Tag: MLA Annadani

  • ಹಸಿದ ಕೋತಿಗಳಿಗೆ ಆಹಾರ ನೀಡಿದ ಮಳವಳ್ಳಿ ಶಾಸಕ ಅನ್ನದಾನಿ

    ಹಸಿದ ಕೋತಿಗಳಿಗೆ ಆಹಾರ ನೀಡಿದ ಮಳವಳ್ಳಿ ಶಾಸಕ ಅನ್ನದಾನಿ

    – ಮುತ್ತತ್ತಿ ಕಾಡಿನಲ್ಲಿ ಆಹಾರಕ್ಕಾಗಿ ಕೋತಿಗಳ ಪರದಾಟ

    ಮಂಡ್ಯ: ಮುತ್ತತ್ತಿ ಕಾಡಿನ ರಸ್ತೆಯಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕೋತಿಗಳಿಗೆ ಆಹಾರವನ್ನು ನೀಡಿ ಮಳವಳ್ಳಿ ಶಾಸಕ ಅನ್ನದಾನಿ ಮಾನವೀಯತೆ ಮೆರೆದಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಕಾಡಿಗೆ ಅಪಾರ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದರು. ಈ ವೇಳೆ ಒಂದು ರಸ್ತೆಯಲ್ಲಿ ಕೋತಿಗಳಿಗೆ ಪ್ರವಾಸಿಗರು ಆಹಾರ ಪದಾರ್ಥಗಳನ್ನು ನೀಡುತ್ತಿದ್ದರು. ಇದೀಗ ಲಾಕ್‍ಡೌನ್ ಇರುವ ಕಾರಣ ಪ್ರವಾಸಿಗರು ಮುತ್ತತ್ತಿಗೆ ಬಾರದ ಕಾರಣ ಕೋತಿಗಳಿಗೆ ಆಹಾರ ಇಲ್ಲದೇ ಪರದಾಡುತ್ತಿವೆ.

    ಕೋತಿಗಳು ಆಹಾರವಿಲ್ಲದೆ ಪರದಾಡುವ ವಿಷಯ ತಿಳಿದ ಮಳವಳ್ಳಿ ಶಾಸಕ ಅನ್ನದಾನಿ ಮುತ್ತತ್ತಿಗೆ ತೆರಳಿ ಕೋತಿಗಳಿಗೆ ಬಾಳೆಹಣ್ಣು ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ನೀಡಿದರು. ಈ ವೇಳೆ ಕೋತಿಗಳು ಆಹಾರ ನೋಡುತ್ತಿದ್ದಂತೆ ಆಹಾರಕ್ಕಾಗಿ ಮುಗಿ ಬಿದ್ದವು. ಹಸಿದ ಕೋತಿಗಳಿಗೆ ಆಹಾರ ನೀಡುವ ಮೂಲಕ ಶಾಸಕ ಅನ್ನದಾನಿ ಮಾನವೀಯತೆ ಮೆರೆದಿದ್ದಾರೆ. ಇದನ್ನು ಓದಿ: 10 ನಿಮಿಷದಲ್ಲಿ ತಯಾರಿಸಿ ಮೊಸರು ಗೊಜ್ಜು

  • ನಾನೇನೂ ಕೆಲಸ ಮಾಡ್ತಿಲ್ಲ, ಎಲ್ಲ ಸುಮಲತಾ ಮೇಡಂ ಮಾಡ್ತಿದ್ದಾರೆ: ಶಾಸಕ ಅನ್ನದಾನಿ ಟಾಂಗ್

    ನಾನೇನೂ ಕೆಲಸ ಮಾಡ್ತಿಲ್ಲ, ಎಲ್ಲ ಸುಮಲತಾ ಮೇಡಂ ಮಾಡ್ತಿದ್ದಾರೆ: ಶಾಸಕ ಅನ್ನದಾನಿ ಟಾಂಗ್

    – ಮೇಡಂ ಅವರೇ ಕೆರೆಗೆ ಪೂಜೆ, ಕೆರೆ ತುಂಬಿಸಿದ್ದು

    ಮಂಡ್ಯ: ನಾನು ಏನೂ ಕೆಲಸ ಮಾಡ್ತಾ ಇಲ್ಲ. ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಓಡಾಡುತ್ತಿದ್ದೇನೆ. ಮಳವಳ್ಳಿಯಲ್ಲಿ ನಂಗೆ ಇದೇ ಕೆಲಸ. ಆದರೆ ಸುಮಲತಾ ಅವರೇ ಪ್ರತಿದಿನ ಇಲ್ಲಿನ ಜನರ ಕಷ್ಟ ಸುಖವನ್ನು ನೋಡ್ತಾ ಇರೋದು ಎಂದು ಸಂಸದೆ ಸುಮಲತಾ ಅಂಬರೀಶ್‍ಗೆ ಜೆಡಿಎಸ್ ಶಾಸಕ ಅನ್ನದಾನಿ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

    ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರ ಬಗ್ಗೆ ಸುಮಲತಾ ಅವರ ಹೇಳಿಕೆಗೆ ತಿರುಗೇಟು ಕೊಟ್ಟ ಶಾಸಕರ ಅನ್ನದಾನಿ, ತಾಲೂಕು ಆಫೀಸ್, ಪೊಲೀಸ್ ಸ್ಟೇಷನ್ ಎಲ್ಲವನ್ನೂ ಅವರೇ ಮಾಡುತ್ತಿದ್ದಾರೆ. ಕೆರೆಗೆ ಪೂಜೆ, ಕೆರೆ ತುಂಬಿಸಿದ್ದು ಅಲ್ಲದೇ ಪಿಂಚಣಿ ಕೂಡ ಮೇಡಂ ಅವರೇ ಕೊಡಿಸುತ್ತಿರೋದು. ಅವರೇ ಜಗಳಗಳನ್ನು ಇತ್ಯರ್ಥ ಮಾಡುತ್ತಾ ಇರೋದು. ಈ ತಾಲೂಕಿನ ಕೆಲಸವನ್ನೆಲ್ಲಾ ಅವರೇ ಮಾಡುತ್ತಾ ಇರೋದು. ನಾನು ಏನೂ ಕೆಲಸ ಮಾಡುತ್ತಾ ಇಲ್ಲ. ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಓಡಾಡುತ್ತಿದ್ದೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ದರ್ಶನ್, ಯಶ್ ನಟನೆ ಸಿನಿಮಾರಂಗಕ್ಕೆ ಸೀಮಿತವಾಗಿರಲಿ ರಾಜಕೀಯಕ್ಕೆ ಬೇಡ: ಶಿವರಾಮೇಗೌಡ

    ಈ ಜಿಲ್ಲೆಯಲ್ಲಿ ನಾರಾಯಣಗೌಡರನ್ನು ಬಿಟ್ಟು ನಾವು ಈಗ 6 ಜನ ಇದ್ದೇವೆ. ನಾವು ಏನೂ ಕೆಲಸ ಮಾಡುತ್ತಿಲ್ಲ. ಊಟ ಮಾಡಿಕೊಂಡು ತಿರುಗಾಡುತ್ತಾ ಇದ್ದೇವೆ. ದಯವಿಟ್ಟು ಸುಮಲತಾ ಅವರು ಇನ್ನೂ ಹೆಚ್ಚಿನ ರೀತಿ ಕೆಲಸ ಮಾಡಬೇಕು. ನಮ್ಮ ಹೊರೆಯನ್ನು ಇಳಿಸಬೇಕು ಎಂದು ಕೈ ಜೋಡಿಸಿ ಮನವಿ ಮಾಡುತ್ತೇನೆ. ಶಾಸಕರೇನು ಇಲ್ಲ, ಅವರ ಕೆಲಸ ನಾನೇ ಮಾಡುತ್ತಿದ್ದೇನೆ ಎಂದು ಅವರೇ ಹೇಳಿದ್ದಾರಲ್ಲ. ಎಲ್ಲಾ ಅವರೇ ಕೆಲಸ ಮಾಡುವಾಗ ನಮಗೇನೂ ಇಲ್ಲ. ನಮ್ಮ ಜವಾಬ್ದಾರಿಯನ್ನು ಮೇಡಂ ಅವರೇ ತೆಗೆದುಕೊಂಡಿದ್ದಾರಂತೆ. ನಮ್ಮ ಜವಾಬ್ದಾರಿ ಏನೂ ಇಲ್ಲ ಎಂದು ಜನರಿಗೆ ಹೇಳಿ ತಿರುಗಾಡಿಕೊಂಡು ಇರುತ್ತೇವೆ ಎಂದು ಕಿಡಿಕಾರಿದರು.

