸಂಘಟನೆಯಲ್ಲಿ ಇದ್ದರು ಅಂದರೆ ಅವರು ಏನಾಗಿದ್ದರು ಎನ್ನುವುದು ಮುಖ್ಯವಾಗುತ್ತದೆ. ಅವರ ಅಪರಾಧಕ್ಕೂ ಸಂಘಟನೆಗೂ ಸಂಬಂಧವಿಲ್ಲ. ಎಬಿವಿಪಿ ಈಗಾಗಲೇ ಆರೋಪಿಗಳು ನಮ್ಮ ಸದಸ್ಯರಲ್ಲ ಎಂದು ಸ್ಪಷ್ಟಪಡಿಸಿದೆ. ಕಾನೂನು ತನ್ನ ಕೆಲಸ ಮಾಡುತ್ತದೆ ಹಾಗೂ ಈ ಕೃತ್ಯವನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

  • ಮೂರು ಲೋಕಸಭಾ ಕ್ಷೇತ್ರಗಳಿಗೆ ವಿಶೇಷ ಚುನಾವಣಾ ವೀಕ್ಷಕರ ನೇಮಕಕ್ಕೆ ಆಗ್ರಹ

    ಮೂರು ಲೋಕಸಭಾ ಕ್ಷೇತ್ರಗಳಿಗೆ ವಿಶೇಷ ಚುನಾವಣಾ ವೀಕ್ಷಕರ ನೇಮಕಕ್ಕೆ ಆಗ್ರಹ

    ರಾಮನಗರ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ನಾಮಪತ್ರ ಗೊಂದಲದ ವಿಚಾರವಾಗಿ ಸುಮಲತಾ ಅವರು ಮಾಡುತ್ತಿರುವ ಆರೋಪ ಸತ್ಯವಿರಬಹುದು. ಹಾಗಾಗಿ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ವಿಶೇಷ ಚುನಾವಣಾ ವೀಕ್ಷಕರನ್ನು ನೇಮಿಸುವಂತೆ ಮನವಿ ಮಾಡುವುದಾಗಿ ಬಿಜೆಪಿ ಶಾಸಕ ಸಿ.ಟಿ ರವಿ ತಿಳಿಸಿದ್ದಾರೆ.

    ರಾಮನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಲತಾ ಅವರ ಆರೋಪ ಸತ್ಯ ಎಂದು ನನಗನಿಸುತ್ತಿದೆ. ಮಾಡಿಫೈಡ್ ಅಫಿಡವಿಟ್ ಸಲ್ಲಿಸಲು ಚುನಾವಣಾ ಆಯೋಗದ ನಿಯಮದ ಪ್ರಕಾರ ನಾಮಪತ್ರ ಸಲ್ಲಿಸುವ ಕಡೆಯ ದಿನ ಸಲ್ಲಿಸಬಹುದು. ಆದರೆ ಪರಿಶೀಲನೆ ಸಮಯದಲ್ಲಿ ಸಲ್ಲಿಸಲು ಅವಕಾಶವಿಲ್ಲ. ಮೈತ್ರಿ ಅಭ್ಯರ್ಥಿಯ ಮಾಡಿಫೈಡ್ ಅಫಿಡವಿಟನ್ನು ಪರಿಶೀಲನೆ ವೇಳೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದ್ದು, ಇದು ಮೇಲ್ನೋಟಕ್ಕೆ ಪಕ್ಷಪಾತದ ಧೋರಣೆ ಎಂದು ತಿಳಿಸಿದರು.

