Tag: MLA Bheema Naik

  • ವೇದಿಕೆ ಮೇಲೆಯೇ ಭೀಮಾನಾಯ್ಕ್- ದೇವೇಂದ್ರಪ್ಪ ಮಧ್ಯೆ ವಾಕ್ಸಮರ

    ವೇದಿಕೆ ಮೇಲೆಯೇ ಭೀಮಾನಾಯ್ಕ್- ದೇವೇಂದ್ರಪ್ಪ ಮಧ್ಯೆ ವಾಕ್ಸಮರ

    – ಒಬ್ಬರನ್ನೊಬ್ಬರು ಬೈದಾಡಿಕೊಂಡ ನಾಯಕರು

    ಬಳ್ಳಾರಿ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಹಾಗೂ ಬಿಜೆಪಿ ಸಂಸದ ದೇವೇಂದ್ರಪ್ಪ ಅವರು ಪರಸ್ಪರ ಬೈದಾಡಿಕೊಂಡ ಪ್ರಸಂಗ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

    ಹಗರಿಬೊಮ್ಮನ ಹಳ್ಳಿ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ವೇದಿಕೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಮಾತನಾಡಿದ ಶಾಸಕ ಭೀಮಾನಾಯ್ಕ್, ಹಗರಿಬೊಮ್ಮನ ಹಳ್ಳಿ ಕ್ಷೇತ್ರಕ್ಕೆ ಬಂದಿದ್ದ ಅನುದಾನವನ್ನು ಬಿಜೆಪಿ ಸರ್ಕಾರವು ವಾಪಸ್ ಪಡೆಯಿತು ಎಂದರು. ಇದರಿಂದ ಆಕ್ರೋಶಗೊಂಡ ಸಂಸದರು, ಯಾವ ಕಾರ್ಯಕ್ರಮದಲ್ಲಿ ಏನು ಮಾತನಾಡಬೇಕು ಎನ್ನುವುದು ಗೊತ್ತಿಲ್ಲಾ ಎಂದು ಗುಡುಗಿದರು.

    ಇಲ್ಲಿ ರಾಜಕಾರಣ ಮಾಡುತ್ತಿಲ್ಲ. ಹಗರಿಬೊಮ್ಮನ ಹಳ್ಳಿ ಪುರಸಭೆಗೆ ಎರಡು ಕೋಟಿ ರೂ. ಕೊಟ್ಟಿದ್ದೇವೆ. ಅದರಲ್ಲಿ ಐದು ಪುತ್ಥಳಿ ಕೊಟ್ಟಿದ್ದೇವೆ. ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಹತ್ತು ಲಕ್ಷ ರೂ., ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಹತ್ತು ಲಕ್ಷ ರೂ., ವಾಲ್ಮೀಕಿ ಪುತ್ಥಳಿಗೆ ಹತ್ತು ಲಕ್ಷ ರೂ., ಕನಕದಾಸರ ಪುತ್ಥಳಿಗೆ ಹತ್ತು ಲಕ್ಷ ರೂ., ಒಟ್ಟು ನಾಲ್ವತ್ತು ಲಕ್ಷ ರೂ. ಅನುದಾನ ಕೊಟ್ಟಿದ್ದೇವೆ. ಆದರೆ ಸರ್ಕಾರ ಆ ಅನುದಾನವನ್ನು ಹಿಂದಕ್ಕೆ ಪಡೆದಿದೆ. ದಯಮಾಡಿ ಸನ್ಮಾನ್ಯ ಲೋಕಸಭಾ ಸದಸ್ಯರು ಅನುದಾನವನ್ನು ಮರಳಿಸಲಿ ಎಂದರು.

    ಇದರಿಂದ ಮತ್ತಷ್ಟು ಕೋಪಗೊಂಡ ದೇವೇಂದ್ರಪ್ಪ ಅವರು, ಈ ಮಾತನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಕಿಡಿಕಾರಿದರು. ಆಗ ಭೀಮಾನಾಯ್ಕ್, ಲೋಕಸಭಾ ಸದಸ್ಯರು ತಾವು. ಸ್ವಲ್ಪ ತಾಳ್ಮೆಯಿಂದ ಕುಳಿತರೆ ಆ ವಿಚಾರವನ್ನೇ ಬಿಟ್ಟು ಬಿಡುತ್ತೇನೆ ಎಂದರು.  ದೇವೇಂದ್ರಪ್ಪ ಅವರು ಮಧ್ಯ ಪ್ರವೇಶಿಸಿ, ಆ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ ದಯಮಾಡಿ ಎಂದು ಕೇಳಿಕೊಂಡರು.