    ಸುಮಲತಾ ಅವರಿಗೆ ರಾಜಕೀಯ ಪ್ರಬುದ್ಧತೆ ಇದೆ. ಅದಕ್ಕೆ ಅವರು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ಕರೆದರೂ ಹೋಗುತ್ತೇನೆ ಅಂತಾರೆ. ಈ ಪ್ರಬುದ್ಧತೆಯಿಂದಲೇ ಅವರು ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಆಗಿರೋದು. ಅವರು ಎಲ್ಲಾ ಪಾರ್ಟಿಗಳಿಗೂ ಹೋಗಲಿ ಎಲ್ಲರನ್ನೂ ಮಾತಾಡಿಸಲಿ ಎಂದು ನಗು-ನಗುತ್ತಲೇ ವ್ಯಂಗ್ಯವಾಗಿ ಸುಮಲತಾ ಅವರ ವಿರುದ್ಧ ಅನ್ನದಾನಿ ಹರಿಹಾಯ್ದರು.

    ಸಂಸದೆ ಹೇಳಿದ್ದೇನು?
    ಅ. 9ರಂದು ಮಂಡ್ಯ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಕೋರ್ ಕಮಿಟಿ ಸದಸ್ಯರ ಸಭೆಯಲ್ಲಿ ಭಾಗಿಯಾಗಿದ್ದ ಸಂಸದೆ ಸುಮಲತಾ, ಜೋಡೆತ್ತುಗಳು ಈಗ ಎಲ್ಲಿ ಹೋದರು ಎಂಬ ಟೀಕೆಗೆ ತಿರುಗೇಟು ನೀಡಿದ್ದರು. ಜೆಡಿಎಸ್ ಪಕ್ಷದ ಎಂಟು ಜನ ಶಾಸಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಸಂಸದರು ಗೆದ್ದ ತಕ್ಷಣ, ಆ ಎಂಟು ಜನ ಶಾಸಕರು ಕೆಲಸ ಮಾಡಬಾರದು ಎಂದು ನಿಯಮ ಇದೆಯೇ ಎಂದು ಪ್ರಶ್ನಿಸಿದ್ದರು.

  • ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‍ನಿಂದ ಆಚೆ ಕಳುಹಿಸಲಿ: ಶಾಸಕ ಅನ್ನದಾನಿ

    ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‍ನಿಂದ ಆಚೆ ಕಳುಹಿಸಲಿ: ಶಾಸಕ ಅನ್ನದಾನಿ

    – ನಾನು ಜೆಡಿಎಸ್‍ಗೆ ವರ್ಜಿನಲ್ ಪೀಸ್

    ಮಂಡ್ಯ: ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‍ನಿಂದ ಆಚೆಗೆ ಕಳುಹಿಸಲಿ ಎಂದು ಮಂಡ್ಯದ ಮಳವಳ್ಳಿಯಲ್ಲಿ ಜೆಡಿಎಸ್ ಶಾಸಕ ಅನ್ನದಾನಿ ಸವಾಲು ಹಾಕಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬೈನಲ್ಲಿರುವ ಶಾಸಕರು ವಾಪಸ್ ಬರಲು, ನಮ್ಮೊಂದಿಗೆ ಮಾತನಾಡಲು ರೆಡಿ ಇದ್ದಾರೆ. ಆದರೆ ಅಲ್ಲಿನ ಬಿಜೆಪಿ ಸರ್ಕಾರ ಅವರನ್ನು ಬಲವಂತವಾಗಿ ಬಂಧಿಸಿದೆ ಎಂದು ಆರೋಪಿಸಿದರು.

    ನಾಳೆ ಸಂಜೆಯೊಳಗೆ ಸರ್ಕಾರ ಉಳಿಯುತ್ತೆ. ಯಾವುದೇ ಸಮಸ್ಯೆ ಆಗಲ್ಲ. ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್ ನಿಂದ ಆಚೆಗೆ ಕಳುಹಿಸಲಿ. ಅತೃಪ್ತ ಶಾಸಕರು ವಿಶ್ವಾಸ ಮತಯಾಚನೆಗೆ ಬರಲಿ. ಬಿಜೆಪಿಗೆ ಮತ ಹಾಕಿದರೆ ಹಾಕಿಸಿಕೊಳ್ಳಲಿ. ಅವರಿಗೆ ಮಂತ್ರಿ ಹಾಗೂ ಹಣದ ಆಮಿಷವೊಡ್ಡಲಾಗಿದೆ ಎಂದು ಆರೋಪ ಮಾಡಿದರು.