    ಈ ಬಗ್ಗೆ ಪ್ರಶ್ನಿಸಿದವರ ವಿರುದ್ಧವೇ ನೋಟಿಸ್ ನೀಡಿದ್ದಾರೆ. ಇವತ್ತು ಪ್ರಚಾರದ ವೇಳೆ ನಾಯಕನ ವಾಹನದ ಹಿಂದೆ 10 ರಿಂದ 20 ಪರ್ಮಿಟ್ ಇಲ್ಲದ ವಾಹನಗಳು ಓಡಾಡುತ್ತಿವೆ. ಏನೂ ಕ್ರಮ ತೆಗೆದುಕೊಳ್ಳದೇ ಪ್ರಶ್ನಿಸಿದವರ ವಿರುದ್ಧ ನೋಟಿಸ್ ನೀಡುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮೂಲಕ ಪ್ರಶ್ನಿಸುವವರ ಹತ್ತಿಕುವ ಪ್ರಯತ್ನ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರಕ್ಕೆ ವಿಶೇಷ ವೀಕ್ಷಕರನ್ನ ನೇಮಿಸುವಂತೆ ಮನವಿ ಮಾಡಲಾಗುವುದು ಎಂದರು.

    ಕ್ಷೇತ್ರಗಳಲ್ಲಿ ಹಣಬಲ, ಅಧಿಕಾರದ ಬಲ ದುರುಪಯೋಗವಾಗುವ ಸಾಧ್ಯತೆಗಳಿವೆ. ಅಲ್ಲದೇ ಪಾರದರ್ಶಕತೆ ಕಾಪಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಸೂಚನೆ ನೀಡಬೇಕು ಎಂದು ತಿಳಿಸಿದರು.

  • ಸಿಎಂ ಎಲ್ಲಿ ಮಲಗಿದ್ದರು ಎಂಬುವುದು ರಾಜ್ಯದ ಜನತೆಗೆ ಗೊತ್ತಾಗದಿರಲಿ – ಸಿಟಿ ರವಿ ವ್ಯಂಗ್ಯ

    ಸಿಎಂ ಎಲ್ಲಿ ಮಲಗಿದ್ದರು ಎಂಬುವುದು ರಾಜ್ಯದ ಜನತೆಗೆ ಗೊತ್ತಾಗದಿರಲಿ – ಸಿಟಿ ರವಿ ವ್ಯಂಗ್ಯ

    ದಾವಣಗೆರೆ: ರಾಜ್ಯದ ಜನರ ಸಾಲಮನ್ನಾ ಬಗ್ಗೆ ಕೇಳಿದರೆ ಸಿಎಂ ಕುಮಾರಸ್ವಾಮಿ ಅವರಿಗೆ ಸಿಟ್ಟು ಬರುತ್ತದೆ. ರೈತ ಮಹಿಳೆಗೆ ಇಷ್ಟು ದಿನ ಎಲ್ಲಿ ಮಲಗಿದ್ದೆ ಎಂದು ಕೇಳುವ ಸಿಎಂ ಅವರು ಎಲ್ಲಿ ಮಲಗಿದ್ದರು ಎಂದು ರಾಜ್ಯದ ಜನರಿಗೆ ಗೊತ್ತಾಗದಿರಲಿ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

    ನಗರದ ಟೆನಿಸ್ ಟೂರ್ನಿಯ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಯಾವಾಗಲೂ ಸಿಟ್ಟು ಮಾಡಿಕೊಳ್ಳುವುದು ರೂಢಿ ಆಗಿದೆ. ಅವರ ತಪ್ಪುಗಳ ಬಗ್ಗೆ ಹೇಳಿದರೇ ಸಿಟ್ಟು ಮಾಡಿಕೊಳ್ಳುತ್ತಾರೆ. ಸಾಲಮನ್ನಾ ಬಗ್ಗೆ ಕೇಳಿದರೆ ಕುಮಾರಸ್ವಾಮಿಯವರು ರೈತರ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಹಾಗೆಯೇ ಕೇಂದ್ರದ ನೀಡಿದ ಅನುದಾನದ ಬಗ್ಗೆ ಹೇಳಿದರೂ ಸಂಸದರ ವಿರುದ್ಧ ಸಿಟ್ಟಾಗುತ್ತಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯದ ರೈತರು ಏನಾದರು ಹೋರಾಟ ಮಾಡಿದರೆ, ರೈತ ಮಹಿಳೆಗೆ ಎಲ್ಲಿ ಮಲಗಿದ್ದೆ ಎಂದು ಸಿಎಂ ಕೇಳುತ್ತಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಎಲ್ಲಿ ಮಲಗಿದ್ದರು ಎಂದು ಹೇಳಿದರೆ ರಾಜ್ಯದಲ್ಲಿ ಅವರಿಗೆ ಯಾವ ಗೌರವ ಉಳಿಯುವುದಿಲ್ಲ. ಸಿಎಂ ಮಲಗಿದ್ದು ರಾಜ್ಯದ ಜನತೆಗೆ ಗೊತ್ತಾಗದ ಹಾಗೇ ಇರಲಿ ಎಂದು ಬಿಡಿ ವ್ಯಂಗ್ಯವಾಡಿದರು.