    ಸಂಸದರ ಮನವಿಗೆ ಕ್ಯಾರೇ ಎನ್ನದ ಶಾಸಕರು ಮಾತು ಮುಂದುವರಿಸಿ, ನೀವು ರೈಲು ಬಿಟ್ಟಿದ್ದು ನೀವು ಎಂದು ಹೇಳುತ್ತೀರಾ. ಆದರೆ ಕೊಟ್ಟೂರು ಹರಿಹರ ರೈಲು ಬಿಟ್ಟಿದ್ದು ಕೇಂದ್ರ ಮಾಜಿ ಸಚಿವ ಜಾಫರ್ ಷರೀಷ್ ಮತ್ತು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಬಿಟ್ಟುದ್ದು. ಅದು ನೀವು ಬಿಟ್ಟಿದ್ದು ಅಲ್ಲಾ ಎಂದು ಛಾಟಿ ಬೀಸಿದರು.

    ನಾಯಕರ ವಾಕ್ಸಮರದಿಂದಾಗಿ ಕೆಲ ಹೊತ್ತು ಕಾರ್ಯಕ್ರಮದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಕೆಲ ಸ್ಥಳೀಯ ಮುಖಂಡರು ಮಧ್ಯ ಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.

  • ಸಿದ್ದರಾಮಯ್ಯರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಬೇಕು: ಶಾಸಕ ಭೀಮಾನಾಯ್ಕ್

    ಸಿದ್ದರಾಮಯ್ಯರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಬೇಕು: ಶಾಸಕ ಭೀಮಾನಾಯ್ಕ್

    – ಸಿದ್ದು ಪರ 50ಕ್ಕೂ ಹೆಚ್ಚು ಶಾಸಕರ ಬೆಂಬಲ

    ಬಳ್ಳಾರಿ: ವಿಪಕ್ಷ ಸ್ಥಾನ ಆಯ್ಕೆ ಸಂಬಂಧ ಭಾನುವಾರ ಕೆಪಿಸಿಸಿಯಲ್ಲಿ ಎಐಸಿಸಿ ವೀಕ್ಷಕರ ಸಭೆ ನಡೆಯಲಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಅವರು ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಬೇಕು ಎಂದು  ಒತ್ತಾಯ ಮಾಡಿದ್ದಾರೆ.

    ವಿಧಾನಸಭೆ, ವಿಧಾನ ಪರಿಷತ್, ಸಚೇತಕ ಸ್ಥಾನ ಆಯ್ಕೆ ಬಗ್ಗೆ ಭಾನುವಾರ ಮಧುಸೂದನ್ ಮಿಸ್ತ್ರಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈಗಾಗಲೇ 3-4 ಹೆಸರು ಸಿದ್ಧಪಡಿಸಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ. ಇದೇ ವೇಳೆ ಸಿದ್ದರಾಮಯ್ಯ ಅವರ ಬೆಂಬಲಿಗರಾಗಿರುವ ಶಾಸಕ ಭೀಮಾನಾಯ್ಕ್ ಅವರು ಸಿದ್ದರಾಮಯ್ಯ ಅವರ ಪರ ಒತ್ತಾಯ ಮಾಡಿದ್ದು, 50-60 ಜನ ಶಾಸಕರು ಸಿದ್ದರಾಮಯ್ಯ ಬೆಂಬಲಕ್ಕೆ ಇದ್ದಾರೆ ಎಂದು ಹೇಳಿದ್ದಾರೆ.

    ಇತ್ತ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ಜೋರಾಗಿದ್ದು, ಸಿದ್ದರಾಮಯ್ಯ ಬೆಂಬಲಿತ ಸುಮಾರು 20ಕ್ಕೂ ಹೆಚ್ಚು ಶಾಸಕರು ನಾಳೆ ಮಿಸ್ತ್ರಿ ಅವರನ್ನು ಭೇಟಿಯಾಗಿ, ಬ್ಯಾಟಿಂಗ್ ನಡೆಸಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೇಲ್ಮನೆ ಸದಸ್ಯ ಸಿ.ಎಂ ಇಬ್ರಾಹಿಂ ಕೂಡ ಸಿದ್ದರಾಮಯ್ಯರೇ ಪ್ರತಿಪಕ್ಷ ನಾಯಕರಾಗಬೇಕು ಎಂದಿದ್ದು, ಸೋನಿಯಾ ಜೊತೆಗೆ ಈಗಲೂ ಸಿದ್ದರಾಮಯ್ಯ ಚೆನ್ನಾಗೇ ಇದ್ದಾರೆ ಎಂದಿದ್ದಾರೆ.