    ವಿಧಾನಸಭೆಗೆ ಸ್ಪೀಕರ್ ಅವರೇ ಸುಪ್ರೀಂ. ರಾಜ್ಯಪಾಲರು ಏನು ಮಾಡಲು ಸಾಧ್ಯ ಇಲ್ಲ. ಇದನ್ನು ಸುಪ್ರೀಂಕೋರ್ಟ್ ಸಹ ಹೇಳಿದೆ. ನಾನು ಜೆಡಿಎಸ್‍ಗೆ ವರ್ಜಿನಲ್ ಪೀಸ್. ಮುಖ್ಯಮಂತ್ರಿ ಅವರ ಅಪ್ಪಟ ಅಭಿಮಾನಿಯಾಗಿದ್ದು ಹಣ, ಆಮಿಷಕ್ಕೆ ಮಾರಾಟ ಆಗುವ ವ್ಯಕ್ತಿ ಅಲ್ಲ. ಎಲ್ಲರೂ ಒಗ್ಗಟ್ಟಾಗಿ ರೆಸಾರ್ಟ್ ನಲ್ಲಿ ಇದ್ದೇವೆ. ಕಾರ್ಯಕ್ರಮ ನಿಮಿತ್ತ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

  • ಕುಡಿಯುವ ನೀರಿಗೂ ರಾಜಕೀಯ ಮಾಡ್ತೀರಾ? ಶಾಸಕರಿಗೆ ಮಹಿಳೆ ಕ್ಲಾಸ್

    ಕುಡಿಯುವ ನೀರಿಗೂ ರಾಜಕೀಯ ಮಾಡ್ತೀರಾ? ಶಾಸಕರಿಗೆ ಮಹಿಳೆ ಕ್ಲಾಸ್

    ಮಂಡ್ಯ: ಉದ್ಘಾಟನೆ ಮಾಡುವ ಸಲುವಾಗಿ ಈಗಾಗಲೇ ಚಾಲ್ತಿಯಲ್ಲಿದ್ದ ಶುದ್ಧ ನೀರಿನ ಘಟಕದ ಬಾಗಿಲು ಹಾಕಿಸಿ ಮತ್ತೆ ಹೊಸದಾಗಿ ಉದ್ಘಾನೆಗೆ ಬಂದ ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿದ ಘಟನೆ ಕುಂತೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ಶಾಸಕ ಅನ್ನದಾನಿ ಅವರು ಮಂಗಳವಾರದಂದು ನೀರಿನ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ಕುಂತೂರು ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮದ ಮಹಿಳೆಯರು ಶುದ್ಧ ಕುಡಿಯುವ ನೀರು ಘಟಕದಲ್ಲೂ ರಾಜಕೀಯ ಮಾಡುತ್ತಿರಾ. ಉದ್ಘಾಟನೆ ಮಾಡಬೇಡಿ ಎಂದು ಶಾಸಕರನ್ನು ತರಾಟೆ ತೆಗೆದುಕೊಂಡರು. ಇದನ್ನು ಓದಿ: ಮಂಡ್ಯದಲ್ಲಿ ನೀರಿನ ವಿಚಾರದಲ್ಲೂ ಕೈ-ದಳ ಸಮರ- ದೋಸ್ತಿಗಳ ಕಚ್ಚಾಟಕ್ಕೆ ಜನರ ಹಿಡಿಶಾಪ

    ಈ ವೇಳೆ ಮಹಿಳೆಯನ್ನು ಸಮಾಧಾನ ಪಡಿಸಲು ಮುಂದಾದ ಶಾಸಕರ ಮೊದಲು ಪೂಜೆ ಮಾಡಿ ಮುಗಿಸುತ್ತೇನೆ, ನಂತರ ಮಾತನಾಡೋಣ ಎಂದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಮಹಿಳೆಯನ್ನು ಸ್ಥಳದಿಂದ ಕರೆದುಕೊಂಡು ಹೋದರು. ಇತ್ತ ಶಾಸಕರು ಉದ್ಘಾಟನೆ ಮಾಡಿದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕದ ಮತ್ತೆ ಬಾಗಿಲು ತೆರೆಯಲಾಗಿದೆ ಎಂದು ಎಲ್ಲರನ್ನು ಸಮಾಧಾನ ಮಾಡಿ ಅಲ್ಲಿಂದ ತೆರಳಿದರು.