    ಸಿಎಂ ಅವರು ಅಧಿಕಾರಕ್ಕೆ ಬರುವ ಮುನ್ನ ರೈತರ ಸಾಲಮನ್ನಾ ಬಗ್ಗೆ ಹೇಳಿದ್ದರು. ಅಲ್ಲದೇ ಮಹಿಳಾ ಸಂಘಗಳು ಹಾಗೂ ಖಾಸಗಿ ಸಾಲಮನ್ನಾವನ್ನು ಹೇಳಿದ್ದಾರೆ. ಆದರೆ ಮನುಷ್ಯನಿಗೆ ಅದರಲ್ಲೂ ನಮ್ಮಂತಹ ರಾಜಕೀಯ ವ್ಯಕ್ತಿಗಳಿಗೆ ಜಾಸ್ತಿ ಮರೆವು ಅದ್ದರಿಂದ ನಾವು ಮಾಧ್ಯಮಗಳ ಮೂಲಕ ನೆನಪು ಮಾಡುತ್ತೇವೆ. ಒಂದೊಮ್ಮೆ ಮಾಧ್ಯಮಗಳು ಈ ಕುರಿತು ನೆನಪು ಮಾಡಿದರೆ ಅವರ ಮೇಲು ಮುಖ್ಯಮಂತ್ರಿಗಳಿಗೆ ಸಿಟ್ಟು ಬರುತ್ತದೆ ಎಂದು ಆರೋಪಿಸಿದರು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಜಿ ವರದಿ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ. 36 ಸಾವಿರ ಕೋಟಿ ರೂಪಾಯಿ ಲೆಕ್ಕ ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಈ ವಿಚಾರವನ್ನ ಬೆಳಗಾವಿ ಅಧಿವೇಶನ ದಲ್ಲಿ ಪ್ರಬಲವಾಗಿ ಪ್ರಶ್ನಿಸಲಾಗುವುದು. ಸಿದ್ದರಾಮಯ್ಯನವರೇ ಸದಸಕ್ಕೆ ಗೈರು ಹಾಜರಾಗುತ್ತಿದ್ದಾರೆ. ಅವರಿಗೂ ಈ ಸರ್ಕಾರ ಬಹಳ ದಿನ ಉಳಿಯಬಾರದು ಎಂದು ಮನಸ್ಸಿನಲ್ಲಿ ಇದ್ದಂತಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾನ ಮರ್ಯಾದೆ ಇದ್ರೆ ಕ್ಷೇತ್ರ ಬಿಟ್ಟು ತೊಲಗು- ಶಾಸಕ ಸಿ.ಟಿ. ರವಿ ವಿರುದ್ಧ ತಿರುಗಿಬಿದ್ದ ರೈತರು

    ಮಾನ ಮರ್ಯಾದೆ ಇದ್ರೆ ಕ್ಷೇತ್ರ ಬಿಟ್ಟು ತೊಲಗು- ಶಾಸಕ ಸಿ.ಟಿ. ರವಿ ವಿರುದ್ಧ ತಿರುಗಿಬಿದ್ದ ರೈತರು

    ಚಿಕ್ಕಮಗಳೂರು: `ಮೂರು ಬಾರಿ ಶಾಸಕ, ಒಮ್ಮೆ ಮಂತ್ರಿಯಾಗಿದ್ದೀಯಾ. ಆದ್ರೂ ನಿನ್ನ ಕೊಡುಗೆ ಶೂನ್ಯ. ಚಿಕ್ಕ ಚಿಕ್ಕ ಯೋಜನೆಗಳನ್ನೂ ಮುಗಿಸಿಲ್ಲ. ಚುನಾವಣೆ ಸಂದರ್ಭ ಗ್ರಾಮವಾಸ್ತವ್ಯ, ಕಬ್ಬಡಿ, ಡ್ಯಾನ್ಸ್ ಮಾಡೋ ಗಿಮಿಕ್ ಮಾಡೋದ್ರಲ್ಲಿ ನೀನು ನಿಸ್ಸೀಮ. ನಿನ್ನ ಕೈಲಿ ಆಗದಿದ್ರೆ ಕ್ಷೇತ್ರ ಬಿಟ್ಟು ಹೋಗು’ ಅಂತ ಶಾಸಕ ಸಿಟಿ ರವಿಯವರನ್ನು ಚಿಕ್ಕಮಗಳೂರಿನ ಮತದಾರರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೆ ಕಾರಣ ಬೆಳವಾಡಿ, ಕಳಸಾಪುರ, ಲಕ್ಯಾ, ದೇವನೂರು ಭಾಗದ 60-70 ಹಳ್ಳಿಗಳಿಗೆ ನೀರು ಒದಗಿಸುವ ಉದ್ದೇಶದಿಂದ ಕರಗಡ ಯೋಜನೆ ಪ್ರಾರಂಭಿಸಲಾಗಿತ್ತು. ಆದ್ರೆ ಇದನ್ನ ಮುಗಿಸದ ಕಾರಣ ಶಾಸಕ ರವಿಯನ್ನ ಮುಂದಿನ ಎಲೆಕ್ಷನ್‍ನಲ್ಲಿ ಸೋಲಿಸಬೇಕು ಅಂತಾ ಮತದಾರರು ಪಣ ತೊಟ್ಟಿರುವುದಾಗಿ ಕರಗಡ ನೀರಾವರಿ ಹೋರಾಟ ಸಮಿತಿ ಸಂಚಾಲಕ ರವೀಶ್ ಕ್ಯಾತನಬೀಡು ಹೇಳಿದ್ದಾರೆ.

    ಇದನ್ನೂ ಓದಿ: ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!

    `ಶಾಸಕ ಸಿ.ಟಿ. ರವಿಯನ್ನ ಸೋಲಿಸಿ’ ಎಂಬ ಸ್ಲೋಗನ್ ಅಡಿ ಊರೂರು ಪ್ರಚಾರ ಮಾಡೋಕೆ ರೈತರು, ಕರಗಡ ಹೋರಾಟ ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ. ಈಗಾಗಲೇ ಐದಾರು ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಶಾಸಕ ಸಿ.ಟಿ. ರವಿ ಈ ಹಿಂದೆ ಕರಗಡ ಯೋಜನೆ ಶೀಘ್ರದಲ್ಲೇ ಮುಗಿಸ್ತೀವಿ ಅಂತಾ ಹೇಳಿ ಮಣ್ಣು ಅಗೆಯೋ ಕೆಲಸ ಮಾಡಿದ್ರು. ಆದ್ರೆ ಇದು ಬರೀ ಪೋಸ್ ಕೊಡಲಷ್ಟೇ ಅನ್ನೋದು ರೈತರ ಆರೋಪ.

    ಒಟ್ಟಿನಲ್ಲಿ ಕರಗಡ ನೀರಾವರಿ ಹೋರಾಟ ಸಮಿತಿ ಸಿಟಿ ರವಿ ವಿರುದ್ಧ ತಾಲೂಕಿನಾದ್ಯಂತ ಜನಜಾಗೃತಿ ಮೂಡಿಸಲು ಮುಂದಾಗಿದೆ.

    ಇದನ್ನೂ ಓದಿ: ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!