    ಇದೇ ವೇಳೆ ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರವಾಗಿ ಮಾತನಾಡಿರುವ ಶಾಸಕ ಭೀಮಾನಾಯ್ಕ್ ಅವರು, ನಂಜುಡಪ್ಪ ವರದಿ ಪ್ರಕಾರ ಹಗರಿಬೊಮ್ಮನಹಳ್ಳಿ ತಾಲೂಕು ಹಿಂದುಳಿದ ತಾಲೂಕು ಆಗಿದೆ. ಹೊಸ ಜಿಲ್ಲೆ ಮಾಡುವುದಾದರೆ ಹಗರಿಬೊಮ್ಮನಹಳ್ಳಿ ತಾಲೂಕನ್ನ ಜಿಲ್ಲೆಯನ್ನಾಗಿ ಮಾಡಬೇಕು. ಹಗರಿಬೊಮ್ಮನಹಳ್ಳಿ ಭೌಗೋಳಿಕವಾಗಿ ಜಿಲ್ಲೆಯ ಮಧ್ಯಭಾಗದಲ್ಲಿದೆ. ಇನ್ನೊಂದು ಜಿಲ್ಲೆ ಸ್ಥಾಪನೆ ವಿಚಾರ ಸರ್ಕಾರದ ಮುಂದೆ ಇಲ್ಲವಾದರೆ ಅಖಂಡ ಬಳ್ಳಾರಿ ಜಿಲ್ಲೆಗೆ ನನ್ನ ಬೆಂಬಲವಿದೆ. ಹೊಸ ಜಿಲ್ಲೆ ಮಾಡುವುದಾದರೆ ಸಮಿತಿ ರಚನೆ ಮಾಡಿ. ಅದರ ಅನ್ವಯ ಜಿಲ್ಲೆಯ ಸ್ಥಾಪನೆಯಾಗಲಿ ಎಂದು ಸ್ಪಷ್ಟಪಡಿಸಿದರು.

  • ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ‘ಕೈ’ ನಿರ್ದೇಶಕರನ್ನೇ ಹೈಜಾಕ್ ಮಾಡಿದ ರೇವಣ್ಣ!

    ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ‘ಕೈ’ ನಿರ್ದೇಶಕರನ್ನೇ ಹೈಜಾಕ್ ಮಾಡಿದ ರೇವಣ್ಣ!

    – ಎಚ್‍ಡಿಕೆಯ ಇಂದಿನ ಸ್ಥಿತಿಗೆ ರೇವಣ್ಣನೇ ಕಾರಣ
    – ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಕಿಡಿ
    – ರೇವಣ್ಣ ಅಂದ್ರೆ ಮೋಸ

    ಬಳ್ಳಾರಿ: ಕೆಎಂಎಫ್ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಒಪ್ಪದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್ ಪಕ್ಷದ ನಾಲ್ವರು ನಿರ್ದೇಶಕರನ್ನೇ ಹೈಜಾಕ್ ಮಾಡಿದ್ದಾರೆ.

    ಸರ್ಕಾರ ಇರೋವರೆಗೂ ಮೈತ್ರಿ -ದೋಸ್ತಿ ಎನ್ನುತ್ತಿದ್ದ ಜೆಡಿಎಸ್‍ನವರು ಸರ್ಕಾರ ಬೀಳುತ್ತಿದ್ದಂತೆ ಕಾಂಗ್ರೆಸ್‍ಗೆ ಕೈ ಕೊಡಲು ಮುಂದಾಗಿದ್ದಾರೆ. ಮೈತ್ರಿ ಧರ್ಮದ ಪ್ರಕಾರ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟು ಕೊಡುವುದಾಗಿ ಜೆಡಿಎಸ್ ನಾಯಕರು ಭರವಸೆ ನೀಡಿದ್ದರು. ಆದರೆ ಈಗ ಸರ್ಕಾರ ಬೀಳುತ್ತಿದ್ದಂತೆ ಮೈತ್ರಿ ಧರ್ಮಕ್ಕೆ ಬ್ರೇಕ್ ಹಾಕಿ ಕೆಎಂಎಫ್ ಅಧ್ಯಕ್ಷ ಸ್ಥಾನ ತಮಗೆ ಬೇಕೆಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಪಟ್ಟು ಹಿಡಿದು ಕುಳಿತಿದ್ದಾರೆ.