    ಈ ಹಿಂದೆ ಕುಂತೂರು ಗ್ರಾಮದ ಶುದ್ಧ ಕುಡಿಯುವ ನೀರು ವಿಚಾರವಾಗಿ ಎಇಇ ಸೋಮಶೇಖರ್ ರವರು ಉದ್ಘಾಟನೆಯಾಗಿಲ್ಲ ಎಂದು ಕಾರಣ ನೀಡಿ ಬೀಗ ಜಡಿದ ಬಗ್ಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜನತಾದಳದವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ – ಜೆಡಿಎಸ್ ಶಾಸಕ ಅನ್ನದಾನಿ ಆಕ್ರೋಶ

    ಜನತಾದಳದವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ – ಜೆಡಿಎಸ್ ಶಾಸಕ ಅನ್ನದಾನಿ ಆಕ್ರೋಶ

    ಮಂಡ್ಯ: ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯದಿಂದಲೂ ಮೈತ್ರಿ ಧರ್ಮಕ್ಕೆ ಧಕ್ಕೆ ಆಗದಂತೆ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ. ಆದರೆ ತಾಲೂಕಿನಲ್ಲಿ ಇದಕ್ಕೆ ವಿರುದ್ಧವಾಗಿ ಕೆಲ ಘಟನೆಗಳು ನಡೆಯುತ್ತಿದ್ದು, ಇದೇ ರೀತಿ ಮುಂದುವರಿದರೆ ಜನತಾದಳದವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದು ಮಳವಳ್ಳಿ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಳವಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅನ್ನದಾನಿ, ಕುಮಾರಸ್ವಾಮಿ ಅವರಿಗೆ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವ ಚಾತುರ್ಯತೆ ಇದೆ. ಅವರು ಸರ್ಕಾರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಾರೆ. ಆದರೆ ತಾಲೂಕಿನಲ್ಲಿ ನಡೆಯುತ್ತಿರುವ ಕೆಲ ಘಟನೆಗಳ ಬಗ್ಗೆ ಅಸಮಾಧಾನ ಇದೆ. ಸಮ್ಮಿಶ್ರ ಸರ್ಕಾರ ರಚನೆಯಾದ ಸಮಯದಿಂದ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕಾರ್ಯ ಮಾಡುತ್ತಿದ್ದೇನೆ. ಆದರೆ ಇದೇ ರೀತಿ ಅವರ ಕಾರ್ಯ ಮುಂದುವರಿದರೆ ನಾವು ಸುಮ್ಮನೆ ಇರುವುದಿಲ್ಲ. ಜನತಾದಳದವರೇನು ಕೈಗೆ ಬಳೆ ತೊಟ್ಟುಕೊಂಡು ಕುಳಿತಿಲ್ಲ ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ನರೇಂದ್ರಸ್ವಾಮಿ ಹೆಸರು ಪ್ರಸ್ತಾಪ ಮಾಡದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ನಾನು ಸಚಿವ ಸ್ಥಾನ ಆಕಾಂಕ್ಷಿ:
    ಪಕ್ಷದ ಸಂಘಟನೆಯಲ್ಲಿ ಸತತವಾಗಿ ದುಡಿಯುತ್ತಿದ್ದು, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೇನೆ. ನಮ್ಮ ಪಕ್ಷದಲ್ಲಿ ಆರು ಜನ ದಲಿತ ಶಾಸಕರಿದ್ದಾರೆ. ಇದರಲ್ಲಿ ನಾನು ಹಿರಿಯನಿದ್ದೇನೆ. ನನಗೆ ದಲಿತ ಕೋಟಾದಡಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ನಮ್ಮ ನಾಯಕರು ದೇವರನ್ನು ನಂಬುತ್ತಾರೆ. ಹೀಗಾಗಿ ಧನುರ್ಮಾಸ ಕಳೆದ ನಂತರ ಸಂಪುಟ ವಿಸ್ತರಣೆ ಮಾಡುತ್ತಾರೆ. ನಾನು ದೇವೇಗೌಡರ ಕುಟುಂಬ ನಂಬಿ ಬಂದವನು. ಆದ್ದರಿಂದ ನನಗೆ ಅವರ ಮೇಲೆ ಅಪಾರ ವಿಶ್ವಾಸವಿದೆ. ಒಂದೊಮ್ಮೆ ಸಚಿವ ಸ್ಥಾನ ಸಿಗದಿದ್ದರೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸುತ್ತದೆ ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv