Tag: MLA Akash Vijayvargiya

  • ಬಿಜೆಪಿ ಶಾಸಕನನ್ನು ವಿವಾದಕ್ಕೆ ಗುರಿಯಾಗಿಸಿದ್ದ ಮನೆ ನೆಲಸಮ

    ಬಿಜೆಪಿ ಶಾಸಕನನ್ನು ವಿವಾದಕ್ಕೆ ಗುರಿಯಾಗಿಸಿದ್ದ ಮನೆ ನೆಲಸಮ

    ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಶಾಸಕ ಆಕಾಶ್ ವಿಜಯ್‍ವರ್ಗಿಯನನ್ನು ವಿವಾದಕ್ಕೆ ಗುರಿ ಮಾಡಿದ್ದ ಮನೆಯನ್ನು ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್ ನೆಲಸಮಗೊಳಿಸಿದೆ.

    ಇಂದೋರ್‍ನ ನಗರ್ ನಿಗಮ್ ರಸ್ತೆಯ ಪಕ್ಕದ ಗಂಜಿ ಕಾಂಪೌಂಡ್‍ನಲ್ಲಿರುವ ಮನೆಯನ್ನು ಅಧಿಕಾರಿಗಳು ಶುಕ್ರವಾರ ಜೆಸಿಬಿ ಮೂಲಕ ನೆಲಸಮಗೊಳಿಸಿದ್ದಾರೆ. ಈ ಮನೆ ವಾಸಿಸಲು ಯೋಗ್ಯವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ತನ್ನ ಬೆಂಬಲಿಗನ ಮನೆಯನ್ನು ತೆರವುಗೊಳಿಸಲು ಬಿಜೆಪಿ ಶಾಸಕ ಆಕಾಶ್ ವಿಜಯ್‍ವರ್ಗಿಯ ವಿರೋಧ ವ್ಯಕ್ತಪಡಿಸಿ, ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ಮಾಡಿದ್ದನು.

    ಹಲ್ಲೆ ಮಾಡಿದ್ದರ ವಿಚಾರವಾಗಿ ಶಾಸಕ ಆಕಾಶ್ ವಿಜಯ್‍ವರ್ಗಿಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ಹೊರ ಹಾಕಿದ್ದರು. ಅಷ್ಟೇ ಅಲ್ಲದೆ ಬಿಜೆಪಿಯಿಂದ ಮೊದಲ ಬಾರಿಗೆ ಶಾಸಕರಾಗಿರುವ ಆಕಾಶ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

    ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಯಾವ ನಾಯಕನ ಮಗನಾಗಿದ್ದರೂ ಸರಿ ದುರ್ವರ್ತನೆ ತೋರಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ನಾವು ಸಂಸದರನ್ನು ಕಳೆದುಕೊಂಡರೂ ಸರಿ. ಇನ್ನು ಮುಂದೆ ಈ ರೀತಿಯ ದುರ್ವರ್ತನೆ ನಡೆಯುವುದನ್ನು ತಡೆಯಬೇಕಿದೆ ಎಂದು ಎಚ್ಚರಿಸಿದ್ದರು.

    ಅದು ಯಾರೇ ಆಗಿರಲಿ, ಯಾರ ಮಗನೇ ಆಗಿರಲಿ ದುರಹಂಕಾರ, ದುರ್ವತೆಯನ್ನು ಸಹಿಸಲು ಸಾಧ್ಯವಿಲ್ಲ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದೋರ್ ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿ ಹೇಳಿದ್ದರು.

    ಈ ಹಿಂದೆ ಆಗಿದ್ದೇನು?:
    ಇಂದೋರ್ ನಗರದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ್ದ ಕಟ್ಟಡಗಳನ್ನು ಇತ್ತೀಚೆಗೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದರು. ಆದರೆ ವಿಜಯ್ ತಮ್ಮ ಬೆಂಬಲಿಗನ ಕಟ್ಟಡ ತೆರವುಗೊಳಿಸದಂತೆ ಸೂಚನೆ ನೀಡಿದ್ದನು. ಇದಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು ಕಟ್ಟಡ ತೆರವುಗೊಳಿಸುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಶಾಸಕ ಆಕಾಶ್ ವಿಜಯ್ ವರ್ಗಿಯ ಅಧಿಕಾರಿಗೆ ಕ್ರಿಕೆಟ್ ಬ್ಯಾಟ್‍ನಿಂದ ಹೊಡೆದಿದ್ದನು. ಅಷ್ಟೇ ಅಲ್ಲದೆ ಶಾಸಕರ ಬೆಂಬಲಿಗರು ಅಧಿಕಾರಿಯ ಬಟ್ಟೆ ಹಿಡಿದು ಎಳೆದಾಡಿದ್ದರು. ಘಟನೆಯಿಂದ ತಕ್ಷಣವೇ ಜಾಗೃತಗೊಂಡ ಪೊಲೀಸರು ಅಧಿಕಾರಿಯನ್ನು ರಕ್ಷಿಸಿದ್ದರು.

    ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್‍ನಿಂದ ಹಲ್ಲೆ ಮಾಡಿದ ವಿಡಿಯೊ ವೈರಲ್ ಆಗುತ್ತಿದ್ದಂತೆ, ಇಂದೋರ್ ಶಾಸಕ ಆಕಾಶ್ ವಿಜಯ್ ವರ್ಗಿಯನನ್ನು ಪೊಲೀಸರು ಬಂಧಿಸಿದ್ದರು. ಆದರೆ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದ ಶಾಸಕನನ್ನು ಗಾಳಿಯಲ್ಲಿ ಗುಂಡು ಹಾರಿಸಿ, ಸಿಹಿ ಹಂಚುವ ಮೂಲಕ ಬೆಂಬಲಿಗರು ಸ್ವಾಗತಿಸಿದ್ದರು.

  • ನಾನು ಮತ್ತೆ ಬ್ಯಾಟಿಂಗ್ ಮಾಡದಂತೆ ಪ್ರಾರ್ಥಿಸುತ್ತೇನೆ: ಬಿಜೆಪಿ ಶಾಸಕ

    ನಾನು ಮತ್ತೆ ಬ್ಯಾಟಿಂಗ್ ಮಾಡದಂತೆ ಪ್ರಾರ್ಥಿಸುತ್ತೇನೆ: ಬಿಜೆಪಿ ಶಾಸಕ

    – ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದಿದ್ದ ಶಾಸಕನಿಗೆ ಜಾಮೀನು

    ಭೋಪಾಲ್: ನಾನು ಮತ್ತೆ ಬ್ಯಾಟಿಂಗ್ ಮಾಡದಂತೆ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಶಾಸಕ ಆಕಾಶ್ ವಿಜಯ್‍ವರ್ಗಿ ಅವರು, ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

    ಮಧ್ಯಪ್ರದೇಶದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್‍ವರ್ಗಿಯ ಅವರ ಪುತ್ರ, ಇಂದೋರ್-3 ಶಾಸಕ ಆಕಾಶ್ ಅವರು ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದು ಜೈಲಿಗೆ ಸೇರಿದ್ದರು. ಅವರಿಗೆ ಭೋಪಾಲದ ವಿಶೇಷ ನ್ಯಾಯಾಲಯ ಶನಿವಾರ ಜಾಮೀನು ನೀಡಿತ್ತು. ಇಂದು ಜೈಲಿನಿಂದ ಹೊರ ಬಂದಿದ್ದಾರೆ.

    ಜೈಲಿನಿಂದ ಹೊರ ಬಂದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ನಾನು ಜೈಲಿನಲ್ಲಿ ಒಳ್ಳೆಯ ರೀತಿಯಲ್ಲಿ ಕಾಲ ಕಳೆದಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತಾಸಕ್ತಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

    ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಆಕಾಶ್ ಅವರನ್ನು ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತಿಸಿದರು. ಅಷ್ಟೇ ಅಲ್ಲದೆ ಪಕ್ಷದ ಕಚೇರಿ ಮುಂದೆ ಕುಣಿದು ಕುಪ್ಪಳಿಸಿದರು.

    ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ್ದೇನೆ. ಘಟನೆಯ ಬಗ್ಗೆ ನಾನು ಮುಜುಗುರಕ್ಕೆ ಒಳಗಾಗುವುದಿಲ್ಲ. ಆದರೆ ಮತ್ತೆ ನಾನು ಬ್ಯಾಟಿಂಗ್ ಮಾಡದಂತೆ ಕಾಯುವಂತೆ ದೇವರಲ್ಲಿ ಪಾರ್ಥಿಸುತ್ತೇನೆ ಎಂದು ಹೇಳಿದರು.

    ಶಾಸಕ ಆಕಾಶ್, ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಅಧಿಕಾರಿಗೆ ಬ್ಯಾಟ್‍ನಿಂದ ಹೊಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾಸಕರ ವರ್ತನೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶಾಸಕರ ಬೆಂಬಲಕ್ಕೆ ನಿಂತಿದ್ದರು.