    ಕೆಎಂಎಫ್ ಅಧ್ಯಕ್ಷ ಸ್ಥಾನದ ವಿಚಾರವಾಗಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಹಾಗೂ ಎಚ್.ಡಿ.ರೇವಣ್ಣ ಅವರ ಮಧ್ಯೆ ತ್ರೀವ ಗುದ್ದಾಟ ಶುರುವಾಗಿದೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನವನ್ನು ರೇವಣ್ಣ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಒಪ್ಪಂದದ ಪ್ರಕಾರ ಅಧ್ಯಕ್ಷ ಸ್ಥಾನವನ್ನು ಭೀಮಾನಾಯ್ಕ್ ಅವರಿಗೆ ಬಿಟ್ಟುಕೊಡಬೇಕಿತ್ತು. ಆದರೆ ಇದಕ್ಕೆ ಒಪ್ಪದ ಎಚ್.ಡಿ.ರೇವಣ್ಣ ಅವರು ಧಾರವಾಡದ ಹನಮಂತಗೌಡ ಹಿರೇಗೌಡ್ರ, ವಿಜಯಪುರದ ಶ್ರೀಶೈಲ್‍ಗೌಡ ಪಾಟೀಲ್, ಮಂಗಳೂರಿನ ಕಾಪು ದಿವಾಕರ್ ಶೆಟ್ಟಿ ಹಾಗೂ ಶಿವಮೊಗ್ಗದ ವೀರಭದ್ರಯ್ಯ ಬಾಬು ಚಲ್ಲೂರಯ್ಯ ಅವರನ್ನು ಹೈದರಾಬಾದ್ ರೆಸಾರ್ಟಿಗೆ ಕಳುಹಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ರೇವಣ್ಣ ಅವರ ನಡೆಯಿಂದಾಗಿ ಕಾಂಗ್ರೆಸ್ ನಾಯಕರು ಆಘಾತಕ್ಕೆ ಒಳಗಾಗಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ದೋಸ್ತಿ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಭೀಮಾನಾಯ್ಕ್ ಅವರಿಗೆ ಬಿಟ್ಟುಕೊಡುವಂತೆ ಕೇಳಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಕೇಳಿಬಂದಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕ ಭೀಮಾನಾಯ್ಕ್ ಅವರು, ಎಚ್.ಡಿ.ಕುಮಾರಸ್ವಾಮಿ ಅವರ ಇಂದಿನ ಸ್ಥಿತಿಗೆ ರೇವಣ್ಣ ಕಾರಣ. ಸರ್ಕಾರ ಇದ್ದಾಗಲೇ ಎಚ್.ಡಿ.ರೇವಣ್ಣ ಅವರು ಮೈತ್ರಿ ಧರ್ಮ ಪಾಲನೆ ಮಾಡಲಿಲ್ಲ. ರೇವಣ್ಣ ಅಂದರೆ ಮೋಸ. ಮೋಸ ಮಾಡುವುದೇ ಎಚ್.ಡಿ.ರೇವಣ್ಣ ಕಾಯಕ ಎಂದು ಕಿಡಿಕಾರಿದರು.

    ಕೆಎಂಎಫ್ ಅಧ್ಯಕ್ಷ ಸ್ಥಾನ ಕೈ ತಪ್ಪುತ್ತೆ ಎನ್ನುವ ಸುಳಿವು ಸಿಗುತ್ತಿದ್ದಂತೆಯೇ ನಮ್ಮ ಪಕ್ಷದ ನಿರ್ದೇಶಕರನ್ನು ಹೈಜಾಕ್ ಮಾಡಿದ್ದಾರೆ. ಇಂತವರು ಶಾಸಕರ ವ್ಯಾಪಾರದ ಬಗ್ಗೆ ಮಾತನಾಡುತ್ತಾರೆ. ಎಚ್.ಡಿ.ರೇವಣ್ಣ ಅವರ ನಡೆಯಿಂದಲೇ ಎಂಟಿಬಿ ನಾಗರಾಜ್, ಸೋಮಶೇಖರ್, ಎಚ್.ವಿಶ್ವನಾಥ್ ಅಂತಹ ನಾಯಕರು ಸರ್ಕಾರ ವಿರುದ್ಧ ನಿಲ್ಲಬೇಕಾಯಿತು ಎಂದು ಹೇಳಿದರು.